ಸಿನೆಮಾದ ಭಾಷೆ ಅಂದ್ರೆ ಯಾವುದು,,.?


ನಾಟಕೀಯತೆಯನ್ನು ದೈನಂದಿನ ಬದುಕಿನಲ್ಲಿ ನಾವು ಗುರುತಿಸಿಕೊಳ್ಳಬಹುದಾಗಿದೆ. ಅಂತೆಯೇ ಸಿನಿಮೀಯ ಮಾದರಿಗಳನ್ನು ನಾವು ಇಂದು ವಿಶೇಷವಾಗಿ ಸುದ್ದಿವಾಹಿನಿಗಳಲ್ಲಿ ಕಾಣುತ್ತೇವೆ. ಬಲ್ಮೆಯ ಉನ್ಮತ್ತ ಚಾಲಾಕಿ ದೃಶ್ಯಗಳು, ಅತಿರಂಜಿತ ಕ್ರೌರ್ಯ, ಅತ್ಯುತ್ಸಾಹಿ ಅಪರಾಧ ಪ್ರಜ್ಞೆಯನ್ನು ಬೆಳೆಸುತ್ತವೆ ಎಂದು ಯಾವುದನ್ನು ಕರೆಯಬಹುದೋ ಅಂಥ ದೃಶ್ಯಗಳು ಮನುಷ್ಯ ಸಹಜವಾಗಿ ಎಲ್ಲಿಯೂ ಕಾಣಸಿಗುವುದಿಲ್ಲ. ಆ ಸಿನಿಮೀಯ ಭಾಗಗಳು ಬಾವೋತ್ಕರ್ಷೆಯಲ್ಲಿ ಪರದೆಯ ಮೇಲೆ ಮಾತ್ರ ಕಾಣಿಸಿಕೊಳ್ಳುತ್ತವೆ. ಅಂಥ ಗುಣಾವಗುಣಗಳುಳ್ಳ ಘಟನೆಗಳು ಇಂದು ಸಾಮಾನ್ಯನ ಸಾರ್ವಜನಿಕ ಜೀವನದಲ್ಲೂ ತೀರಾ ಸಹಜವೆಂಬಂತೆ ನೋಡುತ್ತಿದ್ದೇವೆ. ಈ ಸ್ವಭಾವದ ಪ್ರೇರಣೆ ಏನೇ ಆಗಿರಲಿ ವಿಕಾರಗಳು ಹುಟ್ಟುವ ಮೂಲ ಸಾಂಸ್ಕೃತಿಕ ಬೇಜವಾಬ್ದಾರಿತನದ್ದು ಎಂಬುದನ್ನು ಅರ್ಥಮಾಡಿಕೊಳ್ಳಬಹುದು.
ಸಾಂಸ್ಕೃತಿಕ ಪ್ರಜ್ಞೆ ಯಾವತ್ಕಾಲಕ್ಕೂ ಸಮಾಜದ ಓರೆಕೋರೆಗಳನ್ನು ತಿದ್ದುವುದಕ್ಕಿಂತ ಆ ಕುರಿತಾದ ಅನುಮಾನ ಅಸಮಾಧಾನಗಳನ್ನು ಹುಟ್ಟುಹಾಕುವ ಮೂಲಕ ಮನುಷ್ಯನ ಅಂತಃಶಕ್ತಿಯನ್ನು ಜಾಗೃತಗೊಳಿಸುತ್ತದೆ. ಆ ಸಾಧ್ಯತೆಗಳನ್ನು ಭವಿಷ್ಯತ್ತಿನ ಚಲಚ್ಚಿತ್ರಗಳಲ್ಲಿ ಕಾಣುತ್ತೇವೆ. ಸೂಕ್ಷ್ಮಬಾವಗಳು ಕೂಡ ತೀಕ್ಷ್ಣ ಸಂವೇದನೆಯ ಮೊನಚನ್ನು ಹೊಂದಿರುತ್ತವೆ. ಅಂಥ ಸಿನೇಮಾಗಳನ್ನು ಕನ್ನಡದ ಪ್ರೇಕ್ಷಕರಿಗೆ ಕೊಡುವ ಒಂದು ಗುಂಪು ಸದಾ ಕ್ರಿಯಾಶೀಲವಾಗಿ ತೊಡಗಿಕೊಂಡಿರುವುದು ಸಂತಸದ ಸಂಗತಿ. ಕನ್ನಡದ ಸಾಹಿತ್ಯಿಕ ಕೃತಿಗಳನ್ನಾಯ್ದು ಸದಭಿರುಚಿಯ ಚಿತ್ರಗಳನ್ನು ನಿರ್ಮಿಸುವ ಈ ಗುಂಪು ಸಹಿತ ಪ್ರಶಸ್ತಿಯ ಗರಿಗಾಗಿ ಕೆಲಸ ಮಾಡುತ್ತವೆ ಎಂದು ಓರೆಗಣ್ಣಲ್ಲಿ ನೋಡಿಸಿಕೊಳ್ಳುತ್ತವೆ. ಆದರೆ ಆ ಸೃಜನಶೀಲ ಕೆಲಸಕ್ಕಾಗಿ ಬೇರೆಲ್ಲ ಮಾದರಿಯ ಜನಪ್ರಿಯಗಳನ್ನು ನಗಣ್ಯಗೊಳಿಸಿ ಜನಪರವಾದ ರೀತಿಯಲ್ಲಿ ಕಲಾಕೃತಿಗಳನ್ನು ಕಟ್ಟುತ್ತಾರೆ. ಅವರ ಚಲನಚಿತ್ರಗಳು ಕಥೆಯ ಸಂವಿಧಾನವನ್ನು ಮೀರಿಸಿ ಆಯಾಮಗಳನ್ನು ಸೃಷ್ಟಿಸುವ ಕಾರಣಕ್ಕಾಗಿಯೇ ಕನ್ನಡ ಕಲಾಪ್ರಪಂಚವನ್ನು ಇನ್ನಷ್ಟು ವಿಸ್ತರಿಸುವ ಕೆಲಸ ಮಾಡುವ ಸಿನೇಮಾಗಳಾಗಿ ಸಹೃದಯರ ಮನಸ್ಸನ್ನು ಸೂರೆಗೊಳ್ಳುತ್ತವೆ. ಅಂಥ ಚಿತ್ರಗಳ ಪರಂಪರೆ ಇದ್ದಾಗ್ಯೂ ಕನ್ನಡದಲ್ಲಿ ಜನಪ್ರಿಯ ಮಾದರಿಯಲ್ಲಿ ಬರುವ ಚಿತ್ರಗಳು ಯಾವ ಸಂವೇದನೆಯನ್ನು ಕಟ್ಟುತ್ತಿವೆ ಅನ್ನುವುದು ಪ್ರಶ್ನೆಯಾಗಿದೆ..?
