ಚಕಾವ್ to ಶಾಂಪೇನ್ ನಾಟಕದ ಕುರಿತು.


ಲೋಕಾಭಿರಾಮವಾಗಿ ತಾನು ತನ್ನ ಕತೆಯೊಳಗಿನ ಪಾತ್ರಗಳೊಂದಿಗೆ ಕೊಂಚ ವಿಹರಿಸುತ್ತಾ, ಪಾತ್ರದ ಅಂತರಂಗವನ್ನು ಕೆದಕುತ್ತಾ ವ್ಯವಸ್ಥೆಯಲ್ಲಿನ ಅಸಹಾಯಕತೆ, ಕ್ಷುದ್ರತೆ, ಮೂರ್ಖತನ, ಸೋಮಾರಿತನ ಆತ್ಯಂತಿಕವಾದ ನೋವು, ಸಿಟ್ಟುಗಳನ್ನೆಲ್ಲ ಮೇಳೈಸಿಕೊಂಡು ಸ್ವತಃ ಕತೆಗಾರನೂ ಒಂದು ಪಾತ್ರವಾಗಿ ಲೇಖನಿಯ ಜೊತೆಜೊತೆಗೆ ಆಪ್ತವಾದ ಬದುಕು-ಬರಹವನ್ನು ಕಟ್ಟಿಕೊಡುವ ನಾಟಕವೊಂದನ್ನು ಧಾರವಾಡ ರಂಗಾಯಣದ ರೆಪರ್ಟರಿಯ ಕಲಾವಿದರು ನಮ್ಮ ನಡುವಿನ ಹಿರಿಯರಾದ ಸಿ.ಆರ್. ಜಂಬೆ ಅವರ ನಿದರ್ೇಶನದಲ್ಲಿ ಅಭಿನಯಿಸಿದರು.
ಅಭಿನಯ ಅನ್ನೋದು ಆಧ್ಯಾತ್ಮ ಅದಕ್ಕೆ ದೇಹ ಬುದ್ಧಿ ಭಾವ ಮನಸ್ಸು ಮತ್ತು ಹೃದಯ ಒಂದಾಗಿ ಕೆಲಸ ಮಾಡಬೇಕಾಗುತ್ತದೆ. ಆ ಏಕಾಗ್ರತೆಗಾಗಿ ಬಹಳ ಸಾಧನೆ ಮಾಡಬೇಕಾಗುತ್ತದೆ. ದೀರ್ಘ ಉಸಿರಾಟ, ಭ್ರಮರಿ, ಪ್ರಾಣಾಯಮಗಳು ನಟನ ತಯಾರಿಗೆ ಬಹಳಷ್ಟು ಉಪಕಾರಿಯಾಗಿರುತ್ತವೆ. ಈ ಮಾದರಿಯಲ್ಲಿ ನಟ ತನ್ನನ್ನು ತಾನು ತಯಾರು ಮಾಡಿಕೊಂಡಲ್ಲಿ ನಟನೆಯ ಬಗ್ಗೆ ನಟರೇ ಚಚರ್ೆ ಹುಟ್ಟುಹಾಕಿಕೊಳ್ಳುತ್ತಾರೆ. ಆಗ ನಟನೆಯಲ್ಲಿ ವಿವಿಧ ಸ್ತರಗಳ ಹುಡುಕಾಟ ಮಾಡಲು ಸಾಧ್ಯವಾಗುತ್ತದೆ. – ಸಿ.ಆರ್. ಜಂಬೆ
ಈ ಮಾತನ್ನು ತಮಗೆ ತಾವೇ ಸ್ಪಷ್ಟಪಡಿಸಿಕೊಳ್ಳುತ್ತಾ ನಟರ ಆಂಗಿಕ, ವಾಚಿಕ, ಸಾತ್ವಿಕ ಭಾಷೆಗಳನ್ನು ತಿದ್ದುವ ಅವರ ತಾಳ್ಮೆಗೆ ಗರಿಯಂಬಂತೆ ಚಕಾವ್ ಟು ಶಾಂಪೇನ್ ಅರಳಿದೆ. ನಟನ ಉದ್ವೇಗ ಕಡಿಮೆ ಮಾಡಿಕೊಳ್ಳಲು ಅಗಾಧವಾದ ಪರಿಶ್ರಮ ಮತ್ತು ತಾಳ್ಮೆ ಬೇಕಾಗುತ್ತದೆ. ಅದು ಸಾಧ್ಯವಾದಲ್ಲಿ ನಟ ಮತ್ತು ನಾಟಕದ ತಂತು, ನಿದರ್ೇಶಕರು ಕಂಡುಕೊಂಡ ಆಯಾಮಗಳು ಕಲಾಕೃತಿಯಲ್ಲಿ ಸೇರಿಕೊಳ್ಳುತ್ತವೆ. ಈ ಎಲ್ಲವೂ ಮುಪ್ಪರಿಗೊಂಡ ನಾಟಕ ಆಪ್ತವಾದ ಸಂಬಂಧವನ್ನು ಪ್ರೇಕ್ಷಕರೊಟ್ಟಿಗೆ ಸಂವಹನದ ಮೂಲಕ ಸಾಧಿಸುತ್ತದೆ. ಸಹಜವಾದ ಆಗುವಿಕೆಗಳನ್ನು ತಡೆಯದೆ ಪ್ರವಹಿಸಲು ಬಿಟ್ಟು ತದನಂತರ ಒಂದೊಂದೇ ಕತೆಗಳನ್ನು ಹೆಕ್ಕಿ ಆಂಟನ್ ಚಕಾವ್ನ ಬದುಕಿನ ತೊರೆಗಳೊಟ್ಟಿಗೆ ಪೋಣಿಸಿದ ಅಮೂಲ್ಯವಾದ ರಂಗಕೃತಿ ಚಕಾವ್ ಟು ಶಾಂಪೇನ್. ಕೊನೆಯ ದಿನಗಳ ಆ ಕೆಮ್ಮು ಮತ್ತು ಬದುಕನ್ನು ವಿಶ್ಲೇಷಿಸುವ ಅವನ ಕಥಾಪ್ರಪಂಚ, ಮನುಷ್ಯನ ಕ್ಷುದ್ರತೆ, ನಿಟ್ಟುಸಿರು, ಅಸಹಾಯಕತೆ, ದುಷ್ಟತನ, ತಣ್ಣಗಿನ ಕ್ರೌರ್ಯ, ಪ್ರೀತಿ, ಹರಟೆ ಹೀಗಿನ ಜಗತ್ತು ಮತ್ತು ತಾನು ಕನಸಿದ್ದ ಪೀಪಲ್ಸ್ ಪ್ಯಾಲೇಸ್ನ ಭ್ರಮೆ ಎಲ್ಲವನ್ನೂ ಪ್ರೀತಿಯಿಂದ ಹರಟುತ್ತ ಕೊನೆಯ ಗುಟುಕಿನ ಶಾಂಪೇನ್ನೊಂದಿಗೆ ಮುಕ್ತನಾಗುವ ಚೆಕಾವ್ ನಮ್ಮೊಳಗೊಬ್ಬನಾಗಿ ಕಾಡತೊಡಗುತ್ತಾನೆ.
ನಾಟಕದ ಆರಂಭವೇ ಬರವಣಿಗೆಯ ಹೊಳಹು ಸಿಕ್ಕುವ ಮೂಲಕ.. ಅಸಹಾಯಕ ಪ್ರಾಣಿ ಕತೆಯ ಪಾತ್ರಕ್ಕೆ ತನ್ನ ಕನ್ನಡಕ ತೊಡಿಸುವದರೊಂದಿಗೆ ರಂಗದ ಮೇಲೆ ಕಥಾಜಗತ್ತು ಅನಾವರಣಗೊಳ್ಳುತ್ತ ಹೋಗುತ್ತದೆ. ನವುರಾದ ನಗೆಯೊಂದು ತಿಳಿಯಾಗಿಸುತ್ತ ಅಸಹಾಯಕತೆಯನ್ನು ಅರ್ಥಮಾಡಿಸುವ ಆ ಕ್ರಮವೇ ರಶಿಯನ್ರ ಚಿತ್ರಣವನ್ನು ಅಲ್ಲಿನ ಬ್ಯಾಂಕಿಂಗ್ ಮತ್ತು ಬಡತನವನ್ನು ಧ್ವನಿಸುತ್ತದೆ. ಆ ಕತೆಯ ಕೊನೆಯಲ್ಲಿ ಚಕಾವ್ ತನ್ನ ಅಮ್ಮನ ಬದುಕು ಮತ್ತು ಆಕೆ ಹೇಳುವ ಅಸಹಾಯಕ ಸ್ಥಿತಿಯು ನೆನಪಾಗುತ್ತದೆ. ಪ್ರಖ್ಯಾತರಿಬ್ಬರು ರೈಲಿನಲ್ಲಿ ಕೂತು ಸಂಭಾಷಿಸುವ ಕತೆಯೊಂದನ್ನು ಇಲ್ಲಿ ರೆಸ್ಟೋರೆಂಟ್ ಒಂದರಲ್ಲಿ ನಡೆಯಬಹುದಾದ ಆಕಸ್ಮಿಕ ಭೇಟಿಯಂತೆ ನಿರೂಪಿಸಿರುವುದು ಸಮಂಜಸವೆನಿಸಲಾರದು. ಯಾಕೆಂದರೆ ಆಕಸ್ಮಿಕವೆಂಬಂತೆ ಭೇಟಿಯಾದರೂ ಬಹಳಷ್ಟು ಮಾತಾಡಿಕೊಳ್ಳಲು ಸಾಧ್ಯವಾಗುವುದು ಹಾಗೂ ಏನೆಲ್ಲ ಮಾತಾಡಿಕೊಳ್ಳಲು ಸಾದ್ಯವಾಗುವುದು ಪ್ರಯಾಣದಲ್ಲಿ ಸಿಗುವ ಅಪರಿಚಿತರ ಜೊತೆಗೆ ಹೆಚ್ಚಾಗಿರುತ್ತದೆ. ಆ ಪ್ರಯಾಣದ ಪ್ರತಿಮೆ ಕತೆಯಲ್ಲಿ ವ್ಯಕ್ತಗೊಳ್ಳುವ ರೀತಿ ಆಪ್ತವಾದಂತೆ ರೆಸ್ಟೋರೆಂಟ್ನಲ್ಲಿ ಸಾಧ್ಯವಾಗಲಿಕ್ಕಿಲ್ಲ. ಫಿಶಿಂಗ್ ದೃಶ್ಯದಲ್ಲಿ ವೋಲ್ಗಾ ಅವನ ಪ್ರೀತಿಗಾಗಿ, ಅವನ ಅಭಿಮಾನಿಗಳು ಬರೆದಿರುವ ಪತ್ರಗಳನ್ನು ಹಿಡಿದು ಬರುತ್ತಾಳೆ.. ಆದರೆ ಅಲ್ಲಿ ಚಕಾವ್ಗೆ ಮತ್ತೊಂದು ಕತೆ ಹೊಳೆದದ್ದೆ ತಡ ಹೊರಟು ಬಿಡುತ್ತಾನೆ.
ಕ್ಲರ್ಕನ ಸಾವು ಸಾತ್ವಿಕವಾದ ವಾತಾವರಣವೊಂದನ್ನು ರೂಪಿಸುತ್ತಿದ್ದಂತೆ. ಸೀಗಲ್ ನಾಟಕದ ಸರೋವರದ ದಂಡೆಯ ದೃಶ್ಯ ಆರಂಭವಾಗುತ್ತದೆ. ಪ್ರೀತಿಯ ನಿವೇದನೆ, ಕಡಲಪಕ್ಷಿಯ ಬೇಟೆ, ನೀನಾಳ ಆಕರ್ಷಣೆ ಎಲ್ಲವನ್ನು ಒಂದು ದೃಶ್ಯದಲ್ಲಿ ಹಿಡಿದಿಟ್ಟಿದ್ದರೂ ಬಹುತೇಕ ಕಡೆಗಳಲ್ಲಿ ಸೀಗಲ್ ನಾಟಕದ ದೃಶ್ಯಗಳು, ಸಂಭಾಷಣೆಗಳು ಬಳಕೆಯಾಗಿದ್ದಂತೆ ತೋರುತ್ತದೆ.
ಪ್ರಕಾಶಕರೊಂದಿಗಿನ ದೃಶ್ಯದಲ್ಲಿ ತನ್ನ ಸೃಜನಶೀಲ ಸಾಹಿತ್ಯ ಮತ್ತು ಅದನ್ನು ವಿಮರ್ಶಕರು ನೋಡುವ ದೃಷ್ಟಿ, ಅಭಿಮಾನಿಗಳು ಅನೇಕ ಹೆಂಗಸರಲ್ಲಿನ ವ್ಯಾಮೋಹದ ಕುರಿತಾಗಿ ಮಾತಾಡಿಕೊಳ್ಳುತ್ತಲೇ ಪೀಟರನ ಕತೆ ಹುಟ್ಟುತ್ತದೆ. ಆ ಸಮ್ಮೋಹನದ ದೃಶ್ಯಗಳನ್ನು ಮನೋಜ್ಞವಾಗಿ ಕಟ್ಟಿರುವುದು ಮುಂದಿನ ಕೊನೆಯ ದೃಶ್ಯಕ್ಕೆ ಸಹಕಾರಿಯಾಗಿದೆ. ಆದರೆ ನಾಟಕದಲ್ಲಿ ಎಲ್ಲಿಯೂ ಬರಲಾರದ ಕೆಮ್ಮು ಒಮ್ಮಿಂದೊಮ್ಮೆಲೆ ಕೊನೆಯ ದೃಶ್ಯದಲ್ಲಿ ಕಾಣುವುದು ಅಸಮಂಜಸವಾಗಿದೆ. ಗಾಕರ್ಿಯ ಸಂದರ್ಶನ ಲೇಖನದಲ್ಲಿ ಆತನು ಮತ್ತೆಮತ್ತೆ ಕೆಮ್ಮುವ ಬಗ್ಗೆ ಹೇಳಿರುವುದನ್ನು ಕಂಡರೆ ಪಾತ್ರದೊಟ್ಟಿಗೆ ಕೆಮ್ಮು ಕೂಡಾ ಬೆಳೆಯುತ್ತ ಹೋಗಬಹುದಾಗಿತ್ತು. ಚೆಕಾವ್ ಕೆಮ್ಮುತ್ತ ಬೀಳುತ್ತಿದ್ದಂತೆ ಕ್ಷಣ ಮಾತ್ರದಲ್ಲಿ ಪ್ರೇಕ್ಷಕನಾಗಿ ನನ್ನೊಳಗೂ ಒಂದು ತೆರನಾದ ವಿಷಾದದ ಗಾಂಬೀರ್ಯ ಮಡುಗಟ್ಟಿಕೊಳ್ಳುತ್ತದೆ. ಸರ್ ಟಾಲ್ಸ್ಟಾಯ್ ಬರುವುದು ಯಾಕೋ ನಾಟಕದ ಗಾಂಭೀರ್ಯಕ್ಕೆ ತೂಕದ್ದೆನಿಸದಿದ್ದರೂ ಅವರಿಬ್ಬರ ಸಂಭಾಷಣೆ ಘನವಾಗಿದೆ. ಆದರೆ ಚಕಾವ್ ನಾಟಕಗಳನ್ನು ಮೊದಲು ಮಾಡಿಸಿದ ಸ್ಟಾನಸ್ಲಾವಸ್ಕಿ ಇಡೀ ನಾಟಕದ ತುಂಬ ಎಲ್ಲಿಯೂ ಬರುವುದಿಲ್ಲ. ವಾಸ್ತವವಾದಿ ನಾಟಕ ಶೈಲಿಯ ಬಗ್ಗೆ ಮತ್ತು ಚಕಾವ್ನ ತಿಳಿಹಾಸ್ಯದ ನಾಟಕಗಳನ್ನು ಗಂಭೀರವಾಗಿ ಪ್ರದಶರ್ಿಸಿರುವ ಬಗ್ಗೆ ಇಬ್ಬರ ನಡುವೆ ಮಾತುಕತೆಯಾದ ಬಗ್ಗೆ ಎಲ್ಲೋ ಓದಿದ ನೆನಪು ಆ ದೃಶ್ಯಗಳೂ ಕೂಡ ಬರಬಹುದೆ ಎಂಬ ಆಲೋಚನೆ ನನಗಿತ್ತು.
ಇಲ್ಲಿನ ಬಹಳಷ್ಟು ದೃಶ್ಯಗಳು, ಮಾತುಗಳು ಅವರ ಮುಖ್ಯವಾದ ನಾಟಕಗಳ ಭಾಗದಿಂದ ಆಯ್ದು ದೃಶ್ಯ ಸಂಯೋಜನೆ ಮತ್ತು ಚಕಾವ್ನ ಅಭಿವ್ಯಕ್ತಿಯ ಜೊತೆಗೆ ಸೇರಿಸಲಾಗಿದೆ. ಬಹುಶಃ ಈ ಕ್ರಮಕ್ಕೆ ಕಾರಣವಾದ ಮಾತೊಂದನ್ನು ಚಕಾವ್ ತನಗೆ ತಾನೇ ಹೇಳಿಕೊಳ್ಳುತ್ತಾನೆ. ಚಕಾವ್ ತಾನು ಕತೆ ಬರೆದಾದ ಮೇಲೆ ಪ್ರೀತಿ ಪಾತ್ರರ ಮನಬಗೆದು ವಿಚಿತ್ರವಾದ ಆನಂದವನ್ನು ಅನುಭವಿಸಿದ ಹಾಗಿನ ಯಾತನೆಯನ್ನು ಅನುಭವಿಸುವ ಸಂಕಟವನ್ನು ತೋಡಿಕೊಳ್ಳುತ್ತಾನೆ. ಅಸಹಾಯಕ ಪ್ರಾಣಿ, ಫಸ್ಟ್ಕ್ಲಾಸ್ ಪ್ರಯಾಣಿಕ, ಸೀಗಲ್ ನಾಟಕದ ನೀನಾ ಮತ್ತು ಟ್ರೆಗೋರಿ ದೃಶ್ಯ, ಫಿಶಿಂಗ್ ದೃಶ್ಯ, ಕ್ಲರ್ಕನ ಸಾವು, ಪೀಟರ್ ಎಂಬ ನವಯುವಕನ ಸಮ್ಮೋಹನ ಕಲೆ ಹಾಗೂ ಚೆಕಾವ್ನ ಕೊನೆಯ ದಿನದ ಕ್ಷಣಗಳು ಇಲ್ಲಿ ತುಂಡಿಲ್ಲದ ಏಕೋಚಲನೆಯಲ್ಲಿ ಪ್ರವಹಿಸುತ್ತವೆ. ರಂಗವಿನ್ಯಾಸವು ನಾಟಕದ ಒಳ ಅರಿವನ್ನು ವಿಸ್ತರಿಸುವಲ್ಲಿ ಸಹಕಾರಿಯಾಗಿದೆ.
ಈ ನಾಟಕಕ್ಕೆ ಸಹಾಯಕರಾಗಿ ಡಿ ಪ್ರಸನ್ನ ಮತ್ತು ಸಂಗೀತ ನಿದರ್ೇಶನವನ್ನು ಶ್ರೀನಿವಾಸ ಭಟ್ಟ ಅವರು ನೀಡಿದ್ದಾರೆ. ಧಾರವಾಡ ರಂಗಾಯಣದ ಕಲಾವಿದರು, ತಂತ್ರಜ್ಞರು, ನಿದರ್ೇಶಕರಾದ ಪ್ರಕಾಶ ಗರುಡರು, ಆಡಳಿತಾಧಿಕಾರಿಗಳಾದ ಬಸವರಾಜ ಹೂಗಾರ ಹಾಗೂ ರಂಗಾಯಣದ ಸಿಬ್ಬಂದಿವರ್ಗ ಇಂಥದ್ದೊಂದು ನಾಟಕ ನಿಮರ್ಿಸುವಲ್ಲಿ ಸಹಕರಿಸಿರುವುದು ಸಂತಸದ ಸಂಗತಿಯಾಗಿದೆ.
-ಮಹಾದೇವ ಹಡಪದ

ಎಳನೀರು


ಎಳನೀರು ಕಾದಂಬರಿಯಲ್ಲಿ ಕತೆ ಶಿಕ್ಷಣದ ಸಾಧನವಾಗಿದೆ. ಮೂರ್ತವಾದ ಅನುಭವ ಕತೆಯಾಗುವಾಗ ಬದುಕಿನ ಇನ್ನಿತರ ಅನುಭವಗಳೊಟ್ಟಿಗೆ ಸೇರಿ ಹೊಸದೊಂದು ಕಲಾತ್ಮಕವಾದ ಕಥನದ ಆವರಣವೊಂದನ್ನು ಸೃಷ್ಟಿಸಿಕೊಂಡು ಬಿಡುತ್ತದೆ. ನಿಜವಾಗಿಯೂ ಈ ಕಾದಂಬರಿಯಲ್ಲಿ ಬರುವ ಶಿಕ್ಷಕಿ ಕಲಿಸುವ ಮಾಧ್ಯಮವನ್ನಾಗಿ ಕತೆಯನ್ನು ಆಯ್ದುಕೊಳ್ಳುವುದು ಮತ್ತು ಹೇಳುವ ಕತೆಗಳಲ್ಲಿ ಕಲಾತ್ಮಕ ಜೀವದ್ರವ್ಯವನ್ನು, ಕಾರುಣ್ಯವನ್ನು, ಮಮಕಾರವನ್ನೂ ವ್ಯಕ್ತಗೊಳಿಸುವುದು ಅದ್ಭುತವಾದ ಪ್ರಯೋಗವಾಗಿದೆ. ಲಲಿತಾಳ ಬದುಕಿನ ಸಾಂಸಕೃತಿಕ ಆಶೋತ್ತರಗಳು ಆಕೆಯ ಶೈಕ್ಷಣಿಕ ಜೀವನದಲ್ಲಿ ಸಹಕಾರಿಯಾಗುತ್ತವೆ. ಮೊದಲ ಅಧ್ಯಾಯದಲ್ಲಿ ಸೀಂಯಾಳ ಕುಡಿಯುವ ಹಂಬಲದಲ್ಲಿದ್ದ ಲಲಿತಾ ತಾನು ಶಿಕ್ಷಕಿಯಾಗಿ ತನ್ನಂತದೇ ಮಧ್ಯಮವರ್ಗದ ಹತ್ತಾರು ಮಕ್ಕಳಿಗೆ ಆ ಸೀಂಯಾಳದ ರುಚಿಯೊಗರನ್ನು ಸವಿಯಲು ಕಾರಣಳಾಗುತ್ತಾಳೆ. ಕಥಾನಾಯಕಿಯ ಪರಿಸರದಲ್ಲಿ ಹೇರಳವಾಗಿ ಕಾಣುವ ತೆಂಗು ಇಲ್ಲಿ ಕತೆಯ ವಸ್ತುವಾಗಿ ಹಲವರ ಧ್ವನಿಯಾಗಿ ಕಾಲ್ಪನಿಕ ಮನೋವ್ಯಾಪಾರದ ಸಮೃದ್ಧತೆಯ ಸಂಕೇತವಾಗಿದೆ. ಮೊದಲರ್ಧ ಕಾದಂಬರಿಯಲ್ಲಿ ಕಥಾನಾಯಕಿಯ ಬದುಕಿನ ತುಡಿತ, ಆ ಬದುಕಿನೊಟ್ಟಿಗೆ ಬೆರೆತು ಹೋಗಿರುವ ಪರಿಸರದ ಕತೆಗಳು, ಸೀಂಯಾಳ-ಬೀರಪ್ಪ, ಹಾವು-ಮೋನಪ್ಪ, ಮಾಸ್ತೆಮ್ಮ, ದೆವ್ವದ ಕತೆಗಳು, ಹೊಳೆ-ಹಳ್ಳಗಳು, ಹೊಲಿಗೆಯ ಚಿತ್ತಾರದಂತೆ ಬಿಡಿಬಿಡಿಯಾದ ಅನುಭವಗಳು ಮಕ್ಕಳೊಂದಿಗೆ ಕತೆ ಹೇಳುವಾಗ ಕೇಳುವಾಗ ಒಂದಾಗಿ ಜೀವನದ ಕಲಾತ್ಮಕ ಬಂಧದ ನೇಯ್ಗೆ ಮಾಡುತ್ತವೆ. ನಿದ್ರೆ ಬಾರದ ಜೀವಿಗಳು ಭೂಮಿ ಮೇಲೆ ಉಂಟು ಅವು ಕತೆಗಳಲ್ಲಿ ಬದುಕಿಕೊಂಡಿವೆ ಎಂದು ಹೇಳುತ್ತಾ ಮಕ್ಕಳ ಕಥನಕುತೂಹಲವನ್ನು ಇಮ್ಮಡಿಸುವ ಲಲಿತಾ ಟೀಚರ್ ಆಸಕ್ತಿಕರವಾದ ರೀತಿಯಲ್ಲಿ ಮಕ್ಕಳ ಮನೋವಿಕಾಸಕ್ಕೆ ಸಹಾಯಕವಾದ ಮಾರ್ಗವನ್ನು ತೋರಿಸುತ್ತಾರೆ. ‘ಮಕ್ಕಳೇ ಯಾವ ಕತೆ ಬೇಕು ನಿಮಗೆ’ ಅಧ್ಯಾಯದಲ್ಲಿ ಒಂದು ವಾಕ್ಯದ ಹಲವಾರು ಕತೆಗಳ ಗರಿಗಳನ್ನು ಬಿಚ್ಚಿಡುತ್ತಾರೆ. ಕಲ್ಪಿಸಿಕೊಳ್ಳಲು ಏನು ಬೆಕು..? ಬೀಜರೂಪಿಯಾದ ಒಂದು ಎಳೆ ಬೇಕು. ಅಂಥ ವಸ್ತುಗಳನ್ನುಳ್ಳ ನೂರಾರು ಕತೆಗಳನ್ನು ಆ ಒಂದು ಅಧ್ಯಾಯದಲ್ಲಿ ಹೇಳಿದ್ದಾರೆ. ಹೇಳಿ ಮುಗಿಯದ, ಕೇಳಿ ತೀರದ ಜಗತ್ತಿನ ವೈವಿಧ್ಯಮಯ ಕಥನಗಳು ಆ ವಾಕ್ಯದಲ್ಲಿವೆ. ಇಷ್ಟೊಂದು ಹೊಳಹುಗಳನ್ನು ಕೊಟ್ಟ ಟೀಚರ್ ಈಗ ಮಕ್ಕಳೇ ಹೇಳಬಹುದಾದ ಕತೆಗಳಿಗಾಗಿ ಕಾಯುತ್ತಾರೆ. ಕಾಲದೇಶಗಳ ವ್ಯಾಪ್ತಿಯನ್ನು ಮೀರಿ ಮಕ್ಕಳು ಕತೆಯ ಆವರಣವನ್ನು ಪ್ರವೇಶಿಸಿ, ನಡೆದಿರಲಾರದ ಘಟಣೆಗೆ ತಮ್ಮ ಅನುಭವದ ದ್ರವ್ಯವನ್ನು ಸೇರಿಸಿ, ಕೇಳುಗನ ಅಂತರಂಗವನ್ನು ಹೊಕ್ಕು ತೆಂಗಿನಮರದ ಒಡನಾಡಿಗಳಾಗಿ ಹೋಗುತ್ತಾರೆ. ತೆಂಗಿನ ಮರದ ಛದ್ಮವೇಷದ ಕತೆ, ಒಂದು ನೋವಿನ ಕತೆಯಲ್ಲಿ ಪುಟ್ಟಪ್ಪ ತೆಂಗಿನಮರದ ಸಂಕಟ ಗರಹಿಸಿರುವ ಬಗೆ, ತೆಂಗಿನಮರದಲ್ಲಿ ದೆವ್ವ ಇರುತ್ತವೆ ಎಂಬ ನಂಬಿಕೆಯನ್ನು ತೊಡೆದು ಹಾಕುವ ಬೆಳಕಿಗೆ ಬಾ ತಂಗಿ ಕತೆ, ಅನಂತನ ಮರಹತ್ತುವ ಕತೆ, ಕೆಂದಾಳಿ ಮರ, ತೈಲಸ್ನಾನ ಹೀಗೆ ಮಕ್ಕಳ ತಲೆಯೊಳಗೆ ಹತ್ತಾರು ಕತೆಗಳ ತೇರು ತಯ್ಯಾರಾದಾರೂ ಅವೆಲ್ಲವೂ ತೆಂಗಿನ ಮರದ ಸುತ್ತಾ ಬೆಳೆಯುವ ವಿನ್ಯಾಸ ಕಾದಂಬರಿಯ ಸೊಗಸುಗಾರಿಕೆಯನ್ನು ಹೆಚ್ಚಿಸಿದೆ. ಕತೆ ಹೇಳುವ ಕೌಶಲ್ಯದ ಮೂಲ ಸೆಲೆ ಮಕ್ಕಳೇ ಆಗಿದ್ದಾರೆ. ಜಗತ್ತಿನ ಯಾವದೇ ನಾಗರೀಕತೆಯ ಸಂದರ್ಭದಲ್ಲೂ ಕತೆ ಸಾಂಸ್ಕೃತಿಕವಾಗಿ ಮಕ್ಕಳನ್ನು ನಾಗರೀಕರನ್ನಾಗಿ ತಯಾರು ಮಾಡುವುದಕ್ಕಾಗಿ, ಮತ್ತು ಆತ್ಮಸ್ಥೈರ್ಯ, ಛಲ-ಮನೋಬಲಗಳನ್ನು ಮಕ್ಕಳಲ್ಲಿ ತುಂಬುವುದಕ್ಕಾಗಿ, ನೈತಿಕತೆಯ ಮಾದರಿ ಪಾಠಕ್ಕಾಗಿ ಕಥನ ಪರಂಪರೆ ಬೆಳೆದು ಬಂದಿದೆ. ಜಲಪ್ರಳಯ ಮತ್ತು ಅಣುಪ್ರಳಯಗಳು ಎಲ್ಲಾ ಬಾಷೆಯ ಮೊದಲ ಕಥನದ ವಸ್ತುಗಳಾಗಿವೆ. ಕತೆ ಮಕ್ಕಳ ಮನೋವಿಕಾಸಕ್ಕೆ ಹೆಚ್ಚು ಸಹಕಾರಿಯಾಗಬಲ್ಲ ಸಶಕ್ತ ಮಾಧ್ಯಮವಾಗಿದೆ. ಸುನಂದಾ ಕಡಮೆಯವರ ಎಳನೀರು ಕಾದಂಬರಿ ಮಕ್ಕಳ ಸಾಹಿತ್ಯ ಪರಂಪರೆಯಲ್ಲಿ ಹೊಸದೊಂದು ದಾರಿಯನ್ನು ಶೋಧಿಸಿದೆ. ಆ ಮಾರ್ಗದಲ್ಲಿ ಅಗಾಧವಾಗಿ ಕಲ್ಪನಾಶಕ್ತಿಗೆ ಅವಕಾಶವಿದೆ.. ( ಮಹಾದೇವ ಹಡಪದ # 19 ಲಾಸ್ಟ್ ಬಸ್ ಸ್ಟಾಪ್ ನೆಹರು ನಗರ ಧಾರವಾಡ-580003 ಮೊಬೈಲ್:- 9972352163 )

