ಸಾಕೋದನ್ ಅರಿತಾತ-ಸಾವಿರಜನಕ್ ತ್ರಾತ


Image

ಆಧುನಿಕ ಶಿಕ್ಷಣ ಕೊಂಡಿ ಇಲ್ಲದ ಪಾತಾಳಗರಡಿ. ಅತಿ ಹೆಚ್ಚು ಅನಕ್ಷರಸ್ಥರಿರುವ ಊರುಗಳನ್ನ ಹಿಂದುಳಿದ ಊರಗಳು ಅಂತ ದಪ್ಪಕ್ಷರದಲ್ಲಿ, ಸರಕಾರಿ ದಫ್ತರಗಳಲ್ಲಿ ಬರೆದು ಇಡುತ್ತಾರೆ. ಅದನ್ನ ಮುಂದ ಮಾಡಕೊಂಡು ಕೆಲವರು ವಿದೇಶಿ ಬಿಟ್ಟಿ ಬಂಡವಾಳ ತರಸ್ಕೊಂಡು ನಾಲ್ಕಕ್ಷರ ಕಲಿಸಿ ದೊಡ್ಡ ಶ್ಯಾಣೇತನ ಕಲಿಸಿದಿವಿ ಅಂತ ಹೇಳಕೊಂಡು ಬೇರೆ ಬೀಗತಾರೆ. ಹಾಂಗ ನೋಡಿದರ ನಾನು ನಮ್ಮಪ್ಪ ಮಾಡೋ ಉದ್ಯೋಗವನ್ನ ಅಚ್ಚುಕಟ್ಟಾಗಿ ಕಲಿತರೆ ಅದು ಶಿಕ್ಷಣವೇ. ಚಾಮರಾಜನಗರ ಜಿಲ್ಲೆಯಲ್ಲಿ ನೌಕರಿಗೆ ಹೋದವರು ಕಮ್ಮಿ ಇರಬಹುದು ರೈತಾಪಿ ಮಾಡೋರು ಜಾಸ್ತಿ ಇದ್ದಾರ. ಬಿದರ ಜಿಲ್ಲೆಯಲ್ಲಿ ಬದುಕು ಕಲಿತ ಮಕ್ಕಳು ಜಾಸ್ತಿ ಇದ್ದಾರ. ಅವರೆಲ್ಲರಿಗೂ ಓದು ಬರಹ ಬರೋದಿಲ್ಲ ಅಂದ ಕಾರಣಕ್ಕ ಗುಗ್ಗುಗಳು, ದಡ್ಡರು ಎಂಬಂತೆ, ಮುಗ್ಧರು ಪಾಪ ಎಂಬಂತೆ ನೋಡುವವರ ದೃಷ್ಟಿದೋಷ ಇತ್ತೀಚೆಗಂತೂ ಹೆಚ್ಚಾಗಿಬಿಟ್ಟಿದೆ. ಇದೆಲ್ಲಕ್ಕೂ ಉತ್ತರವಾಗಿ ಅಂದಾಜು ನೂರು ವರ್ಷಗಳ ಹಿಂದೆ ಬರೆದಿರುವ ಟೊಳ್ಳುಗಟ್ಟಿ ನಾಟಕದ ವಸ್ತುವಿನ ರೂಪ ಇಂದಿಗೂ ಸಮಾಜದಲ್ಲಿನ ನಂಬರ್ ಒನ್ ಆಗಬೇಕೆನ್ನುವ ಶಿಕ್ಷಣದ ಆಶಯ ಏನೇನೂ ಬದಲಾಗಿಲ್ಲವೆಂಬುದನ್ನ ಹೇಳತದೆ. ಪುಟ್ಟು-ಮಾದೂ ಥರದವರು ಇರೋದು ಇದ್ದೇ ಇರುತ್ತಾರೆ ಆದರೆ ಬೋಧನೆಯ ಕ್ರಮ ಬದಲಾಗುವುದಕ್ಕಿಂತ ಪೋಷಕರ ತಿಳವಳಿಕೆ ತಿದ್ದಬೇಕಾಗಿದೆ.

ಬಿಸಿನೆಸ್ ಅನ್ನೋ ಭೂತ ಮಾನಸಿಕ ನೆಮ್ಮದಿಯನ್ನ ಆಕ್ರಮಿಸಿಕೊಂಡ ಮೇಲಂತೂ ಈ ಬೂಟಾಟಿಕೆ ಬಾಬಾಗಳು, ಗುರುಗಳು, ಮಠಾದೀಶರು ತಾವೇ ನಾಡಪ್ರಭುಗಳಂತಾಡುತ್ತಿರುವುದು ಇವತ್ತಿನ ವಿಪರ್ಯಾಸ. ನ್ಯಾಯಾಲಯ ಇದ್ದರೂ ಅದನ್ನು ತಿರಸ್ಕರಿಸಿ ತಮ್ಮದೆ ನ್ಯಾಯಾಲಯ ಒಂದನ್ನು ಅಲ್ಲಲ್ಲಿ ಕೆಲ ಮಠಾಧೀಶರು ನಡೆಸುತ್ತಿದ್ದಾರೆ. ಒಂದು ಕಡೆ ವಿದೇಶಿ ಏಜಂಟ್ ಥರ ಕಾರಭಾರ ನಡೆಸಿರುವ ಒಬ್ಬ ಗುರು ಹೇಳತಾರೆ ಸರಕಾರೀ ಶಾಲೆಯಲ್ಲಿ ಓದಿದ ಮಕ್ಕಳು ನಕ್ಸಲೈಟ್ ಆಗತಾರೆ ಅಂತ. ಹಾಗಿದ್ದರೆ ಈ ಖಾಸಗಿ ಶಾಲೆಗಳಲ್ಲಿ ಓದಿದೋರೆಲ್ಲ ಭ್ರಷ್ಟ ರಾಜಕಾರಣಿಗಳು, ಗೂಂಢಾಗಳು, ವಿದೇಶಿ ಏಜಂಟರೂ, ತಲೆಹಿಡುಕರು,  ಅಧೀರ ವ್ಯಕ್ತಿತ್ವದವರಾಗುತ್ತಾರೆನ್ನುವ ಮಾತನ್ನು ಹೇಳಿದಂತಾಗಿದೆ. ಪ್ರಜಾಪ್ರಭುತ್ವವನ್ನು ಗೌರವಿಸದ ಇಂತವರ ಮಾತುಗಳಿಗೆ ಪ್ರೇರಣೆಯನ್ನು ಕೊಟ್ಟದ್ದಾದರು ಯಾವ ಖಾಸಗಿ ಶಾಲೆಯ school of thought ಇರಬಹುದು.   ಇನ್ನೊಂದು ಕಡೆಯಲ್ಲಿ ಸ್ವತಃ ತಂದೆ ತನ್ನ ಮಗಳು ಹೆಚ್ಚು ಮಾರ್ಕ್ಸ ತಗೀಲಿಲ್ಲದ ಕಾರಣಕ್ಕಾಗಿ ದೇವಸ್ಥಾನದ ಮುಂದೆ ಭಿಕ್ಷೆ ಬೇಡಲು ಕಳಿಸುತ್ತಾನೆ. ಇಂಥ ಹೇಯ ಶಿಕ್ಷೆ ಕೊಡುವ ಆ ತಂದೆ ಕಲಿತ ಶಿಕ್ಷಣವಾದರೂ ಯಾವ ಮಾದರಿಯದು ? ಅವನ ಪ್ರತಿಷ್ಠೆ ಆ ಮಗುವಿನಿಂದ ಏನು ಪ್ರಯೋಜನ ನೀರಿಕ್ಷಿಸುತ್ತದೆ. ಖಂಡಿತವಾಗಲೂ ಆ ತಂದೆಯ ಮನಸ್ಸಿನಲ್ಲಿ ಮಗೂಗೆ ಒಳ್ಳೆಯದಾಗಲಿ ಎಂಬುದಿರುತ್ತದೆ. ಆದರೆ ಅವನೊಳಗಿನ ಸ್ಪರ್ಧಾತ್ಮಕ ಜಗತ್ತಿನ ಅಂಕಿಅಂಶಕ್ಕೆ ವಿರುದ್ಧವಾದ ನಿರಾಶೆ ಎದುರಾದ ತಕ್ಷಣಕ್ಕೆ ಸೋತುಬಿಡುತ್ತಾನೆ. ಗೋಡೆಗಳ ನಡುವಿನ ಶಿಕ್ಷಣ ಮಹತ್ವದ್ದು ಅನ್ನೋ ಹುಚ್ಚನ್ನ ಬೆಳೆಸಿದ ಅವನ ತಂದೆ ತಾಯರು ಅವನಿಗೆ ಮುಖ್ಯ ಅನ್ನಿಸಿಬಿಡುತ್ತಾರೆ. ಹಾಗಾದರೆ ಶಿಕ್ಷಣ ಅಂದ್ರೆ ಓದು ಬರಹ ಅಷ್ಟೆ ಅದರಾಚೆಯ ತಿಳುವಳಿಕೆ ಅಗತ್ಯದ್ದಲ್ಲ ಎಂಬುದು ಆದಿಬುನಾದಿಯಿಂದಲೂ ಇದ್ದ ವಿದ್ಯಾಭ್ಯಾಸ ಕ್ರಮ ಆಗಿಬಿಟ್ಟಿದೆ.