ಚಲನಚಿತ್ರಗಳು ಸದಭಿರುಚಿ ಬೆಳೆಸಬೇಕಾದ ಸಂದರ್ಭದಲ್ಲಿಯೇ ಆಡಳಿತಶಾಹಿಯ ಅಪೇಕ್ಷೆಗೆ ತಕ್ಕಂತೆ ಮೈಮರೆಸುವ ತಂತ್ರವನ್ನಷ್ಟೆ ಪೋಷಿಸಲಾರಂಭಿಸಿದವು. ಆ ಕಾರಣಕ್ಕಾಗಿಯೇ ಕರ್ತೃ, ಕೃತಿ(ಕಲೆ), ಪ್ರೇಕ್ಷಕರ ಟ್ರಯಾಂಗಲ್ ನಡುವೆ ವ್ಯವಸ್ಥಿತ ಹುನ್ನಾರವೊಂದು ತನ್ನ ಅಭಿಪ್ರಾಯ ರೂಪಿಸಲೋಸುಗ ಕಲಾಭಿರುಚಿಯನ್ನು ತನ್ನ ಆಶಯದಂತೆ ರೂಪಿಸತೊಡಗಿತು. ಅಲ್ಲಿನ ವಿರಾಮಗಳ ನಂತರದ ಕಥನ ಪಲ್ಲಟದ ಸಿನಿಮೀಯ ಗುಣ ಮತ್ತು ಎರಡು ಗಂಟೆಗಳ ಕಾಲ ಪ್ರೇಕ್ಷಕನೊಳಗೆ ಯಾವ ಪ್ರಶ್ನೆಗಳು – ಸಂಕಷ್ಟಗಳೂ ಅನುಭವಕ್ಕೆ ಬಾರದಂತೆ ಹಿಡಿದಿಟ್ಟುಕೊಳ್ಳುವ ಕೌಶಲದ ಕಥಾಹಂದರದಲ್ಲಿ ಚಿತ್ರ ತಯಾರಾದರೆ ಅದೊಂದು ಭ್ರಮಾಜಗತ್ತಿನ ಸಮ್ಮೋಹನ ಕಲೆ, ಚಿತ್ರಮಂದಿರದ ಹೊರಗೆ ಕಾಲಿಡುತ್ತಿದ್ದಂತೆಯೇ ಹೊರಬೆಳಕಿನ ಪ್ರಖರತೆಯಲ್ಲಿ ಚಿತ್ರದ ಅನುಭವ ಬರೀ ಚಾಕಚಕ್ಯೆತೆಯ ಸ್ಟೋರಿಯಾಗಿ ತಲೆಯಲ್ಲಿ ಉಳಿಯುವುದರಿಂದ ಅದರ ಕೀಳು ಮನೋರಂಜನೆ ಕ್ಷಣದ ಸಂತೋಷವನ್ನು ನೀಡುತ್ತದೆ. ಆದರೆ ಆ ಶೈಲೀಕೃತ ಬದುಕು ನೋಡುಗನ ವರ್ತನೆಗಳನ್ನು ಬದಲಿಸುತ್ತ, ಆಸೆ-ಭಾಷೆಗಳನ್ನು ಜಾಗತಿಕ ಬದುಕಿನ ಸವಾಲುಗಳ ನಡುವೆ ತಂದು ನಿಲ್ಲಿಸುತ್ತದೆ. ಆಗ ಸಿನಿಮೀಯ ಗುಣಗಳು ನಾಗರೀಕ ಸಮಾಜದ ಸರ್ವೇಸಾಮಾನ್ಯ ಲಕ್ಷಣಗಳ ಹಾಗೆ ಗೋಚರಿಸತೊಡಗುತ್ತವೆ. ನಾವು ಯಾವದನ್ನು ಕಾಣಬೇಕಿತ್ತೋ ಅದನ್ನು ಕಾಣಿಸದೇ ಇರುವ ಸಾಂಸ್ಕೃತಿಕ ಲೋಕ ನಮಗೆ ತೋರಿಸುವ ಚಿತ್ರಗಳ ಚಿತ್ರಕಶಕ್ತಿಯಲ್ಲಿ ಯಾವ ರಸಾನುಭವದ ಲವಲೇಶಗಂಧವೂ ಇರದಿದ್ದರೂ ವಿಕೃತ ಸಂತೋಷವನ್ನು ಅತಿರಂಜಿತವಾಗಿ ನೀಡುವ ಮುಖೇನ ಅದು ಮೈಮರೆಸುತ್ತದೆ. ಆ ಮೈಮರೆವಿನಲ್ಲಿ ವಾಸ್ತವದ ಲಕ್ಷಣಗಳು ಮಾಯವಾಗುತ್ತ ನೋಡುವ ಭ್ರಮೆಯನ್ನು ಮಾತ್ರ ನಮ್ಮದಾಗಿಸಿ ವ್ಯವಸ್ಥೆಯ ಕುರೂಪಗಳನ್ನು ಮುಚ್ಚಿಹಾಕುತ್ತದೆ. ಆಗ ನೋಡುಗನ ಪ್ರತಿನಿಧಿಯಾಗಿ ಪಾತ್ರಗಳು ಮೂಡುವುದಿಲ್ಲ, ಪಾತ್ರಧಾರಿಯ ಪ್ರತಿನಿಧಿಯಾಗಿ ನೋಡುಗ ತನ್ನತನ ಬಿಟ್ಟುಕೊಡುತ್ತಾನೆ. ಹೀಗೆ ಪರಿಣಾಮ ಬೀರುವ ಚಿತ್ರಗಳು ನಮಗೆ ಬೇಕೇ… ? ಜನಪರ ಚಿತ್ರಗಳನ್ನು ನೋಡುವ ಮನಸ್ಸುಗಳ ಮೌನದಲ್ಲಿ ಸಮೃದ್ಧ ಸಾಂಸ್ಕೃತಿಕ ರೂಪು ಮೂಡುತ್ತದೆ. ಅಂಥ ಚಿತ್ರಗಳನ್ನು ಹುಡುಕಿಕೊಂಡು ಹೋಗಿ ನೋಡಬೇಕಾದ ಮನಃಸ್ಥಿತಿ ಕನ್ನಡದಲ್ಲಿದ್ದರೂ ಅಂಥ ಚಿತ್ರಗಳು ಚಿತ್ರಮಂದಿರದಲ್ಲಿ ಬಿಡುಗಡೆ ಆಗದಿರುವುದು ದುರಂತ.
ಆದರೆ ಇವತ್ತಿನ ಚಲನಚಿತ್ರ ಮಾಧ್ಯಮದ ಜನಪ್ರಿಯತೆ ಯಾವ ಮಾದರಿಯ ಅಭಿರುಚಿಯನ್ನು ಪ್ರೇರೇಪಿಸುತ್ತಿದೆ? ಯಾಕಾಗಿ ಇಂಥ ಕಥಾ ಮಾದರಿಗಳನ್ನು ದೃಶ್ಯೀಕರಿಸಿ ಜನರ ಸಹೃದಯತೆಯನ್ನು ಹಾಳುಗೆಡುವುತ್ತಿದೆ, ಇಂಥ ಚಲನಚಿತ್ರಗಳು ಸಮುದಾಯದ ಆಳದ ನೋವನ್ನು ಮರೆಮಾಚುವ ಕಾರಣವಾದರೂ ಏನು? ಇದೆಲ್ಲದರ ಹಿಂದೆ ಕಾರ್ಪೋರೇಟ್ ಜಗತ್ತಿನ ಆಶಯಗಳು ಕೆಲಸ ಮಾಡುತ್ತಿರುವುದಂತೂ ಸ್ಪಷ್ಟವಾಗಿವೆ

Advertisements

ಭಾರತದಲ್ಲಿ ಶಿಕ್ಷೆ


-ಮಹದೇವ ಹಡಪದ ಸಾಲಾಪೂರ

ಭಾರತದಲ್ಲಿ ಶಿಕ್ಷೆಯನ್ನು ಕೊಡಬೇಕಾದವರು ಮತ್ತು ಕೊಡಿಸಬೇಕಾದವರು ಮಧ್ಯವರ್ತಿಗಳಂತೆ ದಲ್ಲಾಳಿಗಳಾಗಿರುತ್ತಾರೆ. ಅನ್ಯಾಯ, ವಂಚನೆ, ಮೋಸ, ಕ್ರೌರ್ಯ, ಸುಲಿಗೆಗಳೆಲ್ಲವನ್ನು ಇಂಥ ದಲ್ಲಾಳಿಗಳು ಮುಚ್ಚಿ ಹಾಕುವ ಸಲುವಾಗಿ ಹೊಂದಾಣಿಕೆಯ ಸೂತ್ರವೊಂದನ್ನು ಮುಂದಿಟ್ಟುಕೊಂಡು ವ್ಯಾಜ್ಯಗಳನ್ನು ಅಳಿಸಿ ಹಾಕಿಬಿಡುತ್ತಾರೆ. ನಮ್ಮ ಹಳ್ಳಿ ಕಡೆಗೆ ಹೀಗೆ ವ್ಯವಹರಿಸಲು ಮುಂದಾಗುವ ಮಹಾಶಯರನ್ನು ನರಿಬುದ್ಧಿ ಚತುರರೆಂದು, ನರಿಮನಿ ವಕೀಲರೆಂದು ಗುರುತಿಸಲ್ಪಡುತ್ತಾರೆ. ಆದರೆ ಹಾಕಿರುವ ಬೇಲಿಯೇ ಒಬ್ಬರ ಪರವಾಗಿ ನಿಂತು ಇನ್ನೊಬ್ಬರನ್ನು ಪರಿಹಾರದ ಖೆಡ್ಡಾಕ್ಕೆ ಕೆಡವಿ ಅನ್ಯಾಯದ ಪರ ಸಬೂಬು ಹೇಳುವಂತ ಘಟನೆಗಳು ಎಲ್ಲ ವ್ಯಾಜ್ಯಗಳ ಮೂಲದಲ್ಲಿ ನಡೆದಿರುತ್ತದೆ ಅನ್ನುವುದು ಮುಸುಕಿನೊಳಗಿನ ಮಾತು. ಬಲಿಷ್ಠರ ಬೆನ್ನು ಕಾಯುವ ಇಂಥ ಸಮೂಹಗಳ ದೈವಾಧಾರಿತ ನ್ಯಾಯಮಂಡಳಿಗಳು ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡಾದ ಮೇಲೆ ನ್ಯಾಯ ಕೇಳಿ ಸರಕಾರದ ಕಡತಗಳಲ್ಲಿ ಅನ್ಯಾಯಗಳು ದಾಖಲುಗೊಳ್ಳುತ್ತವೆ. ಹಾಗೆ ದಾಖಲಾಗುವ ಸಂದರ್ಭದಲ್ಲೂ ಲಾಬಿಗಳು ನಡೆಯುವ ಕಾರಣದಿಂದ ಎಷ್ಟೋ ತಕರಾರುಗಳನ್ನ ಪೋಲಿಸರೇ ತಳ್ಳಿ ಹಾಕಿಬಿಡುವ ಸಂಗತಿಗಳು ದಾಖಲಾಗದ ಭಾರತದ ಇತಿಹಾಸದಲ್ಲಿ ನಡೆದು ಹೋಗಿವೆ.