ಗಾರ್ದಭ ಗರಡಿಯಲ್ಲಿ ಕಿರೀಟದಾಟ


ಸಾಮ್ರಾಜ್ಯ ಮತ್ತು ಪುರೋಹಿತಶಾಹಿ ವ್ಯವಸ್ಥೆಗಳು ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡದ್ದು ತೀರ ಅಪರೂಪದ ಕೆಲ ಪ್ರಸಂಗಗಳನ್ನು ಬಿಟ್ಟರೆ ಬಹಳಷ್ಟು ಸಲ ಒಂದರೊಳಗೊಂದು ಅಧೀನಗೊಳ್ಳುತ್ತ ಅಧಿಕಾರವನ್ನುಂಡಿವೆ. 2ನೆ ಹೆನ್ರಿ-ಆಚರ್್ಬಿಷಪ್ ಬೆಕೆಟ್, ಬಿಜ್ಜಳ-ಬಸವಣ್ಣ, ಭರತ-ಬಾಹುಬಲಿ ಹೀಗೆ ಅಲ್ಲೊಂದು ಇಲ್ಲೊಂದು ರಾಜಕೀಯ ಮತ್ತು ಪುರೋಹಿತಶಾಹಿಗಳ ನಡುವಿನ ರಾಜಕೀಯ ತಿಕ್ಕಾಟ ಮಿತಿಮೀರುವುದರಿಂದ ವೈರಾಗ್ಯ ಅಥವಾ ಕೊಲೆಯಾಗುವುದರೊಂದಿಗೆ ಬಹುಪಾಲು ಕಡೆಗಳಲ್ಲಿ ಪುರೋಹಿತಶಾಹಿಯು ಯಾವತ್ತಿಗೂ ಗೆಲುವು ಕಾಣುತ್ತ ಬಂದಿದೆ. ನೈತಿಕ ಮೌಲ್ಯಗಳನ್ನ ತನ್ನಿಷ್ಟಕ್ಕೆ ತಕ್ಕಂತೆ ರೂಪಿಸುವ ಈ ವ್ಯವಸ್ಥೆಯಲ್ಲಿ ಧರ್ಮ – ರಾಜಕಾರಣವು ನಿಜರ್ೀವವಾಗಿ ಬಿದ್ದುಕೊಂಡಿರುವ ಸಾಮಾಜಿಕ ಜನಜೀವನವನ್ನು ಯಾವತ್ತೂ ಗಣನೆಗೆ ತೆಗೆದುಕೊಂಡಿದ್ದು ಕಂಡುಬರುವುದಿಲ್ಲ. ಈ ಎರಡರ ಹಾಕ್ಯಾಟದಲ್ಲಿ ಮನುಷ್ಯತ್ವಕ್ಕಿಂತ ಒಣಪ್ರತಿಷ್ಠೆ ದೊಡ್ಡದಾಗುತ್ತ ಹೋಗುತ್ತವೆ. ಧರ್ಮ-ರಾಜಕಾರಣಗಳು ಭಾರತದಲ್ಲಿ ಮಹಾಕಾವ್ಯದ ಮೂಲದಿಂದಲೇ ಪುರೋಹಿತಶಾಹಿ ವ್ಯವಸ್ಥೆಯನ್ನು ಬೆಂಬಲಿಸಿದ್ದಾವೆ. ಈ ವ್ಯವಸ್ಥೆ ಧರ್ಮಪ್ರಣೀತ ಸಾಮ್ರಾಜ್ಯ ಸ್ಥಾಪಿಸುವುದು, ರಾಮರಾಜ್ಯ ಕಟ್ಟಬೇಕೆನ್ನುವ ಆದರ್ಶವನ್ನಿಟ್ಟುಕೊಂಡೇ ನಮ್ಮ ಸಾಂಸ್ಕೃತಿಕ ಸಾಮಾಜಿಕ ಬದುಕನ್ನು ರೂಪಿಸಿದೆ. ಪುರೋಹಿತಶಾಹಿ ಮನಃಸ್ಥಿತಿಯನ್ನು ಕಟುವಾಗಿ ವಿರೋಧಿಸುತ್ತಿದ್ದ ಸತ್ಯಶೋಧಕ ಸಮಾಜ ಕಟ್ಟುವ ಹಂಬಲವನ್ನಿಟ್ಟುಕೊಂಡಿದ್ದ ಜ್ಯೋತಿಬಾಫುಲೆಯವರು ಬಲಿಸಾಮ್ರಾಜ್ಯದ ಕುರಿತು ಹೆಚ್ಚು ಆಶಾಭಾವವನ್ನಿಟ್ಟುಕೊಂಡಿದ್ದರು. ಬಾಬಾಸಾಹೇಬ ಅಂಬೇಡ್ಕರರು ಬೌದ್ಧ ಧಮ್ಮವನ್ನು ಆಯ್ದುಕೊಂಡರು. ಈ ಭಾರತೀಯ ಪುರಾಣಪರಂಪರೆಯಲ್ಲಿ ಆದಶರ್ೀಕರಿಸಿರುವ ವ್ಯಕ್ತಿಗಳನ್ನು ದೈವತ್ವದ ಮಟ್ಟಕ್ಕೆರಿಸಿ ನೈತಿಕಮೌಲ್ಯಗಳನ್ನು ಪೋಷಿಸಿಕೊಂಡು ಬರಲಾಗಿದೆ. ಇದೆ ಮಾದರಿಯನ್ನು ಅನುಸರಿಸಿಕೊಂಡು ನಮ್ಮ ನಾಟಕ ಪರಂಪರೆಯೂ ಬೆಳೆದುಬಂದಿದೆ. ಈ ರೀತಿಯ ಆಶಯವು ಭಾರತೀಯ ರಂಗಭೂಮಿಗೆ ಇರುವುದರಿಂದ ನಮ್ಮ ನಾಟಕಗಳ ಇತಿಹಾಸದಲ್ಲಿ ಧರ್ಮ ಮತ್ತು ರಾಜಕಾರಣ ಎಂದೂ ವಸ್ತುವಾಗಿ ಒದಗಿಬರಲಿಲ್ಲ. (ನವ್ಯ ನಾಟಕ ಸಾಹಿತ್ಯದಲ್ಲಿ ಈ ಬಗೆಯ ವಸ್ತುಗಳನ್ನಾಧರಿಸಿದ ನಾಟಕಗಳು ರಚನೆಯಾದವು.) ಸ್ವಾತಂತ್ರ್ಯಾನಂತರ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಸಾಮಾಜಿಕ ಸ್ತಿತ್ಯಂತರಗಳಿಗೆ ಕಾನೂನಿನ ಮೂಲಕ ಕೊಡಲಿಪೆಟ್ಟು ಕೊಡಲಾರಂಭಿಸಿದಾಗ ನಾಟಕ ಕಲೆಯಲ್ಲೂ ಸಮಾಜ ಸುಧಾರಣೆ, ಆಧುನಿಕತೆ, ರಾಜಕೀಯ ವಿಡಂಬಣೆಯ ವಿಷಯವಸ್ತುಗಳು ರಂಗವನ್ನೇರಿದವು. ಸೂರಿಲ್ಲದ ರಂಗಭೂಮಿ ಬೀದಿಗಳಲ್ಲಿ ತೀವ್ರವಾಗಿ ವಿಡಂಬಿಸುವ ಬೀದಿನಾಟಕಗಳ ಮೂಲಕ ಧರ್ಮ-ರಾಜಕಾರಣಗಳ ಒಳತೋಟಿಯನ್ನು ಕೆಣಕತೊಡಗಿದಾಗ ಜನನಾಯಕರ, ಪಕ್ಷಗಳ ಸಿದ್ಧಾಂತಗಳೂ, ಯೋಜನೆಗಳು, ಹೈಡೆನ್ ಅಜಂಡಾಗಳೂ ಜನಸಾಮಾನ್ಯರಿಗೆ ತಲುಪತೊಡಗಿದವು. ಆಗ ಜನಸಾಮಾನ್ಯರು ಸಾಮಾಜಿಕವಾಗಿ ಜಾಗೃತವಾಗತೊಡಗಿದರು. ದೇಶದಲ್ಲಿ ರಾಜಕೀಯದಲ್ಲಿ ಪಲ್ಲಟಗಳಾಗತೊಡಗಿದವು. ರಾಜಕೀಯ ಆಶಯಗಳನ್ನಿಟ್ಟುಕೊಂಡು ಕ್ರಾಂತಿಕಾರಿ ಬದಲಾವಣೆಗಳು ಸುಧಾರಣೆಗಳು ಆಗಬೇಕೆಂಬ ಉದ್ಧೇಶದಿಂದ ಇಪ್ಟಾ, ಜನನಾಟ್ಯಮಂಚ, ಸಮುದಾಯ ಮುಂತಾದ ಸಂಘಟಣೆಗಳು ರಂಗಭೂಮಿಯನ್ನು ಜನಸಾಮಾನ್ಯರ ನಡುವೆ ತಂದವು. ಕತ್ತೆಪುರಾಣ ನಾಟಕವು ಈ ದೇಶದ ಸೂರಿಲ್ಲದ ರಂಗಭೂಮಿಯ ಸೈದ್ಧಾಂತಿಕ, ತಾತ್ವಿಕ ನಿಲುವುಗಳಿಗೆ ಬದ್ಧವಾಗಿರುವ ಜನನಾಟ್ಯಮಂಚ್ ಸಂಘಟಣೆಯ ಕ್ರೂಢಿಕೃತ ರಚನೆಯ ನಾಟಕವಾಗಿದೆ. ‘ನಮ್ಮ ಚಿಂತನೆಗಳ ಸಾಯಗೊಡುವುದಿಲ್ಲ ನಾವು ನಮ್ಮ ಮಂಥನಗಳ ಮೊಟಕುಗೊಳಿಸಲು ಬಿಡುವುದಿಲ್ಲ ನಾವು’ ಎನ್ನುವ ಮೂಲಕ ಕನೆಗೊಳ್ಳುವ ಈ ನಾಟಕದಲ್ಲಿ ಹೋರಾಟದ ಮನೋಭಾವ ಮತ್ತೆ ಜನರ ನಡುವೆ ಹೋಗಬಹುದಾದ್ದೆ ಆಗಿದೆ. ಬಹುಪಾಲು ನಾಟಕದ ವಸ್ತುಗಳು ಸಾಮಾಜಿಕ, ರಾಜಕೀಯ, ಆಥರ್ಿಕ ಸ್ತಿತ್ಯಂತರಗಳ ನಂತರ ಬಹಳಕಾಲ ಉಳಿಯುವುದಿಲ್ಲ. ಕತ್ತೆಪುರಾಣ ನಾಟಕದ ವಸ್ತುವಿನ್ಯಾಸದಲ್ಲಿ ಜೀವವಿರೋಧಿ ಐಷಾರಾಮಿ ಪರಂಪರೆಯನ್ನು ಉಳಿಸಿಕೊಳ್ಳುವ, ಇತಿಹಾಸವನ್ನು ನಿಮರ್ಿಸುವ ಸಲುವಾಗಿ ಕಿರೀಟದ ಸೈಜಿಗೆ ತಲೆಯನ್ನು ಬೆಳೆಸಿಕೊಳ್ಳಲು ಹಂಬಲಿಸುವ ರಾಜನ ಮಹತ್ವಾಕಾಂಕ್ಷೆ, ಗೋಲ್ಗುರೂಜಿಯ ಸಲಹೆ ಸೂಚನೆಗಳು ಇವತ್ತಿನ ರಾಜಕೀಯ ನಡೆಗೆ ಕನ್ನಡಿಯಂತಿವೆ. ನಗಬಾರದೆಂಬ ಕಟ್ಟಪ್ಪಣೆ, ಮಾಧ್ಯಮಗಳ ಪ್ರಚಾರಪ್ರಿಯ ವ್ಯಾಮೋಹ, ಶಿಸ್ತಿನ ಸಿಪಾಯಿಗಳು. ರಾಜನ ಸುತ್ತಲಿರುವ ಹೊಗಳುಭಟ್ಟಂಗಿಗಳ ಚುರುಕು ಮಾತುಗಳು ವಸ್ತುವನ್ನು ಯಾವತ್ತಕಾಲಕ್ಕೂ ಸಲ್ಲುವಂತೆ ಕಟೆದುನಿಲ್ಲಿಸಿವೆ. ಮುದುಕ ಮತ್ತು ಕತ್ತೆ ಹೊಟ್ಟೆಪಾಡಿನ ಪ್ರತಿಮೆಗಳು.. ಕಳ್ಳಿಬಳ್ಳಿಯಂತ ಸಂಬಂಧದ ಸಾಂಕೇತಿಕತೆ. ಕತ್ತೆ ಸ್ವಭಾವತ ಹಠಮಾರಿ. ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಮಾಡುವ ಯಾವ ಇರಾದೆಯೂ ಇಲ್ಲದ ಮುದುಕನಿಗೆ ತುತ್ತಿನಚೀಲಕ್ಕೆ ಆಸರಾಗುವ ಮೂಕಪ್ರಾಣಿ. ರಾಜಕೀಯಕ್ಕೂ ಈ ಬದುಕಿಗೂ ನಂಟಿಲ್ಲದಿದ್ದರೂ ಗಧಾಧರನ ಕಿರೀಟಕ್ಕೆ ಪ್ರತಿಸ್ಪಧರ್ಿಯಲ್ಲದಿದ್ದರೂ ಆತನ ತ್ರಿಕರಣಗಳ ಆಶಾವಾದಿ ರಾಜಕೀಯ ನಿಲುವುಗಳಿಂದಾಗಿ ವಿದೇಶಿ ಕಂಪನಿಗೆ ಗೋಮಾಳವನ್ನು ಬಿಟ್ಟುಕೊಡುತ್ತಾನೆ. ಆಗ ಕತ್ತೆ ಭಂಡುದೈರ್ಯದ ಮೊಂಡುತನದಿಂದಲೆ ರಾಜನ ಮೆರವಣಿಗೆ ಸಂದರ್ಭದಲ್ಲಿ ದಾರಿಗೆ ಅಡ್ಡ ನಿಲ್ಲುವ ಮೂಲಕ ಜಾಗತೀಕರಣ, ಖಾಸಗಿಕರಣ, ಉದಾರೀಕರಣಗಳೆಂಬ ತ್ರಿಕರಣಗಳ ಅಭಿವೃದ್ಧಿ ಫೋಜಿಗೆ ಪ್ರತಿರೋಧವೊಡ್ಡುತ್ತದೆ. ಒಂದು ಕತ್ತೆ ರಾಷ್ಟ್ರದ ರಾಜಕೀಯ ವಿಶ್ಲೇಷಕರ ಚಚರ್ೆಯ ವಸ್ತುವಾಗಿಬಿಡುತ್ತದೆ. ರಾಜನಗಿಂತಲೂ ಹೆಚ್ಚು ಪ್ರಚಾರಪಡೆಯುತ್ತದೆ. ಈ ಗಾರ್ದಭ ದಿಗ್ವಿಜಯ ರಾಜನನ್ನು ಕಂಗೆಡಿಸುತ್ತದೆ. ರಾಜನ ಪ್ರಚಾರದ ನಿಜರ್ೀವ ಕಟೌಟ್ಗಳನ್ನು ಕತ್ತೆ ಕೆಡವಿತೆಂಬ ಕಾರಣಕ್ಕೆ ಅದಕ್ಕೆ ಫಾಸಿ ಶಿಕ್ಷೆ ವಿಧಿಸಲಾಗುತ್ತದೆ. ನಾಟಕದುದ್ದಕ್ಕೂ ತಿಳಿಹಾಸ್ಯದ ಮೂಲಕ ರಾಜಕೀಯ ಧಾಮರ್ಿಕ ನಡೆಗಳು ವ್ಯವಸ್ಥೆಯನ್ನು ಹಿಡಿತದಲ್ಲಿಟ್ಟುಕೊಳ್ಳಲು ಹವಣಿಸುವ ದೊಂಬರಾಟವನ್ನು ಒಂದು ಆಟದ ರೀತಿಯಲ್ಲಿ ವಿನ್ಯಾಸಗಳಿಸಲಾಗಿದೆ. ಭಾರತದಲ್ಲಿ ರಾಜಕೀಯ ರಂಗಭೂಮಿ ಮನರಂಜನಾ ಆಯಾಮದಿಂದ ದೂರಸರಿದು ಬರೀ ವ್ಯಂಗ್ಯೋಕ್ತಿಗಳಿಂದ ಅಥವಾ ವಿಡಂಬನೆಗಳ ಮೂಲಕ ರೂಪಗೊಂಡಿದ್ದಲ್ಲ. ತಾತ್ವಿಕ ನಿಲುವುಗಳನ್ನು ಕಲೆಯಲ್ಲಿ ಹಾಸುಹೊಕ್ಕಾಗಿಸಿ ಕಲೆಗಾಗಿ ಕಲೆಯಲ್ಲ ಬದುಕಿಗಾಗಿ ಕಲೆ ಎಂಬ ಜೀವಪರಧ್ವನಿ ಹೊಂದಿದೆ. ಹಾಗಾಗಿ ವಿಡಂಬಣೆಯನ್ನು ಪ್ರಧಾನವಾಗಿಸಿಕೊಂಡ ನಾಟಕಗಳಲ್ಲಿ ಬಲಸಲ್ಪಡುವ ಒಂದೊಂದು ವಸ್ತುಗಳೂ ಕೂಡ ಪ್ರತಿರೋಧದ ಪ್ರತಿಮೆಗಳನ್ನು ಧ್ವನಿಸುತ್ತವೆ. ಕತ್ತೆಪುರಾಣ ನಾಟಕವೂ ಅಂಥದ್ದೊಂದು ಅಂತಃಶಕ್ತಿಯನ್ನುಳ್ಳ ವಸ್ತುವನ್ನೊಳಗೊಂಡಿರುವುದರಿಂದ ಹೆಚ್ಚು ಪ್ರಯೋಗಶೀಲವಾಗಿದೆ. – ಮಹಾದೇವ ಹಡಪದ ಸಾಲಾಪೂರ

