ಅಮ್ಮನ ನೆನೆವ ನೆಪದಲ್ಲಿ ಬಾಬಾಸಾಹೇಬರ ವ್ಯಕ್ತಿತ್ವ – ಮಿಸಸ್ ಅಂಬೇಡ್ಕರ್


ಹೌದು..!
ಅಂಬೇಡ್ಕರ್ ವ್ಯಕ್ತಿತ್ವವನ್ನು ಪಾತ್ರವಾಗಿಸಿ ರಂಗದ ಮೇಲೆ ತರುವುದು ಸಾಮಾನ್ಯದ ಮಾತಲ್ಲ. ಅವರ ಬಾಹ್ಯದ ಆಕಾರ, ಚಲನೆ, ಆಕ್ರೋಶ, ಹೋರಾಟದ ತೀವ್ರತೆ ಮತ್ತು ಒಂದು ಕೈಯಲ್ಲಿ ಸಂವಿದಾನವನ್ನು ಹಿಡಿದು ಇನ್ನೊಂದು ಕೈಯ ತೋರುಬೆರಳು ತೋರಿಸುವ ಭಂಗಿಯಲ್ಲಿ ಬಾಬಾಸಾಹೇಬರು ನಟರಿಗೆ ದಕ್ಕಲಾರರು. ಅವರ ಪಾತ್ರವನ್ನು ರಂಗಕ್ಕೆ ತರುವುದಾದರೆ ಆ ಪ್ರಪಂಚದ ಖಾಸಗಿ ಬದುಕಿನ ಒಡಲ ಝರಿಯ ನಿನಾದವನ್ನು ನಟ ಕೇಳಿಸಿಕೊಳ್ಳಬೇಕಾಗುತ್ತದೆ. ಆ ನಾದದಲ್ಲಿ ಮೀರಾಬಾಯಿ, ರಾಮಜೀ ಸಕ್ಪಾಲ್, ರಮಾಬಾಯಿ, ಯಶವಂತರಾವ್, ಸವಿತಾ ಇದ್ದಾರೆ. ಅಲ್ಲದೆ ಇವತ್ತಿಗೆ ತಕ್ಕಂತೆ ಅವರ ಬರಹ ಭಾಷಣಗಳನ್ನು ಓದಿಕೊಳ್ಳಬೇಕಾಗುತ್ತದೆ. ಇಲ್ಲವೇ ಕ್ರಾಂತಿಕಾರಕ ಸಂವಾದವನ್ನು ಏರ್ಪಡಿಸಲು ಸಾಧ್ಯವಾಗುವ ರೀತಿಯಲ್ಲಿ ಗಾಂದಿಯ ವಿರೋಧಿಯಾಗಿ ರಂಗದ ಮೇಲೆ ತರಬೇಕಾಗುತ್ತದೆ. ಈವರೆಗಿನ ರಂಗಭೂಮಿಯ ಇತಿಹಾಸದಲ್ಲಿ ಅಂಬೇಡ್ಕರ್ರ ಕುರಿತಾಗಿ ಆಗಿರುವುದು ಇಷ್ಟೇ.
ಆದರೆ
ಕರುಣೆ ಮತ್ತು ಸ್ವಾಭಿಮಾನಗಳನ್ನು ಸಮತಕ್ಕಡಿಯಲ್ಲಿಟ್ಟು ತೂಗುವುದು ಬಹಳ ಕಷ್ಟದ ಕೆಲಸ… ಆ ಎರಡೂ ಭಾವಗಳು ಕಾಲದ ಹದದಲ್ಲಿ ಸಮವಾಗಿ ಬೇಯುತ್ತ ಒಮ್ಮೊಮ್ಮೆ ಬಾಗುತ್ತಲೂ ಬಳಕುತ್ತಲೂ ನ್ಯಾಯ ನಿಷ್ಠುರ ಸತ್ಯಕ್ಕಾಗಿ ಹಂಬಲಿಸುತ್ತಲೂ ಅಗಾದವಾದ ಚೈತನ್ಯದ ಬೆಳಕನ್ನು ಹುಡುಕುತ್ತಿರುತ್ತವೆ. ಗಾಂಧಿಯ ಅಂತಃಕರಣದ ಒಡಲೊಳಗಿನ ತೃಪ್ತಿ ಅಂಬೇಡ್ಕರ್ರ ಅತೃಪ್ತ ಒಡಲೊಳಗಿನ ಕಿಚ್ಚು ಸಮರಸಗೊಳ್ಳುವ ಮೊದಲು ಅಂಬೇಡ್ಕರರ ಅಂತಃಕರಣದ ಭಾವವನ್ನು ಶೋಧಿಸಿಕೊಳ್ಳುವ ಅಗತ್ಯವಿದೆ. ಅಲ್ಲಿ ಬುದ್ಧನೂ ಇದ್ದಾನೆ, ಜ್ಯೋತಿಬಾ-ಸಾವಿತ್ರಿಯರೂ ರಮಾಬಾಯಿಯೂ ಇದ್ದಾರೆ.