 ಇದನ್ನ ಮನವರಿಕೆ ಮಾಡಿಕೊಂಡ  ಕೈಲಾಸಂ ಅವರು 1918 ರಲ್ಲಿ ತಮ್ಮ್ಮ ಟೊಳ್ಳುಗಟ್ಟಿ ನಾಟಕದಲ್ಲಿ  ಶಿಕ್ಷಣದ ಎರಡು ಕ್ರಮಗಳನ್ನು ತಂದೆ-ತಾಯಿಯರ ಬೋಧನೆ ಮತ್ತು ಸಾಕುವ ದೃಷ್ಟಾಂತದಲ್ಲಿ ಪ್ರಸ್ತುತಪಡಿಸಿದ್ದಾರೆ. ತಂದೆ ಹಿರಣ್ಣಯ್ಯನಿಂದ ಬೋಧಿಸಲ್ಪಡುವ ಪುಟ್ಟೂ ಮತ್ತೂ ಭಾಗಿರಥಮ್ಮನಿಂದ ಸಾಕಲ್ಪಡುವ ಮಾಧುವಿನ ಸ್ವಭಾವಗಳಲ್ಲಿ ಶಿಕ್ಷಣದ ರೂಪ ಕುರೂಪಗಳನ್ನು ತೋರಿಸಿದ್ದಾರೆ. ನಾಟಕದ ಉತ್ತರರಂಗದ ಕಡೆಯ ಗಳಿಗೆಯಲ್ಲಿ ನಾಟಕದ ಕರ್ತೃವೇ ಆದ ಗುಂಡೂ ಹೇಳುತ್ತಾನೆ “ಈಗ ನಾನು ತಮ್ಮಗಳಿಗೆಲ್ಲಾ ವಿನಯವಾಗಿ ಹೇಳ್ಕೊಳ್ಳೋದೇನಂದ್ರೆ… ನಮ್ಮ ಮನೆಗಳಲ್ಲಿ ಭಾಗೀರಥಮ್ಮ ಹೇಳಿದ್ಹಾಗೆ –ಈ ಭೂಮೀಲಿ ಜೀವಿಸೋಕೆ ದೇವರಿಗೆ ಕೊಡೋ ಬಾಡಿಗೆ ಸುತ್ತ ಮುತ್ತಲೂ ಇರೋ ಜನರಿಗೆ ಉಪಯೋಗವಾಗಿರೋದೆ- ಎಂಬ ಉದ್ಧೇಶಾನ ಮುಂದಿಟ್ಟಕೊಂಡು ಮಕ್ಳನ್ಸಾಕಿ, ಗುಣಗಳನ್ನು ಬಿತ್ತಿ, ಬೆಳೆಸಿ, ಸ್ಕೂಲಿಗೆ ಕಳಿಸಿ, ಸ್ಕೂಲಗಳಲ್ಲಿ ನಾವೀಗನುಸರಿಸುತ್ತಿರುವ ಕೊಂಡಿ ಇಲ್ಲದ ಪಾತಾಳಗರಡಿ ಕ್ರಮಾನ ಬಿಟ್ಬಿಟ್ಟು, ನಮ್ಮಕ್ಕಳ ಸ್ವಭಾವದಲ್ಲಿರೋ ಗುಣಗಳನ್ನ ಹೊರಕ್ಕೆ ಸೆಳೆಯುವ ವಿದ್ಯಾಭ್ಯಾಸಕ್ರಮ ಏರ್ಪಡಿಸಿಕೊಂಡ್ರೇನೆ ನಮ್ಮ ದೇಶದೇಳ್ಗೆ- ಅನ್ನೋ ಮಾತು ಇವತ್ತಿನ ಶಿಕ್ಷಿಸುವ ಪಾಲಕರು ಮತ್ತು ಸ್ವಯಂ ಘೋಷಿತ  ಪ್ರವಾದಿಗಳಿಗೆ ಮುಟ್ಟಬೇಕಾಗಿದೆ. ಯಾರು ಏನೇ ಅಂದ್ರೂ ಏನೇ ಹೇಳಕೆ ಕೊಟ್ಟರೂ ಟೊಳ್ಳು ಟೊಳ್ಳೆ-ಗಟ್ಟಿ ಗಟ್ಟಿನೇ….

