ಅಮೀರಖಾನ ನಿಮಿತ್ತ ಮಾತ್ರ…


ಮಧ್ಯಮವರ್ಗೀಯವೆಂದು ಕೆಲವರಿಗೆ ಅನ್ನಿಸುತ್ತಿರುವ ಸತ್ಯಮೇವ ಜಯತೆ ಕಾರ್ಯಕ್ರಮದ ತಯಾರಿ ಹಂತವನ್ನು ಹೇಳಿಕೊಳ್ಳುತ್ತಲೇ ಲೊಳಲೊಟ್ಟೆ ನಿಲುವಿನ ಹೇಳಿಕೆಗಳನ್ನು ಅಮೀರಖಾನ ಬಗ್ಗೆ ಮಾತಾಡುತ್ತಿರುವುದು ಬೇಸರದ ಸಂಗತಿ. ನಾಟಕ ಮಾಡಿಸುವಾಗಲೂ ನಿರ್ದೇಶಕನೊಬ್ಬ ನಟನೊಂದಿಗೆ ತುಂಬ ಸೂಕ್ಷ್ಮವಾಗಿ ಕೆಲಸ ಮಾಡಲು ಹೆಣಗುತ್ತಾನೆ. ಅರೆ! ಸುಳ್ಳಸುಳ್ಳೆ ಮಾಡುವುದಕ್ಕೇಕೆ ಇಷ್ಟೊಂದು ತಾಲೀಮು ಎನ್ನುವ ನಟರು ಇಲ್ಲಿ ಸಿಗುತ್ತಾರೆ. ಆದರೆ ಒಂದು ತೆರನಾದ ಸಿನಿಮೀಯ ಅಳುವು ಆ ಪಾತ್ರದ ಆಳವನ್ನು ತೆರೆದಿಡಲು ಸಾಧ್ಯವಾಗಲಾರದು. ಅದನ್ನು ಮೀರುವ ಎಷ್ಟೋ ನೋವುಗಳು ಆ ಪಾತ್ರದ ಆ ಕ್ಷಣದ ನೋವಿನ ಮಡುವಿನಲ್ಲಿ ಸ್ಫೋಟಗೊಳ್ಳಲಿ ಎನ್ನುವ ಬಯಕೆಯಿಂದ ಅಳುವನ್ನು ಮೊಟಕುಗೊಳಿಸಲಾಗುತ್ತದೆ. ಭಾವವನ್ನು ಒತ್ತಿಡಲಾಗುತ್ತದೆ. ಅದರ ತಯಾರಿಯಲ್ಲಿ ನಾಟಕದವರೂ ಪ್ರೇಕ್ಷಕರನ್ನು ಮನದಲ್ಲಿಟ್ಟುಕೊಂಡು ಮಾಡುತ್ತಿರುತ್ತಾರೆ ಹೊರತು ನಾವು ಮಾಡಿದ್ದನ್ನೆ ನೀವು ನೋಡಿ ಎನ್ನುವ ಧಮಕಿಯಿಂದಲ್ಲ. ಆಗೆಲ್ಲ ನಿರ್ದೇಶಕ ಒಬ್ಬ ನಟನೊಡನೆ ಸಾಕಷ್ಟು ಹೊತ್ತು ಕಳೆಯಬೇಕಾಗುತ್ತದೆ. ಹಾಗೇಯೇ ಅಮೀರಖಾನ ಹೇಗೆಲ್ಲ ತಾಂತ್ರಿಕವಾಗಿ ತನ್ನ ಕಾರ್ಯಕ್ರಮ ರೂಪಿಸುತ್ತಾನೆ ಹೆಂಗೆ ತನ್ನ ಮಧ್ಯಮವರ್ಗೀಯ ಪ್ರೇಕ್ಷಕರನ್ನೆಲ್ಲ ಮರುಳುಗೊಳಿಸುತ್ತಾನೆಂದು ಇನ್ನೊಬ್ಬ ಜನಪ್ರಿಯ ಕಲಾ ಉತ್ಪಾದಕ ಒಂದು ಗುಣಾತ್ಮಕ ಕಾರ್ಯಕ್ರಮದ ರೂಪವನ್ನು ಒಡೆದು ನೋಡಲು ಪ್ರಯತ್ನಿಸುತ್ತಲಿರುತ್ತಾನೆ. ಆತನ ಉದ್ಧೇಶವೂ ತನ್ನ ತಾ ರಕ್ಷಿಸಿಕೊಳ್ಳುವುದಾಗಿರುತ್ತದೆ. ಮತ್ತು ಜನಮಾನಸವನ್ನು ತನ್ನ ಅಳಬುರಕ,ದ್ವೇಷಾಸೂಯೇ ಪ್ರಧಾನವಾದ ಕಥನವನ್ನೆ ಜಪಿಸುವಂತೆ ಪ್ರೇರೆಪಿಸುವುದಾಗಿರುತ್ತದೆ.

ಅರಿಸ್ಟಾಟಲ್ ಒಂದು ಕಡೆ, ರುದ್ರನಾಟಕದ ಕ್ರಿಯೆಯ ಜೀವಾತ್ಮದ ಸ್ವರೂಪವನ್ನು ಹೀಗೆ ಹೇಳುತ್ತಾರೆ.
“ವಸ್ತುವಿನ ಗುರಿಯು ಯಾವುದಾದರೂ ಇರಲಿ, ಅದನ್ನು ಸಾಧಿಸಲು ವಸ್ತುವು ಮೊದಲು ಸಿದ್ಧವಾಗಬೇಕು. ಹಾಗೆ ಸಿದ್ಧವಾಗುವುದು ಕೂಡ ಗುರಿಯನ್ನು ಸಾಧಿಸಲು ಅನುಕೂಲವಾದ ರೂಪದಲ್ಲಿ ಸಿದ್ಧವಾಗಬೇಕು. ಈ ಅನುಕೂಲ ರೂಪದ ಪ್ರಥಮ ಆವಿರ್ಭಾವ, ಆದ್ಯ ಅವತಾರವೇ ಅದರ ಆತ್ಮ. ಇದು ವಸ್ತುವಿನ ಪ್ರತ್ಯೇಕ ಅಂಗಗಳಲ್ಲಿರುವುದಿಲ್ಲ, ಆ ಅಂಗಗಳೆಲ್ಲವೂ ಒಂದು ಕ್ರಮದಲ್ಲಿ ಸಂಯೋಗವಾಗಿರುವ ಅದರ ರಚನೆಯಲ್ಲಿರುತ್ತದೆ. ಏಕೆಂದರೆ ಈ ಅಂಗಗಳಲ್ಲಿ ಕೆಲವು ನ್ಯೂನಾತಿರೇಕಗಳಿದ್ದರೂ ಉದ್ಧೇಶವನ್ನು ಸಂಪೂರ್ಣವಾಗಲ್ಲದಿದ್ದರೂ ಅಂಶತಃ ಸಾಧಿಸಬಹುದು. ಆದರೆ ರಚನೆಯಲ್ಲಿ ದೋಷವಿದ್ದರೆ ಅದು ಸಾಧ್ಯವೇ ಇಲ್ಲ”

