ಬೇಲಿಯೊಳಗಣ ಬದುಕು….


ಭಯಂಕರ ಬರಗಾಲ ಬಿದ್ದದ್ದು ನನಗಿನ್ನು ಮಸಕು ಮಸಕಾಗಿ ನೆನಪಿದೆ. ನನ್ನ ಕಡೆಯ ತಂಗಿ ಹುಟ್ಟಿದ ಮರುವರ್ಷವೇ ಆ ಬರದ ಸಂಕಟವನ್ನು ಅನುಭವಿಸಿದ್ದರಿಂದ ನಾನು ಯಾವಾಗಲೂ ನನ್ನ ತಂಗಿಯನ್ನ ಬರಗಾಲದಾಗ ಹುಟ್ಟಿದಾಕಿ ಅಂತ ಆಡಿಕೊಳ್ಳುತ್ತಿದ್ದ ಕಾರಣಕ್ಕೋ ಏನೋ ಆ ಬರಗಾಲ ನಿಚ್ಚಳ ನೆನಪಿದೆ. ಬಿಕೋ ಅನ್ನುವ ರಣಬಿಸಿಲಿನ ಜಳಕ್ಕ ತತ್ತರಿಸಿ ಹೋದ ದನಕರುಗಳಿಗೆ ಟ್ರಕ್ಕನ್ಯಾಗ ಹುಲ್ಲು ಬರೂತಲೆ ಪಾಳೆಕ್ಕ ನಿಂತು ಹುಲ್ಲು ಬೇಡುತ್ತಿದ್ದ ಮಂದಿಯ ಹಪಹಪಿ ಕಣ್ಣಾಗ ಮೂಡಿದ ಗೊಂಬ್ಯಾಗಿ ಉಳದದ. ಊರ ಜನಗಳು ಕೊಡೋ ಆಯಾ ನಂಬಿ ಬದುಕೋ ನಮ್ಮಂಥ ಸಣ್ಣ ಸಮುದಾಯಗಳಿಗಂತೂ ಬರಗಾಲ ಮೈಮುಳ್ಳಿನ್ಹಂಗ ಚುಚ್ಚತಿರತದ ಅನ್ನೋದು ಸುಳ್ಳಲ್ಲ. ಉಳ್ಳವರು ಗುಳೆ ಹೋಗೋ ಹೊತ್ತಿನ್ಯಾಗ ನಮ್ಮ ಕಸುಬಿಗೆ ಕವಡೆ ಕಿಮ್ಮತ್ತು ಇರತಿರಲಿಲ್ಲ. ನನ್ನಪ್ಪನ ಮುಖದ ಮ್ಯಾಲ ಇದ್ದಕ್ಕಿದ್ದಂತೆ ವಯಸ್ಸಿನ ನೆರಿಗೆಗಳು ಮೂಡಿ ಒಂಥರಾ ದೈನೇಸಿ ಮೂತಿ ಇಟ್ಟಕೊಂಡು ತನ್ನ ಹಸುಬೆ ಸಾಮಾನು ಕಟ್ಟಿಟ್ಟು ‘ನಾವೂ ಎಲ್ಲಿಗಾದರೂ ದೂರ ದುಡಿಲಿಕ್ಕ ಹೋಗೂಣೇನು?’ ಅಂದಾಗ ಅಂತೂ ಕೈಕಾಲು ತಣ್ಣಗಾಗತಿದ್ದವು. ನಮ್ಮಪ್ಪ ಸಣಕಲು ಪೀಚಲು ಮನಶ್ಯಾ… ಖರೆ ಅಂದ್ರ ಅವ ಸಣ್ಣಂದಿರತ ದುಡಿದವನಲ್ಲ. ನಮ್ಮವ್ವನ ದುಡಿಮೆ ನಾವು ಆರು ಜನ ಎಳಸಲು ಪಳಸಲು ಹುಡುಗೋರನ್ನ ಕಟ್ಕೊಂಡು ದುಡಿಯಾಕ ಹೋಗುದಾದರೂ ಎಲ್ಲಿಗೆ ಅನ್ನೋದು ಅವ್ವನ ಪ್ರಶ್ನೆ ಆಗಿತ್ತು. ಕೆರೆಗೆ ತೂಬೂ ಕಟ್ಟುವ ಬರಗಾಲದ ಕಾಮಗಾರಿ ಸುರುವಾದ ಮ್ಯಾಲಂತೂ ಅಪ್ಪನ ಮೂತಿ ನೋಡಲಿಕ್ಕ ಆಗತಿರಲಿಲ್ಲ.
ಆಗ, ನಮಗ ಖರೇ ಹೊಟ್ಟಿ ಎರಡರಷ್ಟಾಗಿಬಿಟ್ಟಿತ್ತು. ನಾವು ನಾಲ್ಕೂ ಜನ ಒಂದು ಆಕಳದ ನೆಪ ಹೇಳಿಕೊಂಡು ಗೋಶಾಲೆಯೊಳಗ ಊಟ ಹೊಡದು ಬರತಿದ್ದಿವಿ, ಟ್ರಕ್ಕ ಬಂದು ನಿಂತಾಗ ರೇಷನ್ನ್ ಸಲುವಾಗಿ ಆಜೂಬಾಜೂಕಿನವರ ಕೂಡ ಕಿತ್ತಾಡತಿದ್ದಿವಿ. ನಮ್ಮನ್ನ ಜಗಳಗಂಟರು ಅಂತ ಗುರುತಿಸುತ್ತಿದ್ದ ಊರ ಜನ ಕೆರೆ ಕಾಮಗಾರಿ ಮಾಡಿ ದಣಿದು ಬರುವ ನಮ್ಮಪ್ಪನ ಮುಂದೆ ಒಂದಿಲ್ಲೊಂದು ತಕರಾರು ಹೇಳಿ ಹೊಡೆಸುತ್ತಿದ್ದರು. ಒಂದೊಂದು ದಿನ ಪಾಳೆಕ್ಕ ನಿಂತು ಊಟ ಹಾಕಿಸಿಕೊಳ್ಳುವಾಗ ದೊಡ್ಡವರೆಲ್ಲ ನಮ್ಮನ್ನ ತಳ್ಳಿ ಹಿಂದು ಹಾಕಿದರು. ಅಪ್ಪನ ಆಜ್ಞಾ ಪ್ರಕಾರ ನಾವು ಸಂಭಾವಿತರಾಗಿಯೇ ಇರಬೇಕಾಗಿತ್ತು. ಹಸಿದ ನನ್ನ ತಂಗಿ ಮುಖ ಈಟೇ ಈಟಾಗಿ ಅಳು ತುಂಬಿಕೊಂಡಿತ್ತು. ಅಣ್ಣ ಹಾಗೂ ಹೀಗೂ ಕಷ್ಟಪಟ್ಟು ತಟಕು ಅನ್ನಸಾರು ಬಿಡಿಸಿಕೊಂಡದ್ದು ಯಾವ ಮೂಲೆಗೂ ಸಾಕಾಗಿರಲಿಲ್ಲ. ಆ ಇಡೀ ದಿನ ನನ್ನ ತಂಗಿ ಹೊರತುಪಡಿಸಿ ನಾವು ಮೂವರು ನೀರುಂಡು ದಿನಗಳೆದೆವು. ಬೇಲಿಯೊಳಗಿನ ಅಸ್ಪೃಶ್ಯರು ನಾವು ನಮಗೆ ಏನು ತಿಂದ್ರಿ ? ಹೊಟ್ಟೆ ಬಟ್ಟೆ ಹೇಗೆ ತುಂಬಿಸಿಕೊಳ್ಳುತ್ತೀರಿ ? ನೆರೆ-ಹೊರೆಯವರು ತೋರಿಸೋ ಸಹಕಾರ ಹೇಗಿದೆ ? ಅಂತ ಯಾರೂ ಕೇಳಲಾರರು. ಮಳೆ ಆಗಿ ಬೆಳೆ ಬಂದ ಮೇಲೆ ರೈತನ ಉಪ ಹೊಟ್ಟೆಯಾಗಿರುವ ನಾವು ಬದುಕುವುದು ಆಯಾದ ಕಾಳಿನಿಂದಲೇ… ಜಾತಿಯಿಂದ ನಾಯಿಂದರಾಗಿರುವ ನಾವು ತಲೆ ಬೋಳಿಸುತ್ತೇವೆ- ಗಡ್ಡ ಕೆರೆದು ಮುಖ ತೊಳೆದು ಸ್ವಚ್ಛ ಮಾಡುತ್ತೇವೆ ಹೊರತು ಊರಿನ ಯಾರ ಮನೆತನವನ್ನೂ ಹಾಳು ಮಾಡುವವರಲ್ಲ ಆದರೂ ಕೆತಗ ಅನ್ನುವ ಅವಮಾನ ಅನುಭವಿಸುತ್ತೇವೆ.
ನಮ್ಮೂರಾಗ ಮುಂಜಾನೆದ್ದು ನಾವು ಯಾರಿಗೂ ಮುಖ ತೋರಸೋ ಹಂಗಿಲ್ಲ. ಮುಖ ನೋಡುತಲೇ ಅವಮಾನ ಮಾಡತಿದ್ದರು. ಥೂ ಥೂ ಅಂತ ಉಗಳತಿದ್ದರು. ‘ಮುಂಜಾನೆದ್ದ ಈ ಹಜಾಮ ಮೂತಿ ತೋರಿಸಿದ ಏನು ಸುಖಾ ಇಲ್ಲ ತಗಿ’ ಅಂತ ಮಾರಿಗೆ ಹೊಡದಂಗ ಹೇಳತಿದ್ದರು. ರಾತ್ರಿ ಆಗೂತಲೆ ನಾವು ಮುಖ ತೋರಸಬಾರದು, ದಾರಿಗೆ ಎದರಾಗಬಾರದು ಅನ್ನೋ ವಿಚಿತ್ರ ನಡವಳಿಕೆ ನನಗಂತೂ ಮುಜುಗರ ಹುಟ್ಟಸತಿತ್ತು. ಆದರ ಒಂದು ಮಜಾ ಏನು ಅಂದ್ರ ಹಾಗೆ ಥೂ ಅಂತ ಹಚಾಗುಟ್ಟತಿದ್ದವರು ಯಾರೂ ಗಂಡಸರಲ್ಲ, ಹೆಂಗಸರು. ಕೆಲವು ಕಡೆ ಗಂಡಸರು ಹಂಗ ಮಾಡತಿದ್ದರು. ಆದರ ಅವರಿಗೆಲ್ಲ ನಮ್ಮಪ್ಪನ ಕೈಯೊಳಗಿನ ಕತ್ತಿ,ಕತ್ರಿ ಎಂಬ ನಮ್ಮ ಮನೆತನದ ಆಯುಧಗಳ ಬಗ್ಗೆ ಹೆದರಿಕೆ ಇತ್ತು. ಆ ಉಚ್ಚ ಜಾತಿಯವರೆಲ್ಲ ನಮ್ಮಪ್ಪನ ಮುಂದ ತಲೆತಗ್ಗಿಸಿ ಕುಳಿತಾಗ ನನಗಂತೂ ಹೆಮ್ಮೆ ಅನ್ನಿಸತಿತ್ತು. ನಮ್ಮಪ್ಪ ಖುದ್ದ ಬಿಜ್ಜಳರಾಯನೇ ಆಗಿರತಿದ್ದ.
————— ಮಹಾದೇವ ಹಡಪದ