ಈ ಹಳ್ಳಿಗಳ ಹೊಟ್ಟೆಯನ್ನು ಬಗೆದರೆ ಅದೆಷ್ಟು ಅತ್ಯಾಚಾರಗಳು ಮಾನ ಮರ್ಯಾದೆಯ ಹೆಸರಲ್ಲಿ ಗಪ್ಪುಗಾರಾಗಿಲ್ಲ…? ಕಾಣೆಯಾಗಿದ್ದಾರೆ, ಆತ್ಮಹತ್ಯೆ ಎಂಬ ಹೆಸರಿನಲ್ಲಿ ಅದೇಸೊಂದು ಮರ್ಯಾದೆ ಹತ್ಯೆಗಳು ನಡೆದಿಲ್ಲ…? ಇಂಥಪ್ಪ ಕಥನಗಳು ಗೊತ್ತಿದ್ದರೂ ಸಂಸ್ಕೃತಿಯ ಹೆಸರಿನಲ್ಲಿ ಭಾರತದ ಪರ ವಕಾಲತ್ತು ವಹಿಸಿ ಮಾತನಾಡುವ ಮೂರ್ಖರು ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಿರುತ್ತಾರೆ.

ನ್ಯಾಯ ಕಟ್ಟೆ, ಮಠದ ಅಂಗಳ, ಗ್ರಾಮ ಚಾವಡಿ, ಪಂಚಾಯತ್ ಕಟ್ಟೆಯಿಂದ ಹೊರಬಿದ್ದ ಗ್ರಾಮಭಾರತದ ಜನ ಈಗ ಪ್ರಜ್ಞಾವಂತರಾಗಿದ್ದು ಎಲ್ಲ sowjanya-rape-murderವ್ಯಾಜ್ಯಗಳನ್ನ ಕೋರ್ಟು ಕಟಕಟೆಗೆ ಎಳೆದು ತಂದು ನ್ಯಾಯ ಕೇಳಲು ಮುಂದಾಗುತ್ತಿದ್ದಾರೆ. ಆದರೆ ಪೋಲೀಸರು ಇವತ್ತಿನ ದಿನಮಾನದಲ್ಲಿ ಉಳ್ಳವರ, ಅನ್ಯಾಯದ ಪರವಹಿಸಿ ವ್ಯಾಜ್ಯಗಳನ್ನು ಬಗೆಹರಿಸುವ ಪ್ರಕರಣಗಳು ಎಗ್ಗಿಲ್ಲದೆ ನಡೆಯುತ್ತಿರುವುದಕ್ಕೆ ಈ ದಲ್ಲಾಳಿಗಳು ಕುಮ್ಮಕ್ಕು ಕೊಡುತ್ತಿದ್ದಾರೆ. ಎರಡು ಕೋಮಿನ, ಜಾತಿ-ಜನಾಂಗಗಳ, ಊರುಗಳ, ಪಂಗಡಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳಗಳಾದಾಗ ಸಾಮಾಜಿಕ ವಾತಾವರಣವನ್ನು ತಿಳಿಗೊಳಿಸಲು ಇಂಥ ಹೊಂದಾಣಿಕೆಗಳು ನಡೆಯುತ್ತವಲ್ಲ ಅದು ಉತ್ತಮವಾದ ಯೋಚನೆ ಅನ್ನಬಹುದು. ಆದರೆ ಅತ್ಯಾಚಾರಕ್ಕೊಳಗಾದವಳು, ಅನ್ಯಾಯಕ್ಕೊಳಗಾದ ವ್ಯಕ್ತಿ, ನ್ಯಾಯ ಕೊಡಿಸಿ ಎಂದು ಠಾಣೆಗೆ ಬಂದರೆ ಅಂಥವರ ಮೂಗಿಗೆ ತುಪ್ಪ ಸವರಿ ಇಡೀ ಪ್ರಕರಣವನ್ನು ಇಲ್ಲವಾಗಿಸುವ ನೀಚತನ ಅಸಹ್ಯ ಹುಟ್ಟಿಸುವಂತದ್ದು. ಇದು ಪ್ರಜಾಪ್ರಭುತ್ವದ ಆಂತರ್ಯವನ್ನು ಸಡಿಲುಗೊಳಿಸುತ್ತದೆ. ತುಂಬು ಗರ್ಭಿಣಿಯಾದ ಬೆಕ್ಕು ಎಳೆಂಟು ಮರಿಗಳಿಗೆ ಜನ್ಮಕೊಟ್ಟ ತಕ್ಷಣದಲ್ಲಿಯೇ ಮೂರು ನಾಲ್ಕು ಮರಿಗಳನ್ನು ತಾನೇ ತಿಂದು ಸದೃಢವಾಗುವ ಹಾಗೆ ವ್ಯವಸ್ಥೆಯನ್ನು ಒಳಗೊಳಗೆ ನುಂಗಿಹಾಕುವ ಈ ಕೆಟ್ಟ ಚಾಳಿಯೂ ಭಾರತದಿಂದ ಪ್ರಚೋದಿತವಾಗಿ ಉಳಿದುಕೊಂಡು ಬಂದಿದೆ ಹೊರತು ಪಾಶ್ಚಾತ್ಯದಿಂದ ಬಂದುದಲ್ಲ. ವ್ಯವಸ್ಥೆ ಹೊಸಕಿದ ಒಂದೆರಡು ಘಟನೆಗಳನ್ನು ಇಲ್ಲಿ ಹಂಚಿಕೊಳ್ಳಬಯಸುತ್ತೇನೆ.

