ಚಕಾವ್ to ಶಾಂಪೇನ್ ನಾಟಕದ ಕುರಿತು.


ಲೋಕಾಭಿರಾಮವಾಗಿ ತಾನು ತನ್ನ ಕತೆಯೊಳಗಿನ ಪಾತ್ರಗಳೊಂದಿಗೆ ಕೊಂಚ ವಿಹರಿಸುತ್ತಾ, ಪಾತ್ರದ ಅಂತರಂಗವನ್ನು ಕೆದಕುತ್ತಾ ವ್ಯವಸ್ಥೆಯಲ್ಲಿನ ಅಸಹಾಯಕತೆ, ಕ್ಷುದ್ರತೆ, ಮೂರ್ಖತನ, ಸೋಮಾರಿತನ ಆತ್ಯಂತಿಕವಾದ ನೋವು, ಸಿಟ್ಟುಗಳನ್ನೆಲ್ಲ ಮೇಳೈಸಿಕೊಂಡು ಸ್ವತಃ ಕತೆಗಾರನೂ ಒಂದು ಪಾತ್ರವಾಗಿ ಲೇಖನಿಯ ಜೊತೆಜೊತೆಗೆ ಆಪ್ತವಾದ ಬದುಕು-ಬರಹವನ್ನು ಕಟ್ಟಿಕೊಡುವ ನಾಟಕವೊಂದನ್ನು ಧಾರವಾಡ ರಂಗಾಯಣದ ರೆಪರ್ಟರಿಯ ಕಲಾವಿದರು ನಮ್ಮ ನಡುವಿನ ಹಿರಿಯರಾದ ಸಿ.ಆರ್. ಜಂಬೆ ಅವರ ನಿದರ್ೇಶನದಲ್ಲಿ ಅಭಿನಯಿಸಿದರು.
ಅಭಿನಯ ಅನ್ನೋದು ಆಧ್ಯಾತ್ಮ ಅದಕ್ಕೆ ದೇಹ ಬುದ್ಧಿ ಭಾವ ಮನಸ್ಸು ಮತ್ತು ಹೃದಯ ಒಂದಾಗಿ ಕೆಲಸ ಮಾಡಬೇಕಾಗುತ್ತದೆ. ಆ ಏಕಾಗ್ರತೆಗಾಗಿ ಬಹಳ ಸಾಧನೆ ಮಾಡಬೇಕಾಗುತ್ತದೆ. ದೀರ್ಘ ಉಸಿರಾಟ, ಭ್ರಮರಿ, ಪ್ರಾಣಾಯಮಗಳು ನಟನ ತಯಾರಿಗೆ ಬಹಳಷ್ಟು ಉಪಕಾರಿಯಾಗಿರುತ್ತವೆ. ಈ ಮಾದರಿಯಲ್ಲಿ ನಟ ತನ್ನನ್ನು ತಾನು ತಯಾರು ಮಾಡಿಕೊಂಡಲ್ಲಿ ನಟನೆಯ ಬಗ್ಗೆ ನಟರೇ ಚಚರ್ೆ ಹುಟ್ಟುಹಾಕಿಕೊಳ್ಳುತ್ತಾರೆ. ಆಗ ನಟನೆಯಲ್ಲಿ ವಿವಿಧ ಸ್ತರಗಳ ಹುಡುಕಾಟ ಮಾಡಲು ಸಾಧ್ಯವಾಗುತ್ತದೆ. – ಸಿ.ಆರ್. ಜಂಬೆ
