ಪ್ರಶ್ನೆ ಬರೀ ಅನಭಿವೃದ್ಧಿಯದಲ್ಲ “ನಾವೂ ಕನ್ನಡಿಗರೇ ಸ್ವಾಮೀ” ಎನ್ನುವುದಾಗಿದೆ.


ಉತ್ತರ ಕರ್ನಾಟಕ ಪ್ರತ್ಯೇಕತೆಯ ಪ್ರಶ್ನೆ ಅಲ್ಲಲ್ಲಿ ಒಳಗೊಳಗೆ ಹೊಗೆಯಾಡುತ್ತಲಿದೆ. ಹಾಗೆಂದು ಹೇಳಿಕೊಳ್ಳಲಾರದೆ ಪ್ರಾದೇಶಿಕ ಅಸಮಾನತೆಯನ್ನು ಸಹಿಸಿಕೊಳ್ಳಲಾರದೆ ಅಲ್ಲಲ್ಲಿ ತಮಗೆ ಅವಕಾಶ ಸಿಕ್ಕ ಸಭೆ ಸಮಾರಂಭಗಳಲ್ಲಿ ದಕ್ಷಿಣ ಕರ್ನಾಟಕದತ್ತ ವಿಶೇಷವಾಗಿ ಬೆಂಗಳೂರಿನತ್ತ ಕೈಮಾಡಿ ತೋರಿಸುವುದು ಚಾಲ್ತಿಯಲ್ಲಿದೆ. ಹಾಗೆ ಅಸಮಾಧಾನದಿಂದ ಹುಟ್ಟುವ ಭಾವವನ್ನು, ಭಾಷೆಯನ್ನು ಅರ್ಥಮಾಡಿಕಳ್ಳದಿದ್ದರೆ ಹೇಗೆ..? ಮೂಲಭೂತ ಸೌಕರ್ಯಗಳ ವಿಷಯದಲ್ಲಿ ಹೆಚ್ಚು ಸಧೃಢವಾಗಿರುವ ಸುರಕ್ಷಿತವಾಗಿರುವ ನಗರ ಬೆಂಗಳೂರು ಆದ್ದರಿಂದ ಕರ್ನಾಟಕದ ತೆರಿಗೆಯಲ್ಲಿ ಬಹುಪಾಲು ಬೆಂಗಳೂರ ಒಂದರಲ್ಲಿಯೇ ಸಂಗ್ರಹಗೊಳ್ಳುತ್ತದೆ ಎಂಬುದರಲ್ಲಿ ಆಶ್ಚರ್ಯವಿಲ್ಲ. ಬೆಂಗಳೂರಿನಂತೆ ಮತ್ತೊಂದು ನಗರವನ್ನು ಕರ್ನಾಟಕದಲ್ಲಿ ಗುರುತಿಸಬಹುದಾಗಿದೆಯೇ…? ಹುಬ್ಬಳ್ಳಿ, ದಾವಣಗೆರೆ, ಗುಲ್ಬರ್ಗಾ ನಗರಗಳಿಗೆ ಅಂತಹ ಲಕ್ಷಣಗಳಿವೆ ಎಂದಾದರೆ ಆ ಬಗ್ಗೆ ಯಾಕೆ ಸರಕಾರಗಳು ಉತ್ಸುಕತೆ ತೋರಿಸಲಿಲ್ಲ. ಮರಾಠಿಗರ ಕಣ್ಣು ಬೆಳಗಾವಿಯ ಮೇಲಿರುವುದರಿಂದ ಆ ನಗರದ ಮೆಲೆ ಕನ್ನಡಿಗರಿಗೆ ವಿಶೆಷವಾದ ಒಲವಿರುವುದರಿಂದ ಬಹಳಷ್ಟು ಲಾಭಗಳನ್ನು ಪಡೆದುಕೊಂಡಿದೆ. ಬೆಳಗಾವಿ ಒಂದನ್ನು ಹೊರತುಪಡಿಸಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳೂ ಸರಿಯಾಗಿಲ್ಲ.
ಮೂಲಭೂತ ಸೌಕರ್ಯಗಳ ವಿಷಯದಲ್ಲಿ ಯಾವತ್ತೂ ದೊಡ್ಡ ಧ್ವನಿ ಹೊರಡಿಸಲಾರದ ಇಲ್ಲಿನ ಜನತೆ ಬಹುತೇಕ ಹೈಕೋರ್ಟ ಪೀಠ ಸಿಕ್ಕಾಗ, ಹೈದ್ರಾಬಾದ್ ಕರ್ನಾಟಕಕ್ಕೆ ಪ್ರಾತಿನಿಧ್ಯ ದೊರೆತಾಗ ಬಹಳ ಖುಷಿಗೊಂಡಿದ್ದರು. ಹೀಗೆ ಪ್ರಾತಿನಿಧ್ಯ ಕೇಳಿ ಪಡೆಯುತ್ತ ಅವರು-ಇವರು ಕೊಡುತ್ತ ಹೋಗುವ ಉದಾರತೆ ಇಲ್ಲಿನ ಪಂಚಮಹಾಭೂತಗಳಲ್ಲಿ ಬೆರೆತು ಹೋಗಿರುವ ಹಾಗಿದೆ.
ಮಾನಸಿಕವಲ್ಲದೆ ಭೌಗೋಳಿಕವಾಗಿಯೂ ರಾಜಧಾನಿ ದೂರದಲ್ಲಿರುವುದರಿಂದ ಮೂಲಭೂತ ಸೌಕರ್ಯಕ್ಕಾಗಿ ಹಲಬುವ ದನಿಗಳು ಮುಟ್ಟಬೇಕಾದಲ್ಲಿಗೆ ತಲುಪುವುದಿಲ್ಲ. ಹಾಗಾಗಿ ಶಂಕುಸ್ಥಾಪನೆ ಮಾಡಲ್ಪಟ್ಟ ಎಷ್ಟೋ ಯೋಜನೆಗಳು ಅಪೂರ್ಣಗೊಳ್ಳುತ್ತಿರುತ್ತವೆ. ಭರವಸೆಗಳು ಗಾಳಿಯಲ್ಲಿ ಹಾರಾಡುತ್ತಿರುತ್ತವೆ. ನಾರಾಯಣಪುರ, ಆಲಮಟ್ಟಿಯ ಪಂಪ ಇರಿಗೇಶನ್, ಮಹಾದಾಯಿ ಯೋಜನೆ, ನೇಕಾರರ ಸಮಸ್ಯೆಗಳು, ನದಿಪಾತ್ರದ ಎಡದಂಡೆ ಬಲದಂಡೆ ಜನಗಳ ಸಂಕಟಗಳು, ಉದ್ಯೋಗ, ಶಿಕ್ಷಣ ಹೀಗೆ ಎಲ್ಲವೂ ಇಲ್ಲಿನ ಪ್ರಶ್ನೆಗಳಾಗಿಯೇ ಇರುತ್ತವೆ.