Advertisements

ಕನ್ನಡ ನಾಟಕ – ಪರಂಪರೆ ಆಗಬೇಕು


ನಾಟಕದ ಬಗ್ಗೆ ಎಲ್ಲರೂ ಮಾತಾಡಲು ಸುರುಮಾಡುತ್ತಾರೆ, ಕೆಲವರು ಹಾಗಿರಬೇಕಿತ್ತು ಹೀಗಿರಬೇಕಿತ್ತು ಎಂಬಿತ್ಯಾದಿ ಆಶಾವಾದದ ಉಚಿತ ಸಲಹೆಗಳನ್ನು ಕೊಡಲು ಪ್ರಾರಂಭಿಸುತ್ತಾರೆ. ನಾಟಕದ ತಳಹದಿ ಯಾವ ರೂಪದಲ್ಲೇ ಇರಲಿ ತಮ್ಮ ತಲೆಯೊಳಗಿನ ಚಿತ್ರದ ಗಡಿ ದಾಟಿಕೊಂಡು ನಾಟಕ ನೋಡುವುದೇ ಇಲ್ಲ. ಹಾಗೆ ಮಾತಾಡುವವರು ಚಿತ್ರಗಳ ಬಗ್ಗೆ ಮಾತಾಡುವುದಿಲ್ಲ, ಕವಿತೆಗಳ ಬಗ್ಗೆ ಮಾತಾಡುವುದಿಲ್ಲ ಶಿಲ್ಪಗಳ ಕುರಿತಾಗಿ ಮಾತಾಡುವುದಿಲ್ಲ..! ಆಶ್ಚರ್ಯವೆಂದರೆ ನಾಟ್ಯಭಂಗಿಗಳ ಬಗ್ಗೆ ಸಹಿತ ವಿವೇಚನೆ ಮಾಡುವುದಿಲ್ಲ. ಸಾಧಾರಣವಾಗಿ ನಾಟಕ ನೋಡಿದ ಮೇಲೆ ಒಂದು ಸಣ್ಣ ಚರ್ಚೆ ಇಟ್ಟಾಗ ಪ್ರೇಕ್ಷಕರಲ್ಲಿ ಕೆಲವು ಗೊಂದಲಗಳು ಏಳುತ್ತವೆ. ಅದ್ಯಾವದೋ ನೆನಪಿನ ಸುರುಳಿಯಲ್ಲಿ ಇಡೀ ನಾಟಕ ಗ್ರಹಿಸಿರುತ್ತಾರಾದ್ದರಿಂದ ಅದೇ ತೆರನಾದ ಭಾವಪ್ರಪಂಚದ ಒಳಹೊಗಲು ಪ್ರಯತ್ನಿಸುತ್ತಿರುತ್ತಾರೆ. ಒಮ್ಮೆ ರಸವತ್ತಾಗಿ ಅಭಿನಯಿಸಲ್ಪಟ್ಟ ನಾಟಕವೊಂದು ಮತ್ತೊಮ್ಮೆ ಅಷ್ಟೆ ರಸವತ್ತಾಗಿ ತಟ್ಟಬೇಕಾದ್ದು ಏನೂ ಇರುವುದಿಲ್ಲ. ಅದು ಸಂಪೂರ್ಣ ನಟ/ನಟಿಯ ಅಭಿವ್ಯಕ್ತಿಯಾಗಿ ರೂಪಗೊಳ್ಳುವುದು ಭಾವತುಂಬಿ ಅಬಿನಯಿಸಿದಾಗ ಮಾತ್ರ… ಆದರೆ ನಾವು ದಿನನಿತ್ಯದ ಬದುಕಿನಲ್ಲಿ ಅಂಥ ಭಾವಪೂರ್ಣವಾದ ಕ್ಷಣಗಳನ್ನ ಕಂಡಿದ್ದ ಕಾರಣಕ್ಕಾಗಿ ನಾಟಕ ನೋಡುಗನೊಂದಿಗೆ ಸಹ ಪ್ರಯಾಣ ಆರಂಭಿಸಿಬಿಟ್ಟಿರುತ್ತದೆ. ಅಷ್ಟು ಸಹಜವಾಗಿ ನಮ್ಮ ಒಳ-ಹೊರಗೇಕಾಗಿ ನಾಟಕದ ಎರಡು ಸಂವಹನಗಳು ಸಾಧ್ಯವಾಗುತ್ತಿರುತ್ತವೆ. ಅಂಥ ಸಂವಾದ ಬೇರೆ ಯಾವ ಮಾಧ್ಯಮದಿಂದ ಸಾಧ್ಯವಾಗಲಾರದು ಎಂದು ಹೇಳಲಾಗದು ಯಾಕಂದ್ರೆ ಆ ಎಲ್ಲ ಕಲಾಪ್ರಕಾರಗಳು ತನ್ನ ಅರಿವಿನ ವಿಸ್ತಾರದಲ್ಲಿ ಕೊಡುಕೊಳ್ಳುವ ಒಂದು ವ್ಯಾಪಾರ ಮನೋಧರ್ಮವನ್ನು ಬೆಳೆಸಿಕೊಂಡಿರುತ್ತವೆ.
ಈಗ ಹೊಸ ಹುಡುಗರು ಸಾಲುಗಟ್ಟಿ ನಾಟಕಕ್ಕೆ ಬರುತ್ತಿದ್ದಾರೆ. ವರ್ಷವೊಂದರಲ್ಲಿ ಕನ್ನಡ ರಂಗಭೂಮಿಯಲ್ಲಿ ಕನಿಷ್ಟ ಎಂಬತ್ತು ಜನ ಯುವಕರು ನಾಟಕದ ವಿಷಯದ ಮೇಲೆ ಡಿಪ್ಲೋಮ ಪದವಿ ಪಡೆದುಕೊಳ್ಳುತ್ತಾರೆ. ಇದೊಂದು ಸಂತಸದ ಸಂಗತಿ ಆದರೂ ಅವರ ಅಧ್ಯಯನ ಕ್ರಮದಲ್ಲಿ ಸಹಜತೆಗೆ ಹೊರತಾದ ಕೆಲ ಕೋತಿ ಚೇಷ್ಟೆಗಳು, ತಂತ್ರಗಳು, ಸಿದ್ಧಮಾದರಿಯ ಅಭಿನಯಗಳು ರೂಢಿಯಾಗಿಬಿಡುತ್ತವೆ. ಕನ್ನಡ ಅಕ್ಷರಗಳ ಸ್ಪಷ್ಟ ಉಚ್ಛಾರಣೆ ಕಲಿಸುವುದರೊಂದಿಗೆ ದೇಹಸಂಸ್ಕಾರ ಮಾಡಿಸುವುದರೊಳಗೆ ಅವರ ಕಲಿಕೆಯ ಆಸಕ್ತಿ ನಿಂತು ಹೋಗಿಬಿಟ್ಟಿರುತ್ತದೆ. (ಇದು ನನಗು ಅನ್ವಯಿಸುತ್ತದೆ) ಮುಂದೆ ಅವರ ಮುಖದ ಮುಂದಿನ ಕನಸುಗಳೆಲ್ಲ ಬೆಂಗ್ಳೂರು ಒಳಗೊಂಡು ರಚಿತವಾಗುವ ಕಾರಣಕ್ಕೋ ಏನೋ ಬಂದ ಯುವಕರು ಹಾಗೆ ಎಲ್ಲೋ ಕಾಣದಾಗಿಬಿಡುತ್ತಾರೆ. ಆ ಫ್ರೇಮ್ ಸಂಸ್ಕೃತಿಗೆ ಬೇಕಾದ ಅಭಿನಯದ ಮಾದರಿಯನ್ನ ಅವರು ಕಲಿಯದ ಕಾರಣಕ್ಕಾಗಿ ಏನೋ ಅವರು ಅಷ್ಟಾಗಿ ಸ್ಕ್ರೀನ್ ಮೇಲೆ ಕಾಣಿಕೊಳ್ಳುವುದಿಲ್ಲ. ಇದೆಲ್ಲ ಆಗುವ ಹೊತ್ತಿಗೆ ಅವರ ಉತ್ಸಾಹವೇ ಹಿಂಗಿ ತಾಂತ್ರಿಕ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿಬಿಡುತ್ತಾರೆ. ನೋಡಿ ರಂಗದ ಮೇಲೆ ನಿಂತು ನಾಟಕ ಮಾಡುವ ಹೊತ್ತಲ್ಲಿ ಅವರ ಅಭಿವ್ಯಕ್ತಿಗೆ ಬಹು ಆಯಾಮಗಳು ಒದಗಿ ಬಂದು ಪ್ರೇಕ್ಷಕರೊಳಗೆ ಹತ್ತೆಂಟು ಪ್ರಶ್ನೆಗಳನ್ನು ಪ್ರಚೋದಿಸಿದ ನಟ ಹೀಗೆ ಎಲ್ಲೋ ಕಾಣದಾದಾಗ ಕನ್ನಡ ರಂಗಭೂಮಿ ಪರಂಪರೆ ಆಗಿ ಉಳಿಯುವುದಾದರೂ ಹೇಗೆ? ಅದಿರಲಿ ನಟನೊಬ್ಬ ಹತ್ತೆಂಟು ವರ್ಷಗಳ ಕಾಲ ಬರೀ ನಾಟಕದ ಸಾಧನೆಯೊಳಗೆ ಬದುಕಿ ಉಳಿಯುವುದು ಕಷ್ಟ, ಯಾವನೋ ಒಬ್ಬ ಹಾಗೆ ಬದುಕುತ್ತೇನೆಂದು ಹಠ ಹಿಡಿದರೂ ಅವನ ಸ್ವಂತ ಬದುಕಿನ ಸಂಕಟಗಳನ್ನು ಯಾವ ಮುಖವಾಣಿಯಲ್ಲಿ ಹೇಳಿಕೊಳ್ಳಬೇಕು? ಇನ್ನು ಕೆಲ ನಟರು ಹೊಟ್ಟೆ-ಬಟ್ಟೆಗೆ ಬೇರೆ ಬೇರೆ ಕೆಲಸಗಳನ್ನು ನಚ್ಚಿಕೊಂಡು ಬಿಡುವಿನ ಸಂದರ್ಭದಲ್ಲಿ ನಾಟಕ ಮಾಡುತ್ತ ಬಂದಿದ್ದಾರೆ. ಅಂಥವರು ಸಹಿತ ಈ ತರಬೇತಾದ ಹೊಸ ಹುಡುಗರನ್ನ ಕೊಂಚ ‘ಏನು ಮಾಡುತ್ತಾರೋ ನೋಡೋಣ’ ಎಂಬ ವಕ್ರದೃಷ್ಟಿಯಲ್ಲಿ ನೋಡುವಾಗ ಅವರ ಪರಂಪರೆ ಇವರಿಗೆ ಬಳುವಳಿಯಾಗಿ ಬರುವುದಾದರೂ ಹೇಗೆ ಸಾಧ್ಯ? ಇನ್ನು ತರಬೇತಾದ ಕೆಲವರು ಹವ್ಯಾಸವೆಂದು ನಾಟಕ ಮಾಡುವವರನ್ನು ಗರ್ವದಿಂದ ನೋಡುವುದೂ ಒಂದಿದೆ… ಅದು ತಾವು ಆ ಕುರಿತಾಗಿ ತಿಳುವಳಿಕೆ ಉಳ್ಳವರು ಎಂಬ ಸೊಕ್ಕು ಅದು-ಹಾಗಂದ ಮಾತ್ರಕ್ಕೆ ಅವರನ್ನು ದೂರಿಕೊಂಡು ಅವರು ಅಲ್ಲಿ ಓದಿದವರು ಇವರು ಇಲ್ಲಿ ಓದಿದವರು ಎಂದು ಮಾತೃ ಸಂಸ್ಥೆಯೊಂದಿಗಿನ ಇವರ ಹೊಟ್ಟೆಕಿಚ್ಚನ್ನ ಹೊಸ ಹುಡುಗರ ಮೇಲೆ ತೀರಿಸಿಕೊಳ್ಳಲು ಪ್ರಯತ್ನಿಸುವುದು ಇದ್ದೆ ಇರುತ್ತದೆ. ಇದೆಲ್ಲದರ ನಡುವೆ ಹೊಸ ತಲೆಮಾರಿನ ನಮಗೆಲ್ಲ ನಾಟಕ ಪರಂಪರೆಯಾಗಿ ಉಳಿಸಬೇಕೆಂಬ ಆಶಯವೇನೋ ಇದೆ..1 ಆದರೆ ಕನ್ನಡದ ನಟನಾ ಪರಂಪರೆ ಗಟ್ಟಿಯಾಗುಳಿಯಲು ನಮ್ಮ ನೆಲದ ಒಂದು ಅಭಿನಯ ಪದ್ಧತಿ ಕುರಿತಾದ ಸಂಶೋಧನೆ ಆಗಲಾರದ ಹೊರತು ಮತ್ತು ನಾಟಕದಲ್ಲಿ ನಟಿಸುವ ನಟನಿಗೆ ಪಗಾರ ಸಿಗದ ಹೊರತು ನಾಟಕ ಪರಂಪರೆಯಾಗಿ ಉಳಿಯಲಾರದು. ನಾಲ್ಕು ನಾಟಕ ಮಾಡಿದವ ನಿರ್ದೇಶನ ಮಾಡಲು ಆರಂಭಿಸುತ್ತಾನೆ. ತನ್ನದೇ ಆದ ಸರ್ಕಲ್ಲೊಂದರ ಮೂಲಕ ಪ್ರಚಾರಕ್ಕೆ ಬಿದ್ದು ಶ್ರೇಷ್ಟತೆಯ ಗುಂಗಿನಲ್ಲಿ ಮುಳುಗಿಬಿಡುತ್ತಾನೆ. ಅಂಥವರೆಲ್ಲ ನಾಟಕ ಪರಂಪರೆಯ ಬಗ್ಗೆ ತಲೆ ಕೆಡಿಸಿಕೊಳ್ಳಲಾರರು. ಹೌದು ನಾಟಕ ಪರಂಪರೆ ಆಗಲೇಬೇಕು
——————ಅಮಾಸ
.