ಈವರೆಗಿನ ನಾಟಕಗಳಲ್ಲಿ ಅಂಬೇಡ್ಕರ್ರ ಸಮಗ್ರ ಜೀವನ ಇಲ್ಲವೆ ರಾಜಕೀಯ, ಸಾಮಾಜಿಕ ಸಂದರ್ಭಗಳಿಗೆ ಹೋಲಿಕೆಯಾಗುವ ಒಂದಷ್ಟು ಭಾಗಗಳು ಮಾತ್ರ ನಾಟಕ ಸಾಹಿತ್ಯದಲ್ಲಿ ಸಿಕ್ಕುತ್ತವೆ. ಅವರ ಅಂತಃಕರಣದ ಭಾವಕೋಶ ತೆರೆದುಕೊಳ್ಳುವ ಭಾಗವೆಂದರೆ ಬಹುಶಃ ಅದು ಅವರು ಪ್ರೀತಿಂದ ಕರೆಯುತ್ತಿದ್ದ ರಾಮು ಒಬ್ಬರೆ. ಆ ತೂಕದ ಮನುಷ್ಯನ ವ್ಯಕ್ತಿತ್ವವೇ ಅಂಥದ್ದು… ಆ ಹೋರಾಟದ ಸಾಗರದಲ್ಲಿ ರಮಾತಾಯಿಯ ಕಣ್ಣೀರೂ ಸಾಥ್ ನೀಡಿದೆ. ನಿಜವಾಗಿಯೂ ಬಾಬಾಸಾಹೇಬರು ರಮಾಬಾಯಿಯವರಿಗೆ ಒಂದೊಂದು ಸೂಕ್ಷ್ಮಗಳನ್ನು ಅಥರ್ೈಸುತ್ತ ತಾವೇ ಅರಿತುಕೊಳ್ಳುತ್ತ ಭಾರತದ ಸಾಮಾಜಿಕ ದಿಸೆಯನ್ನು ಬದಲಿಸುವ ಚಳುವಳಿ ಕಟ್ಟಿದರು. ಆಯಿಯ ಕರುಣೆಯ ಆಪ್ನಲ್ಲಿ ಸ್ವಾಭಿಮಾನವನ್ನು ಹದಗೊಳಿಸಿದರು. ಬಹಳ ಮುಖ್ಯವಾದ ನಿಯಂತ್ರಣ ಶಕ್ತಿ ಅವರಲ್ಲಿ ಇದ್ದುದರಿಂದಾಗಿ ಅವರು ಸ್ವಾಭಿಮಾನಿ ಹೇಗೋ ಹಾಗೆ ಅಂತಃಕರಣದ ಮೂತರ್ಿಯೂ ಆಗಿದ್ದರು. ಡಾ. ಸಿದ್ರಾಮ ಕಾರಣಿಕ ಅವರ ‘ಮಿಸೆಸ್ ಅಂಬೇಡ್ಕರ್’ ನಾಟಕ ಬಾಬಾಸಾಹೆಬರ ಈ ಕರುಣಾಮಯಿ ವ್ಯಕ್ತಿತ್ವದೊಂದಿಗೆ ಹೋರಾಟದ ಚಿತ್ರಣವನ್ನು ಕಟ್ಟಿಕೊಡುತ್ತದೆ.
ಪನವೇಲದ ವಿದ್ಯಾಥರ್ಿ ನಿಲಯದ ಉದ್ಘಾಟಣೆ ಸಮಾರಂಭದಲ್ಲಿ ಭಾಷಣ ಮಾಡುತ್ತಿರುವಾಗ ಒಂದು ಚೀಟಿ ಬರುತ್ತದೆ. ಆ ಕಾಗದವನ್ನು ತೆರೆದು ಓದುತ್ತಿದ್ದಂತೆ ಬಾಬಾಸಾಹೇಬರ ಮಾತು ಕಟ್ಟಿಹೋಗುತ್ತದೆ. ರಮಾಬಾಯಿಯವರ ಆರೊಗ್ಯದಲ್ಲಿ ಏರುಪೇರಾಗಿದೆ ಎಂಬ ಸೂಚನೆ ಆ ಚೀಟಿಯಲ್ಲಿರುತ್ತದೆ. ಸಭಾಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಿ ರಾಜಗೃಹಕ್ಕೆ ಧಾವಿಸಿ ಬರುವ ಕರುಣೆಯ ಸೆಳೆತದಿಂದ ನಾಟಕ ಆರಂಭವಾಗುತ್ತದೆ.. ಆಕೆಯ ಬದುಕಿನ ಚಿತ್ರಗಳು ಒಂದೊಂದೆ ಪೋಣಿಸಿಕೊಳ್ಳುತ್ತ ಹೋಗುವ ನಾಟಕದ ವಿನ್ಯಾಸ ಸೊಗಸಾಗಿದೆ. ಸೂತ್ರಧಾರ ಇತಿಹಾಸದ ಪ್ರತೀಕವಾಗಿ ಆ ಕಾಲದ ಕತೆಯನ್ನು ಹೇಳುತ್ತ ಹೋದಂತ ೆ ಶಿಷ್ಯ ಈ ಕಾಲದ ತಲೆಮಾರಿನಂತೆ ಕತೆ ಕೇಳುತ್ತ ಹೋಗುತ್ತಾನೆ. ಈ ಎರಡು ಪಾತ್ರಗಳು ಅಜ್ಜ-ಮೊಮ್ಮಗನಂತೆ ಇಡೀ ನಾಟಕವನ್ನು ನಿರೂಪಿಸುತ್ತವೆ. ಆದರೆ ಸೂತ್ರಧಾರ-ಶಿಷ್ಯರೆಂಬ ಪರಿಕಲ್ಪನೆ ಇಡೀ ನಾಟಕವನ್ನು ಹೀಗೆ ನೋಡು ಹೀಗೆ ಹೀಗೆ ಅಥರ್ೈಸಿಕೊಳ್ಳಬೇಕು ಎಂಬಂತೆ ಹೆಜ್ಜೆಹೆಜ್ಜೆಗೂ ಕಾಣಿಸಿಕೊಳ್ಳುತ್ತವೆ. ಸೂತ್ರಧಾರರ ಲಘುದಾಟಿಯ ಆಡುನುಡಿ, ಸಂದರ್ಭದ ವಿವರಗಳು ಇಡೀ ನಾಟಕದಲ್ಲಿ ಹೊರಗಿನಿಂದ ತೂರಿಸಲ್ಪಟ್ಟದ್ದಾಗಿದೆ.
