ಚಪ್ಪಲಿಗಳು


ಊರೆಲ್ಲ ಸುತ್ತಿ ಬಂದು ಮೂಲ್ಯಾಗ ಕುಂದರುವ ಮೂಳಗಳು ಯಾವವು..? ಅಂತ ಒಡಪುಕತಿ ಹೇಳತಿದ್ದರಲ್ಲ ಅಂಥ ಸಂಚಾರಿಸ್ವಭಾವದ ಚಪ್ಪಲಿಗಳ ಊರ್ಫ ಎಕ್ಕಡಗಳ ಕಥನವೂ ಅಷ್ಟೆ ಕುತೂಹಲಿಯಾದದ್ದು.
ಎಲ್ಲೇ ಸಭೆಸಮಾರಂಭಗಳು ನಡೆಯಲಿ ಅಲ್ಲೆಲ್ಲ ತಮ್ಮ ಗ್ರಾಮಮಟ್ಟದ, ತಾಲ್ಲೂಕುಮಟ್ಟದ, ಜಿಲ್ಲಾಮಟ್ಟದ, ರಾಜ್ಯಮಟ್ಟದ ಮೀಟಿಂಗಗಳನ್ನು ಈ ಚಪ್ಪಲಿಗಳು ಮಾಡುತ್ತವೆ. ತನ್ನ ಮೇಲೆ ಬೀಳುವ ಭಾರವನ್ನು ಸಹಿಸಿಕೊಳ್ಳಲಾರದ ಹಲಕೆಲವು ಚಪ್ಪಲಿಗಳಂತೂ… ತನ್ನ ಮೈ ತೂತಾಗಿರುವ, ಉಂಗುಟ ಹರಿದಿರುವ, ಮುಳ್ಳುಚುಚ್ಚಿರುವ ಅಂಗೋಪಾಂಗಗಳ ಪ್ರದರ್ಶನ ಮಾಡಿ ಈ ಮನುಷ್ಯನ ವಿರುದ್ಧ ನಾವು ಯಾವ ತೆರನಾಗಿ ಚಳುವಳಿ ಆರಂಭಿಸಬೇಕೆಂದು ಗಂಭೀರವಾಗಿ ಚಿಂತಿಸುತ್ತವೆ. ಆದರೆ ಅವುಗಳ ಸಂಕಟವನ್ನು ಕೇಳಿ ಕೋಟರ್ಿನಲ್ಲಿ ದಾವೆ ಹೂಡತಕ್ಕಂಥ ವಕೀಲನ ಕಾಲೊಳಗೆ ಚಪ್ಪಲಿಗಳಿಲ್ಲದೆ ಪಾಲಿಷ್ ಮಾಡಿರತಕ್ಕಂಥ ಬೂಟುಗಳಿರುವುದರಿಂದ ಇವುಗಳ ಹೋರಾಟ ವ್ಯರ್ಥವಾಗುತ್ತದೆ. ಆದದ್ದಾಗಲಿ ಸ್ಟೇಶನ್ ಮೆಟ್ಟಿಲು ಹತ್ತೋಣವೆಂದು ತೀಮರ್ಾನಿಸಿದರೆ ಆ ಪೋಲಿಸ್ ಮಹಾಶಯರು ಕಾಲೊಳಗಿನ ಬೂಟು ಕಳಚುವುದೇ ಇಲ್ಲ.. ಈ ಬೂಟುಗಳದ್ದೊಂದು ತಕರಾರು… ಅತಿಕಡಿಮೆ ವರ್ಚಸ್ಸಿನ ಚಪ್ಪಲಿಗಳ ಅಹವಾಲು ಸ್ವೀಕರಿಸಲು ವರ್ಗಭೇದದ ಸಮಸ್ಯೆ. ಹೀಗಾಗಿ ತಮ್ಮ ನವೆಯುವ ನೋವನ್ನು ಸಹಿಸಿಕೊಂಡು ಮತ್ತೆ ಯಥಾವತ್ ತಮ್ಮ ಯಾವತ್ತಿನ ಹುಟ್ಟುತ್ತಲೆ ಬಳುವಳಿಯಾಗಿ ಬಂದ ಕೆಲಸವನ್ನು ಮುಂದುವರೆಸುತ್ತವೆ.
ಹೀಗೊಂದುಸಲ ವಿಚಾರಸಂಕಿರಣದ ಹೊರಬಾಗಿಲಲ್ಲಿ ಬಿಟ್ಟಿದ್ದ, ಬಿಸಿಲಲ್ಲಿ ಒದ್ದಾಡುತ್ತ ಬಿದ್ದಿದ್ದ ನನ್ನ ಚಪ್ಪಲಿಗಳು ಸಮ್ಮೇಳನಾಧ್ಯಕ್ಷ ಸ್ಥಾನದಲ್ಲಿ ಕೂತು ನನ್ನ ವಿರುದ್ಧವೇ ಘೋಷಣೆ ಕೂಗುವ ಇನಿದನಿ ಕೇಳಿಸಿತು. ಎರಡೂ ಮಗ್ಗುಲಲ್ಲಿ ಹದವಾಗಿ ತುಳಿಯದೆ ಒಂದೊಂದು ಕಡೆ ಭಾರಬಿಟ್ಟು ನನ್ನ ಸುಂದರವಾದ ಆಕಾರವನ್ನು ಹದಗೆಡಿಸಿದ್ದಾನೆ ಮಾರಾಯ ಎಂದು ಬೈಯುತ್ತಲಿದ್ದವು. ಮೊದಲೇ ನಾಟಕದವ ಸ್ವಲ್ಪ ಹಗುರತನವೂ ನಡಿಗೆಯೊಳಗೆ ಇದ್ದೇ ಇರುತ್ತದೆಂದು ಭಾವಿಸಿ ಇವನ ಕಾಲಿಗೆ ಅಲಂಕರಿಸಿ ದೊಡ್ಡ ತಪ್ಪು ಮಾಡಿದೆವು. ನಿಂತಲ್ಲೆಲ್ಲ ತ್ರಿಭಂಗಿ ಹಾಕಿಕೊಂಡು ನಿಲ್ಲುವ ಇವನ ಸಹವಾಸ ನಮಗಂತೂ ಸಾಕಾಗಿದೆ… ಎಡಕಿನ ಚಪ್ಪಲಿ ಸ್ವಲ್ಪ ವಯ್ಯಾರವನ್ನು ಜಾಸ್ತಮಾಡಿ ವಾದಮಂಡಿಸಿತು… ಕೇಳಬೇಕಾ ಬಲಕಿನ ಚಪ್ಪಲಿಯೂ ಶುರುವಿಟ್ಟಿತು. ಎಡಕ್ಕಿಂತಲೂ ಬಲನಾದ ನನ್ನ ಮೇಲೆ ಈ ಮಾರಾಯನ ವಜ್ಜೆ ಜಾಸ್ತಿ ಆಗುತ್ತಿದ್ದು ನಾನು ಬಹಳ ತ್ರಾಸುಪಟ್ಟುಕೊಂಡು ಈ ಅಮಾಸೆಯಂಥ ಮನುಷ್ಯನನ್ನು ಹೊರಬೇಕಾಗಿದೆ.. ಎರಡೂ ಕಾಲುಗಳ ಮೇಲೆ ಭಾರಹಾಕದೆ ನನ್ನನ್ನೆ ಈತ ಹೆಚ್ಚು ಅವಲಂಬಿಸಿದ್ದಾನೆಂದೂ ಮತ್ತು ಇವನು, ಬ್ರೇಕ್ಹಾಕಲು ಬೈಕ್ಒದೆಯಲು ಮುಖ್ಯ ನಾನೇ ಬೇಕೆಂದು ವಾದಿಸಿತು. ಹಾಗಾಗಿ ಸಂಗಾತಿಗಳೇ.. ಈ ಎಡಕ್ಕಿಂತ ಬಲಕಿನವನಾದ ನನ್ನ ನೋವೆ ತುಸುಜಾಸ್ತಿ ಎಂದು ಬೊಬ್ಬೆ ಹಾಕಿತು.
ಇದ್ದಕ್ಕಿದ್ದಂತೆ ಸಭೆಯಲ್ಲಿ ಎರಡು ಗುಂಪುಗಳಾಗಿ ಇವರ ಮಾತನ್ನು ಅವರು ಕೇಳದಾಗಿ ಅವರ ಮಾತನ್ನು ಇವರು ಕೇಳದಾಗಿ ಎಡ-ಬಲವೆಂದು ವಾದಿಸುವುದು ವಿಪರೀತಕ್ಕೆ ಹೋಗಿ ಸಭಾಧ್ಯಕ್ಷರಾಗಿದ್ದ ನನ್ನ ಚಪ್ಪಲಿಗಳು ಮೆಟ್ಟಿಲಿಂದ ಮೆಟ್ಟಿಲು ಕೆಳಗಿಳಿಯುತ್ತ ಅದ್ಯಾವನೋ ಜನಪ್ರಿಯ ಕಾದಂಬರಿಕಾರ ಬಂದನೆಂದು ಇಡೀ ವಿಚಾರಸಂಕಿರಣದ ಸಾಹಿತಿಮೇರುಗಳು ಅತ್ತ ತಿರುಗುವಷ್ಟರಲ್ಲಿ ನನ್ನ ಚಪ್ಪಲಿಗಳು ತೀರ ಅಂಚಿನಲ್ಲಿ ಅನಾಥವಾಗಿದ್ದವು. ಎಡ-ಬಲ ಅನ್ನೋ ಚಲನೆಯಿಲ್ಲದ ಪಂಥಗಳ ಚಟುವಟಿಕೆ ನನ್ನೊಳಗ ಜಾಗೃತವಾಗಿ ಅದು ಬೆಂಬಿಡದ ಭೂತವಾಗಿ ನನ್ನೊಳಗನ್ನ ಇರಿಯತೊಡಗಿದಾಗ ಇದ್ದೂಇಲ್ಲದಂತೆ ಎದ್ದು ಹೊರವೊಂಟೆ… ಚಪ್ಪಲಿಗಳು ಅನ್ನೋವು ಎಲ್ಲಿದ್ದಾವು ಅಂತ ಹುಡುಕಿದರ ಒಂದು ಇನ್ನೊಂದು ತದ್ವಿರುದ್ಧವಾಗಿ ಒಂದನ್ನೊಂದು ಸೇರದೆ ದೂರಬಿದ್ದಿದ್ದವು. ಅಸ್ತಿತ್ವದಲ್ಲಿರುವ ನಾನು ನನ್ನ ಕಾಲಿಗೆ ಜೋಡಿಸಿಕೊಂಡು ಹಾಂಗೂಹೀಂಗು ಅವುಗಳ ಕಚ್ಚಾಟ, ಬೈಗಳ, ಹಾವುಚೇಳುಗಳ ಎರಚಾಟಗಳನ್ನ ಸಹಿಸಿಕೊಂಡು ಈ ಬದುಕಿನ ಚಲನೆಯನ್ನು ತೂಗಿಸಿಕೊಂಡು ಹೋಗಬೇಕಾದ ದದರ್ು ನನ್ನದಾಗಿತ್ತು.
ಈ ಎಡಬಲಗಳ ಕಿತ್ತಾಟ ತ್ವಾಡೆ ಜಾಸ್ತಿ ಆಗಆಗತಾ ಮುಂದೆ ಯಾವ ತೆರನಾದ ಚಪ್ಪಲಿಗಳನ್ನು ಖರೀದಿ ಮಾಡಬೆಕು ಮತ್ತು ಅವುಗಳ ಬಾಳಿಕೆ ಹೊಂದಾಣಿಕೆಗಳ ಇತ್ಯಾದಿಯಾಗಿ ಅವರಿವರಲ್ಲಿ ವಿಚಾರಿಸತೊಡಗಿದೆ. ಹೋಗಿಬರುವವರ ಕಾಲುಗಳ ಮ್ಯಾಲೂ ಕಣ್ಣಿಟ್ಟು ಯಾವಯಾವ ಕಾಲಿಗೆ ಯಾವ ಬಣ್ಣ ಒಪ್ಪತದ, ಅದರ ಡಿಸೈನ್ ಹೆಂಗೈತಿ, ಅದರ ತಾಳಿಕೆ ಬಾಳಿಕೆ ಹೆಂಗಿರಬಹುದು ಅಂತ ಯೋಚನಾಮಗ್ನನಾಗುವುದು ಹೆಚ್ಚಾಯ್ತು. ಈಚೇಚೆ ಹೆಂಗಸರ ಕಾಲಲ್ಲಿನ ಚಪ್ಪಲಿಗಳನ್ನು ನೋಡುವುದೆ ಚಂದ… ಆ ಸಿಂಡ್ರೇಲಾಳ ಪಡಿಯಚ್ಚು ಚಪ್ಪಲಿಗಳು. ತರಹೇವಾರಿ ವಿನ್ಯಾಸಗಳು ಆ ಹೆಂಗಳೆಯರ ಸುಕೋಮಲ ಮೃದು ಪಾದಂಗನ್ನು ಅಲಂಕರಿಸಿರುವುದನ್ನು ನೋಡಲು ಎರಡುಕಣ್ಣಗಳು ಸಾಲುವುದಿಲ್ಲ.
ಇರಲಿ ಅದೆಲ್ಲ ನಮಗ್ಯಾಕ..?