ಕೆಟ್ಟುದನರಸ ಹೋಗಿ ತಾನೆ ಕೆಟ್ಟಿತ್ತು.


ಕಲ್ಯಾಣದ ಕತೆ ಒಂದು ಕಾಲದ ತುರ್ತಿನೊಂದಿಗೆ ಹೊಡೆದಾಡಿ ಕೊನೆಗೊಂಡದ್ದು-ಕೊನೆಗಾಣದೆ ಹಾಗೇ ಉಳಿದು ಬಂದದ್ದು ಆಚರಣೆಯ ನೆಪದಲ್ಲಿ… ಶ್ರೇಷ್ಠತೆಯ ವ್ಯಸನದಲ್ಲಿ… ಬದಲಾವಣೆಯ ಆಶಾವಾದದಲ್ಲಿ ಮಾತ್ರ. ಇತ್ತೀಚಿನ ವಚನಗಳ ಅಧ್ಯಯನದಲ್ಲಿ ಇಂದಿನ ಸಾಮಾಜಿಕ ಸಂದರ್ಭದ ವಿವರಣೆ ಯಾವ ಹಂತದಲ್ಲೂ ನುಣಚಿಕೊಳ್ಳುವುದಿಲ್ಲ. ನಾಟಕ ಬರಲಿ, ಕವಿತೆ ಬರೆಯಲಿ, ಕಾದಂಬರಿಯಾಗಲಿ ಅದರೊಳಗೆ ರಚನಾಕಾರನಿಗೆ ಗೊತ್ತಿಲ್ಲದ ಹಾಗೆ ತನ್ನ ವಿರುದ್ಧ ತಾನೇ ಬರೆದುಕೊಳ್ಳುವ ಗುಣವೊಂದು ಒಡಮೂಡುತ್ತಲೇ ಇರುತ್ತದೆ. ಆ ಸಮಾಜೋಧಾರ್ಮಿಕ ಚಳುವಳಿಯ ಭಕ್ತ ಮತ್ತು ಅವನ ಆರಾಧ್ಯ ದೈವ ಎದುರುಗೊಳ್ಳುವ ಕ್ರಿಯೆಯಲ್ಲಿ ವಚನದ ಸಾಲುಗಳು ನಿವೇದನೆಯ ರೂಪದಲ್ಲಿ ಆಕಾರಗೊಂಡಿವೆ. ಅಂಥ ವಚನಗಳು ಮತ್ತು ಆ ಕಾಲದ ಕಥನದ ಮೇಲೆ ರಚನೆಯಾದ ಸಾಹಿತ್ಯ ಕೃತಿಗಳು ಕರ್ನಾಟಕದ ಜಾತಿ ವ್ಯವಸ್ಥೆಗೆ ಯಾವ ರೀತಿಯಲ್ಲಿ ಸ್ಪಂದಿಸಿವೆ? ಮಠ ಎಂಬ ವ್ಯವಸ್ಥೆಯಲ್ಲಿ ಈಗಲೂ ಜಮೀನ್ದಾರಿ ನಡವಳಿಕೆಯನ್ನು, ಜಾತಿ ಶ್ರೇಷ್ಠತೆಯ ಗುಣಗಳನ್ನು, ಮೌಢ್ಯಗಳ ಜೀವಂತಿಕೆಯನ್ನು ಕಾಣುವ ನಮಗೆ ಕಲ್ಯಾಣದ ಕ್ರಾಂತಿ ಹಾಕಿಕೊಟ್ಟ ಬುನಾದಿ ಯಾವ ಮಾದರಿಯನ್ನು ಅನುಸರಿಸಿ ಪ್ರಾದೇಶಿಕತೆಯನ್ನು ಕಟ್ಟುತ್ತಿದೆ? ಎಂಬುದು ಮುಖ್ಯ ಪ್ರಶ್ನೆಯಾಗಿ ಕಾಡುತ್ತಿದೆ. ನನ್ನ ಊರಿನ ಲಿಂಗಾಯತರ ಮನೆಗಳಲ್ಲಿ ಬಸವಣ್ಣನವರ ಭಾವಚಿತ್ರಗಳು ಕಂಡಾಗಲೆಲ್ಲ ನನ್ನ ಜಾತಿ ಕಾಡುತ್ತದೆ ಆ ಬಸವನೆಂಬವನ ಹುಂಬ ಅನುಯಾಯಿಗಳಲ್ಲಿನ ಢಾಂಬಿಕ ಭಕ್ತಿಯ ತೆವಲು ಕಾಣುತ್ತದೆ. ಅಂಥದೇ ತೆವಲಾಗಿ ಇಂದಿಗೆ ನೂರು ವರ್ಷಗಳ ಹಿಂದೆ ಬಸವ ಜಯಂತಿಯನ್ನು ಆಚರಿಸಲು ಆರಂಭಿಸಿದರು. ಅದರ ಶತಮಾನೋತ್ಸವದ ಸಂಭ್ರಮ ಫೋಟೋಕ್ಕೆ ಹಾರ ತುರಾಯಿಗಳನ್ನು ಹಾಕುವುದರಲ್ಲಿ, ಆ ಕಾಲದ ದಿಟ್ಟ ನಡೆಯನ್ನ ಹಾಡಿ ಹೊಗಳುವುದರಲ್ಲಿ ಕಳೆಯುವ ಮಠಾಧೀಶರು ಕೆಟ್ಟ ಜಾತಿ ಸೂತಕವನ್ನ ಪ್ರೊತ್ಸಾಹಿಸುವವರಂತೆ ಕಾಣುತ್ತಾರೆ. ಕನ್ನಡ ನೆಲದಲ್ಲಿ ಅತಿ ಹೆಚ್ಚು ಜಾತ್ಯಾಧಾರಿತ ಜಗಳಗಳು ನಡೆದಿರುವುದು ಲಿಂಗಾಯತ ಮತ್ತು ಇತರೆ ಕೋಮಿನ ನಡುವೆ ಎಂಬುದು ಸ್ಪಷ್ಟ. ಬಸವಣ್ಣನವರ ಹೆಸರು ಹೇಳುತ್ತಲೇ ಹಿಂದುತ್ವವನ್ನ ಈ ನೆಲದಲ್ಲಿ ಬಿತ್ತುತ್ತಿರುವವರು ಅವನ ಅನುಯಾಯಿಗಳೇ ಎಂಬುದು ವಿಪರ್ಯಾಸ. ಕೆಲವು ಮಠಾಧೀಶರು ಈ ಎಲ್ಲ ಆಪಾದನೆಗೆ ಹೊರತಾಗಿ ಕೆಲಸ ಮಾಡುತ್ತಿದ್ದರೂ ಒಳಗೊಳಗೆ ಜಾತಿ ಮುಖಂಡರೊಂದಿಗೆ ಮುಖ ಕೆಡಿಸಿಕೊಂಡಿದ್ದಾರೆ, ಇನ್ನು ಕೆಲ ಮಠಾಧೀಶರು ಶ್ರೇಷ್ಠತೆಯ ಒಲವಿಗಾಗಿ ಸಮಾನತೆಯ ಸೋಗು ಹಾಕಿಕೊಂಡಿದ್ದಾರೆ. ದಲಿತರಿಗೆ ಬಹಿಷ್ಕಾರ ಹಾಕಿದ ಊರುಗಳ ಬಗ್ಗೆ ಪತ್ರಿಕೆಯಲ್ಲಿ ವರದಿ ನೋಡಿದವರಿಗೆ ತಿಳಿಯುತ್ತದೆ ಕರ್ಣಾಟಕದ ಈ ಪ್ರಬಲ ಕೋಮಿನ ಕುಹಕತನ…. ಹಾಗಾಗಿ ನಾವು ಮೇಲ್ಮಟ್ಟದಲ್ಲಿ ಬ್ರಾಹ್ಮಣರ ಅಂದಕಾಲತ್ತಿನ ರಾಜಕಾರಣವನ್ನ ಹೀಗಳೆಯುತ್ತ ಕಾಲ ಕಳೆಯುತ್ತಿದ್ದೆವೆ ಹೊರತು ಹೊಸ ಸಮುದಾಯದ ಅಟ್ಟಹಾಸವನ್ನ ಅಷ್ಟಾಗಿ ಗ್ರಹಿಸುತ್ತಿಲ್ಲ.
ಬಸವಣ್ಣನ ಹುಟ್ಟಿನ ಬಗ್ಗೆ, ಕಲ್ಯಾಣದ ಕ್ರಾಂತಿ ಬಗ್ಗೆ ಕೊಂಚ ವಿಚಕ್ಷಣ ದೃಷ್ಟಿ ಹರಿಸಿದ ಯಾವದೇ ಲೇಖಕ ಬಹಿಷ್ಕಾರವೆಂಬ ಅಟ್ಟಹಾಸದ ರಾಜಕೀಯ ಬಿಸಿಗೆ ತಾಗಿ ಸುಮ್ಮನಾಗಿದ್ದಾನೆ. ಮಹಾಚೈತ್ರ, ಆನುದೇವಾ ಕೃತಿಗಳು ಮುಟ್ಟುಗೋಲಾದ ಮೇಲಂತೂ ಆ ಸಮುದಾಯ ಇತಿಹಾಸದ ಮೇಲೆ ವಿಚಿತ್ರ ತೆರನಾದ ಹಿಡಿತ ಸಾಧಿಸುತ್ತಿದೆ. ವಚನದ ಆಶಯದಂತೆ ಅವರ ನಡೆ ಇಲ್ಲ ಎಂಬುದನ್ನು ನಾವು ಮೈಸೂರಿನ ಮರ್ಯಾದಾ ಹತ್ಯ ರಾಣೆಬೆನ್ನೂರಿನ ಘಟನೆಯಿಂದ ತಿಳಿಯಲಾರದವರಾಗಿದ್ದೇವೆ. ನಮ್ಮ ಜಾತಿಯವನು ಒಬ್ಬ ಶರಣನಿದ್ದ ಅವನು ಬಸವಣ್ಣನವರ ಆಪ್ತ ಹಡಪದಪ್ಪಣ್ಣನೆಂದು. ಆದರೆ ನಮ್ಮೂರಿನ ಲಿಂಗಾಯತರು ನಮ್ಮನ್ನು ಈಗಲೂ ಬೇಲಿಯೊಳಗಣ ಅಸ್ಪೃಶ್ಯರ ಹಾಗೆ ನಡೆಸಿಕೊಳ್ಳುವಾಗ ನನಗನ್ನಿಸುತ್ತದೆ…’ನಾವು ಊರ ಹೊರಗಿದ್ದರೆ ಎಷ್ಟೊ ಪಾಡಿತ್ತು’ ಎಂದು. ಸ್ವಾಭಿಮಾನವಿಲ್ಲದ ಸಣ್ಣ ಸಮುದಾಯದವರಾದ ನಾವು ಸಂಘಟಿತರಾಗುವುದು ಕನಸಿನ ಮಾತು. ಇವತ್ತಿಗಂತು ಈ ಸಣ್ಣ-ಪುಟ್ಟ ಸಮುದಾಯಗಳು ಸಂಘಟಿತರಾಗುವುದು ಕೆಟ್ಟ ರಾಜಕಾರಣದ ಸಹವಾಸವನ್ನ ಬಯಸಿಯೇ ಎಂಬುದನ್ನು ಕಾಣುತ್ತಿದ್ದೇವೆ… ಹೀಗಿರುವಾಗ ಕನ್ನಡದ ಬುದ್ದಿಜೀವಿಗಳು ಸ್ವಲ್ಪ ಈ ತೆರನಾದ ಮುಸುಕಿನ ರಾಜಕಾರಣವನ್ನು ಬಿಡಿಸಿ ನೋಡಲು ಸಾಧ್ಯವಾಗಲಾರದೆ ಹೋಗಿರುವುದು ನೋವಿನ ಸಂಗತಿ…. ಹಾಗೇ ಸಮುದಾಯ ಪ್ರಜ್ಞೆಯನ್ನು ನೊಡುವ ತೀಕ್ಷ್ಣ ದೃಷ್ಟಿ ದಕ್ಷಿಣ ಕನ್ನಡದ ನೆಲದಲ್ಲಿ ಬಂದ ಹಾಗೆ ನಮ್ಮ ನಾಡಿನ ಬೇರೆ ಯಾವ ಪ್ರಾಂತದಲ್ಲೂ ಹುಟ್ಟಿಕೊಳ್ಳಲಿಲ್ಲ ಯಾಕೆ ? ಅಲ್ಲಿನ ಮತ್ತು ಬಯಲು ಸೀಮೆ ಬದುಕಿನ ಎರಡು ವಲಯಗಳನ್ನು ಕನ್ನಡ ಮನಸ್ಸನ್ನು ಕಟ್ಟಲೂ ಈ ಸಾಂಸ್ಕೃತಿ ವೈಪರಿತ್ಯ ಕಾರಣವಿದ್ದಿರಬಹುದು
ಮುಂದೆ ಬರೆಯಲು ಮನಸ್ಸಾಗಲಿಲ್ಲ. ಕ್ಷಮಿಸಿ.
—-ಅಮಾಸ