ಪುರೋಹಿತಶಾಹಿ ಎಂಬ ಹಂದಿಯೂ ಬೆದರುಬೊಂಬೆಯ ವೇಷವೂ…


ಕನರ್ಾಟಕದಲ್ಲಿ ಗೋಮಾಂಸ ನಿಷೇಧ ಮತ್ತು ನಂಬಿಕೆ-ಮೂಢನಂಬಿಕೆಗಳ ಕುರಿತು ಭಾರೀ ಚಚರ್ೆಗಳು ನಡೆಯುತ್ತಿದ್ದಾಗ ಮಲೆನಾಡಿನ ಒಂದು ಹಳ್ಳಿಯಲ್ಲಿ ಪ್ರಸನ್ನಭಟ್ಟನೆಂಬ ಆಸಾಮಿ ಮೂರುತಿಂಗಳುಗಳ ಕಾಲ ಯಾವ ಶೂದ್ರ-ದಲಿತನೂ ಮಾಂಸಾಹಾರ ಸೇವನೆ ಮಾಡದಂತೆ ದೇವರ ಹೆಸರಲ್ಲಿ ಕಟ್ಟಪ್ಪಣೆ ಹೊರಡಿಸಿದ್ದ. ಮಾಂಸ ತಿನ್ನುವುದಿರಲಿ ಈರುಳ್ಳಿ-ಬೆಳ್ಳುಳ್ಳಿ ತಿಂದರೂ ನಾಗದೇವರು ಶಾಂತವಾಗಲಾರದೆಂದು ಹೆದರಿಸಿದ್ದ. ಭಟ್ಟನನ್ನು ಮನಸ್ಸಿನಲ್ಲಿ ಬೈದುಕೊಳ್ಳುತ್ತ ತಾವು ನಂಬಿರುವ ಆ ಸುಬ್ರಮಣ್ಯಸ್ವಾಮಿ ತಮಗೆ ಒಳ್ಳೆಯದು ಮಾಡಿದರೆ ಸಾಕೆಂದು ಯಥಾವತ್ ಮೂರುತಿಂಗಳು ವ್ರತಬದ್ಧರಾಗಿದ್ದವರು ಈ ಮಲೆನಾಡಿನ ಗುಲಾಮ ಸಂಸ್ಕೃತಿಯವರು. ಇಂದಿಗೂ ದೀಪಾವಳಿಯಲ್ಲಿ ಬಲ್ಲಾಳಿ ಬಲವೀಂದ್ರನ ಅಂಟಿಗೆ-ಪಂಟಿಗೆ ಹಾಡುಹೇಳುತ್ತ ಮನೆಮನೆ ತಿರುಗಿ ಬೆಳಕನ್ನು ಹಂಚುವವರೂ ಇವರೇ.. ಬಲಿರಾಜನ ಇತಿಹಾಸ ವಾಮನನ ದೃಷ್ಟಾಂತಗಳು ಬ್ರಹ್ಮಣ ಹೆರಿಗೆಯ ಯಾವ ಸಂದರ್ಭಗಳೂ ಇವರಿಗೆ ಅರ್ಥವಾಗಲಾರವು. ಯಾಕಂದ್ರೆ ತಾವು ಬದುಕುತ್ತಿರುವುದರ ಹಿಂದಿನ ಷಡ್ಯಂತ್ರದ ಕಥಾಸೃಷ್ಟಿಗಳು ಇವರನ್ನು ನಿಯಂತ್ರಣದಲ್ಲಿಟ್ಟಿವೆ. ಸಾಮಾಜಿಕವಾದ ಶ್ರೇಷ್ಠತೆಯ ಮನ್ನನೆ ಪಡೆದ ಒಂದು ವರ್ಗ ಈಗ ಕಾಲ ಬದಲಾಗಿದೆ ನಾವು ಬದಲಾಗಿದ್ದೇವೆ ಎಂದುಕೊಳ್ಳುತ್ತ ಮೇಲ್ನೋಟಕ್ಕೆ ತನ್ನ ದಾರಿಯಲ್ಲಿ ಕಲ್ಲು-ಮುಳ್ಳಾಗಿ ಒದಗಿಬರುವ ಪ್ರಗತಿಪರವಾದ ವಿಚಾರಗಳನ್ನು ಸವರಿಕೊಳ್ಳುತ್ತಾ ಬದುಕಿಕೊಳ್ಳಲೆತ್ನಿಸುತ್ತದೆ. ಆಚರಣೆ, ಸಂಪ್ರದಾಯ ನಡಾವಳಿಗಳಲ್ಲಿ ಜೀವಂತವಾಗಿರುವ ಯಾವ ಅಂಶವೂ ತನ್ನ ಗರ್ವದ ಕೇಂದ್ರಬಿಂದುವನ್ನು ಸುಲಭವಾಗಿ ಬಿಟ್ಟುಕೊಡಲಾರದು. ಸುಖವುಂಡ ಜೀವಕ್ಕೆ ಪಥ್ಯದ ನೆಪಹೇಳಿದರೆ ಸುಮ್ಮನಾಗುವುದಿಲ್ಲ.. ಅದು ಬಯಸಿದ್ದನ್ನು ಪಡೆದು ತಿಂದುಂಡು ಕೀವಾಗಿ ದ್ರವಿಸಿ ಇಂಚಿಂಚೆ ಸಾಯುತ್ತದೆ. ಅದು ಸತ್ತಷ್ಟು ಕಸುವನ್ನು ಹೆಚ್ಚಿಸಿಕೊಂಡು ಮತ್ತೆ ತನ್ನ ಮೂಲದ ಬೇರನ್ನು ಗಟ್ಟಿಗೊಳಿಸಿಕೊಳ್ಳುತ್ತಿರುತ್ತದೆ. ಸಾಮಾಜಿಕವಾಗಿ, ಆಥರ್ಿಕವಾಗಿ ಸಶಕ್ತವಾದ ಪುರೋಹಿತಶಾಹಿ ಎಂಬ ಹುಲಿ ಕಾಲಕ್ಕೆ ತಕ್ಕಂತೆ ಹಲ್ಲಿಯಾಗಿಯೂ ಹಂದಿಯಾಗಿಯೂ, ಇಲಿಯಾಗಿಯೂ ಬದುಕಿಕೊಳ್ಳುತ್ತದೆ. ಒಂದು ಸೂಕರ ಜಾತಕ ಕತೆ ಹೀಗಿದೆ… ಸಿಂಹವು ಸರೋವರದ ಹತ್ತಿರದಲ್ಲಿ ಆನೆಯನ್ನೋ ಕೋಣವನ್ನೋ ಕೊಂದು, ಹೊಟ್ಟೆತುಂಬಾ ಮಾಂಸ ತಿಂದು ನೀರು ಕುಡಿದು ಮೇಲೆ ಬರುತ್ತಿತ್ತು. ಸರೋವರದ ಹತ್ತಿರದಲ್ಲಿ ಬಲಿಷ್ಠವಾದ ಹಂದಿಯೊಂದು ಮೇಯುತ್ತಿತ್ತು. ಅದನ್ನು ನೋಡಿದ ಸಿಂಹ ಇದನ್ನು ಇನ್ನೊಂದು ದಿನ ತಿನ್ನುವುದಾಗಿ ಆಲೊಚಿಸಿತು. ಆದರೆ ಇದು ತನ್ನನ್ನು ನೋಡಿದರೆ ಮತ್ತೊಮ್ಮೆ ಇಲ್ಲಿಗೆ ಬರಲಾರದು ಹಾಗಾಗಿ ಇದರ ಕಣ್ಣಿಗೆ ಕಾಣದಂತೆ ಹೋಗಬೇಕೆಂದು ಮರೆಯಾಗಿ ಹೊರಟಿತು. ಸಿಂಹ ಹೀಗೆ ಹೋಗುವುದನ್ನು ನೋಡಿದ ಹಂದಿಯು ಇದು ನನಗೆ ಹೆದರಿಕೊಂಡು ಓಡಿಹೋಗುತ್ತಿದೆ… ನಾನು ಈಗಲೇ ಈ ಸಿಂಹದೊಡನೆ ಕಾದಾಡಬೇಕೆಂದು ತೀಮರ್ಾನಿಸಿ ಹೀಗೆ ಗಾಥೆಯನ್ನು ನುಡಿಯುತ್ತದೆ. ಚತುಪ್ಪದೋ ಅಹಂ ಸಮ್ಮ|ತ್ವಂಪಿಸಮ್ಮ ಚತುಪ್ಪದೇ ಏಹಿ ಸೀಹ! ನಿವತಸ್ತು ಕಿಂತು ಭೀತೋ ಪಲಾಯಿಸಿ (ಗೆಳೆಯಾ ನಾನೂ ನಾಲ್ಕು ಕಾಲಿನವ ನೀನು ನಾಲ್ಕು ಕಾಲಿನವ.. ಬಾ ಎದರು ನಿಲ್ಲು ಸಿಂಹ ಯಾಕೆ ಹೆದರಿ ಓಡುವಿ) ಸಿಂಹವು ಹಂದಿಯ ಮಾತನ್ನು ಕೇಳಿ- ‘ಗೆಳೆಯಾ ಈಗ ನನಗೆ ಹೊಟ್ಟೆ ತುಂಬಿದೆ. ಇಂದು ಯುದ್ಧ ಬೇಡ ಇಂದಿಗೆ ಏಳನೇ ದಿನದಲ್ಲಿ ಇಲ್ಲಿಯೇ ಯುದ್ಧವಾಗುವುದು’ ಎಂದು ಹೇಳಿ ಹೊರಟಿತು. ಸಂತೋಷಗೊಂಡ ಹಂದಿಯೂ ತಾನು ಸಿಂಹದೊಡನೆ ಯುದ್ಧಮಾಡುವುದಾಗಿ ತನ್ನ ಬಂಧುಬಳಗದವರ ಮುಂದೆಲ್ಲ ಕೊಚ್ಚಿಕೊಳ್ಳುತ್ತಿತ್ತು.ಹಂದಿಯ ಬಂಧುಗಳಿಗೆ ಅಪಾಯದ ಮುನ್ಸೂಚನೆ ಸಿಕ್ಕಿದ್ದರಿಂದ ಅವು ಈ ಹಂದಿಯ ಮಾತು ಕೇಳಿ ಬೆದರಿದವು. ನೀನು ನಮ್ಮನ್ನು ಸರ್ವನಾಶ ಮಾಡುತ್ತೀಯಾ ನಿನು ಸಾಯುತ್ತಿಯಾ ಎಂದು ಹೇಳಿದವು. ಅಲ್ಲಿಯತನಕ ಜಂಬಕೊಚ್ಚಿಕೊಳ್ಳುತ್ತಿದ್ದ ಹಂದಿ ಈಗ ತಣ್ಣಗಾಯ್ತು. ಉಳಿದ ಹಂದಿಗಳು ಉಪಾಯ ಹೇಳಿದವು… ಗೆಳೆಯಾ ತಪಸ್ವಿಗಳು ಮಲಮೂತ್ರ ಮಾಡುವಲ್ಲಿಗೆ ಹೋಗಿ, ಏಳುದಿನಗಳವರೆಗೆ ಶರೀರಕ್ಕೆ ಆ ಹೊಲಸನ್ನು ಲೇಪಿಸಿಕೊಂಡು ಒಣಗಿಸಿಕೊ. ಏಲನೇ ದಿನ ಮಂಜಿನ ಹನಿಗಳಿಂದ ನಿನ್ನ ಮೈ ಒದ್ದೆಮಾಡಿಕೊ. ಸಿಂಹದ ಎದುರು ಬರುವ ಮುನ್ನ ಗಾಳಿ ಬೀಸುವ ದಿಕ್ಕನ್ನು ಅರಿತುಕೊಂಡು ಆ ಕಡೆ ನಿಂತುಕೋ.. ಸಿಂಹವು ಸ್ವಚ್ಛತೆಯನ್ನು ಅಪೇಕ್ಷಿಸುತ್ತದೆ. ಅದು ನಿನ್ನ ಶರೀರದ ಕೊಳಕನ್ನು ಮೂಸಿ ಹೇಸಿಕೊಂಡು ನಿನ್ನನ್ನೆ ವಿಜಯಿಯನ್ನಾಗಿ ಘೋಷಿಸುತ್ತದೆ. ಗೆಳೆಯರು ಹೇಳಿದ ಉಪಾಯವನ್ನು ಪಾಲಿಸಿದ ಹಂದಿಯು ಏಳನೇ ದಿನ ಸಿಂಹಕ್ಕೆದುರಾಗಿ ಬಂದು ನಿಂತಿತು. ಹಂದಿಯ ಮೈಯಿಂದ ದುವರ್ಾಸನೆ ಬರುವುದನ್ನ ಅರಿತ ಸಿಂಹವು… ನೀನು ಒಳ್ಳೆಯ ಉಪಾಯ ಮಾಡಿದ್ದಿಯಾ.. ನೀನು ಹೊಲಸನ್ನು ಮೆತ್ತಿಕೊಳ್ಳದಿದ್ದರೆ ನಾನೀಗಲೇ ನಿನ್ನನ್ನು ಇಲ್ಲಿ ಕೊಂದು ಮುಗಿಸುತ್ತಿದ್ದೆ. ಆದರೆ ನೀನು ಅಪವಿತ್ರ ಹೊಲಸು ರೋಮದವನು ನಿನಗೆ ಯುದ್ಧಮಾಡುವ ಇಚ್ಛೆ ಇದ್ದರೆ ನಾನು ನಿನ್ನನ್ನು ವಿಜಯಿ ಎಂದು ಘೋಷಿಸುತ್ತೇನೆ. ಅಸುಚಿ ಪೂತಿಲೋಮೋಸಿ ದುಗ್ಗಂಧೀ ವಾಸಿ ಸೂಕರ ಸತೆ ಯು ಜ್ಝಿತುಕಾಮೋಸಿ ಜಯಂ ಸಮ್ಮ ದರಾಮಿ ತ ಎಂದು ಗಾಥೆ ನುಡಿಯಿತು. ಈ ಕತೆಯಲ್ಲಿ ಪುರೋಹಿತಶಾಹಿ ಎಂಬ ಠಕ್ಕರಕ್ಕಸನು ಯಾರೆಂಬುದನ್ನು ಬೇಗ ಗುರುತಿಸಬಹುದಾಗಿದೆ. ಹೌದು ಅದು ತನ್ನ ಕಾರ್ಯಸಿದ್ಧಿಸಿಕೊಳ್ಳಲು ಯಾವ ಅವತಾರವನ್ನೂ ಹಾಕುತ್ತದೆ. ಜ್ಯೋತಿಬಾರವರು ಈ ಬಲುಜಾಗರೂಕ ನಡೆಯನ್ನು ವಿವರಿಸಿದ್ದಾರೆ. **** **** **** **** ಜಂಬೂದ್ವಿಪದ ಕತ್ತಲಲ್ಲಿ ಗುಲಾಮಗಿರಿಯಂತ ಒಂದು ಅನಿಷ್ಟತೆ ಅಸಂಖ್ಯಾತರನ್ನು ಶೋಷಿಸಿರುವ ಮಾದರಿಯನ್ನು ಈ ಪುಸ್ತಕ ತೆರೆದಿಟ್ಟಿದೆ. ಸಿಪಾಯಿದಂಗೆಯ ನಂತರವರ್ಷಗಳಲ್ಲಿ ಭಾರತದ ಸಾಮಾಜಿಕ ಜನಜೀವನದಲ್ಲಿ ಅಲ್ಪಸ್ವಲ್ಪ ಬದಲಾವಣೆಗಳು ಕಾಣತೊಡಗಿದವು. ಸಮಾಜಸುಧಾರಕರು ಆ ನಿಟ್ಟಿನಲ್ಲಿ ಹೆಚ್ಚು ಕಾಯರ್ೋನ್ಮುಖರಾದಂತೆ ಭವ್ಯವೆಂದು ನಂಬಿದ್ದ ಸಂಸ್ಕೃತಿಯಲ್ಲಿನ ಲೊಪಗಳು ಒಂದೊಂದಾಗಿ ಕಾಣಿಸತೊಡಗಿದವು. ಹಾಗೆಯೇ ಕಾಪಿಟ್ಟುಕೊಂಡು ಬಂದ ಹಿಂದೂ ಪುರೋಹಿತಶಾಹಿ ಮನಸ್ಥಿತಿಯೂ ರಾಜಕೀಯ ಲಾಭಕ್ಕಾಗಿ ತನ್ನಲ್ಲಿ ಕೊಂಚ ಬದಲಾವಣೆಗಳನ್ನು ಮಾಡಿಕೊಳ್ಳತೊಡಗಿತು. ಆ ಎಲ್ಲ ಬದಲಾವಣೆಗಳ ಮಾದರಿಯಲ್ಲಿ ಗುಲಾಮಗಿರಿಯನ್ನ ಸಾಕಿಕೊಳ್ಳುವ ಹಂಬಲವಿರುವುದು ಸ್ಪಷ್ಟವಾಗಿದೆ. ಇಂದಿನ ಖಾಸಗಿಕರಣದ ಮುಖವಾಡದಲ್ಲಿಯೂ ಅದೆ ಮಾದರಿಯ ಬದಲಾವಣೆಯ ಹಪಹಪಿ ಇರುವುದನ್ನು ಗಮನಿಸಬಹುದಾಗಿದೆ. ಪುರೊಹಿತಶಾಹಿಯ ತಲೆಗೆ ಗುಂಡಿಟ್ಟು ಹೊಡೆಯಲು ಗುರಿ ಇಡಲಾಗದಷ್ಟು ಕಲಸುಮೇಲೊಗರ ಮಾಡಲಾಗಿದೆ. ಮಾಯದ ಬೆದರುಬೊಂಬೆಯೊಂದನ್ನು ತೋರಿಸುತ್ತ ಇದು ನೋಡಿ ಈಗ ಜೀವಕಳೆದುಕೊಂಡು ನರಸತ್ತಿದೆ ಈ ಇದರ ಹೆಸರಲ್ಲಿ ಬ್ರಾಹ್ಮಣ್ಯವನ್ನು ದೂರುವುದು ಎಷ್ಟು ಸರಿ ಎಂದು ಪ್ರಶ್ನಿಸುವವರು ಅಂತಜರ್ಾತಿ ವಿವಾಹದ ಬಗ್ಗೆ ಮಾತಾಡಲಾರರು. ಖಾಸಗಿ ವಲಯದಲ್ಲಿ ಮೀಸಲಾತಿ ಬಗ್ಗೆ ಮಾತಾಡುವುದಿಲ್ಲ. ಭಾರತದಲ್ಲಿ ಪುರೋಹಿತ ಪಾಮರರು ಸೃಷ್ಟಿಸಿರುವ ಹಜಾರಿಕಾ ಮಾದರಿಯ ಗುಲಾಮಗಿರಿಯಲ್ಲಿ ಯಾರೊಬ್ಬರನ್ನೂ ಬೆರಳು ಮಾಡಿ ತೋರಿಸದಂತೆ ಎಚ್ಚರವಹಿಸಲಾಗಿದೆ. ದಂತಕತೆ ಎಂದು ನೋಡುವಷ್ಟರಲ್ಲಿ ಐತಿಹ್ಯವಾಗಿಯೂ.. ಇತಿಹಾಸ ಬೊಗಳೆಯಾಗಿಯೂ.. ಪುರಾಣಪುಣ್ಯಕತೆಗಳ ಮೂಲಕ ಶೋಷಣೆಯ ಬೀಜಾಂಕುರವಾಗಿರುವುದನ್ನು ನಾಡದೇಸಾಯಿ ಕುಲಕಣರ್ಿಗಳವರೆಗೆ ತಂದು ನಿಲ್ಲಿಸಿರುವುದನ್ನು ಮತ್ತು ಆಯಾಕಾಲಕ್ಕೆ ತಕ್ಕ ದಿರಿಸಿನ ವೇಷ ಹಾಕಿಕೊಳ್ಳುವ ಗೋಸುಂಬೆತನವನ್ನು ಇಲ್ಲಿ ಸವಿಸ್ತಾರವಾಗಿ ದೋಂಡಿಬಾನೊಡನೆ ಸಂವಾದಿಸಿದ್ದಾರೆ. ಜ್ಯೋತಿಬಾ ಭಾರತದ ಆಂತರಿಕ ಸ್ವಾತಂತ್ರ್ಯಕ್ಕಾಗಿ, ಸಾತ್ವಿಕ ಸ್ವಾತಂತ್ರ್ಯದ ಅರಿವಿಗಾಗಿ ಹೋರಾಡಿದವರು. ಅವರ ಹೋರಾಟಕ್ಕೆ ಎದುರಾಗಿ ಬ್ರಿಟಿಷರಿರಲಿಲ್ಲ ನಮ್ಮದೆ ದೇಶದ ಪುರೋಹಿತವರ್ಗವಿತ್ತು. ಅವರು ಸೃಷ್ಟಿಸಿರುವ ಅಸಂಖ್ಯ ಗಣಗಳ ಪುರಾಣ ಮತ್ತು ಸೊಕ್ಕಿನ ಜೀವನಕ್ರಮವಿತ್ತು. ಅಲಂಕಾರಿಕವಾದ ವೈಭವೋಪೇತ ಜೀವನಪದ್ಧತಿಯನ್ನು ಪ್ರಶ್ನಿಸುವ ಮೊದಲು ತೊಡರಾಗಿದ್ದ ಕೆಲವು ಪುರಾಣ ಕತೆಗಳು ಭಾರತದ ಆಂತರ್ಯವನ್ನು ಆಳುತ್ತಿದ್ದವು. ಪುರಾಣೇತಿಹಾಸ ಹೀಗಿದೆ ಹೀಗೆ ಬದುಕಬೇಕೆಂಬ ಅಲಿಖಿತ ನಿಯಮಗಳು ಶೂದ್ರ-ಸ್ತ್ರೀ-ದಲಿತರನ್ನು ನಂಬಿಸಿದ್ದವು. ಆ ನಂಬಿಕೆಯ ಆಳದಲ್ಲಿನ ಗುಲಾಮಗಿರಿಯ ಅಂಶಗಳನ್ನು ಮತ್ತು ಆಕಾರ-ಅಳತೆಗಳಿಲ್ಲದ ಬೊಗಳೆ ಕತೆಗಳ ಪೊಳ್ಳು ನೈತಿಕತೆಯನ್ನು ವಿಶ್ಲೆಷಿಸುತ್ತದೆ.