ನಾ ಸಣ್ಣಾಂವಿದ್ದಾಗ ಇಜ್ಜೋಡೆಂಬ ಕೊಲ್ಲಾಪುರದ ಆರು ಅಟ್ಟಿ ಎತ್ತರದ ಜೋಡುಗಳನ್ನು ಊರೊಳಗ ಯಾವನಾದರೂ ಹಕ್ಕೊಂಡು ಬಂದ್ರ ಇದು ಕುರಗಾರಣ್ಣನದೆ ಎಂಟ್ರಿ ಅನ್ನೋದು ಖಾತ್ರಿಯಾಗತಿತ್ತು. ಒಂದು ಲೆಖ್ಖಕ್ಕ ಈ ಜಿರಕೀ ಚಪ್ಪಲಿಯ ಧರಿಸುವುದರೊಳಗ ಉಸ್ತಾದ, ಪೈಲ್ವಾನ, ಜಮೀನ್ದಾರ, ಗೌಡ, ಕುಲಕಣರ್ಿಯರ ಗತ್ತೂ ಇರುತ್ತಿದ್ದರಿಂದಾಗಿ ಜಿರಕಿ ಮೆಟ್ಟುಗಳನ್ನ ಮೆಟ್ಟೋದು ಒಂದನಮೂನಿ ಫ್ಯಾಷನ್ನ ಆಗಿತ್ತು. ಕಾಲಿನ ಅಳತೆಕೊಟ್ಟು, ಮುಂಗಡ ಅಡ್ವಾನ್ಸ್ನ್ನೂ ಕೊಟ್ಟು ತಮ್ಮ ಕಾಲಿಗೆ ಸರಿಹೊಂದುವಂತ ಚಪ್ಪಲಿಗಳಿಗಾಗಿ ತಿಂಗಳುಗಟ್ಟಲೆ ಕಾದು ಕೊಳ್ಳುವ ಕಾಲವೊಂದಿತ್ತು. ಆಗಿನ ಕಾಲಕ್ಕೆಲ್ಲ ತಿಂಗಳಿಗೊಮ್ಮೆ ಹದವಾಗಿ ಎಣ್ಣಿಉಣಿಸಿ, ನಾಯಿ, ನರಿ, ತೋಳ ಮಳಿ-ಗಾಳಿಗೆ ಸಿಕ್ಕದಂಗ ಕಾಪಾಡೋದರೊಳಗ ಶ್ರದ್ಧೆ ಇರತಿತ್ತು. ದೇವಸ್ಥಾನ, ಜಾತ್ರೆ ಲಗ್ನಗಳಿಗೆಲ್ಲ ಹೋಗುವಾಗ ಮುದ್ದಾಂ ಚಪ್ಪಲಿಯನ್ನ ಕದಿಯುವ ಕಳ್ಳರೂ ಬಂದಿರುತ್ತಾರೆಂಬ ಹೆದರಿಕೆಯೂ ಇರುತ್ತಿತ್ತು. ಖರೇ ಹೇಳಬೇಕಂದ್ರ ಕಳ್ಳರಿಗಿಂತ ನಾಯಿಗಳ ಕಾಟ ಹೆಚ್ಚಿರುತ್ತಿದ್ದರಿಂದಾಗಿ ದೇವರಕಿಂತ ಜಾಸ್ತಿ ಚಪ್ಪಲಿಗಳ ಮ್ಯಾಲ ಧ್ಯಾಸ ಇರುತ್ತಿತ್ತು.
ಈ ಡಾಂಬರೀಕರಣ ಯುಗ ಪ್ರಾರಂಭವಾದ ಮೇಲೆ ದಿನದಿನವೂ ಪಾಲಿಷ್ ಮಾಡಬಹುದಾದ ಕರೀಕಪ್ಪು ಬೂಟುಗಳು, ಹವಾಯಿ, ಬಾಟಾಗಳು ಹೆಚ್ಚೆಚ್ಚು ಬಳಕೆಗೆ ಬಂದವು.
ಬಿಳಿಅಂಗಿ ಬಿಳಿಧೋತ್ರ ತಲಿಮ್ಯಾಲ ಟೊಪಿಗಿ ಹೆಗಲಮ್ಯಾಲ ಟವೆಲ್ಲು ಹಾಕಿದ ಮಾತ್ರಕ್ಕ ಅಂವ ತಯಾರಾಗಿ ಹೊರಟೇಬಿಟ್ಟ ಅಂದ್ಕೊಳ್ತಿರಲಿಲ್ಲ. ಅಂವ ಹೊರಡೋದರ ಸೂಚನೆ ಕೆಲವೊಂದಸಲ ಎಕ್ಕಡಗಳ ಮೂಲಕವೂ ಆಗುತ್ತದೆ.
ಆ ನಮೂನಿಯ ಸ್ಟಂಟಗಳು ಯಾವತ್ತು ಪ್ಯಾರಾಗನ್, ಲುನಾರ್ ಕಂಪನಿಯ ಎರಡಬಾರಿನ ಚಪ್ಪಲಿಗಳು ಬಂದುವೋ ಅವತ್ತಿನಿಂದ ನಿಧನಿಧಾನಕ್ ಕಮ್ಮಿಯಾಗತ ಬಂದು ಇವತ್ತಿನ ಕಾಲಕ್ಕ ಜಿರಕಿ ಚಪ್ಪಲಿಯ ಟಿಆರ್ಪಿ ಪೂತರ್ಿ ಬಿದ್ದು ಹೋಗಿದೆ ಅನ್ನಬಹುದು. ಆಮ್ಯಾಲ ಅವರೂ ತಮ್ಮ ಚಪ್ಪಲಿ ವಿನ್ಯಾಸದಾಗ ತ್ವಾಡೆ ಸರ್ಕಸ್ ಮಾಡಿ ಆರು ಬಾರ್ ಇದ್ದುದನ್ನ ನಾಲಕುಬಾರಿಗೆ ಇಳಿಸಿ ಅದು ವಕರ್ೌಟ್ ಆಗದಿದ್ದಾಗ ಸುಪ್ರಸಿದ್ಧ ಎರಡಟ್ಟಿ ಚಪ್ಪಲಿಗಳಲ್ಲೇ ಜಿರಕಿ ನಿನಾದ ಹುಟ್ಟಿಸೋ ಚಪ್ಪಲಿಗಳನ್ನೂ ಮಾಡಿದರು. ಥೇಟ್ ರಾಜಮಹಾರಾಜರ ಠೀವಿ ಬರಲಿ ಅನ್ನೋಕಾರಣಕ್ಕ ಬಿಸಿಲಿಗೆ ನಯಸಾಗಿ ಒಗ್ಗುತ್ತಿದ್ದ ಚಪ್ಪಲಿಯ ಎದಿಮ್ಯಾಲ – ಕೃಷ್ಣನಿಗೆ ಗರಿಸಿಕ್ಕಿಸಿದ ರೀತಿಯೊಳಗ ಅವಕ್ಕೂ ಕೆಂಪುಗೊಂಡೆಯ ಗುಚ್ಚ ಕಟ್ಟ್ಟಿದರು. ನಾಗ್ಪುರ, ಕೊಲ್ಲಾಪುರ, ಜತ್ತ, ಸಾಂಗ್ಲಿ, ರಾಮದುರ್ಗ, ಮುಧೋಳ ನಿಪ್ಪಾಣಿಯ ಚಪ್ಪಲಿಗಳಲ್ಲಿ ಈ ಗುಚ್ಚು ನಾನಾ ಥರವಾಗಿ ಇರುವುದು. ಹೆಬ್ಬೆರಳ ಸಂದಿಯಿಂದ ಪಾದದ ಮ್ಯಾಲಿನ ನಾಲ್ಕಿಂಚಿನ ಪಟ್ಟಿಗೆ ಬಂದಿರುವಂಥ ಮುಖ್ಯ ಮೂಲಾಧಾರದ ದಾರದ ತುದಿಗೆ ಕಸಿಕಟ್ಟುವ ರೀತಿಯೊಳಗೂ ವ್ಯತ್ಯಾಸ ಐತಿ. ಬಂಧುರ ಹುರಿಗೊಳಿಸಿ ಹೆಣ್ಮಕ್ಕಳ ಜಡಿ ಹೆಣೆದಂಗ ಈ ದಾರವನ್ನ ನೆಯ್ಗೆಮಾಡಿರುವಂತದ್ದು ಕೊಲ್ಲಾಪುರದ್ದಾದರ ಇನ್ನು ಗುಚ್ಚಿನೊಳಗ ಗರಿಗರಿ ಮಿಂಚಹಾಕಿರುವಂಥದ್ದು ನಾಗಪುರದ್ದು. ಸಾಂಗ್ಲಿ, ಜತ್ತ ಚಪ್ಪಲಿಗಳಿಗೆ ಜಡೆಯಂಥ ಹೆಣಿಗೆ ಇರುವುದಿಲ್ಲವಾದರೂ ಚಂದಕ್ಕೊಂದು ಕೆಂಪುಬಣ್ಣದ ಗೊಂಡೆ ಕಟ್ಟಿರುತ್ತಾರೆ.
ಟ್ರ್ಯಾಕ್ಟರ್ ಟಯರ್ನ್ಯಾಗ ಮಾಡಿಕೊಡತಿದ್ದ ಹತ್ತರೂಪಾಯಿಗೆ ಜೋಡ ಚಪ್ಪಲಿಗಳ ಡಿಮ್ಯಾಂಡು ತೀರ ಕೆಳಮಟ್ಟದ್ದು ಅನ್ನೋ ರೀತಿಯೊಳಗ ನೋಡಲಿಕ್ಕ ಶುರುಮಾಡಿದಂತೆಲ್ಲ… ಚಪ್ಪಲಿ ತೊಡೋದರೊಳಗೂ ಗರ್ವ ಅನ್ನೋದು ಹುಟ್ಟಿಕೊಳ್ತು. ನಮ್ಮಪ್ಪ ನಮಗಾಗಿ ತಂದುಕೊಡುತ್ತಿದ್ದ ಟಯರ್ ಚಪ್ಪಲಿಗಳ ಜಾಗದಲ್ಲಿ ಲಟಕ್-ಪಟಕ್ ಅಂತ ವಿಚಿತ್ರವಾಘಿ ಹೆಜ್ಜೆಗಳಿಗೊಂದು ಸೌಂಡ್ ಕೊಡುವ ಪ್ಯಾರಾಗಾನಗ ಚಪ್ಪಲಿಗಳು ಬಂದವು. ತುಸು ದಿವಸಕ್ಕ ಆ ಚಪ್ಪಲಿಗಳ ತಳ ಸವೆದು ಉಂಗುಟಗಳು ಕಿತ್ತುಕೊಲ್ಳುವುದೂ ಪಿನ್ನೋ, ದಾರಾನೋ ಗಂಟ ಹಾಕಿ ಮುಂದಿನ ಮಂಗಳವಾರದ ಸಂತಿ ಬರೋತನಕ ಜ್ವಾಪಾನ ಮಾಡೋದು ನಡೆದಿರತಿತ್ತು. ಮಳೆಗಾಲಕ್ಕಂತೂ ಲಟಕ್-ಪಟಕ್ನೊಂದಿಗೆ ಚಪ್ಪಲಿಗಂಟಿದ ರಾಡಿಯೂ ಸಿಡಿದು ಹಿಂದಿನ ಭಾಗವೆಲ್ಲ ಕೆಸರಾಗುವುದು ರೊಚ್ಚೆನಿಸುತ್ತಿತ್ತು. ಈ ಕಾರಣದಿಂದಾಗಿ ಅಪ್ಪನ ಕುಶಲೀ ವ್ಯವಹಾರದ ಒಂದು ಭಾಗವನ್ನು ಕಿತ್ತುಕೊಂಡು ‘ಅಪ್ಪಾ ನೀ ನನಗ ಚಪ್ಪಲಿ ತರೋದು ಬ್ಯಾಡ, ನನ್ನ ಚಪ್ಪಲ್ ನಾನ ತಗೊಳ್ತೀನಿ’ ಅಂತ ಹೇಳಿಬಿಟ್ಟೆ. ಅಪ್ಪನ ವ್ಯವಹಾರವೆಂದರೆ ಪಕ್ಕಾ ಲೋಕಲ್. ಚಪ್ಪಲಿಯ ಉಂಗುಟನ್ನ ಎರಡೆರಡ ಸಲ ಜಗ್ಗಿ ನೋಡಿ, ಅದರ ಅಟ್ಟಿಯ ಅಂಟುವಾಳ ಗಟ್ಟಿ ಇಲ್ಲವೋ ಅನ್ನೋದನ್ನ ಪರೀಕ್ಷಿಸಿಲು ಅತ್ತಿತ್ತ ಮುರಿದಾಡಿ, ರೇಟಿನಲ್ಲೂ ವ್ಯವಹಾರ ಮಾತಾಡಿ ಎಷ್ಟು ಸಾಧ್ಯವೋ ಅಷ್ಟು ಕಮ್ಮಿ ಮಾಡಿಕೊಂಡು ತರುತ್ತಿದ್ದ ಒಂದು ಪರಂಪರೆಯನ್ನು ನಾನು ಮೊದಲ ಸಲ ಬ್ರೇಕ್ ಮಾಡಿ… ಅಂಗಡಿಯವರು ಹೇಳಿದಷ್ಟನ್ನು ಕೊಟ್ಟು, ನಯಸಾದ ಚಪ್ಪಲಿಗಳನ್ನು ತಂದುಕೊಳ್ಳಲು ಶುರುಮಾಡಿದೆ. ನನ್ನ ಆಯ್ಕೆಗೆ ಅಪ್ಪ ಎಂದು ಸಮ್ಮತಿಸಲಿಲ್ಲ. ಏನಾದರೊಂದು ಕೊಂಕುತನ ಹೇಳಿಯೇ ಹೇಳುತ್ತಿದ್ದ.