1) ಹದಿನೈದು ವರ್ಷದ ಹಿಂದೆ ದೆಹಲಿ ಅತ್ಯಾಚಾರಕ್ಕಿಂತಲೂ ಘೋರವಾದ ಅತ್ಯಾಚಾರವೊಂದು ತಾಲ್ಲೂಕು ಕೇಂದ್ರದಿಂದ ಇಪ್ಪತ್ತೈದು ಕಿ.ಮೀ. ದೂರದ ಒಂದು ಹಳ್ಳಿಯಲ್ಲಿ ನಡೆದು ಹೋಗಿತ್ತು. ನಾಲ್ಕೈದು ಜನರ ಗುಂಪು ಒಂದು ವಾರಕಾಲ ಬಿಟ್ಟುಬಿಡದೆ ನಿರಂತರ ಘಾಸಿಗೊಳಿಸಿದ್ದರು. ಅವಳ ಸಹಾಯಕ್ಕೆ ಪ್ರಿಯಕರನೂ ಇರಲಿಲ್ಲ, ತಾಯ್ತಂದೆಯರೂ ಬರಲಿಲ್ಲ. ಮಗಳು ಕಾಣೆಯಾಗಿದ್ದಾಳೆಂದು ಪೋಲಿಸರಲ್ಲಿ ದೂರು ಕೊಟ್ಟಾದ ಮೇಲೆ ಆಕೆಯನ್ನ ಊರ ಹೊರಗೆ ಬಿಸಾಡಿಯೂ ಹೋಗಿರಲಿಲ್ಲ. ಯಾರದೋ ಜೊತೆ ಓಡಿ ಹೋಗಿದ್ದಾಳೆಂದು ಊರವರೆಲ್ಲ ಮಾತಾಡುತ್ತಿದ್ದಾಗ ಆಕೆ ಗೌಡರ ಕಬ್ಬಿನ ತೋಟದ ನಡುವೆ ಮೈ-ಮನ ಸೋತು ಗಂಡಸಿನ ಕ್ರೌರ್ಯಕ್ಕೆ ಶರಣಾಗಿ ಒರಗಿದ್ದಳು. ನಾನು ಕಂಡಂತೆ ಆ ಹುಡುಗಿ ಮೈತುಂಬ ಬಟ್ಟೆ ತೊಟ್ಟು, ಅಣ್ಣ, ಚಿಕ್ಕಪ್ಪ, ದೊಡಪ್ಪ ಎಂದು ನೀತಿ ಹಿಡಿದು ಮಾತಾಡುವುದರಲ್ಲಿ ಎಂದೂ ದಾರಿ ತಪ್ಪಿರಲಿಲ್ಲ. ಕುರಿ ಕಾಯುವ ಹುಡುಗನೊಬ್ಬ ಈ ನಾಲ್ಕೈದು ಜನ ಆ ಕಬ್ಬಿನ ಗದ್ದೆಗೆ ಹೋಗಿಬರುತ್ತಿರುವುದನ್ನು ನೋಡಿ ನೋಡಿ, ಆ ಜಾಗ ಪತ್ತೆ ಹಚ್ಚಿ ಊರವರಿಗೆ ಸುದ್ದಿ ಮುಟ್ಟಿಸಿದ ಮೇಲೆ ಊರೆಲ್ಲ ಗುಲ್ಲೆದ್ದಿತ್ತು. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಸಿಕ್ಕ ನಂತರ ಆಕೆ ಬದುಕಿ ಬಂದಿದ್ದಳು. ಆದರೆ ಊರಿನ ದೈವ ಮತ್ತು ಪೋಲೀಸರ ಎದುರಿನಲ್ಲಿ ಪರಿಹಾರದ ರೂಪದ ಹೊಂದಾಣಿಕೆ ಸೂತ್ರಕ್ಕೆ ಒಪ್ಪಿಕೊಂಡ ಆ ಅಪರಾಧಿಗಳು ಆ ಪ್ರಕರಣದಿಂದ ನುಣುಚಿಕೊಂಡಿದ್ದರು. ಆಕೆ ತೀರ್ಮಾನ ಯಾರಿಗೂ ಬೇಕಿರಲಿಲ್ಲ. ಅವರು ಈಡುಗಂಟಾಗಿ ನೀಡಿದ್ದ ಹಣಕ್ಕೆ ಅವಳು ಬಲಿಪಶುವಾಗಿದ್ದಳು. ಮುಂದಿನ ಕಥೆಯಲ್ಲಿ ಅವಳೇ ಸತ್ತಳೋ… ಯಾರಾದರೂ ಹೊಡೆದು ಉರುಲು ಹಾಕಿದರೋ… ಆಕೆ ಹೆಣವಾಗಿ ಹಗ್ಗಕ್ಕೆ ಶರಣಾಗಿದ್ದಳು. ಆ ಎಲ್ಲ ಪುಢಾರಿಗಳಲ್ಲಿ ಕೆಲವರು ಈಗ ಊರಿನಲ್ಲಿ ಓಣಿ ಮೆಂಬರ್ರುಗಳಾಗಿ ಸುಖವಾಗಿದ್ದಾರೆ. ದೆಹಲಿ ಅತ್ಯಾಚಾರವನ್ನು ಚಡ್ಡಿಗಳ ರೀತಿಯಲ್ಲಿಯೇ ಸಮರ್ಥಿಸಿಕೊಳ್ಳುತ್ತಿದ್ದಾರೆ. ಇಂಥ ಇವರು ಗೋಡ್ಸೆ ಭಕ್ತ/ಪ್ರಿಯ ದೇಶಪ್ರೇಮಿಗಳಂತೆ ಪೋಸು ಕೊಡುತ್ತಿರುವುದು ಇಂಡಿಯಾದ ವರ್ಚಸ್ಸಾಗಿದೆ.