ಚಪ್ಪಲಿಗಳು


ಊರೆಲ್ಲ ಸುತ್ತಿ ಬಂದು ಮೂಲ್ಯಾಗ ಕುಂದರುವ ಮೂಳಗಳು ಯಾವವು..? ಅಂತ ಒಡಪುಕತಿ ಹೇಳತಿದ್ದರಲ್ಲ ಅಂಥ ಸಂಚಾರಿಸ್ವಭಾವದ ಚಪ್ಪಲಿಗಳ ಊರ್ಫ ಎಕ್ಕಡಗಳ ಕಥನವೂ ಅಷ್ಟೆ ಕುತೂಹಲಿಯಾದದ್ದು.
ಎಲ್ಲೇ ಸಭೆಸಮಾರಂಭಗಳು ನಡೆಯಲಿ ಅಲ್ಲೆಲ್ಲ ತಮ್ಮ ಗ್ರಾಮಮಟ್ಟದ, ತಾಲ್ಲೂಕುಮಟ್ಟದ, ಜಿಲ್ಲಾಮಟ್ಟದ, ರಾಜ್ಯಮಟ್ಟದ ಮೀಟಿಂಗಗಳನ್ನು ಈ ಚಪ್ಪಲಿಗಳು ಮಾಡುತ್ತವೆ. ತನ್ನ ಮೇಲೆ ಬೀಳುವ ಭಾರವನ್ನು ಸಹಿಸಿಕೊಳ್ಳಲಾರದ ಹಲಕೆಲವು ಚಪ್ಪಲಿಗಳಂತೂ… ತನ್ನ ಮೈ ತೂತಾಗಿರುವ, ಉಂಗುಟ ಹರಿದಿರುವ, ಮುಳ್ಳುಚುಚ್ಚಿರುವ ಅಂಗೋಪಾಂಗಗಳ ಪ್ರದರ್ಶನ ಮಾಡಿ ಈ ಮನುಷ್ಯನ ವಿರುದ್ಧ ನಾವು ಯಾವ ತೆರನಾಗಿ ಚಳುವಳಿ ಆರಂಭಿಸಬೇಕೆಂದು ಗಂಭೀರವಾಗಿ ಚಿಂತಿಸುತ್ತವೆ. ಆದರೆ ಅವುಗಳ ಸಂಕಟವನ್ನು ಕೇಳಿ ಕೋಟರ್ಿನಲ್ಲಿ ದಾವೆ ಹೂಡತಕ್ಕಂಥ ವಕೀಲನ ಕಾಲೊಳಗೆ ಚಪ್ಪಲಿಗಳಿಲ್ಲದೆ ಪಾಲಿಷ್ ಮಾಡಿರತಕ್ಕಂಥ ಬೂಟುಗಳಿರುವುದರಿಂದ ಇವುಗಳ ಹೋರಾಟ ವ್ಯರ್ಥವಾಗುತ್ತದೆ. ಆದದ್ದಾಗಲಿ ಸ್ಟೇಶನ್ ಮೆಟ್ಟಿಲು ಹತ್ತೋಣವೆಂದು ತೀಮರ್ಾನಿಸಿದರೆ ಆ ಪೋಲಿಸ್ ಮಹಾಶಯರು ಕಾಲೊಳಗಿನ ಬೂಟು ಕಳಚುವುದೇ ಇಲ್ಲ.. ಈ ಬೂಟುಗಳದ್ದೊಂದು ತಕರಾರು… ಅತಿಕಡಿಮೆ ವರ್ಚಸ್ಸಿನ ಚಪ್ಪಲಿಗಳ ಅಹವಾಲು ಸ್ವೀಕರಿಸಲು ವರ್ಗಭೇದದ ಸಮಸ್ಯೆ. ಹೀಗಾಗಿ ತಮ್ಮ ನವೆಯುವ ನೋವನ್ನು ಸಹಿಸಿಕೊಂಡು ಮತ್ತೆ ಯಥಾವತ್ ತಮ್ಮ ಯಾವತ್ತಿನ ಹುಟ್ಟುತ್ತಲೆ ಬಳುವಳಿಯಾಗಿ ಬಂದ ಕೆಲಸವನ್ನು ಮುಂದುವರೆಸುತ್ತವೆ.
ಹೀಗೊಂದುಸಲ ವಿಚಾರಸಂಕಿರಣದ ಹೊರಬಾಗಿಲಲ್ಲಿ ಬಿಟ್ಟಿದ್ದ, ಬಿಸಿಲಲ್ಲಿ ಒದ್ದಾಡುತ್ತ ಬಿದ್ದಿದ್ದ ನನ್ನ ಚಪ್ಪಲಿಗಳು ಸಮ್ಮೇಳನಾಧ್ಯಕ್ಷ ಸ್ಥಾನದಲ್ಲಿ ಕೂತು ನನ್ನ ವಿರುದ್ಧವೇ ಘೋಷಣೆ ಕೂಗುವ ಇನಿದನಿ ಕೇಳಿಸಿತು. ಎರಡೂ ಮಗ್ಗುಲಲ್ಲಿ ಹದವಾಗಿ ತುಳಿಯದೆ ಒಂದೊಂದು ಕಡೆ ಭಾರಬಿಟ್ಟು ನನ್ನ ಸುಂದರವಾದ ಆಕಾರವನ್ನು ಹದಗೆಡಿಸಿದ್ದಾನೆ ಮಾರಾಯ ಎಂದು ಬೈಯುತ್ತಲಿದ್ದವು. ಮೊದಲೇ ನಾಟಕದವ ಸ್ವಲ್ಪ ಹಗುರತನವೂ ನಡಿಗೆಯೊಳಗೆ ಇದ್ದೇ ಇರುತ್ತದೆಂದು ಭಾವಿಸಿ ಇವನ ಕಾಲಿಗೆ ಅಲಂಕರಿಸಿ ದೊಡ್ಡ ತಪ್ಪು ಮಾಡಿದೆವು. ನಿಂತಲ್ಲೆಲ್ಲ ತ್ರಿಭಂಗಿ ಹಾಕಿಕೊಂಡು ನಿಲ್ಲುವ ಇವನ ಸಹವಾಸ ನಮಗಂತೂ ಸಾಕಾಗಿದೆ… ಎಡಕಿನ ಚಪ್ಪಲಿ ಸ್ವಲ್ಪ ವಯ್ಯಾರವನ್ನು ಜಾಸ್ತಮಾಡಿ ವಾದಮಂಡಿಸಿತು… ಕೇಳಬೇಕಾ ಬಲಕಿನ ಚಪ್ಪಲಿಯೂ ಶುರುವಿಟ್ಟಿತು. ಎಡಕ್ಕಿಂತಲೂ ಬಲನಾದ ನನ್ನ ಮೇಲೆ ಈ ಮಾರಾಯನ ವಜ್ಜೆ ಜಾಸ್ತಿ ಆಗುತ್ತಿದ್ದು ನಾನು ಬಹಳ ತ್ರಾಸುಪಟ್ಟುಕೊಂಡು ಈ ಅಮಾಸೆಯಂಥ ಮನುಷ್ಯನನ್ನು ಹೊರಬೇಕಾಗಿದೆ.. ಎರಡೂ ಕಾಲುಗಳ ಮೇಲೆ ಭಾರಹಾಕದೆ ನನ್ನನ್ನೆ ಈತ ಹೆಚ್ಚು ಅವಲಂಬಿಸಿದ್ದಾನೆಂದೂ ಮತ್ತು ಇವನು, ಬ್ರೇಕ್ಹಾಕಲು ಬೈಕ್ಒದೆಯಲು ಮುಖ್ಯ ನಾನೇ ಬೇಕೆಂದು ವಾದಿಸಿತು. ಹಾಗಾಗಿ ಸಂಗಾತಿಗಳೇ.. ಈ ಎಡಕ್ಕಿಂತ ಬಲಕಿನವನಾದ ನನ್ನ ನೋವೆ ತುಸುಜಾಸ್ತಿ ಎಂದು ಬೊಬ್ಬೆ ಹಾಕಿತು.
ಇದ್ದಕ್ಕಿದ್ದಂತೆ ಸಭೆಯಲ್ಲಿ ಎರಡು ಗುಂಪುಗಳಾಗಿ ಇವರ ಮಾತನ್ನು ಅವರು ಕೇಳದಾಗಿ ಅವರ ಮಾತನ್ನು ಇವರು ಕೇಳದಾಗಿ ಎಡ-ಬಲವೆಂದು ವಾದಿಸುವುದು ವಿಪರೀತಕ್ಕೆ ಹೋಗಿ ಸಭಾಧ್ಯಕ್ಷರಾಗಿದ್ದ ನನ್ನ ಚಪ್ಪಲಿಗಳು ಮೆಟ್ಟಿಲಿಂದ ಮೆಟ್ಟಿಲು ಕೆಳಗಿಳಿಯುತ್ತ ಅದ್ಯಾವನೋ ಜನಪ್ರಿಯ ಕಾದಂಬರಿಕಾರ ಬಂದನೆಂದು ಇಡೀ ವಿಚಾರಸಂಕಿರಣದ ಸಾಹಿತಿಮೇರುಗಳು ಅತ್ತ ತಿರುಗುವಷ್ಟರಲ್ಲಿ ನನ್ನ ಚಪ್ಪಲಿಗಳು ತೀರ ಅಂಚಿನಲ್ಲಿ ಅನಾಥವಾಗಿದ್ದವು. ಎಡ-ಬಲ ಅನ್ನೋ ಚಲನೆಯಿಲ್ಲದ ಪಂಥಗಳ ಚಟುವಟಿಕೆ ನನ್ನೊಳಗ ಜಾಗೃತವಾಗಿ ಅದು ಬೆಂಬಿಡದ ಭೂತವಾಗಿ ನನ್ನೊಳಗನ್ನ ಇರಿಯತೊಡಗಿದಾಗ ಇದ್ದೂಇಲ್ಲದಂತೆ ಎದ್ದು ಹೊರವೊಂಟೆ… ಚಪ್ಪಲಿಗಳು ಅನ್ನೋವು ಎಲ್ಲಿದ್ದಾವು ಅಂತ ಹುಡುಕಿದರ ಒಂದು ಇನ್ನೊಂದು ತದ್ವಿರುದ್ಧವಾಗಿ ಒಂದನ್ನೊಂದು ಸೇರದೆ ದೂರಬಿದ್ದಿದ್ದವು. ಅಸ್ತಿತ್ವದಲ್ಲಿರುವ ನಾನು ನನ್ನ ಕಾಲಿಗೆ ಜೋಡಿಸಿಕೊಂಡು ಹಾಂಗೂಹೀಂಗು ಅವುಗಳ ಕಚ್ಚಾಟ, ಬೈಗಳ, ಹಾವುಚೇಳುಗಳ ಎರಚಾಟಗಳನ್ನ ಸಹಿಸಿಕೊಂಡು ಈ ಬದುಕಿನ ಚಲನೆಯನ್ನು ತೂಗಿಸಿಕೊಂಡು ಹೋಗಬೇಕಾದ ದದರ್ು ನನ್ನದಾಗಿತ್ತು.
ಈ ಎಡಬಲಗಳ ಕಿತ್ತಾಟ ತ್ವಾಡೆ ಜಾಸ್ತಿ ಆಗಆಗತಾ ಮುಂದೆ ಯಾವ ತೆರನಾದ ಚಪ್ಪಲಿಗಳನ್ನು ಖರೀದಿ ಮಾಡಬೆಕು ಮತ್ತು ಅವುಗಳ ಬಾಳಿಕೆ ಹೊಂದಾಣಿಕೆಗಳ ಇತ್ಯಾದಿಯಾಗಿ ಅವರಿವರಲ್ಲಿ ವಿಚಾರಿಸತೊಡಗಿದೆ. ಹೋಗಿಬರುವವರ ಕಾಲುಗಳ ಮ್ಯಾಲೂ ಕಣ್ಣಿಟ್ಟು ಯಾವಯಾವ ಕಾಲಿಗೆ ಯಾವ ಬಣ್ಣ ಒಪ್ಪತದ, ಅದರ ಡಿಸೈನ್ ಹೆಂಗೈತಿ, ಅದರ ತಾಳಿಕೆ ಬಾಳಿಕೆ ಹೆಂಗಿರಬಹುದು ಅಂತ ಯೋಚನಾಮಗ್ನನಾಗುವುದು ಹೆಚ್ಚಾಯ್ತು. ಈಚೇಚೆ ಹೆಂಗಸರ ಕಾಲಲ್ಲಿನ ಚಪ್ಪಲಿಗಳನ್ನು ನೋಡುವುದೆ ಚಂದ… ಆ ಸಿಂಡ್ರೇಲಾಳ ಪಡಿಯಚ್ಚು ಚಪ್ಪಲಿಗಳು. ತರಹೇವಾರಿ ವಿನ್ಯಾಸಗಳು ಆ ಹೆಂಗಳೆಯರ ಸುಕೋಮಲ ಮೃದು ಪಾದಂಗನ್ನು ಅಲಂಕರಿಸಿರುವುದನ್ನು ನೋಡಲು ಎರಡುಕಣ್ಣಗಳು ಸಾಲುವುದಿಲ್ಲ.
ಇರಲಿ ಅದೆಲ್ಲ ನಮಗ್ಯಾಕ..?
ನಾ ಸಣ್ಣಾಂವಿದ್ದಾಗ ಇಜ್ಜೋಡೆಂಬ ಕೊಲ್ಲಾಪುರದ ಆರು ಅಟ್ಟಿ ಎತ್ತರದ ಜೋಡುಗಳನ್ನು ಊರೊಳಗ ಯಾವನಾದರೂ ಹಕ್ಕೊಂಡು ಬಂದ್ರ ಇದು ಕುರಗಾರಣ್ಣನದೆ ಎಂಟ್ರಿ ಅನ್ನೋದು ಖಾತ್ರಿಯಾಗತಿತ್ತು. ಒಂದು ಲೆಖ್ಖಕ್ಕ ಈ ಜಿರಕೀ ಚಪ್ಪಲಿಯ ಧರಿಸುವುದರೊಳಗ ಉಸ್ತಾದ, ಪೈಲ್ವಾನ, ಜಮೀನ್ದಾರ, ಗೌಡ, ಕುಲಕಣರ್ಿಯರ ಗತ್ತೂ ಇರುತ್ತಿದ್ದರಿಂದಾಗಿ ಜಿರಕಿ ಮೆಟ್ಟುಗಳನ್ನ ಮೆಟ್ಟೋದು ಒಂದನಮೂನಿ ಫ್ಯಾಷನ್ನ ಆಗಿತ್ತು. ಕಾಲಿನ ಅಳತೆಕೊಟ್ಟು, ಮುಂಗಡ ಅಡ್ವಾನ್ಸ್ನ್ನೂ ಕೊಟ್ಟು ತಮ್ಮ ಕಾಲಿಗೆ ಸರಿಹೊಂದುವಂತ ಚಪ್ಪಲಿಗಳಿಗಾಗಿ ತಿಂಗಳುಗಟ್ಟಲೆ ಕಾದು ಕೊಳ್ಳುವ ಕಾಲವೊಂದಿತ್ತು. ಆಗಿನ ಕಾಲಕ್ಕೆಲ್ಲ ತಿಂಗಳಿಗೊಮ್ಮೆ ಹದವಾಗಿ ಎಣ್ಣಿಉಣಿಸಿ, ನಾಯಿ, ನರಿ, ತೋಳ ಮಳಿ-ಗಾಳಿಗೆ ಸಿಕ್ಕದಂಗ ಕಾಪಾಡೋದರೊಳಗ ಶ್ರದ್ಧೆ ಇರತಿತ್ತು. ದೇವಸ್ಥಾನ, ಜಾತ್ರೆ ಲಗ್ನಗಳಿಗೆಲ್ಲ ಹೋಗುವಾಗ ಮುದ್ದಾಂ ಚಪ್ಪಲಿಯನ್ನ ಕದಿಯುವ ಕಳ್ಳರೂ ಬಂದಿರುತ್ತಾರೆಂಬ ಹೆದರಿಕೆಯೂ ಇರುತ್ತಿತ್ತು. ಖರೇ ಹೇಳಬೇಕಂದ್ರ ಕಳ್ಳರಿಗಿಂತ ನಾಯಿಗಳ ಕಾಟ ಹೆಚ್ಚಿರುತ್ತಿದ್ದರಿಂದಾಗಿ ದೇವರಕಿಂತ ಜಾಸ್ತಿ ಚಪ್ಪಲಿಗಳ ಮ್ಯಾಲ ಧ್ಯಾಸ ಇರುತ್ತಿತ್ತು.
ಈ ಡಾಂಬರೀಕರಣ ಯುಗ ಪ್ರಾರಂಭವಾದ ಮೇಲೆ ದಿನದಿನವೂ ಪಾಲಿಷ್ ಮಾಡಬಹುದಾದ ಕರೀಕಪ್ಪು ಬೂಟುಗಳು, ಹವಾಯಿ, ಬಾಟಾಗಳು ಹೆಚ್ಚೆಚ್ಚು ಬಳಕೆಗೆ ಬಂದವು.
ಬಿಳಿಅಂಗಿ ಬಿಳಿಧೋತ್ರ ತಲಿಮ್ಯಾಲ ಟೊಪಿಗಿ ಹೆಗಲಮ್ಯಾಲ ಟವೆಲ್ಲು ಹಾಕಿದ ಮಾತ್ರಕ್ಕ ಅಂವ ತಯಾರಾಗಿ ಹೊರಟೇಬಿಟ್ಟ ಅಂದ್ಕೊಳ್ತಿರಲಿಲ್ಲ. ಅಂವ ಹೊರಡೋದರ ಸೂಚನೆ ಕೆಲವೊಂದಸಲ ಎಕ್ಕಡಗಳ ಮೂಲಕವೂ ಆಗುತ್ತದೆ.
ಆ ನಮೂನಿಯ ಸ್ಟಂಟಗಳು ಯಾವತ್ತು ಪ್ಯಾರಾಗನ್, ಲುನಾರ್ ಕಂಪನಿಯ ಎರಡಬಾರಿನ ಚಪ್ಪಲಿಗಳು ಬಂದುವೋ ಅವತ್ತಿನಿಂದ ನಿಧನಿಧಾನಕ್ ಕಮ್ಮಿಯಾಗತ ಬಂದು ಇವತ್ತಿನ ಕಾಲಕ್ಕ ಜಿರಕಿ ಚಪ್ಪಲಿಯ ಟಿಆರ್ಪಿ ಪೂತರ್ಿ ಬಿದ್ದು ಹೋಗಿದೆ ಅನ್ನಬಹುದು. ಆಮ್ಯಾಲ ಅವರೂ ತಮ್ಮ ಚಪ್ಪಲಿ ವಿನ್ಯಾಸದಾಗ ತ್ವಾಡೆ ಸರ್ಕಸ್ ಮಾಡಿ ಆರು ಬಾರ್ ಇದ್ದುದನ್ನ ನಾಲಕುಬಾರಿಗೆ ಇಳಿಸಿ ಅದು ವಕರ್ೌಟ್ ಆಗದಿದ್ದಾಗ ಸುಪ್ರಸಿದ್ಧ ಎರಡಟ್ಟಿ ಚಪ್ಪಲಿಗಳಲ್ಲೇ ಜಿರಕಿ ನಿನಾದ ಹುಟ್ಟಿಸೋ ಚಪ್ಪಲಿಗಳನ್ನೂ ಮಾಡಿದರು. ಥೇಟ್ ರಾಜಮಹಾರಾಜರ ಠೀವಿ ಬರಲಿ ಅನ್ನೋಕಾರಣಕ್ಕ ಬಿಸಿಲಿಗೆ ನಯಸಾಗಿ ಒಗ್ಗುತ್ತಿದ್ದ ಚಪ್ಪಲಿಯ ಎದಿಮ್ಯಾಲ – ಕೃಷ್ಣನಿಗೆ ಗರಿಸಿಕ್ಕಿಸಿದ ರೀತಿಯೊಳಗ ಅವಕ್ಕೂ ಕೆಂಪುಗೊಂಡೆಯ ಗುಚ್ಚ ಕಟ್ಟ್ಟಿದರು. ನಾಗ್ಪುರ, ಕೊಲ್ಲಾಪುರ, ಜತ್ತ, ಸಾಂಗ್ಲಿ, ರಾಮದುರ್ಗ, ಮುಧೋಳ ನಿಪ್ಪಾಣಿಯ ಚಪ್ಪಲಿಗಳಲ್ಲಿ ಈ ಗುಚ್ಚು ನಾನಾ ಥರವಾಗಿ ಇರುವುದು. ಹೆಬ್ಬೆರಳ ಸಂದಿಯಿಂದ ಪಾದದ ಮ್ಯಾಲಿನ ನಾಲ್ಕಿಂಚಿನ ಪಟ್ಟಿಗೆ ಬಂದಿರುವಂಥ ಮುಖ್ಯ ಮೂಲಾಧಾರದ ದಾರದ ತುದಿಗೆ ಕಸಿಕಟ್ಟುವ ರೀತಿಯೊಳಗೂ ವ್ಯತ್ಯಾಸ ಐತಿ. ಬಂಧುರ ಹುರಿಗೊಳಿಸಿ ಹೆಣ್ಮಕ್ಕಳ ಜಡಿ ಹೆಣೆದಂಗ ಈ ದಾರವನ್ನ ನೆಯ್ಗೆಮಾಡಿರುವಂತದ್ದು ಕೊಲ್ಲಾಪುರದ್ದಾದರ ಇನ್ನು ಗುಚ್ಚಿನೊಳಗ ಗರಿಗರಿ ಮಿಂಚಹಾಕಿರುವಂಥದ್ದು ನಾಗಪುರದ್ದು. ಸಾಂಗ್ಲಿ, ಜತ್ತ ಚಪ್ಪಲಿಗಳಿಗೆ ಜಡೆಯಂಥ ಹೆಣಿಗೆ ಇರುವುದಿಲ್ಲವಾದರೂ ಚಂದಕ್ಕೊಂದು ಕೆಂಪುಬಣ್ಣದ ಗೊಂಡೆ ಕಟ್ಟಿರುತ್ತಾರೆ.
ಟ್ರ್ಯಾಕ್ಟರ್ ಟಯರ್ನ್ಯಾಗ ಮಾಡಿಕೊಡತಿದ್ದ ಹತ್ತರೂಪಾಯಿಗೆ ಜೋಡ ಚಪ್ಪಲಿಗಳ ಡಿಮ್ಯಾಂಡು ತೀರ ಕೆಳಮಟ್ಟದ್ದು ಅನ್ನೋ ರೀತಿಯೊಳಗ ನೋಡಲಿಕ್ಕ ಶುರುಮಾಡಿದಂತೆಲ್ಲ… ಚಪ್ಪಲಿ ತೊಡೋದರೊಳಗೂ ಗರ್ವ ಅನ್ನೋದು ಹುಟ್ಟಿಕೊಳ್ತು. ನಮ್ಮಪ್ಪ ನಮಗಾಗಿ ತಂದುಕೊಡುತ್ತಿದ್ದ ಟಯರ್ ಚಪ್ಪಲಿಗಳ ಜಾಗದಲ್ಲಿ ಲಟಕ್-ಪಟಕ್ ಅಂತ ವಿಚಿತ್ರವಾಘಿ ಹೆಜ್ಜೆಗಳಿಗೊಂದು ಸೌಂಡ್ ಕೊಡುವ ಪ್ಯಾರಾಗಾನಗ ಚಪ್ಪಲಿಗಳು ಬಂದವು. ತುಸು ದಿವಸಕ್ಕ ಆ ಚಪ್ಪಲಿಗಳ ತಳ ಸವೆದು ಉಂಗುಟಗಳು ಕಿತ್ತುಕೊಲ್ಳುವುದೂ ಪಿನ್ನೋ, ದಾರಾನೋ ಗಂಟ ಹಾಕಿ ಮುಂದಿನ ಮಂಗಳವಾರದ ಸಂತಿ ಬರೋತನಕ ಜ್ವಾಪಾನ ಮಾಡೋದು ನಡೆದಿರತಿತ್ತು. ಮಳೆಗಾಲಕ್ಕಂತೂ ಲಟಕ್-ಪಟಕ್ನೊಂದಿಗೆ ಚಪ್ಪಲಿಗಂಟಿದ ರಾಡಿಯೂ ಸಿಡಿದು ಹಿಂದಿನ ಭಾಗವೆಲ್ಲ ಕೆಸರಾಗುವುದು ರೊಚ್ಚೆನಿಸುತ್ತಿತ್ತು. ಈ ಕಾರಣದಿಂದಾಗಿ ಅಪ್ಪನ ಕುಶಲೀ ವ್ಯವಹಾರದ ಒಂದು ಭಾಗವನ್ನು ಕಿತ್ತುಕೊಂಡು ‘ಅಪ್ಪಾ ನೀ ನನಗ ಚಪ್ಪಲಿ ತರೋದು ಬ್ಯಾಡ, ನನ್ನ ಚಪ್ಪಲ್ ನಾನ ತಗೊಳ್ತೀನಿ’ ಅಂತ ಹೇಳಿಬಿಟ್ಟೆ. ಅಪ್ಪನ ವ್ಯವಹಾರವೆಂದರೆ ಪಕ್ಕಾ ಲೋಕಲ್. ಚಪ್ಪಲಿಯ ಉಂಗುಟನ್ನ ಎರಡೆರಡ ಸಲ ಜಗ್ಗಿ ನೋಡಿ, ಅದರ ಅಟ್ಟಿಯ ಅಂಟುವಾಳ ಗಟ್ಟಿ ಇಲ್ಲವೋ ಅನ್ನೋದನ್ನ ಪರೀಕ್ಷಿಸಿಲು ಅತ್ತಿತ್ತ ಮುರಿದಾಡಿ, ರೇಟಿನಲ್ಲೂ ವ್ಯವಹಾರ ಮಾತಾಡಿ ಎಷ್ಟು ಸಾಧ್ಯವೋ ಅಷ್ಟು ಕಮ್ಮಿ ಮಾಡಿಕೊಂಡು ತರುತ್ತಿದ್ದ ಒಂದು ಪರಂಪರೆಯನ್ನು ನಾನು ಮೊದಲ ಸಲ ಬ್ರೇಕ್ ಮಾಡಿ… ಅಂಗಡಿಯವರು ಹೇಳಿದಷ್ಟನ್ನು ಕೊಟ್ಟು, ನಯಸಾದ ಚಪ್ಪಲಿಗಳನ್ನು ತಂದುಕೊಳ್ಳಲು ಶುರುಮಾಡಿದೆ. ನನ್ನ ಆಯ್ಕೆಗೆ ಅಪ್ಪ ಎಂದು ಸಮ್ಮತಿಸಲಿಲ್ಲ. ಏನಾದರೊಂದು ಕೊಂಕುತನ ಹೇಳಿಯೇ ಹೇಳುತ್ತಿದ್ದ.
ಅಪ್ಪ ಮೊನ್ನೆ ಧಾರವಾಡಕ್ಕ ಬರುವಾಗ ‘ನನಗೊಂದು ಜತಿ ಚಪ್ಪಲಿ ತಂದುಕೊಡು’ ಅಂತ ಕೇಳಿದೆ. ಅಪ್ಪನ ಪಾದದ ಅಳತೆಯೂ ನನ್ನದೂ ಒಂದೆ ಆದ್ದರಿಂದ ಆಯ್ತು ಎಂದಷ್ಟೆ ಹೇಳಿದ. ಅವನು ಬರುವುದನ್ನೆ ಕಾದು ನಾನು ಬೇರೆ ಚಪ್ಪಲಿ ತೆಗೆದುಕೊಳ್ಳದೆ ಹಾಗೆ ಹಳೆಯ ಚಪ್ಪಲಿಯಲ್ಲೆ ಸಾಗಹಾಕುತ್ತಿದ್ದೆ. ಎಡ-ಬಲವೆಂದು ಕ್ಯಾತೆ ತೆಗದಿದ್ದ ಚಪ್ಪಲಿಗಳನ್ನು ಮೂಲೆಗೆ ಎಸೆದು ಹೊಸದನ್ನು ಧರಿಸುವ ವರ್ತಮಾಣದ ಸೋಗಿನ ಹಂಬಲವೂ ಇತ್ತು. ಅಪ್ಪ ಬಂದಾಗ ಬಾಗಿಲಹೊರಗಡೆಯೇ ಚಪ್ಪಲಿಯ ಹೊಸಪೊಟ್ಟಣವನ್ನಿಟ್ಟ. ಅತ್ತೊಂದು ಮುಖ ಇತ್ತೊಂದು ಮುಖ ಮಾಡಿಕೊಂಡು ವ್ಯಂಗ್ಯವಾಡುತ್ತಿದ್ದ ಎಡ-ಬಲ ಕ್ರಾಂತಿಕಾರಿ ಚಪ್ಪಲಿಗಳು ಮುಸಿಮುಸಿ ನಗುತ್ತಿದ್ದವು. ವಾಸನೆಯಿಂದಲೇ ಚಪ್ಪಲಿಯ ಕ್ವಾಲಿಟಿ ತಿಳಿದಿದ್ದವೇನೋ…! ಪೊಟ್ಟಣದಲ್ಲಿ ಅದೆ ಆ ಹಳೆಯ ಮಾದರಿಯ ನಾಲ್ಕಟ್ಟಿಯ ರಾಮದುರ್ಗ ಚಪ್ಪಲಿಗಳಿದ್ದವು.
ಮ್ಯಾಚಿಂಗ್ ಯುಗದಲ್ಲಿ ಅಂಗಡಿಮುಂಗಟ್ಟುಗಳನ್ನು ತುಂಬಿಕೊಂಡಿರುವ ಸೌಂದರ್ಯ ವರ್ಧಕ ವಸ್ತುಗಳೇ ಹೆಚ್ಚಿರುವಾಗ ನಾನು ನಾಲ್ಕಟ್ಟಿಯ ಮೆಟ್ಟುಗಳನ್ನು ಮೆಟ್ಟಿಕೊಂಡು ಓಡಾಡುವುದು ಮುಜುಗರವೆನಿಸಿತು. ಅವುಗಳ ಹಿಂಬಡಿಯ ಗಾತ್ರ, ಉಂಗುಟದ ನೆತ್ತಿಯ ಮೊನೆ, ಚರ್ಮದ ಎಳೆಗಳಲ್ಲಿ ನೆಯ್ದ ಜಡೆ ಒಂದೊಂದನ್ನು ನೋಡಿ ನನ್ನ ಎಡ-ಬಲ ಸಿದ್ಧಾಂತ ಚಪ್ಪಲಿಗಳು ಗಹಗಹಿಸಿ ನಗುತ್ತಿದ್ದವು. ನಾನು ಮಾತ್ರ ಗಾಣದೆತ್ತಿನಂತೆ ಕಣ್ಣಿಗೆ ಪಟ್ಟಿಕೊಂಡು ದುಡಿಯಲು ಸಿದ್ಧವಾಗಿ ಬಂದಿರುವ ಈ ಚಪ್ಪಲಿಗಳಿಗೆ ಮ್ಯಾಚ್ ಆಗುವಂತೆ ನನ್ನ ದಿರಿಸನ್ನೂ ಬದಲಿಸಿಕೊಂಡೆ…

ಬೇಲಿಯೊಳಗಿನ ಅಸ್ಪೃಶ್ಯನಿಗೆದುರಾದ ಅಂಬೆಡ್ಕರ್


ಬೇಲಿಯೊಳಗಣ ಅಸ್ಪೃಶ್ಯನ ಸಂಕಟಗಳು ಬಾಯೊಳಗಿಟ್ಟುಕೊಂಡ ಬಿಸಿ ತುಪ್ಪದಂತಿರುತ್ತವೆ. ಹಾಗೆ ಬದುಕಬೇಕಾದ ಅನಿವಾರ್ಯ ಸ್ಥಿತಿಯ ವೃತ್ತಿ ಮಾಡುವ ಕುಟುಂಬದ ಹಿನ್ನೆಲೆಯಿಂದ ಬಂದವನು ನಾನು… ವಿಚಿತ್ರವೆಂದರೆ ಈ ದೇಶದಲ್ಲಿ ಕ್ಷೌರಿಕರು ಅಸ್ಪೃಶ್ಯರಲ್ಲ. ಆದರೆ ಅವರನ್ನು ಮುಟ್ಟಿಸಿಕೊಂಡು ಹೋದ ಪ್ರತಿಯೊಬ್ಬನು ಮನೆಯ ಮುಂದೆ ನಿಂತು ನೀರು ಮುಟ್ಟಿ ಒಳಗೆ ಹೋಗುತ್ತಾನೆ. ಊರೊಳಗೆ ಇವರ ಮನೆಗಳಿರುತ್ತವೆ ಆದರೆ ಬೆಳಗಾಗುತ್ತಲೆ ಯಾರಿಗೂ ಮುಖ ತೋರಿಸದ ಸ್ಥಿತಿ ಇವರದ್ದು. ವೃತ್ತಿಸೂಚಕವಾದ ಹಜಾಮ ಬೈಗುಳವನ್ನು ಹೇಗೆ ಬೇಕೋ ಹಾಗೆ ಎಲ್ಲಿಬೇಕಾದಲ್ಲಿ ಎಗ್ಗಿಲ್ಲದೆ ಬಳಸುತ್ತಾರೆ. ಆ ಹಜಾಮ ಎನ್ನುವ ಶಬ್ದ ಮಾಡುವ ಕಿರಿಕಿರಿಯನ್ನು ನನ್ನಂತೆ ಅನುಭವಿಸಿದವರು ಇರಬಹುದು. ಆದರೆ ಅವರೊಳಗಿನ ಸ್ವಾಭಿಮಾನಕ್ಕೆ ಬಸವಣ್ಣನ ಕಾಯಕಶ್ರದ್ಧೆಯೊಂದೇ ಉತ್ತರವಾಗಿದೆ. ಅದರಾಚೆಗೆ ಬಾಬಾಸಾಹೇಬರೂ ಶಕ್ತಿ ನೀಡಿದ ಒಂದು ಘಟನೆಯಿಂದ ಬರಹಕ್ಕೆ ತೊಡಗುತ್ತೇನೆ.
ಕ್ಷೌರದ ಅಂಗಡಿ ತಮ್ಮ ಮನೆಗೆ ಎದುರಾಗಿ ಇಟ್ಟಿದ್ದಾನೆ ಎಂಬ ಕಾರಣಕ್ಕೆ ಮೇಲ್ಜಾತಿಯವನೊಬ್ಬ ಆ ಅಂಗಡಿಯನ್ನು ರಾತೋರಾತ್ರಿ ಹಿಂದಕ್ಕೆ ಮುಖಮಾಡಿ ತಿರುಗಿಸಿಡುತ್ತಾನೆ, ಪಾಪ ಕಸುಬುಗಾರ ಮುಂಜಾನೆದ್ದು ಅಂಗಡಿಗೆ ಬಂದು ನೋಡಿದರೆ ಅಂಗಡಿ ಬಾಗಿಲ ದಿಕ್ಕೆ ಬದಲಾಗಿರುತ್ತದೆ. ಆತ ಮತ್ತೊಮ್ಮೆ ಅಂಗಡಿಯನ್ನು ಯಥಾಸ್ಥಿತಿಯಲ್ಲಿ ಮಡಗಿ ಕಾಯಕಕ್ಕೆ ಮುಂದಾಗುತ್ತಾನೆ. ಎದುರು ಮನೆಯಾತ ಜಗಳ ಮಾಡುತ್ತಾನೆ. ಮತ್ತೆ ರಾತ್ರಿಯಷ್ಟೊತ್ತಿಗೆ ಅಂಗಡಿಯನ್ನು ಹಿಂಬದಿಗೆ ಮುಖ ತಿರುಗಿಸಿ ಇಡುತ್ತಾನೆ. ಹೀಗೆ ಎರಡು-ಮೂರು ಸಲ ನಡೆದಾದ ಮೇಲೆ ಕಾಯಕದವನಿಗೆ ಆಸರಿಲ್ಲದಂತಾಗುತ್ತದೆ. ಊರಿಗೆ ಒಂದೋ ಎರಡೋ ಮನೆಗಳಿರುವ ಇವರು ಬಹುಸಂಖ್ಯಾತರನ್ನು ಎದುರಿಸಲು ಸಾಧ್ಯವೇ..! ಮತ್ತು ಬೇರೆ ಕಸುಬು ತಿಳಿಯದ ಆತನಿಗೆ ಬದುಕಿನ ಚಿಂತೆಯೂ ಸಮಾಜದೊಂದಿಗೆ ರಾಜಿಮಾಡಿಕೊಂಡು ಬದುಕಬೇಕಾದ ಅನಿವಾರ್ಯತೆಯೂ ಇರುತ್ತದೆ. ಹೀಗಿರುವಾಗ ಆತನ ಅಂಗಡಿಗೆ ಬೆಂಗಾವಲಾಗಿ ಅಂಬೆಡ್ಕರ್ ಬರುತ್ತಾರೆ. ಯಾರೋ ಹೇಳಿದರೆಂದು ಆ ಕ್ಷೌರಿಕನು ತನ್ನ ಅಂಗಡಿಯಲ್ಲಿ ಬಾಬಾಸಾಹೇಬರ ಫೋಟೋ ಹಾಕಿ ಪೂಜೆ ಮಾಡಲು ಪ್ರಾರಂಭಿಸುತ್ತಾನೆ. ಯಾವಾಗ ಅಂಗಡಿಯಲ್ಲಿ ಐಶ್ವರ್ಯಲಕ್ಷ್ಮಿಯ ಜಾಗದಲ್ಲಿ ಅಂಬೆಡ್ಕರರ ಫೋಟೋ ಬರುತ್ತದೋ ಆಗ ಎದುರು ಮನೆಯವನ ಬಾಯಿಗೆ ಬೀಗ ಹಾಕಿದಂತಾಗುತ್ತದೆ. ಕ್ಷೌರದಂಗಡಿಯನ್ನು ಮುಟ್ಟುವ ತಾಕತ್ತು ಆ ಮೇಲ್ಜಾತಿಯವನಿಗೆ ಬರುವುದಿಲ್ಲ…
ಮೊದಲ ಸಲ ಈ ಘಟನೆ ಬಗ್ಗೆ ಕೇಳಿದಾಗ ನನಗೆ ಪುಳಕವಾಯ್ತು. ಒಂದು ಫೋಟೋದ ಶಕ್ತಿ ಹೀಗಿರುವಾಗ ಆ ವ್ಯಕ್ತಿ ಹೇಗೆ ಬದುಕಿದ್ದಿರಬಹುದೆಂಬ ಕುತೂಹಲದಿಂದ ನಾನು ಅಂಬೇಡ್ಕರರನ್ನು ಓದತೊಡಗಿದೆ. ಸುಡುವ ಸೂರ್ಯನ ಬೆಳಕಿನ ವೇಗ ಅನುಭವಕ್ಕೆ ಬಾರದಿದ್ದಲ್ಲಿ ರಾತ್ರಿಯ ಸುಖದ ಹುಚ್ಚುಭ್ರಮೆಯಲ್ಲಿ ಕಾಲ ಕಳೆಯಬೇಕಾಗುತ್ತದೆ. ಅವರು ಭಾರತವೆಂಬ ಈ ಹಿಂದುಸ್ಥಾನವನ್ನು ಬಹಿರಂಗವಾಗಿ ನೋಡಲಿಲ್ಲ ಅಂತರಂಗದಲ್ಲಿ ಧ್ಯಾನಿಸಿದರು… ಈ ಕಟುವಾಸ್ತವದ ಇಂಡಿಯಾಕ್ಕೆ ಮದ್ದನರೆದು ವಾಸಿಮಾಡುತ್ತೇನೆಂಬ ಛಲದಿಂದಾಗಿ ಓದುತ್ತಿದ್ದರೇನೋ..! ಅವರ ಓದಿನ ವಿಸ್ತಾರ, ಕೊಡುವ ಉಲ್ಲೇಖಗಳು, ಆ ಅಧ್ಯಯನದ ಶಿಸ್ತು ಮತ್ತು ಅವರ ಹೋರಾಟದ ಅಂಶಗಳು ನನ್ನ ರಂಗಭೂಮಿಯ ಕೆಲಸಗಳಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳತೊಡಗಿದವು.
ದೈವತ್ವಕ್ಕೇರಿಸಿ ಪೂಜಿಸುವ ಮೊದಲು ಅವರೊಳಗಿನ ಬುದ್ಧನೊಡನೆ ಸಂವಾದಿಸುವ ಕಾರುಣ್ಯಮೂತರ್ಿಯನ್ನು ಶೋಧಿಸಬೇಕಾಗಿದೆ. ರಾಜಕೀಯ ಭಿನ್ನಮತಗಳು, ಸಾಮಾಜಿಕ ಅಸಮಾನತೆ, ಸಾಂಸ್ಕೃತಿಕ ಬಿಕ್ಕಟ್ಟುಗಳ ಕಾರಣದಿಂದ ಕೆಲವರು ಅವರ ಹೆಸರು ಹೇಳುತ್ತಿದ್ದಂತೆ ಹಾವು ಕಂಡವರಂತಾಡುತ್ತಾರೆ. ನಮ್ಮ ತಂಡದ ರಮಾಬಾಯಿ ನಾಟಕವನ್ನು ಕೆಲವು ಸಂಘಟಕರು ತಮ್ಮ ಊರುಗಳಲ್ಲಿ ಆಯೋಜಿಸಲು ಹಿಂದೇಟು ಹಾಕಿದರು. ಸ್ವತಃ ಕೆಲವು ನಾಟಕ ಸಂಸ್ಥೆಗಳು, ಶಾಲೆಗಳು ನಾನು ಮಾತುಮಾತಿಗೂ ಅಂಬೇಡ್ಕರರ ಹೆಸರನ್ನು ಹೇಳುತ್ತೇನೆಂಬ ಕಾರಣಕ್ಕೆ ಹತ್ತಿರಕ್ಕೆ ಬಿಟ್ಟುಕೊಳ್ಳಲಿಲ್ಲ. ಜಾತಿಗಳ ಬಲಾಬಲ, ಧರ್ಮಗಳ ಶಕ್ತಿಪ್ರದರ್ಶನವೇ ಮುಖ್ಯವಾಗುತ್ತಿರುವ ಇಂದಿನ ಕಾಲದಲ್ಲಿ ಬಾಬಾಸಾಹೇಬರು ಹೆಚ್ಚುಹೆಚ್ಚು ಜನರನ್ನು ತಲುಪಬೇಕಾಗಿದೆ ಎಂಬ ಕಾರಣಕ್ಕಾಗಿ ನಾಟಕ ಮಾಡುತ್ತೇವೆ. ನನ್ನೊಡನೆ ಒಡನಾಡುವ ಒಂದಷ್ಟು ನಟರ ಪ್ರತಿಕ್ರಿಯೆಗಳು ಬದಲಾಗಿರುವದನ್ನು ಕಂಡಿದ್ದೇನೆ ಆದ್ದರಿಂದ ನನಗೆ ಒಲಿದ ಅಂಬೇಡ್ಕರರು ಸಾರ್ಥಕವಾಗಿದ್ದಾರೆ. ಆದರೆ ಬಾಬಾಸಾಹೇಬರ ಬದುಕು-ಬರಹ-ಭಾಷಣಗಳು ಕಾವ್ಯವಾಗಿ ಈ ದೇಶದ ಪ್ರತಿಯೊಬ್ಬ ನಾಗರೀಕನ ಬಾಯಿಗೆ ಬಾರದಿದ್ದರೆ, ಸಂವಿಧಾನವೇ ಇಂಡಿಯಾ ಎಂಬ ಧರ್ಮದ ಗ್ರಂಥವಾಗದಿದ್ದರೆ, ಜನವರಿ 26 ಪ್ರತಿಯೊಂದು ಮನೆಯ ಹಬ್ಬವಾಗದಿದ್ದರೆ ನಾವು ಮತ್ತೆ ಒಂದಿಲ್ಲಾ ಒಂದು ರೀತಿಯಲ್ಲಿ ಸೋತಂತೆ ಅಲ್ಲವೇ..?
ವಿಚಿತ್ರವೆಂದರೆ…
ತಮಟೆವಾದನ ಸಾಂಸ್ಕೃತಿಕ ವೆದಿಕೆಗಳಲ್ಲಿ ಪ್ರದರ್ಶನವಾಗುವುದಕ್ಕಿಂತ ಹೆಚ್ಚು ಆಚರಣೆಗಳಲ್ಲಿ ಬಳಸಲ್ಪಡುತ್ತದೆ. ಮೀಸಲು ಕ್ಷೆತ್ರಗಳ ಮತದಾರರು ಒಬ್ಬ ಸ್ಪೃಶ್ಯ ದಲಿತನಿಗೆ ಮತ ನೀಡಿ ಅವನನ್ನು ಗೆಲ್ಲಿಸುತ್ತಾರೆ ಹೊರತು ಅಸ್ಪೃಶ್ಯನಿಗೆ ಪ್ರಾಶಸ್ತ್ಯ ನೀಡಲಾರರು. ಎಡ-ಬಲ ಜಾತಿಮನೋಭಾವದ ಮೇಲೆ ಸಂಘಟಣೆಗಳು ರೂಪುಗೊಳ್ಳುತ್ತವೆ. ಪಠ್ಯದಲ್ಲಿ ಓದಿಕೊಳ್ಳುವ ಅಹಿಂದ ಮತ್ತು ಸವಣರ್ೀಯ ವಿದ್ಯಾವಂತರು ಮೀಸಲಾತಿ ಮತ್ತು ಜಾತಿಗಳ ಆಚೆಗಿನ ಬಾಬಾಸಾಹೆಬರ ವಿಶ್ವಭಾತೃತ್ವದ ಸೆಲೆಯೊಂದನ್ನು ಅರಿಯಲೊಲ್ಲರು… ಹೀಗೆ ಪಟ್ಟಿಮಾಡುತ್ತ ಹೋದರೆ ಸಾಕಷ್ಟು ವಾಸ್ತವಗಳ ನಡುವೆ ಇವತ್ತಿಗೆ ತಕ್ಕಂತೆ ಅಂಬೇಡ್ಕರರನ್ನು ಮತ್ತೆ ಓದಿಕೊಳ್ಳಬೇಕಾದ, ಮರು ನಿರೂಪಿಸಿಕೊಳ್ಳಬೇಕಾದ ಅನಿವಾರ್ಯತೆ ಈ ಕಾಲದ್ದಾಗಿದೆ. ಜಾತಿ-ಮತಗಳನ್ನು ಮೀರಿ ದಮನಿತರ, ನೊಂದವರ ಧ್ವನಿಯಾಗಿ ಅಂಬೆಡ್ಕರರ ವ್ಯಕ್ತಿತ್ವವನ್ನು ಘನೀಕರಿಸಿಕೊಳ್ಳಬೇಕಾದ ಕಾಲ ನಮ್ಮದಾಗಿದೆ. ಅವರ ಬದುಕಿನ ಒಂದೊಂದು ಪುಟವೂ ಕಾವ್ಯವಾಗಿ, ಕತೆಯಾಗಿ, ನಾಟಕವಾಗಿ ಪ್ರತಿಯೊಬ್ಬನನ್ನೂ ಮುಟ್ಟಬೇಕಾಗಿದೆ. ಸಂವಿಧಾನವನ್ನು ಈ ದೇಶದ ಪ್ರಾಥಮಿಕ\ಪ್ರೌಢ ಹಂತದ ಶಿಕ್ಷಣದವರೆಗೂ ಸರಳವಾದ ಪಠ್ಯ ರೂಪದಲ್ಲಿ ಕಲಿಸುವಂತಾದಲ್ಲಿ ಅನೇಕತೆಯ ವಿಶ್ವಾತ್ಮಕ ದೃಷ್ಟಿಕೋನವು ಇಂಡಿಯಾದ್ದಾಗುತ್ತದೆ.
– ?????? ???? ???????