ಈ ಮಾತನ್ನು ತಮಗೆ ತಾವೇ ಸ್ಪಷ್ಟಪಡಿಸಿಕೊಳ್ಳುತ್ತಾ ನಟರ ಆಂಗಿಕ, ವಾಚಿಕ, ಸಾತ್ವಿಕ ಭಾಷೆಗಳನ್ನು ತಿದ್ದುವ ಅವರ ತಾಳ್ಮೆಗೆ ಗರಿಯಂಬಂತೆ ಚಕಾವ್ ಟು ಶಾಂಪೇನ್ ಅರಳಿದೆ. ನಟನ ಉದ್ವೇಗ ಕಡಿಮೆ ಮಾಡಿಕೊಳ್ಳಲು ಅಗಾಧವಾದ ಪರಿಶ್ರಮ ಮತ್ತು ತಾಳ್ಮೆ ಬೇಕಾಗುತ್ತದೆ. ಅದು ಸಾಧ್ಯವಾದಲ್ಲಿ ನಟ ಮತ್ತು ನಾಟಕದ ತಂತು, ನಿದರ್ೇಶಕರು ಕಂಡುಕೊಂಡ ಆಯಾಮಗಳು ಕಲಾಕೃತಿಯಲ್ಲಿ ಸೇರಿಕೊಳ್ಳುತ್ತವೆ. ಈ ಎಲ್ಲವೂ ಮುಪ್ಪರಿಗೊಂಡ ನಾಟಕ ಆಪ್ತವಾದ ಸಂಬಂಧವನ್ನು ಪ್ರೇಕ್ಷಕರೊಟ್ಟಿಗೆ ಸಂವಹನದ ಮೂಲಕ ಸಾಧಿಸುತ್ತದೆ. ಸಹಜವಾದ ಆಗುವಿಕೆಗಳನ್ನು ತಡೆಯದೆ ಪ್ರವಹಿಸಲು ಬಿಟ್ಟು ತದನಂತರ ಒಂದೊಂದೇ ಕತೆಗಳನ್ನು ಹೆಕ್ಕಿ ಆಂಟನ್ ಚಕಾವ್ನ ಬದುಕಿನ ತೊರೆಗಳೊಟ್ಟಿಗೆ ಪೋಣಿಸಿದ ಅಮೂಲ್ಯವಾದ ರಂಗಕೃತಿ ಚಕಾವ್ ಟು ಶಾಂಪೇನ್. ಕೊನೆಯ ದಿನಗಳ ಆ ಕೆಮ್ಮು ಮತ್ತು ಬದುಕನ್ನು ವಿಶ್ಲೇಷಿಸುವ ಅವನ ಕಥಾಪ್ರಪಂಚ, ಮನುಷ್ಯನ ಕ್ಷುದ್ರತೆ, ನಿಟ್ಟುಸಿರು, ಅಸಹಾಯಕತೆ, ದುಷ್ಟತನ, ತಣ್ಣಗಿನ ಕ್ರೌರ್ಯ, ಪ್ರೀತಿ, ಹರಟೆ ಹೀಗಿನ ಜಗತ್ತು ಮತ್ತು ತಾನು ಕನಸಿದ್ದ ಪೀಪಲ್ಸ್ ಪ್ಯಾಲೇಸ್ನ ಭ್ರಮೆ ಎಲ್ಲವನ್ನೂ ಪ್ರೀತಿಯಿಂದ ಹರಟುತ್ತ ಕೊನೆಯ ಗುಟುಕಿನ ಶಾಂಪೇನ್ನೊಂದಿಗೆ ಮುಕ್ತನಾಗುವ ಚೆಕಾವ್ ನಮ್ಮೊಳಗೊಬ್ಬನಾಗಿ ಕಾಡತೊಡಗುತ್ತಾನೆ.