ಭಾಷೆಯ ಕಾರಣಕ್ಕಾಗಿ ನಾವೆಲ್ಲರೂ ಕನ್ನಡಿಗರೇ ಆಗಿದ್ದರೂ ಪ್ರಾದೇಶಿಕ ಮತ್ತು ಭೌಗೋಳಿಕವಾಗಿ ಭಿನ್ನವಾದ ಜೀವನಪದ್ಧತಿ ನಮ್ಮಲ್ಲಿ ರೂಢಿಯಿರುವುದು ಸುಳ್ಳೇನು…? ಅಭಿವೃದ್ಧಿಯ ವಿಷಯದಲ್ಲೂ ಇಂಥದೆ ಅಸಮಾನತೆ ತಲೆದೋರುತ್ತಿದೆ ಎಂದಾದಲ್ಲಿ ಉತ್ತರ ಕರ್ನಾಟಕ ಕಡೆಗಣಿಸಲ್ಪಡುತ್ತಿದೆ ಎಂಬುದನ್ನು ಒಪ್ಪದಿರುವುದು ಹೇಗೆ ಸಾಧ್ಯ..? ಕರ್ನಾಟಕದ ಆಯವ್ಯಯದ ಲೆಖ್ಖಾರದಲ್ಲಿ ಉತ್ತರ ಕರ್ನಾಟಕಕ್ಕೆ ಯೋಜನಾ ವೆಚ್ಚದ ಅತಿದೊಡ್ಡ ಮೊತ್ತ ಹರಿದುಬಂದಿದೆ. ಅಷ್ಟೆಲ್ಲ ದೊಡ್ಡ ಮೊತ್ತದ ಯೋಜನೆಗಳು ಉತ್ತರಕರ್ನಾಟಕಕ್ಕೆ ಬಂದರೂ ಅಬಿವೃದ್ಧಿ ಯಾಕಾಗಲಿಲ್ಲ…? ಸರಕಾರಗಳು ಹೂಡಿಕೆಯ ವಿಷಯದಲ್ಲಿ ಉತ್ತರಕರ್ನಾಟಕವನ್ನು ಗಮನಿಸಲೇ ಇಲ್ಲ. ದಕ್ಷಿಣ ಕರ್ನಾಟಕದಲ್ಲಿ ಮೊದಲಿನಿಂದಲೂ ರಾಜಮನೆತನಗಳ ಆಶ್ರಯದಲ್ಲಿದ್ದ ಲಾಗಾಯ್ತಿನಿಂದ ಕೈಗಾರಿಕಾ ಹೂಡಿಕೆಗಳಿಗೆ ವಿಶೆಷ ಒತ್ತು ನೀಡುತ್ತ ಬಂದವಾದ್ದರಿಂದ ಅಲ್ಲಿನ ಬದುಕು ಆರ್ಥಿಕವಾಗಿ ಸಮೃದ್ಧಗೊಳ್ಳುತ್ತ ಬಂದಿದೆ. ಬಂಡವಾಳ ಹೂಡಿಕೆಯಲ್ಲೂ ಸರಕಾರಗಳು ಉತ್ತರಕರ್ನಾಟಕವನ್ನು ಕಡೆಗಣಿಸುತ್ತ ಬಂದಿರುವುದಂತು ಸುಳ್ಳಲ್ಲ.
ಸರಕಾರ ಮತ್ತು ಉತ್ತರ ಕರ್ನಾಟಕದ ಪ್ರಜೆಗಳ ನಡುವೆ ಮಾನಸಿಕ ದೂರವಿರುವುದನ್ನು ಅಲ್ಲಗಳೆಯುವಂತಿಲ್ಲ. ಇದು ರಾಜ್ಯದ ಇತರೆ ಹಿಂದುಳಿದ ಜಿಲ್ಲೆಗಳಲ್ಲಿಯೂ ಇರುವಂತಹದ್ದೆ ಸಮಸ್ಯೆ. ಆದರೆ ಸಾಂಸ್ಕೃತಿಕ ಚಹರೆಯ ಮೇಲೆಯೇ ಇಂಥದ್ದೊಂದು ಡಿಸ್ಟನ್ಸ್ ಇರುವಾಗ ನಾವು ಯಾರನ್ನು ದೂರಬೇಕು ಎಂಬುದು ಪ್ರಶ್ನೆಯಾಗಿದೆ. ರಾಯಚೂರು, ಸಿಂಧನೂರು, ಬದಾಮಿ, ರಾಮದುರ್ಗ, ರೋಣ, ಕುಷ್ಟಗಿ ಈ ಸೀಮೆಯಲ್ಲಿ ಡಿಗ್ರಿವರೆಗೂ ಓದಿದ ಹುಡುಗರು ಮಂಗಳುರು, ಗೋವಾ, ಮುಂಬೈಗಳಲ್ಲಿ ಕೂಲಿಕೆಲಸಕ್ಕೆ, ರೋಡ ಕೆಲಸಕ್ಕೆ, ಸೆಕ್ಯುರಿಟಿ, ಗೌಂಡಿ ಕೆಲಸಕ್ಕೆ ಹೋಗುತ್ತಾರೆ. ಶಾಲೆಗಳಿಗೆ ರಜೆ ಇದ್ದಾಗ ಎಳೆ ಮಕ್ಕಳು ಹೊಟೇಲ್ ಕೆಲಸ ಮಾಡತಿರತಾರೆ. ಇದಕ್ಕೆ ನಾವು ಯಾರನ್ನು ಹೊಣೆಗಾರರನ್ನಾಗಿಸಬೇಕು ಹೇಳಿ? ಅವಕಾಶಗಳು ಇಲ್ಲದಾಗ ಓದಿರುವ ಅಹಮ್ಮನ್ನು ಬದಿಗೊತ್ತಿ ಬದುಕಿಗಾಗಿ ಹಪಹಪಿಸಬೇಕಾಗುತ್ತದೆ. ಈ ಸ್ಥಿತಿಗೆ ಭೌಗೋಳಿಕ ಪ್ರಾದೇಶಿಕ ಭಿನ್ನತೆ ಮತ್ತು ಅಸಮಾನತೆ ಕಾರಣ ಎಂದರೆ ನಿಮಗೆ ನಗು ಬರಬಹುದು. ಆದರೆ ಡಿಗ್ರಿವರೆಗೂ ಓದಿ ಕೂಲಿ ಕೆಲಸಕ್ಕಾಗಿ ಅಲೆದಾಡುವವರನ್ನು ನಾನು ದಕ್ಷಿಣದಲ್ಲಿ ಹುಡುಕಿದರೆ ಒಬ್ಬರೂ ಸಿಕ್ಕಲಿಲ್ಲ ಎಂದರೆ ನಂಬುತ್ತೀರಾ…?
