ಅವೇಳೆಯಲ್ಲಿ


12062011435
ಬೇಸಿಗೆಯ ಬಗ್ಗೆ ಬರೆಯಬೇಕೆಂದುಕೊಂಡಾಗಲೆಲ್ಲ ಜಾತ್ರೆಗಳು, ಮದುವೆಗಳು,ಬೇವಿನಮರಗಳು,ವಿದ್ಯುತ್,ಜಾನುವಾರ,ಪಕ್ಷಿಗಳು,ನೀರು ಹೀಗೆ ಏನೆನೆಲ್ಲ ನೆನಪಾಗುತ್ತದೆ. ವಿದ್ಯುತ್ ಕೈಕೊಡುತ್ತದೆ, ಸೆಕೆ ಕುದಿಸುತ್ತದೆ. ಈ ಸಲದ ಬಜೆಟ್ ಯಾವ ರೀತಿ ಬರುತ್ತದೋ ಗೊತ್ತಿಲ್ಲ ಬರಗಾಲದ ಅನುಭವ ಬಿಟ್ಟುಬಿಡದೆ ಕಾಡುತ್ತದೆ. ಬರ ಎಂಬುದು ಎಂಥ ಸಂಕಟ ಅಲ್ಲವಾ? ಅದು ಸಂಕಟ ಎನ್ನುವುದಾದರೆ ಇನ್ನಷ್ಟು ದಿನ ಬರ ಬಂದು ಬಿಡಲಿ ಈ ಭೂಮಿ ಮ್ಯಾಲೆ. ಕಾರಣ, ಅಸಹಜವಾದದ್ದು ಉಳಿಯಲು ಹೆಣಗಾಡುತ್ತದೆ, ಉಳಿಯಲೇಬೇಕೆಂಬ ಹಟಕ್ಕೆ ಬಿದ್ದು ಒದ್ದಾಡಿ ಒಣಗುತ್ತದೆ. ಕಟ್ಟಿಕೊಂಡ ಗೋಪುರದ ಗೋಳಿಕರಣ ನಿರ್ನಾಮವಾಗಿ ಹೊಸ ದೆಸೆಯಲ್ಲಿ ಸಹಜತೆಯ ಗುಣಗಳು ನಿಲ್ಲುತ್ತವೆ. ಹಸಿವು ಬದುಕಿಸುತ್ತದೆ ವೇದನೆಯೊಂದಿಗೆ ಸಾಂಸ್ಕೃತಿಕ ಅಭಿವ್ಯಕ್ತಿಯೊಂದಿಗೆ. ಈ ಗಿಡ ಮರಗಳ ಸಾವಿಗೆ ಮರುಗದ ಮನುಷ್ಯ,ಪಶು-ಪಕ್ಷಿಗಳ ಹಾಹಾಕಾರವ ಕಂಡು ಗೊಣಗದ ಈ ನರಜಂತು-ಅಸ್ತಿತ್ವಕ್ಕೆ ಧಕ್ಕೆ ಬಂದಲ್ಲಿ ಜೈಕಾರದ ರೋಗಿಷ್ಟ ಚಳುವಳಿಗೆ ಧುಮುಕುತ್ತಾನೆ. ಮಾನವೀಯತೆಗಳ ಹೆಸರಲ್ಲಿ ದಯಾವಂತಿಕೆಯನ್ನು ಬಲಿಕೊಟ್ಟಿದ್ದಾನೆ. ಪ್ರಚಾರಪ್ರಿಯತೆ ಏನನ್ನೂ ಮಾಡಿಸಬಲ್ಲುದು ಎಂದು ಗೊತ್ತಿದ್ದವನೆ ಕ್ಷುಲ್ಲಕ ಆಕಾಂಕ್ಷೆಗಳ ಬೆನ್ನು ಬಿದ್ದು ಪ್ರವಾದಿಯಾಗಲು ಹಂಬಲಿಸುತ್ತಿದ್ದಾನೆ, ಗೊತ್ತಾಗಬೇಕಿವನಿಗೆ ಬರದ ರುಚಿ. ಅಧ್ವರ್ಯರು ಯಜ್ಞ ಮಾಡಲು ಮುಂದಾಗುತ್ತಾರೆ ಈ ಜಗತ್ತಿನ ಒಳಿತಿನ ನೆಪ ಹೇಳಿಕೊಂಡು,ಗೆಲುವಿನ ಪುಂಗಿ ಊದಿಕೊಂಡು. ಬಣ್ಣದ ಗುಬ್ಯಾರು ಮಳೆರಾಜ ಹಾಡು ಹಾಡಿದವ ಕಸುಬು ಬಲ್ಲವ,ಮಾನವೀಯತೆಯ ಬಯಸುವವ,ಮಾನ ಮುಚ್ಚಲು ನೇಯ್ಗೆಯ ಕಾಯಕದಲ್ಲಿ ತೊಡಗಿಕೊಂಡವ,ಆಧುನಿಕ ನಾಗರೀಕತೆಯ ಮುಖವಾಡದಿಂದ ದೂರ ಉಳಿದು ಸೂಕ್ಷ್ಮವಾಗಿ ಗಮನಿಸಿದವ, ಬದುಕು ತುಂಡಿಲ್ಲದ ಏಕೋಚಲನೆ ಎಂಬುದರ ಗಾಢ ಅರಿವುಳ್ಳವ. ಅಮಲು ಆಡಿಸುವ ಆಟದ ರೂಪ ವಿನಾಶದ್ದು ಎಂಬುದು ತಿಳಿದೂ ಅದರ ಸಂಗಡ ಹೊಂದಾಣಿಕೆ ಮಾಡಿಕೊಂಡು ಹಾಗಹಾಗೇ ಉಳಿದುಬಿಡುವ ಮುಗುಮ್ಮಾದ ಸಜ್ಜನಿಕೆ,ಹಕ್ಕನ್ನು ಕಸಿದುಕೊಳ್ಳುವ ವೇಷಾಂತರದ ಹೂಡಿಕೆಗಳೆಲ್ಲಕ್ಕೂ ಅರ್ಥ ಬರಬೇಕೆಂದರೆ ಮನಸ್ಸುಗಳ ಮಹಾ ಪ್ರಳಯ ಆಗಬೇಕು. ಅರವಸು ಗೆದ್ದರೂ ಗೆಲುವು ತಂದುಕೊಟ್ಟವ ನಾನೆಂದು ಆಟದ ಕೊನೆಗೆ ಬರುವ ಇಂದ್ರ ಹೇಳುವುದಾದರೂ ಏನು ‘ತಥಾಸ್ತು’ ಎಂಬ ಆಶಿರ್ವಾದ ಮಾತ್ರ….
ಅಪ್ಪ ಆಯಗಾರನಾದ್ದರಿಂದ ಆತ ಬರ ಎದುರಿಸಲು ಸಿದ್ಧಗೊಳ್ಳುತ್ತಿದ್ದ ಬಗೆಯನ್ನ ಕುತೂಹಲಕಾರಿಯಾಗಿ ವಿವರಿಸುತ್ತಾನೆ.ಒಕ್ಕಲಗೇರಿ ಮಂದಿಯ ಮುಂದೆ ತಮ್ಮ ಹಸಿವು ಏನೂ ಅಲ್ಲ, ಅದೊಂದು ಶಾಪವೆಂದು ಹೇಳುತ್ತಾನೆ. ಆತನ ಜೀವಿತಾವಧಿಯಲ್ಲಿ ಉಂಡ ಬರಗಾಲದ ಕೇಡನ್ನು ವಿವರಿಸುವಾಗ ಬೇಲಿಯೊಳಗಿನ ಅಸ್ಪೃಷ್ಯರಾದ ನಾವು ಸಾಲಗಾರರಾಗಿ ಮಾತ್ರ ಬದುಕುಳಿಯುತ್ತೇವೆಂದು ಮತ್ತು ಮಕ್ಕಳಾದಿಯಾಗಿ ಆ ವಜ್ಜೆಯ ಸಾಲ ತೀರಿಸಲು ಜೀತ ನಿಲ್ಲುವ ಅನಿವಾರ್ಯತೆಗೆ ಬಲಿಯಾಗುತ್ತೇವೆಂದು ಹೇಳುತ್ತಾನೆ.ಆದರೂ ಬರಗಾಲ ಬದುಕುವ ಹಂಚಿಕೆ ಕಲಿಸುತ್ತದೆಂದು ನಂಬುತ್ತಾನೆ. ಈ ತತ್ವವನ್ನ ಬೇಸಿಗೆಯಲ್ಲಿ ಚಿಗುರುವ ಬೇವಿನ ಮರದಿಂದ ಕಲಿತದ್ದು ಎನ್ನತ್ತಾನೆ.