ಸವಿತಾ ನಾಗಭೂಷಣ ಅವರ-ದರುಶನ


ಯಾವ ಊರಿಗೆ ಹೋದರೂ
ನನ್ನೂರು ನೆನಪಾಗುವುದು
ನನ್ನತನ ನನ್ನ ನುಡಿ
ನನ್ನೊಡನೆ
ಬಾಳುವುದು ಬೆಳಗುವುದು,
ಅದೊಂದು ಅಕ್ಕರೆಯ ಜಗತ್ತು. ಆಶೆ-ಭಾಷೆಗಳೆರಡನ್ನು ಹೊಸೆದು ಬದುಕುವ ಅಂತಃಕರಣದ, ಮಾನವೀಯ ಅನುಕಂಪದ ತುಂಬಿದೊಡಲಿನ ತವಕ ತಲ್ಲಣಗಳನ್ನ ಆಪ್ತವಾದ ಆವರಣವೊಂದರಲ್ಲಿ ನೆಯ್ದು – ಪ್ರತಿಮೆ ಉಪಮೆಗಳನ್ನು ಸಂಕ್ಷಿಪ್ತವಾಗಿ ಸರಳ ವಿಧಾನದ ನುಣ್ಗತಿಯಲ್ಲಿ ಕಟ್ಟಿಕೊಡುವ ಸವಿತಾ ನಾಗಭೂಷಣ ಅವರ ಶೈಲಿ ದರುಶನದಲ್ಲೂ ಗಡಿ ದಾಟಿಲ್ಲ. ‘ಜಾತ್ರೆಯಲ್ಲಿ ಶಿವ’ ಟೋಟೆಮ್ ಆಗಲಾರದೇ ಹೀಗೆ ಬಂದು ಹಾಗೆ ಹೋಗಿ ಬಿಡುತ್ತಾನೆ. ಕಣ್ಮರೆಯಾಗುವವರೆಗೂ ಕಾಣುವ ಅವನ ಚೇತನ ಮಾತ್ರ ನೆನಪಾಗಿ ಉಳಿದುಬಿಡುತ್ತದೆ.
ಗಣಪಹಸಿದಿದ್ದಾನೆ
ಗಿರಿಜೆಗೆ ಖಾಯಿಲೆ…
ಹೆಂಡತಿ-ಮಕ್ಕಳಿಗಾಗಿ
ಶಿವನಲ್ಲದೆ ಭವಿ ಅಳುವನೆ ?!
ಎಂಬ ಮಾತು ಬೆರಗುಗೊಳಿಸಿದರೂ ವಿಚಿತ್ರವಾದ ನಾಟಕೀಯ ಭಾವಕ್ಕೆ ಮನಸೋತು ಬಿಡುತ್ತದೆ. ಸಾಕ್ಷಾತ್ ಶಿವ !! ಅನ್ನುವ ಉದ್ಘಾರ ಹೊರಡುತ್ತದೆ. ದರುಶನದ ಮುವ್ವತ್ತೆಂಟು ಕವನಗಳಲ್ಲೂ ಹಗೂರಾದ ವಿನೀತ ಭಾವಲಹರಿ ಹದಗೊಂಡು ಮಂದ್ರದಲ್ಲಿ ಲಯವಾಗಿ ನುಡಿಯುವ ಮೆಲು ಮಾತಿನ ಧಾಟಿಯಿವೆ. ಬೀಜವಾಗಿ, ಕುಸುಮವಾಗಿ, ಆವಿಯಾಗಿ, ಬೂದಿಯಾಗಿ ಎಲ್ಲಿಂದ ಎಲ್ಲಿಗೋ ನಡೆದಾಡಲು ಕರೆದೊಯ್ದು ತೀರಿಲ್ಲದ ಆಶೆಯ ತೀರದಲ್ಲಿ ತಂದುಬಿಡುತ್ತವೆ. ತಾನು ಸೃಜಿಸಿಕೊಳ್ಳುವ ಸ್ಮೃತಿಯ ಜೊತೆಗಿನ ಒಡನಾಟವೆಂಬುದು ಒಳ-ಹೊರ ಜಗತ್ತು ಏಕಾಗಿ ನೋಡುವ ಕ್ರಮದಲ್ಲಿ ರೂಪುಗೊಳ್ಳುತ್ತದೆ. ಉದಯದ ಮಾಗಿಯ ಬಿಸಿಲು ಅಂಗಕ್ಕೆ ಹಿತವಾಯಿತ್ತು ಎಂಬ ಮಾತಿನಂತೆ ಓದುಗನ ಪ್ರಜ್ಞೆಯನ್ನು ಇಂಬುಗೊಳಿಸುವ ತಾಕತ್ತಿಗೆ ತೆರೆದುಕೊಳ್ಳುವ ಮೊದಲು ಲಯದ ಮೋಡಿಯ ಸಾರ್ವತ್ರಿಕ ಗುಣವನ್ನು ತೋರ್ಪಡಿಸುವ ಹಾಗೆ ಕಂಡರೂ ಆಳದಲ್ಲಿ ವಾಸ್ತವದ ನಿಜ ದರುಶನಕ್ಕೆ ಅಣಿಗೊಳಿಸುತ್ತವೆ. ಸಶಕ್ತಗೊಳಿಸುವುದೇನನ್ನು ? ಮಾನವ ಪ್ರೇಮವನ್ನು, ಭ್ರಾತೃತ್ವವನ್ನು, ಅಂತರಂಗವನ್ನು ಮತ್ತು ಬದುಕು ತುಂಡಿಲ್ಲದ ಏಕೋಚಲನೆ ಎಂಬ ಬದುಕಿನ ಸೂತ್ರವನ್ನು… ಬಜಾರು ಮನೆಯಾಗುವ, ಮನೆಯೇ ಮಾರ್ಕೇಟ್ ಆಗುವ ಈ ಹೊತ್ತಿನ ಎಲ್ಲ ಆತಂಕಗಳ ನಡುವೆ ನಿಟ್ಟುಸಿರ್ಗರೆವಂತೆ, ಎರಡರ ನಡುವಿನ ತೆಳುಗೆರೆಯಲ್ಲಿ ಸಮಾನತೆಯನ್ನು, ಸಾಂತ್ವನವನ್ನು ಹುಡುಕಿಕೊಳ್ಳುವ ಆಶಯದ ಮಾತುಗಳೇ ಹಾಡಾಗಿ ಮೂಡಿವೆ.
ಈಗ ಒರಟೊರಟಾಗಿರುವ ‘ರಾಮ-ಕೃಷ್ಣ-ಶಿವ’ ರು ಕೂಡಾ ಒಳಗಿಳಿದು ಮಮತೆಗೆ, ಪ್ರೀತಿಗೆ ಪಾತ್ರರಾಗಿಬಿಡುತ್ತಾರೆ. ಮಧ್ಯಾಹ್ನದ ಬಿಸಿಲು ಅಂಗಕ್ಕೆ ಕರಕಠಿಣವಾಯಿತ್ತು ಎಂಬಂತೆ-ತಾಯಿ, /ಇಲ್ಲೇ… ಇರುವೆ.. /ಸೂತ್ರ ಮತ್ತು ಲೋಕದಲಿ ಪುಟ್ಟಿದ ಬಳಿಕ.. /ಏನಾಗುವೆ ? ಹೇಳೊಲ್ಲ/ಇನ್ನು ರಾಧೆ ಇಲ್ಲ../ಮಗಳು ಮತ್ತಿತರ ಕೆಲ ಕವಿತೆಗಳು ಧ್ವನಿಯಾಗಿ ಮತ್ತೊಂದು ಲೋಕವನ್ನು ಅನಾವರಣಗೊಳಿಸುತ್ತವೆ. ಹೇಳದೇ ಉಳಿಯುವ ಮಾತುಗಳು, ಮೌನವಾಗಿ ಇರಲಾರದೆ ಚಿವುಟಿ ತಿದಿಗೆ ಕೊಂಚ ಉಸಿರು ಒತ್ತಿ ವರ್ತಮಾನಕ್ಕೆ ಕನ್ನಡಿಯಾಗುವುದು, ಉಭಯದ ಗೊಂದಲವನಳಿದು ಜಗತ್ತಿನ ಪಥದ ಗತಿಯೊಳಗಿನ ಮಾನವೀಯ ಮೌಲ್ಯಗಳ ಸಕೀಲು ಉದುರಿಸುವ ಕವನಗಳು ದರುಶನದಲ್ಲಿವೆ.
ಕತ್ತಲೆಯ ಕೊಂಬೆ ಸವರಿ
ನಕ್ಷತ್ರ ಎಲೆಗಳನೊಟ್ಟಿ ರಾಶಿಯಾಗಿಸಿ
ಹಾದಿ ಬೀದಿಯ ಸೂರ್ಯನಂತೆ ಬೆಳಗಿಸಿದ.
ಕಪ್ಪು ಮುಖ ಕೆಂಡಗಣ್ಣು
ಹಳದಿ ಹಲ್ಲು, ತಲೆಯೋ ಹೊರೆ ಹುಲ್ಲು
ಶಂಖ ಚಕ್ರ ಗದಾಪದ್ಮ?…
ಅಲ್ತಲ್ತು ಅಲ್ತಲ್ತು
ಗೋರೆ, ಪೊರಕೆ, ಸನಿಕೆ ಸಂಭೂಷಿತ-
ಅದ್ಭುತವಾದ ಅವತಾರಿ ಇವನು. ಇವನ ರೂಪಿನಲ್ಲಿ ಕಸುಬಿನ ಉಪಕರಣಗಳೇ ಆಹಾರ್ಯ. ಸಾತ್ವಿಕ ಕಳೆಯ ಇವನು ಮಡುಗಟ್ಟಿದ್ದ ಶತಶತಮಾನದ ಕೊಳೆ ತೆಗೆದು, ನಿಂತ ನೀರನು ಹರಿಸುವ, ಒಳಗಿನ ಮೂಲೆ ಮೂಲೆಯ ಗುಡಿಸಿ ನಿರ್ಮಲವಾಗಿಸುವ ಜಂಗಮತ್ವದ ಕುರುಹಾಗಿ ಕಾಣುತ್ತಾನೆ.
ತಂಗಳನ್ನವ ಉಂಡು, ಕಚ್ಚಿ ಬೀಡಿಯ ತುಂಡು
ಪೊರಕೆ, ಸನಿಕೆ ಹಿಡಿದ ಕೈಗಳನೆತ್ತಿ
‘ಮರಳಿ ಬರುವೆ’ ಎಂದು ಹೊರಟು ಹೋದ…
ಸ್ವಭಾವ ಸಹಜವಾದ ಆಧ್ಯಾತ್ಮದ ಆವರಣವನ್ನೂ ವಿಲೀನಗೊಳಿಸುವುದು ಈ ಕಾಲದ ದರ್ದಿನ ಬುದ್ಧ-ರಾಮ-ರಾಧೆ-ಕೃಷ್ಣ-ಶಿವ-ಅಲ್ಲಮ-ಗಾಂಧಿ-ಅಂಬೇಡ್ಕರ್ ಎಲ್ಲ ಆದರ್ಶೀಕೃತ ಮಾದರಿಗಳನ್ನು ಒಳಗೊಂಡ ಸಾಮಾನ್ಯನಲ್ಲಿ.
ಗಿರಿಯಲ್ಲೊಂದು ಜೀವ
ಗರಿಗೆದರಿ ನರ್ತಿಸಿತು;
ನೆಲದಲ್ಲೊಂದು ಭಾವ
ನವಿಲಂತೆ ವರ್ತಿಸಿತು
ದರ್ಶನದ ಅನುಭಾವ ಕಳೆಗಟ್ಟಿ ಜೀವಿಸುವ, ರಸವಾಗಿ ಹರಿಯುವ ಅವರ ಕವನಗಳಲ್ಲಿ ಇಂತಹುದೇ ರೂಪದ ಹಲವು ಭಾವಪ್ರಪಂಚದ ದರುಶನವಾಗುತ್ತದೆ.