ರಾಜ್ಯದ ಒಂದು ಭಾಗದ ಜನ ಇನ್ನೊಂದು ಭಾಗದ ಜನಜೀವನವನ್ನು ಕಡೆಗಣಿಸುವುದಂತೂ ನಿರಂತರವಾಗಿ ನಡೆದುಕೊಂಡು ಬಂದಿದೆ. ಕೈಕಪ್ಪ ಅಂಗಿ, ಬಿಳಿದೋತ್ರ, ಹೆಗಲಿಗೊಂದು ಟವಲ್, ತಲೆಗೊಂದು ಟೋಪಿ ಹಾಕಿಕೊಂಡು ದಕ್ಷಿಣ ಕರ್ನಾಟಕದ ಯಾವುದೆ ಜಿಲ್ಲೆಗೆ ಹೋಗಲಿ ಅಂಥವರನ್ನು ಬೇರೆ ರಾಜ್ಯದವರು ಎಂಬಂತೆ ನೋಡುತ್ತಾರೆ. ವಿಶೆಷವಾಗಿ ಉತ್ತರ ಕರ್ನಾಟಕದವರಾದ ನಾವು ನಮ್ಮದೇ ಭಾಷೆಯನ್ನಾಡುವ ಜನರೆದುರಿಗೇ ಪರಕೀಯರಾಗಿ ಕಾಣಿಸುತ್ತೇವೆ. ನಾವು ತಿನ್ನುವ ರೊಟ್ಟಿಯಿಂದ ಹಿಡಿದು, ರಸ್ತೆ ಬದಿಯಲ್ಲಿ ಒಂದು ಚೊಂಬು ನೀರಿಟ್ಟುಕೊಂಡು ಸಾಲಾಗಿ ಕಕ್ಕಸು ಕೂಡುವ ರೀತಿಯನ್ನೆಲ್ಲ ಅವರವರಲ್ಲೇ ಹೇಳಿಕೊಂಡು ನಗಾಡುತ್ತಾರೆ. ದುಡುಮೆ ಹುಡುಕಿಕೊಂಡೋ, ಗುಳೆ ಹೊರಟೋ, ನೌಕರಿಗಾಗಿ ಅಥವಾ ವಿದ್ಯಾಭ್ಯಾಸಕ್ಕಾಗಿ ಬಂದವರು ಇಂಥ ಲೇವಡಿಗಳನ್ನು ಅವಮಾನಗಳನ್ನು ಅನುಭವಿಸಿರುತ್ತಾರೆ. ಆ ಕ್ಷಣಕ್ಕೆ ನಮ್ಮ ಸ್ವಾಭಿಮಾನಕ್ಕೆ ಪೆಟ್ಟಾದರೂ ವಾಸ್ತವದಲ್ಲಿ ಅವರು ಹೇಳುವುದು ನಮ್ಮ ಸುತ್ತಲಿನ ಪ್ರಪಂಚದಲ್ಲಿ ಇರುವುದರಿಂದ ತಲೆತಗ್ಗಿಸಲೆಬೇಕಾಗುತ್ತದೆ.
ಇದು ನಮ್ಮ-ನಿಮ್ಮಗಳ ನಡುವಿನ ಇನ್ನೊಂದು ಮುಖದ ಸಾಂಸ್ಕೃತಿಕ ಅಸಮಾನತೆ. ಸಮಾಜ ಕಲ್ಯಾಣ ಇಲಾಖೆಯ ಯೋಜನೆಗಳನ್ನು ಉತ್ತರಕರ್ನಾಟಕದ ಬಹಳಷ್ಟು ಅಸ್ಪೃಷ್ಯರು ಪಡೆದುಕೊಳ್ಳಲೇ ಇಲ್ಲ. (ಎಸ್ಸಿ ಎಂದು ಸೇರಿಸಲ್ಪಟ್ಟಿರುವ ಸ್ಪೃಶ್ಯ ಜಾತಿಗಳು ಈ ಲಾಭವನ್ನು ಪಡೆದುಕೊಂಡಿವೆ) ಇದೊಂದೆ ಇಲಾಖೆಯಲ್ಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಮಾಡುವ ಕೆಲವು ವಾರ್ಷಿಕ ಯೋಜನಾಮೊತ್ತಗಳನ್ನು ಒಟ್ಟು ಎಷ್ಟು ಸಾಂಸ್ಕೃತಿಕ ತಂಡಗಳು ಪಡೆದುಕೊಂಡಿವೆ ಎಂಬುದನ್ನು ನೋಡಿದಾಗ ಸಿಂಹಪಾಲು ದಕ್ಷಿಣ ಕರ್ನಾಟಕದ್ದಾಗಿದೆ. ಈ ಕುರಿತಾಗಿ ತಿಳವಳಿಕೆ ಕಮ್ಮಿ ಎಂದು ಹೇಳುವಂತಿಲ್ಲ. ಆಳದಲ್ಲಿ ನೋವು ನುಂಗಿಕೊಂಡಿರುವ ಒಂದು ಡೈಲೆಕ್ಟಿನ, ಭಿನ್ನ ಊಟೋಪಚಾರಗಳ, ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಮುದಾಯಿಕ ಪ್ರಜ್ಞೆಯ ಬಗ್ಗೆ ಯೋಚಿಸಿದಾಗ ಉತ್ತರ ಕರ್ನಾಟಕಕ್ಕೆ ಸ್ವತಂತ್ರ ಅಸ್ತಿತ್ವ ಬೇಕೆಂದು ಅನ್ನಿಸದಿರಲು ಹೇಗೆ ಸಾಧ್ಯ. ಉತ್ತರಕರ್ನಾಟಕವೆಂಬುದು ತನ್ನದೇ ಆದ ಆಡಳಿತದಲ್ಲಿ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ನೀತಿಗಳನ್ನು, ಆರ್ಥಿಕ ಚೇತರಿಕೆಗಳನ್ನು ಕಂಡುಕೊಳ್ಳುವ ದರ್ದಿದೆ ಅನಿಸುತ್ತಿದೆ.
ಕಡೆಯದಾಗಿ
ತಮ್ಮ ವ್ಯಾಪಾರ – ಉಧ್ಯಮಗಳಿಗಾಗಿಯೇ ರಾಜಕೀಯಕ್ಕೆ ಬರುವ ಕೆಲವೇ ಮಂದಿಗಳ ಕೈಯಲ್ಲಿ ರಾಜಕೀಯ ಸೂತ್ರವಿರುವುದರಿಂದ ಫ್ಯೂಡಲ್ ಮಾದರಿಯಲ್ಲಿಯೇ ಇಲ್ಲಿನ ಸಮಾಜಿಕ ಜನಜೀವನ ರೂಢಿಯಲ್ಲಿದೆ. ಈಗ್ಗೆ ಐದು ವರ್ಷಗಳ ಹಿಂದೆ ರಿಪಬ್ಲಿಕ್ ಆಫ್ ಬಳ್ಳಾರಿ ಇತ್ತು ಎಂಬುದು ಕರ್ನಾಟಕದ ರಾಜಕಾರಣದಲ್ಲಿ ದೊಡ್ಡ ಸೌಂಡ ಮಾಡಿತ್ತು. ಅದೊಂದೇ ಅಲ್ಲ ಉತ್ತರಕರ್ನಾಟಕದ ಬಹುತೇಕ ಕಡೆಗಳಲ್ಲಿ ಇಂಥ ಸ್ಥಳಿಯ ಆರ್ಥಿಕ ಆಡಳಿತದ ವ್ಯವಸ್ಥೆಗಳಿವೆ. ಇಂಥ ವ್ಯವಸ್ಥೆಯ ಸುಖದ ಹಕ್ಕುದಾರಿಕೆಯಲ್ಲಿ ಉಮೇಶ ಕತ್ತಿಯವರ ಮನೆತನವೂ ಒಂದು. ಹಾಗಾಗಿ ಅವರ ಕೂಗನ್ನು ದೊಡ್ಡದು ಮಾಡುವುದರಲ್ಲಿ ಯಾವ ಪ್ರಯೋಜನವೂ ಇಲ್ಲ. ಯಾಕಂದ್ರೆ ಅವರು ಅಧಿಕಾರದಲ್ಲಿದ್ದಾಗ ಕೇಳಬೇಕಾದ ಕೆಲವು ಪ್ರಶ್ನೆಗಳನ್ನು ಕುಂಡಿಕೆಳಗೆ ಮೆತ್ತೆಮಾಡಿಕೊಂಡು ರಾಜಕಾರಣ ಮಾಡಿದವರು. ಕಬ್ಬು ಬೆಳೆಗಾರರ ಸಂಕಟಗಳಿಗೆ ಕ್ಯಾರೆ ಎನ್ನದ ಉಧ್ಯಮದ ಭಾಗವಾಗಿದ್ದವರು. ಅವರ ಉದ್ಧೇಶಗಳಲ್ಲಿ ಇನ್ನಾವ ಬಗೆಯ ರಾಜಕೀಯ ತಂತ್ರವಿದೆಯೋ ತಿಳಿಯದು. ಬೆಳಗಾವಿಗೆ ಸುವರ್ಣಸೌಧ ಬಂದ ಲಾಗಾಯ್ತಿನಿಂದ ಅವರ ಮನಸ್ಸಿನಲ್ಲೊಂದು ಮುಖ್ಯಮಂತ್ರಿಯ ಹಕ್ಕಿ ಕೂತಂತಿದೆ. ಅದಕ್ಕೀಗ ಮತದಾರರನ್ನು ಭಾವುಕರನ್ನಾಗಿ ಸೆಳೆಯುವ ತಂತ್ರ ಬೇಕಾಗಿದೆ. ಇಂಥ ಪಿತೂರಿ ಹಕ್ಕಿಯ ಮಾತುಗಳನ್ನು ಅಲಕ್ಷಿಸಿ… ಉತ್ತರಕರ್ನಾಟಕದ ಕುರಿತಾದ ನೋವುಗಳನ್ನು ಹೇಳಿಕೊಳ್ಳಬೇಕಾಗಿದೆ. ಇಲ್ಲಿನ ಶುಷ್ಕ ಬದುಕಿನ ಹಿಂದಿನ ರಹಸ್ಯಗಳನ್ನು ಚರ್ಚಿಸಬೇಕಾದ ಹೊತ್ತು ಈಗ ಬಂದಿದೆ.