                                                    -ಅಮಾಸ

ನನ್ನೂರು- ಏಳೆಂಟು ವರ್ಷದ ನಂತರ ಉಗಾದಿ ಹಬ್ಬಕ್ಕಂತ ಊರಿಗೆ ಹೋಗಿದ್ದೆ


ಬೇಸಿಗೆ ಅಂದರೆ ಸಾಲಿಗೆ ಸೂಟಿ ಸಿಗತದ ಅನ್ನೋದು ಈ ಉಗಾದಿ ಹಬ್ಬ ಬಂದಾಗ ನೆನಪಾಗತಿತ್ತು. ಹಳ್ಳದ ನೀರೊಳಗ ಈಜು ಕಲಿಯೋದು, ಗಿಡಮಂಗ್ಯಾನಾಟ, ಚಿನ್ನಿದಾಂಡು, ಸಗಣಿ ಹಿಡಿಯೋದು, ದನ ಮೇಯಿಸೋದು, ಮದುವಿ ಊಟಕ್ಕ ಹೋಗೋದು, ಒಂದರ ಮ್ಯಾಲೊಂದು ಜಾತ್ರಿ ಮಾಡೋದು, ಸಾಲಿ ಗುಡಿಯಾಗ ಆಡೋ ನಾಟಕದ ತಾಲೀಮನ್ನ ಒಂದ ದಿವಸಾನೂ ತಪ್ಪದಂಗ ನೋಡೋದು ಹಿಂಗ ಬ್ಯಾಸಿಗಿ ಪೂರ್ತಾ ಕಾರ್ಯಕ್ರಮಗಳ ಬಿಸಿಯೊಳಗ ಕಳಿಯುತ್ತಿದ್ದರ ನೆನಪು ಕಾಡಿತು. ಇದೆಲ್ಲದಕ್ಕೂ ಆದಿಬುನಾದಿಯಾಗಿ ಓಂ ಪ್ರಥಮದ ಹಬ್ಬ ಈ ಉಗಾದಿ ಆಗಿರತಿತ್ತು. ಸುತ್ತಲ ಸೀಮೆಯ ಎಲ್ಲ ದೇವರುಗಳನ್ನ ಹಿರಿಹೊಳಿಗೆ ಸ್ನಾನಕ್ಕ ಒಯ್ಯುತ್ತಿರಬೇಕಾದರ ನಾವೂ ಜಳಕಕ್ಕ ಕೃಷ್ಣಾ ನದಿಗೆ ಬರ್ತಿವಿ… ಅಂತ ಅಳೋದು ಹೋಳಿ ಹಬ್ಬದಿಂದ ಸುರುವಾಗಿರತಿತ್ತು. ಖರೇ, ಆ ಸಡಗರ ಈಗ ಉಳಿದಿಲ್ಲ ಅನ್ನಿಸತಿತ್ತು. ಯಾಕೋ ಎಲ್ಲ ಬೀಗರೂ ಬಿಜ್ಜರೂ ಹೊರಗಿನವರಂಗ ಕಾಣಿಸಲಿಕ್ಕ ಹತ್ತಿದ್ದರು. ಅಂದಾಜು ನಾ ಅಂತರ್ ಜಾತಿ ಕನ್ಯ ಮದುವಿ ಆದರ ಪರಿಣಾಮ ಇದ್ದಿರಬಹುದು.
ಅವ್ವನ ಕೈ ರೊಟ್ಟಿ ರುಚಿ ಏಟೇಟೂ ಬದಲಾಗಿರಲಿಲ್ಲ ಅಂದರೂ ಅಪ್ಪನ ಮೈಯಾಗ ಕಸು ಇಲ್ಲದಕ್ಕ ಉಗಾದಿ ಸಂಭ್ರಮ ಅಷ್ಟು ಖುಷಿ ಕೊಡಲಿಲ್ಲ, ಯಾಕಂದ್ರ ಅಪ್ಪ ತನ್ನ ದೋಸ್ತಿ ಮ್ಯಾಳ ಕಟ್ಟಗೊಂಡು ಕರಡಿ ಮಜಲು ಬಾರಿಸೋ ವಿಶೇಷ ಮನರಂಜನೆ ನಮ್ಮೂರಿಂದ ಮಾಯವಾದಂಗ ಅನಸತಿತ್ತು. ಹಳ್ಳದ ನೀರಿನ ಸೆಲಿ ಖಾಯಂ ಬತ್ತಿ ಹೋಗಿ ಈಗ ನೀರು ತಂದು ಜಳಕ ಮಾಡೋ ಪರಸಂಗ ಬಂದು, ಊರವರೆಲ್ಲ ಮುಂಜಾನೆದ್ದು ಕಾಲಿ ಕೊಡ ಇಟಗೊಂಡು ನೀರಬರಲಾರದ ನಲ್ಲಿ ಮುಂದ ವಿಶಿಷ್ಟ ಜಪ ನಡೆಸಿರತಿದ್ದರು. ಆದರ ನಾ ಓದಿದ ಸರಕಾರೀ ಕನ್ನಡ ಗಂಡು ಮಕ್ಕಳ ಶಾಲೆಗೆ ಕಂಪೌಂಡು ಬಂದು ಇಡೀ ಊರಿಗೆ ಒಂದು ತೆರನಾದ ಶಿಸ್ತು ಬಂದದ. ಅದಕ್ಕ ಹೊಂದಿಕೊಂಡು ಎಲ್ಲ ಮನೆಗಳ ವಾಸ್ತು, ಬಣ್ಣ ಬದಲಿ ಮಾಡಿಕೊಂಡಿದಾರ. ಹಾಂಗ ನೋಡಿದರ 2000 ನೇ ಇಸ್ವಿ ಅಷ್ಟೊತ್ತಗೆ ಒಂದೂ ಕಂಪೌಂಡ ಇದ್ದಿರಲಿಲ್ಲ. ಈಗ ಎಲ್ಲಾರೂ ತಮ್ಮ ಮನಿಗಳ ಸುತ್ತ ಒಂದೊಂದು ಗ್ವಾಡಿ ಕಟ್ಟಗೊಂಡಿದಾರ… ಹೋಗಿ ಬರೋ ಮಂದಿಮಕ್ಕಳನ್ನ ಯಾವಾಗ ಬಂದ್ರೀ, ಯಲ್ಲಿದೀರಿ, ಸಧ್ಯ ಏನು ಮಾಡತಿದ್ದೀರಿ ಅಂತ ಕಿರಿಕಿರಿ ಆಗುವಷ್ಟು ಮಾತಾಡಿಸುತ್ತಿದ್ದ ಹಿರೀಕರ ಕಣ್ಣು ಮಂದ ಆಗಿದ್ದಕ್ಕ ಅಂಥ ಯಾವ ಒಣ ಪ್ರಶ್ನೆಗಳು ಈ ಸಲ ಕೇಳಲಿಲ್ಲ. ಬಿಸಿಲು ಮೊದಲಿನಿಕಿಂತ ಈಗ ಜಾಸ್ತಿ ಆಗಿದ್ದು ಅನುಭವಕ್ಕ ಬಂತು.
ನನ್ನ ಕಬಡ್ಡಿ ಮೈದಾನ ಅಂದ್ರ ಜೋಳದ ರಾಶಿ ಕಣ ಬಳ್ಳಾರಿ ಜಾಲಿಯಿಂದಾಗಿ ತನ್ನ ಆಕಾರ ಕಳಕೊಂಡದ. ದಾಸರ ಮಾಸ್ತರರು, ಪೇಟಿ ಮಾಸ್ತರ ನಬಿಸಾಹೇಬರು, ವೀರಗಾಸೆ ಚನ್ನಮಲ್ಲಯ್ಯ, ಟೇಲರ್ ಸೈದುಸಾಹೇಬರೂ, ಸೆರೆ ಮಾರತಿದ್ದ ಲಗಳಿ ಫಕೀರವ್ವ, ಭಾಗವಾನ ರಾಜಮ್ಮ, ಕಿಷ್ಟಪ್ಪಗೌಡ, ನಮ್ಮಪ್ಪ ಎಲ್ಲರೂ ಈಗ ತಣ್ಣಗಾಗಿದಾರ. ಕೆಲವರು ಸತ್ತಿದ್ದರ ಕೆಲವರು ಮೂಲಿಗುಂಪಾಗಿ ಅನೂಹ್ಯ ಅಂದುಕೊಂಡ ಜಗತ್ತಿನ ಜಪ ಮಾಡತಿದ್ದಾರ ಅನ್ನಿಸಿತು. ಊರಂಬೋ ಊರಿನ ಚಿತ್ರ ನನ್ನ ಕಣ್ಣಾಗ ಹಂಗ ಉಳಕೊಂಡ ದೆಸಿಯಿಂದ ಅಲ್ಲಿ ಆಗಿರುವ ಯಾವ ಬದಲಾವಣೆಯನ್ನೂ ನನ್ನೊಳಗಿನ ಚಿತ್ರ ಗ್ರಹಿಸಿಕೊಳ್ಳಲು ಒಪ್ಪಲಿಲ್ಲ. ಆದ್ದರಿಂದ ನನ್ನ ಬಾಲ್ಯದ ಆ ಊರು, ಆ ನಡವಳಿಕೆ, ಆ ತಿಳುವಳಿಕೆ, ಆ ಆಟ, ಆ ನಾಟಕ, ಆ ಜಾತ್ರೆ, ಆ ಲಗ್ನಗಳು, ಆ ಸಂಬಂಧಗಳು ಜತನದಿಂದ ನನ್ನ ಒಳಗ ಉಳಿಸಿಕೊಂಡು ಮರಳಿ ಬಂದ್ರೂ… ಅದೇ ಆ, ನನ್ನ ತಲೆಯೊಳಗಿನ ನನ್ನೂರು… ಈಗಲ ಈ ಊರು ಒಂದಕ್ಕೊಂದು ಹೊಂದಾಣಿಕೆ ಆಗವಲ್ಲದು. ಆದರೂ ನಾ ಸಣ್ಣವನಿದ್ದಾಗ ನಮ್ಮೂರು ಹಾಂಗ ಬೆಳಿಬೇಕು ಹಿಂಗ ಬೆಳಿಬೇಕು ಅಂಬೋ ಕನಸು ಕಾಣತಿದ್ದದ್ದು ಈಗ ಖರೆ ಆಗಿದಾವ ಅನ್ನೊ ಸಮಾಧಾನವೊಂದ ನಮ್ಮೂರಿನ ಬಗ್ಗೆ ನನಗಿರುವ ಹೆಮ್ಮೆ…..
———- ಅಮಾಸ

