ನಾಗರಿಕ ಸಮಾಜದ ಚಿತ್ರ ವೈಚಿತ್ರ್ಯಗಳು.


ಚಿತ್ರ ಒಂದು…images
ಚುಮುಚುಮು ಬೆಳಗಾಗೆ ಜಗತ್ತಿನ ನಿಶ್ಯಕ್ತ ಸೋಂಬೇರಿತನ ಇವನಿಗೊಬ್ಬನಿಗೇ ಅಂಟಿಕೊಂಡಂತೆ ಮೈಮುದುಡಿ ಹಾಸಿಗೆಯಲ್ಲೇ ಕುಳಿತಿದ್ದಾನೆ. ಆತನ ಸಪೂರ ದೇಹದಲ್ಲಿ ರಕ್ತ-ಮಾಂಸಕ್ಕಿಂತ ಹೆಚ್ಚು ಮೂಳೆಗಳೇ ಕಾಣುತ್ತಿವೆ. ಈಗ ತಾನೆ ಎದ್ದು ಇನ್ನೂ ಕಣ್ಣೊರೆಸಿಕೊಳ್ಳುತ್ತಿರುವಾಗ ‘ಕೆಲಸಕ್ಕೆ ಬಾರಯ್ಯ’ ಎಂಬ ಕೂಗೊಂದು ಗಡಸಿಲ್ಲದಿದ್ದರೂ ಅಧಿಕಾರಯುತವಾಗಿ ಕೇಳಿ ಬರುತ್ತದೆ. ಧ್ವನಿ ಬರುವ ದಿಕ್ಕಿನತ್ತ ಕಣ್ಣಾಡಿಸಿದಾಗ ಕಂಡದ್ದು- ಬಿಳಿಪಂಚೆಯನ್ನ ಮೊಣಕಾಲು ಗಂಟಿಗೆ ಎತ್ತಿಕಟ್ಟಿದ್ದ, ಹಣೆತುಂಬ ಮೂರು ಗೆರೆಯ ಪಟ್ಟೆಕೊರೆದುಕೊಂಡಿದ್ದ ವ್ಯಕ್ತಿ ನಿಂತಿದ್ದಾನೆ. “ಬಂದೆ ನಡೀರಿ ಅಯ್ಯ” ಅನ್ನುತ್ತಲೆ ಒಳಮನೆಗೆ ಹೋಗಿ ಮುಖಕೆ ನೀರು ಚಿಮುಕಿಸಿಕೊಂಡು, ಹೆಂಡತಿ ಬೇಸಿಟ್ಟಿದ್ದ ಬಟ್ಟಲು ರಾಗಿಗಂಜಿ ಕುಡಿದು ಹೊರಟು ನಿಂತಾಗ, ಮನೆಕೆಲಸಕ್ಕೆ ಹೋಗಿ ಬಂದ ಹೆಂಡತಿ ಮನೆಗೆ ಅದು ಬೇಕು ಇದು ಬೇಕೆಂದು ಕಿರಿಕಿರಿ ವಟಗುಡತೊಡಗಿದ್ದಳು. ಒಡೆಯರ ಮನೆ ತೆಂಗಿನಕಾಯಿ ಸುಲಿದು ಬರತೀನಿ, ಬರುವಾಗ ಧಣಿ ದುಡ್ಡು ಕೊಟ್ರ ತರತೀನಿ ಅಂದವನೆ ಹೊರಟು ನಿಂತ…
ತೆಂಗಿನ ಕಾಯಿ ಸುಲಿಯಲು ಬರುವ ಈ ಅನಕ್ಷರಸ್ಥ ಕೂಲಿಯಾಳನ್ನ – ಉಚ್ಛ ಕುಲದ ಆ ಗರ್ವಿಷ್ಟೆ, ದ್ವಿತಿಯ ಪಿಯುಸಿ ಓದಿರುವ ಹೆಂಗಸು ಹೀನವಾಗಿ ನಡೆಸಿಕೊಳ್ಳುತ್ತಾಳೆ. ಆಕೆಯ ಮನೆಯ ದನಗಳು ಕುಡಿಯುವ ಕೊಳಕು ನೀರನ್ನು ಆತನ ಬಾಯಾರಿಕೆಗೆ ಕೊಡುತ್ತಾಳೆ. ಅದು ದನದ ತೊಟ್ಟಿಯ ನೀರೆಂಬುದು ಗೊತ್ತಿದ್ದರೂ ಆತ ಆ ನೀರನ್ನು ದಿಕ್ಕರಿಸಲಾರ. ಆ ಮೂಕ ಪ್ರಾಣಿಯಂತೆಯೇ ಮೌನವಹಿಸಿ ಬೊಗಸೆವೊಡ್ಡಿ ಅವ ನೀರು ಕುಡಿಯುತ್ತಾನೆ. ಆ ಮನೆಯ ಪಕ್ಕದಲ್ಲಿ ಬಾಡಿಗೆಗಿರುವ ದಲಿತ ಹೆಣ್ಣಮಗಳು ಇದು ತಪ್ಪು ಹೀಗಾದರೆ ಕೇಸ್ ಹಾಕ್ತೇವೆ ಅಂತ ಅವನ ಪರವಾಗಿ ಜಗಳಕ್ಕಿಳಿದಾಗ, ಅವನಿಗೆ ಇವಳ ಸಂಕಟ ಗೊತ್ತೇ ಆಗಲಿಲ್ಲ. ಆಕೆಗೆ ಮನೆ ಖಾಲಿ ಮಾಡುವ ಸೂಚನೆ ಸಿಗುತ್ತದೆ… ಆತ ತನ್ನಷ್ಟಕ್ಕೆ ತಾ, ತನ್ನ ಕೆಲಸ ನಿರ್ವಹಿಸಿ ಸಂಜೆಯಾಗುತ್ತಲೆ ಸೇರು ರಾಗಿ, ಒಂದಷ್ಟು ದುಡ್ಡು ತೆಗೆದುಕೊಂಡು ಹೊರಟುಬಿಡುತ್ತಾನೆ.