-ಅಮಾಸ

ನಗರ ಭ್ರಮೆಯೂ…ಬಹುಮುಖಿ ನಾಟಕವೂ


ನಗರ ಜೀವನದ ಹುಸಿಸಂಬಂಧಗಳನ್ನ,ಭಂಡತನಗಳನ್ನ. ಢಾಂಬಿಕ ನಡೆಗಳನ್ನ ತೆರೆದಿಡುವ ನಾಟಕಗಳನ್ನು ಕನ್ನಡದಲ್ಲಿ ಮೊದಲು ಬರೆಯಲು ತೊಡಗಿದವರು ಲಂಕೇಶರು. ಪಾತ್ರಗಳು ಒದ್ದಾಡುವ ಹುಂಬುತನದಲ್ಲಿಯೇ ನಗರ ಜೀವನದ ಅಸ್ತವ್ಯಸ್ತ ಬದುಕಿನ ಪಲ್ಲಟಗಳನ್ನು ಸೂಕ್ಷ್ಮವಾಗಿ ಚಿತ್ರಿಸುವ ಅವರ ಕ್ರಮ ನಾಟಕಗಳಿಂದ ನಾಟಕಗಳಿಗೆ ಜಿಗಿಯುತ್ತ ನಾಟಕೀಯತೆ ಮತ್ತಷ್ಟು ಬಿಗಿಗೊಂಡು ಸಂಕೀರ್ಣವಾದ ವಿಭಿನ್ನಗುಣವುಳ್ಳ ನಾಟಕಗಳು ಲಂಕೇಶರಿಂದ ಸೃಷ್ಟಿಗೊಂಡವು. ಆದರೆ ಅವರು ಮೊದಮೊದಲು ಬರೆದ ನಾಟಕಗಳ ಕೇಂದ್ರ ಪಾತ್ರದ ಸಂದಿಗ್ಧತೆ ನಂತರದ ನಾಟಕಗಳಲ್ಲಿ ವ್ಯಷ್ಟಿಪ್ರಜ್ಞೆಯಿಂದ ಸಮಷ್ಟಿಪ್ರಜ್ಞೆಗೆ ದಾಟಿದಂತೆ ಕಾಣುತ್ತವೆ ಹೊರತು ಲಂಕೇಶರ ಯಾವ ನಾಟಕಗಳೂ ನಾಟಕೀಯ ಭಾವತೀವ್ರತೆಯನ್ನು ಬಿಟ್ಟುಕೊಟ್ಟಿಲ್ಲ. ಹಾಗಾಗಿ ಅವರ ಎಲ್ಲ ನಾಟಕಗಳೂ ಅತ್ತ್ಯುತ್ತಮವಾಗಿಯೇ ಇವೆ. ಅದೆಷ್ಟೋ ವರ್ಷಗಳಾದ ಮೇಲೆ ಅಂಥದೇ ಸೊಗಡಿನ ನಾಟಕವೊಂದು ಕನ್ನಡ ಸಾಹಿತ್ಯಲೋಕದಲ್ಲಿ ಬಂದಿದೆ.
ಅದೇ..! ನಗರ ಜೀವನದ ನಾಗರೀಕ ಜಗತ್ತಿನ ಗೆಲ್ಲುವ ಕುದುರೆಗಳೂ, ಬದುಕಲು ಹಂಬಲಿಸುವ ಸಾಮಾನ್ಯನೂ, ಅಸ್ತಿತ್ವದ ಬೇರು ಗಟ್ಟಿಗೊಳಿಸಲು ಒದ್ದಾಡುವ ವ್ಯಕ್ತಿಗಳು, ಕಥನ ಕಟ್ಟುವ ಕಲೆಗಾರಿಕೆಯೂ… ಒಂದೇ ವಸ್ತುವಿನ ಒಳಗೆ ಅಡಕಗೊಂಡ ಪಾಕದಂತೆ ವಿವೇಕ ಶಾನಭಾಗರು ತಮ್ಮ ಬಹುಮುಖಿ ನಾಟಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಕಥನ ತಂತ್ರ ಬಹಳ ಸರಳ ಎನ್ನಿಸಬಹುದಾದ ರೀತಿಯಲ್ಲಿದ್ದಾಗ್ಯೂ ದೃಶ್ಯಗೊಳ್ಳುವ ಹಂತದಲ್ಲಿ ನಟ-ನಿರ್ದೇಶಕ ತೊಡಗಿಕೊಳ್ಳುವುದು – ಅಂದರೆ ಹೆಚ್ಚು ಕಡಿಮೆ ಪಾತ್ರದ ಆವರಣವೊಂದು ತಯಾರಾಗುವುದು – ಶೇಖರ ಕೆಂಪೇಗೌಡ ಆದ ಹಾಗಿರುತ್ತದೆ. ಒಂದು ಪಾತ್ರ ಹೊರಡುವ ಹಾದಿಯಲ್ಲಿ ಮತ್ತೊಂದು ಕಥನದ ಪಾತ್ರ ಎದುರಾಗುತ್ತದೆ. ತ್ರಿವಿಧ ವಿಕಾರಗಳು ಸೂತ್ರಿಕರಿಸಲ್ಪಟ್ಟ ನಾಟಕದ ಬಂಧದೊಳಗೆ ಒದಗಿಬಂದಿದ್ದಾವೆ ಹೊರತು ಖಾಲಿಯಾದ ಟೂತ್ ಪೇಸ್ಟ ಹಾಗೆ ಒತ್ತಿ ಬಂದಿಲ್ಲವೆನ್ನುವುದು ರಚನಾವಿನ್ಯಾಸದಲ್ಲಿಯೇ ಕಾಣಬರುತ್ತದೆ. ನಾಟಕದ ಆರಂಭವೇ ಕ್ರಿಯಾತ್ಮಕವಾಗಿ ಸಂಜಯನನ್ನು ಸ್ಟೋರಿ ಹುಡುಕಿಕೊಂಡು ಬರಬೇಕಾದ ಸಂಕಷ್ಟಕ್ಕೆ ನೂಕುತ್ತದೆ. ಬಿರಾಜದಾರನ ಅಂಧಕಾಲತ್ತಿನ ಮೊದಲ ವರದಿಯ-ದುರ್ಗಲಾಲ್ ಸ್ಟೋರಿ- ಮಾದರಿಯಲ್ಲಿ ಹೊಸ ಹುಡುಗರೂ ಸ್ಟೋರಿ ಮಾಡಬೇಕೆಂಬುದು ಹೊಸ ಹುರುಪಿಗೆ ಕಿರಕಿರಿಯಾದರೂ ತಲೆ ಮ್ಯಾಲೆ ಹೊಡೆದಂತ ಸ್ಟೋರಿ ಕೊಡಬೇಕು ಅನ್ನೋದು ಮುಖ್ಯ ಆಗುತ್ತದೆ.
ಜೀವನ; ಹಿಸ್ಟರಿ ಮಿಸ್ಟರಿ ಅಂತಿದೆ ಹೋತ. ಅದೇ ಏನಾದರೂ ಮಾಡು. ಬೆಂಗಳೂರಲ್ಲೇನೂ ಸಿಗಲ್ಲ. ಹಂಪಿಗೋ ಮೈಸೂರಿಗೋ ಹೋಗು. ಯೂ ಮೇ ಫೈಂಡ್ ಯುವರ್ ದುರ್ಗಲಾಲ್. ಬೇಕಾದರೆ ಆ ಸ್ಟೋರೀನ ಓದಿಕೊಂಡು ಹೋಗು. ನನ್ನ ಹತ್ತಿರ ಜರಾಕ್ಷ ಇದೆ.