ರಂಗಭೂಮಿ


ಘಟಾನುಘಟಿಗಳಲ್ಲಿ ಒಬ್ಬರು….
ಈ ದಿನ ವಿಶ್ವರಂಗಭೂಮಿ ದಿನ. ಧ್ಯಾನಕ್ಕೆ ಸಿಗುವ ಒಂದಷ್ಟು ವ್ಯಕ್ತಿತ್ವಗಳ ಮಾದರಿಯನ್ನು ಅನುಸರಿಸಿ ರಂಗಕಾಯಕ ಮಾಡುವ ಹೊತ್ತಲ್ಲಿ – ಬಸು, ಅಕ್ಷರ, ಪ್ರಸನ್ನ, ಇಕ್ಬಾಲ್ ಅಹ್ಮದ್, ರಘುನಂದನ, ಪ್ರಕಾಶ ಗರೂಡ, ಜಂಬೆ- ಎಲ್ಲ ನೆನಪಾಗುತ್ತಾರೆ. ಅವರೊಂದಿಗೆ ಕಳೆದ ಕ್ಷಣಗಳು ನೆನಪಾಗುತ್ತವೆ. ಬೆನ್ನು ತಟ್ಟಿ ಪ್ರೋತ್ಸಾಹಿಸಿದ, ತಪ್ಪಿದಲ್ಲಿ ಕಾಲೆಳೆದು ಕಿಚಾಯಿಸಿದ ಅಲ್ಲದೆ ಹೊಸ ಓದು,ಹೊಸ ನೋಟದ ಹೊಸ ಕಾಣ್ಕೆಗಳನ್ನು ಹಾಕಿಕೊಟ್ಟು ಹೊಸದಾಗಿ ರಂಗಭೂಮಿಗೆ ಬರುತ್ತಿರುವ ಯುವ ಮಿತ್ರರೊಂದಿಗೆ ಇಂದಿಗೂ ಅದೇ ಉತ್ಸಾಹದಲ್ಲಿ ಕೆಲಸ ಮಾಡುವ ಅವರ ಬದ್ಧತೆ ಕೊಂಚ ಧೈರ್ಯ ಕೊಡುತ್ತದೆ. ಯಾವದೋ ಕ್ಷಣದಲ್ಲಿ ಸಾಕಪ್ಪ ಈ ರಂಗಭೂಮಿ ಸಹವಾಸ ಅಂದುಕೊಳ್ಳುವಾಗ ರಂಗಭೂಮಿಯನ್ನೇ ಉಸಿರಾಗಿಸಿಕೊಂಡವರು ಥಟ್ಟನೆ ನೆನಪಾಗುತ್ತಾರೆ….. ಇವತ್ತು ಈಗ ನೆನಪಾದವರು ಚಿದಂಬರರಾವ್ ಜಂಬೆ…. ಮೂವತ್ತು ವರ್ಷಗಳ ಕಾಲ ರಂಗಶಿಕ್ಷಣ ನೀಡಿದ, ಕನ್ನಡ ರಂಗಭೂಮಿಯಲ್ಲಿ ಬಹಳಷ್ಟು ನಟ-ನಟಿಯರಿಗೆ, ನಿರ್ದೇಶಕರುಗಳಿಗೆ, ರಂಗತಂತ್ರಜ್ಞರುಗಳಿಗೆ ಪಾಠ ಮಾಡಿದ, ರಂಗದೀಕ್ಷೆ ನೀಡಿದ ಮಹಾನ್ ವ್ಯಕ್ತಿತ್ವ ಶ್ರೀ ಚಿದಂಬರರಾವ್ ಜಂಬೆ ಅವರದ್ದು. ಆಧುನಿಕ ಕನ್ನಡ ರಂಗಭೂಮಿಯಲ್ಲಿ ನಾಟಕ ಕಲಿಸುವ, ಕಲಿಯುವ, ನೋಡುವ ಪರಂಪರೆಯನ್ನು ಬೆಳೆಸಿದ ಕೆಲವೇ ನಿರ್ದೇಶಕರುಗಳಲ್ಲಿ ಜಂಬೆ ಅವರ ವ್ಯಕ್ತಿತ್ವ ಗುರುವಿನ ಸ್ಥಾನದ್ದು. ಅವರು ನನಗೆ ಗುರುಗಳಲ್ಲ ಆದರೂ ಅವರ ನಿರ್ದೇಶನದ ನಾಟಕಗಳಿಂದ ನಾನು ಕಲಿತಿದ್ದೇನೆ, ಅವರ ಒಡನಾಟದಿಂದ ನಾಟಕ ಕಟ್ಟುವ, ಸಾಹಿತ್ಯ ಕೃತಿಯೊಳಗಿನ ನಾಟಕೀಯ ಭಾವಗಳನ್ನು ಅರ್ಥೈಸಿಕೊಳ್ಳುವ, ಅಲ್ಲದ್ದನ್ನೂ ನಾಜೂಕಾಗಿ ಕ್ರಿಯಾಶೀಲಗೊಳಿಸುವ, ನವಶಾಸ್ತ್ರೀಯ ಕಲಾ ಮಾರ್ಗಗಳನ್ನು ಆಧುನಿಕವಾಗಿ ಒಳಗೊಳ್ಳುವ…. ಹೀಗೆ ಅವರಿಂದ ಏನೆಲ್ಲ ಕಲಿತಿದ್ದೇನೆ.
ಆ ವ್ಯಕ್ತಿತ್ವ ಅಖಾಡಾದ ಮುಂದೆ ಕುರ್ಚಿ ಹಾಕಿಕೊಂಡು ಕೂತಿದ್ದರೆ ಸಾಕು ನಾಟಕದ ತಾಲೀಮಿಗೊಂದು ತೂಕ ತನ್ನತಾನೇ ಬಂದುಬಿಡುತ್ತದೆ. ಇದು ಉತ್ಪ್ರೇಕ್ಷೆ ಮಾತಲ್ಲ ಅವರನ್ನು ಹತ್ತಿರದಿಂದ ಬಲ್ಲ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ನಾಟಕ ಹೀಗೇ ಮಾಡಬೇಕೆಂದು, ಅಭಿನಯ ಅಂದರೆ ಇದು ಎಂದು ತಮಗೆ ತಿಳಿದ ಸತ್ಯವನ್ನು ಬಲವಂತವಾಗಿ ನಟರ ಮೇಲೆ ಹೇರುವ ಅದೆಷ್ಟೋ ನಿರ್ದೇಶಕರ ಬಗ್ಗೆ ನಟ-ನಟಿಯರು ಮಾತಾಡಿಕೊಳ್ಳುವುದನ್ನು ಕೇಳಿದ್ದಿದೆ. ಆದರೆ ಕಲಿಸುವ ಸೂಕ್ಷ್ಮತೆಯನ್ನು ಉಳಿಸಿಕೊಂಡು ನಟರ ಅಂತಃಸ್ಪೂರ್ತಿಗೆ ಇಂಬು ಕೊಡುವ ದೃಷ್ಟಿಯುಳ್ಳ ಕೆಲವು ನಿರ್ದೇಶಕರಲ್ಲಿ ಶ್ರಿ ಚಿದಂಬರರಾವ್ ಜಂಬೆ ಅವರು ಒಬ್ಬರು. ಸೌಂದರ್ಯ ಪ್ರಜ್ಞೆ ಮತ್ತು ನಟರ ಭಾವಪ್ರಪಂಚ ಎರಡು ಒಟ್ಟೊಟ್ಟಿಗೆ ಅವರ ನಾಟಕಗಳಲ್ಲಿ ಕಾಣುತ್ತದೆ. ಯಾವ ನಾಟಕವೇ ಆಗಲಿ ರಂಗಕೃತಿಯ ಸಂಕಲನದಲ್ಲಿಯೇ ಅವರು ಗೆದ್ದು ಬಿಟ್ಟಿರುತ್ತಾರೆ. ರಂಗಸಾಧ್ಯತೆಯನ್ನು ಕಲಾತ್ಮಕವಾಗಿ ಆಗು ಮಾಡುವ ಆ ವಿಧಾನದಲ್ಲಿ ಸಹನೆ ಮತ್ತು ನಾಟಕದ ಒಟ್ಟು ವಿನ್ಯಾಸವನ್ನು ಜತನದಲ್ಲಿಟ್ಟುಕೊಂಡು ಕೃತಿಯ ಆಶಯವನ್ನು ವಿಸ್ತಾರವಾಗಿ ಪದರು ಪದರು ಬಿಡಿಸಿಡುವ ಕ್ರಮ ಅವರ ಶಿಸ್ತಿನೊಂದಿಗೆ ನಾಟಕಕ್ಕೂ ಬಂದು ಬಿಡುತ್ತದೆ. ತಾಲೀಮು ಹಂತದಲ್ಲಿ ನಟರೊಂದಿಗೆ ಒಡನಾಡುವುದು, ನೇಪಥ್ಯವನ್ನು ಜೀವಂತ ಪಾತ್ರವೆಂದು ಕಾಣುವುದು, ಹಲವಾರು ತಂತ್ರಜ್ಞರನ್ನೂ ಕೂಡಿಸಿಕೊಂಡು ಒಂದು ಮಾದರಿಯ ಕುಸುರಿ ಕೆಲಸವನ್ನು ನಾಟಕದಲ್ಲಿ ಪಾಕಗೊಳಿಸುವ ಅವರ ರಂಗಭೂಮಿ ಪ್ರೀತಿ ಎಂಥವರನ್ನು ಉತ್ಸಾಹಿತರನ್ನಾಗಿಸುತ್ತದೆ. ಸಂಘಟಿಸುವ ಚಾತುರ್ಯದಿಂದ ದೂರ ಉಳಿದು ಎಲ್ಲವನ್ನೂ ನಾನೇ ಮಾಡುತ್ತೇನೆಂದು ಹೊರಡುವ ಈ ದಿನಮಾನದಲ್ಲಿ ಹೀಗೆ ರಂಗಬಳಗವನ್ನು ನಾಟಕದ ನೆಪದಲ್ಲಿ ಒಟ್ಟಾಗಿಸುತ್ತಿರುವುದು ಮತ್ತು ಯುವ ರಂಗಕರ್ಮಿಗಳಿಗೆ ಆದ್ಯತೆ ನಿಡುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ. ಕನ್ನಡದ ಎರಡು ಪ್ರಸಿದ್ಧ ರಂಗಶಾಲೆಗಳಲ್ಲಿ ಆಚಾರ್ಯ ಪುರುಷರಾಗಿ ಕೆಲಸ ಮಾಡಿ, ರಂಗಾಯಣದ ನಿರ್ದೇಶಕರಾಗಿ, ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ಚಾಪ್ಟರ್ ತೆರೆದು ಶಿಬಿರಗಳನ್ನು ನಡೆಸಿಯೂ ಎಳೆಮಗುವಿನಂತೆ ಹೊಸ ಹುಡುಗರೊಂದಿಗೆ ಕೈ ಜೋಡಿಸಿ ಸಂಘಟನೆ ಕಟ್ಟುವ ಉತ್ಸಾಹದಲ್ಲಿರುವ ಅವರ ಬದ್ಧತೆ ನಮಗೆ ಮಾದರಿಯಾಗಿದೆ.
—————————————ಅಮಾಸ.

ಕಾವ್ಯ


ಚಿತ್ತಶುದ್ಧಿ
ದುಃಖಿಸಬೇಕು, ಅಂದುಕೊಂಡಾಗ
ಕತ್ತಲೂ ನನ್ನೊಂದಿಗೆ ಬಿಕ್ಕುತ್ತದೆ.