ಕಾರ್ನಾಡರ ‘ಅಗ್ನಿ ಮತ್ತು ಮಳೆ’ ನಾಟಕ ತಪ್ಪದ ಬರಗಾಲದಲ್ಲಿ ಮತ್ತೆಮತ್ತೆ ನೆನಪಾಗುತ್ತದೆ. ಏಳು ವರ್ಷದ ಪರ್ಜನ್ಯ ಸತ್ರಕ್ಕೆ ಎಷ್ಟೊಂದು ಜೀವಗಳು ಬಲಿಯಾದವು? ಮರಳಿ ಪಡೆಯಬೇಕಾದರೆ ಇತಿಹಾಸ ಕಾಡುತ್ತದೆ. ನೆಚ್ಚಿಕೊಂಡ ನಿತ್ತಿಲೆಯೂ ಅಂಕದ ಹಿಂದೆ ಸರಿದಾದ ಮೇಲೆ ಮತ್ತೆ ಬರುವುದು ಬೇಡ ಅನ್ನಿಸುವುದು, ಅರವಸು ತನ್ನತನ ಬಿಟ್ಟ ಬ್ರಹ್ಮರಾಕ್ಷಸನಿಗೆ ಮೋಕ್ಷ ಕೊಡಿಸಲು ಮುಂದಾಗುವುದು. ಸಮೃದ್ಧಿಗಾಗಿ, ಮಳೆಗಾಗಿ ಸುಟ್ಟುಕೊಂಡ ಅಗ್ನಿಯ ರೂಪಗಳೆಷ್ಟು-ರೈಭ್ಯ ಮಹರ್ಷಿ, ಯವಕ್ರೀತ, ಅಂಧಕ, ನಿತ್ತಿಲೆ… ಹೌದು ಮಳೆ ಬಾರದೆ ಇರಲಿ. ಅಗ್ನಿಯಲ್ಲಿ ಸುಟ್ಟು ಹೋಗಲಿ ಜಗತ್ತಿಗೆ ಯಾವ ನಷ್ಟವೂ ಆಗುವುದಿಲ್ಲ. ಬದುಕಿಕೊಳ್ಳುವುದು ಬಾಳಿಯೇ ಬಾಳುತ್ತದೆ.