ಸ್ವಲ್ಪ ಹೊತ್ತಾದ ಮೇಲೆ ಅದೇ ಆಸಾಮಿ ಅವಳು ಮಾಡಿದ ಅಪಮಾನಕ್ಕೆ ನೊಂದುಕೊಂಡೋ, ಇಡೀ ದಿನ ಹಾರೆಗೆ ಒಂದೊಂದೇ ಕಾಯಿಯ ಸಿಪ್ಪೆಮಟ್ಟೆಯನ್ನು ಸಿಕ್ಕಿಸಿ ಸಿಗಿದ ದಣಿವಿಗೋ, ತನಗೆ ಗೊತ್ತಿಲ್ಲದ ಮತ್ತು ಯಾವ ಲಾಭಾಂಶವೂ ಸಿಗಲಾರದ ಸರಕಾರದ ಮೀಸಲಾತಿಯ ದೆಸೆಯಿಂದ ಜಾತಿಶ್ರೇಷ್ಟರ ನಿಂದೆ ಮಾತುಗಳಿಗೆ ಬೇಸರಿಸಿಕೊಂಡೋ ಅಥವಾ ಎಷ್ಟು ದುಡಿದರೂ ಹೆಂಡತಿ ಮಕ್ಕಳ ಹೊಟ್ಟೆಗೆ ಹಾಕುವುದರ ಹೊರತಾಗಿ ಏನನ್ನೂ ಉಳಿಸಲಾಗುತ್ತಿಲ್ಲ ಅನ್ನುವ ಕೊರಗಿನಲ್ಲೋ ಮಾನಸಿಕವಾಗಿ ನೊಂದು ಸಾಕನ್ನಿಸುವಷ್ಟು ಕುಡಿದು ರಸ್ತೆಯಗಲಕ್ಕೂ ಓಲಾಡಿಕೊಂಡು ಹೋಗುವಾಗ ಅದೇ ಹೆಂಗಸು ಕಾಯಿರಾಶಿಯ ಮುಂದೆ ಕುಳಿತು ಕಿಸಿಕಿಸಿ ನಗುತ್ತಿರುತ್ತಾಳೆ,
ಅದೇ ದಾರಿಯಲ್ಲಿ ಮೋಟರ್ ಬೈಕನಲ್ಲಿ ಸವಾರಿ ಹೊರಟಿದ್ದ ಆಸಾಮಿ ಗಕ್ಕನೆ ಬ್ರೇಕ್ ಹಾಕಿ ಏರು ದನಿಯಲ್ಲಿ ರೋಪ್ ಹಾಕುತ್ತಿದ್ದ. ‘ನಿಮ್ಮಂಥವರಿಗೆ ಸರಕಾರದವರ ಸವಲತ್ತು ಹೆಚ್ಚಾಗಿ ಹೀಗೆ ರಸ್ತೆ ಮ್ಯಾಲ ಕುಡಕೊಂಡು ಓಡಾಡೋವಷ್ಟು ಸೊಕ್ಕು ಬಂದಿದೆ’ ಅಂತ ಏನೇನೋ ಒಟಗುಟ್ಟಿದ. ಜೆನರಲ್ ಕೆಟಗೆರಿಯಲ್ಲಿ ಕೆಲಸ ಸಿಗಲಾರದೆ ಮೀಸಲಾತಿಯನ್ನೇ ವಿರೋಧಿಸುವ ಈ ಮನುಷ್ಯನಿಗೆ ಅವನ ಬರ್ಬರ ಬದುಕಿನ ಬಗ್ಗೆ ಕಿಂಚಿತ್ತು ಕನಿಕರವಿಲ್ಲ.
