ಜಾತಿಯ ಬೆಂಕಿಯನ್ನು ನಂದಿಸುವ ತಂತ್ರ – ಜಾತಿ ಏಕೆ, ಬೇಕೆ ಮಂತ್ರ


ಜಾತಿ ಏಕೆ? ಬೇಕೆ ? ಸಂವಾದ ಮುಗಿಯುತ್ತ ಬಂತು. ಸಾರ್ವಜನಿಕವಾದ ಈ ಸಂವಾದದ ಉದ್ಧೇಶ ನಮ್ಮ ಜಾತಿ ಅನುಭವಗಳಿಗಿಂತ ಭಿನ್ನವಾದ ಅನುಭವವೊಂದನ್ನು ನಮ್ಮ ಮುಂದಿನ ತಲೆಮಾರಿಗೆ ನೀಡಬೇಕಾದರೆ ನಾವೇನು ಮಾಡಬಹುದು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಅಗತ್ಯವಿದೆ ಎಂದು ಹೇಳಿದ್ದಾರೆ. ಕೌಂಟ್ ಡೌನ್ ಆರಂಭವೂ ಆಗಿದೆಯಂತೆ. ಜಾತಿ ವಿರುದ್ಧ ಶರಣ ಚಳುವಳಿ ಅಲ್ಲವೋ ಹೌದೋ ಅನ್ನೋದಕ್ಕೆ ವೇದಿಕೆ ಒದಗಿಸಿಕೊಟ್ಟ ಪ್ರಜಾವಾಣಿ ಪತ್ರಿಕೆಯಲ್ಲಿಯೇ ಇಂಥದ್ದೊಂದು ಅಭಿಪ್ರಾಯ ಸಂಗ್ರಹಿಸುವುದು ನಡೆಯುತ್ತಿದೆ. ಅದು ಆರಂಭವಾದಾಗಿನಿಂದ ಆ ಚರ್ಚೆ ಯಾವದೇ ರೀತಿಯಲ್ಲೂ ಭಿನ್ನ ಹಾದಿಯನ್ನೇನೂ ಹಿಡಿಯಲಿಲ್ಲ.
ಸಾರ್ವಜನಿಕವಾಗಿ ಸಮಾಮಾಜಿಕ, ರಾಜಕೀಯ, ಸಾಂಸ್ಕೃತಿಕ ವಲಯಗಳಲ್ಲಿ ಜಾತಿಯು ಹೇಗೆಲ್ಲ ಕಾಣಬರುತ್ತದೆ ಎಂಬುದರ ಬಗ್ಗೆ ಅಭಿಪ್ರಾಯಗಳು ಬಂದವು. ಮಾನಸಿಕವಾಗಿ ಜಾತಿಯ ಅಂಟು ಜಾಢ್ಯ ಯಾವ ಬಗೆಯಲ್ಲಿದೆ ? ಜಾತಿ ಆಚರಣೆಗಳು ಮನಸ್ಸಿನ ಮೂಲೆಯಲ್ಲಿ ಹೇಗೆಲ್ಲ ಜಾಗೃತವಾಗಿವೆ ? ಮನೆಯ ಸುತ್ತಲೂ ಕಟ್ಟಿಕೊಂಡಿರುವ ಕಂಪೌಂಡಗಳು ಕೂಡ ಜಾತಿಯ ಸಂಕುಚಿತ ಮನಃಸ್ಥಿತಿಯನ್ನು ಹೇಳುತ್ತವೆ. ದೇವಸ್ಥಾನಗಳಲ್ಲಿ ಜಾತಿ ಹೇಗಿದೆಯೋ ಹಾಗೆ ಇದೆ. ಮೊನ್ನೆಯಷ್ಟೆ ದಲಿತನೊಬ್ಬ ದೇವಸ್ಥಾನ ಪ್ರವೇಶಿಸಿದ ಕಾರಣಕ್ಕೆ ಅವನ ಮೇಲೆ ಹಲ್ಲೆಯಾಯ್ತು. ಅವನ ತಾಯಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಯ್ತು. ಕೊಲೆಯಾಯ್ತು. ಈ ಸಂವಾದದ ನಿರೂಪಕರು ಮುಂದಿನ ತಲೆಮಾರಿಗೆ ಈ ಜಾತಿಯ ಅನುಭವವನ್ನು ಹೇಗೆ ಭಿನ್ನವಾಗಿ ಕೊಡಬಲ್ಲರು…? ಈ ಇಡೀ ಕಾರ್ಯಕ್ರಮ ಜಾತಿ ಕುರಿತಾದ ಆಕ್ರೋಶ ಮತ್ತು ಜಾತಿ ಕಾರಣದಿಂದಲೆ ಜನ ಸಂಘಟಿತರಾಗಿ ಬೀದಿಗಿಳಿದು ಹೋರಾಡುವ ಸಂದರ್ಭ ಬರುವ ಮೊದಲೇ ತಾತ್ಕಾಲಿಕ ಶಮನದ ಹಾದಿ ತೋರಿಸಿ ದಿಕ್ಕು ತಪ್ಪಿಸುವಂತೆ ಕಾಣುತ್ತಿದೆ. ಈಗಲೂ ಖಾಸಗಿ ಕಂಪನಿಗಳಲ್ಲಿ ಕೆಲವು ಮುಖ್ಯ ಸಾಮಾಜಿಕ ತಾಣಗಳಲ್ಲಿ ಬೆನ್ನ ಮೇಲೆ ಕೈಯಾಡಿಸಿ ದಾರವೂ ಶಿವದಾರವೂ ಇರುವುದನ್ನು ಖಾತ್ರಿಮಾಡಿಕೊಳ್ಳುವ ಜಾತಿ ಸೋಗಲಾಡಿಗಳನ್ನು ಕೆರ ತಗೊಂಡು ಹೊಡೆಯಬೇಕು. ಅನ್ನುತ್ತಿದ್ದ ಮರಿಯಮ್ಮನಹಳ್ಳಿ ಸರದಾರ ಎಂಬ ಹುಡುಗ ಈಗ ಜಾತಿ ಪ್ರಶ್ನೆಯೇ ಇಲ್ಲ ಸರ್ ಅಂದ. ಜಾತಿ ಕೇಳುವ ಕಾಲ ದೂರ ಹೋಯ್ತು ಅನ್ನುತ್ತಿದ್ದ.