ಹೀಗೆ ವಿಮರ್ಶಾ ದೃಷ್ಟಿಯಿಂದ ನೋಡಿದಾಗ ಸತ್ಯಮೇವ ಜಯತೇ ಯಾವ ತಾಂತ್ರಿಕ ಮಾರ್ಗೋಪಾಯದಿಂದ ತಯಾರಾದರೂ ಅದು ಆಗು ಮಾಡುವ ಮತ್ತು ಅದರೊಳಗಿನ ಅಂತರ್ಬೋಧೆಯೇ ಮುಖ್ಯವಾಗುತ್ತದೆ. ಅದು ಮಾತ್ರ ಸಾಕು ಆ ಕಾರ್ಯಕ್ರಮದ ಪ್ರೇಕ್ಷಕನಿಗೆ. ಅದರಾಚೆಗಿನ ಸತ್ಯಶೋಧನೆ ಹುಸಿಯಾಗಿ ಎಲ್ಲೋ ಕಳೆದು ಹೋಗಿಬಿಡುತ್ತದೆ. ಆ ವಿಷಯದ ಸ್ಪಷ್ಟತೆ, ನಿಖರವಾದ ವಸ್ತುನಿರೂಪಣೆ, ಅದು ಆಗುಮಾಡುವ ಪರಿಣಾಮ, ಸಾಧ್ಯಾಸಾಧ್ಯತೆಗಳೆಲ್ಲದರ ನಡುವೆ ಒಂದು ಮಿತಿ ಇಲ್ಲೂ ಸೀಮಿತ ಚೌಕಟ್ಟನ್ನು ಹಾಕಿ ಕೊಟ್ಟಿರುತ್ತದೆ. ಜಾಗತಿಕ ಮಾರುಕಟ್ಟೆಯ ಪ್ರಚಾರಪ್ರಿಯತೆಗಳೂ ಕೂಡ ಈ ಕಾರ್ಯಕ್ರಮದ ರೂಪುರೇಷೆಯನ್ನು ನಿರ್ಮಿಸಿರಬಹುದಾದ ಸಾಧ್ಯತೆಗಳು ಇದ್ದೆ ಇರುತ್ತವೆ. ಹಾಗಾಗಿ ಒಂದು ಕನಸು-ಆಶಯದ ಮಾರ್ಗದಲ್ಲಿ ವ್ಯಕ್ತಗೊಳ್ಳುವಾಗ ಗಲಬಲಿಗಳು ಆಗಿರುತ್ತವೆ ಮತ್ತು ಅದು ಒಟ್ಟು ಕಾರ್ಯಕ್ರಮದ ಮಿತಿಯೂ ಆಗಿರುತ್ತದೆ.
ಒಂದಷ್ಟು ಗುಂಪುಗಳು ಸಾರ್ವಜನಿಕ ಜಾಲತಾಣಗಳಲ್ಲಿ ಮೀಸಲಾತಿ ಕುರಿತಾಗಿ ಎಡಬಿಡಂಗಿ ದೃಶ್ಯಗಳನ್ನು ಅಪಲೋಡ್ ಮಾಡುತ್ತಲೇ ಇರುತ್ತಾರೆ. ಆ ಕುರಿತಾಗಿ ಒಂದು ಚರ್ಚೆ ನಡೆದದ್ದೇ ಆದರೆ ಅವರ ಆಕ್ರೋಶಕ್ಕೆ ಕಡಿವಾಣ ಹಾಕಬಹುದು. ಇಲ್ಲವೇ ಅದೊಂದು ಸಮಕಾಲೀನ ಜಾನಪದ ಅಭಿವ್ಯಕ್ತಿಯೆಂದು ಓಸರಿಸಿ ಅದೊಂದು ಮೌಢ್ಯ ಆಚರಣೆಯನ್ನು ಅಚ್ಚುಕಟ್ಟಾಗಿ ಆಚರಿಸಿಕೊಳ್ಳಲೆಂದು ಅವರ ಪಾಡಿಗೆ ಅವರನ್ನು ಬಿಟ್ಟು, ತೀರ ಹಳ್ಳಿಗಳಲ್ಲಿ ಇಂದಿಗೂ ಹೊಗೆಯಾಡುತ್ತಿರುವ ಜಾತಿ ಜಡತೆಯನ್ನು ಕಿತ್ತು ಹಾಕಲು ಶ್ರಮಿಸಬೇಕಾದ್ದು ಮುಖ್ಯ ಆಗಬೇಕಾದ ಕೆಲಸ. ನೌಕರಿಯಲ್ಲಿರುವ ಹಿಂದುಳಿದ ವರ್ಗದವರ ಬಗ್ಗೆ ಅನುಮಾನಗಳು ಮೂಡುತ್ತಿವೆ. ಹಳ್ಳಿ ಭಾಗದಲ್ಲಿ ನಿರಂತರ ಶೋಷಣೆ ಜಾರಿಯಲ್ಲಿರುವಾಗ ಇಂದು ಜಾತೀಯತೆ ನಿರ್ಮೂಲನೆ ಆಗಿದೆ ಎಂದು ಭ್ರಮಿಸಿಕೊಂಡು ಬದುಕುವ ಹೀನ ಜಾಯಮಾನದ ಶ್ರೇಷ್ಠತೆಯ ವ್ಯಸನ ಆವರಿಸಿರುವುದು ಸುಳ್ಳಲ್ಲ. ಈ ಹಳ್ಳಿಗಾಡಿನ ಅಪ್ಪ-ಅಮ್ಮಂದಿರು ಇದು ನಮ್ಮ ಕರ್ಮ ಎನ್ನುವಂತೆ ಬದುಕಿರುವಾಗ ಆ ವಿಷವರ್ತುಲದಿಂದ ಓದಿ ತಿಳಿದವರು ಹೊಳೆ ದಾಟಿದ ಮೇಲೆ ಬದಲಾವಣೆ ಆಯಿತೆಂದು ಬಗೆದರೋ ಏನೋ.. ಒಟ್ಟು ಸಾಮಾಜಿಕ ರಚನೆಯಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಆಗುವುದನ್ನು ತಮ್ಮ ತುಷ್ಟಿಗುಣಕ್ಕೆ ಅನ್ವಯಿಸಿಕೊಂಡು ಬೇಡಿಕೆಯನ್ನು ಹೆಚ್ಚಿಸಿಕೊಳ್ಳುವ ಬಂಡವಾಳದಾರರು ಜನಜೀವನದ ಒಟ್ಟು ಆಶಯಗಳನ್ನು ರೂಪಿಸುತ್ತಿರುವಾಗ ಸತ್ಯಮೇವ ಜಯತೇ ಎಂಬಂಥ ಕಾರ್ಯಕ್ರಮಗಳು ಯಾವ ಮಾದರಿಯಲ್ಲಿದ್ದರೂ ಒಂದು ಸಂಚಲನ ಸುರುವಿಗೆ ನಾಂದಿ ಹಾಡಬಲ್ಲವು.