ರಮಾಬಾಯಿ ಅಂಬೇಡ್ಕರ್ರ ಓದು-ಅಧ್ಯಯನ, ಹೋರಾಟಗಳನ್ನು ತನ್ನೆಲ್ಲ ಸಂಸಾರದ ಸಂಕಟಗಳನ್ನು ನುಂಗಿಕೊಂಡು ಮುಗ್ಧವಾಗಿ ನೋಡುತ್ತಾಳೆ ಕೆಲವೊಮ್ಮೆ ಆಕ್ರೋಶಭರಿತಳಾಗಿ ಸೆಡವು ಮಾಡುತ್ತಾಳೆ. ಇದು ನಾಟಕೀಯಗೊಳ್ಳುತ್ತ ಹೋಗುವ ಕಾರಣದಿಂದ ಬಾಬಾಸಾಹೇಬರ ವ್ಯಕ್ತಿತ್ವ ಬೇರೆಯದೆ ಮಾರ್ಗದಲ್ಲಿ ಓದುಗರನ್ನು ತಲುಪುತ್ತದೆ. ಕೇವಲ ಹಳಹಳಿಕೆ ಅತೃಪ್ತಿಗಳನ್ನಿಟ್ಟುಕೊಂಡು ಹೋರಾಟಕ್ಕಿಳಿಯಲಾರದೆ ಸಮಸ್ಯೆಯ ಆಳದ ಬೇರಿಗೆ ಕೈಹಾಕುವ ಅವರನ್ನು ಆಕೆ ದೈವವೆಂದೇ ಭಾವಿಸುತ್ತಾಳೆ. ಸಾಹೇಬ್ ಯಾವತ್ತಿಗೂ ವಿರಮಿಸದ ಜೀವವೆಂಬುದು ತಿಳಿದಿದ್ದರೂ ಮತ್ತೆಮತ್ತೆ ಸಂಸಾರದ ಗೋಳುಗಳನ್ನೆಲ್ಲ ಹೇಳಿಕೊಳ್ಳಲಾರದೆ ನುಂಗಿಕೊಳ್ಳುವ ಆಕೆಯೊಳಗೆ ಅಂಬೇಡ್ಕರರ ಅಧ್ಯಯನಶೀಲ ಸಹನೆ ಈಕೆಯ ಬದುಕುವ ಸಂಸಾರದ ಬಂಡಿಗೂ ಬಂದುಬಿಡುತ್ತದೆ. ಸರಣಿ ಸಾವುಗಳನ್ನ ಕಂಡ ರಮಾಬಾಯಿ ಸಾವಿಗೆ ಹೆದರಲಾರಳು ಆದರೆ ಗಂಡನ ಜೀವಕ್ಕೆ ಏನಾದರೂ ಆದೀತೆಂಬ ಭಯವಿದೆ. ಇಂಥದೆ ಡಾಕ್ಟರ್ಸಾಹೇಬ್ ಆಯಿಸಾಹೇಬರ ನಡುವಿನ ಆಪ್ತಸಂವಾದದ ಕಥಾಹಂದರವೇ ನಾಟಕದ ಜೀವಾಳವಾಗಿದೆ.

ರಮಾಯಿ : ಸಾಯೇಬ, ಈ ಹೋರಾಟ, ಚಳುವಳಿ ಇವೆಲ್ಲ ಇನ್ನೂ ಬೇಕೇನ್ರಿ ?
ಅಂಬೇಡ್ಕರ್ : ರಾಮೂ, ಹೋರಾಟ ಅನ್ನೂವಂಥದ್ದು ಒಮ್ಮಿ ಮಾಡಿ ಕೈ ತೊಳ್ಕೊಂಡ
ಬಿಡೂವಂಥದ್ದಲ್ಲ. ಈಗ ನಾ ಸುರು ಮಾಡೇನಿ… ಹೋರಾಟದ ಬೀಜ ಬಿತ್ತೇನಿ… ಈಗ
ಅದು ಮೊಳಕಿ ಒಡದೇತಿ… ಇನ್ನ ಮುಂದ ಅದ ಸಸಿ ಆಗ್ಬೇಕು… ಗಿಡಾ ಆಗ್ಬೇಕು…
ಮರಾ ಆಗ್ಬೇಕು… ಮಹಾ ಮರಾ ಆಗಿ ಬೆಳಿಬೇಕು ! ಈ ದೇಶದಾಗ ಇರೂ
ಅಸಮಾನತಾ, ಶೋಷಣಾ ತೊಡದ ಹಾಕಬೇಕು… ಎಲ್ಲಾರೂ ಒಂದ ಅನ್ನೂ ಹಾಡಾ
ಹಾಡಬೇಕ ಮತ್ತ ಅದರಾಂಗನ ನಡ್ಕೋಬೇಕು… ಅಲ್ಲೀತನಾ ನನಗ ಸಮಾಧಾನ ಇಲ್ಲ…
ಸಮಾಧಾನ ಅನಿಸೂದಿಲ್ಲ..

ರಮಾಯಿ : ಸಾಯೇಬ, ಪ್ರತಿ ಸಲಾ ನೀವ ಹೋರಾಟ ಮಾಡೂವಾಗ ನಿಮ್ಮ ಮ್ಯಾಲ ಹಲ್ಲೆ
ಆಗ್ತಾವ ಅನ್ನೂ ಸುದ್ದಿ ಕೇಳೀನ ಎದಿ ಒಡಕೊಂಡ ಹೆಣ್ಣಮಗಳ ನಾ… ಅದಕ್ಕಾಗೇ
ಕೇಳಾಕತ್ತೇನಿ. ಇದೆಲ್ಲಾ ನಮಗ ಬೇಕ ಏನ್ರಿ ?