2) ನಮ್ಮ ಶಾಲೆಯ ವಿದ್ಯಾರ್ಥಿನಿಯೊಬ್ಬಳಿಗೆ ತೀವ್ರ ಉಬ್ಬಸವಾಗಿ ಉಸಿರೇ ನಿಂತು ಹೋದಂತಾಗಲು ನಾನು ನನ್ನೊಂದಿಗೆ ಇಬ್ಬರು ವಿದ್ಯಾರ್ಥಿ ಮಿತ್ರರ ಸಹಾಯದಿಂದ ಹೊಸದುರ್ಗದ ಸರಕಾರಿ ಆಸ್ಪತ್ರೆಗೆ ಆಕೆಯನ್ನು ಕರೆದೊಯ್ದೆವು. ಆಗ ರಾತ್ರಿ 11:40. ಆದ್ದರಿಂದ ಹೊಸದುರ್ಗದ ಪ್ರಮುಖ ರಸ್ತೆಗಳು ಸ್ತಬ್ಧವಾಗಿ ನಿದ್ದೆ ಹೋದಂತಿದ್ದವು. ಆ ಹುಡುಗಿಗೆ ಆಕ್ಸಿಜೆನ್ ಹಾಕಿ ಬೆಡ್‍ರೆಸ್ಟ್ ಮಾಡಲು ಬಿಟ್ಟು ಹೊರ ಹೋದ ಶ್ರೀಧರ್ ಡಾಕ್ಟರ್ ತರಾತುರಿಯಲ್ಲಿ ಡ್ರಿಪ್ ಹಾಕಲು ಹಿಂದೆ ಮುಂದೆ ಓಡಾಡುತ್ತಿದ್ದರು. ಏನದು ಎಂದು ತಿರುಗಿ ನೋಡುವುದರೊಳಗೆ ಸರಿಸುಮಾರು ಮುವ್ವತ್ತೈದು ವರ್ಷದ ಹೆಂಗಸೊಬ್ಬಳನ್ನು ಐದಾರು ಜನ ಗಂಡಸರೊಂದಿಗೆ ಕರೆದುಕೊಂಡು ಬಂದು ಹಾಸಿಗೆ ಮೇಲೆ ಮಲಗಿಸಿದರು. ಬೆನ್ನಲ್ಲೆ ಮೂರು ಜನ ಗಂಡಸರೊಂದಿಗೆ ಪೋಲೀಸ ವ್ಯಾನೂ ಬಂದಿತ್ತು.

ಗಡಸು ಧ್ವನಿಯಲ್ಲಿ ಅವರನ್ನು ವಿಚಾರಿಸುತ್ತಿದ್ದ ಕ್ರಮದಿಂದಲೇ ಆ ಮೂವರು ಕಾಮುಕರು ಆಕೆಯ ಮೇಲೆ ಎರಗಿದ್ದರೆಂಬುದು ತಿಳಿಯುತ್ತಿತ್ತು. ಆ ಕ್ರೂರಿಗಳ ಬಗ್ಗೆ ಆಕೆಯ ಮನೆಯವರು ಆಕ್ರೋಶಭರಿತರಾದ್ದರಿಂದ ಅಪರಾಧಿಗಳನ್ನು ಕೂಡಲೆ ಠಾಣೆಗೆ ಕರೆದೊಯ್ಯಲಾಯಿತು. ತಡರಾತ್ರಿಯಾದ್ದರಿಂದ ವಿದ್ಯಾರ್ಥಿನಿಯನ್ನ ಮತ್ತವಳ ಜೊತೆಗೆ ಇಬ್ಬರನ್ನು ಅಲ್ಲಿಯೇ ಬಿಟ್ಟು ಉಳಿದ ನಾವೆಲ್ಲ ತಿರುಗಿ ಹಳ್ಳಿಗೆ ಹೊರಟೆವು. ಆ ದಿನದ ನಿದ್ದೆಯನ್ನ ಆ ಹೆಂಗಸಿನ ದೈನೇಸಿ ಸ್ಥಿತಿ ಕದ್ದಿದ್ದ ಕಾರಣಕ್ಕೆ ದೆಹಲಿ ಅತ್ಯಾಚಾರ, ಹಾಸನ, ಚಿಕ್ಕಮಗಳೂರು, ಕುಂದಾಪೂರ, ಬೆಂಗಳೂರು ಹೀಗೆ ಕಳೆದ ಹದಿನೈದು ದಿನದಿಂದ ಸುದ್ದಿಯಾಗುತ್ತಲಿರುವ ಎಲ್ಲ ಘಟನೆಗಳು ಮತ್ತೆ ನೆನಪಾಗುತ್ತಲಿದ್ದವು. ಆದರೆ ಮರುದಿನ ನಾನು ಕೇಳಿದ ಸುದ್ದಿ ಇಡೀ ಪ್ರಕರಣವನ್ನು ಮುಚ್ಚಿಹಾಕಿತ್ತು. ರಾತ್ರಿ ಸಂಭವಿಸಿದ ಆ ಅತ್ಯಾಚಾರ ಬೆಳಗಾಗುತ್ತಲೆ ಹಣಕಾಸಿನ ಹೊಂದಾಣಿಕೆಯಲ್ಲಿ ಮುಕ್ತಾಯವಾಗಿತ್ತು.