ವರಾಹಿ ಅಂಗಳದಿಂದ ಜಿಗಿದ ಕಪಿಲೆಯ ಪಾತ್ರಗಳು.


ಹೌದು..! ವರಾಹಿ ಅಂಗಳದ ಆಟೋಟ, ಓದು, ಹುಡುಗಾಟಿಕೆ, ಯಕ್ಷಗಾನ, ಭೂತಕೋಲ, ನಾಟಕ ಹೀಗೆ ಕುಂದಗನ್ನಡ ಮನೆಮಾತಾಗಿರುವ ಸಂತೋಷ ಗುಡ್ಡಿಯಂಗಡಿ ನೌಕರಿಯ ಕಾರಣಕ್ಕೆ ಕಪಿಲೆಯ ಅಂಗಳಕ್ಕೆ ಬಂದು ಇಲ್ಲಿನ ಬದುಕಿನೊಡನೆ ಸಾಮರಸ್ಯ ಕಂಡುಕೊಂಡು ಆ ಭಾಷೆಯ ಸೊಗಸನ್ನು, ಆ ಭಾಷೆಯ ಮಟ್ಟು, ದಾಟಿ-ಲಯಗಳನ್ನು ಅಭಿವ್ಯಕ್ತಿಗೆ ಆಸರೆಯಾಗಿ ತಂದುಕೊಂಡು ಶ್ರದ್ಧೆಯಿಂದ ಬರವಣಿಗೆ ಮಾಡಿದ್ದಾರೆ. ಕತೆಬರೆಯುವಾಗ ಒದಗಿಬರುವ ಅನುಭವದ ಹಿನ್ನೆಲೆ ಬಹುಶಃ ವರಾಹಿ ಅಂಗಳದ, ಕುಂದಗನ್ನಡದ್ದೆ ಆದ್ದರಿಂದ ಇಂಥದ್ದೊಂದು ಶೀಷರ್ಿಕೆಯೊಂದಿಗೆ ಕತೆಗಳ ಅಧ್ಯಯನಕ್ಕೆ ತೊಡಗಬೇಕಾಯ್ತು.
ಇವತ್ತಿಗೂ ಸೂರ್ಯ ಹುಟ್ಟುತ್ತಾನೆ! ಸಾಯಂಕಾಲಕ್ಕೆ ದಣಿದು ಸಮುದ್ರ ಸ್ನಾನಕ್ಕೆ ಇಳಿಯುತ್ತಾನೆ ಎಂದು ಕತೆ ಹೇಳುವ ತಾಯಂದಿರರಿದ್ದಾರೆ. ವೈಜ್ಞಾನಿಕವಾಗಿ ಸೂರ್ಯನ ಸುತ್ತ ಭೂಮಿ ತಿರುಗುತ್ತದೆ ಎಂಬ ಸತ್ಯ ತಿಳಿದಿದ್ದರೂ ನಭೋಮಂಡಲವನ್ನು ಕತೆಯಾಗಿ ಕೇಳುವ ಕತೆಯಾಗಿ ಹೇಳುವ ಕುತೂಹಲವನ್ನು ಬಿಡಲಾರೆವು. ಹೀಗಿರುವ ಪಾತ್ರಗಳು ವರಾಹಿ ಮತ್ತು ಕಪಿಲಾ ನದಿಯ ಎಡಬಲದಲ್ಲೂ ಬದುಕುತ್ತವೆ. ಅಂಥ ಪಾತ್ರಗಳ ಬಗ್ಗೆ ಸೂರ್ಯ-ಚಂದ್ರ ಭೂಮಿ-ಬಾನಂತೆ ಹೊರಗಿನಿಂದ ಕಟ್ಟಿಕೊಳ್ಳುವ, ಕುತೂಹಲದಿಂದ ಹುಟ್ಟಿಕೊಳ್ಳುವ ಕತೆಗಳು ಜನರ ಬಾಯಲ್ಲಿ ಹಡೆಹುಡೆಯಾಗಿ ಊಹಾಪೋಹಗಳಾಗಿ ಕೇಳಿರುತ್ತೇವೆ. ಆದರೆ ಒಬ್ಬ ಪ್ರಜ್ಞಾವಂತ ಆ ಬದುಕನ್ನು ತನ್ನದು ಅಂತ ಅನುಭವಿಸಿ ಆ ವಾಸ್ತವದ ಜೊತೆಗೆ ಮುಖಾಮುಖಿಯಾಗುವಾಗ ಘನೀಕೃತಗೊಳ್ಳುವ ಬೆಣ್ಣೆಯ ಹಾಗೆ ವಾಸ್ತವ ಘನಗೊಳ್ಳುತ್ತಾ, ತನ್ನನುಭವ ಬೆಸೆದುಕೊಳ್ಳುತ್ತಾ ದಿನದ ಸುದ್ದಿಗಳೊಂದಿಗೆ ಮನುಷ್ಯನ ಸಂವೇದನೆಗಳೂ ರೂಪುಗೊಳ್ಳುತ್ತಿರುವ ಇವತ್ತಿನ ವಾಸ್ತವವನ್ನು ಗಟ್ಟಿಗೊಳಿಸಿ ಆ ಅನುಭವಕ್ಕೊಂದು ಆಕಾರ ತಂದುಕೊಡುವ ಕಲ್ಪಕತೆ ಕೊರಬಾಡು ಕಥಾಸಂಕಲನದ ವೈಶಿಷ್ಟ್ಯ.
ದ್ಯಾವನೂರು ನಾಟಕದಲ್ಲಿ ಚನ್ನನಾಗಿ ಅಭಿನಯಿಸಿದ್ದ ಸಂತೋಷ ಗುಡ್ಡಿಯಂಗಡಿ ಆ ನಂಜನಗೂಡಲ ಸೀಮೆಯ ಭಾಷೆಯ ಲಯವನ್ನ ಅಚ್ಚುಕಟ್ಟಾಗಿ ನುಡಿಸುತ್ತಿದ್ದುದನ್ನು ಕಂಡು ನಮಗೆಲ್ಲ ಬಹಳ ಆಶ್ಚರ್ಯವಾಗಿತ್ತು. ವರಾಹಿ ಸೀಮೆಯ ಕುಂದಗನ್ನಡ ಮನೆಮಾತಾಗಿದ್ದರೂ ಈ ಕಪಿಲೆಯ ಸೀಮೆಯ ನಂಜನಗೂಡಿನ ಲಯ ಇಷ್ಟು ಚನ್ನಾಗಿ ಹಿಡಿದಿದ್ದಾರೆ ಅನ್ನುವುದೆ ಸೋಜಿಗ. ಭಾಷೆಯ ಬಳಕೆಯಲ್ಲಿ ಯುವಲೇಖಕರದ್ದೊಂದು ದೊಡ್ಡಸಮಸ್ಯೆ ಇರುವುದಾದರೂ ಆ ಸವಾಲಿನ ಕುತ್ತನ್ನು ಕೊರಬಾಡು ಕಥಾಸಂಕಲನದ ಕತೆಗಳು ಮೀರಿದ್ದಾವೆ. ಇಲ್ಲಿನ ಪಾತ್ರಗಳು ಜೀವತುಂಬಿಕೊಳ್ಳುವಲ್ಲಿ ಭಾಷೆ ಸಹಾಯಕವಾಗಿದೆ ಹೊರತು ಭಾಷೆಯ ಬಳಕೆ ಮತ್ತದರ ಲಯದ ಪಾಜಗಟ್ಟಿಯ ಜಿಗಿತವನ್ನು ಸಂತೋಷ ಜಿಗಿದಿದ್ದಾರೆ ಎನಿಸುತ್ತದೆ. ಕತೆ ಓದುತ್ತಲೇ ಭಾಷೆಯ ಲಯದ ಆಧಾರದ ಮೇಲೆ ಇದು ಕಪಿಲೆ ಸೀಮೆಯ ಪಾತ್ರಗಳ ಕತೆ, ಇನ್ನೊಂದು ವರಾಹಿ ಸೀಮೆಯ ಕತೆ ಅಂತ ಹೇಳಬಹುದಾದ ಸಶಕ್ತತೆ ಈ ಕತೆಗಳಿಗಿದೆ. ಆ ಎರಡು ಭಾಷೆಗಳನ್ನು ಸಮರ್ಥವಾಗಿ ಬಳಸಿಕೊಂಡ ಇಬ್ಬರು ಮಹತ್ವದ ಕತೆಗಾರರು ನಮ್ಮೆದುರಿಗಿದ್ದಾರೆ. ದೇವನೂರು ಮಹಾದೇವ ಮತ್ತು ವೈದೇಹಿಯವರ ಕಥನಗಳು ರೂಪುಗೊಳ್ಳುವ ರೀತಿಗಿಂತ ವಿಭಿನ್ನವಾದ ಪಥದಲ್ಲಿ ಕೊರಬಾಡು ಕಥಾಸಂಕಲನದ ಪಾತ್ರಗಳು ವಾಸ್ತವವನ್ನು ಎದುರುಗೊಳ್ಳುತ್ತವೆ. ಕಥಾವಸ್ತು ವಾಸ್ತವದ ಅರಿವಿನಿಂದ ಬಿಡಿಸಿಕೊಂಡು ಮಿಥ್ ಆಗಿ ಕಾಣಿಸಿಕೊಳ್ಳುತ್ತವೆ. ಆ ಸೊಗಸು ಆ ಲಾಲಿತ್ಯ ಆ ಸಂವೇದನೆ, ಆ ಅಂತಃಸ್ಪೂರ್ತ ಕಲ್ಪಕತೆ ಇಲ್ಲದಿದ್ದರೆ ಈ ಕತೆಗಳೂ ಸುದ್ದಿಕತೆಗಳಾಗಿಬಿಡುತ್ತಿದ್ದವು.
ಕೊರಬಾಡು ಕತೆಯ ಆರಂಭವೇ ಅಂತ್ಯದ ಪೂರ್ಣವಿರಾಮದೊಂದಿಗೆ. ಊರಾದರೇನು ಕೆಳಹಟ್ಟಿಯಾದರೇನು ಅಲ್ಲಿ ರಾಮಕ್ಕ ನರಳುತ್ತ ಮಲಗಿದ್ದಾಳೆ. ಇಲ್ಲಿ ಚಂದ್ರಮ್ಮಳ ಹೊಟ್ಟೆಯಲ್ಲಿ ತಂದೆಯ ಹೆಸರಿಲ್ಲದ ಗುರುತಿನೊಂದಿಗೆ ಕೂಸೊಂದು ಹುಟ್ಟುತ್ತದೆ. ಚನ್ನಿ ಚಂದಪ್ಪಗ ಹೊರಗಿನ ಗಾಳಿ ಸೋಕದಿದ್ದರೂ ಆ ಹಟ್ಟಿಯ ಆ ಗುಡ್ಲುಮನೆಗೂ, ಕೊರಬಾಡಿನ ರುಚಿಗೂ, ಅವರ ಬದುಕಿಗೂ ಬಿಡಲಾರದ ನಂಟಿದೆ. ಈ ವ್ಯವಸ್ಥೆಯ ಇಂಚಿಂಚನ್ನ ಚಾಚೂತಪ್ಪದೆ ಪಾಲಿಸುವ ಆ ಚನ್ನಿ-ಚಂದಪ್ಪನ ಮನಸ್ಸಲ್ಲಿ ಎಳ್ಳಷ್ಟೂ ಕಲ್ಮಶವಿಲ್ಲ. ಮೇಲಿನ ಹಟ್ಟಿಯಲ್ಲಿ ಇದಕ್ಕೆ ತದ್ವಿರುದ್ಧವಾದ ಬದುಕೊಂದಿದೆ. ಹೆಂಡತಿಯ ಅಧಿಕಾರವನ್ನು ತಾನೆ ಮುಂದಾಗಿ ನಡೆಸುವ, ರಾಜಕೀಯದ ಪುಂಡಾಟಿಕೆ ಮೆರೆಯುವ, ತೆವಲಿಗೆ ಹೆಣ್ಮಕ್ಕಳನ್ನು ಬಳಸಿಕೊಳ್ಳುವ ಗೂಳಿಯಂತ ಸೋಮಣ್ಣನಿದ್ದಾನೆ, ಅಣ್ಣನ ಹೆಂಡತಿಯನ್ನೂ ಅಣ್ಣನ ಮಗಳನ್ನು ಬಳಸಿಕೊಳ್ಳುವ ಚಿಕ್ಕಪ್ಪನಿದ್ದಾನೆ. ಮೇಗಳ ಹಟ್ಟಿಯಿಂದ ತೂರಿಬರುವ ಗಾಳಿಯಲ್ಲೆಲ್ಲ ಊನವಿದೆ.. ಆದರೆ ಅಪರಿಚಿತಳಾಗಿ ಚನ್ನಿ-ಚಂದಪ್ಪರ ಮನೆಗೆ ಬರುವ ಹುಡುಗಿಗೆ ಇಲ್ಲೊಂದು ಹೆಸರಿದೆ, ತಾಯಿ-ತಂದೆಯರ ವಾತ್ಸಲ್ಯವಿದೆ, ಬದುಕು ಇರುವುದಾದರೂ ಚಾಕಿನಿಂದ ಚಿಗಪ್ಪನದನ್ನೂ ಸೋಮಣ್ಣಂದೂ ಕತ್ತರಿಸಿ ಹಾಕುವಷ್ಟು ಅತ್ಯಾಚಾರಕ್ಕೆ ಅವಳು ರೋಸಿಹೋಗಿದ್ದಾಳೆ.
ಮೇಲ್ನೋಟಕ್ಕೆ ಕಪ್ಪು-ಬಿಳುಪಿನ ಕಥಾವಸ್ತು ಎನಿಸಿದರೂ ನಿರೂಪಣೆಯ ಜಾಣ್ಮೆ ಕಥಿಸುವ ಬಗೆಯಲ್ಲಿ ಹೊಸತನವೆನಿಸುತ್ತದೆ. ಕತ್ತಲಿನೊಂದಿಗೆ ಒಡನಾಡುವ ಪಾತ್ರಗಳಿಗೆ ಚಂದ್ರನಂತ ಹೊಳಪಿದ್ದರೂ ಮುಕ್ತಾಯದಲ್ಲಿ ಕೂಸುಹುಟ್ಟುವಾಗ ಕಲುಕತ್ತಲೆ ಇಡೀ ಊರ ಮ್ಯಾಲೆ ಬಿದ್ದು ಕಪ್ಪಗಾಗಿಸಿರುವುದು ಮತ್ತೊಂದು ಕತೆಯ ಆರಂಭದಂತೆಯೂ ಇದೆ.
ಲಂಕೆಯೆಂಬ ಸನಿಮಾತ್ಮೆಯ ಕೆಂಚ ಸ್ವಾಭಿಮಾನಿ… ದೇಶದ ಸಾಂಸ್ಕೃತಿಕ ರಾಜಕಾರಣದೊಟ್ಟಿಗೆ ಕೆಂಚನ ಕತೆಯೂ ನಡೆಯುತ್ತದೆ. ಅವನ ಕಲಿಕೆಗೆ ಗೋಡೆಗಳೆಂಬ ಬಂಧನವಿಲ್ಲವಾದ್ದರಿಂದ ಕೌಶಲಿ ಎನಿಸುತ್ತಾನೆ. ಓದಲು ಬಾರದಿದ್ದರೂ ದೇಶದಾಗ ನಡೆಯುತ್ತಿರುವ ಅನಾಚಾರಗಳ ಅರಿವು ಅವನಿಗಿದೆ. ಹೆಚ್ಚಿನ ತಿಳುವಳಿಕೆಗೆ ಓದಲು ತಿಳಿದಿರುವ ಸುದ್ದಿಮಾದಯ್ಯನ ಸಹಾಯ ಪಡೆಯುತ್ತಾನೆ. ಅವನಿಗೆ ಬಹುಶಃ ಕ್ರಾಂತಿಯಾಗುವುದು ಬೇಡವಾಗಿದೆ. ಅಂಥ ಮಾತಿನ ಧಾಟಿಯನ್ನು ವಿರೋಧಿಸುವ ಹುಂಬುತನ ಅವನದಲ್ಲ ಅದ್ದರಿಂದ ಎದುರಿಸುವ ಕೆಚ್ಚಿದೆ, ಸ್ವಾಭಿಮಾನವಿದೆ. ಸ್ವಾಮಿ ಹೇಳುವ ಹೊಲ್ಯಾ ಅನ್ನೋ ಶಬ್ದಕ್ಕ ಸರಿಸಾಟಿಯಾಗಿ ಉತ್ತರಕೊಡಲು ನಾಟಕ ಕಲಿಸುವ ತಯಾರಿಮಾಡುತ್ತಾನೆ… ಅಣ್ಣಾ ತಂಡದಲ್ಲಿ ಬಿರುಕು ಅನ್ನೋದು ಸುದ್ದಿಯಾಗಿ ಟಿವಿಯೊಳಗ ಕಾಣಿಸುತ್ತಿದ್ದಾಗ ಅಲ್ಲಿ ಸುದ್ದಿಮಾದಯ್ಯನ ವಿರೋಧಿಸುವ ಕ್ರಾಂತಿಯ ಕಿತಾಪತಿಗೆ ಕೆಂಚ ಬಲಿಯಾಗುತ್ತಾನೆ. ಇತ್ತ ಸ್ವಾಮಿಯ ದ್ವೇಷಕ್ಕೆ ಹಟ್ಟಿಯಲ್ಲಿನ ಕೆಂಚನ ಮನೆಯೂ, ಟಿವಿಯೂ, ಅಕ್ಕಿಯೂ ಬೆಂಕಿಯಶಾಖಕೆ ಸಿಡಿಯುತ್ತವೆ. ಕತೆಯ ಆಶಯವೇನೆ ಇರಲಿ ಇಂತದೊಂದು ಸೋಲನ್ನು ಸಾಮಾಜಿಕವಾಗಿ ನಡೆಯುವ ಹೋರಾಟಗಳಲ್ಲಿ ಮತ್ತೆಮತ್ತೆ ಕಾಣುತ್ತಿದ್ದೇವೆ… ಆದರೆ ಅಜ್ಜಿಅಂಗಡಿ ಕತೆಯಲ್ಲಿ ನಿರೂಪಕ ಎದೆಗೆ ಬಿದ್ದ ಅಕ್ಷರ ಪುಸ್ತಕ ಕೊಡಿಸಲು ಮುಂದಾಗುವುದು ಕೂಡಾ ಇಂತದೆ ಎದುರಿಸಲು ಸಜ್ಜುಗೊಳಿಸುವ ತಯಾರಿಯ ರೂಪಕದಂತೆ ಕಾಣುತ್ತದೆ.
ಕತೆಗಳನ್ನು ಕಟ್ಟುವಲ್ಲಿ ಸುಂದರಿಕಾಟದ ಪ್ರಯೋಗ ಹೆಚ್ಚುಹೊಸತನದಿಂದ ಕೂಡಿರುವುದರಿಂದ ಗಾಢವೆನಿಸುತ್ತದೆ. ಅಕ್ಕನವಚನದ ಸಾಲುಗಳಿಂದ ಸ್ಪೂರ್ತಗೊಂಡಿದ್ದರಿಂದ ಆ ಹುಡುಕಾಟದಲ್ಲಿ ಹೊಸತನ ತಾನಾಗಿಯೇ ಕತೆಯಾಗಿದೆ. ಅನುಭಾವಿಕ ನೆಲೆಯಲ್ಲಿ ನಿಂತು ಮಾತಾಡುವ ಅಕ್ಕಮಹಾದೇವಿಯಲ್ಲ ಸುಂದರಿ. ಆಕೆ ಶ್ರೀಸಾಮಾನ್ಯ ಹೆಂಗಸು, ಬಹುಶಃ ಮಾತು ಕೂಡ ಬಾರದವಳು. ಅಂಥವಳೊಂದಿಗೆ ಸಂಜ್ಞೆಗಳ ಮೂಕಸಂವಾದನೆಯೂ ಸಾಧ್ಯವಾಗಲಾರದು.. ಕತೆಗಾರನೊಂದಿಗೆ ಸಂದರ್ಶನದಲ್ಲಿ ಮಾತಾಡುವ ಹುಚ್ಚಿ ಅನುಭಾವದ ನೆಲೆಯಲ್ಲಿಯೇ ಮಾತಾಡುವುದು ಸೊಗಸಾಗಿದೆ. ಕತೆಯ ಒಂದು ಭಾಗದ ಸಂದಶ್ನ ಹೀಗಿದೆ…
ಕತಗಾರ: ನಿಮ್ಗಂಡ ಯಾರಂತ ಹೇಳಿಲ್ಲ?
ಸುಂದರಿ: (ನಕ್ಕು) ಯಾನ್ಯಾನೋ ಮಾತಾಡ್ತ ಇದ್ದೀಯಲ್ಲ ಕೂಸು. ನನ್ಗಂಡ್ನ ಕಟ್ಕಂಡು ನಂಗೇ ಯಾನಾಗಿಲ್ಲ. ಇನ್ನ ನಿಂಗೇನಾದ್ದು. ಹಿಂದ್ಕ ಅಕ್ಮಾದೇವಮ್ಮ ಅಂತೊಬ್ಳು ಇದ್ದಿದ್ಲಂತ. ಅವ್ಳುಗ ದೇವ್ರು ಗಂಡ್ನಂತ. ಆದ್ರೂವಿ ಅವ್ಳಿಯಾ ಅವನನ್ನ ನೋಡ್ನಿಲ್ವಂತ. ಆದ್ರ ನಾ ನೋಡಿವ್ನಿ. ಯಾರ್ನ? ನನ್ಗಂಡ್ನ. ಅವ್ನೂವಿ ದೇವ್ರು. ನಂಜ್ಲಗೂಡ್ಲ ದೇವುಸ್ತಾನತಪು ಇರ್ತಾನ. ನಾ ಪೋನ್ ಮಾಡ್ತೀನಿ ಮಾತಾಡ್ತಾನ. ನಾ ಯಾನೆ ಕೇಳಿದ್ರೂವಿ ತ್ಯಪ್ಗ ಉತ್ರ ಹೇಳ್ತಾನ ಹಂಗ ಮಡಿಕಂಡಿವ್ನಿ ಗಂಡನ್ನ.
ಕತಗಾರ: ಯಾರವನು?
ಸುಂದರಿ: ನನ್ಗಂಡ.
ಕತಗಾರ: ಅದೇ ಯಾರವನು?
ಸುಂದರಿ: ನಂಜುಂಡೇಸ್ವರ.
ಕತಗಾರ: ಊಂ?
ಸುಂದರಿ: ಯಾಕ ಕಣ್ಣೂ ಬಾಯಿ ಬಿಟ್ಗಂಡಿ? ನಿಂಗ ದೇವ್ರು ನಂಗ ಗಂಡ. ಅಂದಮ್ಯಾಕ್ಕ ನಾ ಯಾರೇಳು?
ಕತಗಾರ: ದೇವರ ಹೆಂಡತಿ.
ಸುಂದರಿ: ದೇವ್ರ ಹೆಡ್ತಿ ಯಾನಾಗ್ತಾಳು?
ಕತಗಾರ: ದೇವರು.
ಸುಂದರಿ: ದೇವ್ರುಗ ನೀ ಯಾನ್ಮಾಡ್ಬೇಕೇಳು?
ಕತಗಾರ: ಪೂಜ
ಸುಂದರಿ: ಪೂಜ ಯಾಕ್ಮಾಡ್ಬೇಕೇಳು?
ಕತಗಾರ: ಒಳ್ಳೆಯದಾಗಲಿ ಅಂತ.
ಸುಂದರಿ: ಒಳ್ಳೇದ ಯಾರಿಗ್ಮಾಡ್ಬೇಕೇಳು?
ಕತಗಾರ: ನಮಗೆ.
ಸುಂದರಿ: ನಮ್ಗ ಅಂದ್ರ ಯಾರಿಗೇಳು?
ಕತಗಾರ: ನಮಗೆ ಅಂದರೆ ಮನುಷ್ಯರಿಗೆ.
ಸುಂದರಿ: ಮನ್ಸರು ಎಲ್ಲವ್ರೆಯೇಳು?
ಕತಗಾರ: ಭೂಮಿ ಮೇಲೆ.
ಸುಂದರಿ: ನಾನೆಲ್ಲವ್ನಿಯೇಳು?
ಕತಗಾರ: ಭೂಮಿ ಮೇಲೆ.
ಸುಂದರಿ: ನಾನ್ಯಾರೇಳು?
ಕತಗಾರ: ಹುಚ್ಚಿ.
ಸುಂದರಿ: ಹುಚ್ಚಿ ಎಲ್ಲದಾಳೇಳು?
ಕತಗಾರ: ಇಲ್ಲೆ.
ಸುಂದರಿ: ಹುಚ್ರ ಜ್ವತ್ಗ ಯಾರಿರ್ತಾರೇಳು?
ಕತಗಾರ: ಹುಚ್ರು.
ಸುಂದರಿ: ನೀನೆಲ್ಲಿದ್ದೀಯೇಳು?
ಕತಗಾರ: ನಿನ್ನ ಜೊತೆಗೆ.
ಸುಂದರಿ: ನಾನ್ಯಾರೇಳು?
ಕತಗಾರ: ಹುಚ್ಚಿ.
ಸುಂದರಿ: ನನ್ನ ಜ್ವತಿಗ ಇರೋ ನೀನ್ಯಾರೇಳು?
ಕತಗಾರ: ಹಂ!!
ಈ ಪ್ರಶ್ನೋತ್ತರಗಳ ಸೊಗಸಲ್ಲಿ ನಂಜನಗೂಡಿನ ಆ ಸುಂದರಿ ಆತ್ಮದೊಳಗಿನ ಅರಿವಿನಂತೆ ತೋರುತ್ತಾಳೆ. ಸುಂದರಿಕಾಟ ಕತೆಯಲ್ಲಿ ಮ್ಯಾಜಿಕಲ್ ರಿಯಲಿಜಮ್ಮಿನಂತೆ ಕಾಣುವ ಬಹಳಷ್ಟು ಅಂಶಗಳಿದ್ದಾವೆ. ಮುಕುಂದೂರ ಸ್ವಾಮಿಗಳ (ಯೇಗ್ದಾಗೆಲ್ಲಐತೆ) ಸಕೀಲು ಅನ್ನೋ ಪವಾಡದ ಒಂದಂಶ ಸುಂದರಿಕಾಟದ ಕತೆಯಲ್ಲೂ ಮುಂದುವರೆದಂತಿದೆ.
ಊನವಾದೊಂದು ಜಗತ್ತು ಕಣ್ಣಿಗೆ ಗೋಚರಿಸುತ್ತಿದ್ದರೂ ಆ ಲೋಕವನ್ನು ಅಲಕ್ಷಿಸಿಯೋ ಇಲ್ಲಾ ಎಂಟಾಣೆ ಒಂದ್ರೂಪಾಯ ಕೈಗಿಟ್ಟೋ ದಾಟಿಕೊಳ್ಳುತ್ತೇವೆ. ಇಲ್ಲಿನ ಕತೆಗಳಲ್ಲಿ ಅಂತ ಆಸರುತಪ್ಪಿದವರ ಅಸ್ತಿತ್ವದ ಹುಡುಕಾಟವಿದೆ. ಆ ಜಗತ್ತಿನ ಮಾನವೀಯತೆಯ ಖದರ್ರು ಹೇಗೋ ವ್ಯಕ್ತಗೊಳ್ಳುತ್ತಾ ಒಬ್ಬರಿಗೊಬ್ಬರಾಗುತ್ತ ಬಯಲೊಳಗೊಂದು ನೆಂಟಸ್ತನ, ಬೀದಿಯಲ್ಲೊಂದು ಕುಟುಂಬದ ಥರ ನಾಗರೀಕತೆಯ ನಾಟಕಗಳನ್ನು ಅನುಕರಿಸಲು ತೊಡಗುತ್ತ ಇಲ್ಲಿನ ಪಾತ್ರಗಳು ಬದುಕುತ್ತವೆ. ಇಂಡಿಯಾದ ರೈಲು ರಸ್ತೆ ದೇವಸ್ಥಾನದ ಬದಿಗಳ ಪಾತ್ರಗಳು ಮೈಗೊಂದು ಕತೆ ಕಟ್ಟಿಕೊಂಡು ಧುತ್ತನೆ ಪಾತ್ರವಾಗಿ ನಿರೂಪಕನೊಡನೆ ಪ್ರಶ್ನೋತ್ತರ ಮಾಡುತ್ತ ಅನುಭಾವದ ಮಾತುಗಳನ್ನಾಡುವುದು ಅಸಹಜವೆನಿಸುತ್ತದೆ. ಆದರೆ ಕತೆಗಾರ ಹಾಗೆ ಎದುರುಗೊಳ್ಳದೆ ನುಸುಳಿಕೊಂಡಿದ್ದರೆ ಈ ಕತೆಗಳ ಆವರಣವೂ ಒಂದು ಚೋದಕದಂತಾಗುತ್ತಿತ್ತು. ದೊಡ್ಜಾತ್ರೆಯ ಗೊಜ್ಜನಿರಲಿ, ಅಮ್ರೂಜ್ ಮಿಟಾಯಿ ಎಳೆಗೂಸಿನ ತಾಯಿಯಿರಲಿ, ದೆಹಲಿಯ ಮಾಕರ್ೆಟಿನಲ್ಲಿ ಸಿಗುವ ಹುಚ್ಚನಾಗಲಿ, ಕೊರ್ಗಳ ದಿಟ್ಟತನವೂ ಇವೆಲ್ಲವೂ ನಮ್ಮ ಅಕ್ಕಪಕ್ಕದಲ್ಲಿನವರ ಕತೆಗಳೇ ಆದ್ದರಿಂದ ಒಂದು ಚಣ ಸಂತೆಯಲ್ಲೋ ಜಾತ್ರೆಯಲ್ಲೋ ದೂರಪ್ರಯಾಣದ ಸಹಪ್ರಯಾಣಿಕನ ರೀತಿಯಲ್ಲೋ ಪಾತ್ರಗಳು ನಮ್ಮೆದುರಲ್ಲೇ ಮೈದಾಳುತ್ತವೆ.
ಇಲ್ಲಿನ ಒಟ್ಟನುಭವವು ವರಾಹಿ ಅಂಗಳದಿಂದ ಜಿಗಿದು ಕಪಿಲೆಯ ಪರಿಸರದಲ್ಲಿ ಅರಳಿದ ಕಥಾಜಗತ್ತು. ಬದುಕ ಪ್ರೀತಿಸಿದ ಬಡವರ ಮಕ್ಕಳು ಕತೆಯಲ್ಲಿ ಒಂದನ್ನೊಂದು ಹೆಣೆಯಲಾಗಿದೆ. ಆ ಮಕ್ಕಳು ಕೇಳುವ ಪ್ರಶ್ನೆಗಳು ಮತ್ತು ಇತಿಹಾಸದ ಪಡಿಯಚ್ಚಿನಿಂದ ಮೂಡಿಬರುವ ಕರಿಯಣ್ಣನೂ ಮುಗ್ಧವಾಗಿಯೇ ಪಾಠಕರನ್ನು ಎದುರಾಗುತ್ತವೆ. ಗಂಜಿಬಜ್ಜಿ, ದುರ್ಗಿ ಮಗ ದಿಲ್ಲಿಗೋಯ್ಬಂದ ಕತೆಗಳು ಕುಂದಗನ್ನಡದ ವೈಶಿಷ್ಟ್ಯದಲ್ಲಿ ನಿರೂಪಣೆಗೊಂಡಿವೆ. ಆ ಎರಡು ಮತ್ತು ಬದುಕ ಪ್ರೀತಿಸುವ ಬಡವರ ಮಕ್ಕಳು ಎಂಬ ಮೂರನೇ ಕತೆಯೂ ಎರಡೂ ಪರಿಸರದ ಭಾಷೆ-ಬದುಕನ್ನು ಒಳಗೊಂಡಿರುವುದರಿಂದ ಓದುಗನ ಭಾಷೆಯ ಲಯವನ್ನು ಬದಲಿಸಿಬಿಡುತ್ತವೆ. ಹಾಗಾಗಿ ಈ ಮೂರುಕತೆಗಳು ಹೆಚ್ಚು ಆಪ್ತವೂ ಆಗುತ್ತವೆ.
ಸಂಕಲನದ ಬಹಳಷ್ಟು ಕತೆಗಳು ನಂಜುಂಡೇಶ್ವರನ ಸನ್ನಿಧಿಯ ಸುತ್ತಲು ನಡೆಯುವ ಬದುಕಿಗೆ ಸಂಬಂಧಿಸಿದ್ದವೆ ಆಗಿವೆ. ವಿಷದಸೀಸೆ ಮತ್ತು ಎಂಟಾನೆ ಮನುಷ್ಯ ಎರಡು ಕತೆಗಳು ಭಿನ್ನ ಲೋಕದ ಅನುಭವವನ್ನೂ ಮತ್ತು ರೋಚಕಬದುಕಿನ ತಾಕರ್ಿಕ ಅಂತ್ಯವನ್ನು ಕಷ್ಟಪಟ್ಟು ನಿವೇದಿಸಿದಂತೆ ಭಾಸವಾಗುತ್ತವೆ. ಗಂಜಿ-ಬಜ್ಜಿ, ಬದುಕ ಪ್ರೀತಿಸಿದ ಬಡವರ ಮಕ್ಕಳು, ದುರ್ಗಿ ಮಗ ದಿಲ್ಲಿಗೋಯ್ಬಂದ ಕತೆಗಳು ಆಂತರ್ಯದಿಂದಲೇ ಸ್ವಯಂಸ್ಪೂರ್ತವಾಗಿರುವ ಅನನ್ಯವಾದ ಅನುಭವ ಲೋಕವನ್ನು ಸಾದರಪಡಿಸುತ್ತವೆ. ಹೆಚ್ಚಿನ ಕತೆಗಳಲ್ಲಿ ತಾಯಿತನದ ಮಮತೆಯ ವಾತ್ಸಲ್ಯ ಜೀವಂತಿಕೆಯಿಂದ ಕೈಹಿಡಿದು ಮುನ್ನಡೆಸುತ್ತದೆ.