ನಾಟಕದ ಆರಂಭವೇ ಬರವಣಿಗೆಯ ಹೊಳಹು ಸಿಕ್ಕುವ ಮೂಲಕ.. ಅಸಹಾಯಕ ಪ್ರಾಣಿ ಕತೆಯ ಪಾತ್ರಕ್ಕೆ ತನ್ನ ಕನ್ನಡಕ ತೊಡಿಸುವದರೊಂದಿಗೆ ರಂಗದ ಮೇಲೆ ಕಥಾಜಗತ್ತು ಅನಾವರಣಗೊಳ್ಳುತ್ತ ಹೋಗುತ್ತದೆ. ನವುರಾದ ನಗೆಯೊಂದು ತಿಳಿಯಾಗಿಸುತ್ತ ಅಸಹಾಯಕತೆಯನ್ನು ಅರ್ಥಮಾಡಿಸುವ ಆ ಕ್ರಮವೇ ರಶಿಯನ್ರ ಚಿತ್ರಣವನ್ನು ಅಲ್ಲಿನ ಬ್ಯಾಂಕಿಂಗ್ ಮತ್ತು ಬಡತನವನ್ನು ಧ್ವನಿಸುತ್ತದೆ. ಆ ಕತೆಯ ಕೊನೆಯಲ್ಲಿ ಚಕಾವ್ ತನ್ನ ಅಮ್ಮನ ಬದುಕು ಮತ್ತು ಆಕೆ ಹೇಳುವ ಅಸಹಾಯಕ ಸ್ಥಿತಿಯು ನೆನಪಾಗುತ್ತದೆ. ಪ್ರಖ್ಯಾತರಿಬ್ಬರು ರೈಲಿನಲ್ಲಿ ಕೂತು ಸಂಭಾಷಿಸುವ ಕತೆಯೊಂದನ್ನು ಇಲ್ಲಿ ರೆಸ್ಟೋರೆಂಟ್ ಒಂದರಲ್ಲಿ ನಡೆಯಬಹುದಾದ ಆಕಸ್ಮಿಕ ಭೇಟಿಯಂತೆ ನಿರೂಪಿಸಿರುವುದು ಸಮಂಜಸವೆನಿಸಲಾರದು. ಯಾಕೆಂದರೆ ಆಕಸ್ಮಿಕವೆಂಬಂತೆ ಭೇಟಿಯಾದರೂ ಬಹಳಷ್ಟು ಮಾತಾಡಿಕೊಳ್ಳಲು ಸಾಧ್ಯವಾಗುವುದು ಹಾಗೂ ಏನೆಲ್ಲ ಮಾತಾಡಿಕೊಳ್ಳಲು ಸಾದ್ಯವಾಗುವುದು ಪ್ರಯಾಣದಲ್ಲಿ ಸಿಗುವ ಅಪರಿಚಿತರ ಜೊತೆಗೆ ಹೆಚ್ಚಾಗಿರುತ್ತದೆ. ಆ ಪ್ರಯಾಣದ ಪ್ರತಿಮೆ ಕತೆಯಲ್ಲಿ ವ್ಯಕ್ತಗೊಳ್ಳುವ ರೀತಿ ಆಪ್ತವಾದಂತೆ ರೆಸ್ಟೋರೆಂಟ್ನಲ್ಲಿ ಸಾಧ್ಯವಾಗಲಿಕ್ಕಿಲ್ಲ. ಫಿಶಿಂಗ್ ದೃಶ್ಯದಲ್ಲಿ ವೋಲ್ಗಾ ಅವನ ಪ್ರೀತಿಗಾಗಿ, ಅವನ ಅಭಿಮಾನಿಗಳು ಬರೆದಿರುವ ಪತ್ರಗಳನ್ನು ಹಿಡಿದು ಬರುತ್ತಾಳೆ.. ಆದರೆ ಅಲ್ಲಿ ಚಕಾವ್ಗೆ ಮತ್ತೊಂದು ಕತೆ ಹೊಳೆದದ್ದೆ ತಡ ಹೊರಟು ಬಿಡುತ್ತಾನೆ.
ಕ್ಲರ್ಕನ ಸಾವು ಸಾತ್ವಿಕವಾದ ವಾತಾವರಣವೊಂದನ್ನು ರೂಪಿಸುತ್ತಿದ್ದಂತೆ. ಸೀಗಲ್ ನಾಟಕದ ಸರೋವರದ ದಂಡೆಯ ದೃಶ್ಯ ಆರಂಭವಾಗುತ್ತದೆ. ಪ್ರೀತಿಯ ನಿವೇದನೆ, ಕಡಲಪಕ್ಷಿಯ ಬೇಟೆ, ನೀನಾಳ ಆಕರ್ಷಣೆ ಎಲ್ಲವನ್ನು ಒಂದು ದೃಶ್ಯದಲ್ಲಿ ಹಿಡಿದಿಟ್ಟಿದ್ದರೂ ಬಹುತೇಕ ಕಡೆಗಳಲ್ಲಿ ಸೀಗಲ್ ನಾಟಕದ ದೃಶ್ಯಗಳು, ಸಂಭಾಷಣೆಗಳು ಬಳಕೆಯಾಗಿದ್ದಂತೆ ತೋರುತ್ತದೆ.