ಈ ಮಾತು ಸಂಜಯನಿಗೆ ಮುಂದಲ ದೃಶ್ಯದಲ್ಲಿ ಸಿಗುವ ಕೆಂಪೇಗೌಡನನ್ನ ನಂಬಲು ಪ್ರೇರಣೆ ಕೊಡುತ್ತದೆ. ಸಂಪಾದಕನ ತಲೆ ಒಳಗಿದ್ದದ್ದು ಹಿಸ್ಟರಿ ಅಂತ ಗೊತ್ತಾದ ಗೆಳೆಯನ ಸಲಹೆ ನಾಟಕ ಬೀಜಾಂಕುರ ಮಾಡುತ್ತದೆ. ಗುಡಿಗಾರ ಗಲ್ಲಿಯ ಸಂಜು ಬೇರು ಬಿಡಿಸಿಕೊಳ್ಳುವ ತವಕದಲ್ಲಿ ತನಗೆ ತಾನೆ ಕಗ್ಗಂಟು ಸುತ್ತಿಕೊಂಡು ನಗರ ಜೀವನದ ನಾನಾ ಮುಖಗಳ ಬೆನ್ನು ಬೀಳುತ್ತಾನೆ. ಆಗ ತೋರುವ ಬಣ್ಣದ ಬಹುಮುಖಗಳು ಒಂದೊಂದಾಗಿ ತಮ್ಮ ಕತೆಗಳನ್ನ ಹೇಳಿಕೊಳ್ಳುತ್ತವೆ. ಸಂಪಾದಕ ಬಿರಾಜದಾರ, ಶೇಖರ, ನಾಯಕ್, ಜಕ್ಕೂಜಿ ಅಲ್ಲದೆ ಹಂದರದಲ್ಲಿ ಕಥನಕ್ಕೆ ಪೂರಕವಾಗಿ ಬರುವ ಪಾತ್ರಗಳ ಸೋಗೂ ಒಂದರ ಹಿಂದೆ ಒಂದು ಓಡುತ್ತದೆ. ಮಾನಸಿಕ ನೆಮ್ಮದಿಯನ್ನೂ ಮಾರುವ ದಂಧೆಯ ರೂಪ ಬದಲಾಗಿದೆ. ನಂಬುವವರ ನಂಬಿಕೆಗೆ ತಕ್ಕ ಕತೆಗಳು ಊರ್ಮಿಳೆ ಅಡುಗೆ ಮಾಡಿದಷ್ಟೆ ಸುಲಭದ್ದಾಗಿದೆ, ನವರಸಗಳು ಮೇಳೈಸಿಕೊಂಡು ತಯಾರಾದ ವರದಿ ಪತ್ರಿಕೆಯ ಆಫಿಸ ತಲುಪುವ ಹೊತ್ತು ಮತ್ತು ಬಿರಾಜದಾರನ ಅದೃಷ್ಟ, ಸಂಜಯನ ನಶೀಬು,ಜಕ್ಕೂಜಿಯ ಲಕ್ಕು,ಪರದೇಶಿ ಶೇಖರನ ಪರಿಸ್ಥಿತಿಗಳು ಹೀಗೆ ಒಟ್ಟು ನಾಟಕದಲ್ಲಿ ವ್ಯಾಪಾರದ ಬುದ್ದಿಯನ್ನು ಬಲಗೊಳಿಸುತ್ತಿರುವ ಜಗತ್ತು ಅನಾವರಣಗೊಳ್ಳುತ್ತದೆ. ಇಲ್ಲಿ ಎಲ್ಲರ ಜುಟ್ಟು ಬೇರೊಬ್ಬನ ಕೈಯಲ್ಲಿ ಸಿಕ್ಕಿದೆ. ಈ ಎಲ್ಲ ಪಾತ್ರಗಳ ಅಂಕೆಯನ್ನು ಏಳು ಸಮುದ್ರದಾಚೆಯ ರಕ್ಕಸರ ಕಾವಲಿನ, ಏಳು ಹೆಡೆಯ ಸರ್ಪಗಾವಲಿನ ಬಂಧನದಲ್ಲಿ ಇಟ್ಟಿಲ್ಲ ಅನ್ನೋದು ವಾಸ್ತವದ ಅರಿವಾಗಿದೆ.
ಭ್ರಮೆಯ ಭಾವ ಲೋಕವೇ ಪೀಕಲಾಟದಲ್ಲಿ ಬಿದ್ದದ್ದು ಕಂಡರು ಯಾವುದು ಯಾವುದನ್ನು ನಿರ್ದೇಶಿಸುತ್ತಿದೆ ಅನ್ನುವುದು ಮಾತ್ರ ಅಸ್ಪಷ್ಟ. ಇಲ್ಲಿ ಊಹಾಪೋಹಗಳ ನಡುವೆ ಪೇಪರ್ ಹಾಸಿಕೊಂಡು ಕುಳಿತಿರುವ ಸಂಪಾದಕ, ಪಾರ್ಟಿ ನಡೆವಲ್ಲಿ ಇನವೆಷ್ಟಿಗೇಶನ್ ನಡೆಸುವ ನಾಯಕ್, ಕನಸು ಮತ್ತು ಪ್ರೀತಿಗಾಗಿ ಕನವರಿಸುವ ಶಕ್ಕೂ ಶೇಖರ, ಉರ್ಮಿಳೆ ಸಂಜೂ, ಜಕ್ಕೂ ಮತ್ತವನ ಮಹಿಳಾ ಭಕ್ತಗಣ ಎಲ್ಲರೂ ಅಸ್ವಸ್ಥರಾಗಿದ್ದೂ ಸ್ವಾಸ್ಥ್ಯ ಜೀವನ ಅರಸುತ್ತಿದ್ದಾರೆ. ಗದ್ದಲದಲ್ಲಿ ಸಿಕ್ಕಿ ಹಾಕಿಕೊಳ್ಳುವ ಸಂಜಯನ ಅಸಹಾಯಕತೆಗೆ ಖಾಸಾ ಗೆಳೆಯ ಜಗನ್ನಾಥ ಆಸರಾಗುತ್ತಾನೆ. ಇಲ್ಲಿ ಊರಿನ ಬೇರೊಂದು ಒರತೆಯಾಗಿ ನಿಲ್ಲುತ್ತದೆ, ಆದರೆ ಊರಿನ ಕೊಂಡಿಯನ್ನೇ ಕಳಚಿಕೊಂಡ ಮತ್ತೊಂದು ಪಾತ್ರದ ತಳಮಳಕ್ಕೆ ಜಗನ್ನಾಥ ಜಕ್ಕೂಜಿಯಾಗಿ ವರ್ತಿಸುತ್ತಾನೆ. ಅರೆಸ್ಟ್ ಹಿಮ್ ಎಂಬ ಸೂಚನೆ ಸಾಕು. ಆಸರಿಲ್ಲದ ಬಳ್ಳಿ ಯಕಃಶ್ಚಿತ್ ಹುಳುವಾಗಿ ಜೇಡರ ಬಲಿಯೊಳಗೆ ಸಿಕ್ಕಿಬೀಳುತ್ತದೆ.
ಸಾಮಾನ್ಯನೊಬ್ಬ ವ್ಯವಸ್ಥೆಗೆ ವ್ಯಂಗ್ಯವಾಗಿ, ತುಘಲಕನಿಗೆ ಪ್ರತಿಯಾಗಿ -ಆಝೀಜ್- ಕಾಣಿಸಿಕೊಳ್ಳುವ ನಾಟಕೀಯತೆ ಇಲ್ಲಿ ಧ್ವನಿಸುವ ಶೇಖರನಲ್ಲಿ ಸಾಧ್ಯವಾಗದಿರುವುದು ಮೋಜಾಗಿದೆ. ಆತ ಬಂಧನಕ್ಕೊಳಗಾಗಿದ್ದಾನೆ. ನಿದ್ದೆಗೆ ಜಾರಿರುವ, ಕಿವುಡಾಗಿರುವ ಅನುಕಂಪಕ್ಕೆ ತನ್ನ ಹೊಸಹೊಸ ರೂಪದ ಕತೆಗಳನ್ನ ಹೇಳಿಕೊಳ್ಳುತ್ತಲೇ ಇರುವಾಗ ಥಟ್ಟನೆ ಕತ್ತಲಾವರಿಸಿಕೊಳ್ಳುವವರೆಗೂ ಸಾಧ್ಯತೆಗಳನ್ನ ಹುಡುಕುತ್ತ ಹೋಗುತ್ತಾನೆ. ಬಿಗಿಯಾದ ನಾಟಕದ ಬಂಧದಲ್ಲಿ ಶಹರ ಜೀವನಕ್ರಮ ಬೋಗಸ್ ಆಗಿ ದಾಖಲಾಗುತ್ತದೆ. ಒಟ್ಟು ಈ ಕಾಲಘಟ್ಟದ ಅತಂತ್ರ ಅಸ್ಥಿರತೆಯನ್ನು, ಪೊಳ್ಳುತನದ ಪುರಾಣವನ್ನು ನಾಟಕ ಆಪ್ತವಾಗಿ ಚಿತ್ರಿಸುತ್ತದೆ.
————-ಮಹಾದೇವ ಹಡಪದ.