ಪ್ರಶ್ನೆ ಬರೀ ಅನಭಿವೃದ್ಧಿಯದಲ್ಲ “ನಾವೂ ಕನ್ನಡಿಗರೇ ಸ್ವಾಮೀ” ಎನ್ನುವುದಾಗಿದೆ.


ಉತ್ತರ ಕರ್ನಾಟಕ ಪ್ರತ್ಯೇಕತೆಯ ಪ್ರಶ್ನೆ ಅಲ್ಲಲ್ಲಿ ಒಳಗೊಳಗೆ ಹೊಗೆಯಾಡುತ್ತಲಿದೆ. ಹಾಗೆಂದು ಹೇಳಿಕೊಳ್ಳಲಾರದೆ ಪ್ರಾದೇಶಿಕ ಅಸಮಾನತೆಯನ್ನು ಸಹಿಸಿಕೊಳ್ಳಲಾರದೆ ಅಲ್ಲಲ್ಲಿ ತಮಗೆ ಅವಕಾಶ ಸಿಕ್ಕ ಸಭೆ ಸಮಾರಂಭಗಳಲ್ಲಿ ದಕ್ಷಿಣ ಕರ್ನಾಟಕದತ್ತ ವಿಶೇಷವಾಗಿ ಬೆಂಗಳೂರಿನತ್ತ ಕೈಮಾಡಿ ತೋರಿಸುವುದು ಚಾಲ್ತಿಯಲ್ಲಿದೆ. ಹಾಗೆ ಅಸಮಾಧಾನದಿಂದ ಹುಟ್ಟುವ ಭಾವವನ್ನು, ಭಾಷೆಯನ್ನು ಅರ್ಥಮಾಡಿಕಳ್ಳದಿದ್ದರೆ ಹೇಗೆ..? ಮೂಲಭೂತ ಸೌಕರ್ಯಗಳ ವಿಷಯದಲ್ಲಿ ಹೆಚ್ಚು ಸಧೃಢವಾಗಿರುವ ಸುರಕ್ಷಿತವಾಗಿರುವ ನಗರ ಬೆಂಗಳೂರು ಆದ್ದರಿಂದ ಕರ್ನಾಟಕದ ತೆರಿಗೆಯಲ್ಲಿ ಬಹುಪಾಲು ಬೆಂಗಳೂರ ಒಂದರಲ್ಲಿಯೇ ಸಂಗ್ರಹಗೊಳ್ಳುತ್ತದೆ ಎಂಬುದರಲ್ಲಿ ಆಶ್ಚರ್ಯವಿಲ್ಲ. ಬೆಂಗಳೂರಿನಂತೆ ಮತ್ತೊಂದು ನಗರವನ್ನು ಕರ್ನಾಟಕದಲ್ಲಿ ಗುರುತಿಸಬಹುದಾಗಿದೆಯೇ…? ಹುಬ್ಬಳ್ಳಿ, ದಾವಣಗೆರೆ, ಗುಲ್ಬರ್ಗಾ ನಗರಗಳಿಗೆ ಅಂತಹ ಲಕ್ಷಣಗಳಿವೆ ಎಂದಾದರೆ ಆ ಬಗ್ಗೆ ಯಾಕೆ ಸರಕಾರಗಳು ಉತ್ಸುಕತೆ ತೋರಿಸಲಿಲ್ಲ. ಮರಾಠಿಗರ ಕಣ್ಣು ಬೆಳಗಾವಿಯ ಮೇಲಿರುವುದರಿಂದ ಆ ನಗರದ ಮೆಲೆ ಕನ್ನಡಿಗರಿಗೆ ವಿಶೆಷವಾದ ಒಲವಿರುವುದರಿಂದ ಬಹಳಷ್ಟು ಲಾಭಗಳನ್ನು ಪಡೆದುಕೊಂಡಿದೆ. ಬೆಳಗಾವಿ ಒಂದನ್ನು ಹೊರತುಪಡಿಸಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳೂ ಸರಿಯಾಗಿಲ್ಲ.
ಮೂಲಭೂತ ಸೌಕರ್ಯಗಳ ವಿಷಯದಲ್ಲಿ ಯಾವತ್ತೂ ದೊಡ್ಡ ಧ್ವನಿ ಹೊರಡಿಸಲಾರದ ಇಲ್ಲಿನ ಜನತೆ ಬಹುತೇಕ ಹೈಕೋರ್ಟ ಪೀಠ ಸಿಕ್ಕಾಗ, ಹೈದ್ರಾಬಾದ್ ಕರ್ನಾಟಕಕ್ಕೆ ಪ್ರಾತಿನಿಧ್ಯ ದೊರೆತಾಗ ಬಹಳ ಖುಷಿಗೊಂಡಿದ್ದರು. ಹೀಗೆ ಪ್ರಾತಿನಿಧ್ಯ ಕೇಳಿ ಪಡೆಯುತ್ತ ಅವರು-ಇವರು ಕೊಡುತ್ತ ಹೋಗುವ ಉದಾರತೆ ಇಲ್ಲಿನ ಪಂಚಮಹಾಭೂತಗಳಲ್ಲಿ ಬೆರೆತು ಹೋಗಿರುವ ಹಾಗಿದೆ.
ಮಾನಸಿಕವಲ್ಲದೆ ಭೌಗೋಳಿಕವಾಗಿಯೂ ರಾಜಧಾನಿ ದೂರದಲ್ಲಿರುವುದರಿಂದ ಮೂಲಭೂತ ಸೌಕರ್ಯಕ್ಕಾಗಿ ಹಲಬುವ ದನಿಗಳು ಮುಟ್ಟಬೇಕಾದಲ್ಲಿಗೆ ತಲುಪುವುದಿಲ್ಲ. ಹಾಗಾಗಿ ಶಂಕುಸ್ಥಾಪನೆ ಮಾಡಲ್ಪಟ್ಟ ಎಷ್ಟೋ ಯೋಜನೆಗಳು ಅಪೂರ್ಣಗೊಳ್ಳುತ್ತಿರುತ್ತವೆ. ಭರವಸೆಗಳು ಗಾಳಿಯಲ್ಲಿ ಹಾರಾಡುತ್ತಿರುತ್ತವೆ. ನಾರಾಯಣಪುರ, ಆಲಮಟ್ಟಿಯ ಪಂಪ ಇರಿಗೇಶನ್, ಮಹಾದಾಯಿ ಯೋಜನೆ, ನೇಕಾರರ ಸಮಸ್ಯೆಗಳು, ನದಿಪಾತ್ರದ ಎಡದಂಡೆ ಬಲದಂಡೆ ಜನಗಳ ಸಂಕಟಗಳು, ಉದ್ಯೋಗ, ಶಿಕ್ಷಣ ಹೀಗೆ ಎಲ್ಲವೂ ಇಲ್ಲಿನ ಪ್ರಶ್ನೆಗಳಾಗಿಯೇ ಇರುತ್ತವೆ.
ಭಾಷೆಯ ಕಾರಣಕ್ಕಾಗಿ ನಾವೆಲ್ಲರೂ ಕನ್ನಡಿಗರೇ ಆಗಿದ್ದರೂ ಪ್ರಾದೇಶಿಕ ಮತ್ತು ಭೌಗೋಳಿಕವಾಗಿ ಭಿನ್ನವಾದ ಜೀವನಪದ್ಧತಿ ನಮ್ಮಲ್ಲಿ ರೂಢಿಯಿರುವುದು ಸುಳ್ಳೇನು…? ಅಭಿವೃದ್ಧಿಯ ವಿಷಯದಲ್ಲೂ ಇಂಥದೆ ಅಸಮಾನತೆ ತಲೆದೋರುತ್ತಿದೆ ಎಂದಾದಲ್ಲಿ ಉತ್ತರ ಕರ್ನಾಟಕ ಕಡೆಗಣಿಸಲ್ಪಡುತ್ತಿದೆ ಎಂಬುದನ್ನು ಒಪ್ಪದಿರುವುದು ಹೇಗೆ ಸಾಧ್ಯ..? ಕರ್ನಾಟಕದ ಆಯವ್ಯಯದ ಲೆಖ್ಖಾರದಲ್ಲಿ ಉತ್ತರ ಕರ್ನಾಟಕಕ್ಕೆ ಯೋಜನಾ ವೆಚ್ಚದ ಅತಿದೊಡ್ಡ ಮೊತ್ತ ಹರಿದುಬಂದಿದೆ. ಅಷ್ಟೆಲ್ಲ ದೊಡ್ಡ ಮೊತ್ತದ ಯೋಜನೆಗಳು ಉತ್ತರಕರ್ನಾಟಕಕ್ಕೆ ಬಂದರೂ ಅಬಿವೃದ್ಧಿ ಯಾಕಾಗಲಿಲ್ಲ…? ಸರಕಾರಗಳು ಹೂಡಿಕೆಯ ವಿಷಯದಲ್ಲಿ ಉತ್ತರಕರ್ನಾಟಕವನ್ನು ಗಮನಿಸಲೇ ಇಲ್ಲ. ದಕ್ಷಿಣ ಕರ್ನಾಟಕದಲ್ಲಿ ಮೊದಲಿನಿಂದಲೂ ರಾಜಮನೆತನಗಳ ಆಶ್ರಯದಲ್ಲಿದ್ದ ಲಾಗಾಯ್ತಿನಿಂದ ಕೈಗಾರಿಕಾ ಹೂಡಿಕೆಗಳಿಗೆ ವಿಶೆಷ ಒತ್ತು ನೀಡುತ್ತ ಬಂದವಾದ್ದರಿಂದ ಅಲ್ಲಿನ ಬದುಕು ಆರ್ಥಿಕವಾಗಿ ಸಮೃದ್ಧಗೊಳ್ಳುತ್ತ ಬಂದಿದೆ. ಬಂಡವಾಳ ಹೂಡಿಕೆಯಲ್ಲೂ ಸರಕಾರಗಳು ಉತ್ತರಕರ್ನಾಟಕವನ್ನು ಕಡೆಗಣಿಸುತ್ತ ಬಂದಿರುವುದಂತು ಸುಳ್ಳಲ್ಲ.
ಸರಕಾರ ಮತ್ತು ಉತ್ತರ ಕರ್ನಾಟಕದ ಪ್ರಜೆಗಳ ನಡುವೆ ಮಾನಸಿಕ ದೂರವಿರುವುದನ್ನು ಅಲ್ಲಗಳೆಯುವಂತಿಲ್ಲ. ಇದು ರಾಜ್ಯದ ಇತರೆ ಹಿಂದುಳಿದ ಜಿಲ್ಲೆಗಳಲ್ಲಿಯೂ ಇರುವಂತಹದ್ದೆ ಸಮಸ್ಯೆ. ಆದರೆ ಸಾಂಸ್ಕೃತಿಕ ಚಹರೆಯ ಮೇಲೆಯೇ ಇಂಥದ್ದೊಂದು ಡಿಸ್ಟನ್ಸ್ ಇರುವಾಗ ನಾವು ಯಾರನ್ನು ದೂರಬೇಕು ಎಂಬುದು ಪ್ರಶ್ನೆಯಾಗಿದೆ. ರಾಯಚೂರು, ಸಿಂಧನೂರು, ಬದಾಮಿ, ರಾಮದುರ್ಗ, ರೋಣ, ಕುಷ್ಟಗಿ ಈ ಸೀಮೆಯಲ್ಲಿ ಡಿಗ್ರಿವರೆಗೂ ಓದಿದ ಹುಡುಗರು ಮಂಗಳುರು, ಗೋವಾ, ಮುಂಬೈಗಳಲ್ಲಿ ಕೂಲಿಕೆಲಸಕ್ಕೆ, ರೋಡ ಕೆಲಸಕ್ಕೆ, ಸೆಕ್ಯುರಿಟಿ, ಗೌಂಡಿ ಕೆಲಸಕ್ಕೆ ಹೋಗುತ್ತಾರೆ. ಶಾಲೆಗಳಿಗೆ ರಜೆ ಇದ್ದಾಗ ಎಳೆ ಮಕ್ಕಳು ಹೊಟೇಲ್ ಕೆಲಸ ಮಾಡತಿರತಾರೆ. ಇದಕ್ಕೆ ನಾವು ಯಾರನ್ನು ಹೊಣೆಗಾರರನ್ನಾಗಿಸಬೇಕು ಹೇಳಿ? ಅವಕಾಶಗಳು ಇಲ್ಲದಾಗ ಓದಿರುವ ಅಹಮ್ಮನ್ನು ಬದಿಗೊತ್ತಿ ಬದುಕಿಗಾಗಿ ಹಪಹಪಿಸಬೇಕಾಗುತ್ತದೆ. ಈ ಸ್ಥಿತಿಗೆ ಭೌಗೋಳಿಕ ಪ್ರಾದೇಶಿಕ ಭಿನ್ನತೆ ಮತ್ತು ಅಸಮಾನತೆ ಕಾರಣ ಎಂದರೆ ನಿಮಗೆ ನಗು ಬರಬಹುದು. ಆದರೆ ಡಿಗ್ರಿವರೆಗೂ ಓದಿ ಕೂಲಿ ಕೆಲಸಕ್ಕಾಗಿ ಅಲೆದಾಡುವವರನ್ನು ನಾನು ದಕ್ಷಿಣದಲ್ಲಿ ಹುಡುಕಿದರೆ ಒಬ್ಬರೂ ಸಿಕ್ಕಲಿಲ್ಲ ಎಂದರೆ ನಂಬುತ್ತೀರಾ…?
ರಾಜ್ಯದ ಒಂದು ಭಾಗದ ಜನ ಇನ್ನೊಂದು ಭಾಗದ ಜನಜೀವನವನ್ನು ಕಡೆಗಣಿಸುವುದಂತೂ ನಿರಂತರವಾಗಿ ನಡೆದುಕೊಂಡು ಬಂದಿದೆ. ಕೈಕಪ್ಪ ಅಂಗಿ, ಬಿಳಿದೋತ್ರ, ಹೆಗಲಿಗೊಂದು ಟವಲ್, ತಲೆಗೊಂದು ಟೋಪಿ ಹಾಕಿಕೊಂಡು ದಕ್ಷಿಣ ಕರ್ನಾಟಕದ ಯಾವುದೆ ಜಿಲ್ಲೆಗೆ ಹೋಗಲಿ ಅಂಥವರನ್ನು ಬೇರೆ ರಾಜ್ಯದವರು ಎಂಬಂತೆ ನೋಡುತ್ತಾರೆ. ವಿಶೆಷವಾಗಿ ಉತ್ತರ ಕರ್ನಾಟಕದವರಾದ ನಾವು ನಮ್ಮದೇ ಭಾಷೆಯನ್ನಾಡುವ ಜನರೆದುರಿಗೇ ಪರಕೀಯರಾಗಿ ಕಾಣಿಸುತ್ತೇವೆ. ನಾವು ತಿನ್ನುವ ರೊಟ್ಟಿಯಿಂದ ಹಿಡಿದು, ರಸ್ತೆ ಬದಿಯಲ್ಲಿ ಒಂದು ಚೊಂಬು ನೀರಿಟ್ಟುಕೊಂಡು ಸಾಲಾಗಿ ಕಕ್ಕಸು ಕೂಡುವ ರೀತಿಯನ್ನೆಲ್ಲ ಅವರವರಲ್ಲೇ ಹೇಳಿಕೊಂಡು ನಗಾಡುತ್ತಾರೆ. ದುಡುಮೆ ಹುಡುಕಿಕೊಂಡೋ, ಗುಳೆ ಹೊರಟೋ, ನೌಕರಿಗಾಗಿ ಅಥವಾ ವಿದ್ಯಾಭ್ಯಾಸಕ್ಕಾಗಿ ಬಂದವರು ಇಂಥ ಲೇವಡಿಗಳನ್ನು ಅವಮಾನಗಳನ್ನು ಅನುಭವಿಸಿರುತ್ತಾರೆ. ಆ ಕ್ಷಣಕ್ಕೆ ನಮ್ಮ ಸ್ವಾಭಿಮಾನಕ್ಕೆ ಪೆಟ್ಟಾದರೂ ವಾಸ್ತವದಲ್ಲಿ ಅವರು ಹೇಳುವುದು ನಮ್ಮ ಸುತ್ತಲಿನ ಪ್ರಪಂಚದಲ್ಲಿ ಇರುವುದರಿಂದ ತಲೆತಗ್ಗಿಸಲೆಬೇಕಾಗುತ್ತದೆ.
ಇದು ನಮ್ಮ-ನಿಮ್ಮಗಳ ನಡುವಿನ ಇನ್ನೊಂದು ಮುಖದ ಸಾಂಸ್ಕೃತಿಕ ಅಸಮಾನತೆ. ಸಮಾಜ ಕಲ್ಯಾಣ ಇಲಾಖೆಯ ಯೋಜನೆಗಳನ್ನು ಉತ್ತರಕರ್ನಾಟಕದ ಬಹಳಷ್ಟು ಅಸ್ಪೃಷ್ಯರು ಪಡೆದುಕೊಳ್ಳಲೇ ಇಲ್ಲ. (ಎಸ್ಸಿ ಎಂದು ಸೇರಿಸಲ್ಪಟ್ಟಿರುವ ಸ್ಪೃಶ್ಯ ಜಾತಿಗಳು ಈ ಲಾಭವನ್ನು ಪಡೆದುಕೊಂಡಿವೆ) ಇದೊಂದೆ ಇಲಾಖೆಯಲ್ಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಮಾಡುವ ಕೆಲವು ವಾರ್ಷಿಕ ಯೋಜನಾಮೊತ್ತಗಳನ್ನು ಒಟ್ಟು ಎಷ್ಟು ಸಾಂಸ್ಕೃತಿಕ ತಂಡಗಳು ಪಡೆದುಕೊಂಡಿವೆ ಎಂಬುದನ್ನು ನೋಡಿದಾಗ ಸಿಂಹಪಾಲು ದಕ್ಷಿಣ ಕರ್ನಾಟಕದ್ದಾಗಿದೆ. ಈ ಕುರಿತಾಗಿ ತಿಳವಳಿಕೆ ಕಮ್ಮಿ ಎಂದು ಹೇಳುವಂತಿಲ್ಲ. ಆಳದಲ್ಲಿ ನೋವು ನುಂಗಿಕೊಂಡಿರುವ ಒಂದು ಡೈಲೆಕ್ಟಿನ, ಭಿನ್ನ ಊಟೋಪಚಾರಗಳ, ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಮುದಾಯಿಕ ಪ್ರಜ್ಞೆಯ ಬಗ್ಗೆ ಯೋಚಿಸಿದಾಗ ಉತ್ತರ ಕರ್ನಾಟಕಕ್ಕೆ ಸ್ವತಂತ್ರ ಅಸ್ತಿತ್ವ ಬೇಕೆಂದು ಅನ್ನಿಸದಿರಲು ಹೇಗೆ ಸಾಧ್ಯ. ಉತ್ತರಕರ್ನಾಟಕವೆಂಬುದು ತನ್ನದೇ ಆದ ಆಡಳಿತದಲ್ಲಿ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ನೀತಿಗಳನ್ನು, ಆರ್ಥಿಕ ಚೇತರಿಕೆಗಳನ್ನು ಕಂಡುಕೊಳ್ಳುವ ದರ್ದಿದೆ ಅನಿಸುತ್ತಿದೆ.
ಕಡೆಯದಾಗಿ
ತಮ್ಮ ವ್ಯಾಪಾರ – ಉಧ್ಯಮಗಳಿಗಾಗಿಯೇ ರಾಜಕೀಯಕ್ಕೆ ಬರುವ ಕೆಲವೇ ಮಂದಿಗಳ ಕೈಯಲ್ಲಿ ರಾಜಕೀಯ ಸೂತ್ರವಿರುವುದರಿಂದ ಫ್ಯೂಡಲ್ ಮಾದರಿಯಲ್ಲಿಯೇ ಇಲ್ಲಿನ ಸಮಾಜಿಕ ಜನಜೀವನ ರೂಢಿಯಲ್ಲಿದೆ. ಈಗ್ಗೆ ಐದು ವರ್ಷಗಳ ಹಿಂದೆ ರಿಪಬ್ಲಿಕ್ ಆಫ್ ಬಳ್ಳಾರಿ ಇತ್ತು ಎಂಬುದು ಕರ್ನಾಟಕದ ರಾಜಕಾರಣದಲ್ಲಿ ದೊಡ್ಡ ಸೌಂಡ ಮಾಡಿತ್ತು. ಅದೊಂದೇ ಅಲ್ಲ ಉತ್ತರಕರ್ನಾಟಕದ ಬಹುತೇಕ ಕಡೆಗಳಲ್ಲಿ ಇಂಥ ಸ್ಥಳಿಯ ಆರ್ಥಿಕ ಆಡಳಿತದ ವ್ಯವಸ್ಥೆಗಳಿವೆ. ಇಂಥ ವ್ಯವಸ್ಥೆಯ ಸುಖದ ಹಕ್ಕುದಾರಿಕೆಯಲ್ಲಿ ಉಮೇಶ ಕತ್ತಿಯವರ ಮನೆತನವೂ ಒಂದು. ಹಾಗಾಗಿ ಅವರ ಕೂಗನ್ನು ದೊಡ್ಡದು ಮಾಡುವುದರಲ್ಲಿ ಯಾವ ಪ್ರಯೋಜನವೂ ಇಲ್ಲ. ಯಾಕಂದ್ರೆ ಅವರು ಅಧಿಕಾರದಲ್ಲಿದ್ದಾಗ ಕೇಳಬೇಕಾದ ಕೆಲವು ಪ್ರಶ್ನೆಗಳನ್ನು ಕುಂಡಿಕೆಳಗೆ ಮೆತ್ತೆಮಾಡಿಕೊಂಡು ರಾಜಕಾರಣ ಮಾಡಿದವರು. ಕಬ್ಬು ಬೆಳೆಗಾರರ ಸಂಕಟಗಳಿಗೆ ಕ್ಯಾರೆ ಎನ್ನದ ಉಧ್ಯಮದ ಭಾಗವಾಗಿದ್ದವರು. ಅವರ ಉದ್ಧೇಶಗಳಲ್ಲಿ ಇನ್ನಾವ ಬಗೆಯ ರಾಜಕೀಯ ತಂತ್ರವಿದೆಯೋ ತಿಳಿಯದು. ಬೆಳಗಾವಿಗೆ ಸುವರ್ಣಸೌಧ ಬಂದ ಲಾಗಾಯ್ತಿನಿಂದ ಅವರ ಮನಸ್ಸಿನಲ್ಲೊಂದು ಮುಖ್ಯಮಂತ್ರಿಯ ಹಕ್ಕಿ ಕೂತಂತಿದೆ. ಅದಕ್ಕೀಗ ಮತದಾರರನ್ನು ಭಾವುಕರನ್ನಾಗಿ ಸೆಳೆಯುವ ತಂತ್ರ ಬೇಕಾಗಿದೆ. ಇಂಥ ಪಿತೂರಿ ಹಕ್ಕಿಯ ಮಾತುಗಳನ್ನು ಅಲಕ್ಷಿಸಿ… ಉತ್ತರಕರ್ನಾಟಕದ ಕುರಿತಾದ ನೋವುಗಳನ್ನು ಹೇಳಿಕೊಳ್ಳಬೇಕಾಗಿದೆ. ಇಲ್ಲಿನ ಶುಷ್ಕ ಬದುಕಿನ ಹಿಂದಿನ ರಹಸ್ಯಗಳನ್ನು ಚರ್ಚಿಸಬೇಕಾದ ಹೊತ್ತು ಈಗ ಬಂದಿದೆ.