ಸತ್ಯಮೇವ ಜಯತೇ ಕಾರ್ಯಕ್ರಮ ಯಾವ ಕೆಲಸಗಳನ್ನು ಗುರುತಿಸಲಿ ಗುರುತಿಸದೇ ಇರಲಿ ತನ್ನ ಅಂತಃಸತ್ವದಲ್ಲಿ ಕರುಣಾರ್ದ್ರ ಕತೆಯೊಂದನ್ನು ನಿರೂಪಿಸಲು ತೊಡಗಿರುವುದೇ ಮಹತ್ವದ ಹೆಜ್ಜೆ. ಇವತ್ತಿನ ಇಂಡಿಯಾದ ಸಂದರ್ಭದಲ್ಲಿನ ವಿಷಾದಕರ ಸತ್ಯಗಳ ಜೊತೆಗೆ ರಾಜಿಯಾಗುತ್ತಲೇ ಹಲಕೆಲವು ತೇಪೆ ಹಚ್ಚುವ ಕಾರ್ಯಕ್ರಮಗಳನ್ನು ಭಾರಿ ಯೋಜನೆಗಳೆಂಬಂತೆ ಪ್ರತಿಬಿಂಬಿಸುತ್ತಿರುವ ಒಂದು ವರ್ಗ, ಪ್ರಗತಿಯ ವಿಲಕ್ಷಣ ರೂಪಗಳನ್ನು ಹುಚ್ಚುಹುಚ್ಚಾಗಿ ಸಂಭ್ರಮಿಸುತ್ತಿದೆ. ಸಮಾಜದ ಚಾರಿತ್ರಿಕ ಚಲನೆಯನ್ನು ವರ್ಲಿ ಚಿತ್ರದ ರೇಖೆಗಳಂತೆ ಸರಳವಾಗಿ ಗುರುತಿಸುತ್ತ, ಸಮಾಜವಿಜ್ಞಾನದ ಹೊಸ ವಿಘಟನೆಯನ್ನು ಹೊಸದೊಂದು ವ್ಯಾಖ್ಯಾನದಂತೆ ರೂಪಿಸುವ ಮೇಲ್ಮಧ್ಯಮ ವರ್ಗದವರಿಗೆ ಆ ಸರಳ ರೇಖೆಗಳ ಮಾಂತ್ರಿಕ ಚಲನೆಯ ಶಕ್ತಿ ಅರ್ಥವಾಗದಿರುವುದು ನಿಜಕ್ಕೂ ದುರಂತದ ಸಂಗತಿ. ಕಲೆಯ ಅಭಿವ್ಯಕ್ತಿಯ ಸ್ವರೂಪದಲ್ಲಿ ಸದಾ ಆಧುನಿಕತೆ ಪ್ರವೇಶ ಪಡೆಯುತ್ತಿರುತ್ತದೆ. ಕಾಲದೇಶದ ತುರ್ತಿನೊಂದಿಗೆ ಕಲಾಮಾರ್ಗಗಳು ಮಾರ್ಪಾಟಾಗುವ ಗಳಿಗೆಯಲ್ಲಿ ಸಮಾಜದ ಸ್ಪಷ್ಟ ಚಿತ್ರಣ ವ್ಯಕ್ತವಾಗದೆ ಬರಿ ಕೌಶಲವೇ ಮುಖ್ಯ ಎನ್ನಿಸಿದಾಗ, ಅದರಲ್ಲಿ ಬೆನ್ನೆಲುಬಿನ ಸ್ಥಿರತೆ ಅನುಮಾನ ಹುಟ್ಟಿಸುತ್ತದೆ. ಹಾಗೆ ಅನುಮಾನ ಹುಟ್ಟಿಸಲು ಎರಡು ಮಾರ್ಗಗಳು ಇಂದು ಪ್ರೇರಣೆ ಕೊಡುತ್ತಿವೆ. ಒಂದು ನಗರ ಜೀವನದ ಹುಸಿ ಆದರ್ಶದ ಕನಸು, ಮತ್ತೊಂದು ವ್ಯವಸ್ಥಿತವಾಗಿ ರಾಜಕೀಯ ಅಜಂಡಾಗಳನ್ನು ಇರುವ ಸೀಮಿತ ಕೃತಿಗಳಲ್ಲಿ ಹುಡುಕುವ ಹಪಹಪಿ. ಈ ಕಾರಣಗಳಿಂದಾಗಿಯೇ ವೈಭವೀಕರಿಸುವ ಸ್ವಕೀಯತೆ ನಮ್ಮನ್ನು ನಿಜವಾದ ಕಲಾಮಾರ್ಗದೊಂದಿಗೆ ದಿಕ್ಕು ತಪ್ಪಿಸುತ್ತಲೇ ಇರುತ್ತದೆ. ಆದಷ್ಟು ಜಾಗರೂಕರಾಗಿ ಆಯ್ಕೆ ಮಾಡಿಕೊಳ್ಳುವ ವಸ್ತುವಿಷಯಗಳು ಕೂಡ ನಮ್ಮನ್ನು ಕಪ್ಪು-ಬಿಳಿ ಗೆರೆಗಳ ನಡುವೆ ತಂದು ನಿಲ್ಲಸಿ ಬಿಡುವ ಆತಂಕದ ಸಂದರ್ಭಗಳು ಬಂದೊದಗುತ್ತವೆ. ಆಗೆಲ್ಲ ಒಂದು ತೆರನಾದ ಜಿಗುಪ್ಸಾಭಾವ ನಮ್ಮನ್ನ ಆಕ್ರಮಿಸಿ ಜಗತ್ತ ಶೂನ್ಯದ ತತ್ವಕ್ಕೆ ಕಟಿಬದ್ಧರನ್ನಾಗಿಸಿಬಿಡುತ್ತದೆ. ಹಾಗಾಗಿ ಇವತ್ತಿನ ದುರ್ದೆಸೆಯಲ್ಲಿ ಕಲಾಮಾಧ್ಯಮಗಳೂ ಈ ಒಂದು ವರ್ಗವನ್ನು ಉದಾಸೀನ ಮಾಡಿದೆ ಎಂದೇ ಹೇಳಬಹುದಾಗಿದೆ. ಆ ವರ್ಗದ ಕುರಿತಾಗಿ ಕಲಾ ಮಾಧ್ಯಮಗಳು ಕೆಲಸ ಮಾಡುವುದೇ ಅಪರೂಪ ಅಂಥದರಲ್ಲಿ ಅಮೀರಖಾನ ತನ್ನ ತಾಂತ್ರಿಕ ಮಿತಿಯೊಳಗೆ ಕಾರ್ಯಕ್ರಮದ ಕ್ರಿಯಾಶೀಲತೆಯನ್ನು ಒರೆಗೆ ಹಚ್ಚಿಕೊಂಡು ಪ್ರಯತ್ನಿಸಿರುವುದು ಸ್ತುತ್ಯಾರ್ಹ.
————–ಮಹಾದೇವ ಹಡಪದ————–

Advertisements

ರೈತ ಮಕ್ಕಳ ಬದುಕು ಬವಣೆ ಮತ್ತು ಆಧುನಿಕವೆಂಬೀ ವಿಕಾರ…


ಅಸಹಜವಾದದ್ದು ಉಳಿಯಲು ಹೆಣಗಾಡುತ್ತದೆ, ಉಳಿಯಲೇಬೇಕೆಂಬ ಹಟಕ್ಕೆ ಬಿದ್ದು ಒದ್ದಾಡಿ ಒಣಗುತ್ತದೆ. ಕಟ್ಟಿಕೊಂಡ ಗೋಪುರದ ಗೋಳಿಕರಣ ನಿರ್ನಾಮವಾಗಿ ಹೊಸ ದೆಸೆಯಲ್ಲಿ ಸಹಜತೆಯ ಗುಣಗಳು ನಿಲ್ಲುತ್ತವೆ. ಹಸಿವು ಬದುಕಿಸುತ್ತದೆ ವೇದನೆಯೊಂದಿಗೆ ಸಾಂಸ್ಕೃತಿಕ ಅಭಿವ್ಯಕ್ತಿಯೊಂದಿಗೆ. ಇದು ಇಂದಿನ ತಲೆಮಾರಿನವರು ಬರಗಾಲವನ್ನು ಎದುರಿಸಲು ಸಜ್ಜಾಗಲು ಹೇಳಿಕೊಳ್ಳುತ್ತಿದ್ದ ಸ್ವಗತವೆಂದು ಹೇಳಬಹುದಾಗಿದೆ. ಆದ್ದರಿಂದ ಬರಗಾಲದ ಒಣಹವೆಯ ಮೋಡಗಳು ಗಾಳಿಗುಂಟ ತೇಲಿ ಹೋಗುತ್ತಿರುವಾಗ ರೈತನ ಮುಖ ಕಪ್ಪಿಟ್ಟಿತ್ತು ಹೊರತು ಬದುಕು ಕಂಗಾಲಾಗುವ ತವಕವೇನೂ ಕಾಣಿಸಲಿಲ್ಲ. ಆದರೆ ನಿಜವಾಗಿಯೂ ಅದುರಿದವ, ಅಂಜಿ ಜೀವ ಕೈಯಲ್ಲಿ ಹಿಡಿದು ಮಾನಸಿಕ ಹಿಂಸೆಯನ್ನು ಅನುಭವಿಸಿದವ ಆಯಗಾರ, ಕಸಬುದಾರ, ಬಡ ಕೃಷಿಕೂಲಿಕಾರ. ಅಂಥ ಜೀವಗಳು ಬರಗಾಲದ ರೋದನಗಳನ್ನು ಜಾನಪದ ಕಾವ್ಯದಲ್ಲಿ ಅಶಕ್ತ ಪ್ರತಿಭಟಣಾ ರೀತಿಯಲ್ಲಿ ತೋಡಿಕೊಂಡಿದ್ದಾನೆ. ಆತ ಎಪ್ಪತ್ತೆರಡರ ಬರಗಾಲದ ವಿಕಟರೂಪವನ್ನು ಜಾನಪದ ಮಟ್ಟಿನ ಈ ಹಾಡಿನೊಳಗೆ ದಾಖಲಿಸಿದ್ದಾನೆ.

ಬರಗಾಲಂದ್ರ ಎದಿ ಅಂತಾದೋ ಧಕ್ಕ

ಇಸ್ವಿ ಇತ್ರಿ ಆ ವರ್ಷ ಎಪ್ಪತ್ತೆರಡಿನ್ನಾ

ಕಲ್ಬುರ್ಗಿ ಜಿಲ್ಲಾಕ ಬಂತೋ ಬರಗಾಲನಾ

ಮಿರಗವ ಮಿಂಚಿತ ಮಳಿಗಾಲ ಸುರುವಾಯ್ತ

ಮಿರ್ಗಾರಿದ್ರ ಮಳಿ ಬರಲಿಲ್ಲ ಪೂರ್ಣಾ

ಎದಿ ಒಡೆದು ಕುಂತಾರ ರೈತರಿನ್ನಾ

ಜನ ಹೋಗ್ಯಾರ ಸರಕಾರತನಾ

ದಂದೆ ಹಚ್ಚರಿ ನಮಗೊಂದು ಬದುಕದಕಿನ್ನಾ

ಬರಗಾಲದ ಯೋಜನೆಯ ಲಾಭಾಂಶಗಳು ಸಲ್ಲುವುದು ಇದ್ದುಳ್ಳವನ ಬುಡದಲ್ಲಿಯೇ ಎಂಬುದನ್ನು ಸಾಬೀತುಪಡಿಸುವಲ್ಲಿ ಹಾಡಿನ ಯಾವ ಸಾಲಿನಲ್ಲೂ ಕ್ರೋಧದ ಛಾಯೇ ಇಲ್ಲದ್ದು ಕುತೂಹಲದ ಸಂಗತಿ. ಈ ಕೆಳಗಿನ ಸಾಲುಗಳು ಅಸಹಾಯಕ ಬಡವನ ಗೋಳನ್ನು ಹೇಳುವುದಷ್ಟೆ ಅಲ್ಲ ವ್ಯವಸ್ಥೆಯೊಳಗಿನ ಕ್ರೂರ ರೂಪದ ಅಕರಾಳ-ವಿಕರಾಳ ಭ್ರಷ್ಟತೆಯನ್ನು ತೋರಿಸಿಕೊಡುತ್ತದೆ.