ಹಿಂದುತ್ವದ ಪಹರೆಯಲ್ಲಿ


ಮನುಷ್ಯನ ಗುರಿಗಳು, ಕನಸುಗಳು ಹೆಚ್ಚಾಗುತ್ತಿವೆ. ಹುಚ್ಚುತನದ ಆಕಾಂಕ್ಷೆಗಳು ಇವತ್ತಿನ ಜಗತ್ತನ್ನು ಆಳುತ್ತಿವೆ. ಅದೊಂದು ಕಾಣದ ಜಗತ್ತಿನ ಕಲ್ಪನೆಯ ಹಾಗೆ ನಾಳೆಗಳನ್ನು ಸೃಜಿಸಿಕೊಳ್ಳುತ್ತಿದ್ದೇವೆ.
ಇನ್ನು ನಾಳೆಗಳು ನಮ್ಮವು ಆಗಲಿವೆ ಎಂಬ ಹುಂಬುತನದ ರಾಜಕಾರಣವೂ ಪ್ರತಿಯೊಬ್ಬರ ಅಂಗೈಗೆ ತಲುಪುತ್ತಿದೆ. ಅಲ್ಲಿ ಬಾಂಧವ್ಯದ, ಸಖ್ಯದ ಮಾತುಕತೆಗಳಿಗೆ ಎಡೆಯಿರಲಾರದು. ನಾಟ್ಯಶಾಸ್ತ್ರದಲ್ಲಿನ ಒಟ್ಟು ನಲವತ್ತೊಂಬತ್ತು ರಸ-ಸ್ಥಾಯಿ-ಸಂಚಾರಿಭಾವಗಳು ಲಕ್ಷಾಂತರ ಆಲೋಚನೆಗಳನ್ನು ಕೋಟ್ಯಾಂತರ ಚಿಂತನೆಗಳನ್ನು ಹುಟ್ಟುಹಾಕಬಲ್ಲವು ಎಂಬುದನ್ನು ಮುಂದೆ ಯೋಚಿಸಲಿಕ್ಕಾಗಲಿಕ್ಕಿಲ್ಲ. ಹಾಗೊಂದು ವೇಳೆ ಯೋಚಿಸುತ್ತೀಯ ಎಂದಾದರೆ ನೀನು ಪರಕೀಯನಾಗುತ್ತೀಯ. ಕೆಲವು ಸಲ ಅಂಥವನನ್ನ ಬುದ್ಧಿಜೀವೆಯೆಂದೋ, ಪ್ರಗತಿಪರನೆಂದೋ, ಕಾಂಗ್ರೆಸ್ ಎಜೆಂಟನೆಂದೋ, ಕಮ್ಯುನಿಷ್ಟನೆಂದೋ ಅಥವಾ ಪಾಕಿಸ್ತಾನ ಪ್ರಿಯನೆಂದೋ ನಿರ್ಧರಿಸಿ. ಅವನೊಳಗಿನ ಮಾತನ್ನು ತುಂಡರಿಸಿ, ಕುಹಕವಾಡಿ ಸುಮ್ಮನಾಗಿಸುವ ತಂತ್ರವನ್ನು ಕೆಲವು ಲುಂಪೇನಗಳು ವ್ಯವಸ್ಥಿತವಾಗಿ ಬಿಂಬಿಸುತ್ತಿವೆ. ಹೊಸಮನುಷ್ಯನಾಗುವ ಸಮಾಜವಾದದ ಆಶಯಗಳಿಗೆ ಕಿಂಚಿತ್ತೂ ಬೆಲೆಯಿಲ್ಲವಾದೀತೆಂಬ ಭಯ ಕಾಡುತ್ತಿದೆ.
ನೈತಿಕ ಶಿಕ್ಷಣದ ಅರಿವಿಲ್ಲದಂತೆ ಮಾತಾಡುವ, ಕಮೆಂಟ್ ಮಾಡುವ ಪ್ರವೃತ್ತಿಯುಳ್ಳ ಇವರಿಗೆ ಕಾನುನಿನ ಮೂಲಕ ಉತ್ತರಿಸಬಹುದು. ಆದರೆ ಸರಕಾರವೇ ಅವರದ್ದಾಗಿದೆ, ಈ ಹಿಂದೆ ಕನರ್ಾಟಕದಲ್ಲಿ ಭಾಜಪ ಸರಕಾರ ಇದ್ದಾಗ ಕೆಲವು ಪುಂಡ ಹಿಂದೂ ಸಂಘಟಣೆಗಳ ಮೇಲಿದ್ದ ಕೇಸುಗಳು ವಜಾಗೊಂಡವು. ನಾಲ್ಕೂ ಅಂಗಗಳನ್ನು ಒಳತೆಕ್ಕೆಗೆ ತೆಗೆದುಕೊಂಡು ಆಯಕಟ್ಟಿನ ಜಾಗದಲ್ಲಿ ಫ್ಯಾಸಿಸ್ಟ್ ಮನೋಭಾವವನ್ನು ಬೆಂಬಲಿಸುವ ಕೆಲವರ ನೇಮಕಾತಿಯನ್ನು ಸರಕಾರ ಮಾಡಿಯೇ ಮಾಡುತ್ತದೆ. ಆಗ ಭಾರತದಲ್ಲಿ ಸವರ್ಾಧಿಕಾರದ ಹೆಜ್ಜೆಗಳು ಸುಲಭವಾಗಿ ಡಾಂಬರು ರಸ್ತೆಯ ಮೇಲೂ ಮೂಡತೊಡಗುತ್ತವೆ. ಬಹುಮತಕ್ಕೆ ಕೃತಜ್ಞತೆ ಹೇಳಿಯಾದ ಮೇಲೆ ಆಡಳಿತದ ಗತ್ತು ತೋರ್ಪಡಿಸಲಾಗುತ್ತದೆ. ಅದು ಕೈಕೆಳಗಿನ ಜನರ ಮೇಲೆ ಮಾತ್ರ… ನಂತರದಲ್ಲಿ ತಗ್ಗಿ-ಬಗ್ಗಿ ನಡೆಯುವ ಬೂಟಾಟಿಕೆಯ ನಡವಳಿಕೆ. ತದನಂತರದಲ್ಲಿ ಉಪದೇಶವೆಂಬ ಅಭಿವೃದ್ಧಿಯ ಭಾಷಣ, ಬಂಡವಾಳಶಾಹಿಗಳಿಗೆ ದೇಶ ಒಪ್ಪಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು. ಆಮೇಲಿನದು ನೇರ ಆಡಳಿತ. ಅದರ ಸ್ಪಷ್ಟ ರೂಪದಲ್ಲಿ ಹಿಂಸೆಯ ಅಸ್ತ್ರವಿದೆ. ಕುರಿ ಕಡಿಯುವ ಮೊದಲು ಪೂಜಿಸುವ ಹಾಗಿನ ಕಾರ್ಯವೈಖರಿ ಸಾಧುವಾದುದೆಂದು ನಂಬುವುದಾದರೂ ಹೇಗೆ..?