– ಮಹಾದೇವ ಸಾಲಾಪೂರ

ಅಮ್ಮನ ನೆನೆವ ನೆಪದಲ್ಲಿ ಬಾಬಾಸಾಹೇಬರ ವ್ಯಕ್ತಿತ್ವ – ಮಿಸಸ್ ಅಂಬೇಡ್ಕರ್


ಹೌದು..!
ಅಂಬೇಡ್ಕರ್ ವ್ಯಕ್ತಿತ್ವವನ್ನು ಪಾತ್ರವಾಗಿಸಿ ರಂಗದ ಮೇಲೆ ತರುವುದು ಸಾಮಾನ್ಯದ ಮಾತಲ್ಲ. ಅವರ ಬಾಹ್ಯದ ಆಕಾರ, ಚಲನೆ, ಆಕ್ರೋಶ, ಹೋರಾಟದ ತೀವ್ರತೆ ಮತ್ತು ಒಂದು ಕೈಯಲ್ಲಿ ಸಂವಿದಾನವನ್ನು ಹಿಡಿದು ಇನ್ನೊಂದು ಕೈಯ ತೋರುಬೆರಳು ತೋರಿಸುವ ಭಂಗಿಯಲ್ಲಿ ಬಾಬಾಸಾಹೇಬರು ನಟರಿಗೆ ದಕ್ಕಲಾರರು. ಅವರ ಪಾತ್ರವನ್ನು ರಂಗಕ್ಕೆ ತರುವುದಾದರೆ ಆ ಪ್ರಪಂಚದ ಖಾಸಗಿ ಬದುಕಿನ ಒಡಲ ಝರಿಯ ನಿನಾದವನ್ನು ನಟ ಕೇಳಿಸಿಕೊಳ್ಳಬೇಕಾಗುತ್ತದೆ. ಆ ನಾದದಲ್ಲಿ ಮೀರಾಬಾಯಿ, ರಾಮಜೀ ಸಕ್ಪಾಲ್, ರಮಾಬಾಯಿ, ಯಶವಂತರಾವ್, ಸವಿತಾ ಇದ್ದಾರೆ. ಅಲ್ಲದೆ ಇವತ್ತಿಗೆ ತಕ್ಕಂತೆ ಅವರ ಬರಹ ಭಾಷಣಗಳನ್ನು ಓದಿಕೊಳ್ಳಬೇಕಾಗುತ್ತದೆ. ಇಲ್ಲವೇ ಕ್ರಾಂತಿಕಾರಕ ಸಂವಾದವನ್ನು ಏರ್ಪಡಿಸಲು ಸಾಧ್ಯವಾಗುವ ರೀತಿಯಲ್ಲಿ ಗಾಂದಿಯ ವಿರೋಧಿಯಾಗಿ ರಂಗದ ಮೇಲೆ ತರಬೇಕಾಗುತ್ತದೆ. ಈವರೆಗಿನ ರಂಗಭೂಮಿಯ ಇತಿಹಾಸದಲ್ಲಿ ಅಂಬೇಡ್ಕರ್ರ ಕುರಿತಾಗಿ ಆಗಿರುವುದು ಇಷ್ಟೇ.
ಆದರೆ
ಕರುಣೆ ಮತ್ತು ಸ್ವಾಭಿಮಾನಗಳನ್ನು ಸಮತಕ್ಕಡಿಯಲ್ಲಿಟ್ಟು ತೂಗುವುದು ಬಹಳ ಕಷ್ಟದ ಕೆಲಸ… ಆ ಎರಡೂ ಭಾವಗಳು ಕಾಲದ ಹದದಲ್ಲಿ ಸಮವಾಗಿ ಬೇಯುತ್ತ ಒಮ್ಮೊಮ್ಮೆ ಬಾಗುತ್ತಲೂ ಬಳಕುತ್ತಲೂ ನ್ಯಾಯ ನಿಷ್ಠುರ ಸತ್ಯಕ್ಕಾಗಿ ಹಂಬಲಿಸುತ್ತಲೂ ಅಗಾದವಾದ ಚೈತನ್ಯದ ಬೆಳಕನ್ನು ಹುಡುಕುತ್ತಿರುತ್ತವೆ. ಗಾಂಧಿಯ ಅಂತಃಕರಣದ ಒಡಲೊಳಗಿನ ತೃಪ್ತಿ ಅಂಬೇಡ್ಕರ್ರ ಅತೃಪ್ತ ಒಡಲೊಳಗಿನ ಕಿಚ್ಚು ಸಮರಸಗೊಳ್ಳುವ ಮೊದಲು ಅಂಬೇಡ್ಕರರ ಅಂತಃಕರಣದ ಭಾವವನ್ನು ಶೋಧಿಸಿಕೊಳ್ಳುವ ಅಗತ್ಯವಿದೆ. ಅಲ್ಲಿ ಬುದ್ಧನೂ ಇದ್ದಾನೆ, ಜ್ಯೋತಿಬಾ-ಸಾವಿತ್ರಿಯರೂ ರಮಾಬಾಯಿಯೂ ಇದ್ದಾರೆ.
ಈವರೆಗಿನ ನಾಟಕಗಳಲ್ಲಿ ಅಂಬೇಡ್ಕರ್ರ ಸಮಗ್ರ ಜೀವನ ಇಲ್ಲವೆ ರಾಜಕೀಯ, ಸಾಮಾಜಿಕ ಸಂದರ್ಭಗಳಿಗೆ ಹೋಲಿಕೆಯಾಗುವ ಒಂದಷ್ಟು ಭಾಗಗಳು ಮಾತ್ರ ನಾಟಕ ಸಾಹಿತ್ಯದಲ್ಲಿ ಸಿಕ್ಕುತ್ತವೆ. ಅವರ ಅಂತಃಕರಣದ ಭಾವಕೋಶ ತೆರೆದುಕೊಳ್ಳುವ ಭಾಗವೆಂದರೆ ಬಹುಶಃ ಅದು ಅವರು ಪ್ರೀತಿಂದ ಕರೆಯುತ್ತಿದ್ದ ರಾಮು ಒಬ್ಬರೆ. ಆ ತೂಕದ ಮನುಷ್ಯನ ವ್ಯಕ್ತಿತ್ವವೇ ಅಂಥದ್ದು… ಆ ಹೋರಾಟದ ಸಾಗರದಲ್ಲಿ ರಮಾತಾಯಿಯ ಕಣ್ಣೀರೂ ಸಾಥ್ ನೀಡಿದೆ. ನಿಜವಾಗಿಯೂ ಬಾಬಾಸಾಹೇಬರು ರಮಾಬಾಯಿಯವರಿಗೆ ಒಂದೊಂದು ಸೂಕ್ಷ್ಮಗಳನ್ನು ಅಥರ್ೈಸುತ್ತ ತಾವೇ ಅರಿತುಕೊಳ್ಳುತ್ತ ಭಾರತದ ಸಾಮಾಜಿಕ ದಿಸೆಯನ್ನು ಬದಲಿಸುವ ಚಳುವಳಿ ಕಟ್ಟಿದರು. ಆಯಿಯ ಕರುಣೆಯ ಆಪ್ನಲ್ಲಿ ಸ್ವಾಭಿಮಾನವನ್ನು ಹದಗೊಳಿಸಿದರು. ಬಹಳ ಮುಖ್ಯವಾದ ನಿಯಂತ್ರಣ ಶಕ್ತಿ ಅವರಲ್ಲಿ ಇದ್ದುದರಿಂದಾಗಿ ಅವರು ಸ್ವಾಭಿಮಾನಿ ಹೇಗೋ ಹಾಗೆ ಅಂತಃಕರಣದ ಮೂತರ್ಿಯೂ ಆಗಿದ್ದರು. ಡಾ. ಸಿದ್ರಾಮ ಕಾರಣಿಕ ಅವರ ‘ಮಿಸೆಸ್ ಅಂಬೇಡ್ಕರ್’ ನಾಟಕ ಬಾಬಾಸಾಹೆಬರ ಈ ಕರುಣಾಮಯಿ ವ್ಯಕ್ತಿತ್ವದೊಂದಿಗೆ ಹೋರಾಟದ ಚಿತ್ರಣವನ್ನು ಕಟ್ಟಿಕೊಡುತ್ತದೆ.
ಪನವೇಲದ ವಿದ್ಯಾಥರ್ಿ ನಿಲಯದ ಉದ್ಘಾಟಣೆ ಸಮಾರಂಭದಲ್ಲಿ ಭಾಷಣ ಮಾಡುತ್ತಿರುವಾಗ ಒಂದು ಚೀಟಿ ಬರುತ್ತದೆ. ಆ ಕಾಗದವನ್ನು ತೆರೆದು ಓದುತ್ತಿದ್ದಂತೆ ಬಾಬಾಸಾಹೇಬರ ಮಾತು ಕಟ್ಟಿಹೋಗುತ್ತದೆ. ರಮಾಬಾಯಿಯವರ ಆರೊಗ್ಯದಲ್ಲಿ ಏರುಪೇರಾಗಿದೆ ಎಂಬ ಸೂಚನೆ ಆ ಚೀಟಿಯಲ್ಲಿರುತ್ತದೆ. ಸಭಾಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಿ ರಾಜಗೃಹಕ್ಕೆ ಧಾವಿಸಿ ಬರುವ ಕರುಣೆಯ ಸೆಳೆತದಿಂದ ನಾಟಕ ಆರಂಭವಾಗುತ್ತದೆ.. ಆಕೆಯ ಬದುಕಿನ ಚಿತ್ರಗಳು ಒಂದೊಂದೆ ಪೋಣಿಸಿಕೊಳ್ಳುತ್ತ ಹೋಗುವ ನಾಟಕದ ವಿನ್ಯಾಸ ಸೊಗಸಾಗಿದೆ. ಸೂತ್ರಧಾರ ಇತಿಹಾಸದ ಪ್ರತೀಕವಾಗಿ ಆ ಕಾಲದ ಕತೆಯನ್ನು ಹೇಳುತ್ತ ಹೋದಂತ ೆ ಶಿಷ್ಯ ಈ ಕಾಲದ ತಲೆಮಾರಿನಂತೆ ಕತೆ ಕೇಳುತ್ತ ಹೋಗುತ್ತಾನೆ. ಈ ಎರಡು ಪಾತ್ರಗಳು ಅಜ್ಜ-ಮೊಮ್ಮಗನಂತೆ ಇಡೀ ನಾಟಕವನ್ನು ನಿರೂಪಿಸುತ್ತವೆ. ಆದರೆ ಸೂತ್ರಧಾರ-ಶಿಷ್ಯರೆಂಬ ಪರಿಕಲ್ಪನೆ ಇಡೀ ನಾಟಕವನ್ನು ಹೀಗೆ ನೋಡು ಹೀಗೆ ಹೀಗೆ ಅಥರ್ೈಸಿಕೊಳ್ಳಬೇಕು ಎಂಬಂತೆ ಹೆಜ್ಜೆಹೆಜ್ಜೆಗೂ ಕಾಣಿಸಿಕೊಳ್ಳುತ್ತವೆ. ಸೂತ್ರಧಾರರ ಲಘುದಾಟಿಯ ಆಡುನುಡಿ, ಸಂದರ್ಭದ ವಿವರಗಳು ಇಡೀ ನಾಟಕದಲ್ಲಿ ಹೊರಗಿನಿಂದ ತೂರಿಸಲ್ಪಟ್ಟದ್ದಾಗಿದೆ.
ರಮಾಬಾಯಿ ಅಂಬೇಡ್ಕರ್ರ ಓದು-ಅಧ್ಯಯನ, ಹೋರಾಟಗಳನ್ನು ತನ್ನೆಲ್ಲ ಸಂಸಾರದ ಸಂಕಟಗಳನ್ನು ನುಂಗಿಕೊಂಡು ಮುಗ್ಧವಾಗಿ ನೋಡುತ್ತಾಳೆ ಕೆಲವೊಮ್ಮೆ ಆಕ್ರೋಶಭರಿತಳಾಗಿ ಸೆಡವು ಮಾಡುತ್ತಾಳೆ. ಇದು ನಾಟಕೀಯಗೊಳ್ಳುತ್ತ ಹೋಗುವ ಕಾರಣದಿಂದ ಬಾಬಾಸಾಹೇಬರ ವ್ಯಕ್ತಿತ್ವ ಬೇರೆಯದೆ ಮಾರ್ಗದಲ್ಲಿ ಓದುಗರನ್ನು ತಲುಪುತ್ತದೆ. ಕೇವಲ ಹಳಹಳಿಕೆ ಅತೃಪ್ತಿಗಳನ್ನಿಟ್ಟುಕೊಂಡು ಹೋರಾಟಕ್ಕಿಳಿಯಲಾರದೆ ಸಮಸ್ಯೆಯ ಆಳದ ಬೇರಿಗೆ ಕೈಹಾಕುವ ಅವರನ್ನು ಆಕೆ ದೈವವೆಂದೇ ಭಾವಿಸುತ್ತಾಳೆ. ಸಾಹೇಬ್ ಯಾವತ್ತಿಗೂ ವಿರಮಿಸದ ಜೀವವೆಂಬುದು ತಿಳಿದಿದ್ದರೂ ಮತ್ತೆಮತ್ತೆ ಸಂಸಾರದ ಗೋಳುಗಳನ್ನೆಲ್ಲ ಹೇಳಿಕೊಳ್ಳಲಾರದೆ ನುಂಗಿಕೊಳ್ಳುವ ಆಕೆಯೊಳಗೆ ಅಂಬೇಡ್ಕರರ ಅಧ್ಯಯನಶೀಲ ಸಹನೆ ಈಕೆಯ ಬದುಕುವ ಸಂಸಾರದ ಬಂಡಿಗೂ ಬಂದುಬಿಡುತ್ತದೆ. ಸರಣಿ ಸಾವುಗಳನ್ನ ಕಂಡ ರಮಾಬಾಯಿ ಸಾವಿಗೆ ಹೆದರಲಾರಳು ಆದರೆ ಗಂಡನ ಜೀವಕ್ಕೆ ಏನಾದರೂ ಆದೀತೆಂಬ ಭಯವಿದೆ. ಇಂಥದೆ ಡಾಕ್ಟರ್ಸಾಹೇಬ್ ಆಯಿಸಾಹೇಬರ ನಡುವಿನ ಆಪ್ತಸಂವಾದದ ಕಥಾಹಂದರವೇ ನಾಟಕದ ಜೀವಾಳವಾಗಿದೆ.

ರಮಾಯಿ : ಸಾಯೇಬ, ಈ ಹೋರಾಟ, ಚಳುವಳಿ ಇವೆಲ್ಲ ಇನ್ನೂ ಬೇಕೇನ್ರಿ ?
ಅಂಬೇಡ್ಕರ್ : ರಾಮೂ, ಹೋರಾಟ ಅನ್ನೂವಂಥದ್ದು ಒಮ್ಮಿ ಮಾಡಿ ಕೈ ತೊಳ್ಕೊಂಡ
ಬಿಡೂವಂಥದ್ದಲ್ಲ. ಈಗ ನಾ ಸುರು ಮಾಡೇನಿ… ಹೋರಾಟದ ಬೀಜ ಬಿತ್ತೇನಿ… ಈಗ
ಅದು ಮೊಳಕಿ ಒಡದೇತಿ… ಇನ್ನ ಮುಂದ ಅದ ಸಸಿ ಆಗ್ಬೇಕು… ಗಿಡಾ ಆಗ್ಬೇಕು…
ಮರಾ ಆಗ್ಬೇಕು… ಮಹಾ ಮರಾ ಆಗಿ ಬೆಳಿಬೇಕು ! ಈ ದೇಶದಾಗ ಇರೂ
ಅಸಮಾನತಾ, ಶೋಷಣಾ ತೊಡದ ಹಾಕಬೇಕು… ಎಲ್ಲಾರೂ ಒಂದ ಅನ್ನೂ ಹಾಡಾ
ಹಾಡಬೇಕ ಮತ್ತ ಅದರಾಂಗನ ನಡ್ಕೋಬೇಕು… ಅಲ್ಲೀತನಾ ನನಗ ಸಮಾಧಾನ ಇಲ್ಲ…
ಸಮಾಧಾನ ಅನಿಸೂದಿಲ್ಲ..

ರಮಾಯಿ : ಸಾಯೇಬ, ಪ್ರತಿ ಸಲಾ ನೀವ ಹೋರಾಟ ಮಾಡೂವಾಗ ನಿಮ್ಮ ಮ್ಯಾಲ ಹಲ್ಲೆ
ಆಗ್ತಾವ ಅನ್ನೂ ಸುದ್ದಿ ಕೇಳೀನ ಎದಿ ಒಡಕೊಂಡ ಹೆಣ್ಣಮಗಳ ನಾ… ಅದಕ್ಕಾಗೇ
ಕೇಳಾಕತ್ತೇನಿ. ಇದೆಲ್ಲಾ ನಮಗ ಬೇಕ ಏನ್ರಿ ?