ಕೊಟ್ಟಿ ಮಾಪಿಲಿ ಪಾಡಹೊಡ್ದು ಕೊಡತಾರ ಧಾನ್ಯಾ

ಮುಂಜಾಳಿ ಹಿಡದು ದುಡದ್ರ ಸಂಜಿತನಾ

ಸಾಟಿ ರೂಪಾಯಿ ಸಿಗ್ತಾವಂದ್ರ ಸತ್ತರ ಸತ್ತೀವಂತ

ಆಪರೇಷನ್ ಮಾಡಿಸಿಕೊಂಡು

ಅವಪತ್ಯೆ ಮಾಡಿ ನಡಬರಕ ಹೋಗ್ಯಾರ ದಾಟಿ

ಊರಿಗೆ ಬಂದು ಹತ್ತಲಿಲ್ಲ ಉಪರಾಟಿ

ಮನಿಗೆ ಮರಳಿ ಇಲ್ಲಧಂಗಾತು ಭೆಟ್ಟಿ

ಅಕ್ಕಿ ಗೋಧಿ ಕೂಪನದವ್ರು ಲೆಕ್ಕಿಲ್ಲದ ಕತ್ತರಿಸ್ಯಾರ

ಅಲ್ಲಿಂದಲ್ಲೆ ಮಾರತಿದ್ರು ಸಕ್ರಿ ಸರಿಯಾಗಿ ಹಂಚಲಿಲ್ಲಾ ಜರಾ

ಬರಗಾಲಂದ್ರ ಎದಿ ಅಂತದ ಧಕ್ಕ

ಎಂದಿಗೆ ಬರಬಾರದಪ್ಪ ಬರಗಾಲದ ಸುಂಕ

ಸಂಜಿತನಾ ಬರಪರಿಹಾರ ಕಾಮಗಾರಿಯಲ್ಲಿ ಮೈಯೊಡ್ಡಿ ದುಡಿದರೂ ಖೊಟ್ಟಿ ಮಾಪಿನ ಸೇರಿನೊಳಗೆ ತೂಗಿಕೊಡುವುದು ಮಾತ್ರ ತಪ್ಪಲಿಲ್ಲ. ಆಪರೇಷನ್ ಮಾಡಿಸಿಕೊಂಡ ಹೆಣ್ಣಮಕ್ಕಳು ಆರೈಕೆಯೇ ಇಲ್ಲದೆ ಸಾಯುವುದು, ಅಕ್ಕಿ ಗೋಧಿ ಸಕ್ರಿ ಹಂಚುವ ನ್ಯಾಯ ಬೆಲೆ ಅಂಗಡಿಯವರೂ ಇವರ ಕಣ್ಣೆದುರೇ ಕದ್ದದ್ದನ್ನು ಮಾರುತ್ತಿರುವುದು ಸಹ ಗಮನಕ್ಕೆ ಬಂದರೂ ಪ್ರತಿಭಟನೆಗಿಳಿಯದೆ ಮೂಕನಾಗುಳಿಯುವ ಗೋಳು ಬರಗಾಲನ್ನೆ ಶಪಿಸಬಲ್ಲುದು. ಇಂದು ರಾಜ್ಯ ಸರಕಾರ ಘೋಷಿಸಿರುವ ಸಾಲಮನ್ನಾದ ಬೆನ್ನಿಗೆ ತೆರಿಗೆಯನ್ನು ಹೆಚ್ಚಿಸಿ ಸಮತೂಕ ತೂಗಲು ಪ್ರಯತ್ನಿಸುತ್ತಿರುವುದಕ್ಕೂ ಈ ಹಾಡಿನ ತಾತ್ಪರ್ಯಕ್ಕೂ ಏನೂ ವ್ಯತ್ಯಾಸವಿಲ್ಲ. ಇಲ್ಲಿ ಸರಕಾರ ಭೂರಹಿತ ಕೃಷಿ ಕಾರ್ಮಿಕರ,ಬಡವರ,ಕೂಲಿಕಾರರ ಬೆನ್ನ ಮೇಲೆ ಒಂದು ಗುದ್ದು ಹಾಕಿದೆ.

ಜಾನಪದದ ಹಾಡುಗಳಲ್ಲಿ ಬರಗಾಲದ ಬವಣೆಗಳನ್ನು ನಿವೇದಿಸಿಕೊಂಡದ್ದನ್ನು ನೆನೆಸಿಕೊಂಡರೆ ಆ ಸಂದರ್ಭದ ಮಳೆ ವೈಪರಿತ್ಯದ ಸಂಕಷ್ಟಕ್ಕಿಂತ ಬರುವ ಪರಿಹಾರದಲ್ಲಾಗುವ ದಗಲ್ಬಾಜಿ ಬಡವನನ್ನು ಮತ್ತಷ್ಟು ಕ್ರುದ್ಧನನ್ನಾಗಿಸಿರುವುದು ತೋರುತ್ತದೆ. ತಾನೇ ಬೆಳೆದ ಬೆಳೆ ಇಂದು ತನಗೆ ದುಬಾರಿಯಾಗಿ ದೊರೆಯುತ್ತಿರುವಾಗ ಮೋಸ ಹೋದವನು ಈ ದೇಶದ ದಟ್ಟದರಿದ್ರ ರೈತನಲ್ಲದೇ ಮತ್ತಾರು? ಆತ ಬೆಳೆದ ಬೆಳೆಯ ಲಾಭದ ಅರ್ಧದಷ್ಟನ್ನು ಬೆಳೆಯಲು ತೊಡಗಿಸಿರುತ್ತಾನೆ. ಇನ್ನು ಅವನ ಆದಾಯದ ಕಾಲುಪಾಲಿನ ಕಾಳನ್ನ ಆಶ್ರಯಿಸಿರುವ ಒಕ್ಕಲಿನ (ಆಯಗಾರರು) ಮಕ್ಕಳ ಪಾಡು ಏನು? ಈ ಕೃಷಿ ಕಾರ್ಮಿಕರ ಆತ್ಮಹತ್ಯಗಳು ರೈತ ಆತ್ಮಹತ್ಯಗಳೆಂದು ದಾಖಲಾಗುವುದು ವಿರಳ… ಈಗ್ಗೆ ಎರಡು ವರ್ಷಗಳಿಂದ ಭೂಮಿಯ ಮೇಲಿನ ಪದರು ತೋಯ್ದ ಮಳೆಯೂ ಆಗಿಲ್ಲವಾದ್ದರಿಂದ ಸರಕಾರ ಘೋಷಿಸಿರುವ ಮೂಗಿಗೆ ತುಪ್ಪ ಸವರುವ 25 ಸಾವಿರ ರೂ ಸಾಲಮನ್ನಾ ಯಾವ ಅಂಡು ಮುಚ್ಚುವ ಕ್ರಿಯಾಯೋಜನೆ ಅನ್ನುವುದು ನೆನೆಗುದಿಗೆ ಬಿದ್ದಿದೆ. ಬಂಡವಾಳ ಹೂಡಿಕೆಗೆ ಆಕರ್ಷಕ ರೀತಿಯಲ್ಲಿ ಕರ್ನಾಟಕದ ಸಂಪನ್ಮೂಲಗಳನ್ನು ಒದಗಿಸುವ, ಬರುವ ಬಂಡವಾಳಗಾರರ ಆರ್ಥಿಕ ವಲಯಗಳನ್ನು ಸೃಢಗೊಳಿಸುವ, ಹೂಡಿಕೆದಾರರೊಂದಿಗೆ ವಿಶ್ವಾಸ ಉಳಿಸಿಕೊಳ್ಳುವ ಕನವರಿಕೆಯಲ್ಲಿರುವ ಸರಕಾರಕ್ಕೆ ಬರಗಾಲದ ರೆಕ್ಕೆಗಳು ತಂಪು ಗಾಳಿ ಬೀಸುತ್ತಿವೆಯೇನೋ… ಆದರೆ ಹಸಿವಿನ ಸಾವಿಗಿಂತ ಬಡವನ ಸ್ವಾಭಿಮಾನದ ಸಾವುಗಳು ಈ ಗೋಳೀಕರಣದ ಸದ್ದಿನಲ್ಲಿ ದಾಖಲಾಗದೇ ಹೊಗುತ್ತಿರುವುದು ವಿಪರ್ಯಾಸದ ಸಂಗತಿ.

ನೇಕಾರರು ಹಾಡಿರಬಹುದಾದ ಇನ್ನೊಂದು ಹಾಡು ಬಣ್ಣದ ಗುಬ್ಯಾರು ಮಳಿರಾಜ, ಬಡತನದ ಕ್ರೂರ ಅಟ್ಟಹಾಸವನ್ನು ತೆರೆದಿಡುತ್ತದೆ. ಮಗ್ಗದ ಮೇಲಿನ ಗುಬ್ಬಿಯ ಚಿಟಕಿಯ ತಾಳಕ್ಕೆ ಓಣಿ ಮಕ್ಕಳ, ವಕ್ಕಲಗೇರಿಯ ಜನರ ಹಸಿವಿನ ಚಿತ್ರಣ ಆ ಜಾನಪದ ಸೊಲ್ಲಿನಲ್ಲಿ ದಾಖಲಾಗಿದೆ. ರೈತಮಕ್ಕಳು(ಆಯಗಾರರು, ರೈತನ ಒಕ್ಕಲುಗಳು) ಯಾವ ತಯಾರಿಯನ್ನು ಮಾಡಿಕೊಳ್ಳಲಾರದೆ ಬರದ ಕರೀಛಾಯೇಯಲ್ಲಿ ನರಳುತ್ತಿರುತ್ತಾರೆ.