ಭಾರತಕ್ಕೊಂದೇ ಥಾಟ್, ಭಾರತಕ್ಕೊಬ್ಬನೇ ಸವರ್ಾಧಿಕಾರಿ, ಅವನ ಮಾತು, ಮೌನ, ಉಸಿರು, ನಿಟ್ಟುಸಿರನ್ನು ಪ್ರತಿಯೊಬ್ಬನೂ ಆಲಿಸಬೇಕು. ಆ ಸವರ್ಾಧಿಕಾರಿ ಮನೋಧರ್ಮದವನ ವಿನಮ್ರ ಸೋಗಿನ ಮಾತುಗಳನ್ನು ಪ್ರಜೆಗಳೆಲ್ಲ ಒಪ್ಪಿಕೊಳ್ಳಲೇಬೇಕು ಮತ್ತು ಆ ಪ್ರಕಾರವಾಗಿ ಭಾರತೀಯನಾದವನು ನಡೆಯಬೇಕೆಂಬುದು ಪ್ರಧಾನಿಗಳ ಬೆಂಬಲಿಗರ ಅಪೇಕ್ಷೆಯಾಗಿದೆ. ಈ ಒತ್ತಾಯಿಸುವ ರೀತಿಗಳಲ್ಲಿ ಸವರ್ಾಧಿಕಾರಿಯೊಬ್ಬನನ್ನು ಪೋಷಿಸುವ, ಹಾಲು-ಗೊಬ್ಬರ-ನೀರೆರೆದು ಬೆಳೆಸುವ ಪ್ರಾಥಮಿಕ ಹಂತದ ಕೆಲಸಗಳನ್ನು ಸಂಘಪರಿವಾರದವರು ಭಾರತದಲ್ಲಿ ಮಾಡಿದ್ದಾರೆಂಬುದು ಸ್ಪಷ್ಟವಾಗುತ್ತದೆ.
ಟಿಪ್ಪೂ ಕಂಡ ಕನಸು ನಾಟಕ ಮಾಡಿಸಲು ಮಂಡ್ಯಕ್ಕೆ ಹೋದಾಗ ಆರ್.ಎಸ್.ಎಸ್ ಕ್ಯಾಂಪಗೆ ಹೋಗಿ ಬಂದಿದ್ದ ನನ್ನ ವಿದ್ಯಾಥರ್ಿ ಮಿತ್ರನೊಬ್ಬನನ್ನು… ಅಲ್ಲಯ್ಯ ಆ ಶಿಬಿರದಿಂದ ನಿನಗೇನು ತಿಳಿಯಿತು? ಅಂತ ಕೇಳಿದೆ. ಆತ ಶಿಬಿರದ ಒಟ್ಟು ಆಶಯ ಮತ್ತು ಅರಿವನ್ನಿಟ್ಟುಕೊಂಡು ಹೇಳಿದ “ಸರ್ ಈ ದೇಶದಲ್ಲಿನ ಪ್ರತಿಯೊಬ್ಬ ಹಿಂದೂ ಒಬ್ಬೊಬ್ಬ ಅಲ್ಪಸಂಖ್ಯಾತನನ್ನ ಇಲ್ಲವಾಗಿಸಬೇಕು. ಮತ್ತು ಅವರು ಈ ನೆಲದಲ್ಲಿ ನೆಚ್ಚಿಕೊಂಡಿರುವುದು ಬರೀ ವ್ಯಾಪಾರವನ್ನು, ಹಾಗಾಗಿ ಅಲ್ಪಸಂಖ್ಯಾತರ ಅಂಗಡಿಮುಂಗಟ್ಟುಗಳನ್ನು ಬಹಿಷ್ಕರಿಸಬೇಕು. ಆಗ ಮಾತ್ರ ಭಾರತದಲ್ಲಿ ಸಮಾನತೆ ಬರುತ್ತದೆ. ನಮ್ಮ ದೇಶ ಅಭಿವೃದ್ಧಿಯಾಗುತ್ತದೆ”(ಮಾತನ್ನು ಸಂಸ್ಕರಿಸಲಾಗಿದೆ) ಎಂಬುದಾಗಿ ಏನೇನೋ ವಾದಿಸಿದ. ಈ ಮಾತುಗಳು ಈ ದೇಶದಲ್ಲಿ ನಿಜವಾಗಿ ಬಿಟ್ಟರೆ ಭಾರತವೆಂಬ ವೈವಿಧ್ಯೆತೆಯ ಬಣ್ಣದ ಲೋಕ ಮಾಯವಾಗಿ… ಇಡೀ ದೇಶಕ್ಕೆ ಕೇಸರಿ ಬಣ್ಣ ಬಳಿದು, ಎಲ್ಲ ಗಂಡಸರಿಗೂ ಖಾಕಿ ಚೊನ್ನವೂ, ಬಿಳಿ ಅಂಗಿಯೂ, ಟೋಪಿಯೂ, ಲಾಠಿಯೂ ಹಾಕಿಬಿಡುವ ಹುಚ್ಚುಧಾವಂತ ಮೋದಿಯವರ ಅಭಿಮಾನಿಗಳಲ್ಲಿದೆ ಎನಿಸುತ್ತಿದೆ. ಇನ್ನು ಹೆಂಗಸರ ಕತೆ ಮನುಧರ್ಮದ ಆಚೆ ಸರಿಯಲಿಕ್ಕಿಲ್ಲ. ಯಾಕಂದ್ರೆ ಅತ್ಯಾಚಾರದ ವಿಷಯದಲ್ಲಿ – ನಿಮ್ಮ ಮನೆಯ ಗಂಡಸರಿಗೆ ಬುದ್ಧಿ ಹೇಳಿ ಎಂದುಬಿಟ್ಟರೆ. ಮುಠ್ಠಾಳರು ಹೆಂಗಸರ ಮಾತು ಕೇಳಿಯಾರೆ..! ಎಂಬ ಕಲ್ಪನೆಯೂ ಇವರಿಗಿಲ್ಲ.