ಇದು ಈ ಭಾರತದ ತಮಸ್ಸಿನಲ್ಲಿ ಜರುಗಿರುವ ದುರಂತ ಕಥನಗಳ ಒಂದೆರಡು ಸಣ್ಣ ಉದಾಹರಣೆಗಳು. ನ್ಯಾಯಾಂಗದಲ್ಲಿನ ಕೆಲವು ಅನ್ಯಾಯಗಳ ಕುರಿತಾಗಿ ಬ್ರೆಖ್ಟ್ ಒಂದಂಕಿನ ಸುಂದರವಾದ “ಎಕ್ಸಪ್ಷನ್ ಆ್ಯಂಡ್ ದಿ ರೂಲ್” ಎಂಬ ನಾಟಕವೊಂದನ್ನು ಬರೆದಿದ್ದಾರೆ. The_Bulgarian_rapeಏನೂ ತಪ್ಪು ಮಾಡದಿರುವ ಕೂಲಿಯಾಳಿನ ವಿರುದ್ಧವೇ ತೀರ್ಪನ್ನು ಕೊಟ್ಟು ಬಿಡುವ ಆ ಸಂದರ್ಭ ಮೇಲುನೋಟಕ್ಕೆ ಅನ್ಯಾಯ ಅನ್ನಿಸಿದರೂ ಕೊಲೆಯಾಗುವ ಮುಂಚೆ ಕೂಲಿಯಾಳು ಸಂಶಯ, ಗುಮಾನಿಗಳಿಗೆ ಆಸ್ಪದ ಕೊಡುವ ರೀತಿಯಲ್ಲಿ ನಡೆದುಕೊಂಡದ್ದು ಉಳ್ಳವನ ಪರವಾಗಿ ವಾದ ಗೆಲ್ಲಲು ಕಾರಣವಾಗಿಬಿಡುವ ಸಾಮಾಜಿಕ ವ್ಯಂಗ್ಯ ನಾಟಕದಲ್ಲಿದೆ. ಅಂತೆಯೇ ನಮ್ಮಲ್ಲಿನ ಈ ಒಳ ಒಪ್ಪಂದದ ಸೂತ್ರಗಳು ನ್ಯಾಯಾಲಯದ ಮೆಟ್ಟಿಲೇರಲಿಕ್ಕೆ ಬಿಡದಿರುವುದು ನ್ಯಾಯಾಂಗವನ್ನು ಅವಮಾನಿಸಿದಂತಹ ನೀಚತನದ ಕೆಲಸವಾಗುತ್ತದೆ. ಇಂಥ ವ್ಯವಸ್ಥೆಯ ವಿರುದ್ಧ ಹೋರಾಡಿದಾಗ ಪ್ರಬಲ ಕಾನೂನುಗಳು ಒಂದಷ್ಟು ಜನರ ಬದುಕಿಗೆ ಸಹಾಯವಾಗಬಹುದು.

ಪವಾಡ ಮತ್ತಿತರ ಕತೆಗಳು


ಪವಾಡ….

ದಿಬ್ಬಣ ಹೊರಟ ಹಾದಿಗೆ ಎದುರಾಗಿ ಮದುಕಿಯೊಬ್ಬಳ ಶವದ ಯಾತ್ರೆಯೂ ಹೊರಟಿತ್ತು.
ಸಿಂಗರಿಸಿದ ಸೀತೆಯನ್ನ ದುಪ್ಪಟದಲ್ಲಿ ಮುಚ್ಚಿ ಕರೆದೊಯ್ಯುತ್ತಿದ್ದರು,
ಸಿಂಗರಿಸಿದ ಚಟ್ಟದ ಮೇಲಿನ ಸೀತಜ್ಜಿಯನ್ನ ಒಂಟಿ ಹಲಗೆಯ ಜಡ್ಡಿನಕ್ ಪಂಪನಕ್ ಮೇಳದ ಗತ್ತಿನಲ್ಲಿ ಹೊತ್ತಿದ್ದರು.
ಒಬ್ಬಳ ಮನದಲ್ಲಿ ಅಲ್ಲೋಲ ಕಲ್ಲೋಲಗಳ ಸಂಭ್ರಮದ ನಡುವೆ ರತಿ ಸ್ಥಾಯಿಯಾಗಿ ಮುಖದಲ್ಲಿ ದುಗುಡದ ನಡುವೆ ಮಂದಹಾಸ ಮೂಡಿ ಮಾಯವಾಗುತ್ತಿತ್ತು. ಇನ್ನೊಬ್ಬಳ ದೇಹದಲ್ಲಿ ಉಸಿರಿಲ್ಲದ ಕಾರಣ ಸ್ಥಾಯಿಭಾವ ಜೂಟಾಗಿ ಹಾರಿಹೋಗಿತ್ತು.

ಮರೆವು….

ಹಿನ್ನೀರಿನಲ್ಲಿ ಬದುಕ ಮುಳಗಿಸಿಕೊಂಡದ್ದು ಎಷ್ಟು ಬೇಗ ಮರೆತು ಹೋಗಿತ್ತು.
ಆಲಮಟ್ಟಿ ಡ್ಯಾಂ ಮುಂದೆ ನೆಲ ಗೆಬರುತ್ತಿದ್ದ ಆ ಮನುಷ್ಯನಿಗೆ ಹುಚ್ಚು ಹಿಡಿದಿದೆ ಎಂದು ಜನ ಮಾತಾಡಿಕೊಳ್ಳುತ್ತಿದ್ದರು.
ಅವನಿಗೆ ಬರೀ ನೆಲದ ಹುಚ್ಚೆಂದು ಒಬ್ಬ ಹೇಳಿದರೆ ಮಣ್ಣುಮಾರಿ ದುಡ್ಡು ಮಾಡುವ ಭ್ರಷ್ಟ ಹುಚ್ಚು ಎಂದು ಮತ್ತೊಬ್ಬ ಹೇಳುತ್ತಿದ್ದ… ಹೀಗೆ ನೆರೆದವರು ತಲೆಗೊಂದೊಂದು ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿದ್ದರು.