ವೀರೇಶ ವರದಿಯ ದುಂದುವೆಚ್ಚದ ಬಾಬತ್ತುಗಳ ಏರುಪೇರಿನ ಬಿಸಿಯ ತಾತ್ಪರ್ಯ ಈಗ ಅರ್ಥವಾಗಬಹುದಾಗಿದೆ. ಕೃಷಿಜೀವನ ಬದಲಾದಂತೆ ಆಧುನಿಕತೆ ಸೃಷ್ಟಿಸಿರುವ ಅಟ್ಟಹಾಸದ ಉನ್ಮತ್ತ ಬದುಕಿನ ತಂತುಗಳಲ್ಲಿ ರೈತ ಯಾವ ಆಯ್ಕೆಗಳಿಗೂ ಅವಕಾಶಗಳನ್ನು ಇಟ್ಟುಕೊಳ್ಳಲಾರದೆ ಹುಂಬನಂತೆ ವರ್ತಿಸಿದ ರೀತಿಯಿಂದಾಗಿಯೇ ಅವನಿಗೆ ಸಾಲದ ಹೊರೆ ಹೆಚ್ಚಾಗುತ್ತಲೇ ಹೋಯಿತು. ನಗರದ ಮಧ್ಯಮವರ್ಗದ ಜನಜೀವನಕ್ಕೆ ಸಾಂತ್ವನಕ್ಕಾಗಿ ಬೋಗಸ್ ಸಾಧು ಸಂತರು ಹುಟ್ಟಿಕೊಂಡಂತೆ ರೈತನ ಆತ್ಮಸ್ಥೈರ್ಯಕ್ಕೆ ಯಾವ ಪ್ರತಿಮೆಗಳೂ ಹುಟ್ಟಿಕೊಳ್ಳಲಿಲ್ಲ. ಮಾಯಾಪೆಟ್ಟಿಗೆಯ ಮನೆಮುರುಕ ದಾರಾವಾಹಿಗಳು ಕಷ್ಟಕೋಟಲೆಗಳಿಗೆ ಮತ್ತಷ್ಟು ಖಿನ್ನನನ್ನಾಗಿ ಮಾಡಿದವೆ ಹೊರತು ಮನರಂಜನೆಯ ಹಗುರಾಗುವ ಶಾಂತತೆಯನ್ನು ತೋರಿಸುವುದೇ ಇಲ್ಲ. ಈ ಜಾಗತಿಕತೆ ಸೃಷ್ಟಿಸುವ ಸ್ವಾಭಿಮಾನದಲ್ಲಿ ಉಳಿಯುವುದನ್ನು ಸಮರ್ಥವಾಗಿ ಪರಿಸ್ಥಿತಿ ನಿಭಾಯಿಸುವ ತಾಕತ್ತು ಯಾವ ಸಾಂಸ್ಕೃತಿಕ ಭಾವಬದುಕಿನಿಂದಲೂ ಸಿಗದೇ ಹೋದುದರಿಂದ ರೈತನ ರೈತ ಕಾರ್ಮಿಕನ, ಆಯಗಾರನ ಆಯ್ಕೆಗೆ ಸಾವು ಸುಲಭದ ದಾರಿ ಹಾಕಿಕೊಟ್ಟಂತಾಗಿದೆ.  ಅದೆಲ್ಲದರಿಂದ ಮುಕ್ತವಾಗಿ ಈಗ ಮತ್ತೆ ಕುಶಲಕಲೆಗಳನ್ನುರೂಢಿಸಿಕೊಳ್ಳಬೇಕಾದ, ಸೂಕ್ಷ್ಮವಾಗಿ ಅಭ್ಯಸಿಸಬೇಕಾದ ಅನಿವಾರ್ಯತೆ ಬಹಳಷ್ಟಿದೆ.