ಬೆಳಗಾಗುತ್ತಲೆ ಕೆಲಸಕ್ಕೆ ಬನ್ನಿರೆಂದು ಕೂಗಿ ಕರೆಯಲು ಬಂದಿದ್ದ ಪ್ರಗತಿಪರ ರೈತ ಚಹಾದಂಗಡಿಯ ತುದಿಕಟ್ಟೆಯ ಮೆಲೆ ಕುಳಿತು ಸಿಗರೇಟು ಹೊತ್ತಿಸಿಕೊಂಡು ರಾಜಕೀಯ ಲೆಖ್ಖಾಚಾರದಲ್ಲಿ ತೊಡಗಿದ್ದಾನೆ. ಜಾತಿ ಆಧಾರದ ಮೇಲೆ ಮುಂದಿನ ಚುಣಾವಣೆಯಲ್ಲಿ ಗೆಲ್ಲಬಹುದಾದ ಕುದುರೆಯ ಕುರಿತು ಮಣಗಟ್ಟಲೆ ಮಾತಾಡುತ್ತಿದ್ದಾನೆ.
ಇವ ಕುಡಿದಿದ್ದರೂ ಯಾರಿಗೂ ತಲೆಬಾಗಿಸಲಾರ, ಶರಣು ಹೊಡೆಯಲಾರ, ರಾಮರಾಮ ಹೇಳಲಾರ. ಆದರೆ ಮನೆಗೆ ಬಂದಾಗ ಇವನ ಹೆಂಡತಿ ಅದೇ ಹಳೇ ಪಾತ್ರೆಯಲ್ಲಿ ರಾಗಿ ಗಂಜಿಗಾಗಿ ನೀರು ಹೆಸರಿಟ್ಟಿದ್ದಾಳೆ. ಬಕಾಸುರರಂತೆ ಅಡುಗೆ ಮನೆಯನ್ನೇ ಕಾದು ನೋಡುತ್ತಿರುವ ಹಿರಿಯ ಮಗ ಕೈಯಲ್ಲಿ ಅಂಗೈಯಗಲ ಮೋಬೈಲ್ ಹಿಡಿದು ಒಂದರ ಮೇಲೊಂದು ರಿಂಗಟೋನಗಳನ್ನು ಒತ್ತುತ್ತಿದ್ದಾನೆ. ಕಾಫಿ ಎಸ್ಟೇಟಿನ ಕೆಲಸಕ್ಕೆ ಹೋಗಿ ಬರುವಾಗ ಶೋಕಿಗಾಗಿ ತಂದಿದ್ದ ಟೀವಿಯಲ್ಲಿ ಮನೆಯೊಂದು ಮೂರು ಬಾಗಿಲು ದಾರಾವಾಹಿಯನ್ನು ತಂದೆತಾಯಿಗಳು ಶ್ರದ್ಧೆಯಿಂದ ನೋಡುತ್ತಿದ್ದಾರೆ. ಹೆಣ್ಣುಮಕ್ಕಳೆರಡೂ ಅದೇ ಪುಟ್ಟ ಜನತಾ ಮನೆಯ ಮೂಲೆಯೊಂದರಲ್ಲಿ ಹರಕು ಚಾಪೆ ಹಾಸಿಕೊಂಡು ಸರಕಾರ ಕೊಟ್ಟಿರುವ ಉಚಿತ ಪಠ್ಯಪುಸ್ತಕದಲ್ಲಿನ ಬಿಟ್ಟಸ್ಥಳ ತುಂಬುವ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಇವನ ಕುಡಿದ ಅಮಲಿನ ಆರ್ಭಟ ಓಣಿಯವರಿಗೆಲ್ಲ ಉಚಿತ ಮನರಂಜನೆಯಾಗಿದೆ. ಮಕ್ಕಳು–ಮುದುಕರು, ಗಂಡ ಹೀಗೆ ಎಲ್ಲರೂ ಉಂಡ ಮೇಲೆ ಹೆಂಡತಿಯ ಪಾಲಿಗೇನೂ ಉಳಿದಿರಲಿಲ್ಲ.
ಇದು ಈ ದೇಶದ ಯಾವದೋ ಮೂಲೆ ಹಳ್ಳಿಯಲ್ಲಿನ ಕಥೆಯಲ್ಲ, ನಾನು ಕಂಡಿರುವ ಪ್ರತಿ ಹಳ್ಳಿಯಲ್ಲಿನ ದಲಿತನ ದಿನಚರಿಯಾಗಿದೆ. ಸ್ವಲ್ಪ ವ್ಯತ್ಯಾಸ ಮಾಡಿಕೊಂಡು ಓದಿಕೊಂಡರೆ ಇದೇ ಕತೆ ಅಫಜಲಪುರ, ಮರಿಯಮ್ಮನಹಳ್ಳಿ. ಹೆಗ್ಗೋಡು, ಗಜೇಂದ್ರಗಡ, ಸಾಲಾಪುರ, ಧಾರವಾಡ, ಸಾಣೇಹಳ್ಳಿಗಳಲ್ಲಿನ ಬದುಕಿಗೂ ಹೊಂದಿಕೊಳ್ಳುತ್ತದೆ.

oppressed

Advertisements