ಸುರಕೋಡ ಮಾಸ್ತರರು ನನ್ನ ಕಣ್ಣಲ್ಲಿ


 

 

ಮಹದೇವ ಹಡಪದ್

ನಮ್ಮೂರಿನಲ್ಲಿ ನನಗೆ ಸಿಕ್ಕ ಎರಡು ಆದರ್ಶಗಳು ಅಂದರೆ ಒಬ್ಬರು ವಿ.ಪಿ.ಕುಲಕರ್ಣಿ ಮತ್ತೊಬ್ಬರು ಹಸನ್ ನಯೀಂ ಸುರಕೋಡರು. ಒಂದು ಸಣ್ಣ ಗೂಡಂಗಡಿಯ ಯಜಮಾನ ಕನ್ನಡ ಸಾಹಿತ್ಯಲೋಕದಲ್ಲಿ ಗುರುತಿಸಿಕೊಂಡಿರುವ ಹೆಸರಾಂತ ಅನುವಾದಕರು ಹೌದು ಎಂದು ಯಾರೋ ಹೇಳಿದರು. ವಿಚಿತ್ರವೆಂದರೆ ಆ ವ್ಯಕ್ತಿಯನ್ನು ಸೋಮುವಾರ ಹೊರತುಪಡಿಸಿ ವಾರದ ಆರು ದಿನವೂ ಗ್ರಂಥಾಲಯದಲ್ಲಿ ನೋಡುತ್ತಿದ್ದೆ ಆದರೆ ಅವರೆ ಸುರಕೋಡರು ಅನ್ನೋದು ಗೊತ್ತಾದದ್ದು ತುಂಬ ತಡವಾಗಿ.

ಆ ಸರಳವಾದ ಮನಸ್ಸು ಅದೇನನ್ನೋ ಧೇನಿಸುತ್ತ, ಗ್ಯಾನದೊಳಗಿನ ಏಕಾಂತದ ಶೃತಿ ಹದ ಮಾಡುತ್ತಲೆ ಮಾಡಬೇಕಾದ ಅದೆಷ್ಟೋ ಅನುವಾದದ ಕೃತಿಗಳನ್ನು ಜಪಿಸುತ್ತಿರುತ್ತದೆ. ಅವರ ಸಜ್ಜನಿಕೆ-ಪರಿಚಿತರು ಎದುರಾದಾಗ ತಲೆಯೆತ್ತಿ ಕೊಂಚವೇ ತುಟಿ ಅಗಲಿಸಿ ನಗಾಡುವ ಅವರ ನಗು ಮತ್ತು ಮೆದು ಮಾತುಗಳು ಸೃಜನಶೀಲ ಮನಸ್ಸಿನ ಒಂದು ಭಾಗವಾಗಿ ಕಾಣತೊಡಗುತ್ತವೆ. ನಾನು ರಾಮದುರ್ಗಕ್ಕೆ ಹೋದಾಗೊಮ್ಮ ಅವರನ್ನು ಭೇಟಿಯಾಗಲೂ ಇಡಿಕಿರಿದಾದ ಆ ಸಂದುಗೊಂದುಗಳಲ್ಲಿಳಿದು ಮಡ್ಡಿ ಓಣಿಯ ಅವರ ಮನೆಗೆ ಹೋಗಿಬರುತ್ತೇನೆ. ಹೋದಾಗಲೆಲ್ಲ ಒಂದೀಟು ಬಿಡುವಿಲ್ಲದೆ ಹೈರಾಣದವರ ಹಾಗೆ ಕಾಣುವ ಅವರು ನನ್ನ ಕಂಡೊಡನೆ ನನ್ನದೇ ವಯಸ್ಸಿಗಿಳಿದು ಮಾತಾಡಲು ಹವಣಿಸುತ್ತಾರೆ….

ಅವರ ಮುಂಗಾರು ಪತ್ರಿಕೆಯಿಂದ ಹಿಡಿದು ಇಂದಿಗೆ ಓದುತ್ತಿರುವ ಇಲ್ಲವೇ ಅನುವಾದಿಸುತ್ತಿರುವ ಕತೆಗಳ ಬಗ್ಗೆ ಗಂಟೆಗಟ್ಟಲೆ ಮನಸು ಬಿಚ್ಚಿ ಮಾತಾಡುತ್ತಾರೆ. ಬಿ.ಸಿ.ದೇಸಾಯಿ, ಮಹದೇವಪ್ಪ ಪಟ್ಟಣ, ನಿಲಗಂಗಯ್ಯ ಪೂಜಾರ, ಗೋಪಾಲಗೌಡ್ರು, ಲೋಹಿಯಾ, ಮಧುಲಿಮಯೆ, ಕರ್ಪೂರಿ ಠಾಕೂರ, ಹೆಬ್ಬಳ್ಳಿ ರೈತ ಹೋರಾಟ, ರಾಮದುರ್ಗ ದುರಂತ, ರಾಮದುರ್ಗ ಆಸ್ಥಾನ ದೇಸಾಯಿಯ ಪಿಸ್ತೂಲು ಹೀಗೆ ನಾನು ಸಿಕ್ಕಾಗಲೆಲ್ಲ ಒಂದೊಂದು ಕತೆ ಹೇಳಿ, ಕೆಲ ಪತ್ರಿಕೆಗಳಿಗೆ ಚಂದಾದಾರನನ್ನಾಗಿ ಮಾಡಿ ನನ್ನ ಅಕ್ಷರ ಲೋಕವನ್ನು,ಓದನ್ನು ವಿಸ್ತರಿಸಿದ ಗುರುಗಳು ಹಸನ್ ನಯೀಂ ಸುರಕೋಡರು.

ನಾನೊಮ್ಮೆ ನಮ್ಮ ಪುಟ್ಟ ನಾಟಕ ತಂಡವನ್ನು ಬೆನ್ನಿಗಂಟಿಸಿಕೊಂಡು ಯಾರ ನೆರವಿಲ್ಲದೆ ರಾಮದುರ್ಗದ ತಾಲ್ಲೂಕ ಆಫಿಸಿನ ಸಭಾಭವನದಲ್ಲಿ ನಾಟಕ ಪ್ರದರ್ಶನಕ್ಕಾಗಿ ಹೋಗಿದ್ದೆ. ನಾವು ಆಡುವ ನಾಟಕ “ಅಕ್ರಮ ಸಂತಾನ”. ನನ್ನೂರಿನಲ್ಲಿ ನಾನೇ ಅಪರಿಚಿತನಾಗಿ ಉಳಿದಿದ್ದ ಹೊತ್ತಲ್ಲಿ ಸುರಕೋಡ ಸಾರ್ ನೈತಿಕ ಬೆಂಬಲ ನೀಡಿದರು. (ಹಂಗ ನೋಡಿದರ ನನ್ನನ್ನ ನಾಟಕಕ್ಕ ಕಳಿಸಿದ್ದು ಅವರೆ) ಆ ಊರಿನಲ್ಲಿ ಒಂದಿಲ್ಲೊಂದು ಸಮಾಜವಾದಿ ಚಿಂತನೆಯ ಕಾರ್ಯಕ್ರಮಗಳನ್ನು ಆಗಾಗ ಹಮ್ಮಿಕೊಳ್ಳುತ್ತಲಿರುತ್ತಾರೆ. ಅಲ್ಲಿಯೇ ನಾನು ಸಿದ್ದನಗೌಡರನ್ನು, ತರೀಕೆರೆಯವರನ್ನು, ಭಟ್ಟರನ್ನು ಭೆಟ್ಟಿ ಮಾಡಿದ್ದು. ಸಮಾಜವಾದದ ಪುಟ್ಟ ಓಯಾಸಿಸ್ ಥರ ಕೆಲಸ ಮಾಡುವ ಅವರ ಬಳಗ ಈಗಲೂ ಅದೇ ಉತ್ಸಾಹದಲ್ಲಿ ಕೆಲಸ ಮಾಡುತ್ತಿರುತ್ತದೆ. ಬದುಕು ಹಣ್ಣಾದಂತೆ ಪಾತ್ರಕ್ಕೆ ಜೀವ ಬರುತ್ತದಂತೆ ಹಾಗೆ ಸುಸ್ತಾಗದ ಸುರಕೋಡ ಸರ್ ಕೆಲವೊಮ್ಮೆ ರಾತ್ರಿಯಿಡೀ ಓದಿ-ಬರೆದು ಹಗಲು ಮಲಗುತ್ತಾರೆ. ಅವರ ಭಾವದೊಳಗೆ ಅದೆಷ್ಟೋ ಬರಹಗಾರರು ಅನುವಾದಗೊಳ್ಳಬೇಕಿದೆ, ಅದೆಷ್ಟೋ ಚಿಂತನೆಗಳಿಗೆ ಕನ್ನಡತನ ತುಂಬಬೇಕಿದೆ…. ಅವರು ಕಂಡ ದರ್ಶನದಲ್ಲಿ ಬದುಕಿ ಬಾಳಿದ ಕಥನವೂ ಅವರಿಂದ ಆತ್ಮಕತೆ ರೂಪದಲ್ಲಿ ಬರಬೇಕಿದೆ ಎಂದು ಬಯಸುತ್ತೇನೆ.