ಪ್ರಕಾಶಕರೊಂದಿಗಿನ ದೃಶ್ಯದಲ್ಲಿ ತನ್ನ ಸೃಜನಶೀಲ ಸಾಹಿತ್ಯ ಮತ್ತು ಅದನ್ನು ವಿಮರ್ಶಕರು ನೋಡುವ ದೃಷ್ಟಿ, ಅಭಿಮಾನಿಗಳು ಅನೇಕ ಹೆಂಗಸರಲ್ಲಿನ ವ್ಯಾಮೋಹದ ಕುರಿತಾಗಿ ಮಾತಾಡಿಕೊಳ್ಳುತ್ತಲೇ ಪೀಟರನ ಕತೆ ಹುಟ್ಟುತ್ತದೆ. ಆ ಸಮ್ಮೋಹನದ ದೃಶ್ಯಗಳನ್ನು ಮನೋಜ್ಞವಾಗಿ ಕಟ್ಟಿರುವುದು ಮುಂದಿನ ಕೊನೆಯ ದೃಶ್ಯಕ್ಕೆ ಸಹಕಾರಿಯಾಗಿದೆ. ಆದರೆ ನಾಟಕದಲ್ಲಿ ಎಲ್ಲಿಯೂ ಬರಲಾರದ ಕೆಮ್ಮು ಒಮ್ಮಿಂದೊಮ್ಮೆಲೆ ಕೊನೆಯ ದೃಶ್ಯದಲ್ಲಿ ಕಾಣುವುದು ಅಸಮಂಜಸವಾಗಿದೆ. ಗಾಕರ್ಿಯ ಸಂದರ್ಶನ ಲೇಖನದಲ್ಲಿ ಆತನು ಮತ್ತೆಮತ್ತೆ ಕೆಮ್ಮುವ ಬಗ್ಗೆ ಹೇಳಿರುವುದನ್ನು ಕಂಡರೆ ಪಾತ್ರದೊಟ್ಟಿಗೆ ಕೆಮ್ಮು ಕೂಡಾ ಬೆಳೆಯುತ್ತ ಹೋಗಬಹುದಾಗಿತ್ತು. ಚೆಕಾವ್ ಕೆಮ್ಮುತ್ತ ಬೀಳುತ್ತಿದ್ದಂತೆ ಕ್ಷಣ ಮಾತ್ರದಲ್ಲಿ ಪ್ರೇಕ್ಷಕನಾಗಿ ನನ್ನೊಳಗೂ ಒಂದು ತೆರನಾದ ವಿಷಾದದ ಗಾಂಬೀರ್ಯ ಮಡುಗಟ್ಟಿಕೊಳ್ಳುತ್ತದೆ. ಸರ್ ಟಾಲ್ಸ್ಟಾಯ್ ಬರುವುದು ಯಾಕೋ ನಾಟಕದ ಗಾಂಭೀರ್ಯಕ್ಕೆ ತೂಕದ್ದೆನಿಸದಿದ್ದರೂ ಅವರಿಬ್ಬರ ಸಂಭಾಷಣೆ ಘನವಾಗಿದೆ. ಆದರೆ ಚಕಾವ್ ನಾಟಕಗಳನ್ನು ಮೊದಲು ಮಾಡಿಸಿದ ಸ್ಟಾನಸ್ಲಾವಸ್ಕಿ ಇಡೀ ನಾಟಕದ ತುಂಬ ಎಲ್ಲಿಯೂ ಬರುವುದಿಲ್ಲ. ವಾಸ್ತವವಾದಿ ನಾಟಕ ಶೈಲಿಯ ಬಗ್ಗೆ ಮತ್ತು ಚಕಾವ್ನ ತಿಳಿಹಾಸ್ಯದ ನಾಟಕಗಳನ್ನು ಗಂಭೀರವಾಗಿ ಪ್ರದಶರ್ಿಸಿರುವ ಬಗ್ಗೆ ಇಬ್ಬರ ನಡುವೆ ಮಾತುಕತೆಯಾದ ಬಗ್ಗೆ ಎಲ್ಲೋ ಓದಿದ ನೆನಪು ಆ ದೃಶ್ಯಗಳೂ ಕೂಡ ಬರಬಹುದೆ ಎಂಬ ಆಲೋಚನೆ ನನಗಿತ್ತು.