ಹೀಗೆ ಅವರನ್ನು ಮುಗ್ಧವಾಗಿ ಕೇಳುವ ಪ್ರಶ್ನೆಗಳಿಗೆ ಬಾಬಾ ಸಾಹೇಬರೂ ತಮ್ಮ ತಾತ್ವಿಕ ನಿಲುವುಗಳನ್ನು ಮುವತ್ತೊಂದನೇ ದೃಶ್ಯದಲ್ಲಿ ಚಿತ್ರಿಸಿದ್ದಾರೆ. ಇಡೀ ಹೋರಾಟದ ಹಿಂದಿನ ಸನಾತನದ ಕೆಟ್ಟವಾಸನೆಯ ಚಲನವಲನಗಳನ್ನು ಗಮನಿಸಿರುವ ರೀತಿ, ಆ ರೀತಿಯ ಅಧೀರಗೊಳಿಸುವ ಹುನ್ನಾರಗಳನ್ನು ಎದುರುಗೊಳ್ಳಬೇಕಾಗಿರುವ ದರ್ದನ್ನು ಸಾಧ್ಯಂತ ವಿವರಿಸುವುದು ನಾಟಕಕ್ಕೊಂದು ತೂಕವನ್ನು ಕೊಡುತ್ತದೆ. ಇಂಥದ್ದೊಂದು ಬೆನ್ನ ಕಾಯುವ ಜೀವ ಸತ್ತಾಗ ಬಾಬಾಸಾಹೆಬರೂ ಅಧೀರರಾಗುತ್ತಾರೆ. ವರಳಿಯ ಸ್ಮಶಾಣದಲ್ಲಿ ಮೌನಿಯಾಗಿ ಬೂದಿ ರಾಶಿಯ ಮುಂದೆ ಕುಳಿತು ದುಃಖಿಸುತ್ತಾರೆ. ಆದರೆ ನಾಟಕದಲ್ಲಿ ರಮಾಬಾಯಿಯ ಸಾವಿಗೆ ನಾಟಕವೂ ಮುಗಿಯುತ್ತದೆ. ದುಃಖದ ವಿಷಾದದಲ್ಲಿ ನಾಟಕ ಕೊನೆಗೊಳ್ಳುವುದು ಒಂದು ಅಧ್ಯಾಯವನ್ನು ಬರೆದು ಮುಗಿಸಿದಂತಿದೆ. ಆದರೆ ರಮಾಬಾಯಿ ಅಂಬೇಡ್ಕರರನ್ನು ಜೀವಿತದುದ್ದಕ್ಕೂ ಕಾಡಿದ್ದಾರೆಂಬುದು ಅಲ್ಲಿಗೆ ನಿಂತು ಬಿಡುವುದು ಅರಕಳಿ ಎನಿಸುವುದು.ಬಾಬಾಸಾಹೇಬರು ಆಗೀಗ ಪ್ರೀತಿಯ ರಾಮುಳ ನೆನಪನ್ನು ಆಪ್ತರೊಂದಿಗೆ ಹಂಚಿಕೊಂಡಿದ್ದಾರೆ.
ರಮಾಬಾಯಿ ಧಾರವಾಡದ ವಸತಿನಿಲಯದಲ್ಲಿ ಕೆಲವು ಕಾಲ ತಂಗಿದ್ದರು. ಬಾಬಾಸಾಹೇಬರು ದುಂಡುಮೇಜಿನ ಪರಿಷತ್ತಿಗೆ ಹೋಗುವ ಮೊದಲು ಧಾರವಾಡದ ಹವಾ ಬಹಳ ಚನ್ನಾಗಿದೆ, ರಾಮುಳ ಆರೊಗ್ಯವೂ ಸುಧಾರಿಸುತ್ತದೆಂಬ ಆಸೆಯಿಂದ ವರಾಳೆಯವರೊಂದಿಗೆ ಧಾರವಾಡಕ್ಕೆ ಕಳಿಸಿದ್ದರು. ಒಂದು ಸಲ ಹಾಸ್ಟೆಲ್ಲಿನ ಅಡುಗೆಮನೆಯಲ್ಲಿ ಏನೂ ಪದಾರ್ಥವಿಲ್ಲದ್ದನ್ನು ನೋಡಿದ ಆಯಿಸಾಹೇಬ್ ತಮ್ಮ ಬಂಗಾರದ ಬಳೆಗಳನ್ನ ತೆಗೆದುಕೊಟ್ಟು ರೇಶನ್ ತರಲು ಹೇಳುತ್ತಾರೆ. ರಮಾಬಾಯಿ ಮಿಸಸ್ ಅಂಬೇಡ್ಕರ ಆಗುವುದಕ್ಕಿಂತ ಅವ್ವ ಆಗುತ್ತಾರೆ
ರಮಾಯಿ : ವರಾಳೆ ಮಾಮಾ, ನನಗ ಬೆಳ್ಳಿ-ಬಂಗಾರ, ದಾಗೀನದ ಆಶಾ ಇಲ್ಲ… ! ಉಪವಾಸ
ಇದ್ರ ಏನಾಗ್ತೇತಿ ಅನ್ನೋದನ್ನ ಸ್ವತಾ ಅನುಭವಿಸಿದಾಕಿ ನಾ ! … ಮನಿಸ್ಯಾನ ಹೊಟ್ಟಿಗಿ
ಸರಿಯಾಗಿ ಕೂಳ ಇಲ್ಲನ್ನೂ ಹೊತ್ತಿನ್ಯಾಗ ಈ ದಾಗೀನ ತೊಗೊಂಡ
ಮಾಡೋದಾದ್ರೂ ಏನೇತಿ ಹೇಳರ್ಯಲಾ ? ತೊಗೋರಿ… ಲಗೂ ಮಾಡಿ ಹುಡುಗೋರ
ಊಟದ ವ್ಯವಸ್ಥಾ ಮಾಡ್ರಿ…
ವರಾಳೆ : (ನಡುಗುವ ಕೈಗಳಿಂದ ಬಳೆ ತೆಗೆದುಕೊಳ್ಳುತ್ತ) ಆಯೀಸಾಹೇಬ, ಖರೇ ಅಂದ್ರೂ
ನೀವು ಮಹಾತಾಯಿ… ನೀವ ನಮಗೆಲ್ಲಾ ಅವ್ವ… ನಮ್ಮ ದೊಡ್ಡವ್ವ… ದೊಡ್ಡವ್ವ… !