ಸಾವು..
ಆಕೆ ಮಲಗಿದಲ್ಲೆ ಮಲಗಿದ್ದಳು. ಬರುವ ಬೀಗರು ಬಿಜ್ಜರು ಬಂದು ಮಾತಾಡಿಸಿ ಹೋಗುತ್ತಿದ್ದರು. ಅಮೇರಿಕಾದಿಂದ ಮಗ ಬರಬೇಕಿತ್ತು, ಬರುವುದು ತಡವಾಗುತ್ತದೆಂಬ ಸುದ್ದಿ ಬಂತು.
ಆಕೆಯ ನಿಸ್ತೇಜ ಕಣ್ಣುಗಳೊಳಗಿನ ಆಸೆ ಬತ್ತಿರಲಿಲ್ಲ ಹಾಗಾಗಿ ಬಾಗಿಲಿನತ್ತ ದೃಷ್ಟಿ ನೆಟ್ಟುಕೊಂಡೆ ಮಲಗಿದ್ದಳು.
ಆಶ್ರಮದವರಿಗೆ ಒಂದೆರಡು ದಿನಕ್ಕೆ ಬೇಜಾರು ಬಂದಿತು.
ಮಗನಿಗೆ ನಿಮ್ಮ ತಾಯಿ ಸತ್ತಿರುವಳೆಂದು ವೀಯಂಚೆ ಕಳಿಸಲಾಯ್ತು. ಅತ್ತಲಿಂದ ಮಗನು ಮಿಂಚಂಚೆಯಲ್ಲಿ ತಾಯಿ ದಿನ ಕರ್ಮ ಮಾಡಿ ಮುಗಿಸಲು ಹೇಳಿ, ಸಂಸ್ಕಾರದ ಖರ್ಚುವೆಚ್ಚಕ್ಕೆ ಹಣಕಾಸಿನ ವ್ಯವಸ್ಥೆಯನ್ನೂ ಮಾಡಿರುವ ಬಗ್ಗೆ ದಾಖಲಿಸಿದ್ದ.

ತುಡುಗು


01012013790ನನ್ನ ಕ್ಷಮಿಸುವಿಯಾದರೆ
ಒಂದು ಮಾತು ಹೇಳಲೇನು…!
ನಿನ್ನ ಕಂಡಾಗಲೆಲಲ್ಲ ನನ್ನ ನಾ ಕೊಡವಿಕೊಂಡು
ಮಾತು ಹೊಸೆಯುತ್ತ ಏನೋ ಹೇಳಲು ತಡಕಾಡುತ್ತೇನೆ.
ಖರೇ ಹೇಳಬೇಂದ್ರೆ ತುಡುಗು ದನಧಂಗ
ನುಸುಳಿ ಬರ್ತಾವ ಕಾಣಿ-
ಮತ್ತೊಬ್ಬನ ಭಾವಗಳು,
ಸ್ವಪ್ನಗಳು, ಆಕಾಂಕ್ಷೆಗಳು, ನಿಟ್ಟುಸಿರುಗಳು ಮುತ್ತು ಪೋಣಿಸಿಧಂಗ
ಆ ಡೊಂಬರಾಟದಲ್ಲಿ
ನಾ ಮೈಮರೆತಾಗ ನಿನ್ನನ್ನು ಮರೆತುಬಿಡುತ್ತೇನೆ.

ಮೌನ ಮತ್ತು ಬುದ್ಧ…


images
ಮೌನವಾಗಿ ಇರಬೇಕೆಂದು
ಅರಳಿ ಮರದಡಿ
ಏಕಾಂತದಲ್ಲಿ ಧ್ಯಾನಕ್ಕೆ ಕೂತಾಗ
ಜೇಡ ಏರಿಳಿಯುವ ಭರಾಟೆಯಲ್ಲಿ ಲಾಗಾ ಹಾಕುತ್ತಿರುತ್ತದೆ
ಬಸವನಹುಳು ನೆಲದ ಮೇಲೆ ನಿಧಾನಕ್ಕೆ ತೆವಳುತ್ತಿರುತ್ತದೆ

ಮೌನವಾಗಿ ಇರಬೇಕೆಂದು
ಅರಳಿ ಮರದಡಿ
ಪಟ್ಟು ಹಿಡಿದು ಕಣ್ಣು ಮುಚ್ಚಿದಾಗ
ಶ್ರೀಗಂಧದ ಬೀಜವನ್ನು ಟೇಲರ್ ಹಕ್ಕಿ ಕುಕ್ಕಿ ತಿನ್ನುತ್ತಿರುತ್ತದೆ
ಕಾಗೆ ಅರಚುತ್ತ ಬಳಗವನ್ನೆಲ್ಲ ಸೇರಿಸುತ್ತದೆ.

ನೆಲ ನನ್ನದಲ್ಲ
ಗಿಡ ನನ್ನದಲ್ಲ ಹಕ್ಕಿಗಳ ಓಡಿಸಲು

ಛೇ…!
ಎಲ್ಲವನ್ನು ನಿರ್ಲಕ್ಷಿಸಿ
ನನ್ನೊಳಗೆ ನಾ ಆಳಕ್ಕಿಳಿದಾಗ
ದೂರದಲ್ಲಿನ ಅಕ್ರಂದನ ನನ್ನ ಆವರಿಸಿ
ದೈತ್ಯ ಶಕ್ತಿಯೊಂದಕ್ಕೆ ಶರಣಾದ ಪರದೇಶಿತನದಲ್ಲಿ ಮೌನ ಮುರಿಯುತ್ತಿರುತ್ತದೆ.

ತಪಸ್ಸಿನ ಭಂಗದೊಂದಿಗೆ
ಜಗದ ಅಳಲೆಲ್ಲ ನನ್ನದೇ ಆದಾಗ
ಮಹಾತ್ಮರುಗಳ ಮಹಾತ್ಮ ಬುದ್ಧನ ನಗು ಅಣಕಿಸುತ್ತದೆ.