ಅವೇಳೆಯಲ್ಲಿ


ಇವತ್ತಿನ ರಂಗಭೂಮಿಯ ಚಲನೆ ಸಣ್ಣ-ಪುಟ್ಟ ತಂಡಗಳಲ್ಲಿ ಕಾಣಿಸುತ್ತಿದೆ. ಒಂದು ಕಾಲದಲ್ಲಿ ಆನೆ ಒಂಟೆ ಹಸು ನವಿಲುಗಳೊಂದಿಗೆ ಭಾರಿ ರಂಗಸಜ್ಜಿಕೆಯ ಆವರಣದಲ್ಲಿ ಪ್ರದರ್ಶನಗೊಳ್ಳುತ್ತಿದ್ದ ನಾಟಕಗಳನ್ನು ಮತ್ತು ರಂಗತಂತ್ರಗಳಲ್ಲಿ ಮಿಂದ ನಾಟಕೀಯತೆಯನ್ನ ಕಂಡವರು ಇವತ್ತಿನ  ಈ ಸರಳತೆಯನ್ನ ಕಂಡು ಬೆರಗಾಗಿದ್ದಾರೆ. ಎರಡೋ ಮೂರು ಬೆಳಕಿನ ಸಾಧನ, ಬೆಕೆನಿಸಿದಷ್ಟು ಪರಿಕರ, ಅಗತ್ಯವೆಷ್ಠೋ ಅಷ್ಟೆ ಬಳಸಿಕೊಳ್ಳುವ ರಂಗ ವಿನ್ಯಾಸದ ಹೊರತಾಗಿ ಮತ್ತೇನನ್ನು ತರಲಾರದೆ, ಸಣ್ಣಕತೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಈ ಗುಂಪುಗಳ ಚಾಕಚಕ್ಯತೆ ಬಹು ಜನರನ್ನು ತಲುಪುತ್ತಿವೆ ಎನ್ನುವುದರಲ್ಲಿ ಅತಿಶಯೋಕ್ತಿ ಇಲ್ಲ. ಆದರೆ, ಈ ಸಾಧ್ಯತೆಯನ್ನ ಹೆಚ್ಚಾಗಿ ಅವಲಂಬಿಸುತ್ತಿರುವ ಯುವಕರು ಕಲಾಮಾರ್ಗದ ಯಾವ ದಿಕ್ಕಿನಲ್ಲಿದ್ದಾರೆನ್ನುವುದ ಮುಖ್ಯಪ್ರಶ್ನೆಯಾಗಿದೆ. ವರ್ಷವೊಂದರಲ್ಲಿ ನಾಲ್ಕಾರು ತಂಡಗಳು ಒಟ್ಟೊಟ್ಟಾಗಿ ಪ್ರದರ್ಶನಕ್ಕೆ ಸಜ್ಜಾಗಿ ಪ್ರವಾಸ ಮಾಡುವುದು ಕಂಡರೆ ವೃತ್ತಿಯ ವ್ಯವಧಾನ ಗಲಿಬಿಲಿಗೊಂಡದ್ದು ಖಾತ್ರಿಯಾಗುತ್ತದೆ. ಚುಟುಕು ಸಮಯದಲ್ಲಿ ಚುರುಕಾಗಿ ಜನರನ್ನು ತಲುಪುವ ಹಂಬಲ ರಂಗಭೂಮಿಗೆ ಬಂದಿರುವುದೆ ವೃತ್ತಿಯನ್ನು ಅನುಮಾನಿಸಲು ಕಾರಣ ಎನ್ನಬಹುದು. ಅಷ್ಟು ಸುಲಭದಲ್ಲಿ ನಾಟಕ ದೊರೆಯುವಂತಾದಾಗ ಶಾಸ್ತ್ರ ರಿತ್ಯಾ ಅಭ್ಯಸಿಸುವ ಮತ್ತು ಪ್ರದರ್ಶನ ಗುಣಮಟ್ಟ ಕಾಯ್ದುಕೊಳ್ಳುವ ತಂಡಗಳ ಬೇಡಿಕೆ ತನ್ನ ತಾನೆ ಕಡಿಮೆ ಆಗುತ್ತದೆ. ಆದರೆ ಈ ದೊಡ್ಡ ರೆಪರ್ಟರಿಗಳು ಸಣ್ಣ-ಪುಟ್ಟ ತಂಡಗಳಂತೆ ದಿಢಿರ ಬದಲಾಗುವ ಅವಶ್ಯಕತೆ ಬರುವುದಿಲ್ಲ. ಯಾಕಂದರೆ ಕಲಾತ್ಮಕತೆಯ ಮೌಲ್ಯಗಳು ಸರಳತೆಯೊಂದಿಗಿದ್ದರೂ ಕ್ರಿಯಾಶಿಲವಾಗಿರುತ್ತವೆ. ಆ ಸೃಜನತೆಯ ಹುಡುಕಾಟ ದೇಶಿಯ ಕಲೆಗಳೊಂದಿಗೆ ಮಾಡಿಕೊಳ್ಳುವ ಅನುಸಂಧಾನದಿಂದ ಸಿಕ್ಕುತ್ತದೆ.ಆ ನಿಟ್ಟಿನಲ್ಲಿ ಕೆಲಸ ಮಾಡುವ ಕಸುಬುಗಾರಿಕೆಯನ್ನ ನುಂಗುತ್ತಿರುವ ಜಾಗತಿಕ ಸಂಸ್ಕರಣದ ಜೊತೆ ಸಂಘಟನ ಶಕ್ತಿಯಾದ ನಾಟಕ ಹೊಡೆದಾಡುತ್ತಿರುತ್ತದೆ. ಹಾಗಾಗಿ ಈ ಚುಟುಕು ತಂಡಗಳು ರಂಜನೋದ್ಯಮದ ಎಲ್ಲ ಗುಣಗಳನ್ನು ಅಳವಡಿಸಿಕೊಂಡಿವೆ ಹೊರತು ವೃತ್ತಿನಿಷ್ಠ ಕಲಾತ್ಮಕತೆಯನ್ನಲ್ಲ.

ಶ್ರೀರಂಗರು ಕತ್ತಲೆ ಬೆಳಕು ನಾಟಕ ಬರೆಯುವಾಗ ಕನ್ನಡ ರಂಗಭೂಮಿಯ ಒಂದು ಮಜಲಾಗಿದ್ದ ರಂಜನೆ, ರಸಾಯಣಗಳೊಂದಿಗೆ ವೈಭವಯುತವಾಗಿ ಮೆರೆಯುತ್ತಿದ್ದ ಕಂಪನಿ ನಾಟಕಗಳು ಹೆಚ್ಚು ಪ್ರಸಾರದಲ್ಲಿ ಇದ್ದವು. ಸಮಾಜವನ್ನು ಕಲೆ ಗಂಭಿರವಾಗಿ ಪರಿಗಣಿಸದಿದ್ದ ಕಾಲದಲ್ಲಿ ಮಾನವೀಯತೆ, ನೈತಿಕತೆಗಿಂತ ಮನಸೋಲ್ಲಾಸದ ಮತ್ತು ಮೈ ನವಿರೇಳಿಸುವ ಕಲೆಗಳ ಆರಾಧನೆಯ ಜಪ ನಿರಂತರವಾಗಿ ನಡೆಯುತ್ತದೆ. ರಂಗಭೂಮಿಯ ಜಾಗತಿಕ ಇತಿಹಾಸವೂ ಆಶ್ರಯದ ಅವಶ್ಯಕತೆಗೆ ತಕ್ಕಂತೆ ತನ್ನ ದಿಕ್ಕನ್ನು ಬದಲಿಸಿರುವುದು ಕಾಣುತ್ತದೆ. ಒಂದು ಅಭಿವ್ಯಕ್ತಿ ಹೀಗೆ ಬಲವುಳ್ಳವರ ನೆರಳಾಗಿ, ತನ್ನ ಸಮಾಜಮುಖಿ ಆಶೋತ್ತರಗಳನ್ನು ಕೆಲವೆ ಜನರ ಹಿತಾಸಕ್ತಿಗೆ ಅನ್ವಯಿಸಿಕೊಂಡು ಬದುಕುಳಿಯುವ ದರ್ದು ಯಾಕಾಗಿ ಎದುರಾಯಿತು ಅನ್ನುವುದು ಸಂಶೋಧನೆಯ ವಸ್ತುವಾಗಿದೆ. ಅದನ್ನು ಎಷ್ಟು ಕೆಣಕಿದರೂ ದಕ್ಕುವುದು ಕಲಾಕಾರನ ಸೋತ ಬದುಕು ಮಾತ್ರ… ಹಾಗೆ ಸೋಲನ್ನೊಪ್ಪಿಕೊಂಡವನು ಧರ್ಮದೊಂದಿಗೆ,ಪಟ್ಟಭದ್ರರ ಹಿತಾಸಕ್ತಿಯೊಂದಿಗೆ ತಾನು ತನ್ನ ಅಸ್ತಿತ್ವಕ್ಕಾಗಿ ಹೊಂದಾಣಿಕೆ ಮಾಡಿಕೊಂಡಿರುತ್ತಾನೆ. ಹಾಗೇಯೇ ಪಾಪ! ಎನ್ನುವ ಜನಮಾನಸದ ಕರುಣೆಯ ಉಸಿರನ್ನ ಸೊಲ್ಲಾಗಿಸಿಕೊಂಡು ಕ್ಷುದ್ರನಾಗಿ ಬದುಕಿಕೊಳ್ಳುವ ವಿಚಿತ್ರ ಹಪಹಪಿಯ ಲಾಬಿಗಳಲ್ಲಿ ಮುಳುಗೇಳುತ್ತಾನೆ. ಕಲಾವಿದನ ಚರಿತ್ರೆ ಏನೆ ಇರಲಿ ಸಹೃದಯನ ಬೇಡಿಕೆ ಕೊಂಚ ದಿಗಿಲಾಗಿಸುತ್ತದೆ. ಯಾಕೆಂದರೆ ಇವತ್ತು ಕನ್ನಡ ರಂಗಭೂಮಿಯ ಒಟ್ಟೋಟದ ನಡೆಯನ್ನ ಗಮನಿಸುವುದಾದರೆ ಜನಪ್ರಿಯ ಕಲೋಪಾಸಕ ಪ್ರೇಕ್ಷಕ ಸಮೂಹ ದೊಡ್ಡದಾಗಿ ಸಿಗುತ್ತದೆ. ಅತಿ ರಂಜನೀಯವಾಗಿರುವ ಸಣ್ಣಕತೆಗಳ ಪ್ರಸ್ತುತಿಯನ್ನ ಮತ್ತು ಸಿನಿಮೀಯ ತೆರನಾದ ನಾಟಕೀಯತೆಯನ್ನ ಬಯಸುತ್ತಿರುವುದು ಕಳೆದೆರಡು ವರ್ಷಗಳ ನಾಟಕ ರಂಗವನ್ನು ಹತ್ತಿರದಿಂದ ಗಮನಿಸಿದವರು ಗುರುತಿಸಬಲ್ಲರು.         ಅತಿ ರಂಜಿತ ಮಾದರಿಯಲ್ಲಿ ಪ್ರದರ್ಶಿತವಾಗುವ ಈ ಸಣ್ಣ ಕತೆ ನಿರೂಪಣಾ ಶೈಲಿ ಅಂಬೋದು ಬರಿ ಜನಪ್ರಿಯ ಗೀಳಿನ ವ್ಯಾಪಾರ ಬುದ್ಧಿಯ ಕಸಬು ಮಾತ್ರ ಆಗದೆ, ಸಾಂಸ್ಕ್ರತಿಕ ಚಹರೆಯಲ್ಲಿ ಕ್ರಾಂತಿಕಾರಕ ಮನೋಭಾವದ ಸತ್ಯವನ್ನು ಕಂಡುಕೊಳ್ಲಬೇಕಾದ ಅನಿವಾರ್ಯತೆ ಇರುತ್ತದೆ. ಅದೊಂದು ಶೈಲಿಯಂದು ಒಪ್ಪಿಕೊಂಡು ಅದಕ್ಕೆ ಒಗ್ಗಿಕೊಂಡಿರುವ ಪ್ರೇಕ್ಷಕರು ಸರಳತೆಯ ಸಾಧ್ಯತೆಯನ್ನು