ಯಾವನೋ ಕರೆದು ಕೊಂಕು ಮಾತಾಡಿಸಿದ
ಖರೆ, ನಾನು ಸಾಕ್ಷಾತ್ ಸತ್ತು ಹೋಗಿದ್ದೆ.
ತರಗೆಲೆಯಲ್ಲಿ ತೆವಳುವ ಹಾವು, ಮೂಢಣ ದಿಕ್ಕಿನ ಹಲ್ಲಿ
ಉದರ ಬಸುರ ಕಂಕುಳ ಕೂಸು
ಮೈ ಅದುರಿದ ಹೋರಿಯ ದಪ್ಪ ಚರ್ಮ
ವ್ಯಾಪಾರ ಬುದ್ದಿಯ ಅಂತರ್ಗತ ಧರ್ಮ
ಕಾರಣಿಕದ ಕಚಗುಳಿ ಇಟ್ಟ ಕರ್ಮ
ಛೇ !
ಸೂಜಿ ಮೊನೆಯ ನೋವ ಸಹನೆ ಅಸಾಧ್ಯ….

ಯಾವನೋ ಕರೆದು ಕೊಂಕು ಮಾತಾಡಿದ್ದ ಸಿಟ್ಟಿಗೆ
ಗರ್ವದ ಸಂಕಲ್ಪ
ನಳಿಕೆಗಳೆರಡರ ನಡುವೆ ಕೂತ ಗುರಿ
ಕಿರಗುಡುವ ರಥದ ಹೂತ ಚಕ್ರ…

ಸಾಯುವ ಹಿಂದಿನ ದಿನ
ನನ್ನ ಗೋರಿ ಕತ್ತಲ ಗೂಡು;
ಮಿಣಕ ಮಿಂಚು ತಥ್ಥಾತಿಥ್ಥಿ
ಕಾವಿಗೆ ಕುಳಿತ ಪಾರಿವಾಳದ ಕಾಲ ಕೆಳಗೆ
ರೆಕ್ಕೆಯ ಒಡಲೊಳಗೆ ತತ್ತಿಗಳು
ಎರಡೇ !
ಅಂಗೈ ಮತ್ತು ಲಿಂಗದ ನಡುವೆ ಸತ್ತ ಆಧ್ಯಾತ್ಮ
ಆಧ್ಯಾತ್ಮದ ಒಣ ಧರಣಿ ಚಿತ್ತಶುದ್ದಿ.