ರಮಾಬಾಯಿಯ ಅಂಬೇಡ್ಕರರ ಸ್ವಾಭಿಮಾನದ ಹೋರಾಟವನ್ನು ಹತ್ತಿರದಿಂದ ನೋಡುತ್ತ, ಅವರ ವೈಚಾರಿಕ ನಿಲುವುಗಳಿಗೆ ಎದುರಾಗುವ ಫಂಡರಪುರದ ಘಟಣೆಯು, ಒಂದಾದ ಮೇಲೊಮದರಂತೆ ಸಾಯುವ ಕೂಸುಗಳನ್ನು ಸಂಭಾಳಿಸುತ್ತ ಬದುಕಿಗಾಗಿ ಗಂಡನೊಡನೆ ಮುನಿಸಿಕೊಳ್ಳುತ್ತ ಕ್ರಾಂತಿಸೂರ್ಯನ ಹೆಜ್ಜೆಯೊಡನೆ ಸಾಗಿಬರುತ್ತಾಳೆ. ನಾಟಕವು ಹಾಸಿಗೆಯಲ್ಲಿ ಸಾಯುವ ಕೊನೆಯ ಕ್ಷಣದಲ್ಲಿ ಅಂಬೇಡ್ಕರರ ಕೈಹಿಡಿದು ಕುಳಿತ ಭಂಗಿಯಿಂದ ಆರಂಭವಾಗಿ.. ಬಾಲ್ಯ, ಮದುವೆ, ಮಕ್ಕಳು, ಓದು, ನಿತ್ರಾಣದ ಬದುಕು, ಆರೊಗ್ಯ ಹೀಗೆ ರಮಾಬಾಯಿ ಮುಖಾಂತರ ಅಂಬೆಡ್ಕರರ ಜೀವನದಲ್ಲೊಂದು ಪಯಣ ಹೋಗಿಬಂದು ರಮಾಬಾಯಿಯ ಸಾವಿನ ದೃಶ್ಯದಲ್ಲಿ ಕೊನೆಗೊಳ್ಳುತ್ತದೆ.
ಮರಾಠಿ ಮಾತಿನ ಲಯಧಾಟಿಗಳನ್ನ ಪಡಿಯಚ್ಚು ಹೊಯ್ದಂತಿರುವ ಗಡಿಭಾಗದ ಆಡುಭಾಷೆ ನಾಟಕದ ವೈಶಿಷ್ಟ್ಯವಾಗಿದೆ. ಬರೆಯಬೇಕೆಂಬ ಧಾವಂತದಾಚೆಗೆ ರಮಾಯಿ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತ ಅಂಬೇಡ್ಕರರ ಬದುಕನ್ನ ಅನಾವರಣಗೊಳಿಸಿರುವ ಡಾ. ಸಿದ್ರಾಮ ಕಾರಣಿಕರ ಮಿಸೆಸ್ ಅಂಬೆಡ್ಕರ್ ಕನ್ನಡದ ನಾಟಕ ಸಾಹಿತ್ಯದಲ್ಲಿ ಹೊಚ್ಚಹೊಸ ಕೊಡುಗೆಯಾಗಿದೆ. ಆದರೆ ಬದುಕನ್ನು ಸರಳೀಕರಿಸಿದಷ್ಟು ನಾಟಕೀಯತೆ ಕಳೆಗುಂದತ್ತ ಹೋಗುತ್ತದೆ. ವಚನ ಚಳವಳಿಯ ನೇತಾರ ಬಸವಣ್ಣನವರ ಬದುಕು ಮತ್ತು ಆಶಯಗಳನ್ನು ಭಿನ್ನದೃಷ್ಟಿಕೋನಗಳಲ್ಲಿ ನೋಡುವ ನಾಟಕಕೃತಿಗಳು ನಮ್ಮ ಮುಂದೆ ಹಲವಾರು ಇರುವಾಗ ಭಾರತದ ಸಾಮಾಜಿಕ, ರಾಜಕೀಯ ಸ್ವರೂಪವನ್ನು ಬದಲಿಸಿದ ಬಾಬಾಸಾಹೇಬರನ್ನೂ ಇನ್ನಷ್ಟು ಗಟ್ಟಿಗೊಳಿಸಿ ಇವತ್ತಿಗೆ ತಕ್ಕಂತೆ ಅಂಬೇಡ್ಕರರ ಮರುಓದುಗಳನ್ನು ಕಟ್ಟಿಕೊಡಬೇಕಿದೆ. ಬರೀ ನೆನಪುಗಳನ್ನು ಕೆದಕುವುದಕ್ಕಿಂತ ಬೇರೆಯದೇ ಆದ ಅಂಬೆಡ್ಕರರ ಭಾವಲೋಕವನ್ನು ಶೋಧಿಸುವದು ಇಂದಿನ ಅಗತ್ಯವಾಗಿದೆ.
‘ಬಾಬಾಸಾಹೇಬರು ಬೌದ್ಧ ಧರ್ಮ ಸ್ವೀಕಾರ ಮಾಡಿದರು’ ಎನ್ನುವುದಷ್ಟೆ ಒಂದು ನಾಟಕವಾಗಿ ಸಂವಾದಕ್ಕಿಳಿಸಬೇಕಾಗಿದೆ. ಪೂನಾ ಒಪ್ಪಂದ, ಮೂಕನಾಯಕ, ಹಿಂದೂ ಧರ್ಮದ ಒಗಟುಗಳು… ಹೀಗೆ ಅವರು ಮುಂದಿಟ್ಟ ಪ್ರತಿಯೊಂದು ಹೆಜ್ಜೆಗಳೂ ಸಾಂಸ್ಕೃತಿಕ ರೂಪಕಗಳಾಗಿ, ಕಾವ್ಯವಾಗಿ, ಕತೆಯಾಗಿ, ನಾಟಕವಾಗಿ ಮರುಶೋಧಿಸಿದಲ್ಲಿ ಭಾರತದ ಒಂದುಕಾಲದ ಚರಿತ್ರೆಯನ್ನು ಸಾಂಸ್ಕೃತಿಕವಾಗಿ ಒಳಗೊಂಡಂತಾಗುತ್ತದೆ. ಈಗ ಹೊಸ ತಲೆಮಾರಿನ ಯುವ ಬರಹಗಾರರು ಅವರ ಬದುಕು ಮತ್ತು ಚಿಂತನೆಯನ್ನು ಈ ಕಾಲಕ್ಕೆ ತಕ್ಕಂತೆ ಸ್ವೀಕರಿಸುತ್ತಿದ್ದಾರೆ. ಬದುಕನ್ನ ಪುರಾಣೀಕರಿಸುವ ಹುಚ್ಚಿಗಿಂತ ಯಥಾವತ್ ಆ ಸಂದರ್ಭದ ಅನುಭವಗಳನ್ನು ಈ ಹೊತ್ತಿನಲ್ಲಿ ತಲಾಶ್ ಮಾಡುತ್ತಿದ್ದಾರೆ. ಹೆಚ್ಚು ಕಡಿಮೆ ಪೇಶ್ವೆಗಳ ಆಡಳಿತಾವಧಿಯ ನೆನಪುಗಳು ಮತ್ತೇ ಪುಟಿದೇಳುತ್ತಿರುವ ಇವತ್ತಿನ ಭಾರತೀಯ ರಾಜಕೀಯ ಸಂದರ್ಭದಲ್ಲಿ ಇಂದು ಫುಲೆ ದಂಪತಿಗಳು, ಶಾಹೂ ಮಹಾರಾಜರು, ಶಿವಾಜಿರಾವ್ ಗಾಯಕ್ವಾಡರೂ, ದೇಶಮುಖರು, ಕುದ್ಮುಲ್ ರಂಗನಾಥರಾಯರು, ಕಾಕಾ ಖಾಖರ್ಾನೀಸ್, ಬಾಬಾಸಾಹೇಬ ಅಂಬೇಡ್ಕರ್ರನ್ನು ಮತ್ತೆ ಸ್ವೀಕರಿಸುವ ಕಾಲವೂ ಸನ್ನಿಹಿತವಾಗುತ್ತಿದೆ. ಫೋಟೋ, ಪ್ರತಿಮೆಗಳಿಗಿಂತ ಭಿನ್ನವಾದ, ಹೊಗಳಿಕೆ, ತೆಗಳಿಕೆಗಳನ್ನು ಮೀರಿದ ವಸ್ತುನಿಷ್ಠ ಅಂಬೇಡ್ಕರ್ರನ್ನು ಈ ಹೊತ್ತಿಗೆ ತಕ್ಕಂತೆ ಶೋಧಿಸಿಕೊಳ್ಳುವ ಅನಿವಾರ್ಯ ಈ ಕಾಲದ್ದಾಗಿದೆ.
– ಮಹಾದೇವ ಸಾಲಾಪೂರ

Advertisements

ಷಿಟ್ ಬುಲಷಿಟ್ಗಳ ಕಾರ್ಪೋರೇಟ್ ಹಳ್ಳಿಯ ಕತೆ


ದೂರದ ಬ್ರೆಜಿಲ್ ದೇಶದಲ್ಲೊಬ್ಬ ಅಗಸ್ತೋ ಬೋಲ್ ಎಂಬ ಮಹಾಶಯ Oppressed theatre ಪರಿಕಲ್ಪನೆ ಆರಂಭಿಸಿದ. Oppressed theatreನ ಕೆಲವು ಅಂಶಗಳನ್ನು ಇಂಡಿಯಾದ ರಾಜಕೀಯ ಸಂಬಂಧಿ ನಾಟಕಗಳಲ್ಲಿ ಅಲ್ಲಲ್ಲಿ ಕಾಣಬಹುದೆ ಹೊರತು ಸಂಪೂರ್ಣವಾಗಿ ಅಸ್ಮಿತೆಯೊಂದಕ್ಕೆ ಮಾತು ಬಂದು! ಮಾತಾಡಿ, ಹಾಡಿ-ಕುಣಿದು, ತನ್ನ ನೋವು-ಸಂಕಟ ಸಮಜಾಯಿಷಿಗಳನ್ನ ಹೇಳಿಕೊಳ್ಳುವ ನಾಟಕಗಳು ಬಂದಿರಲಿಲ್ಲ. ಕೆಲವು ನಾಟಕಗಳು ಪಾಲಿಟಿಕಲ್ ಥಿಯೇಟರ್ನ ಪ್ರಭಾವದಿಂದ ಮುಖ್ಯವಾದ ಪ್ರಶ್ನೆಗಳ ಹಗ್ಗಜಗ್ಗಾಟವನ್ನೆ ದೊಡ್ಡದು ಮಾಡಿ ಹಳೆಯ ಇಮೇಜಸ್ಗೆ ಹೊಸಬಟ್ಟೆ ತೊಡಿಸಿ ಆಧುನಿಕಗೊಳಿಸಿದ್ದಾವೆಯೇ ಹೊರತು ಹೊಸದೇ ವಿನ್ಯಾಸ ಮತ್ತು ಪರಿಕಲ್ಪನೆಯಲ್ಲಿ ಸ್ವತಂತ್ರವಾಗಿ ರೂಪಿತಗೊಂಡಿಲ್ಲ. ಇದಕ್ಕೆ ಅಪವಾದವೆಂಬಂತೆ ಹವ್ಯಕ ಜನಸಮುದಾಯದ ತಲ್ಲಣಗಳನ್ನಿಟ್ಟುಕೊಂಡು ಕೆ.ವಿ ಅಕ್ಷರ ಅವರು ಸ್ವಯಂವರಲೋಕ ನಾಟಕವನ್ನು ರಚಿಸಿದ್ದಾರೆ. ಆ ನಾಟಕವೂ ಕಟ್ಟಕಡೆಯ ಘಳಿಗೆಯಲ್ಲಿ ಪಫ್ಯರ್ೂಮ್ ಮಿಕ್ಸ್ ಮಾಡಲು ಪ್ರಯತ್ನಿಸಿ ವಿಶ್ವಾತ್ಮಕ ಕೋನದಲ್ಲಿ ನುಣಚಿಕೊಳ್ಳುತ್ತದೆ. ಭಾರತಯಾತ್ರೆ ನಾಟಕವೂ ಇಂತದ್ದೆ ಮತ್ತೊಂದು ಮಜಲಿನಲ್ಲಿ ಸಿಕ್ಕಿಕೊಂಡು ಅಂದುಕೊಳ್ಳುವ ಆಶಯವೂ ನೋಡುವ ನೋಟವೂ ಮುಪ್ಪರಿಗೊಳ್ಳದೆ ಸೊರಗುತ್ತದೆ. ಇನ್ನುಳಿದಂತೆ ಅಸ್ಮಿತೆಯ ಹುಡುಕಾಟಗಳ ಹೂರಣವಿಲ್ಲದ ನಾಟಕಗಳು ಬಂದಿವೆ. ಕನ್ನಡದ ಪ್ರಮುಖ ನಾಟಕಕಾರರೆಂದು ಗುರುತಿಸಿಕೊಂಡಿರುವ ಕೆ. ರಾಮಯ್ಯನವರ ಲೆಟ್ಪಾಲಿತ್ರೈವ್ @ಯಾರೇ ಯಾನೇ ಕೂಗಾಡಲಿ ನಾಟಕದಲ್ಲಿ Oppressed theatre ಪರಿಕಲ್ಪನೆ ಅಚ್ಚುಹೊಯ್ದಂತಿದೆ.
ಜಾಣ್ಮೆಯಿಂದ ತೌಡುಕುಟ್ಟುವ ಗೋಳೀಕರಣದ ಪರಿಣಾಮ ಹಳ್ಳಿಗಳನ್ನು ವ್ಯಾಪಿಸಿಕೊಂಡಿದೆ. ಸಾಂಸ್ಕೃತಿಕ ಜನಜೀವನ, ಸಂಪ್ರದಾಯ, ಅಸ್ಮಿತೆಗಳನ್ನು ಹುಡುಕುವ ಮತ್ತು ಇದಪ್ಪಾ ನಮ್ಮ ಬದುಕು! ಎಂದು ನೆಮ್ಮದಿಯಿಂದ ಬಾಳುತ್ತಿರುವ ಎರಡು ಮಾದರಿಗಳಿವೆ. ಈಗ ಹಳ್ಳಿಗಳ ಬದುಕು ಮಾರ್ಕೇಟಿಂಗ್ ಮಾಡುವುದನ್ನು ಟಿವಿ ಮಾಧ್ಯಮಗಳು ರೂಢಿಸಿಕೊಳ್ಳುತ್ತಿವೆ. ಬದಲಾಗುತ್ತಿರುವುದು ಹಳ್ಳಿಗಳಲ್ಲ ಹಳ್ಳಿಯನ್ನು ಒಲ್ಲದ ಮನಸ್ಸುಗಳು. ಎಲ್ಲವೂ ಕಾಪರ್ೋರೇಟ್ ಆಗುತ್ತಿರುವ ಈ ಹೊತ್ತಿನಲ್ಲಿ ಷಿಟ್ ಯಾವುದು ಬುಲ್ಷಿಟ್ ಯಾವುದೆಂದು ನಿರ್ಧರಿಸಲಾಗದ ಕನ್ಫ್ಯೂಜನ್ನಿನಲ್ಲೆ ಇರುತ್ತೇವೆ. ಅಂಥ ಕನ್ಫ್ಯೂಷನ್ನಿನ ವಿಡಂಬಣೆ ಮತ್ತು ಅಸ್ಮಿತೆಯ ಕುರುಹಾದ ಕೋಣವು ತನ್ನ ಇರುವಿಕೆಯನ್ನು ಗಟ್ಟಿಗೊಳಿಸುತ್ತ ಈ ಹುಸಿಲೋಕದ ಆಡಂಬರದ ಜಂಜಾಟದಲ್ಲಿ ತನ್ನ ಹಪಹಪಿಯ ಇತಿಹಾಸವನ್ನು ಹೇಳುತ್ತ… ಕೊಂದುಕೊಳ್ಳುತ್ತಿರುವ ತನ್ನತನವನ್ನು ಸೈರಿಸಿಕೊಳ್ಳುತ್ತ, ತಿಪ್ಪನ ಭಾಷೆಯನ್ನ ಕಲಿತುಕೊಳ್ಳುತ್ತ, ಮಾಡರ್ನಿಟಿಯ ಮಧ್ಯದ ಕುತೂಹಲಕಾರಿ ಪ್ರಾಣಿಯಾಗಿ ಉಳಿಯದೆ ಕಾಲದ ಕುಲುಮೆಯ ಸಂತಾಪವನ್ನು ಬಿಚ್ಚಿಡುವ ಅಸ್ಮಿತೆಯಾಗಿರುವುದು ಲೆಟ್ಪಾಲಿತ್ರೈವ್@ಯಾರೇ ಯಾನೇ ಕೂಗಾಡಲಿ ನಾಟಕದ ಜೀವಾಳ.