ಅಪ್ಪ ಮೊನ್ನೆ ಧಾರವಾಡಕ್ಕ ಬರುವಾಗ ‘ನನಗೊಂದು ಜತಿ ಚಪ್ಪಲಿ ತಂದುಕೊಡು’ ಅಂತ ಕೇಳಿದೆ. ಅಪ್ಪನ ಪಾದದ ಅಳತೆಯೂ ನನ್ನದೂ ಒಂದೆ ಆದ್ದರಿಂದ ಆಯ್ತು ಎಂದಷ್ಟೆ ಹೇಳಿದ. ಅವನು ಬರುವುದನ್ನೆ ಕಾದು ನಾನು ಬೇರೆ ಚಪ್ಪಲಿ ತೆಗೆದುಕೊಳ್ಳದೆ ಹಾಗೆ ಹಳೆಯ ಚಪ್ಪಲಿಯಲ್ಲೆ ಸಾಗಹಾಕುತ್ತಿದ್ದೆ. ಎಡ-ಬಲವೆಂದು ಕ್ಯಾತೆ ತೆಗದಿದ್ದ ಚಪ್ಪಲಿಗಳನ್ನು ಮೂಲೆಗೆ ಎಸೆದು ಹೊಸದನ್ನು ಧರಿಸುವ ವರ್ತಮಾಣದ ಸೋಗಿನ ಹಂಬಲವೂ ಇತ್ತು. ಅಪ್ಪ ಬಂದಾಗ ಬಾಗಿಲಹೊರಗಡೆಯೇ ಚಪ್ಪಲಿಯ ಹೊಸಪೊಟ್ಟಣವನ್ನಿಟ್ಟ. ಅತ್ತೊಂದು ಮುಖ ಇತ್ತೊಂದು ಮುಖ ಮಾಡಿಕೊಂಡು ವ್ಯಂಗ್ಯವಾಡುತ್ತಿದ್ದ ಎಡ-ಬಲ ಕ್ರಾಂತಿಕಾರಿ ಚಪ್ಪಲಿಗಳು ಮುಸಿಮುಸಿ ನಗುತ್ತಿದ್ದವು. ವಾಸನೆಯಿಂದಲೇ ಚಪ್ಪಲಿಯ ಕ್ವಾಲಿಟಿ ತಿಳಿದಿದ್ದವೇನೋ…! ಪೊಟ್ಟಣದಲ್ಲಿ ಅದೆ ಆ ಹಳೆಯ ಮಾದರಿಯ ನಾಲ್ಕಟ್ಟಿಯ ರಾಮದುರ್ಗ ಚಪ್ಪಲಿಗಳಿದ್ದವು.
ಮ್ಯಾಚಿಂಗ್ ಯುಗದಲ್ಲಿ ಅಂಗಡಿಮುಂಗಟ್ಟುಗಳನ್ನು ತುಂಬಿಕೊಂಡಿರುವ ಸೌಂದರ್ಯ ವರ್ಧಕ ವಸ್ತುಗಳೇ ಹೆಚ್ಚಿರುವಾಗ ನಾನು ನಾಲ್ಕಟ್ಟಿಯ ಮೆಟ್ಟುಗಳನ್ನು ಮೆಟ್ಟಿಕೊಂಡು ಓಡಾಡುವುದು ಮುಜುಗರವೆನಿಸಿತು. ಅವುಗಳ ಹಿಂಬಡಿಯ ಗಾತ್ರ, ಉಂಗುಟದ ನೆತ್ತಿಯ ಮೊನೆ, ಚರ್ಮದ ಎಳೆಗಳಲ್ಲಿ ನೆಯ್ದ ಜಡೆ ಒಂದೊಂದನ್ನು ನೋಡಿ ನನ್ನ ಎಡ-ಬಲ ಸಿದ್ಧಾಂತ ಚಪ್ಪಲಿಗಳು ಗಹಗಹಿಸಿ ನಗುತ್ತಿದ್ದವು. ನಾನು ಮಾತ್ರ ಗಾಣದೆತ್ತಿನಂತೆ ಕಣ್ಣಿಗೆ ಪಟ್ಟಿಕೊಂಡು ದುಡಿಯಲು ಸಿದ್ಧವಾಗಿ ಬಂದಿರುವ ಈ ಚಪ್ಪಲಿಗಳಿಗೆ ಮ್ಯಾಚ್ ಆಗುವಂತೆ ನನ್ನ ದಿರಿಸನ್ನೂ ಬದಲಿಸಿಕೊಂಡೆ…

Advertisements

ಬೇಲಿಯೊಳಗಿನ ಅಸ್ಪೃಶ್ಯನಿಗೆದುರಾದ ಅಂಬೆಡ್ಕರ್


ಬೇಲಿಯೊಳಗಣ ಅಸ್ಪೃಶ್ಯನ ಸಂಕಟಗಳು ಬಾಯೊಳಗಿಟ್ಟುಕೊಂಡ ಬಿಸಿ ತುಪ್ಪದಂತಿರುತ್ತವೆ. ಹಾಗೆ ಬದುಕಬೇಕಾದ ಅನಿವಾರ್ಯ ಸ್ಥಿತಿಯ ವೃತ್ತಿ ಮಾಡುವ ಕುಟುಂಬದ ಹಿನ್ನೆಲೆಯಿಂದ ಬಂದವನು ನಾನು… ವಿಚಿತ್ರವೆಂದರೆ ಈ ದೇಶದಲ್ಲಿ ಕ್ಷೌರಿಕರು ಅಸ್ಪೃಶ್ಯರಲ್ಲ. ಆದರೆ ಅವರನ್ನು ಮುಟ್ಟಿಸಿಕೊಂಡು ಹೋದ ಪ್ರತಿಯೊಬ್ಬನು ಮನೆಯ ಮುಂದೆ ನಿಂತು ನೀರು ಮುಟ್ಟಿ ಒಳಗೆ ಹೋಗುತ್ತಾನೆ. ಊರೊಳಗೆ ಇವರ ಮನೆಗಳಿರುತ್ತವೆ ಆದರೆ ಬೆಳಗಾಗುತ್ತಲೆ ಯಾರಿಗೂ ಮುಖ ತೋರಿಸದ ಸ್ಥಿತಿ ಇವರದ್ದು. ವೃತ್ತಿಸೂಚಕವಾದ ಹಜಾಮ ಬೈಗುಳವನ್ನು ಹೇಗೆ ಬೇಕೋ ಹಾಗೆ ಎಲ್ಲಿಬೇಕಾದಲ್ಲಿ ಎಗ್ಗಿಲ್ಲದೆ ಬಳಸುತ್ತಾರೆ. ಆ ಹಜಾಮ ಎನ್ನುವ ಶಬ್ದ ಮಾಡುವ ಕಿರಿಕಿರಿಯನ್ನು ನನ್ನಂತೆ ಅನುಭವಿಸಿದವರು ಇರಬಹುದು. ಆದರೆ ಅವರೊಳಗಿನ ಸ್ವಾಭಿಮಾನಕ್ಕೆ ಬಸವಣ್ಣನ ಕಾಯಕಶ್ರದ್ಧೆಯೊಂದೇ ಉತ್ತರವಾಗಿದೆ. ಅದರಾಚೆಗೆ ಬಾಬಾಸಾಹೇಬರೂ ಶಕ್ತಿ ನೀಡಿದ ಒಂದು ಘಟನೆಯಿಂದ ಬರಹಕ್ಕೆ ತೊಡಗುತ್ತೇನೆ.
ಕ್ಷೌರದ ಅಂಗಡಿ ತಮ್ಮ ಮನೆಗೆ ಎದುರಾಗಿ ಇಟ್ಟಿದ್ದಾನೆ ಎಂಬ ಕಾರಣಕ್ಕೆ ಮೇಲ್ಜಾತಿಯವನೊಬ್ಬ ಆ ಅಂಗಡಿಯನ್ನು ರಾತೋರಾತ್ರಿ ಹಿಂದಕ್ಕೆ ಮುಖಮಾಡಿ ತಿರುಗಿಸಿಡುತ್ತಾನೆ, ಪಾಪ ಕಸುಬುಗಾರ ಮುಂಜಾನೆದ್ದು ಅಂಗಡಿಗೆ ಬಂದು ನೋಡಿದರೆ ಅಂಗಡಿ ಬಾಗಿಲ ದಿಕ್ಕೆ ಬದಲಾಗಿರುತ್ತದೆ. ಆತ ಮತ್ತೊಮ್ಮೆ ಅಂಗಡಿಯನ್ನು ಯಥಾಸ್ಥಿತಿಯಲ್ಲಿ ಮಡಗಿ ಕಾಯಕಕ್ಕೆ ಮುಂದಾಗುತ್ತಾನೆ. ಎದುರು ಮನೆಯಾತ ಜಗಳ ಮಾಡುತ್ತಾನೆ. ಮತ್ತೆ ರಾತ್ರಿಯಷ್ಟೊತ್ತಿಗೆ ಅಂಗಡಿಯನ್ನು ಹಿಂಬದಿಗೆ ಮುಖ ತಿರುಗಿಸಿ ಇಡುತ್ತಾನೆ. ಹೀಗೆ ಎರಡು-ಮೂರು ಸಲ ನಡೆದಾದ ಮೇಲೆ ಕಾಯಕದವನಿಗೆ ಆಸರಿಲ್ಲದಂತಾಗುತ್ತದೆ. ಊರಿಗೆ ಒಂದೋ ಎರಡೋ ಮನೆಗಳಿರುವ ಇವರು ಬಹುಸಂಖ್ಯಾತರನ್ನು ಎದುರಿಸಲು ಸಾಧ್ಯವೇ..! ಮತ್ತು ಬೇರೆ ಕಸುಬು ತಿಳಿಯದ ಆತನಿಗೆ ಬದುಕಿನ ಚಿಂತೆಯೂ ಸಮಾಜದೊಂದಿಗೆ ರಾಜಿಮಾಡಿಕೊಂಡು ಬದುಕಬೇಕಾದ ಅನಿವಾರ್ಯತೆಯೂ ಇರುತ್ತದೆ. ಹೀಗಿರುವಾಗ ಆತನ ಅಂಗಡಿಗೆ ಬೆಂಗಾವಲಾಗಿ ಅಂಬೆಡ್ಕರ್ ಬರುತ್ತಾರೆ. ಯಾರೋ ಹೇಳಿದರೆಂದು ಆ ಕ್ಷೌರಿಕನು ತನ್ನ ಅಂಗಡಿಯಲ್ಲಿ ಬಾಬಾಸಾಹೇಬರ ಫೋಟೋ ಹಾಕಿ ಪೂಜೆ ಮಾಡಲು ಪ್ರಾರಂಭಿಸುತ್ತಾನೆ. ಯಾವಾಗ ಅಂಗಡಿಯಲ್ಲಿ ಐಶ್ವರ್ಯಲಕ್ಷ್ಮಿಯ ಜಾಗದಲ್ಲಿ ಅಂಬೆಡ್ಕರರ ಫೋಟೋ ಬರುತ್ತದೋ ಆಗ ಎದುರು ಮನೆಯವನ ಬಾಯಿಗೆ ಬೀಗ ಹಾಕಿದಂತಾಗುತ್ತದೆ. ಕ್ಷೌರದಂಗಡಿಯನ್ನು ಮುಟ್ಟುವ ತಾಕತ್ತು ಆ ಮೇಲ್ಜಾತಿಯವನಿಗೆ ಬರುವುದಿಲ್ಲ…
ಮೊದಲ ಸಲ ಈ ಘಟನೆ ಬಗ್ಗೆ ಕೇಳಿದಾಗ ನನಗೆ ಪುಳಕವಾಯ್ತು. ಒಂದು ಫೋಟೋದ ಶಕ್ತಿ ಹೀಗಿರುವಾಗ ಆ ವ್ಯಕ್ತಿ ಹೇಗೆ ಬದುಕಿದ್ದಿರಬಹುದೆಂಬ ಕುತೂಹಲದಿಂದ ನಾನು ಅಂಬೇಡ್ಕರರನ್ನು ಓದತೊಡಗಿದೆ. ಸುಡುವ ಸೂರ್ಯನ ಬೆಳಕಿನ ವೇಗ ಅನುಭವಕ್ಕೆ ಬಾರದಿದ್ದಲ್ಲಿ ರಾತ್ರಿಯ ಸುಖದ ಹುಚ್ಚುಭ್ರಮೆಯಲ್ಲಿ ಕಾಲ ಕಳೆಯಬೇಕಾಗುತ್ತದೆ. ಅವರು ಭಾರತವೆಂಬ ಈ ಹಿಂದುಸ್ಥಾನವನ್ನು ಬಹಿರಂಗವಾಗಿ ನೋಡಲಿಲ್ಲ ಅಂತರಂಗದಲ್ಲಿ ಧ್ಯಾನಿಸಿದರು… ಈ ಕಟುವಾಸ್ತವದ ಇಂಡಿಯಾಕ್ಕೆ ಮದ್ದನರೆದು ವಾಸಿಮಾಡುತ್ತೇನೆಂಬ ಛಲದಿಂದಾಗಿ ಓದುತ್ತಿದ್ದರೇನೋ..! ಅವರ ಓದಿನ ವಿಸ್ತಾರ, ಕೊಡುವ ಉಲ್ಲೇಖಗಳು, ಆ ಅಧ್ಯಯನದ ಶಿಸ್ತು ಮತ್ತು ಅವರ ಹೋರಾಟದ ಅಂಶಗಳು ನನ್ನ ರಂಗಭೂಮಿಯ ಕೆಲಸಗಳಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳತೊಡಗಿದವು.
ದೈವತ್ವಕ್ಕೇರಿಸಿ ಪೂಜಿಸುವ ಮೊದಲು ಅವರೊಳಗಿನ ಬುದ್ಧನೊಡನೆ ಸಂವಾದಿಸುವ ಕಾರುಣ್ಯಮೂತರ್ಿಯನ್ನು ಶೋಧಿಸಬೇಕಾಗಿದೆ. ರಾಜಕೀಯ ಭಿನ್ನಮತಗಳು, ಸಾಮಾಜಿಕ ಅಸಮಾನತೆ, ಸಾಂಸ್ಕೃತಿಕ ಬಿಕ್ಕಟ್ಟುಗಳ ಕಾರಣದಿಂದ ಕೆಲವರು ಅವರ ಹೆಸರು ಹೇಳುತ್ತಿದ್ದಂತೆ ಹಾವು ಕಂಡವರಂತಾಡುತ್ತಾರೆ. ನಮ್ಮ ತಂಡದ ರಮಾಬಾಯಿ ನಾಟಕವನ್ನು ಕೆಲವು ಸಂಘಟಕರು ತಮ್ಮ ಊರುಗಳಲ್ಲಿ ಆಯೋಜಿಸಲು ಹಿಂದೇಟು ಹಾಕಿದರು. ಸ್ವತಃ ಕೆಲವು ನಾಟಕ ಸಂಸ್ಥೆಗಳು, ಶಾಲೆಗಳು ನಾನು ಮಾತುಮಾತಿಗೂ ಅಂಬೇಡ್ಕರರ ಹೆಸರನ್ನು ಹೇಳುತ್ತೇನೆಂಬ ಕಾರಣಕ್ಕೆ ಹತ್ತಿರಕ್ಕೆ ಬಿಟ್ಟುಕೊಳ್ಳಲಿಲ್ಲ. ಜಾತಿಗಳ ಬಲಾಬಲ, ಧರ್ಮಗಳ ಶಕ್ತಿಪ್ರದರ್ಶನವೇ ಮುಖ್ಯವಾಗುತ್ತಿರುವ ಇಂದಿನ ಕಾಲದಲ್ಲಿ ಬಾಬಾಸಾಹೇಬರು ಹೆಚ್ಚುಹೆಚ್ಚು ಜನರನ್ನು ತಲುಪಬೇಕಾಗಿದೆ ಎಂಬ ಕಾರಣಕ್ಕಾಗಿ ನಾಟಕ ಮಾಡುತ್ತೇವೆ. ನನ್ನೊಡನೆ ಒಡನಾಡುವ ಒಂದಷ್ಟು ನಟರ ಪ್ರತಿಕ್ರಿಯೆಗಳು ಬದಲಾಗಿರುವದನ್ನು ಕಂಡಿದ್ದೇನೆ ಆದ್ದರಿಂದ ನನಗೆ ಒಲಿದ ಅಂಬೇಡ್ಕರರು ಸಾರ್ಥಕವಾಗಿದ್ದಾರೆ. ಆದರೆ ಬಾಬಾಸಾಹೇಬರ ಬದುಕು-ಬರಹ-ಭಾಷಣಗಳು ಕಾವ್ಯವಾಗಿ ಈ ದೇಶದ ಪ್ರತಿಯೊಬ್ಬ ನಾಗರೀಕನ ಬಾಯಿಗೆ ಬಾರದಿದ್ದರೆ, ಸಂವಿಧಾನವೇ ಇಂಡಿಯಾ ಎಂಬ ಧರ್ಮದ ಗ್ರಂಥವಾಗದಿದ್ದರೆ, ಜನವರಿ 26 ಪ್ರತಿಯೊಂದು ಮನೆಯ ಹಬ್ಬವಾಗದಿದ್ದರೆ ನಾವು ಮತ್ತೆ ಒಂದಿಲ್ಲಾ ಒಂದು ರೀತಿಯಲ್ಲಿ ಸೋತಂತೆ ಅಲ್ಲವೇ..?
ವಿಚಿತ್ರವೆಂದರೆ…
ತಮಟೆವಾದನ ಸಾಂಸ್ಕೃತಿಕ ವೆದಿಕೆಗಳಲ್ಲಿ ಪ್ರದರ್ಶನವಾಗುವುದಕ್ಕಿಂತ ಹೆಚ್ಚು ಆಚರಣೆಗಳಲ್ಲಿ ಬಳಸಲ್ಪಡುತ್ತದೆ. ಮೀಸಲು ಕ್ಷೆತ್ರಗಳ ಮತದಾರರು ಒಬ್ಬ ಸ್ಪೃಶ್ಯ ದಲಿತನಿಗೆ ಮತ ನೀಡಿ ಅವನನ್ನು ಗೆಲ್ಲಿಸುತ್ತಾರೆ ಹೊರತು ಅಸ್ಪೃಶ್ಯನಿಗೆ ಪ್ರಾಶಸ್ತ್ಯ ನೀಡಲಾರರು. ಎಡ-ಬಲ ಜಾತಿಮನೋಭಾವದ ಮೇಲೆ ಸಂಘಟಣೆಗಳು ರೂಪುಗೊಳ್ಳುತ್ತವೆ. ಪಠ್ಯದಲ್ಲಿ ಓದಿಕೊಳ್ಳುವ ಅಹಿಂದ ಮತ್ತು ಸವಣರ್ೀಯ ವಿದ್ಯಾವಂತರು ಮೀಸಲಾತಿ ಮತ್ತು ಜಾತಿಗಳ ಆಚೆಗಿನ ಬಾಬಾಸಾಹೆಬರ ವಿಶ್ವಭಾತೃತ್ವದ ಸೆಲೆಯೊಂದನ್ನು ಅರಿಯಲೊಲ್ಲರು… ಹೀಗೆ ಪಟ್ಟಿಮಾಡುತ್ತ ಹೋದರೆ ಸಾಕಷ್ಟು ವಾಸ್ತವಗಳ ನಡುವೆ ಇವತ್ತಿಗೆ ತಕ್ಕಂತೆ ಅಂಬೇಡ್ಕರರನ್ನು ಮತ್ತೆ ಓದಿಕೊಳ್ಳಬೇಕಾದ, ಮರು ನಿರೂಪಿಸಿಕೊಳ್ಳಬೇಕಾದ ಅನಿವಾರ್ಯತೆ ಈ ಕಾಲದ್ದಾಗಿದೆ. ಜಾತಿ-ಮತಗಳನ್ನು ಮೀರಿ ದಮನಿತರ, ನೊಂದವರ ಧ್ವನಿಯಾಗಿ ಅಂಬೆಡ್ಕರರ ವ್ಯಕ್ತಿತ್ವವನ್ನು ಘನೀಕರಿಸಿಕೊಳ್ಳಬೇಕಾದ ಕಾಲ ನಮ್ಮದಾಗಿದೆ. ಅವರ ಬದುಕಿನ ಒಂದೊಂದು ಪುಟವೂ ಕಾವ್ಯವಾಗಿ, ಕತೆಯಾಗಿ, ನಾಟಕವಾಗಿ ಪ್ರತಿಯೊಬ್ಬನನ್ನೂ ಮುಟ್ಟಬೇಕಾಗಿದೆ. ಸಂವಿಧಾನವನ್ನು ಈ ದೇಶದ ಪ್ರಾಥಮಿಕ\ಪ್ರೌಢ ಹಂತದ ಶಿಕ್ಷಣದವರೆಗೂ ಸರಳವಾದ ಪಠ್ಯ ರೂಪದಲ್ಲಿ ಕಲಿಸುವಂತಾದಲ್ಲಿ ಅನೇಕತೆಯ ವಿಶ್ವಾತ್ಮಕ ದೃಷ್ಟಿಕೋನವು ಇಂಡಿಯಾದ್ದಾಗುತ್ತದೆ.
– ?????? ???? ???????

ವರಾಹಿ ಅಂಗಳದಿಂದ ಜಿಗಿದ ಕಪಿಲೆಯ ಪಾತ್ರಗಳು.


ಹೌದು..! ವರಾಹಿ ಅಂಗಳದ ಆಟೋಟ, ಓದು, ಹುಡುಗಾಟಿಕೆ, ಯಕ್ಷಗಾನ, ಭೂತಕೋಲ, ನಾಟಕ ಹೀಗೆ ಕುಂದಗನ್ನಡ ಮನೆಮಾತಾಗಿರುವ ಸಂತೋಷ ಗುಡ್ಡಿಯಂಗಡಿ ನೌಕರಿಯ ಕಾರಣಕ್ಕೆ ಕಪಿಲೆಯ ಅಂಗಳಕ್ಕೆ ಬಂದು ಇಲ್ಲಿನ ಬದುಕಿನೊಡನೆ ಸಾಮರಸ್ಯ ಕಂಡುಕೊಂಡು ಆ ಭಾಷೆಯ ಸೊಗಸನ್ನು, ಆ ಭಾಷೆಯ ಮಟ್ಟು, ದಾಟಿ-ಲಯಗಳನ್ನು ಅಭಿವ್ಯಕ್ತಿಗೆ ಆಸರೆಯಾಗಿ ತಂದುಕೊಂಡು ಶ್ರದ್ಧೆಯಿಂದ ಬರವಣಿಗೆ ಮಾಡಿದ್ದಾರೆ. ಕತೆಬರೆಯುವಾಗ ಒದಗಿಬರುವ ಅನುಭವದ ಹಿನ್ನೆಲೆ ಬಹುಶಃ ವರಾಹಿ ಅಂಗಳದ, ಕುಂದಗನ್ನಡದ್ದೆ ಆದ್ದರಿಂದ ಇಂಥದ್ದೊಂದು ಶೀಷರ್ಿಕೆಯೊಂದಿಗೆ ಕತೆಗಳ ಅಧ್ಯಯನಕ್ಕೆ ತೊಡಗಬೇಕಾಯ್ತು.
ಇವತ್ತಿಗೂ ಸೂರ್ಯ ಹುಟ್ಟುತ್ತಾನೆ! ಸಾಯಂಕಾಲಕ್ಕೆ ದಣಿದು ಸಮುದ್ರ ಸ್ನಾನಕ್ಕೆ ಇಳಿಯುತ್ತಾನೆ ಎಂದು ಕತೆ ಹೇಳುವ ತಾಯಂದಿರರಿದ್ದಾರೆ. ವೈಜ್ಞಾನಿಕವಾಗಿ ಸೂರ್ಯನ ಸುತ್ತ ಭೂಮಿ ತಿರುಗುತ್ತದೆ ಎಂಬ ಸತ್ಯ ತಿಳಿದಿದ್ದರೂ ನಭೋಮಂಡಲವನ್ನು ಕತೆಯಾಗಿ ಕೇಳುವ ಕತೆಯಾಗಿ ಹೇಳುವ ಕುತೂಹಲವನ್ನು ಬಿಡಲಾರೆವು. ಹೀಗಿರುವ ಪಾತ್ರಗಳು ವರಾಹಿ ಮತ್ತು ಕಪಿಲಾ ನದಿಯ ಎಡಬಲದಲ್ಲೂ ಬದುಕುತ್ತವೆ. ಅಂಥ ಪಾತ್ರಗಳ ಬಗ್ಗೆ ಸೂರ್ಯ-ಚಂದ್ರ ಭೂಮಿ-ಬಾನಂತೆ ಹೊರಗಿನಿಂದ ಕಟ್ಟಿಕೊಳ್ಳುವ, ಕುತೂಹಲದಿಂದ ಹುಟ್ಟಿಕೊಳ್ಳುವ ಕತೆಗಳು ಜನರ ಬಾಯಲ್ಲಿ ಹಡೆಹುಡೆಯಾಗಿ ಊಹಾಪೋಹಗಳಾಗಿ ಕೇಳಿರುತ್ತೇವೆ. ಆದರೆ ಒಬ್ಬ ಪ್ರಜ್ಞಾವಂತ ಆ ಬದುಕನ್ನು ತನ್ನದು ಅಂತ ಅನುಭವಿಸಿ ಆ ವಾಸ್ತವದ ಜೊತೆಗೆ ಮುಖಾಮುಖಿಯಾಗುವಾಗ ಘನೀಕೃತಗೊಳ್ಳುವ ಬೆಣ್ಣೆಯ ಹಾಗೆ ವಾಸ್ತವ ಘನಗೊಳ್ಳುತ್ತಾ, ತನ್ನನುಭವ ಬೆಸೆದುಕೊಳ್ಳುತ್ತಾ ದಿನದ ಸುದ್ದಿಗಳೊಂದಿಗೆ ಮನುಷ್ಯನ ಸಂವೇದನೆಗಳೂ ರೂಪುಗೊಳ್ಳುತ್ತಿರುವ ಇವತ್ತಿನ ವಾಸ್ತವವನ್ನು ಗಟ್ಟಿಗೊಳಿಸಿ ಆ ಅನುಭವಕ್ಕೊಂದು ಆಕಾರ ತಂದುಕೊಡುವ ಕಲ್ಪಕತೆ ಕೊರಬಾಡು ಕಥಾಸಂಕಲನದ ವೈಶಿಷ್ಟ್ಯ.