ಅವರ ಮೌನದ ಧಾಟಿಯೊಳಗೆ ಸಾಹಿರ್ ಲುಧಿಯಾನ್ವಿ, ಫೈಜ್ ಅಹ್ಮದ್ ಫೈಜ್, ರಾಗಾವಾಗಿ ಒಲಿಯುತ್ತಿರುತ್ತಾರೆ. ಪ್ರೀತನ ಭಾವಲೋಕದೊಳಗೆ ತಲ್ಲೀನಗೊಂಡವರಂತೆ ಕಾಣುತ್ತಾರೆ. ನನ್ನೊಳಗೆ ಸಮಾಜವಾದದ ಕನಸು ಬಿತ್ತಿದ ಅವರ ಬದುಕು ಮತ್ತು ಬರಹ ಒಂದಕ್ಕೊಂದು ಹೆಣೆದುಕೊಂಡಿದ್ದಾವೆ. ಈ ದಿನ ಆಕಸ್ಮಾತ್ತಾಗಿ ಫೇಸಬುಕ್ಕಿನ ಮೂಲೆಯಲ್ಲಿ ಅವರ ಫೋಟೋ ಕಂಡಾಗ ಎಲ್ಲಿಲ್ಲದ ಖುಷಿಯಾಗಿ ಫೋನಾಯಿಸಿ ಮಾತಾಡಿದಾಗಲೂ ಅದೇ ಧಾಟಿಯ ಮಾತುಗಳು ಮತ್ತೆ ಬಂದವು. ‘ಚಿಂತನ’ಕ್ಕಾಗಿ ಫೈಜ ಅವರ ಕುರಿತಾದ ಪುಸ್ತಕ ಅನುವಾದಿಸುತ್ತಿದ್ದಾರೆ.

ಜಂಗಮದ ಹಳ್ಳಿ


ಜಂಗಮದ ಬದುಕು
ಹೌದು, ಹೆಗ್ಗೋಡು ಬಲ್ಲವರು ಎಡ ಬಲ ಕಣ್ಣುಗಳನ್ನ ಉಜ್ಜಿಕೊಂಡು ಓಡಾಡುವುದು, ಪ್ರತಿಕ್ರಿಯಿಸುವುದು ನಿರಂತರವಾಗಿ ನಡೆದುಕೊಂಡು ಬಂದಿರುವುದು ಕಾಣುತ್ತದೆ. ಹಾಗೇ ಹೂತುಕೊಂಡಿರುವ ಕಣ್ಣ ಧೂಳನ್ನ ಒರೆಸಿಕೊಂಡೂ ನೋಡುವ ಪ್ರತಿಕ್ರಿಯೇ ಅದೇ ಊರಿನ ಒಂದು ಹಾದಿಯಲ್ಲಿ ಬೆಳೆದು ನಿಂತಿರುವುದು ಆ ಊರನ್ನು ಬಲ್ಲವರು ತಿಳಿದಿರುತ್ತಾರೆ. ಅದು ಅಪ್ಪಟ ಗಾಂಧಿತನ ಮೈಗೂಡಿಸಿಕೊಂಡ ಸಂಸ್ಥೆ. ಹೆಣ್ಣುಮಕ್ಕಳು ಕಟ್ಟಿ ಬೆಳೆಸಿದ ಆ ಸಂಘಟನೆಯ ಹಿಂದೆ ಕನ್ನಡದ ನಾಟಕಕಾರ ನಿರ್ದೇಶಕ ಪ್ರಸನ್ನ ಅವರ ಬೆಂಬಲವಿರುವುದು ಸ್ಪಷ್ಟ. ಈಗ ಆ ಸೀಮೆ ಸೆರಗಿನಲ್ಲಿ ಯಾವ ಹೆಣ್ಣಮಕ್ಕಳೂ ಕೆಲಸ ಹುಡುಕಿ ಮಹಾನಗರಗಳತ್ತ ಹೋಗುವುದಿಲ್ಲ. ಇನ್ನೊಂದು ಹಾದಿಯಲ್ಲಿ ಕಾಡ ಹರಟೆಯ ಕಟ್ಟೆಯಲ್ಲಿ ಬಾಯ್ತುಂಬ ಕವಳ ತುಂಬಿಕೊಂಡು ಒಬ್ಬರನ್ನೊಬ್ಬರು ಕೆಣಕುತ್ತ ಕಿಚಾಯಿಸುತ್ತ ಸಮಾಕಾಲೀನವಾದ ಆಗುಹೋಗುಗಳನ್ನ ಮೇಲ್ಮಟ್ಟದಲ್ಲಿಯೆಂಬಂತೆ ಮಾತಾಡಿಕೊಂಡು ಅದರ ಆಳಾಳ ಪಾತಾಳದ ತನಕ ಹೋಗಿ ಬರುತ್ತಾರೆ. ಅದೊಂದು ಭಾಷೆಯ ಜೊತೆ ಅವರ ಒಡನಾಟ ಸಂಜೆ ಏಳೆಂಟರ ವರೆಗೆ ನಡೆದಿರುತ್ತದೆ. ಆ ಊರಿನ ರೈತ ಸಮುದಾಯದವರು ಅಲ್ಲಿಗೆ ಬಂದು ಹೋಗುವ ಗಂಭಿರ ವದನದ ಭಾರೀ ಬುದ್ಧಿಜೀವಿಗಳ ತರ್ಕವನ್ನೂ ಮತ್ತೂ ಜನಪ್ರಿಯ ಮುಖ್ಯವಾಹಿನಿಯ ನಟರನ್ನೂ ಅಲ್ಲದೆ ನಾಟಕ ಕಲಿಯಲು ಬರುವ ವಿದ್ಯಾರ್ಥಿಗಳನ್ನು ತುಂಬ ಗೌರವದಿಂದಲೇ ಮಾತಾಡಿಸುವುದನ್ನ ಕಂಡಾಗ ನನಗೆ ಮೊದಲ ಸಲ ಬ್ರಾಹ್ಮಣರೊಳಗೂ ಮನುಷ್ಯರ ಥರದವರಿರುತ್ತಾರೆ ಅನ್ನಿಸಿತ್ತು. ನನಗೆ ಹೆಗ್ಗೋಡು ಕಾಣಲು ಸಿಕ್ಕಿದ್ದು ಈ ಕ್ಯಾಮರಾ ಕಣ್ಣಿಂದ…
ನಾಟಕ, ಸಾಹಿತ್ಯ, ಚಲನಚಿತ್ರ ಮತ್ತು ಸಂಸ್ಕೃತಿ ಶಿಬಿರ, ಚರಕ, ಅರಿವೆ,ಅಕ್ಷರ ಪ್ರಕಾಶನ. ಇದಲ್ಲದೆ ಗುಡಿಕೈಗಾರಿಕೆ ಆದಿಯಾಗಿ ಹೆಗ್ಗೋಡು ಕನ್ನಡದ ಒಂದು ಸಾಂಸ್ಕೃತಿಕ ಲೋಕವನ್ನು ತನ್ನೊಡಲೊಳಗೆ ಹುದುಗಿಸಿಕೊಂಡಿರುವ ಊರೂ ಹೌದು. ಆ ಊರಿನ ಪ್ರಮುಖ ಸಮುದಾಯದ ಒಬ್ಬ- ಗುಜರಿ ಸಾಮಾನು ವ್ಯಾಪಾರದಿಂದ ಹೊಟ್ಟೆ ತುಂಬಿಕೊಳ್ಳುತ್ತಾನೆ. ಈಗ್ಗೇ ಕಳೆದ ಕೆಲ ವರ್ಷಗಳ ಹಿಂದೆ ಅಲ್ಲೊಬ್ಬ ಮೋಕ್ಷದ ಕಳ್ಳ “ನಾಲ್ಕನೆ ಕಳ್ಳ” ಎಂದು ತನ್ನ ಸೈಕಲ್ಲಿಗೆ ಬೋರ್ಡು ನೇತ ಹಾಕ್ಕೊಂಡು ತಿರುಗುತ್ತಿದ್ದ ಆಸಾಮಿ ಇದ್ದನಂತೆ. ನೋಡಿ ಅದೊಂದೇ ಊರಿನಲ್ಲಿ ಪೂರ್ಣಾವಧಿಯ- ನೀನಾಸಂ ತಿರುಗಾಟ, ಕಿನ್ನರ ಮೇಳ ಎಂಬ ರೆಪರ್ಟರಿಗಳೂ ಮತ್ತು ಜನಮನದಾಟ, ಚರಕ ಎಂಬ ಎರಡು ಅರೆಕಾಲಿಕ ನಾಟಕ ತಂಡಗಳೂ ಇದ್ದಾವೆ. ನೀನಾಸಮ್ ಊರು ಮನೆ ಉತ್ಸವ ಆರಂಭವಾದಾಗಿನಿಂದ ಸುತ್ತಲಿನ ಹಳ್ಳಿಗಳು ಸಹ ತಮ್ಮೂರಲ್ಲಿ ಒಂದೊಂದು ನಾಟಕ ತಂಡ ಕಟ್ಟಿಕೊಂಡಿದ್ದಾರೆ. ಹಾಗಾಗಿ ಕ್ರಿಯಾಶೀಲವಾಗಿ ತನ್ನನ್ನು ತಾನು ಜಂಗಮದಂತೆ ಇಡೀ ಊರಿನ ಆತ್ಮವನ್ನು ಪೋಷಿಸಿಕೊಂಡು ಬಂದ ಹಳ್ಳಿ ಅಂದ್ರೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹೆಗ್ಗೋಡ ಒಂದೆ ಎನ್ನಬಹುದಾಗಿದೆ. ಹ್ಯಾಟ್ಸಪ್ ಸುಬ್ಬಣ್ಣ… ನಿಮ್ಮ ಕನಸಿನ ಹೆಗ್ಗೋಡು ನೀವು ಕಂಡ ಕನಸಿನ ಆಚೀಚೆ ಸರದಾಡಿ ನಿಮ್ಮ ದಾರಿಯಲ್ಲೇ ನಾಡೆವ ಮಾರ್ಗ ಹಾಕಿಕೊಟ್ಟಿದ್ದೀರಿ. ಹಳ್ಳಿಯ ಜಂಗಮದ ಬದುಕು ಸಾರ್ಥಕವಾಗಿದೆ.
—-ಅಮಾಸ