     ………………………………………ಮಹಾದೇವ ಹಡಪದ………………………………………………………

ಕೇಸರೀಕರಣವೇ ಬದುಕಿನ ಭಾಗವಲ್ಲ-ಈ ಇಂಡಿಯಾದ ಹಿಂದುಳಿದವರಿಗೆ… ಸಚಿವರ ಲೇಖನಕ್ಕೊಂದು ಪ್ರತಿಕ್ರಿಯೆ


ಕೇಸರೀಕರಣಕ್ಕೆ ಒಂದು ಉದಾತ್ತ ಧ್ಯೇಯ, ಉದ್ಧೇಶ ಮತ್ತು ಅರ್ಥವಿದೆ ಎಂದೆಲ್ಲ ಹೇಳುವ ಸಂಕುಚಿತ ಸಂಸ್ಕೃತಿ ಆರಾಧಕರು… ಪಠ್ಯದಲ್ಲಿ ರಾಷ್ಟ್ರೀಯತೆಯೆಂದು ತಾವೇ ಕರೆದುಕೊಳ್ಳುತ್ತಿರುವ, ತಮ್ಮ ಪಕ್ಷ ಸಿದ್ಧಾಂತದ ಅಜಂಡಾವೊಂದನ್ನೆ ಹಿನ್ನೆಲೆಯಾಗಿಟ್ಟುಕೊಂಡು, ಭಾರತೀಯತೆಯನ್ನು ಜಾಗೃತಗೊಳಿಸುವ ಸಲುವಾಗಿಯೇ ಭಾವುಕರಾಗಿ ಇತಿಹಾಸದ ಒಂದೆಳೆಯ ಸತ್ಯವನ್ನೇ ಈ ದೇಶಾಭಿಮಾನದ ಸಂಕೇತವಾಗಿಸಿ, ಭಾರತೀಯತೆ, ರಾಷ್ಟ್ರೀಯತೆ ಎಂಬ ಮನೋಭಾವ ಬೆಳೆಸುವುದಾದರೆ ಇತಿಹಾಸದ ಸಂಶೋಧನಾ ಒರೆಗಲ್ಲಿನಲ್ಲಿ ಫಳಫಳ ಹೊಳೆಯುವ ಸತ್ಯಗಳು ಎಷ್ಟೋ ಇದ್ದಾವಲ್ಲ ಅಂಥದನ್ನ್ಯಾಕೆ ಪಠ್ಯದಲ್ಲಿ ಸೇರಿಸಲಾಗುವುದಿಲ್ಲ..? ಇತಿಹಾಸದಲ್ಲಿನ ಕೇಸರೀಕರಣವನ್ನು ಪತ್ತೆಹಚ್ಚಿ ಅತ್ಯುತ್ಸಾಹದಲ್ಲಿ ಹೇಳುವುದಾದರೆ ಸೋತ ಭಾರತೀಯತೆಯ ಮುಖಭಂಗವನ್ನು ಸಹಿಸಲಾರದ ಬಾಲಿಶ ಅಜಂಡಾವೊಂದನ್ನು ಎಲ್ಲ ಧರ್ಮೀಯರ ಮಕ್ಕಳಿಗೂ ಕಲಿಸುವುದು ಯಾವ ನ್ಯಾಯ..? ರಾಷ್ಟ್ರೀಯತೆ ಭಾವನೆ ಜಾಗೃತಗೊಳ್ಳುವುದು ಇತಿಹಾಸದಿಂದ ಎನ್ನುವುದು ನಗೆಪಾಟಲು.
ಓದು-ಬರಹ ಕಲಿಯದ ವ್ಯಕ್ತಿಗಳು ಕೂಡಾ ತನ್ನ ಆಸ್ತಿ, ಜಾತಿ, ಕುಟುಂಬ ಮಕ್ಕಳು ಮರಿಗಳನ್ನು ಪ್ರೀತಿಸುವುದು ಈ ಇಂಡಿಯಾದ ಸಂಸ್ಕೃತಿಯ ಭಾಗವೇ ಅಲ್ಲವೇ..! ಅವರುಗಳು ಯಾರೂ ಫ್ಯಾಸಿಸ್ಟ ಅಲ್ಲ. ಮಕ್ಕಳಲ್ಲಿ ಮುಖ್ಯವಾಗಿ ಮನಷ್ಯತ್ವವನ್ನು ಕಲಿಸಬೇಕು ಸುತ್ತಲಿನ ಪರಿಸರ ಪ್ರಿತಿಸುವುದನ್ನು ಕಲಿಸಬೇಕು. ಇಂದಿಗೂ ಮರ್ಯಾದಾ ಹತ್ಯೆಗಳು, ಮಲ ಬಳಿಯುವುದು, ಮಲ ಹೊರುವುದು, ದಲಿತರ ಮೇಲೆ ದೌರ್ಜನ್ಯ ನಡೆಸುವುದನ್ನು ಶ್ರದ್ಧೆಯಿಂದ ರೂಢಿಸಿಕೊಂಡವರು ಇರುವಾಗ ರಾಷ್ಟ್ರೀಯತೆಯ ಕುರಿತಾಗಿ ಜಾಗೃತಗೊಳ್ಳಲು ಹಪಹಪಿಸುವ ಕೇಸರಿಕರಣ ತನ್ನ ವೈದಿಕೀಕರಣದ ರೂಪುಗಳನ್ನು ಮಕ್ಕಳ ಮನಸ್ಸಿನ ಮೇಲೆ ಹೇರುವ ಮೂಲಕ ಸಾಂಸ್ಕೃತಿಕ ಚಲನೆಯನ್ನು ದಿಕ್ಕುತಪ್ಪಿಸಿ ಸನಾತನ ವೈದಿಕ ಪರಂಪರೆಯನ್ನ ಪುನಃ ಸ್ಥಾಪಿಸುವ ಹುನ್ನಾರವನ್ನು ಕೇಸರೀಕರಣ ನಡೆಸುತ್ತಿದೆ.
ಭಾರತ-ಚೀನಾದ ನಡುವೆ ಯುದ್ಧ ನಡೆದ ಸಂದರ್ಭದಲ್ಲಿ ಬಿಜಾಪೂರ ಜಿಲ್ಲೆಯ ಜನತೆ ಅಂದಿನ ಪ್ರಧಾನಿಯವರ ತೂಕದಷ್ಟು ಚಿನ್ನವನ್ನು ತೂಗಿ ಕೊಟ್ಟದ್ದು ಭಾರತೀಯತೆಯ ಅಭಿಮಾನದಿಂದ ಹೊರತು ಕೇಸರೀಕರಣ ಹೇಳುವ ದೇಶಾಭಿಮಾನದಿಂದಲ್ಲ, ಕಟುವಾಸ್ತವದಿಂದಲೇ ದೇಶದ ಆಳ-ಅಂತಸ್ತಿನ ಬಗ್ಗೆ ಗೌರವ ಬರುತ್ತದೆ ಹೊರತು ಪುರೂರವ, ಯೋಗ, ಧ್ಯಾನ, ದತ್ತಪೀಠಗಳಿಂದಲ್ಲ. ವೈಚಾರಿಕ ಜಗತ್ತಿನ ಎಷ್ಟೋ ಸತ್ಯಗಳನ್ನು ಬಗ್ಗಿಸಿ ತಮ್ಮ ಅಜಂಡಾದ ಜೊತೆಗೆ ಸೇರಿಸಿಕೊಂಡು ರಾಜಕೀಯವಾಗಿ ಸದೃಢರಾಗಲು ಹೆಣಗುತ್ತಿರುವವರು ಇಂದು ಕೇಸರೀಕರಣವನ್ನು ಮಕ್ಕಳ ಮನಸ್ಸಿನ ಮೇಲೆ ಗಟ್ಟಿಗೊಳಿಸುವ ಮೂಲಕ ಇತಿಹಾಸದಲ್ಲಿ ಆಗಿರುವ ಕೆಲವು ಸಾಂಸ್ಕೃತಿಕ ಅನುಸಂಧಾನಗಳಿಗೆ ಬೇರೆಯದೇ ಆದ ಬಣ್ಣ ಬರೆಯಲು, ಅರ್ಧ ಸತ್ಯವನ್ನೆ ನೂರು ಸಲ ಜಪಿಸುವ ಮೂಲಕ ಸುಳ್ಳನ್ನು ಸತ್ಯವನ್ನಾಗಿಸುವ ಹುನ್ನಾರ ನಡೆಸಿದ್ದಾರೆ. ನನ್ನದು-ನಮ್ಮದು ಎನ್ನುವಲ್ಲಿ ಇನ್ನೊಬ್ಬರದು-ಇನ್ನೊಂದನ್ನು ದ್ವೇಷಿಸುವ ಭಾವ ಇರುತ್ತದೆ ಎನ್ನುವ ಸತ್ಯವನ್ನು ಭೋದಿಸುವ ಇವರ ವಸುದೈವ ಕುಟುಂಬಕಂ ಕಲ್ಪನೆ ಕೇಸರೀಕರಣವಲ್ಲದೆ ಮತ್ತೇನು..?