ದ್ಯಾವನೂರು ನಾಟಕದಲ್ಲಿ ಚನ್ನನಾಗಿ ಅಭಿನಯಿಸಿದ್ದ ಸಂತೋಷ ಗುಡ್ಡಿಯಂಗಡಿ ಆ ನಂಜನಗೂಡಲ ಸೀಮೆಯ ಭಾಷೆಯ ಲಯವನ್ನ ಅಚ್ಚುಕಟ್ಟಾಗಿ ನುಡಿಸುತ್ತಿದ್ದುದನ್ನು ಕಂಡು ನಮಗೆಲ್ಲ ಬಹಳ ಆಶ್ಚರ್ಯವಾಗಿತ್ತು. ವರಾಹಿ ಸೀಮೆಯ ಕುಂದಗನ್ನಡ ಮನೆಮಾತಾಗಿದ್ದರೂ ಈ ಕಪಿಲೆಯ ಸೀಮೆಯ ನಂಜನಗೂಡಿನ ಲಯ ಇಷ್ಟು ಚನ್ನಾಗಿ ಹಿಡಿದಿದ್ದಾರೆ ಅನ್ನುವುದೆ ಸೋಜಿಗ. ಭಾಷೆಯ ಬಳಕೆಯಲ್ಲಿ ಯುವಲೇಖಕರದ್ದೊಂದು ದೊಡ್ಡಸಮಸ್ಯೆ ಇರುವುದಾದರೂ ಆ ಸವಾಲಿನ ಕುತ್ತನ್ನು ಕೊರಬಾಡು ಕಥಾಸಂಕಲನದ ಕತೆಗಳು ಮೀರಿದ್ದಾವೆ. ಇಲ್ಲಿನ ಪಾತ್ರಗಳು ಜೀವತುಂಬಿಕೊಳ್ಳುವಲ್ಲಿ ಭಾಷೆ ಸಹಾಯಕವಾಗಿದೆ ಹೊರತು ಭಾಷೆಯ ಬಳಕೆ ಮತ್ತದರ ಲಯದ ಪಾಜಗಟ್ಟಿಯ ಜಿಗಿತವನ್ನು ಸಂತೋಷ ಜಿಗಿದಿದ್ದಾರೆ ಎನಿಸುತ್ತದೆ. ಕತೆ ಓದುತ್ತಲೇ ಭಾಷೆಯ ಲಯದ ಆಧಾರದ ಮೇಲೆ ಇದು ಕಪಿಲೆ ಸೀಮೆಯ ಪಾತ್ರಗಳ ಕತೆ, ಇನ್ನೊಂದು ವರಾಹಿ ಸೀಮೆಯ ಕತೆ ಅಂತ ಹೇಳಬಹುದಾದ ಸಶಕ್ತತೆ ಈ ಕತೆಗಳಿಗಿದೆ. ಆ ಎರಡು ಭಾಷೆಗಳನ್ನು ಸಮರ್ಥವಾಗಿ ಬಳಸಿಕೊಂಡ ಇಬ್ಬರು ಮಹತ್ವದ ಕತೆಗಾರರು ನಮ್ಮೆದುರಿಗಿದ್ದಾರೆ. ದೇವನೂರು ಮಹಾದೇವ ಮತ್ತು ವೈದೇಹಿಯವರ ಕಥನಗಳು ರೂಪುಗೊಳ್ಳುವ ರೀತಿಗಿಂತ ವಿಭಿನ್ನವಾದ ಪಥದಲ್ಲಿ ಕೊರಬಾಡು ಕಥಾಸಂಕಲನದ ಪಾತ್ರಗಳು ವಾಸ್ತವವನ್ನು ಎದುರುಗೊಳ್ಳುತ್ತವೆ. ಕಥಾವಸ್ತು ವಾಸ್ತವದ ಅರಿವಿನಿಂದ ಬಿಡಿಸಿಕೊಂಡು ಮಿಥ್ ಆಗಿ ಕಾಣಿಸಿಕೊಳ್ಳುತ್ತವೆ. ಆ ಸೊಗಸು ಆ ಲಾಲಿತ್ಯ ಆ ಸಂವೇದನೆ, ಆ ಅಂತಃಸ್ಪೂರ್ತ ಕಲ್ಪಕತೆ ಇಲ್ಲದಿದ್ದರೆ ಈ ಕತೆಗಳೂ ಸುದ್ದಿಕತೆಗಳಾಗಿಬಿಡುತ್ತಿದ್ದವು.
ಕೊರಬಾಡು ಕತೆಯ ಆರಂಭವೇ ಅಂತ್ಯದ ಪೂರ್ಣವಿರಾಮದೊಂದಿಗೆ. ಊರಾದರೇನು ಕೆಳಹಟ್ಟಿಯಾದರೇನು ಅಲ್ಲಿ ರಾಮಕ್ಕ ನರಳುತ್ತ ಮಲಗಿದ್ದಾಳೆ. ಇಲ್ಲಿ ಚಂದ್ರಮ್ಮಳ ಹೊಟ್ಟೆಯಲ್ಲಿ ತಂದೆಯ ಹೆಸರಿಲ್ಲದ ಗುರುತಿನೊಂದಿಗೆ ಕೂಸೊಂದು ಹುಟ್ಟುತ್ತದೆ. ಚನ್ನಿ ಚಂದಪ್ಪಗ ಹೊರಗಿನ ಗಾಳಿ ಸೋಕದಿದ್ದರೂ ಆ ಹಟ್ಟಿಯ ಆ ಗುಡ್ಲುಮನೆಗೂ, ಕೊರಬಾಡಿನ ರುಚಿಗೂ, ಅವರ ಬದುಕಿಗೂ ಬಿಡಲಾರದ ನಂಟಿದೆ. ಈ ವ್ಯವಸ್ಥೆಯ ಇಂಚಿಂಚನ್ನ ಚಾಚೂತಪ್ಪದೆ ಪಾಲಿಸುವ ಆ ಚನ್ನಿ-ಚಂದಪ್ಪನ ಮನಸ್ಸಲ್ಲಿ ಎಳ್ಳಷ್ಟೂ ಕಲ್ಮಶವಿಲ್ಲ. ಮೇಲಿನ ಹಟ್ಟಿಯಲ್ಲಿ ಇದಕ್ಕೆ ತದ್ವಿರುದ್ಧವಾದ ಬದುಕೊಂದಿದೆ. ಹೆಂಡತಿಯ ಅಧಿಕಾರವನ್ನು ತಾನೆ ಮುಂದಾಗಿ ನಡೆಸುವ, ರಾಜಕೀಯದ ಪುಂಡಾಟಿಕೆ ಮೆರೆಯುವ, ತೆವಲಿಗೆ ಹೆಣ್ಮಕ್ಕಳನ್ನು ಬಳಸಿಕೊಳ್ಳುವ ಗೂಳಿಯಂತ ಸೋಮಣ್ಣನಿದ್ದಾನೆ, ಅಣ್ಣನ ಹೆಂಡತಿಯನ್ನೂ ಅಣ್ಣನ ಮಗಳನ್ನು ಬಳಸಿಕೊಳ್ಳುವ ಚಿಕ್ಕಪ್ಪನಿದ್ದಾನೆ. ಮೇಗಳ ಹಟ್ಟಿಯಿಂದ ತೂರಿಬರುವ ಗಾಳಿಯಲ್ಲೆಲ್ಲ ಊನವಿದೆ.. ಆದರೆ ಅಪರಿಚಿತಳಾಗಿ ಚನ್ನಿ-ಚಂದಪ್ಪರ ಮನೆಗೆ ಬರುವ ಹುಡುಗಿಗೆ ಇಲ್ಲೊಂದು ಹೆಸರಿದೆ, ತಾಯಿ-ತಂದೆಯರ ವಾತ್ಸಲ್ಯವಿದೆ, ಬದುಕು ಇರುವುದಾದರೂ ಚಾಕಿನಿಂದ ಚಿಗಪ್ಪನದನ್ನೂ ಸೋಮಣ್ಣಂದೂ ಕತ್ತರಿಸಿ ಹಾಕುವಷ್ಟು ಅತ್ಯಾಚಾರಕ್ಕೆ ಅವಳು ರೋಸಿಹೋಗಿದ್ದಾಳೆ.
ಮೇಲ್ನೋಟಕ್ಕೆ ಕಪ್ಪು-ಬಿಳುಪಿನ ಕಥಾವಸ್ತು ಎನಿಸಿದರೂ ನಿರೂಪಣೆಯ ಜಾಣ್ಮೆ ಕಥಿಸುವ ಬಗೆಯಲ್ಲಿ ಹೊಸತನವೆನಿಸುತ್ತದೆ. ಕತ್ತಲಿನೊಂದಿಗೆ ಒಡನಾಡುವ ಪಾತ್ರಗಳಿಗೆ ಚಂದ್ರನಂತ ಹೊಳಪಿದ್ದರೂ ಮುಕ್ತಾಯದಲ್ಲಿ ಕೂಸುಹುಟ್ಟುವಾಗ ಕಲುಕತ್ತಲೆ ಇಡೀ ಊರ ಮ್ಯಾಲೆ ಬಿದ್ದು ಕಪ್ಪಗಾಗಿಸಿರುವುದು ಮತ್ತೊಂದು ಕತೆಯ ಆರಂಭದಂತೆಯೂ ಇದೆ.
ಲಂಕೆಯೆಂಬ ಸನಿಮಾತ್ಮೆಯ ಕೆಂಚ ಸ್ವಾಭಿಮಾನಿ… ದೇಶದ ಸಾಂಸ್ಕೃತಿಕ ರಾಜಕಾರಣದೊಟ್ಟಿಗೆ ಕೆಂಚನ ಕತೆಯೂ ನಡೆಯುತ್ತದೆ. ಅವನ ಕಲಿಕೆಗೆ ಗೋಡೆಗಳೆಂಬ ಬಂಧನವಿಲ್ಲವಾದ್ದರಿಂದ ಕೌಶಲಿ ಎನಿಸುತ್ತಾನೆ. ಓದಲು ಬಾರದಿದ್ದರೂ ದೇಶದಾಗ ನಡೆಯುತ್ತಿರುವ ಅನಾಚಾರಗಳ ಅರಿವು ಅವನಿಗಿದೆ. ಹೆಚ್ಚಿನ ತಿಳುವಳಿಕೆಗೆ ಓದಲು ತಿಳಿದಿರುವ ಸುದ್ದಿಮಾದಯ್ಯನ ಸಹಾಯ ಪಡೆಯುತ್ತಾನೆ. ಅವನಿಗೆ ಬಹುಶಃ ಕ್ರಾಂತಿಯಾಗುವುದು ಬೇಡವಾಗಿದೆ. ಅಂಥ ಮಾತಿನ ಧಾಟಿಯನ್ನು ವಿರೋಧಿಸುವ ಹುಂಬುತನ ಅವನದಲ್ಲ ಅದ್ದರಿಂದ ಎದುರಿಸುವ ಕೆಚ್ಚಿದೆ, ಸ್ವಾಭಿಮಾನವಿದೆ. ಸ್ವಾಮಿ ಹೇಳುವ ಹೊಲ್ಯಾ ಅನ್ನೋ ಶಬ್ದಕ್ಕ ಸರಿಸಾಟಿಯಾಗಿ ಉತ್ತರಕೊಡಲು ನಾಟಕ ಕಲಿಸುವ ತಯಾರಿಮಾಡುತ್ತಾನೆ… ಅಣ್ಣಾ ತಂಡದಲ್ಲಿ ಬಿರುಕು ಅನ್ನೋದು ಸುದ್ದಿಯಾಗಿ ಟಿವಿಯೊಳಗ ಕಾಣಿಸುತ್ತಿದ್ದಾಗ ಅಲ್ಲಿ ಸುದ್ದಿಮಾದಯ್ಯನ ವಿರೋಧಿಸುವ ಕ್ರಾಂತಿಯ ಕಿತಾಪತಿಗೆ ಕೆಂಚ ಬಲಿಯಾಗುತ್ತಾನೆ. ಇತ್ತ ಸ್ವಾಮಿಯ ದ್ವೇಷಕ್ಕೆ ಹಟ್ಟಿಯಲ್ಲಿನ ಕೆಂಚನ ಮನೆಯೂ, ಟಿವಿಯೂ, ಅಕ್ಕಿಯೂ ಬೆಂಕಿಯಶಾಖಕೆ ಸಿಡಿಯುತ್ತವೆ. ಕತೆಯ ಆಶಯವೇನೆ ಇರಲಿ ಇಂತದೊಂದು ಸೋಲನ್ನು ಸಾಮಾಜಿಕವಾಗಿ ನಡೆಯುವ ಹೋರಾಟಗಳಲ್ಲಿ ಮತ್ತೆಮತ್ತೆ ಕಾಣುತ್ತಿದ್ದೇವೆ… ಆದರೆ ಅಜ್ಜಿಅಂಗಡಿ ಕತೆಯಲ್ಲಿ ನಿರೂಪಕ ಎದೆಗೆ ಬಿದ್ದ ಅಕ್ಷರ ಪುಸ್ತಕ ಕೊಡಿಸಲು ಮುಂದಾಗುವುದು ಕೂಡಾ ಇಂತದೆ ಎದುರಿಸಲು ಸಜ್ಜುಗೊಳಿಸುವ ತಯಾರಿಯ ರೂಪಕದಂತೆ ಕಾಣುತ್ತದೆ.