-ಅಮಾಸ

ಅವೇಳೆಯಲ್ಲಿ…


ಕೊಳ್ಳುಬಾಕುತನ -:- ರಂಗಭೂಮಿ….
ದೇಶದ ರಂಗಭೂಮಿಯಲ್ಲಿಯೇ ಕನ್ನಡ ನಾಟಕ ಪರಂಪರೆ ತನ್ನದೇ ಆದ ಚಾಪು ಮೂಡಿಸಿದೆ. ಆಸ್ಸಾಮಿನ ಮೊಬೈಲ ಥಿಯೇಟರ್ ಹೊರತುಪಡಿಸಿದರೆ ನಾಟಕ ರೆಪರ್ಟರಿಗಳು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿರುವುದು ಕನ್ನಡದಲ್ಲಿಯೇ ಹೆಚ್ಚು. ಇನ್ನು ಹವ್ಯಾಸಿ ಎಂಬ ತಲೆಬರಹದಡಿಯಲ್ಲಿ ಆರಂಭವಾದ ನಾಟಕಗಳು ಇಂದು ಆಧುನಿಕ ವೃತ್ತಿ ತಂಡಗಳಾಗಿ ಬೆಳೆದಿರುವುದು ಗಮನಿಸಲೇಬೇಕಾದ ಸಂಗತಿ. ಒಂದು ಕಾಲದಲ್ಲಿ ವೃತ್ತಿ ತಂಡಗಳನ್ನು ಅವುಗಳ ಆಶಯದ ಮಟ್ಟದಲ್ಲಿ ಕೆಣಕಿ ಕಾಲೆಳೆದು ಲೇವಡಿ ಮಾಡಿ ಆರಂಭವಾದ ಈ ಬಗೆಯ ರಂಗಭೂಮಿ ಪ್ರೇರಣೆ ಪಡೆದದ್ದು ಇಂಗ್ಲಿಷ ಶಿಕ್ಷಣದಿಂದ… ಕನ್ನಡದ ಮಟ್ಟಿಗೆ ಕೈಲಾಸಂ, ಸಂಸ, ಶ್ರೀರಂಗರು, ಶಿವರಾಮ ಕಾರಂತರು ಹೊಸ ದೃಷ್ಟಿಕೋನದ ರಂಗಭೂಮಿಯ ಆದ್ಯರು ಎನ್ನಬಹುದಾಗಿದೆ. ಲಯದ ಪ್ರಾಸಭರಿತ ಟಠಡಢ ಮಾದರಿಯ ಮಾತುಗಳನ್ನು ತುಂಡರಿಸಿ ಹೊಸ ರಚನಾಕೌಶಲದಲ್ಲಿ ಸಾಮಾಜಿಕ, ಕೌಟುಂಬಿಕವಾದ ಕಥಾದ್ರವ್ಯವನ್ನು ರಂಗದ ಮೇಲೆ ತಂದ ಆ ಕಾಲದ ನಾಟಕಗಳು ಬುದ್ಧಿಪೂರ್ವಕವಾಗಿ ರಚನೆಗೊಂಡವು. ಹರಿತವಾದ ನೇರಮಾತಿನಲ್ಲಿ ಕುಟುಕುವ ತಾಕತ್ತಿದ್ದ ಆ ನಾಟಕಗಳ ಪ್ರಯೋಗ ಇಂದಿನ ಮಟ್ಟಿಗೆ ಇಲ್ಲವೇ ಆಗಿಹೋಗಿದೆ. ಆ ತಳಪಾಯದ ಮೇಲೆ ಕಟ್ಟಲ್ಪಟ್ಟ ಪ್ರಾದೇಶಿಕ ರಂಗಭೂಮಿಯ ಸಂಕಲ್ಪಶಕ್ತಿ ಸಶಕ್ತವಾಗಿ ಜನಮಾನಸ ತಲುಪಿರುವುದರಲ್ಲಿ ಎರಡು ಮಾತಿಲ್ಲ. ನಾಟಕದ ಕ್ರಮವನ್ನೂ, ನಾಟಕ ಸಾಹಿತ್ಯ ಕೃತಿಯನ್ನೂ,ರಂಗಕೃತಿ ಕಟ್ಟಲ್ಪಟ್ಟ ದರ್ದನ್ನು ಸಾಮಾಜಿಕ ಸ್ತಿತ್ಯಂತರಕ್ಕೆ ಅನುಗುಣವಾಗಿ-ಅಭ್ಯಾಸದ ದೃಷ್ಟಿಯಿಂದ-ವರ್ಗೀಕರಿಸಿ, ಕಾಲಘಟ್ಟಗಳೊಂದಿಗೆ, ಸಾಂಸ್ಕೃತಿಕ ತಿರುವುಗಳೊಂದಿಗೆ, ಬದ್ಧ ನಿಲುವುಗಳೊಂದಿಗಿನ ರಂಗಭೂಮಿಯ ನಡೆಯನ್ನು ಈವರೆಗಿನ ವಿಮರ್ಶಕರು ಈಗಾಗಲೇ ಗುರುತಿಸಿದ್ದಾರೆ. ಆ ಬಗೆಯ ದಾಖಲೆಯೊಳಗೆ ಸೇರಿಕೊಳ್ಳಬೇಕಾದ ರಂಗಭೂಮಿಯ ಕೆಲ ಸೂಕ್ಷ್ಮಗಳನ್ನು ಇಲ್ಲಿ ಗುರುತಿಸಲು ಪ್ರಯತ್ನಿಸುತ್ತೇನೆ…
ಆಯಾ ಕಾಲಕ್ಕೆ ಸ್ಪಂದಿಸಿದ ಆ ಹೊತ್ತಿನ ಎಲ್ಲ ಲಲಿತಕಲೆಗಳಲ್ಲೂ ಆಧುನಿಕತೆ ಇರುತ್ತದೆ. ಹಾಗಿರುವ ಆಧುನಿಕತೆಯ ಇವತ್ತಿನ ಸ್ಪಷ್ಟ ನಿರೂಪಣೆ ಇಂದಿಂಗೆ ಯಾವತ್ತೂ ಗೊಂದಲಮಯವಾಗಿರುತ್ತದೆ. ಇದಕ್ಕೆ ನಾಳೆ ಎಂಬ ಕತೆಯೂ ಹೊರತಾದದ್ದಲ್ಲವೆಂದು ಭಾವಿಸುತ್ತೇನೆ. ಒಂದು ಕಡೆ ಚಿಂತಕರಾದ ಕಿಷನ್ ಪಟ್ನಾಯಕರು ಹೇಳುತ್ತಾರೆ “ಬದುಕು ಹಾಗೂ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿ ಜಾಗತೀಕರಣ ಪ್ರವೇಶಿಸುತ್ತಿದ್ದಂತೆ ಸಂಸ್ಕೃತಿಯ ಮುಖ ಬದಲಾಗತೊಡಗಿದೆ. ಕೇವಲ ಮುಖವಷ್ಟೆ ಅಲ್ಲ ಸಂಸ್ಕೃತಿಯ ತಿರುಳು ಕೂಡ ಬದಲಾಗಿದೆ” ಎಂದು. ಹೀಗೆ ಸುಳಿವಿಲ್ಲದೆ ಒಳ ನುಸುಳಿರುವುದನ್ನ ಅವರು ಅಪಸಂಸ್ಕೃತಿ ಎಂದು ಕರೆಯುತ್ತಾರೆ. ಇದನ್ನು ಇಲ್ಲಿ ಪ್ರಸ್ತಾಪಿಸಿರುವ ಉದ್ಧೇಶವಿಷ್ಟೆ ಇತ್ತೀಚಿನ ಕೆಲ ಪ್ರದರ್ಶನಗಳು ಒಳಗೊಂಡಿರುವ ತಾತ್ವಿಕ ಬದ್ಧತೆಯಲ್ಲಿ ಶ್ರೇಷ್ಟತೆಯ ಹಂಬಲವನ್ನು ವ್ಯಕ್ತಪಡಿಸುತ್ತಿರುವುದರ ಮೇಲಹೊದಿಕೆಯನ್ನು ಬಿಡಿಸಿ ನೋಡುವುದಾಗಿದೆ. ಮುರಿದು ಕಟ್ಟುವ ಜಪದೊಂದಿಗೆ ಆರಂಭವಾಗುವ ಕ್ರಿಯಾಶೀಲವೆಂಬ ಹುಚ್ಚು ಭ್ರಮೆ ನಮ್ಮೊಳಗಿನ ತವಕ ತಲ್ಲಣಗಳನ್ನು ಗೋಳೀಕರಣದ ಫ್ರೇಮಿನಲ್ಲಿಟ್ಟು, ನಾಜೂಕಾಗಿ ನಮ್ಮಿಂದ ಸಿಡಿದು ದೂರಾಗಿ ಅದರ ಒಟ್ಟು ಅರ್ಥದ ಧ್ವನಿಯಲ್ಲಿ ಸೃಷ್ಟಿಸಿದವನನ್ನೆ ಬಂಧಿಸಿಬಿಟ್ಟಿರುತ್ತದೆ. ಪ್ರಶಂಸೆಯ ಅಂಥ ಪ್ರಭಾವಳಿಯಲ್ಲಿ ಕಟ್ಟಿದ ಶಿಲ್ಪಿ ಮತ್ತೂ ನವೂರಾಗಿ ಬದುಕನ್ನು ಕಟ್ಟಿಕೊಳ್ಳಲು ಹೆಣಗಿದ ನಟ ಇಬ್ಬರೂ ಸಿಕ್ಕಿ ಹಾಕಿಕೊಂಡಿರುತ್ತಾರೆ. ಆದರೆ ಜಾಗ್ರತಗೊಳ್ಳುವ ಹಂತದಲ್ಲಿರುವಾಗ ಸಾಧಿಸುವ ಛಲಕ್ಕೆ ಬಿದ್ದು ಸಮರ್ಥಿಸಿಕೊಳ್ಳಲು ತೊಡಗುತ್ತಾರೆ. ಹುಸಿ ಮನರಂಜನೆಯನ್ನ ಆಶ್ರಯಿಸುವ, ತೇಪೆ ಸಿದ್ಧಾಂತವನ್ನ ಮೆತ್ತುವ ಅಪೂರ್ಣ ಕ್ರಿಯೆ ಆರಂಭಗೊಳ್ಳುವುದು ಇತ್ತೀಚಿನ ಕೆಲ ಕತೆಗಳನ್ನಿಟ್ಟುಕೊಂಡು ಅಭಿನಯಿಸಿರುವ ನಾಟಕಗಳಲ್ಲಿ ಕಾಣಬಹುದಾಗಿದೆ. ಲಂಕೇಶರ ಏಳು ಏಕಾಂಕಗಳನ್ನ ಓದುತ್ತಿದ್ದರೆ ಸಣ್ಣ ಕತೆಯ ದಟ್ಟಪ್ರಭಾವ ಬಿರುತ್ತವೆ. ಆದರೂ ಪ್ರತಿಸೃಷ್ಟಿಸುವ ಆ ನಾಟಕಗಳ ಶಕ್ತಿ ಈ ಕತೆ ನಿರೂಪಣಾ ತಂತ್ರದಲ್ಲಿ (ಅಂದರೆ ಸಣ್ಣ ಪುಟ್ಟ ತಂಡಗಳಲ್ಲಿ) ಸಾಧಿಸಿಕೊಳ್ಳಲಾಗದೇ ಇರುವುದು ಅಸಮಾಧಾನದ ಸಂಗತಿ. ಜೋಗೇರ ಆಟದವನ ಕೌಶಲ್ಯ, ಬುರ್ರಕತೆಯ ಎನರ್ಜಿ, ಹರಿಕತೆ, ಗೀಗೀ, ಲಾವಣಿಗಳು ಕಟ್ಟಿಕೊಳ್ಳುವ ಕಥನದ ಆಪ್ತತೆ ಇಲ್ಲಿ ಸಿಕ್ಕದೇ ಹೋಗಿರುವುದು ಕುತೂಹಲ ಹುಟ್ಟಿಸುತ್ತದೆ. ದೃಕ್-ಶ್ರವಣ ಮಾಧ್ಯಮಗಳೆರಡರಲ್ಲೂ ಸಂವಹನ ಸಾಧ್ಯವಾಗು ಮಾಡುವುದು ರಂಗಭೂಮಿಗೆ ಹೊಸತೇನಲ್ಲ…. ಆದರೆ ಕಣ್ಣ ತಣಿಸುವ ಸುಖವೊಂದಕ್ಕೆ ಜೋತು ಬಿದ್ದಿರುವ ಇತ್ತೀಚಿನ ಸಣ್ಣಪುಟ್ಟ ತಂಡಗಳು ಬರೀ ರಂಜನೆಯನ್ನು ಸಾಧಿಸುವ ದೃಶ್ಯ ಕಟ್ಟುವ ಇಂಗಿತವನ್ನು ಮಾತ್ರ ವ್ಯಕ್ತಪಡಿಸುತ್ತಿವೆ. ಅದನ್ನು ಬೆಂಬಲಿಸುವ ಹಾಗೆ ನೀನಾಸಮ್ ಎಂಬ ಕನ್ನಡದ ದೃಷ್ಟಿಯೊಂದು ಸಹಿತ ಈ ಸಲದ ತಿರುಗಾಟಕ್ಕೆ ಎರಡು ಕತೆ ಆಧಾರಿತ ನಾಟಕಗಳನ್ನು ಆಯ್ಕೆ ಮಾಡಿ ಪ್ರದರ್ಶನ ಪೂರೈಸುತ್ತಿದೆ…!
ಯಾವ ಕಾಳಜಿಗಳಿಲ್ಲದ ಬರವಣಿಗೆಯನ್ನು-ಒಂದು ಸಮೂಹ ಕಂಟಕ ವಿಷಯ ಪ್ರತಿಪಾದಿಸುವುದನ್ನು ಕಟುವಾಗಿ ಟೀಕಿಸುವ ವಿಮರ್ಶಕನ ಹಾಗೆ ನಾಟಕದ ವಿಮರ್ಶೆಗಳಿರುವುದಿಲ್ಲ. ಯಾಕೆ ಹೀಗೆ ಹೇಳಲು ಬಯಸುತ್ತೇನೆಂದರೆ ಮಾವಿನ ಮರದ ಬಾಳೆ ಹಣ್ಣು ಸೃಷ್ಟಿಸುವ ಅಶೋಕ ವನದ ವೈವಿಧ್ಯತೆಯನ್ನು, ಸಾಧ್ಯತೆಗಳನ್ನು ಹೊಸ ಕಲ್ಪನೆಗಳು ಎಂದು ಒಪ್ಪಿಕೊಂಡಾಗಲೇ ನಾಟಕದ ಬಾಗಿಲನ್ನು ಜಾಗತಿಕರಣ ತಟ್ಟಿತ್ತು. ಸರಳವಾದ ಸಾಧಾರಣೀಕರಣದ ಪ್ರಸ್ತುತಿಯ ಅವಕಾಶಗಳು ಶಾಸ್ತ್ರದಿಂದ ಹೊರಬರಲಾರದೆ, ಆಯಾ ಪ್ರದೇಶ, ಭಾಷೆ, ಸಮುದಾಯಗಳ ಗಡಿ ದಾಟದಾಗಿಬಿಟ್ಟಿದ್ದ ಹೊತ್ತಿನಲ್ಲಿ ಗ್ರಾಮಜೀವನದ ಭಾವಲೋಕದ ನಾಟಕ ಪಯಣ ಆರಂಭವಾಯಿತು. ಕೊಳ್ಳುಬಾಕತನದ ಗಲಿಬಿಲಿ ನಡುವೆ ಹುದುಗಿಕೊಂಡಿದ್ದ ಕಲಾಮಾರ್ಗದ ವ್ಯಾಪಾರ ಬುದ್ದಿ ಸಣ್ಣ ತಂಡಗಳ ರೂಪದಲ್ಲಿ ಮತ್ತೊಮ್ಮೆ ಕಸಿ ಮಾಡಿಕೊಳ್ಳಲು ಸುರಮಾಡಿದ ಹೊತ್ತಿಗೆ ಭಾವ ಜೀವಗಳೆರಡೂ ಆಪ್ತವಾಗಿಬಿಟ್ಟಿದ್ದವು. ಹಾಗಾಗಿ ನೋಡುಗ ಉತ್ಸಾಹದಿಂದಲೇ ಹೊಸತನ್ನು ಸ್ವೀಕರಿಸಿದ.
ಕೊನೆಯದಾಗಿ ಹೇಳಬೇಕೆಂದರೆ ಬದ್ಧತೆ ಮತ್ತು ಸಮಾಜಮುಖಿ ಚಿಂತನೆಯ ಮುಖಗಳು ಹೊಸತನ್ನು ಸ್ವೀಕರಿಸುವ ಮೊದಲು ರಂಜನೆ, ಭಾವತೀವ್ರತೆಯನ್ನು ಹೊರತುಪಡಸಿದ ಗುಣಮಟ್ಟವನ್ನು ಗಮನಿಸಬೇಕು ಮತ್ತು ಅದರ ಸಾಧ್ಯತೆಗಳ ಕವಲೊಳಗಿನ ಕುಸುರನ್ನು, ಶಕ್ತಿಯ ತೊಡಕನ್ನು, ಭ್ರಮೆಯ ಸಗಸನ್ನೂ ಒತ್ತಟ್ಟಿಗಿಟ್ಟು ಸೋಸಿ-ತೂಗಿ-ಅಳೆದು ನೋಡಿ ಗ್ರಹಿಸುವಂತಾದರೆ ಒಳ್ಳೆಯದು.