ಇಲ್ಲಿನ ಬಹಳಷ್ಟು ದೃಶ್ಯಗಳು, ಮಾತುಗಳು ಅವರ ಮುಖ್ಯವಾದ ನಾಟಕಗಳ ಭಾಗದಿಂದ ಆಯ್ದು ದೃಶ್ಯ ಸಂಯೋಜನೆ ಮತ್ತು ಚಕಾವ್ನ ಅಭಿವ್ಯಕ್ತಿಯ ಜೊತೆಗೆ ಸೇರಿಸಲಾಗಿದೆ. ಬಹುಶಃ ಈ ಕ್ರಮಕ್ಕೆ ಕಾರಣವಾದ ಮಾತೊಂದನ್ನು ಚಕಾವ್ ತನಗೆ ತಾನೇ ಹೇಳಿಕೊಳ್ಳುತ್ತಾನೆ. ಚಕಾವ್ ತಾನು ಕತೆ ಬರೆದಾದ ಮೇಲೆ ಪ್ರೀತಿ ಪಾತ್ರರ ಮನಬಗೆದು ವಿಚಿತ್ರವಾದ ಆನಂದವನ್ನು ಅನುಭವಿಸಿದ ಹಾಗಿನ ಯಾತನೆಯನ್ನು ಅನುಭವಿಸುವ ಸಂಕಟವನ್ನು ತೋಡಿಕೊಳ್ಳುತ್ತಾನೆ. ಅಸಹಾಯಕ ಪ್ರಾಣಿ, ಫಸ್ಟ್ಕ್ಲಾಸ್ ಪ್ರಯಾಣಿಕ, ಸೀಗಲ್ ನಾಟಕದ ನೀನಾ ಮತ್ತು ಟ್ರೆಗೋರಿ ದೃಶ್ಯ, ಫಿಶಿಂಗ್ ದೃಶ್ಯ, ಕ್ಲರ್ಕನ ಸಾವು, ಪೀಟರ್ ಎಂಬ ನವಯುವಕನ ಸಮ್ಮೋಹನ ಕಲೆ ಹಾಗೂ ಚೆಕಾವ್ನ ಕೊನೆಯ ದಿನದ ಕ್ಷಣಗಳು ಇಲ್ಲಿ ತುಂಡಿಲ್ಲದ ಏಕೋಚಲನೆಯಲ್ಲಿ ಪ್ರವಹಿಸುತ್ತವೆ. ರಂಗವಿನ್ಯಾಸವು ನಾಟಕದ ಒಳ ಅರಿವನ್ನು ವಿಸ್ತರಿಸುವಲ್ಲಿ ಸಹಕಾರಿಯಾಗಿದೆ.
ಈ ನಾಟಕಕ್ಕೆ ಸಹಾಯಕರಾಗಿ ಡಿ ಪ್ರಸನ್ನ ಮತ್ತು ಸಂಗೀತ ನಿದರ್ೇಶನವನ್ನು ಶ್ರೀನಿವಾಸ ಭಟ್ಟ ಅವರು ನೀಡಿದ್ದಾರೆ. ಧಾರವಾಡ ರಂಗಾಯಣದ ಕಲಾವಿದರು, ತಂತ್ರಜ್ಞರು, ನಿದರ್ೇಶಕರಾದ ಪ್ರಕಾಶ ಗರುಡರು, ಆಡಳಿತಾಧಿಕಾರಿಗಳಾದ ಬಸವರಾಜ ಹೂಗಾರ ಹಾಗೂ ರಂಗಾಯಣದ ಸಿಬ್ಬಂದಿವರ್ಗ ಇಂಥದ್ದೊಂದು ನಾಟಕ ನಿಮರ್ಿಸುವಲ್ಲಿ ಸಹಕರಿಸಿರುವುದು ಸಂತಸದ ಸಂಗತಿಯಾಗಿದೆ.
-ಮಹಾದೇವ ಹಡಪದ

Advertisements