ಕತೆಗಳನ್ನು ಕಟ್ಟುವಲ್ಲಿ ಸುಂದರಿಕಾಟದ ಪ್ರಯೋಗ ಹೆಚ್ಚುಹೊಸತನದಿಂದ ಕೂಡಿರುವುದರಿಂದ ಗಾಢವೆನಿಸುತ್ತದೆ. ಅಕ್ಕನವಚನದ ಸಾಲುಗಳಿಂದ ಸ್ಪೂರ್ತಗೊಂಡಿದ್ದರಿಂದ ಆ ಹುಡುಕಾಟದಲ್ಲಿ ಹೊಸತನ ತಾನಾಗಿಯೇ ಕತೆಯಾಗಿದೆ. ಅನುಭಾವಿಕ ನೆಲೆಯಲ್ಲಿ ನಿಂತು ಮಾತಾಡುವ ಅಕ್ಕಮಹಾದೇವಿಯಲ್ಲ ಸುಂದರಿ. ಆಕೆ ಶ್ರೀಸಾಮಾನ್ಯ ಹೆಂಗಸು, ಬಹುಶಃ ಮಾತು ಕೂಡ ಬಾರದವಳು. ಅಂಥವಳೊಂದಿಗೆ ಸಂಜ್ಞೆಗಳ ಮೂಕಸಂವಾದನೆಯೂ ಸಾಧ್ಯವಾಗಲಾರದು.. ಕತೆಗಾರನೊಂದಿಗೆ ಸಂದರ್ಶನದಲ್ಲಿ ಮಾತಾಡುವ ಹುಚ್ಚಿ ಅನುಭಾವದ ನೆಲೆಯಲ್ಲಿಯೇ ಮಾತಾಡುವುದು ಸೊಗಸಾಗಿದೆ. ಕತೆಯ ಒಂದು ಭಾಗದ ಸಂದಶ್ನ ಹೀಗಿದೆ…
ಕತಗಾರ: ನಿಮ್ಗಂಡ ಯಾರಂತ ಹೇಳಿಲ್ಲ?
ಸುಂದರಿ: (ನಕ್ಕು) ಯಾನ್ಯಾನೋ ಮಾತಾಡ್ತ ಇದ್ದೀಯಲ್ಲ ಕೂಸು. ನನ್ಗಂಡ್ನ ಕಟ್ಕಂಡು ನಂಗೇ ಯಾನಾಗಿಲ್ಲ. ಇನ್ನ ನಿಂಗೇನಾದ್ದು. ಹಿಂದ್ಕ ಅಕ್ಮಾದೇವಮ್ಮ ಅಂತೊಬ್ಳು ಇದ್ದಿದ್ಲಂತ. ಅವ್ಳುಗ ದೇವ್ರು ಗಂಡ್ನಂತ. ಆದ್ರೂವಿ ಅವ್ಳಿಯಾ ಅವನನ್ನ ನೋಡ್ನಿಲ್ವಂತ. ಆದ್ರ ನಾ ನೋಡಿವ್ನಿ. ಯಾರ್ನ? ನನ್ಗಂಡ್ನ. ಅವ್ನೂವಿ ದೇವ್ರು. ನಂಜ್ಲಗೂಡ್ಲ ದೇವುಸ್ತಾನತಪು ಇರ್ತಾನ. ನಾ ಪೋನ್ ಮಾಡ್ತೀನಿ ಮಾತಾಡ್ತಾನ. ನಾ ಯಾನೆ ಕೇಳಿದ್ರೂವಿ ತ್ಯಪ್ಗ ಉತ್ರ ಹೇಳ್ತಾನ ಹಂಗ ಮಡಿಕಂಡಿವ್ನಿ ಗಂಡನ್ನ.
ಕತಗಾರ: ಯಾರವನು?
ಸುಂದರಿ: ನನ್ಗಂಡ.
ಕತಗಾರ: ಅದೇ ಯಾರವನು?
ಸುಂದರಿ: ನಂಜುಂಡೇಸ್ವರ.
ಕತಗಾರ: ಊಂ?
ಸುಂದರಿ: ಯಾಕ ಕಣ್ಣೂ ಬಾಯಿ ಬಿಟ್ಗಂಡಿ? ನಿಂಗ ದೇವ್ರು ನಂಗ ಗಂಡ. ಅಂದಮ್ಯಾಕ್ಕ ನಾ ಯಾರೇಳು?
ಕತಗಾರ: ದೇವರ ಹೆಂಡತಿ.
ಸುಂದರಿ: ದೇವ್ರ ಹೆಡ್ತಿ ಯಾನಾಗ್ತಾಳು?
ಕತಗಾರ: ದೇವರು.
ಸುಂದರಿ: ದೇವ್ರುಗ ನೀ ಯಾನ್ಮಾಡ್ಬೇಕೇಳು?
ಕತಗಾರ: ಪೂಜ
ಸುಂದರಿ: ಪೂಜ ಯಾಕ್ಮಾಡ್ಬೇಕೇಳು?
ಕತಗಾರ: ಒಳ್ಳೆಯದಾಗಲಿ ಅಂತ.
ಸುಂದರಿ: ಒಳ್ಳೇದ ಯಾರಿಗ್ಮಾಡ್ಬೇಕೇಳು?
ಕತಗಾರ: ನಮಗೆ.
ಸುಂದರಿ: ನಮ್ಗ ಅಂದ್ರ ಯಾರಿಗೇಳು?
ಕತಗಾರ: ನಮಗೆ ಅಂದರೆ ಮನುಷ್ಯರಿಗೆ.
ಸುಂದರಿ: ಮನ್ಸರು ಎಲ್ಲವ್ರೆಯೇಳು?
ಕತಗಾರ: ಭೂಮಿ ಮೇಲೆ.
ಸುಂದರಿ: ನಾನೆಲ್ಲವ್ನಿಯೇಳು?
ಕತಗಾರ: ಭೂಮಿ ಮೇಲೆ.
ಸುಂದರಿ: ನಾನ್ಯಾರೇಳು?
ಕತಗಾರ: ಹುಚ್ಚಿ.
ಸುಂದರಿ: ಹುಚ್ಚಿ ಎಲ್ಲದಾಳೇಳು?
ಕತಗಾರ: ಇಲ್ಲೆ.
ಸುಂದರಿ: ಹುಚ್ರ ಜ್ವತ್ಗ ಯಾರಿರ್ತಾರೇಳು?
ಕತಗಾರ: ಹುಚ್ರು.
ಸುಂದರಿ: ನೀನೆಲ್ಲಿದ್ದೀಯೇಳು?
ಕತಗಾರ: ನಿನ್ನ ಜೊತೆಗೆ.
ಸುಂದರಿ: ನಾನ್ಯಾರೇಳು?
ಕತಗಾರ: ಹುಚ್ಚಿ.
ಸುಂದರಿ: ನನ್ನ ಜ್ವತಿಗ ಇರೋ ನೀನ್ಯಾರೇಳು?
ಕತಗಾರ: ಹಂ!!
ಈ ಪ್ರಶ್ನೋತ್ತರಗಳ ಸೊಗಸಲ್ಲಿ ನಂಜನಗೂಡಿನ ಆ ಸುಂದರಿ ಆತ್ಮದೊಳಗಿನ ಅರಿವಿನಂತೆ ತೋರುತ್ತಾಳೆ. ಸುಂದರಿಕಾಟ ಕತೆಯಲ್ಲಿ ಮ್ಯಾಜಿಕಲ್ ರಿಯಲಿಜಮ್ಮಿನಂತೆ ಕಾಣುವ ಬಹಳಷ್ಟು ಅಂಶಗಳಿದ್ದಾವೆ. ಮುಕುಂದೂರ ಸ್ವಾಮಿಗಳ (ಯೇಗ್ದಾಗೆಲ್ಲಐತೆ) ಸಕೀಲು ಅನ್ನೋ ಪವಾಡದ ಒಂದಂಶ ಸುಂದರಿಕಾಟದ ಕತೆಯಲ್ಲೂ ಮುಂದುವರೆದಂತಿದೆ.
ಊನವಾದೊಂದು ಜಗತ್ತು ಕಣ್ಣಿಗೆ ಗೋಚರಿಸುತ್ತಿದ್ದರೂ ಆ ಲೋಕವನ್ನು ಅಲಕ್ಷಿಸಿಯೋ ಇಲ್ಲಾ ಎಂಟಾಣೆ ಒಂದ್ರೂಪಾಯ ಕೈಗಿಟ್ಟೋ ದಾಟಿಕೊಳ್ಳುತ್ತೇವೆ. ಇಲ್ಲಿನ ಕತೆಗಳಲ್ಲಿ ಅಂತ ಆಸರುತಪ್ಪಿದವರ ಅಸ್ತಿತ್ವದ ಹುಡುಕಾಟವಿದೆ. ಆ ಜಗತ್ತಿನ ಮಾನವೀಯತೆಯ ಖದರ್ರು ಹೇಗೋ ವ್ಯಕ್ತಗೊಳ್ಳುತ್ತಾ ಒಬ್ಬರಿಗೊಬ್ಬರಾಗುತ್ತ ಬಯಲೊಳಗೊಂದು ನೆಂಟಸ್ತನ, ಬೀದಿಯಲ್ಲೊಂದು ಕುಟುಂಬದ ಥರ ನಾಗರೀಕತೆಯ ನಾಟಕಗಳನ್ನು ಅನುಕರಿಸಲು ತೊಡಗುತ್ತ ಇಲ್ಲಿನ ಪಾತ್ರಗಳು ಬದುಕುತ್ತವೆ. ಇಂಡಿಯಾದ ರೈಲು ರಸ್ತೆ ದೇವಸ್ಥಾನದ ಬದಿಗಳ ಪಾತ್ರಗಳು ಮೈಗೊಂದು ಕತೆ ಕಟ್ಟಿಕೊಂಡು ಧುತ್ತನೆ ಪಾತ್ರವಾಗಿ ನಿರೂಪಕನೊಡನೆ ಪ್ರಶ್ನೋತ್ತರ ಮಾಡುತ್ತ ಅನುಭಾವದ ಮಾತುಗಳನ್ನಾಡುವುದು ಅಸಹಜವೆನಿಸುತ್ತದೆ. ಆದರೆ ಕತೆಗಾರ ಹಾಗೆ ಎದುರುಗೊಳ್ಳದೆ ನುಸುಳಿಕೊಂಡಿದ್ದರೆ ಈ ಕತೆಗಳ ಆವರಣವೂ ಒಂದು ಚೋದಕದಂತಾಗುತ್ತಿತ್ತು. ದೊಡ್ಜಾತ್ರೆಯ ಗೊಜ್ಜನಿರಲಿ, ಅಮ್ರೂಜ್ ಮಿಟಾಯಿ ಎಳೆಗೂಸಿನ ತಾಯಿಯಿರಲಿ, ದೆಹಲಿಯ ಮಾಕರ್ೆಟಿನಲ್ಲಿ ಸಿಗುವ ಹುಚ್ಚನಾಗಲಿ, ಕೊರ್ಗಳ ದಿಟ್ಟತನವೂ ಇವೆಲ್ಲವೂ ನಮ್ಮ ಅಕ್ಕಪಕ್ಕದಲ್ಲಿನವರ ಕತೆಗಳೇ ಆದ್ದರಿಂದ ಒಂದು ಚಣ ಸಂತೆಯಲ್ಲೋ ಜಾತ್ರೆಯಲ್ಲೋ ದೂರಪ್ರಯಾಣದ ಸಹಪ್ರಯಾಣಿಕನ ರೀತಿಯಲ್ಲೋ ಪಾತ್ರಗಳು ನಮ್ಮೆದುರಲ್ಲೇ ಮೈದಾಳುತ್ತವೆ.
ಇಲ್ಲಿನ ಒಟ್ಟನುಭವವು ವರಾಹಿ ಅಂಗಳದಿಂದ ಜಿಗಿದು ಕಪಿಲೆಯ ಪರಿಸರದಲ್ಲಿ ಅರಳಿದ ಕಥಾಜಗತ್ತು. ಬದುಕ ಪ್ರೀತಿಸಿದ ಬಡವರ ಮಕ್ಕಳು ಕತೆಯಲ್ಲಿ ಒಂದನ್ನೊಂದು ಹೆಣೆಯಲಾಗಿದೆ. ಆ ಮಕ್ಕಳು ಕೇಳುವ ಪ್ರಶ್ನೆಗಳು ಮತ್ತು ಇತಿಹಾಸದ ಪಡಿಯಚ್ಚಿನಿಂದ ಮೂಡಿಬರುವ ಕರಿಯಣ್ಣನೂ ಮುಗ್ಧವಾಗಿಯೇ ಪಾಠಕರನ್ನು ಎದುರಾಗುತ್ತವೆ. ಗಂಜಿಬಜ್ಜಿ, ದುರ್ಗಿ ಮಗ ದಿಲ್ಲಿಗೋಯ್ಬಂದ ಕತೆಗಳು ಕುಂದಗನ್ನಡದ ವೈಶಿಷ್ಟ್ಯದಲ್ಲಿ ನಿರೂಪಣೆಗೊಂಡಿವೆ. ಆ ಎರಡು ಮತ್ತು ಬದುಕ ಪ್ರೀತಿಸುವ ಬಡವರ ಮಕ್ಕಳು ಎಂಬ ಮೂರನೇ ಕತೆಯೂ ಎರಡೂ ಪರಿಸರದ ಭಾಷೆ-ಬದುಕನ್ನು ಒಳಗೊಂಡಿರುವುದರಿಂದ ಓದುಗನ ಭಾಷೆಯ ಲಯವನ್ನು ಬದಲಿಸಿಬಿಡುತ್ತವೆ. ಹಾಗಾಗಿ ಈ ಮೂರುಕತೆಗಳು ಹೆಚ್ಚು ಆಪ್ತವೂ ಆಗುತ್ತವೆ.