-ಅಮಾಸ

ಮತ್ತೆ…


ಚಳಿ ಮಳಿ ಗಾಳಿ
ಸುಡುವ ಉರಿ ಬಿಸಿಲಿನ ಧಗೆಗೆ
ಮೈಯ ಬೆಮರಿನ ವಾಸನೆಗೆ
ಮತ್ತೆ ನೆನಪಾಗುವುದು ಅಪ್ಪನ ಮೀಸೆಯ ಕೊಂಕು.

ಅವ್ವನ ಕೈ ಕುಸುರಿಯಲ್ಲಿ
ತೆಂಗು, ಆಪು, ಹುಲ್ಲು, ಗರಿ
ಆಸರದ ಹೊದಿಕೆಗೆ ಆರೈಕೆ
ಮತ್ತೆ ನೆನಪಾಗುವುದು ನಮ್ಮ ಗುಡಿಸಲಿನ ಮಹಲು

ಕೂಡಿಟ್ಟ ರೊಕ್ಕದ ಕುಡಿಕೆಯ ಕುಟ್ಟಿ
ಚದುರಿದ್ದ ಚಿಲ್ಲರೆ ಆಯ್ದುಕೊಳ್ಳುತ್ತಿದ್ದಳು ಅವ್ವ.
ಕನಸುಗಳದೆಷ್ಟು…?
ಅಣ್ಣನಿಗೊಂದು ಅಂಗಿ
ತಂಗಿಗೊಂದು ಪಾಟಿಚೀಲ
ನನಗೆ ಪೆನ್ನು ಪುಸ್ತಕ
ಅಪ್ಪನ ಜೇಬಿನ ರೊಕ್ಕ ಊಟಕ್ಕೆ ಸಾಕಾಗದಿದ್ದಾಗ….
ಹೌದು ! ಮತ್ತೆ ನೆನಪಾಗುವುದು
ಅವ್ವ ಸವೆಸಿದ ಹಾದಿಯಲ್ಲಿ ಐವತ್ತರ ನೋಟು ಉಳಿಸಿದ್ದು.

-ಅಮಾಸ

ಗಲ್ಲೆಬಾನಿ- ಕೇಬಿ ಅವರ ಖಂಡಕಾವ್ಯದ ಓದು.