ಸಂತೋಷದ ಸುಖ ಕಳೆದುಕೊಂಡಿರುವಾಗ ದೇಶನಿವಾಸಿಗಳಿಗೆ ಯಾವ ಎಚ್ಚರಿಕೆಯನ್ನು ಕೊಡಬೇಕೆನ್ನುವುದನ್ನು ಮರೆತಿರುವ ಕೆಲವು ಸುದ್ದಿಪತ್ರಿಕೆಯ ಸಂಪಾದಕೀಯಗಳ ವರಸೆಯೂ ಬದಲಾಗುತ್ತಿದೆ. ಇನ್ನು ಎಲೆಕ್ಟ್ರಾನಿಕ ಮಾಧ್ಯಮದಲ್ಲಿ ಎಷ್ಟೇ ಹೊಸ ಚಾನೆಲ್ಗಳು ಬಂದರೂ, ಎಂಥ ಕಾರ್ಯದಕ್ಷತೆಯ ಯುವಪತ್ರಕರ್ತರ ಗುಂಪುಗಳು ಹಗಲೂ ರಾತ್ರಿ ಕೆಲಸ ಮಾಡಿದರೂ 2000ನೇ ಇಸ್ವಿಯಿಂದ ಈವರೆಗೂ ತನ್ನ ಕಾರ್ಯಕ್ರಮಗಳ ಬಿತ್ತರಿಸುವಲ್ಲಿ ಯಾವ ಬದಲಾವಣೆಯನ್ನೂ ಮಾಡಿಕೊಂಡಿಲ್ಲ. ಗೆದ್ದೆತ್ತಿನ ಬಾಲದ ತುದಿ ಹಿಡಿದಂತಿರುವ ಭಾರತದಲ್ಲಿ ಈಗ ಫ್ಯಾಸಿಷ್ಟ್ ಧೋರಣೆಯನ್ನು ಪೋಷಿಸುವ ಗುಂಪುಗಳು, ಮನಸುಗಳು ಹೆಚ್ಚಾಗುತ್ತಿವೆ. ಆಡಳಿತ ಪಕ್ಷ ಯಾವುದೇ ಬರಲಿ ನಾವು ವಿರೋಧಪಕ್ಷದಲ್ಲಿರುತ್ತೇವೆ ಎಂಬ ಮಾತುಗಳು ಸಾರ್ವಜನಿಕರಲ್ಲಿ ಕಮ್ಮಿಯಾಗಿರುವುದು ಯಾಕೋ ಸವರ್ಾಧಿಕಾರಿಯ ಉದಯಕ್ಕೆ ಹಾದಿಮಾಡಿಕೊಡುತ್ತಿರುವಂತೆ ಭಾಸವಾಗುತ್ತಿದೆ. 2014ರ ಚುನಾವಣೆ ನಂತರ ಇಡೀ ದೇಶಕ್ಕೆ ಮೋದಿ ಎಂಬ ಹೆಸರಿನ ಹೊರತಾಗಿ ಬಿಜೆಪಿ ಸರಕಾರ ಎಂಬುದು ಹೆಚ್ಚಾಗಿ ಕೇಳಿಬರಲಿಲ್ಲ. ಕುಟುಂಬ ರಾಜಕಾರಣ ಹೋಗಿದ್ದಿರಬಹುದು ಆದರೆ ವ್ಯಷ್ಠಿಕೇಂದ್ರಿತ ರಾಜಕಾರಣವನ್ನು ಸಂಘಪರಿವಾರ ಆರಂಭಿಸಿತು. ಭಾರತದಲ್ಲಿ ಸಮಷ್ಟಿ ನೆಲೆಯಲ್ಲಿನ ಸರಕಾರ ಬಂದಾಗ ಮಾತ್ರ ಬುದ್ಧನ ಆಶಯಗಳ ಭಾರತ ತಲೆಯೆತ್ತಿನಿಲ್ಲುತ್ತದೆ.
ಗೆದ್ದೆತ್ತಿನ ಬಾಲದ ತುದಿಯಲ್ಲಿ ಫ್ಯಾಸಿಷ್ಟ ಪಟಾಕಿ ಕಟ್ಟಲಾಗಿದೆ. ಅವಲೋಕಿಸುವ, ಆಲೋಚಿಸುವ ಹೊತ್ತು ಇದಾಗಿದೆ. ಹೀಗೆ ಸುಮ್ಮನಿದ್ದರೆ ಇಂಡಿಯಾ ಎಂಬ ಭಾರತವೂ, ಹಿಂದುಸ್ತಾನವೆಂಬ ನಾಗರಿಕತೆಯೂ ಇಲ್ಲವಾಗಿ ಹಿಂದುತ್ವವೇ ತುಂಬಿತುಳುಕುವ ಹಿಂದುರಾಷ್ಟ್ರವಾದೀತು.

ಸಮಷ್ಟಿತ್ವದ ಹುಡುಕಾಟವಾಗಬೇಕಿದೆ.


ಯಾವಾಗ ಎಲ್ಲಿ ನನಗೆ ಏನು ಮಾಡತಾರೋ ಗೊತ್ತಿಲ್ಲ ಆದರೆ ಸಂವಿಧಾನದಲ್ಲಿ ನನಗೆ ಶ್ರೀಸಾಮಾನ್ಯನ ಹಕ್ಕು ನೀಡಿದ್ದಾರೆ. ನಾನು ಪ್ರಶ್ನಿಸುತ್ತಲಿರುತ್ತೇನೆ. ಹೋರಾಟ ಮಾಡುತ್ತಿರುತ್ತೇನೆ. ಅನ್ನೋ ಹಿರೇಮಠ ಸರ್ ನನಗಿಷ್ಟ. ಗಾಂಧಿ ಉಪವಾಸ ಕೂತಾಗ ಅಂಬೇಡ್ಕರ್ ವಿರುದ್ಧ ರಸ್ತೆ ರಸ್ತೆಗಳಲ್ಲಿ ಘೋಷಣೆ ಕೂಗಿ ಘೇರಾವು ಹಾಕುತ್ತಿದ್ದರು. ಹೋರಾಟದ ದೀವಿಗೆ ಹಿಡಿದ ಅಂಬೇಡ್ಕರ್ ಎದೆಗುಂದಲಿಲ್ಲ. ಹಾಗಾಗಿ ಅವರ ಧೈರ್ಯ ನನಗಿಷ್ಟ. ಶೂದ್ರ-ದಲಿತ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಲು ಶಾಲೆ ನಡೆಸಿದ ಮಾತಾ ಸಾವಿತ್ರಿಬಾಯಿ ಫುಲೆಯವರು ಶಾಲೆಗೆ ಹೋಗುವಾಗ ದಾರಿಮೇಲೆ ಸಗಣಿ ಎರಚುತ್ತಿದ್ದರು. (ಆ ತಾಯಿಯ ಒಂದು ಪಟವನ್ನೂ ಭಾರತ ಸರಕಾರ ಎಲ್ಲ ಶಾಲೆಗಳಲ್ಲಿ ಹಾಕುವ ಕೆಲಸ ಮಾಡಿಲ್ಲ.) ಆ ಫುಲೆ ದಂಪತಿಗಳು ಅವರಿಗೆ ಹೆದರಿ ಶಾಲೆ ನಡೆಸುವುದನ್ನು ಬಿಟ್ಟರೇನು…? ಯೋಗೇಶ ಮಾಸ್ಟರ್ ಅವರು ದುಂಡಿ ಕಾದಂಬರಿಯ ವಿವಾದ ಆದ ಮೇಲಂತೂ ಪ್ರಸಿದ್ಧ ಲೇಖಕರೂ, ವಾಗ್ಮಿಗಳು, ಕಾದಂಬರಿಕಾರರು ಆಗಿಯೇಬಿಟ್ಟರು. ಆದರೆ ಅವರು ವಿವರಿಸುವ ವಸ್ತು ವಿಷಯಗಳ ಆಶಯಗಳು ಏನನ್ನು ಸಮರ್ಥಿಸುತ್ತಿವೆ ಎನ್ನುವುದು ಮಾತ್ರ ಪುರಾಣ ಹೂರಣದಲ್ಲಿ ಸ್ಪಷ್ಟವಾಗುತ್ತಿಲ್ಲ.