ಸನ್ಮಾನ್ಯ ಶಿಕ್ಷಣ ಸಚಿವರು ಮೂಲ ಭಾರತೀಯ ಸಂಸ್ಕೃತಿಯಲ್ಲಿ ಮಾನಸಿಕ ಗುಲಾಮಗಿರಿ ಇರಲಿಲ್ಲವೆಂದು ಹೇಳಿರುವುದು ಗಮನಿಸಿದರೆ ಕಾಮಾಲೆ ಕಣ್ಣಿಂದ ಇತಿಹಾಸವನ್ನು ನೋಡುತ್ತಿರುವವರು ಯಾರೆಂಬುದನ್ನು ಅವರೇ ಹೇಳಿಕೊಂಡಂತಾಗಿದೆ…. ನಿಮ್ಮ ಸಂಸ್ಕೃತಿಯಲ್ಲಿ ರಾಮನನ್ನು ಪ್ರತಿಷ್ಠಾಪಿಸುವ ಕಾರಣಕ್ಕಾಗಿಯೇ ರಾವಣನನ್ನು ರಾಕ್ಷಸನನ್ನಾಗಿ ಸೃಷ್ಟಿಸಿದೀರಲ್ಲ… ರಾಮ ಶಿವಧನಸ್ಸು ಮುರಿಯುವಲ್ಲಿ ಶಿವನೆಂಬ ದ್ರಾವಿಡ ಸಂಸ್ಕೃತಿಯೊಂದನ್ನು ಅಳಿಸಿ ವೈದಿಕತೆಯನ್ನು ಸ್ಥಾಪಿಸಿದರಲ್ಲ, ಒಂದು ವರ್ಗಕ್ಕೆ ವೈದಿಕರು ಸೃಷ್ಟಿಸಿರುವ ದೇವಸ್ಥಾನಗಳಲ್ಲಿ ಪ್ರವೇಶವಿರಲಿಲ್ಲ, ಅಕ್ಷರ ಅಭ್ಯಾಸ, ಅಧ್ಯಯನಗಳಲ್ಲಿ ತೊಡಗಲು ನಿಮ್ಮ ಮೂಲ ಸಂಸ್ಕೃತಿಯಲ್ಲಿ ಅವಕಾಶ ಮಾಡಿಕೊಡಲಾಗಿತ್ತೋ… ಇಂಥ ಎಷ್ಟೋ ಅಸಮಾನತೆಗಳನ್ನು ಸೃಷ್ಟಿಸಿ ಸರ್ವೇಜನಾಃ ಸುಖಿನೋಭವಂತು ಎಂದು ಹೇಳುವ ನಿಮ್ಮ ಈ ಜಗತ್ತಿನ ಪ್ರೀತಿಯಲ್ಲಿ ಕೇಸರ ಹೊರತಾದ ಬೇರೆ ಬಣ್ಣಗಳಿಗೆ ಅವಕಾಶವಿಲ್ಲವೇ…? ಮುಕ್ತವಾದ ಸಮಾಜ ಕಟ್ಟುವ ಕನಸುಗಳನ್ನು ಎಳೆವಯಸ್ಸಿನಲ್ಲಿಯೇ ಭೋದಿಸಬೇಕು ಮುಕ್ಕಾದ ಇತಿಹಾಸವನ್ನಲ್ಲ. ವೇದವು ಗೊಡ್ಡು ಪುರಾಣ ಕಟ್ಟೆಯ ಹರಟೆ ಎಂಬ ಅರ್ಥದ ವಚನಗಳು ವಚನ ಸಾಹಿತ್ಯದಲ್ಲಿ ಸಿಗುತ್ತವೆ ಅಂಥ ವೈಚಾರಿಕ ತರ್ಕವನ್ನ ಪಠ್ಯವಾಗಿಸುತ್ತೀರಾ.? ಭಾರತೀಯ ತತ್ವಶಾಸ್ತ್ರದಲ್ಲಿ ಬರುವ ಭಾವುಕ ಸಿದ್ಧಾಂತಿಗಳ ವಿಚಕ್ಷಕ ದೃಷ್ಟಿಕೋನದ ನಿಲುವುಗಳನ್ನು ಪಠ್ಯವಾಗಿ ಇಡಬಲ್ಲರೇ, ಅದಿರಲಿ ಸ್ವಾತಂತ್ರ್ಯಾಪೂರ್ವದ 1918 ರಲ್ಲಿ ಮಹಾರಾಷ್ಟ್ರದ ಬೀಮಾತೀರದ ಕೋರೆಗಾಂವದಲ್ಲಿ ಪೇಶ್ವೆ ಮತ್ತು ಮಹಾರರ ನಡುವೆ ಯುದ್ಧ ನಡೆದಾಗ ಪೇಶ್ವೆಗಳ 32 ಸಾವಿರ ಸೈನಿಕರನ್ನು ಮಾಹಾರರ 500 ಸೈನಿಕರು ಕೇವಲ ಹನ್ನೆರಡು ಗಂಟೆಗಳಲ್ಲಿ ಸೋಲಿಸಿದ (ಆ ಘಟನೆಯ ನೆನಪಿಗಾಗಿ ಕೋರೆಗಾಂವನಲ್ಲಿ ಶೌರ್ಯಸ್ಥಂಭ ಸ್ಥಾಪಿಸಲಾಗಿದೆ) ಇತಿಹಾಸವನ್ನೂ ನಿಮ್ಮ ಪಠ್ಯದಲ್ಲಿ ಸೇರಿಸುವುದಿಲ್ಲ ಯಾಕೆ…? ಇಡೀ ಜಗತ್ತನ್ನು ಪ್ರೀತಿಸು ಎಂಬ ತತ್ವವನ್ನು ಸಾರಿರುವುದಾಗಿ ಹೇಳಿಕೊಳ್ಳುವ ವೈದಿಕ ಮನಸ್ಸುಗಳು ಯಾವ ಅಸ್ಮಿತೆಯನ್ನು ಉಳಿಸಿಕೊಳ್ಳಲು ಯಾವ ರಾಷ್ಟ್ರೀಯತೆ ಭಾವನೆಯನ್ನು ಜಾಗೃತಗೊಳಿಸಲು ಶಿಕ್ಷಣದಲ್ಲಿ ಕೇಸರೀಕರಣದ ಪಠ್ಯ ಹಾಕುತ್ತಿದ್ದಾರೆ…? ಇತಿಹಾಸದಲ್ಲಿ ಮರೆಯಾದ ಧರ್ಮಧಾರಿತ ಅಂದರೆ ವೈದಿಕ ಪುರೋಹಿತಶಾಹಿತ್ವವನ್ನು ಪ್ರತಿಪಾದಿಸಿದ ವ್ಯಕ್ತಿಗಳನ್ನು ಪರಿಚಯಿಸುವುದು ನಮ್ಮ ಶಿಕ್ಷಣ ಸಚಿವರಿಗೆ ಭಾರತೀಯತೆ, ರಾಷ್ಟ್ರೀಯತೆಯ ಅಭಿಮಾನವಾಗಿಬಿಟ್ಟಿದೆ. ಮಕ್ಕಳಲ್ಲಿ ಮೊದಲು ಸ್ವಾತಂತ್ರ್ಯದ ಕಲ್ಪನೆ, ಮಾನವೀಯ ಮೌಲ್ಯಗಳು, ಸಮಾನತೆಯ ಬದುಕಿನ ಕುರಿತಾದ ಅರಿವು ಮೂಡಿಸುವುದು ಮುಖ್ಯ. ಕೇಸರೀಕರಣವೇ ಭಾರತೀಕರಣ ಎನ್ನುವ ಶಿಕ್ಷಣ ಸಚಿವರು ಜವಾಬ್ದಾರಿಯುತ ಸ್ಥಾನದಲ್ಲಿದ್ದವರು-ತಮ್ಮ ಪಕ್ಷ ಸಿದ್ಧಾಂತದ ಅಜಂಡಾವನ್ನು ಕರ್ನಾಟಕದ ಮಕ್ಕಳ ಮನಸ್ಸಿಗೆ ತುರುಕುವ ಪ್ರಯತ್ನ ರಾಷ್ಟ್ರೀಯತೆ ಆಗಲಾರದು.

-ಮಹಾದೇವ ಹಡಪದ.