ಸಂಕಲನದ ಬಹಳಷ್ಟು ಕತೆಗಳು ನಂಜುಂಡೇಶ್ವರನ ಸನ್ನಿಧಿಯ ಸುತ್ತಲು ನಡೆಯುವ ಬದುಕಿಗೆ ಸಂಬಂಧಿಸಿದ್ದವೆ ಆಗಿವೆ. ವಿಷದಸೀಸೆ ಮತ್ತು ಎಂಟಾನೆ ಮನುಷ್ಯ ಎರಡು ಕತೆಗಳು ಭಿನ್ನ ಲೋಕದ ಅನುಭವವನ್ನೂ ಮತ್ತು ರೋಚಕಬದುಕಿನ ತಾಕರ್ಿಕ ಅಂತ್ಯವನ್ನು ಕಷ್ಟಪಟ್ಟು ನಿವೇದಿಸಿದಂತೆ ಭಾಸವಾಗುತ್ತವೆ. ಗಂಜಿ-ಬಜ್ಜಿ, ಬದುಕ ಪ್ರೀತಿಸಿದ ಬಡವರ ಮಕ್ಕಳು, ದುರ್ಗಿ ಮಗ ದಿಲ್ಲಿಗೋಯ್ಬಂದ ಕತೆಗಳು ಆಂತರ್ಯದಿಂದಲೇ ಸ್ವಯಂಸ್ಪೂರ್ತವಾಗಿರುವ ಅನನ್ಯವಾದ ಅನುಭವ ಲೋಕವನ್ನು ಸಾದರಪಡಿಸುತ್ತವೆ. ಹೆಚ್ಚಿನ ಕತೆಗಳಲ್ಲಿ ತಾಯಿತನದ ಮಮತೆಯ ವಾತ್ಸಲ್ಯ ಜೀವಂತಿಕೆಯಿಂದ ಕೈಹಿಡಿದು ಮುನ್ನಡೆಸುತ್ತದೆ.

ಪ್ರಶ್ನೆ ಬರೀ ಅನಭಿವೃದ್ಧಿಯದಲ್ಲ “ನಾವೂ ಕನ್ನಡಿಗರೇ ಸ್ವಾಮೀ” ಎನ್ನುವುದಾಗಿದೆ.


ಉತ್ತರ ಕರ್ನಾಟಕ ಪ್ರತ್ಯೇಕತೆಯ ಪ್ರಶ್ನೆ ಅಲ್ಲಲ್ಲಿ ಒಳಗೊಳಗೆ ಹೊಗೆಯಾಡುತ್ತಲಿದೆ. ಹಾಗೆಂದು ಹೇಳಿಕೊಳ್ಳಲಾರದೆ ಪ್ರಾದೇಶಿಕ ಅಸಮಾನತೆಯನ್ನು ಸಹಿಸಿಕೊಳ್ಳಲಾರದೆ ಅಲ್ಲಲ್ಲಿ ತಮಗೆ ಅವಕಾಶ ಸಿಕ್ಕ ಸಭೆ ಸಮಾರಂಭಗಳಲ್ಲಿ ದಕ್ಷಿಣ ಕರ್ನಾಟಕದತ್ತ ವಿಶೇಷವಾಗಿ ಬೆಂಗಳೂರಿನತ್ತ ಕೈಮಾಡಿ ತೋರಿಸುವುದು ಚಾಲ್ತಿಯಲ್ಲಿದೆ. ಹಾಗೆ ಅಸಮಾಧಾನದಿಂದ ಹುಟ್ಟುವ ಭಾವವನ್ನು, ಭಾಷೆಯನ್ನು ಅರ್ಥಮಾಡಿಕಳ್ಳದಿದ್ದರೆ ಹೇಗೆ..? ಮೂಲಭೂತ ಸೌಕರ್ಯಗಳ ವಿಷಯದಲ್ಲಿ ಹೆಚ್ಚು ಸಧೃಢವಾಗಿರುವ ಸುರಕ್ಷಿತವಾಗಿರುವ ನಗರ ಬೆಂಗಳೂರು ಆದ್ದರಿಂದ ಕರ್ನಾಟಕದ ತೆರಿಗೆಯಲ್ಲಿ ಬಹುಪಾಲು ಬೆಂಗಳೂರ ಒಂದರಲ್ಲಿಯೇ ಸಂಗ್ರಹಗೊಳ್ಳುತ್ತದೆ ಎಂಬುದರಲ್ಲಿ ಆಶ್ಚರ್ಯವಿಲ್ಲ. ಬೆಂಗಳೂರಿನಂತೆ ಮತ್ತೊಂದು ನಗರವನ್ನು ಕರ್ನಾಟಕದಲ್ಲಿ ಗುರುತಿಸಬಹುದಾಗಿದೆಯೇ…? ಹುಬ್ಬಳ್ಳಿ, ದಾವಣಗೆರೆ, ಗುಲ್ಬರ್ಗಾ ನಗರಗಳಿಗೆ ಅಂತಹ ಲಕ್ಷಣಗಳಿವೆ ಎಂದಾದರೆ ಆ ಬಗ್ಗೆ ಯಾಕೆ ಸರಕಾರಗಳು ಉತ್ಸುಕತೆ ತೋರಿಸಲಿಲ್ಲ. ಮರಾಠಿಗರ ಕಣ್ಣು ಬೆಳಗಾವಿಯ ಮೇಲಿರುವುದರಿಂದ ಆ ನಗರದ ಮೆಲೆ ಕನ್ನಡಿಗರಿಗೆ ವಿಶೆಷವಾದ ಒಲವಿರುವುದರಿಂದ ಬಹಳಷ್ಟು ಲಾಭಗಳನ್ನು ಪಡೆದುಕೊಂಡಿದೆ. ಬೆಳಗಾವಿ ಒಂದನ್ನು ಹೊರತುಪಡಿಸಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳೂ ಸರಿಯಾಗಿಲ್ಲ.
ಮೂಲಭೂತ ಸೌಕರ್ಯಗಳ ವಿಷಯದಲ್ಲಿ ಯಾವತ್ತೂ ದೊಡ್ಡ ಧ್ವನಿ ಹೊರಡಿಸಲಾರದ ಇಲ್ಲಿನ ಜನತೆ ಬಹುತೇಕ ಹೈಕೋರ್ಟ ಪೀಠ ಸಿಕ್ಕಾಗ, ಹೈದ್ರಾಬಾದ್ ಕರ್ನಾಟಕಕ್ಕೆ ಪ್ರಾತಿನಿಧ್ಯ ದೊರೆತಾಗ ಬಹಳ ಖುಷಿಗೊಂಡಿದ್ದರು. ಹೀಗೆ ಪ್ರಾತಿನಿಧ್ಯ ಕೇಳಿ ಪಡೆಯುತ್ತ ಅವರು-ಇವರು ಕೊಡುತ್ತ ಹೋಗುವ ಉದಾರತೆ ಇಲ್ಲಿನ ಪಂಚಮಹಾಭೂತಗಳಲ್ಲಿ ಬೆರೆತು ಹೋಗಿರುವ ಹಾಗಿದೆ.
ಮಾನಸಿಕವಲ್ಲದೆ ಭೌಗೋಳಿಕವಾಗಿಯೂ ರಾಜಧಾನಿ ದೂರದಲ್ಲಿರುವುದರಿಂದ ಮೂಲಭೂತ ಸೌಕರ್ಯಕ್ಕಾಗಿ ಹಲಬುವ ದನಿಗಳು ಮುಟ್ಟಬೇಕಾದಲ್ಲಿಗೆ ತಲುಪುವುದಿಲ್ಲ. ಹಾಗಾಗಿ ಶಂಕುಸ್ಥಾಪನೆ ಮಾಡಲ್ಪಟ್ಟ ಎಷ್ಟೋ ಯೋಜನೆಗಳು ಅಪೂರ್ಣಗೊಳ್ಳುತ್ತಿರುತ್ತವೆ. ಭರವಸೆಗಳು ಗಾಳಿಯಲ್ಲಿ ಹಾರಾಡುತ್ತಿರುತ್ತವೆ. ನಾರಾಯಣಪುರ, ಆಲಮಟ್ಟಿಯ ಪಂಪ ಇರಿಗೇಶನ್, ಮಹಾದಾಯಿ ಯೋಜನೆ, ನೇಕಾರರ ಸಮಸ್ಯೆಗಳು, ನದಿಪಾತ್ರದ ಎಡದಂಡೆ ಬಲದಂಡೆ ಜನಗಳ ಸಂಕಟಗಳು, ಉದ್ಯೋಗ, ಶಿಕ್ಷಣ ಹೀಗೆ ಎಲ್ಲವೂ ಇಲ್ಲಿನ ಪ್ರಶ್ನೆಗಳಾಗಿಯೇ ಇರುತ್ತವೆ.
ಭಾಷೆಯ ಕಾರಣಕ್ಕಾಗಿ ನಾವೆಲ್ಲರೂ ಕನ್ನಡಿಗರೇ ಆಗಿದ್ದರೂ ಪ್ರಾದೇಶಿಕ ಮತ್ತು ಭೌಗೋಳಿಕವಾಗಿ ಭಿನ್ನವಾದ ಜೀವನಪದ್ಧತಿ ನಮ್ಮಲ್ಲಿ ರೂಢಿಯಿರುವುದು ಸುಳ್ಳೇನು…? ಅಭಿವೃದ್ಧಿಯ ವಿಷಯದಲ್ಲೂ ಇಂಥದೆ ಅಸಮಾನತೆ ತಲೆದೋರುತ್ತಿದೆ ಎಂದಾದಲ್ಲಿ ಉತ್ತರ ಕರ್ನಾಟಕ ಕಡೆಗಣಿಸಲ್ಪಡುತ್ತಿದೆ ಎಂಬುದನ್ನು ಒಪ್ಪದಿರುವುದು ಹೇಗೆ ಸಾಧ್ಯ..? ಕರ್ನಾಟಕದ ಆಯವ್ಯಯದ ಲೆಖ್ಖಾರದಲ್ಲಿ ಉತ್ತರ ಕರ್ನಾಟಕಕ್ಕೆ ಯೋಜನಾ ವೆಚ್ಚದ ಅತಿದೊಡ್ಡ ಮೊತ್ತ ಹರಿದುಬಂದಿದೆ. ಅಷ್ಟೆಲ್ಲ ದೊಡ್ಡ ಮೊತ್ತದ ಯೋಜನೆಗಳು ಉತ್ತರಕರ್ನಾಟಕಕ್ಕೆ ಬಂದರೂ ಅಬಿವೃದ್ಧಿ ಯಾಕಾಗಲಿಲ್ಲ…? ಸರಕಾರಗಳು ಹೂಡಿಕೆಯ ವಿಷಯದಲ್ಲಿ ಉತ್ತರಕರ್ನಾಟಕವನ್ನು ಗಮನಿಸಲೇ ಇಲ್ಲ. ದಕ್ಷಿಣ ಕರ್ನಾಟಕದಲ್ಲಿ ಮೊದಲಿನಿಂದಲೂ ರಾಜಮನೆತನಗಳ ಆಶ್ರಯದಲ್ಲಿದ್ದ ಲಾಗಾಯ್ತಿನಿಂದ ಕೈಗಾರಿಕಾ ಹೂಡಿಕೆಗಳಿಗೆ ವಿಶೆಷ ಒತ್ತು ನೀಡುತ್ತ ಬಂದವಾದ್ದರಿಂದ ಅಲ್ಲಿನ ಬದುಕು ಆರ್ಥಿಕವಾಗಿ ಸಮೃದ್ಧಗೊಳ್ಳುತ್ತ ಬಂದಿದೆ. ಬಂಡವಾಳ ಹೂಡಿಕೆಯಲ್ಲೂ ಸರಕಾರಗಳು ಉತ್ತರಕರ್ನಾಟಕವನ್ನು ಕಡೆಗಣಿಸುತ್ತ ಬಂದಿರುವುದಂತು ಸುಳ್ಳಲ್ಲ.