ಈಗ ಭಾರತದಲ್ಲಿ ವೈದಿಕ, ವೈಷ್ಣವ, ಶೈವ, ಇತ್ಯಾದಿ ದರ್ಶಗಳಲ್ಲೆವನ್ನೂ ಹಿಂದುತ್ವ ಎಂಬ ಕಾಳಕತ್ತಲೆಯೊಂದು ನುಂಗುತ್ತಿದೆ. ಆ ಎಲ್ಲ ದರ್ಶನಗಳಿಗೂ ಒಂದೊಂದು ಅಸ್ತಿತ್ವ ಇದೆ ಎಂಬುದನ್ನು ಜನಸಾಮಾನ್ಯರಿಗೆ ತಿಳಿಸಿಕೊಡುವ ಕೆಲಸವನ್ನು ಹತ್ತೊಂಬತ್ತನೆ ಶತಮಾನದ ಅಂತ್ಯದಲ್ಲಿ ಮತ್ತು ಇಪ್ಪತ್ತನೆಯ ಶತಮಾನದುದ್ದಕ್ಕೂ ಸಂಶೋಧಕರು, ಸಾಹಿತಿಗಳು, ರಾಜಕಾರಣಿಗಳು, ಹೋರಾಟಗಾರರು ಮಾಡುತ್ತಾ ಬಂದಿದ್ದಾರೆ. ಭಾರತದ ಪುರಾಣಗಳನ್ನು ಹಿಂದತ್ವದ ಆಶಯಗಳಗೆ ಒಗ್ಗಿಸಿಕೊಳ್ಳುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದವರು ಈಗ ಅದರ ತಾತ್ವಿಕ ಹಿನ್ನೆಯಲ್ಲಿ ಸಮಾಜಶಾಸ್ತ್ರದ ರಚನಾವಿನ್ಯಾಸವನ್ನು ಹುಡುಕಾಟ ಮಾಡುತ್ತಿದ್ದಾರೆ. ಶಿವ ಶ್ರಮಿಕ ವರ್ಗದವನೆಂದು ಪ್ರತಿಪಾದಿಸುವುದೇನಿದೆ.? ಬೆವರಿನಿಂದ ವೀರಭದ್ರ ಹುಟ್ಟಿದನೆಂಬ ಕಥನ ತಂತ್ರವೇ ಶಿವ ಎನ್ನುವ ಕಲ್ಪನೆಯನ್ನು ವಿಸ್ತರಿಸುತ್ತದೆ.
ಈ ದೇವಾನುದೇವತೆಗಳಿಗೆ ಸಂಬಂಧಿಸಿದ ಪುರಾಣಗಳಲ್ಲಿ ಆಧುನಿಕತೆಯ ದುಷ್ಟತನಗಳನ್ನು ಹುಡುಕುವುದರಿಂದ ಪರಿಹಾರವೇನಾದರೂ ನಮಗೆ ಸಿಗಬಲ್ಲುದೆ..? ಹಿಂದುತ್ವದ ಕುರಿತಾಗಿಯೇ ಪತ್ರಿಕೆಯ ಪುಟಗಳನ್ನು ತುಂಬಿಸಿಕೊಳ್ಳುವವರ ಧಾಟಿಯಲ್ಲಿಯೇ ವೈಚಾರಿಕ ಜಗತ್ತು ಆಲೋಚಿಸುತ್ತದೆಯೇ..? ಯಾಕಾಗಿ ಈ ಹುಡುಕಾಟದ ಹುಡುಗಾಟ. ಬಾಬಾಸಹೇಬರ ಹಿಂದೂಧರ್ಮದ ಕುರಿತಾದ ಬರಹಗಳಲ್ಲಿ ತೀಕ್ಷ್ಣವಾದ ಹುಡುಕಾಟವಿದೆ. ಪೆರಿಯಾರರ ಹೋರಾಟಗಳಲ್ಲಿ ನಿಖರತೆ ಇತ್ತು. ಡಿ.ಡಿ ಕೋಸಾಂಬಿಯವರ ಮಿಥ್ ಆಂಡ್ ರಿಯಾಲಿಟಿಯಲ್ಲಿ ಮೂಲನೆಲೆಯ ಕಾಣ್ಕೆ ಮತ್ತು ಉದ್ಧೇಶಗಳ ಜಾಳುತನ, ಚಾಲಾಕಿತನಗಳಿವೆ. ಆದರೆ ಈಗ ಹಿಂದುತ್ವದ ಭರಾಟೆಯಲ್ಲಿ ಪುರಾಣ ಪ್ರಸಂಗಗಳನ್ನು ಮುನ್ನೆಲೆಗೆ ತಂದು ಜಿಜ್ಞಾಸೆ ನಡೆಸುವುದು ಬೇಕೆ..? ಹಾಗಂತ ವಾಸ್ತವಾಂಶಗಳ ಮೇಲೆ ಗೋರಿಕಟ್ಟಬೇಕೆಂದು ನಾನು ವಾದಿಸಲಾರೆ. ಆದರೆ ಸಮಾಜದಲ್ಲಿ ಇವತ್ತಿಗೆ ತೀರಾ ಮುಖ್ಯವಾದ ಕೆಲವು ತಕರಾರುಗಳು, ಪ್ರಶ್ನೆಗಳು, ತಾಪತ್ರಯಗಳು ಇದ್ದಾವೆ. ವೈಕಂ ಬಷೀರ್ ಅವರ ಒಂದು ಕತೆಯಲ್ಲಿ ಒಬ್ಬ ಪ್ರಸಿದ್ಧ ವ್ಯಕ್ತಿ ಪತ್ರಕರ್ತನೊಬ್ಬ ಕೇಳುವ ಪ್ರಶ್ನೆಗಳಿಗೆಲ್ಲ ಕೆರೆದುಕೊಳ್ಳುವ ಮೂಲಕ ಉತ್ತರಿಸುತ್ತಿರುತ್ತಾನೆ. ಮಾಡುವ ಹೋರಾಟವೂ, ಆಡುವ ಆಟವಾಗಬಾರದು. ನೋಡುವ ಚಿಕಿತ್ಸಕ ಕಣ್ಣಿಗೆ ನಂಜಿರಬಾರದು ಎಂಬುದು ನನ್ನ ಅಭಿಪ್ರಾಯ.