ಪ್ರಭೆಗೆ ಪ್ರಭೆ ಕತ್ತಲಿಗೆ ಕತ್ತಲು
ಒಂಟಿತನದಲ್ಲಿ ಹುದುಗಿರುವ ಸಮರ್ಪಣಾ ಆಧ್ಯಾತ್ಮ ಅದೆಲ್ಲೋ ಸಿಗುವುದೆಂದು ತಪಸ್ಸಿಗೆ ಹೋಗುವುದಲ್ಲ ಇಗೋ ಇಗೋ ಇಲ್ಲೆ ಇಲ್ಲೆ ಎಂದು ಆರಂಭವಾಗುವ ಗಲ್ಲೇಬಾನಿ ಖಂಡಕಾವ್ಯದಲ್ಲಿ ದಕ್ಕುತ್ತದೆ. ಕಾಯಕದ ಕುಸರಲ್ಲಿ ಅಡಕಗೊಂಡಿರುವ ಗಲ್ಲೇಬಾನಿಯಂತ ಸಾಮಾಜಿಕ ಆಧ್ಯಾತ್ಮದ ಠಾವುಗಳು ಕೆಳಸ್ತರದ ಎಲ್ಲ ಜನಾಂಗದ ಒಲವಿನಲ್ಲಿ, ಭಾವಬದುಕಿನಲ್ಲಿ, ಸಾಂಸ್ಕೃತಿಕ ಚಹರೆಗಳಲ್ಲಿ ಬೆಸೆದುಕೊಂಡಿರುತ್ತವೆ. ಬರೆಯಬೇಕೆಂಬ ಒತ್ತಡಕ್ಕೆ ಬರೆಯುವ ಕಾವ್ಯಗಳ ಪ್ರೇರಣೆ ಮೊಟಕಾಗಲಾರದ ಮಹಾಕಾವ್ಯದ ಒಡನಾಟದೊಂದಿಗೆ ಹುಟ್ಟುಪಡೆದಿರುತ್ತದೆ, ಅಂಥ ಆದರ್ಶಪ್ರಾಯವಾದ ಮಾದರಿ ಎಂದುಕೊಳ್ಳುವ ಪಾತ್ರದ ಜೊತೆಯಲ್ಲಿ ಹೊಂದಾಣಿಕೆ ಮಾಡಿಕೊಂಡ ಖಂಡಕಾವ್ಯಗಳು ಕನ್ನಡದಲ್ಲಿ ರಚನೆಗೊಂಡಿವೆ. ಆದರೆ ಗಲ್ಲೆಬಾನಿ ಪಡೆದುಕೊಳ್ಳುವ ಆಕರ ಕಾಯಕ ನಿಷ್ಠ ಮತ್ತು ಮನುಷ್ಯನ ಪ್ರಜ್ಞೆಯಿಂದ ರೂಪಗೊಂಡದ್ದು. ಶರಣರ ವ್ಯರ್ಥವಾದ ಬಂಡಾಯದ ಸಮಾಜೋ ಆಧ್ಯಾತ್ಮಿಕ ನೆಲೆಯ ಮೌಲ್ಯಗಳನ್ನು ಇಂದಿಗೂ ಒಡಲೊಳಗಿಟ್ಟು ಕಾಪಾಡಿಕೊಂಡು ಬಂದಿರುವವರು ತಳಸಮುದಾಯದವರು. ಅಂದು ಹಚ್ಚಲ್ಪಟ್ಟ ಕ್ರಾಂತಿಯ ದೀವಿಗೆಗೆ ಪ್ರತಿರೋಧ ತೋರುವ ಗುಣ ಇನ್ನೂ ನಿಂತಿಲ್ಲ. ಮರ್ಯಾದೆ ಹತ್ಯಯಂತ ಘಟನೆಗಳು ನಮಗೆ ಎಳೆಹೂಟೆಯನ್ನು ಮತ್ತೆ ಮತ್ತೆ ನೆನಪಿಸುತ್ತಲೇ ಇರುವುದು ಅಸಮಾಧಾನದ ಸಂಗತಿಯೇ ಹೌದು.
ಹಾಗೆ ಅಕ್ಷರಕ್ಕೆ ಸಿಕ್ಕದ ಪ್ರತಿಮೆಗಳಲ್ಲಿ, ರೂಪಕಗಳಲ್ಲಿ ಕಾಣಬರಲಾರದ ಕಾಣ್ಕೆ ಒಂದು ಗಲ್ಲೆಬಾನಿಯಲ್ಲಿ ಸ್ಪಷ್ಟಗೋಚರಿಸುತ್ತದೆ. ನಿರಂತರವಾಗಿ ಹುಡುಕಾಡುತ್ತ ಅಲೆದಾಡುತ್ತ ಜಂಗಮವಾಗಿ ತಿರುಗುವ ಆಟದ ಅಂತ್ಯ ಮತ್ತು ಆದಿಗಳನ್ನು ಕೈಬಿಟ್ಟು ನಡುವಿನ ತ್ರಿಶಂಕುವಿನ ಭ್ರಮೆಯಂತೆ ಕಾಜಗದ ದೋಣಿ ಈಜುವ ಸೋಜಿಗವಾಗಿ ಪ್ರವಾಹದೊಟ್ಟಿಗೆ ತೇಲುವ ಕಾವ್ಯದಂತೆ ಅನ್ನಿಸಿದರೂ…. ಭಕುತಿ ಎಂಬುದರ ರುಚಿ ಕಾಣಿಸುವಲ್ಲಿ ಗಲ್ಲೆಬಾನಿ ಸೊಗಸುಗಾರಿಕೆಯನ್ನು ಮೆಚ್ಚಲೇಬೇಕು. ಮೆಟ್ಟು ಬಿಡುವ ಜಾಗದಲ್ಲೆ ಬಿಟ್ಟು ಬಿಡುವುದು –ವಗರಾದದ್ದನ್ನು ನವೀರಾಗಿ ತಿರಸ್ಕರಿಸುವುದರ ಜೊತೆಯಲ್ಲಿ ಅಲ್ಲಿ ಬಿಡುವುದೋ ಇಲ್ಲಿ ಬಿಡುವುದೋ ಎಂಬುದನ್ನು ಮೀರಿ ಅದರ ಜಾಗಕ್ಕೆ ಅದನ್ನು ಬಿಟ್ಟು ಮತ್ತೆಲ್ಲೋ ಹೊರಡುವ ಶುಭ ಸೂಚನೆ ಇದೆ.ಇಲ್ಲಿ ಕೆಬಿ ಅವರ ಒಂದು ಮಾತು ಸಂಪೂರ್ಣ ಧ್ವನಿತವಾಗಿದೆ “ಬೆನ್ನ ಹಿಂದೆ ಅಂಬೇಡ್ಕರ್ ಕೂಗಿದ ಕೂಗು, ಒಂದು ಅಂಗೈಯಲ್ಲಿ ಗಾಂಧೀಜಿ, ಇನ್ನೊಂದು ಅಂಗೈಯಲ್ಲಿ ಬುದ ಬುದ್ಧ, ಎದುರಿಗೆ ಅಲ್ಲಮ ಪ್ರಭು ನಾಲ್ಕು ಮಹಾಜ್ಯೋತಿಗಳ ನಡುವೆ ಹಣತೆ ಧ್ಯಾನಿಸುತ್ತದೆ.”
ಸಾವು ಧೇನಿಸುವ ಹೊತ್ತಲ್ಲಿ ಕಾಣುವ ಅಸ್ಪೃಸ್ಯದೇವನ ಕಣ್ಣಲ್ಲಿ ಉರಿಯುವ ಜ್ಯೋತಿ ಕಂಡು ಆದಿಗ ಬರುವುದು, ಅವನೇ ಜಾವಕಟ್ಟುವ ಜಂಬೂದ್ವೀಪಸ್ಥ ಆಗಿರುವುದು, ಶರೀರವಾಣಿಯಲ್ಲಿ ಸಿಕ್ಕುವ ಸ್ವಾಗತ, ಮುಟ್ಟಾದೆನೆಂದು ಯಾರಿಗು ಹೇಳಲಾರದ ಸಂಕಟಗಳ ದಿಕ್ಕಿನಲ್ಲಿ ಬಹು ಮುಖ್ಯವಾದ ಭಾವಕ್ಕೆ ಸಂಬಂಧಪಟ್ಟ ಭಾಗವೇ ಕಳಚಿಕೊಂಡಿರುವುದು ತಾಗುತ್ತದೆ.
ಕೈಯನೆತ್ತಿ ಕಡಿದುಬಿಡುವ
ರೋಷ ಉಕ್ಕಿ
ಉಕ್ಕಿ ಉಕ್ಕಿ ಉಕ್ಕಿತೋ
ನೆತ್ತಿ ತಣ್ಣಗಾಯಿತೋ
ಸ್ಖಲನತೀಟೆ ತೀರಿದಾಕ್ಷಣ
ಷಂಡನಾಗುವ ಗಂಡಸಿನಂತೆ
ಮಲಗಿದ್ದೆ ಸುಮ್ಮನೆ
ಮಡ್ಲಕ್ಕಿಗುಟ್ಟೆ ಮಡಿಲಲ್ಲಿ
ಇವೊತ್ತು
ಸತ್ತು ಹೋಗಲೇಬೇಕೆಂದು
ಕರುಣಾರ್ದ್ರತೆಯಲ್ಲಿ ಮಹಾಕಾವ್ಯಗಳು ಮಿಂದು ಹೋಗಿರುತ್ತವೆ. ಅಂತೆಯೇ ಅಂಥ ಕರುಣಾಮಯಿ ಜಗದ ಸರುಪವನ್ನು ಗಲ್ಲೆಬಾನಿ ದಾಖಲಿಸುತ್ತದೆ.ಸ ಇದರ ಒಳಗಿನ ತಾಳ್ಮೆಯ ಶಕ್ತಿಯು ಕುಂದಿ ಹೋಗಿ ಸಾವಿಗೆ ವೀಳ್ಯ ಹಿಡಿದ ಹಾಗೆ ಭಾಸವಾದದ್ದು ಕಳೆದುಕೊಂಡದ್ದನ್ನು ಅರಸಿ ಇನ್ನೆಲ್ಲೋ ಹೋಗುವ ತವಕದಲ್ಲಿರುವುದನ್ನು ಬಿಚ್ಚಿಡುತ್ತದೆ. ಮುಂದೆ ಹೋದಂತೆ ರುದ್ರನಲ್ಲಿ ಕರೆದುಕೋ ಎಂದು ಹೇಳುವ ಕವಿಗಳು ಗಲ್ಲೆಬಾನಿಯೆಂಬ ಹೇಮಕೂಟವನ್ನೆ ಮರೆತು ಸ್ವರ್ಗ ಸುಳ್ಳು ರವರವ ನರಕದ ಮುಲೆಯಲ್ಲಿ ಜಾಗ ಕೊಡು ಎಂದು ಕೇಳಿಕೊಳ್ಳುತ್ತ ದ್ವಯ ಅಳಿದು ಅದ್ವಯದ ರೂಪಕದಲ್ಲಾದರು ಕರೆಯಲು ಕೇಳುವುದು, ಆಸೆಗಳ ಬೆಸೆದೂ ತತ್ವಂಬೆಸಗಳ ಬದುಕಿ ಬೆಸೆಯೊ ಸತ್ಯಂಶಿಗಳ ಅಳಿದು ಬದುಕೊ ಎಂಬ ಮಾತುಗಳು ಪರ್ಯಾಯವಾಗಿ ಹೊಸದೇ ಪುರಾಣ ಕಟ್ಟಿಕೊಳ್ಳಲು ಹಂಬಲಿಸುತ್ತವೆ.
ಈ ದೇಹ, ನನ್ನ ದೇಹ, ಇಡೀ ದೇಹ
ಭವದ ಸಾಲ
ತಿರಿ ಹೋಗಲೆಂದು ಸಾಲ
ಇಡೀ ದೇಹ ಮಾರಿಬಿಟ್ಟೆ
ಮೂರು ಕಾಸಿಗೆ.
ಕೊಲ್ಲುವವರೂ ಕೊಳ್ಳಲಿಲ್ಲ
ಮಡಿಯುವವರೂ ಮುಟ್ಟಲಿಲ್ಲ
ಇರಲಿ ಬಿಡು ಈ ದೇಹ
ಹೋಗಲಿ ಬಿಡು ನನ್ನ ದೇಹ
ಎಂದು ಅರಿತು
ಕಟ್ಟಕಡೆಗೆ
ಸುಲಿದು ಸುಲಿದು ಸುಲಿದು
ಚರ್ಮ ಸುಲಿದು
ಮೆಟ್ಟು ಹೊಲೆದು
ಮೆಟ್ಟೀ ಮೆಟ್ಟೀ ಮೆಟ್ಟೀ
ಬಿಟ್ಟುಬಿಟ್ಟೆ ಮೆಟ್ಟುಬಿಡುವ ಜಾಗದಲ್ಲಿ
ಓದುವ ಹಂಗಿಗೆ ಪ್ರಮಾಣವೆಂಬುದು ಕೆಬಿ ಮಾತ್ರ ಆಗಿರದೆ ಓದುಗನ ಅಂತರಂಗ-ಬಹಿರಂಗ ಅಲ್ಲದ ಆಧ್ಯಾತ್ಮಿಕ ಸರಳೀಕರಣದ ತುಡಿತ ಗಲ್ಲೆಬಾನಿ ಆಗುತ್ತದೆ. ಕಾವ್ಯದ ಕಸುವು ತನ್ನತಾನೇ ಕಟ್ಟಿಕೊಳ್ಳುತ್ತ ಹೋಗುವ ಪರಿಯಲ್ಲಿ ವಚನಕಾರರ ದಟ್ಟ ಪ್ರಭಾವವನ್ನು ಕಾಣಿಸುತ್ತದೆ. ಇವತ್ತಿನ ನನ್ನ ಓರಗೆ ಗೆಳೆಯರಿಗೆ ಮಾದರಿ ಆಗಬಹುದಾದ ಆಧ್ಯಾತ್ಮಿಕ ಸಾಧ್ಯತೆ ಗಲ್ಲೆಬಾನಿ ಎಂಬ ಹೆಮ್ಮೆ ನನಗಿದೆ.
-ಅಮಾಸ