ಜಾತಿಯನ್ನು ನಾವು ಬಿಟ್ಟರೂ ಸಂಪ್ರದಾಯವನ್ನು ಬಿಡೋಕ್ಕಾಗಲ್ಲ ನೋಡಿ ಅನ್ನುವ ಎಷ್ಟು ಜನರಿಲ್ಲ…? ಮಹಾನ್ ಡ್ರಮ್ಯಾಟಿಕ್ ಸಮಾಜವಾದಿ ಬುದ್ದಿಜೀವಿಯ ಹೆಂಡತಿಯೊಬ್ಬಳು ತನ್ನ ಮಗನಿಗೆ ತಮ್ಮದೆ ಜಾತಿ ಸೊಸೆ ಸಿಕ್ಕಳಲ್ಲ ಎಂದು ನಿಟ್ಟುಸುರು ಬಿಡುತ್ತಾಳೆ. ಅವರ ಮನೆಯ ಪಕ್ಕದಲ್ಲಿರುವ ಅಂಗನವಾಡಿಯಲ್ಲಿ ಶಾಲೆಗಳ ಬಿಸಿಊಟ ತಯಾರಿಸುವಲ್ಲಿ ಒಬ್ಬಳೇ ಒಬ್ಬ ದಲಿತ ಹೆಣ್ನುಮಕ್ಕಳನ್ನು ಸೇರಲು ಬಿಡುವುದಿಲ್ಲ. ಇದನ್ನೆಲ್ಲ ಸಾರ್ವಜನಿಕವಾಗಿ ಹೇಳಿದಾಗ ನನ್ನ ಆಕ್ರೋಶ ಕೊಂಚ ತಣ್ಣಗಾಗಿ ಇನ್ನೊಂದಷ್ಟು ದಿವಸ ನಾನು ಜಾತಿ ಇಲ್ಲವೇ ಇಲ್ಲ ಎಂಬ ಭ್ರಮೆಯಲ್ಲಿ ಬದುಕುತ್ತೇನೆ. ಇಷ್ಟನ್ನು ಮಾತ್ರ ಹೇಳುವ ೆಷ್ಟೊ ಜನ ಸ್ನೇಹಿತರು ಅದೊಂದು ಮಹತ್ವದ ಯೋಜನೆಯೆಂದೇ ಭಾವಿಸಿರುವಂತಿದೆ. ಇದೆಲ್ಲದರ ಹಿಂದೆ ಏನನ್ನೋ ಸಾಧಿಸುವ ಘನವಾದ ಹುನ್ನಾರವಿದೆ. ಸಾರ್ವಜನಿಕವಾಗಿ ಒಂದು ಅಭಿಪ್ರಾಯ ರೂಪಿಸುವ ಆಲೋಚನೆ ಇದ್ದಂತಿದೆ. ಜಾತಿ ಎಂಬುದು ಈಗ ಇಲ್ಲವೇ ಇಲ್ಲ ಅನ್ನುವುದಕಿಂತ ಜಾತಿ ಇದೆ ಆದರೆ ಅದು ಈಗ ಅಷ್ಟಾಗಿ ಬಳಕೆಯಲ್ಲಿ ಇಲ್ಲ ಅನ್ನುವ ಭ್ರಮೆ ಹುಟ್ಟಿಸುವ ಕೆಲಸವನ್ನು ಜಾತಿ ಸಂವಾದ ಮಾಡುತ್ತಿದೆ. ಇದು ನನ್ನ ವೈಯಕ್ತಿಕವಾದ ಅಭಿಪ್ರಾಯ.

Advertisements