ನನಗ್ಯಾಕೋ ಕೆಲವರು ಉದ್ಧಟತನದ ವರ್ತನೆ ಮಾಡುತ್ತಿದ್ದಾರೆ ಅನಿಸುತ್ತದೆ. ಅವರ ಬರಹದ ಆಶಯಗಳು ಏನೆಂಬುದೆ ತಿಳಿಯುತ್ತಿಲ್ಲ. ಅಂಥ ಕೆಲ ಮಹಾಶಯರು ಬರೆಯುವ ಧಾಟಿಯಲ್ಲಿಯೇ ಬಹಳಷ್ಟು ಎಡವಟ್ಟುಗಳಿವೆ. ಅದನ್ನು ಕೂಡ ಅರ್ಥ ಮಾಡಿಕೊಂಡು ಅವರ ಬರಹಗಳಲ್ಲಿ ಸಮಷ್ಟಿ ಪ್ರಜ್ಞೆ ಅಂತ ಒಂದಿದೆಯಲ್ಲ ಅದಕ್ಕೆ ಧೋಕಾ ತರದ ರೀತಿಯಲ್ಲಿ ಕೆಲವು ಪತ್ರಿಕೆಯವರು ನೋಡಿಕೊಳ್ಳಬೇಕು. ವಿಶೇಷವಾಗಿ ಯೋಗೇಶ ಮಾಸ್ಟರ್ ಬರಹಗಳ ಆಶಯಗಳು ಏನು..? ಎಂಬುದು ನನ್ನ ಪ್ರಶ್ನೆ. ಮೌಢ್ಯದ ಕುರಿತಾಗಿ ಮಾತಾಡುತ್ತಾರೆಯೇ…? ಹೋಗಲಿ ಹಿಂದೂ ಧರ್ಮದಲ್ಲಿನ ನ್ಯೂನ್ಯತೆ, ತಾರತಮ್ಯ, ಅಸಮಾನತೆಗಳ ಕುರಿತಾಗಿ ಮಾತಾಡುತ್ತಾರೆಯೇ…? ಪ್ರಚೋದಿಸುವ ಭಾವ ಎನ್ನುವುದು ಬದುಕಿನ ಇರುವಿಕೆಯನ್ನೇ ಇರುಸು-ಮುರುಸು ಮಾಡುವಂತಿರಬೇಕು.(ಲಂಕೇಶರ ಟೀಕೆ ಟಿಪ್ಪಣಿಗಳು ಆ ಕೆಲಸವನ್ನು ಮಾಡುತ್ತಿದ್ದವು) ನಾವು ನಂಬಿರುವುದರ ಹಿಂದಿನ ಕುಹಕತನಗಳನ್ನು ಬಿಚ್ಚಿಡುವ ಬದಲು, ಈ ದೇಶದಲ್ಲಿ ಹಿಡಿದಿಡಲಾರದ ಐತಿಹ್ಯ ಕಥನಗಳ ವಿನ್ಯಾಸವನ್ನು ತಂತ್ರದ ಹಾಗೆ ಕೆಲವು ಮಾರ್ಪಾಟುಗಳನ್ನು ಮಾಡಿಕೊಂಡು ಒಂದಷ್ಟು ಬರೆದು ಬಿಡುತ್ತಾರೆ. ಅಂಥ ಬರಹ ಸಮಾಜದ ಸ್ವಾಸ್ತ್ಯವನ್ನು ಹಾಳುಮಾಡಬಲ್ಲದು. ಅದಕ್ಕೆ ಉದಾಹರಣೆಯಾಗಿ ಹಲಕೆಲವು ಹೆಸರಾಂತ ಕಾದಂಬರಿಕಾರರ, ಅಂಕಣಕಾರರ ಬರಹಗಳನ್ನು ಗಮನಿಸಬಹುದಾಗಿದೆ.
ಸಂಬಂಜಾ ಅನ್ನೋದು ದೊಡ್ಡದು ಕಣಾ ಅಂದಂಗೆ ನಂಬಿಕೆ ಅನ್ನೋದು ಮನಸ್ಸುಗಳನ್ನ ಕಟ್ಟತದೆ. ಈ ನೆಲದ ಐತಿಹ್ಯಗಳನ್ನ ಒಡೆದು ಕಟ್ಟಬೇಕೆ ಹೋರತು ನಂಬಿಕೆಗಳನ್ನು ಒಡೆದು ಕಟ್ಟಲು ಪ್ರಯತ್ನಿಸುವುದು ಯಾಕೋ ಕೆಡುಕಿನದು ಎನಿಸುತ್ತದೆ. ಮೊನ್ನೆಯಷ್ಟೆ ಮೊಗಳ್ಳಿ ಗಣೇಶ ಸರ್ ಒಂದು ಹೊಸ ಕತೆ ಓದಿದೆ. ದೇವರ ಮರ ಅಂತ ಆ ಕತೆ. ಆ ಕತೆ ನಂಬಿಕೆ ಮತ್ತು ಸಾಮುದಾಯಿಕ ಪ್ರಜ್ಞೆಯ ಕುರಿತಾಗಿದೆ. ಆ ಮರಗಳ ವಾರಸುದಾರರು ಯಾರೇ ಇರಲಿ ಹಿಂದೂ ಅಥವಾ ಮುಸ್ಲಿಂ. ಕತೆಯಲ್ಲಿ ಒಂದು ಕೇರಿಯವರು ತಮ್ಮ ಮನೆ-ಗುಡಿಸಲುಗಳನ್ನು ಕಳೆದುಕೊಳ್ಳುತ್ತಾರೆ. ಆ ದೇವರ ಮರದ ಕೆಳಗೆ ಆಶ್ರಯ ಪಡೆಯುತ್ತಾರೆ. ಅವರು ಆ ಊರಿನ ಸಮುದಾಯಗಳ ನಡುವಿನ ನಂಬುಗೆ ಮತ್ತು ಸಂಬಂಧಗಳನ್ನು ಬೆಸೆಯುವ ಕೆಲಸ ಮಾಡುತ್ತಾರೆ. ಇಂತಹ ಕೆಲಸಗಳನ್ನು ಇತಿಹಾಸದಲ್ಲಿ ಮಾಡಿದವರಿದ್ದಾರೆ. ತಲೆದಂಡ ಕೊಟ್ಟವರೂ ಇದ್ದಾರೆ. ಆತ್ಮವಿಶ್ವಾಸದಿಂದ ಹೋರಾಡಿದವರೂ ಇದ್ದಾರೆ. ಈಗ ಬುದ್ದತ್ವದ ಅರಿವನ್ನಿಟ್ಟುಕೊಂಡು ನಾವು ಬದುಕಬೇಕಾಗಿದೆ. ಪರಸ್ಪರರಲ್ಲಿನ ನಂಬುಗೆಗಳನ್ನು ಕಾಕುದೃಷ್ಟಿಯಲ್ಲಿ ಹೊರಹಾಕುತ್ತ ಮತ್ತೆಮತ್ತೆ ಗಾಯದ ಸುತ್ತ ಕೆರೆಯುವ ಕೆಲಸವನ್ನು ಮಾಡುವುದು ತರವಲ್ಲ. ವ್ಯಷ್ಟಿಗಿಂತಲೂ ಸಮಷ್ಟಿತ್ವ ನಮ್ಮ ಹುಡುಕಾಟವಾಗಬೇಕಿದೆ.