ಸರಕಾರ ಮತ್ತು ಉತ್ತರ ಕರ್ನಾಟಕದ ಪ್ರಜೆಗಳ ನಡುವೆ ಮಾನಸಿಕ ದೂರವಿರುವುದನ್ನು ಅಲ್ಲಗಳೆಯುವಂತಿಲ್ಲ. ಇದು ರಾಜ್ಯದ ಇತರೆ ಹಿಂದುಳಿದ ಜಿಲ್ಲೆಗಳಲ್ಲಿಯೂ ಇರುವಂತಹದ್ದೆ ಸಮಸ್ಯೆ. ಆದರೆ ಸಾಂಸ್ಕೃತಿಕ ಚಹರೆಯ ಮೇಲೆಯೇ ಇಂಥದ್ದೊಂದು ಡಿಸ್ಟನ್ಸ್ ಇರುವಾಗ ನಾವು ಯಾರನ್ನು ದೂರಬೇಕು ಎಂಬುದು ಪ್ರಶ್ನೆಯಾಗಿದೆ. ರಾಯಚೂರು, ಸಿಂಧನೂರು, ಬದಾಮಿ, ರಾಮದುರ್ಗ, ರೋಣ, ಕುಷ್ಟಗಿ ಈ ಸೀಮೆಯಲ್ಲಿ ಡಿಗ್ರಿವರೆಗೂ ಓದಿದ ಹುಡುಗರು ಮಂಗಳುರು, ಗೋವಾ, ಮುಂಬೈಗಳಲ್ಲಿ ಕೂಲಿಕೆಲಸಕ್ಕೆ, ರೋಡ ಕೆಲಸಕ್ಕೆ, ಸೆಕ್ಯುರಿಟಿ, ಗೌಂಡಿ ಕೆಲಸಕ್ಕೆ ಹೋಗುತ್ತಾರೆ. ಶಾಲೆಗಳಿಗೆ ರಜೆ ಇದ್ದಾಗ ಎಳೆ ಮಕ್ಕಳು ಹೊಟೇಲ್ ಕೆಲಸ ಮಾಡತಿರತಾರೆ. ಇದಕ್ಕೆ ನಾವು ಯಾರನ್ನು ಹೊಣೆಗಾರರನ್ನಾಗಿಸಬೇಕು ಹೇಳಿ? ಅವಕಾಶಗಳು ಇಲ್ಲದಾಗ ಓದಿರುವ ಅಹಮ್ಮನ್ನು ಬದಿಗೊತ್ತಿ ಬದುಕಿಗಾಗಿ ಹಪಹಪಿಸಬೇಕಾಗುತ್ತದೆ. ಈ ಸ್ಥಿತಿಗೆ ಭೌಗೋಳಿಕ ಪ್ರಾದೇಶಿಕ ಭಿನ್ನತೆ ಮತ್ತು ಅಸಮಾನತೆ ಕಾರಣ ಎಂದರೆ ನಿಮಗೆ ನಗು ಬರಬಹುದು. ಆದರೆ ಡಿಗ್ರಿವರೆಗೂ ಓದಿ ಕೂಲಿ ಕೆಲಸಕ್ಕಾಗಿ ಅಲೆದಾಡುವವರನ್ನು ನಾನು ದಕ್ಷಿಣದಲ್ಲಿ ಹುಡುಕಿದರೆ ಒಬ್ಬರೂ ಸಿಕ್ಕಲಿಲ್ಲ ಎಂದರೆ ನಂಬುತ್ತೀರಾ…?
ರಾಜ್ಯದ ಒಂದು ಭಾಗದ ಜನ ಇನ್ನೊಂದು ಭಾಗದ ಜನಜೀವನವನ್ನು ಕಡೆಗಣಿಸುವುದಂತೂ ನಿರಂತರವಾಗಿ ನಡೆದುಕೊಂಡು ಬಂದಿದೆ. ಕೈಕಪ್ಪ ಅಂಗಿ, ಬಿಳಿದೋತ್ರ, ಹೆಗಲಿಗೊಂದು ಟವಲ್, ತಲೆಗೊಂದು ಟೋಪಿ ಹಾಕಿಕೊಂಡು ದಕ್ಷಿಣ ಕರ್ನಾಟಕದ ಯಾವುದೆ ಜಿಲ್ಲೆಗೆ ಹೋಗಲಿ ಅಂಥವರನ್ನು ಬೇರೆ ರಾಜ್ಯದವರು ಎಂಬಂತೆ ನೋಡುತ್ತಾರೆ. ವಿಶೆಷವಾಗಿ ಉತ್ತರ ಕರ್ನಾಟಕದವರಾದ ನಾವು ನಮ್ಮದೇ ಭಾಷೆಯನ್ನಾಡುವ ಜನರೆದುರಿಗೇ ಪರಕೀಯರಾಗಿ ಕಾಣಿಸುತ್ತೇವೆ. ನಾವು ತಿನ್ನುವ ರೊಟ್ಟಿಯಿಂದ ಹಿಡಿದು, ರಸ್ತೆ ಬದಿಯಲ್ಲಿ ಒಂದು ಚೊಂಬು ನೀರಿಟ್ಟುಕೊಂಡು ಸಾಲಾಗಿ ಕಕ್ಕಸು ಕೂಡುವ ರೀತಿಯನ್ನೆಲ್ಲ ಅವರವರಲ್ಲೇ ಹೇಳಿಕೊಂಡು ನಗಾಡುತ್ತಾರೆ. ದುಡುಮೆ ಹುಡುಕಿಕೊಂಡೋ, ಗುಳೆ ಹೊರಟೋ, ನೌಕರಿಗಾಗಿ ಅಥವಾ ವಿದ್ಯಾಭ್ಯಾಸಕ್ಕಾಗಿ ಬಂದವರು ಇಂಥ ಲೇವಡಿಗಳನ್ನು ಅವಮಾನಗಳನ್ನು ಅನುಭವಿಸಿರುತ್ತಾರೆ. ಆ ಕ್ಷಣಕ್ಕೆ ನಮ್ಮ ಸ್ವಾಭಿಮಾನಕ್ಕೆ ಪೆಟ್ಟಾದರೂ ವಾಸ್ತವದಲ್ಲಿ ಅವರು ಹೇಳುವುದು ನಮ್ಮ ಸುತ್ತಲಿನ ಪ್ರಪಂಚದಲ್ಲಿ ಇರುವುದರಿಂದ ತಲೆತಗ್ಗಿಸಲೆಬೇಕಾಗುತ್ತದೆ.
ಇದು ನಮ್ಮ-ನಿಮ್ಮಗಳ ನಡುವಿನ ಇನ್ನೊಂದು ಮುಖದ ಸಾಂಸ್ಕೃತಿಕ ಅಸಮಾನತೆ. ಸಮಾಜ ಕಲ್ಯಾಣ ಇಲಾಖೆಯ ಯೋಜನೆಗಳನ್ನು ಉತ್ತರಕರ್ನಾಟಕದ ಬಹಳಷ್ಟು ಅಸ್ಪೃಷ್ಯರು ಪಡೆದುಕೊಳ್ಳಲೇ ಇಲ್ಲ. (ಎಸ್ಸಿ ಎಂದು ಸೇರಿಸಲ್ಪಟ್ಟಿರುವ ಸ್ಪೃಶ್ಯ ಜಾತಿಗಳು ಈ ಲಾಭವನ್ನು ಪಡೆದುಕೊಂಡಿವೆ) ಇದೊಂದೆ ಇಲಾಖೆಯಲ್ಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಮಾಡುವ ಕೆಲವು ವಾರ್ಷಿಕ ಯೋಜನಾಮೊತ್ತಗಳನ್ನು ಒಟ್ಟು ಎಷ್ಟು ಸಾಂಸ್ಕೃತಿಕ ತಂಡಗಳು ಪಡೆದುಕೊಂಡಿವೆ ಎಂಬುದನ್ನು ನೋಡಿದಾಗ ಸಿಂಹಪಾಲು ದಕ್ಷಿಣ ಕರ್ನಾಟಕದ್ದಾಗಿದೆ. ಈ ಕುರಿತಾಗಿ ತಿಳವಳಿಕೆ ಕಮ್ಮಿ ಎಂದು ಹೇಳುವಂತಿಲ್ಲ. ಆಳದಲ್ಲಿ ನೋವು ನುಂಗಿಕೊಂಡಿರುವ ಒಂದು ಡೈಲೆಕ್ಟಿನ, ಭಿನ್ನ ಊಟೋಪಚಾರಗಳ, ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಮುದಾಯಿಕ ಪ್ರಜ್ಞೆಯ ಬಗ್ಗೆ ಯೋಚಿಸಿದಾಗ ಉತ್ತರ ಕರ್ನಾಟಕಕ್ಕೆ ಸ್ವತಂತ್ರ ಅಸ್ತಿತ್ವ ಬೇಕೆಂದು ಅನ್ನಿಸದಿರಲು ಹೇಗೆ ಸಾಧ್ಯ. ಉತ್ತರಕರ್ನಾಟಕವೆಂಬುದು ತನ್ನದೇ ಆದ ಆಡಳಿತದಲ್ಲಿ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ನೀತಿಗಳನ್ನು, ಆರ್ಥಿಕ ಚೇತರಿಕೆಗಳನ್ನು ಕಂಡುಕೊಳ್ಳುವ ದರ್ದಿದೆ ಅನಿಸುತ್ತಿದೆ.
ಕಡೆಯದಾಗಿ
ತಮ್ಮ ವ್ಯಾಪಾರ – ಉಧ್ಯಮಗಳಿಗಾಗಿಯೇ ರಾಜಕೀಯಕ್ಕೆ ಬರುವ ಕೆಲವೇ ಮಂದಿಗಳ ಕೈಯಲ್ಲಿ ರಾಜಕೀಯ ಸೂತ್ರವಿರುವುದರಿಂದ ಫ್ಯೂಡಲ್ ಮಾದರಿಯಲ್ಲಿಯೇ ಇಲ್ಲಿನ ಸಮಾಜಿಕ ಜನಜೀವನ ರೂಢಿಯಲ್ಲಿದೆ. ಈಗ್ಗೆ ಐದು ವರ್ಷಗಳ ಹಿಂದೆ ರಿಪಬ್ಲಿಕ್ ಆಫ್ ಬಳ್ಳಾರಿ ಇತ್ತು ಎಂಬುದು ಕರ್ನಾಟಕದ ರಾಜಕಾರಣದಲ್ಲಿ ದೊಡ್ಡ ಸೌಂಡ ಮಾಡಿತ್ತು. ಅದೊಂದೇ ಅಲ್ಲ ಉತ್ತರಕರ್ನಾಟಕದ ಬಹುತೇಕ ಕಡೆಗಳಲ್ಲಿ ಇಂಥ ಸ್ಥಳಿಯ ಆರ್ಥಿಕ ಆಡಳಿತದ ವ್ಯವಸ್ಥೆಗಳಿವೆ. ಇಂಥ ವ್ಯವಸ್ಥೆಯ ಸುಖದ ಹಕ್ಕುದಾರಿಕೆಯಲ್ಲಿ ಉಮೇಶ ಕತ್ತಿಯವರ ಮನೆತನವೂ ಒಂದು. ಹಾಗಾಗಿ ಅವರ ಕೂಗನ್ನು ದೊಡ್ಡದು ಮಾಡುವುದರಲ್ಲಿ ಯಾವ ಪ್ರಯೋಜನವೂ ಇಲ್ಲ. ಯಾಕಂದ್ರೆ ಅವರು ಅಧಿಕಾರದಲ್ಲಿದ್ದಾಗ ಕೇಳಬೇಕಾದ ಕೆಲವು ಪ್ರಶ್ನೆಗಳನ್ನು ಕುಂಡಿಕೆಳಗೆ ಮೆತ್ತೆಮಾಡಿಕೊಂಡು ರಾಜಕಾರಣ ಮಾಡಿದವರು. ಕಬ್ಬು ಬೆಳೆಗಾರರ ಸಂಕಟಗಳಿಗೆ ಕ್ಯಾರೆ ಎನ್ನದ ಉಧ್ಯಮದ ಭಾಗವಾಗಿದ್ದವರು. ಅವರ ಉದ್ಧೇಶಗಳಲ್ಲಿ ಇನ್ನಾವ ಬಗೆಯ ರಾಜಕೀಯ ತಂತ್ರವಿದೆಯೋ ತಿಳಿಯದು. ಬೆಳಗಾವಿಗೆ ಸುವರ್ಣಸೌಧ ಬಂದ ಲಾಗಾಯ್ತಿನಿಂದ ಅವರ ಮನಸ್ಸಿನಲ್ಲೊಂದು ಮುಖ್ಯಮಂತ್ರಿಯ ಹಕ್ಕಿ ಕೂತಂತಿದೆ. ಅದಕ್ಕೀಗ ಮತದಾರರನ್ನು ಭಾವುಕರನ್ನಾಗಿ ಸೆಳೆಯುವ ತಂತ್ರ ಬೇಕಾಗಿದೆ. ಇಂಥ ಪಿತೂರಿ ಹಕ್ಕಿಯ ಮಾತುಗಳನ್ನು ಅಲಕ್ಷಿಸಿ… ಉತ್ತರಕರ್ನಾಟಕದ ಕುರಿತಾದ ನೋವುಗಳನ್ನು ಹೇಳಿಕೊಳ್ಳಬೇಕಾಗಿದೆ. ಇಲ್ಲಿನ ಶುಷ್ಕ ಬದುಕಿನ ಹಿಂದಿನ ರಹಸ್ಯಗಳನ್ನು ಚರ್ಚಿಸಬೇಕಾದ ಹೊತ್ತು ಈಗ ಬಂದಿದೆ.

– ಮಹಾದೇವ ಸಾಲಾಪೂರ