ಹೀಗೆ ಅವರನ್ನು ಮುಗ್ಧವಾಗಿ ಕೇಳುವ ಪ್ರಶ್ನೆಗಳಿಗೆ ಬಾಬಾ ಸಾಹೇಬರೂ ತಮ್ಮ ತಾತ್ವಿಕ ನಿಲುವುಗಳನ್ನು ಮುವತ್ತೊಂದನೇ ದೃಶ್ಯದಲ್ಲಿ ಚಿತ್ರಿಸಿದ್ದಾರೆ. ಇಡೀ ಹೋರಾಟದ ಹಿಂದಿನ ಸನಾತನದ ಕೆಟ್ಟವಾಸನೆಯ ಚಲನವಲನಗಳನ್ನು ಗಮನಿಸಿರುವ ರೀತಿ, ಆ ರೀತಿಯ ಅಧೀರಗೊಳಿಸುವ ಹುನ್ನಾರಗಳನ್ನು ಎದುರುಗೊಳ್ಳಬೇಕಾಗಿರುವ ದರ್ದನ್ನು ಸಾಧ್ಯಂತ ವಿವರಿಸುವುದು ನಾಟಕಕ್ಕೊಂದು ತೂಕವನ್ನು ಕೊಡುತ್ತದೆ. ಇಂಥದ್ದೊಂದು ಬೆನ್ನ ಕಾಯುವ ಜೀವ ಸತ್ತಾಗ ಬಾಬಾಸಾಹೆಬರೂ ಅಧೀರರಾಗುತ್ತಾರೆ. ವರಳಿಯ ಸ್ಮಶಾಣದಲ್ಲಿ ಮೌನಿಯಾಗಿ ಬೂದಿ ರಾಶಿಯ ಮುಂದೆ ಕುಳಿತು ದುಃಖಿಸುತ್ತಾರೆ. ಆದರೆ ನಾಟಕದಲ್ಲಿ ರಮಾಬಾಯಿಯ ಸಾವಿಗೆ ನಾಟಕವೂ ಮುಗಿಯುತ್ತದೆ. ದುಃಖದ ವಿಷಾದದಲ್ಲಿ ನಾಟಕ ಕೊನೆಗೊಳ್ಳುವುದು ಒಂದು ಅಧ್ಯಾಯವನ್ನು ಬರೆದು ಮುಗಿಸಿದಂತಿದೆ. ಆದರೆ ರಮಾಬಾಯಿ ಅಂಬೇಡ್ಕರರನ್ನು ಜೀವಿತದುದ್ದಕ್ಕೂ ಕಾಡಿದ್ದಾರೆಂಬುದು ಅಲ್ಲಿಗೆ ನಿಂತು ಬಿಡುವುದು ಅರಕಳಿ ಎನಿಸುವುದು.ಬಾಬಾಸಾಹೇಬರು ಆಗೀಗ ಪ್ರೀತಿಯ ರಾಮುಳ ನೆನಪನ್ನು ಆಪ್ತರೊಂದಿಗೆ ಹಂಚಿಕೊಂಡಿದ್ದಾರೆ.
ರಮಾಬಾಯಿ ಧಾರವಾಡದ ವಸತಿನಿಲಯದಲ್ಲಿ ಕೆಲವು ಕಾಲ ತಂಗಿದ್ದರು. ಬಾಬಾಸಾಹೇಬರು ದುಂಡುಮೇಜಿನ ಪರಿಷತ್ತಿಗೆ ಹೋಗುವ ಮೊದಲು ಧಾರವಾಡದ ಹವಾ ಬಹಳ ಚನ್ನಾಗಿದೆ, ರಾಮುಳ ಆರೊಗ್ಯವೂ ಸುಧಾರಿಸುತ್ತದೆಂಬ ಆಸೆಯಿಂದ ವರಾಳೆಯವರೊಂದಿಗೆ ಧಾರವಾಡಕ್ಕೆ ಕಳಿಸಿದ್ದರು. ಒಂದು ಸಲ ಹಾಸ್ಟೆಲ್ಲಿನ ಅಡುಗೆಮನೆಯಲ್ಲಿ ಏನೂ ಪದಾರ್ಥವಿಲ್ಲದ್ದನ್ನು ನೋಡಿದ ಆಯಿಸಾಹೇಬ್ ತಮ್ಮ ಬಂಗಾರದ ಬಳೆಗಳನ್ನ ತೆಗೆದುಕೊಟ್ಟು ರೇಶನ್ ತರಲು ಹೇಳುತ್ತಾರೆ. ರಮಾಬಾಯಿ ಮಿಸಸ್ ಅಂಬೇಡ್ಕರ ಆಗುವುದಕ್ಕಿಂತ ಅವ್ವ ಆಗುತ್ತಾರೆ
ರಮಾಯಿ : ವರಾಳೆ ಮಾಮಾ, ನನಗ ಬೆಳ್ಳಿ-ಬಂಗಾರ, ದಾಗೀನದ ಆಶಾ ಇಲ್ಲ… ! ಉಪವಾಸ
ಇದ್ರ ಏನಾಗ್ತೇತಿ ಅನ್ನೋದನ್ನ ಸ್ವತಾ ಅನುಭವಿಸಿದಾಕಿ ನಾ ! … ಮನಿಸ್ಯಾನ ಹೊಟ್ಟಿಗಿ
ಸರಿಯಾಗಿ ಕೂಳ ಇಲ್ಲನ್ನೂ ಹೊತ್ತಿನ್ಯಾಗ ಈ ದಾಗೀನ ತೊಗೊಂಡ
ಮಾಡೋದಾದ್ರೂ ಏನೇತಿ ಹೇಳರ್ಯಲಾ ? ತೊಗೋರಿ… ಲಗೂ ಮಾಡಿ ಹುಡುಗೋರ
ಊಟದ ವ್ಯವಸ್ಥಾ ಮಾಡ್ರಿ…
ವರಾಳೆ : (ನಡುಗುವ ಕೈಗಳಿಂದ ಬಳೆ ತೆಗೆದುಕೊಳ್ಳುತ್ತ) ಆಯೀಸಾಹೇಬ, ಖರೇ ಅಂದ್ರೂ
ನೀವು ಮಹಾತಾಯಿ… ನೀವ ನಮಗೆಲ್ಲಾ ಅವ್ವ… ನಮ್ಮ ದೊಡ್ಡವ್ವ… ದೊಡ್ಡವ್ವ… !

ರಮಾಬಾಯಿಯ ಅಂಬೇಡ್ಕರರ ಸ್ವಾಭಿಮಾನದ ಹೋರಾಟವನ್ನು ಹತ್ತಿರದಿಂದ ನೋಡುತ್ತ, ಅವರ ವೈಚಾರಿಕ ನಿಲುವುಗಳಿಗೆ ಎದುರಾಗುವ ಫಂಡರಪುರದ ಘಟಣೆಯು, ಒಂದಾದ ಮೇಲೊಮದರಂತೆ ಸಾಯುವ ಕೂಸುಗಳನ್ನು ಸಂಭಾಳಿಸುತ್ತ ಬದುಕಿಗಾಗಿ ಗಂಡನೊಡನೆ ಮುನಿಸಿಕೊಳ್ಳುತ್ತ ಕ್ರಾಂತಿಸೂರ್ಯನ ಹೆಜ್ಜೆಯೊಡನೆ ಸಾಗಿಬರುತ್ತಾಳೆ. ನಾಟಕವು ಹಾಸಿಗೆಯಲ್ಲಿ ಸಾಯುವ ಕೊನೆಯ ಕ್ಷಣದಲ್ಲಿ ಅಂಬೇಡ್ಕರರ ಕೈಹಿಡಿದು ಕುಳಿತ ಭಂಗಿಯಿಂದ ಆರಂಭವಾಗಿ.. ಬಾಲ್ಯ, ಮದುವೆ, ಮಕ್ಕಳು, ಓದು, ನಿತ್ರಾಣದ ಬದುಕು, ಆರೊಗ್ಯ ಹೀಗೆ ರಮಾಬಾಯಿ ಮುಖಾಂತರ ಅಂಬೆಡ್ಕರರ ಜೀವನದಲ್ಲೊಂದು ಪಯಣ ಹೋಗಿಬಂದು ರಮಾಬಾಯಿಯ ಸಾವಿನ ದೃಶ್ಯದಲ್ಲಿ ಕೊನೆಗೊಳ್ಳುತ್ತದೆ.
ಮರಾಠಿ ಮಾತಿನ ಲಯಧಾಟಿಗಳನ್ನ ಪಡಿಯಚ್ಚು ಹೊಯ್ದಂತಿರುವ ಗಡಿಭಾಗದ ಆಡುಭಾಷೆ ನಾಟಕದ ವೈಶಿಷ್ಟ್ಯವಾಗಿದೆ. ಬರೆಯಬೇಕೆಂಬ ಧಾವಂತದಾಚೆಗೆ ರಮಾಯಿ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತ ಅಂಬೇಡ್ಕರರ ಬದುಕನ್ನ ಅನಾವರಣಗೊಳಿಸಿರುವ ಡಾ. ಸಿದ್ರಾಮ ಕಾರಣಿಕರ ಮಿಸೆಸ್ ಅಂಬೆಡ್ಕರ್ ಕನ್ನಡದ ನಾಟಕ ಸಾಹಿತ್ಯದಲ್ಲಿ ಹೊಚ್ಚಹೊಸ ಕೊಡುಗೆಯಾಗಿದೆ. ಆದರೆ ಬದುಕನ್ನು ಸರಳೀಕರಿಸಿದಷ್ಟು ನಾಟಕೀಯತೆ ಕಳೆಗುಂದತ್ತ ಹೋಗುತ್ತದೆ. ವಚನ ಚಳವಳಿಯ ನೇತಾರ ಬಸವಣ್ಣನವರ ಬದುಕು ಮತ್ತು ಆಶಯಗಳನ್ನು ಭಿನ್ನದೃಷ್ಟಿಕೋನಗಳಲ್ಲಿ ನೋಡುವ ನಾಟಕಕೃತಿಗಳು ನಮ್ಮ ಮುಂದೆ ಹಲವಾರು ಇರುವಾಗ ಭಾರತದ ಸಾಮಾಜಿಕ, ರಾಜಕೀಯ ಸ್ವರೂಪವನ್ನು ಬದಲಿಸಿದ ಬಾಬಾಸಾಹೇಬರನ್ನೂ ಇನ್ನಷ್ಟು ಗಟ್ಟಿಗೊಳಿಸಿ ಇವತ್ತಿಗೆ ತಕ್ಕಂತೆ ಅಂಬೇಡ್ಕರರ ಮರುಓದುಗಳನ್ನು ಕಟ್ಟಿಕೊಡಬೇಕಿದೆ. ಬರೀ ನೆನಪುಗಳನ್ನು ಕೆದಕುವುದಕ್ಕಿಂತ ಬೇರೆಯದೇ ಆದ ಅಂಬೆಡ್ಕರರ ಭಾವಲೋಕವನ್ನು ಶೋಧಿಸುವದು ಇಂದಿನ ಅಗತ್ಯವಾಗಿದೆ.
‘ಬಾಬಾಸಾಹೇಬರು ಬೌದ್ಧ ಧರ್ಮ ಸ್ವೀಕಾರ ಮಾಡಿದರು’ ಎನ್ನುವುದಷ್ಟೆ ಒಂದು ನಾಟಕವಾಗಿ ಸಂವಾದಕ್ಕಿಳಿಸಬೇಕಾಗಿದೆ. ಪೂನಾ ಒಪ್ಪಂದ, ಮೂಕನಾಯಕ, ಹಿಂದೂ ಧರ್ಮದ ಒಗಟುಗಳು… ಹೀಗೆ ಅವರು ಮುಂದಿಟ್ಟ ಪ್ರತಿಯೊಂದು ಹೆಜ್ಜೆಗಳೂ ಸಾಂಸ್ಕೃತಿಕ ರೂಪಕಗಳಾಗಿ, ಕಾವ್ಯವಾಗಿ, ಕತೆಯಾಗಿ, ನಾಟಕವಾಗಿ ಮರುಶೋಧಿಸಿದಲ್ಲಿ ಭಾರತದ ಒಂದುಕಾಲದ ಚರಿತ್ರೆಯನ್ನು ಸಾಂಸ್ಕೃತಿಕವಾಗಿ ಒಳಗೊಂಡಂತಾಗುತ್ತದೆ. ಈಗ ಹೊಸ ತಲೆಮಾರಿನ ಯುವ ಬರಹಗಾರರು ಅವರ ಬದುಕು ಮತ್ತು ಚಿಂತನೆಯನ್ನು ಈ ಕಾಲಕ್ಕೆ ತಕ್ಕಂತೆ ಸ್ವೀಕರಿಸುತ್ತಿದ್ದಾರೆ. ಬದುಕನ್ನ ಪುರಾಣೀಕರಿಸುವ ಹುಚ್ಚಿಗಿಂತ ಯಥಾವತ್ ಆ ಸಂದರ್ಭದ ಅನುಭವಗಳನ್ನು ಈ ಹೊತ್ತಿನಲ್ಲಿ ತಲಾಶ್ ಮಾಡುತ್ತಿದ್ದಾರೆ. ಹೆಚ್ಚು ಕಡಿಮೆ ಪೇಶ್ವೆಗಳ ಆಡಳಿತಾವಧಿಯ ನೆನಪುಗಳು ಮತ್ತೇ ಪುಟಿದೇಳುತ್ತಿರುವ ಇವತ್ತಿನ ಭಾರತೀಯ ರಾಜಕೀಯ ಸಂದರ್ಭದಲ್ಲಿ ಇಂದು ಫುಲೆ ದಂಪತಿಗಳು, ಶಾಹೂ ಮಹಾರಾಜರು, ಶಿವಾಜಿರಾವ್ ಗಾಯಕ್ವಾಡರೂ, ದೇಶಮುಖರು, ಕುದ್ಮುಲ್ ರಂಗನಾಥರಾಯರು, ಕಾಕಾ ಖಾಖರ್ಾನೀಸ್, ಬಾಬಾಸಾಹೇಬ ಅಂಬೇಡ್ಕರ್ರನ್ನು ಮತ್ತೆ ಸ್ವೀಕರಿಸುವ ಕಾಲವೂ ಸನ್ನಿಹಿತವಾಗುತ್ತಿದೆ. ಫೋಟೋ, ಪ್ರತಿಮೆಗಳಿಗಿಂತ ಭಿನ್ನವಾದ, ಹೊಗಳಿಕೆ, ತೆಗಳಿಕೆಗಳನ್ನು ಮೀರಿದ ವಸ್ತುನಿಷ್ಠ ಅಂಬೇಡ್ಕರ್ರನ್ನು ಈ ಹೊತ್ತಿಗೆ ತಕ್ಕಂತೆ ಶೋಧಿಸಿಕೊಳ್ಳುವ ಅನಿವಾರ್ಯ ಈ ಕಾಲದ್ದಾಗಿದೆ.
– ಮಹಾದೇವ ಸಾಲಾಪೂರ

ಷಿಟ್ ಬುಲಷಿಟ್ಗಳ ಕಾರ್ಪೋರೇಟ್ ಹಳ್ಳಿಯ ಕತೆ


ದೂರದ ಬ್ರೆಜಿಲ್ ದೇಶದಲ್ಲೊಬ್ಬ ಅಗಸ್ತೋ ಬೋಲ್ ಎಂಬ ಮಹಾಶಯ Oppressed theatre ಪರಿಕಲ್ಪನೆ ಆರಂಭಿಸಿದ. Oppressed theatreನ ಕೆಲವು ಅಂಶಗಳನ್ನು ಇಂಡಿಯಾದ ರಾಜಕೀಯ ಸಂಬಂಧಿ ನಾಟಕಗಳಲ್ಲಿ ಅಲ್ಲಲ್ಲಿ ಕಾಣಬಹುದೆ ಹೊರತು ಸಂಪೂರ್ಣವಾಗಿ ಅಸ್ಮಿತೆಯೊಂದಕ್ಕೆ ಮಾತು ಬಂದು! ಮಾತಾಡಿ, ಹಾಡಿ-ಕುಣಿದು, ತನ್ನ ನೋವು-ಸಂಕಟ ಸಮಜಾಯಿಷಿಗಳನ್ನ ಹೇಳಿಕೊಳ್ಳುವ ನಾಟಕಗಳು ಬಂದಿರಲಿಲ್ಲ. ಕೆಲವು ನಾಟಕಗಳು ಪಾಲಿಟಿಕಲ್ ಥಿಯೇಟರ್ನ ಪ್ರಭಾವದಿಂದ ಮುಖ್ಯವಾದ ಪ್ರಶ್ನೆಗಳ ಹಗ್ಗಜಗ್ಗಾಟವನ್ನೆ ದೊಡ್ಡದು ಮಾಡಿ ಹಳೆಯ ಇಮೇಜಸ್ಗೆ ಹೊಸಬಟ್ಟೆ ತೊಡಿಸಿ ಆಧುನಿಕಗೊಳಿಸಿದ್ದಾವೆಯೇ ಹೊರತು ಹೊಸದೇ ವಿನ್ಯಾಸ ಮತ್ತು ಪರಿಕಲ್ಪನೆಯಲ್ಲಿ ಸ್ವತಂತ್ರವಾಗಿ ರೂಪಿತಗೊಂಡಿಲ್ಲ. ಇದಕ್ಕೆ ಅಪವಾದವೆಂಬಂತೆ ಹವ್ಯಕ ಜನಸಮುದಾಯದ ತಲ್ಲಣಗಳನ್ನಿಟ್ಟುಕೊಂಡು ಕೆ.ವಿ ಅಕ್ಷರ ಅವರು ಸ್ವಯಂವರಲೋಕ ನಾಟಕವನ್ನು ರಚಿಸಿದ್ದಾರೆ. ಆ ನಾಟಕವೂ ಕಟ್ಟಕಡೆಯ ಘಳಿಗೆಯಲ್ಲಿ ಪಫ್ಯರ್ೂಮ್ ಮಿಕ್ಸ್ ಮಾಡಲು ಪ್ರಯತ್ನಿಸಿ ವಿಶ್ವಾತ್ಮಕ ಕೋನದಲ್ಲಿ ನುಣಚಿಕೊಳ್ಳುತ್ತದೆ. ಭಾರತಯಾತ್ರೆ ನಾಟಕವೂ ಇಂತದ್ದೆ ಮತ್ತೊಂದು ಮಜಲಿನಲ್ಲಿ ಸಿಕ್ಕಿಕೊಂಡು ಅಂದುಕೊಳ್ಳುವ ಆಶಯವೂ ನೋಡುವ ನೋಟವೂ ಮುಪ್ಪರಿಗೊಳ್ಳದೆ ಸೊರಗುತ್ತದೆ. ಇನ್ನುಳಿದಂತೆ ಅಸ್ಮಿತೆಯ ಹುಡುಕಾಟಗಳ ಹೂರಣವಿಲ್ಲದ ನಾಟಕಗಳು ಬಂದಿವೆ. ಕನ್ನಡದ ಪ್ರಮುಖ ನಾಟಕಕಾರರೆಂದು ಗುರುತಿಸಿಕೊಂಡಿರುವ ಕೆ. ರಾಮಯ್ಯನವರ ಲೆಟ್ಪಾಲಿತ್ರೈವ್ @ಯಾರೇ ಯಾನೇ ಕೂಗಾಡಲಿ ನಾಟಕದಲ್ಲಿ Oppressed theatre ಪರಿಕಲ್ಪನೆ ಅಚ್ಚುಹೊಯ್ದಂತಿದೆ.
ಜಾಣ್ಮೆಯಿಂದ ತೌಡುಕುಟ್ಟುವ ಗೋಳೀಕರಣದ ಪರಿಣಾಮ ಹಳ್ಳಿಗಳನ್ನು ವ್ಯಾಪಿಸಿಕೊಂಡಿದೆ. ಸಾಂಸ್ಕೃತಿಕ ಜನಜೀವನ, ಸಂಪ್ರದಾಯ, ಅಸ್ಮಿತೆಗಳನ್ನು ಹುಡುಕುವ ಮತ್ತು ಇದಪ್ಪಾ ನಮ್ಮ ಬದುಕು! ಎಂದು ನೆಮ್ಮದಿಯಿಂದ ಬಾಳುತ್ತಿರುವ ಎರಡು ಮಾದರಿಗಳಿವೆ. ಈಗ ಹಳ್ಳಿಗಳ ಬದುಕು ಮಾರ್ಕೇಟಿಂಗ್ ಮಾಡುವುದನ್ನು ಟಿವಿ ಮಾಧ್ಯಮಗಳು ರೂಢಿಸಿಕೊಳ್ಳುತ್ತಿವೆ. ಬದಲಾಗುತ್ತಿರುವುದು ಹಳ್ಳಿಗಳಲ್ಲ ಹಳ್ಳಿಯನ್ನು ಒಲ್ಲದ ಮನಸ್ಸುಗಳು. ಎಲ್ಲವೂ ಕಾಪರ್ೋರೇಟ್ ಆಗುತ್ತಿರುವ ಈ ಹೊತ್ತಿನಲ್ಲಿ ಷಿಟ್ ಯಾವುದು ಬುಲ್ಷಿಟ್ ಯಾವುದೆಂದು ನಿರ್ಧರಿಸಲಾಗದ ಕನ್ಫ್ಯೂಜನ್ನಿನಲ್ಲೆ ಇರುತ್ತೇವೆ. ಅಂಥ ಕನ್ಫ್ಯೂಷನ್ನಿನ ವಿಡಂಬಣೆ ಮತ್ತು ಅಸ್ಮಿತೆಯ ಕುರುಹಾದ ಕೋಣವು ತನ್ನ ಇರುವಿಕೆಯನ್ನು ಗಟ್ಟಿಗೊಳಿಸುತ್ತ ಈ ಹುಸಿಲೋಕದ ಆಡಂಬರದ ಜಂಜಾಟದಲ್ಲಿ ತನ್ನ ಹಪಹಪಿಯ ಇತಿಹಾಸವನ್ನು ಹೇಳುತ್ತ… ಕೊಂದುಕೊಳ್ಳುತ್ತಿರುವ ತನ್ನತನವನ್ನು ಸೈರಿಸಿಕೊಳ್ಳುತ್ತ, ತಿಪ್ಪನ ಭಾಷೆಯನ್ನ ಕಲಿತುಕೊಳ್ಳುತ್ತ, ಮಾಡರ್ನಿಟಿಯ ಮಧ್ಯದ ಕುತೂಹಲಕಾರಿ ಪ್ರಾಣಿಯಾಗಿ ಉಳಿಯದೆ ಕಾಲದ ಕುಲುಮೆಯ ಸಂತಾಪವನ್ನು ಬಿಚ್ಚಿಡುವ ಅಸ್ಮಿತೆಯಾಗಿರುವುದು ಲೆಟ್ಪಾಲಿತ್ರೈವ್@ಯಾರೇ ಯಾನೇ ಕೂಗಾಡಲಿ ನಾಟಕದ ಜೀವಾಳ.
ಕಾಪರ್ೋರೇಟ್ ಹಳ್ಳಿಯಲ್ಲಿ ನಡೆಯುತ್ತಿರುವ ‘ಯಾರು ದೊಡ್ಡವರು’ ಎಂಬ ರಿಯಾಲಿಟಿ ಶೋ ಮತ್ತು ಆ ಕುರಿತಾದ ಮಾಧ್ಯಮಗಳ ಇಲ್ಲಸಲ್ಲದ ಊಹಾಪೋಹಗಳ ಚಚರ್ೆಯ ಮೂಲಕ ನಾಟಕ ಆರಂಭವಾಗುತ್ತದೆ. ಅಂಥದ್ದೊಂದು ಪ್ರಾಜೆಕ್ಟ್ ರೂಪಿಸಿರುವ ತಂಡ ಹಳ್ಳಿಯನ್ನು ಮೀಡಿಯಾಗೆ ಬೇಕಾದಂತೆ ಹೈಟೆಕ್ ಮಾಡುತ್ತದೆ. ಕ್ಯಾಮರಾ ಕಣ್ಣು ಇಡೀ ಹಳ್ಳಿಯನ್ನು ತನಗೆ ಬೇಕಾದಂತೆ ಸೆರೆಹಿಡಿಯುತ್ತದೆ. ಅಜ್ಜಿಗೂ, ಕೋಣಕ್ಕೂ ಆದಿಮಜ್ಞಾನದ ಅರಿವಿನ ಜೊತೆಗೆ ಕಾಪರ್ೋರೇಟ್ ಜಗತ್ತಿನ ಪರಿಚಯವೂ ಇದೆ. ತಮ್ಮ ಜೀವನಶೈಲಿಯ ಒಂದು ಭಾಗವಾಗಿ ಜ್ಞಾನಶಾಖೆಯ ಒಂದು ಮಜಲನ್ನಾಗಿ ಮಾತ್ರ ಉಪಯೋಗಿಸುವವರು. ಕಾಪರ್ೋರೇಟಿನ ಜಂಜಾವಾತಗಳಿಂದ ದೂರವುಳಿದು ತಿನ್ನುವ ಅನ್ನದಿಂದ ಹಿಡಿದು ಬದುಕುವ ರೀತಿಯವರೆಗೆ ತಮ್ಮನ್ನು ತಾವೇ ನಿಯಂತ್ರಿಸಿಕೊಳ್ಳುವ ಆದಿಮಜ್ಞಾನವುಳ್ಳವರು. ಅಜ್ಜಿ ಸಪ್ತಮಾತೃಕೆಯರ ಪ್ರತಿನಿಧಿ. ಕಾಡುವ ದೈವಗಳಲ್ಲ ಬದುಕುವ ಬಗೆಯನ್ನು ಕಲಿಸುವ ತಾಯಂದಿರರ ಸಂಕೇತ. ಆಕೆಗೆ ಸೈದ್ಧಾಂತಿಕ ನಿಲುವುಗಳು, ಭಿನ್ನಾಭಿಪ್ರಾಯಗಳ ಗೊಡವೆಯಿಲ್ಲ, ಹಿಟ್ಟುಕೋಲು ಮುದ್ದೆ ಆಕೆಯ ಗುಟ್ಟು. ಭೂತಾನ್ ದೇಶದ (ಜಿಡಿಪಿ-ಜಿಡಿಹೆಚ್) ಹ್ಯಾಪಿನೆಸ್ನಂತೆ ಸಮೃದ್ಧವಾಗಿದ್ದಾರೆ.
ಗಂಡಭೇರುಂಡ ವಂಶದ ಘನತೆಯೂ, ಕಾಮ್ರೇಡಗಿರಿಯ ಹಪಹಪಿಯೂ, ಹಳ್ಳಿಹುಡುಗಿಯರ ಇಂಗ್ಲಿಷ ಹುಚ್ಚು, ಸಂವಾದದಲ್ಲಿ ಸಿದ್ಧಾಂತಗಳ ಮುಖವಾಣಿ ಹೊತ್ತು ಮಾತಾಡುವ ಕಾರ್ಯಕ್ರಮವೂ ಹೀಗೆ ನಾಟಕದುದ್ದಕ್ಕೂ ಷಿಟ್ ಬುಲ್ಷಿಟ್ಗಳದ್ದೆ ಕಾರಭಾರು. ನಾಟಕಕಾರನ ಸಂವೇದನೆ, ನಟ ಅಂದುಕೊಳ್ಳುವುದು, ನಿದರ್ೇಶಕ ರೂಪಿಸುವುದು ಕೊನೆಯದಾಗಿ ಸಹೃದಯಿ ಒಪ್ಪಿಕೊಳ್ಳುವುದು. ಇಂತದ್ದೊಂದು ಸೂತ್ರವನ್ನು ಹರಿದೊಗೆದು ಈ ನಾಟಕದಲ್ಲಿ ನಟನೂ ಮಾತಾಡುತ್ತಾನೆ, ನಾಟಕಕಾರನೂ ಮಾತಾಡುತ್ತಾನೆ. ಪ್ರತಿಮೆ ಎಂದುಕೊಂಡದ್ದು ಮಾತಾಡುತ್ತದೆ. ಇಲ್ಲಿನ ಪ್ರತಿಮೆ ಬರೀ ರೂಪಕವಷ್ಟೆ ಅಲ್ಲ ಅದು ಮಧ್ಯಮವರ್ಗದ ಆನೂಚಾನು ವ್ಯತ್ಯಾಸಗಳನ್ನು ಗಮನಿಸುತ್ತಲೆ ಮಾತಿಗಾಗಿ ಹಲಬುವ ಧ್ವನಿಯಾಗಿದೆ.
ಕಾಪರ್ೋರೇಟ್ ಹಳ್ಳಿಯ ಕತೆ(ಲೆಟ್ಪಾಲಿತ್ರೈವ್) ಮೊಸರು ಕಡೆಯುವ ಹದದಂತೆ ನವನೀತದ ತೆಳುತಿಳಿಯನ್ನು ಕದಡುತ್ತದೆ. ಕೋಣವನ್ನು ಬಲಿಕೊಡುವ ಐತಿಹ್ಯದ ಆಚರಣೆಯಲ್ಲಿ ಪ್ರತಿಲೋಮ ವಿವಾಹದ ವಿರುದ್ಧ ತಿರುಗಿಬಿದ್ದ ಹೆಣ್ಣು ಅವನನ್ನೆ ಬಲಿ ಬೇಡುತ್ತದೆ. ಧರ್ಮ ಮತ್ತು ರಾಜಕಾರಣಗಳು ಮುಖಾಮುಖಿಯಾಗುವ ಸಂದರ್ಭಗಳು ಇತಿಹಾಸದಲ್ಲಿ ಸಾಕಷ್ಟು ಸಿಗುತ್ತವೆ. ಆ ಎಲ್ಲ ಇತಿಹಾಸದ ಕಡೆಪುಟದಲ್ಲಿ ರಕ್ತದ ಕಲೆಗಳು ಮುತ್ತಿರುತ್ತವೆ ಹೇಗೋ ಹಾಗೆ ಪ್ರತಿಯೊಂದು ಆಚರಣಾ ಐತಿಹ್ಯಗಳ ಅಂತ್ಯದಲ್ಲಿ ದಾರುಣ ಬದುಕೊಂದರ ಆರಂಭವೂ ಅಂತ್ಯವೂ ಇರುತ್ತದೆ. ಕೋಣ ಮಾತಿಗಿಳಿದು ಸೇಡು ತೀರಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸುವಷ್ಟರಲ್ಲಿ ಕೋಣನ ಬಲಿಯಾಗುತ್ತದೆ. ಅಸ್ಮಿತೆಯನ್ನು ಕೊಂದುಕೊಂಡ ತಿಪ್ಪನಿಗೆ ಪ್ರತಿಲೋಮ ಮಾದರಿಯ ಮದುವೆಯೂ ಫಲಕೊಟ್ಟು ನಾಟಕ ಸುಖಾಂತವಾಗುತ್ತದೆ.