ಎಳನೀರು


ಎಳನೀರು ಕಾದಂಬರಿಯಲ್ಲಿ ಕತೆ ಶಿಕ್ಷಣದ ಸಾಧನವಾಗಿದೆ. ಮೂರ್ತವಾದ ಅನುಭವ ಕತೆಯಾಗುವಾಗ ಬದುಕಿನ ಇನ್ನಿತರ ಅನುಭವಗಳೊಟ್ಟಿಗೆ ಸೇರಿ ಹೊಸದೊಂದು ಕಲಾತ್ಮಕವಾದ ಕಥನದ ಆವರಣವೊಂದನ್ನು ಸೃಷ್ಟಿಸಿಕೊಂಡು ಬಿಡುತ್ತದೆ. ನಿಜವಾಗಿಯೂ ಈ ಕಾದಂಬರಿಯಲ್ಲಿ ಬರುವ ಶಿಕ್ಷಕಿ ಕಲಿಸುವ ಮಾಧ್ಯಮವನ್ನಾಗಿ ಕತೆಯನ್ನು ಆಯ್ದುಕೊಳ್ಳುವುದು ಮತ್ತು ಹೇಳುವ ಕತೆಗಳಲ್ಲಿ ಕಲಾತ್ಮಕ ಜೀವದ್ರವ್ಯವನ್ನು, ಕಾರುಣ್ಯವನ್ನು, ಮಮಕಾರವನ್ನೂ ವ್ಯಕ್ತಗೊಳಿಸುವುದು ಅದ್ಭುತವಾದ ಪ್ರಯೋಗವಾಗಿದೆ. ಲಲಿತಾಳ ಬದುಕಿನ ಸಾಂಸಕೃತಿಕ ಆಶೋತ್ತರಗಳು ಆಕೆಯ ಶೈಕ್ಷಣಿಕ ಜೀವನದಲ್ಲಿ ಸಹಕಾರಿಯಾಗುತ್ತವೆ. ಮೊದಲ ಅಧ್ಯಾಯದಲ್ಲಿ ಸೀಂಯಾಳ ಕುಡಿಯುವ ಹಂಬಲದಲ್ಲಿದ್ದ ಲಲಿತಾ ತಾನು ಶಿಕ್ಷಕಿಯಾಗಿ ತನ್ನಂತದೇ ಮಧ್ಯಮವರ್ಗದ ಹತ್ತಾರು ಮಕ್ಕಳಿಗೆ ಆ ಸೀಂಯಾಳದ ರುಚಿಯೊಗರನ್ನು ಸವಿಯಲು ಕಾರಣಳಾಗುತ್ತಾಳೆ. ಕಥಾನಾಯಕಿಯ ಪರಿಸರದಲ್ಲಿ ಹೇರಳವಾಗಿ ಕಾಣುವ ತೆಂಗು ಇಲ್ಲಿ ಕತೆಯ ವಸ್ತುವಾಗಿ ಹಲವರ ಧ್ವನಿಯಾಗಿ ಕಾಲ್ಪನಿಕ ಮನೋವ್ಯಾಪಾರದ ಸಮೃದ್ಧತೆಯ ಸಂಕೇತವಾಗಿದೆ. ಮೊದಲರ್ಧ ಕಾದಂಬರಿಯಲ್ಲಿ ಕಥಾನಾಯಕಿಯ ಬದುಕಿನ ತುಡಿತ, ಆ ಬದುಕಿನೊಟ್ಟಿಗೆ ಬೆರೆತು ಹೋಗಿರುವ ಪರಿಸರದ ಕತೆಗಳು, ಸೀಂಯಾಳ-ಬೀರಪ್ಪ, ಹಾವು-ಮೋನಪ್ಪ, ಮಾಸ್ತೆಮ್ಮ, ದೆವ್ವದ ಕತೆಗಳು, ಹೊಳೆ-ಹಳ್ಳಗಳು, ಹೊಲಿಗೆಯ ಚಿತ್ತಾರದಂತೆ ಬಿಡಿಬಿಡಿಯಾದ ಅನುಭವಗಳು ಮಕ್ಕಳೊಂದಿಗೆ ಕತೆ ಹೇಳುವಾಗ ಕೇಳುವಾಗ ಒಂದಾಗಿ ಜೀವನದ ಕಲಾತ್ಮಕ ಬಂಧದ ನೇಯ್ಗೆ ಮಾಡುತ್ತವೆ. ನಿದ್ರೆ ಬಾರದ ಜೀವಿಗಳು ಭೂಮಿ ಮೇಲೆ ಉಂಟು ಅವು ಕತೆಗಳಲ್ಲಿ ಬದುಕಿಕೊಂಡಿವೆ ಎಂದು ಹೇಳುತ್ತಾ ಮಕ್ಕಳ ಕಥನಕುತೂಹಲವನ್ನು ಇಮ್ಮಡಿಸುವ ಲಲಿತಾ ಟೀಚರ್ ಆಸಕ್ತಿಕರವಾದ ರೀತಿಯಲ್ಲಿ ಮಕ್ಕಳ ಮನೋವಿಕಾಸಕ್ಕೆ ಸಹಾಯಕವಾದ ಮಾರ್ಗವನ್ನು ತೋರಿಸುತ್ತಾರೆ. ‘ಮಕ್ಕಳೇ ಯಾವ ಕತೆ ಬೇಕು ನಿಮಗೆ’ ಅಧ್ಯಾಯದಲ್ಲಿ ಒಂದು ವಾಕ್ಯದ ಹಲವಾರು ಕತೆಗಳ ಗರಿಗಳನ್ನು ಬಿಚ್ಚಿಡುತ್ತಾರೆ. ಕಲ್ಪಿಸಿಕೊಳ್ಳಲು ಏನು ಬೆಕು..? ಬೀಜರೂಪಿಯಾದ ಒಂದು ಎಳೆ ಬೇಕು. ಅಂಥ ವಸ್ತುಗಳನ್ನುಳ್ಳ ನೂರಾರು ಕತೆಗಳನ್ನು ಆ ಒಂದು ಅಧ್ಯಾಯದಲ್ಲಿ ಹೇಳಿದ್ದಾರೆ. ಹೇಳಿ ಮುಗಿಯದ, ಕೇಳಿ ತೀರದ ಜಗತ್ತಿನ ವೈವಿಧ್ಯಮಯ ಕಥನಗಳು ಆ ವಾಕ್ಯದಲ್ಲಿವೆ. ಇಷ್ಟೊಂದು ಹೊಳಹುಗಳನ್ನು ಕೊಟ್ಟ ಟೀಚರ್ ಈಗ ಮಕ್ಕಳೇ ಹೇಳಬಹುದಾದ ಕತೆಗಳಿಗಾಗಿ ಕಾಯುತ್ತಾರೆ. ಕಾಲದೇಶಗಳ ವ್ಯಾಪ್ತಿಯನ್ನು ಮೀರಿ ಮಕ್ಕಳು ಕತೆಯ ಆವರಣವನ್ನು ಪ್ರವೇಶಿಸಿ, ನಡೆದಿರಲಾರದ ಘಟಣೆಗೆ ತಮ್ಮ ಅನುಭವದ ದ್ರವ್ಯವನ್ನು ಸೇರಿಸಿ, ಕೇಳುಗನ ಅಂತರಂಗವನ್ನು ಹೊಕ್ಕು ತೆಂಗಿನಮರದ ಒಡನಾಡಿಗಳಾಗಿ ಹೋಗುತ್ತಾರೆ. ತೆಂಗಿನ ಮರದ ಛದ್ಮವೇಷದ ಕತೆ, ಒಂದು ನೋವಿನ ಕತೆಯಲ್ಲಿ ಪುಟ್ಟಪ್ಪ ತೆಂಗಿನಮರದ ಸಂಕಟ ಗರಹಿಸಿರುವ ಬಗೆ, ತೆಂಗಿನಮರದಲ್ಲಿ ದೆವ್ವ ಇರುತ್ತವೆ ಎಂಬ ನಂಬಿಕೆಯನ್ನು ತೊಡೆದು ಹಾಕುವ ಬೆಳಕಿಗೆ ಬಾ ತಂಗಿ ಕತೆ, ಅನಂತನ ಮರಹತ್ತುವ ಕತೆ, ಕೆಂದಾಳಿ ಮರ, ತೈಲಸ್ನಾನ ಹೀಗೆ ಮಕ್ಕಳ ತಲೆಯೊಳಗೆ ಹತ್ತಾರು ಕತೆಗಳ ತೇರು ತಯ್ಯಾರಾದಾರೂ ಅವೆಲ್ಲವೂ ತೆಂಗಿನ ಮರದ ಸುತ್ತಾ ಬೆಳೆಯುವ ವಿನ್ಯಾಸ ಕಾದಂಬರಿಯ ಸೊಗಸುಗಾರಿಕೆಯನ್ನು ಹೆಚ್ಚಿಸಿದೆ. ಕತೆ ಹೇಳುವ ಕೌಶಲ್ಯದ ಮೂಲ ಸೆಲೆ ಮಕ್ಕಳೇ ಆಗಿದ್ದಾರೆ. ಜಗತ್ತಿನ ಯಾವದೇ ನಾಗರೀಕತೆಯ ಸಂದರ್ಭದಲ್ಲೂ ಕತೆ ಸಾಂಸ್ಕೃತಿಕವಾಗಿ ಮಕ್ಕಳನ್ನು ನಾಗರೀಕರನ್ನಾಗಿ ತಯಾರು ಮಾಡುವುದಕ್ಕಾಗಿ, ಮತ್ತು ಆತ್ಮಸ್ಥೈರ್ಯ, ಛಲ-ಮನೋಬಲಗಳನ್ನು ಮಕ್ಕಳಲ್ಲಿ ತುಂಬುವುದಕ್ಕಾಗಿ, ನೈತಿಕತೆಯ ಮಾದರಿ ಪಾಠಕ್ಕಾಗಿ ಕಥನ ಪರಂಪರೆ ಬೆಳೆದು ಬಂದಿದೆ. ಜಲಪ್ರಳಯ ಮತ್ತು ಅಣುಪ್ರಳಯಗಳು ಎಲ್ಲಾ ಬಾಷೆಯ ಮೊದಲ ಕಥನದ ವಸ್ತುಗಳಾಗಿವೆ. ಕತೆ ಮಕ್ಕಳ ಮನೋವಿಕಾಸಕ್ಕೆ ಹೆಚ್ಚು ಸಹಕಾರಿಯಾಗಬಲ್ಲ ಸಶಕ್ತ ಮಾಧ್ಯಮವಾಗಿದೆ. ಸುನಂದಾ ಕಡಮೆಯವರ ಎಳನೀರು ಕಾದಂಬರಿ ಮಕ್ಕಳ ಸಾಹಿತ್ಯ ಪರಂಪರೆಯಲ್ಲಿ ಹೊಸದೊಂದು ದಾರಿಯನ್ನು ಶೋಧಿಸಿದೆ. ಆ ಮಾರ್ಗದಲ್ಲಿ ಅಗಾಧವಾಗಿ ಕಲ್ಪನಾಶಕ್ತಿಗೆ ಅವಕಾಶವಿದೆ.. ( ಮಹಾದೇವ ಹಡಪದ # 19 ಲಾಸ್ಟ್ ಬಸ್ ಸ್ಟಾಪ್ ನೆಹರು ನಗರ ಧಾರವಾಡ-580003 ಮೊಬೈಲ್:- 9972352163 )