ಕೇಳುವುದಿಲ್ಲ, ಅಂದ ಮಾತ್ರಕ್ಕೆ ಕತೆಯೊಳಗಿನ ಪ್ರತಿಮೆಯನ್ನ ಬೇಕಾಬಿಟ್ಟಿ ಒಡೆದು ಮರುಸೃಷ್ಟಿಸುವಲ್ಲಿ ಎಚ್ಚರಿಕೆ ವಹಿಸಬೇಕಾದ್ದು ಅಗತ್ಯವಾಗಿರುತ್ತದೆ. ಅಂಥ ಜವಾಬ್ದಾರಿಗಳಿಂದ ನುಣುಚಿಕೊಳ್ಳುವ ವ್ಯಾಪಾರಿ ಮನೋಭಾವ ಕತೆಯ ಕಲಾತ್ಮಕತೆಯನ್ನು ಕೊಂದುಹಾಕುತ್ತದೆ. ಆಗ ತಂಡದ ಶಿಸ್ತು ಕತೆ ಆಯ್ಕೆಯಿಂದ ಹಿಡಿದು ಆರಂಭವಾಗಬೇಕು. ಕೆಲವರು ಸಮಾನ ಮನಸ್ಕರು ಒಣ ಸಿದ್ಧಾಂತಗಳ ಬೊಂಬಡಾ ಹೊಡೆದು ತಾವು ರಂಗಭೂಮಿಗೆ ಬದ್ಧರಾಗಿರುವುವೆಂದು ಹೇಳಿಕೊಳ್ಳುತ್ತ ಹೊಂದಾಣಿಕೆಗೆ ತೊಡಗಿ ಕಲಾಮಾರ್ಗದ ನಿಖರತೆಯನ್ನು ಹಾಳುಗೆಡುವುತ್ತಿದ್ದಾರೆನ್ನುವುದು ಕೆಲ ಹಿರಿಯ ರಂಗಕರ್ಮಿಗಳ ಗೊಣಗಾಟವಾಗಿದೆ. ಹೌದು ಅವರು ಆ ಕಾಲದ ಸಂಗಡ ಹೊಡೆದಾದಾಡಿದ್ದರು, ಈಗ ಇವರು ಈ ಕಾಲದ ಸಂಗಡ ತಮ್ಮ ಅಸ್ತಿತ್ವ ಹುಡುಕಿಕೊಳ್ಳುತ್ತಿದ್ದಾರೆ.

 ಅಮಾಸ

ಅವೇಳೆಯಲ್ಲಿ


ಅವತ್ತು ನನ್ನ ಮದುವೆ ಇದೆ ಅಂದಳಾಕೆ, ನಾನು ನಂಬಲಿಲ್ಲವಾದರೂ ಆ ದಿನ ಬರದೇ ಇರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದೆ.

ಸ್ನೇಹಿತನ ತಂದೆ ಫೋನ ಮಾಡಿ ಗೋಳಿಟ್ಟು ಅಳುವುದನ್ನು ನಿಲ್ಲಿಸಿದ್ದರು. ಆ ದಿನ ನಾನು ಮದುವೆ ಮಂಟಪ ತಲುಪಿದಾಗ ಬಿರುಬಿಸಿಲು ಹೊಡೆಯುತ್ತಿತ್ತು. ಅಲ್ಲಿ ನೆರೆದವರೆಲ್ಲರೂ ನಾನು ಬಂದಿರುವುದು ಅಪಾಯ ಎಂದುಕೊಂಡಿದ್ದ ಕಾರಣ ನಾನು ಹೋಗುತ್ತಿದ್ದ ಹಾಗೇನೆ ತಿರಸ್ಕ್ರತಗಂಡವನಾಗಿ ಹೊರಗುಳಿದಿದ್ದೆ. ಆಕೆಯೂ ನನ್ನ ಮಾತಾಡಿಸಲಿಲ್ಲ, ಸ್ನೇಹಿತನ ಎದೆಯೊಳಗೂ ಅದ್ಯಾವದೋ ಬೆಂಕಿ ಕುದಿಯುತ್ತಿತ್ತು. ನನ್ನೊಂದಿಗೆ ಮಾತಾಡುವಾಗಲೆಲ್ಲ ನನ್ನ ಮಗ ಬದಲಾಗೋದಾದರೆ ನೀನು ತ್ಯಾಗಮಯಿ ಆಗಬೇಕು ಎಂದೆಲ್ಲ ಪೂಸಿ ಹೊಡೆದಿದ್ದ ಆ ಮುದುಕ ಅವಸರ ಮಾಡುತ್ತಿದ್ದ. ಹ್ಞಾ ಹ್ಞೂ ಅನ್ನೋದರೊಳಗೆ ತಾಳಿ ಬಿಗಿದಾಯ್ತು! ನೋಡಬೇಕಿತ್ತು ಆ ಅವಸರದ ದಿನವನ್ನ… ನನ್ನ ಹೆಂಡತಿ ಕೇಳುತ್ತಾಳೆ ಮದುವೆಗೆ ಮುಂಚೆ ಯಾವ ಹುಡುಗಿಯರ ಸ್ನೇಹ ಇದ್ದಿರಲಿಲ್ಲವಾ ಅಂತ. ನಿನಗೇ…? ನಾನು ಕೇಳುವ ಪ್ರಶ್ನೆಗೆ ಕಣ್ಣಕಣ್ಣ ಬಿಡುತ್ತಾಳೆ. ಹೌದು ನಾನು ಮಾತ್ರ ನಂಬಿಕಸ್ಥನಲ್ಲ ಅನ್ನಿಸುವಾಗ ಆ ಅಗದೀ ಹತ್ತಿರದ ಸ್ನೇಹಿತರಿಬ್ಬರು ನೆನಪಾಗುತ್ತಾರೆ. ಅವಳು ತಟ್ಟಿ ಮಲಗಿಸಿದ ಕನಸಿನ ಲೋಕ ನೆನಪಾಗುತ್ತದೆ. ಅವಳ ಮಗನ ಮುಖದಲ್ಲಿ ನನ್ನ ಹೋಲಿಕೆ ಕಾಣುವಾಗಂತೂ ಆ ಮುದುಕನಿಗೆ ಯಾವ ಸಂಕೋಚವೂ ಆಗದಿರುವ ಬಗ್ಗೆ ಬೇಸರವಾಗುತ್ತದೆ. ಅವೇಳೆಯಲ್ಲಿ ಹೆಂಡತಿ ಇಲ್ಲದಿರುವುದನ್ನು ಖಾತ್ರಿ ಮಾಡಿಕೊಂಡು ಆ ಫೋಟೋಗಳ ನೋಡುತ್ತೇನೆ, ಸಿಗಲಾರದ ಜಾಗದೊಳಗೆ ಮುಚ್ಚಿಟ್ಟು ಇತಿಹಾಸ ಹೂತಿಟ್ಟ ಹಾಗೆ, ಅದರ ಮೇಲೆ ಕುಳಿತು ಕತೆ ಬರೆಯುತ್ತೇನೆ. ನವಿರಾದ ಗಲ್ಲ, ಮೊದಲ ಒಲವಿನ ಓಲೆ, ಕಣ್ಸಣ್ಣೆಯ ಮಾತು, ಐಸ್ಕ್ರೀಮ ತಿಂದ ಕ್ಷಣ, ಒಂಟಿತನದಲ್ಲು ಆ ಮುಖ ನೆನಪು ಮಾಡಿಕೊಂಡು ಚಿವುಟುವ ತುಂಟುತನ, ಒಂದೆರಡು ದಿನದ ಮಟ್ಟಿಗೆ ಮಾಯವಾಗಿ ರಮ್ಯಸ್ಥಳದ ಅಜ್ಞಾತ ಸ್ಥಳಗಳಲ್ಲಿ ಕುಳಿತು ಧೇನಿಸಿದ ಬದುಕು… ಹೀಗೆ ಎಲ್ಲ ಕಾಡುವ ಹೊತ್ತಿಗೆ ಕಟ್ಟಿಕೊಂಡಾಕೆ ಬರುತ್ತಾಳೆ. ಛೇ! ಮರೆಯುವುದು ಕಷ್ಟ.