ಕಾಪರ್ೋರೇಟ್ ಹಳ್ಳಿಯಲ್ಲಿ ನಡೆಯುತ್ತಿರುವ ‘ಯಾರು ದೊಡ್ಡವರು’ ಎಂಬ ರಿಯಾಲಿಟಿ ಶೋ ಮತ್ತು ಆ ಕುರಿತಾದ ಮಾಧ್ಯಮಗಳ ಇಲ್ಲಸಲ್ಲದ ಊಹಾಪೋಹಗಳ ಚಚರ್ೆಯ ಮೂಲಕ ನಾಟಕ ಆರಂಭವಾಗುತ್ತದೆ. ಅಂಥದ್ದೊಂದು ಪ್ರಾಜೆಕ್ಟ್ ರೂಪಿಸಿರುವ ತಂಡ ಹಳ್ಳಿಯನ್ನು ಮೀಡಿಯಾಗೆ ಬೇಕಾದಂತೆ ಹೈಟೆಕ್ ಮಾಡುತ್ತದೆ. ಕ್ಯಾಮರಾ ಕಣ್ಣು ಇಡೀ ಹಳ್ಳಿಯನ್ನು ತನಗೆ ಬೇಕಾದಂತೆ ಸೆರೆಹಿಡಿಯುತ್ತದೆ. ಅಜ್ಜಿಗೂ, ಕೋಣಕ್ಕೂ ಆದಿಮಜ್ಞಾನದ ಅರಿವಿನ ಜೊತೆಗೆ ಕಾಪರ್ೋರೇಟ್ ಜಗತ್ತಿನ ಪರಿಚಯವೂ ಇದೆ. ತಮ್ಮ ಜೀವನಶೈಲಿಯ ಒಂದು ಭಾಗವಾಗಿ ಜ್ಞಾನಶಾಖೆಯ ಒಂದು ಮಜಲನ್ನಾಗಿ ಮಾತ್ರ ಉಪಯೋಗಿಸುವವರು. ಕಾಪರ್ೋರೇಟಿನ ಜಂಜಾವಾತಗಳಿಂದ ದೂರವುಳಿದು ತಿನ್ನುವ ಅನ್ನದಿಂದ ಹಿಡಿದು ಬದುಕುವ ರೀತಿಯವರೆಗೆ ತಮ್ಮನ್ನು ತಾವೇ ನಿಯಂತ್ರಿಸಿಕೊಳ್ಳುವ ಆದಿಮಜ್ಞಾನವುಳ್ಳವರು. ಅಜ್ಜಿ ಸಪ್ತಮಾತೃಕೆಯರ ಪ್ರತಿನಿಧಿ. ಕಾಡುವ ದೈವಗಳಲ್ಲ ಬದುಕುವ ಬಗೆಯನ್ನು ಕಲಿಸುವ ತಾಯಂದಿರರ ಸಂಕೇತ. ಆಕೆಗೆ ಸೈದ್ಧಾಂತಿಕ ನಿಲುವುಗಳು, ಭಿನ್ನಾಭಿಪ್ರಾಯಗಳ ಗೊಡವೆಯಿಲ್ಲ, ಹಿಟ್ಟುಕೋಲು ಮುದ್ದೆ ಆಕೆಯ ಗುಟ್ಟು. ಭೂತಾನ್ ದೇಶದ (ಜಿಡಿಪಿ-ಜಿಡಿಹೆಚ್) ಹ್ಯಾಪಿನೆಸ್ನಂತೆ ಸಮೃದ್ಧವಾಗಿದ್ದಾರೆ.
ಗಂಡಭೇರುಂಡ ವಂಶದ ಘನತೆಯೂ, ಕಾಮ್ರೇಡಗಿರಿಯ ಹಪಹಪಿಯೂ, ಹಳ್ಳಿಹುಡುಗಿಯರ ಇಂಗ್ಲಿಷ ಹುಚ್ಚು, ಸಂವಾದದಲ್ಲಿ ಸಿದ್ಧಾಂತಗಳ ಮುಖವಾಣಿ ಹೊತ್ತು ಮಾತಾಡುವ ಕಾರ್ಯಕ್ರಮವೂ ಹೀಗೆ ನಾಟಕದುದ್ದಕ್ಕೂ ಷಿಟ್ ಬುಲ್ಷಿಟ್ಗಳದ್ದೆ ಕಾರಭಾರು. ನಾಟಕಕಾರನ ಸಂವೇದನೆ, ನಟ ಅಂದುಕೊಳ್ಳುವುದು, ನಿದರ್ೇಶಕ ರೂಪಿಸುವುದು ಕೊನೆಯದಾಗಿ ಸಹೃದಯಿ ಒಪ್ಪಿಕೊಳ್ಳುವುದು. ಇಂತದ್ದೊಂದು ಸೂತ್ರವನ್ನು ಹರಿದೊಗೆದು ಈ ನಾಟಕದಲ್ಲಿ ನಟನೂ ಮಾತಾಡುತ್ತಾನೆ, ನಾಟಕಕಾರನೂ ಮಾತಾಡುತ್ತಾನೆ. ಪ್ರತಿಮೆ ಎಂದುಕೊಂಡದ್ದು ಮಾತಾಡುತ್ತದೆ. ಇಲ್ಲಿನ ಪ್ರತಿಮೆ ಬರೀ ರೂಪಕವಷ್ಟೆ ಅಲ್ಲ ಅದು ಮಧ್ಯಮವರ್ಗದ ಆನೂಚಾನು ವ್ಯತ್ಯಾಸಗಳನ್ನು ಗಮನಿಸುತ್ತಲೆ ಮಾತಿಗಾಗಿ ಹಲಬುವ ಧ್ವನಿಯಾಗಿದೆ.
ಕಾಪರ್ೋರೇಟ್ ಹಳ್ಳಿಯ ಕತೆ(ಲೆಟ್ಪಾಲಿತ್ರೈವ್) ಮೊಸರು ಕಡೆಯುವ ಹದದಂತೆ ನವನೀತದ ತೆಳುತಿಳಿಯನ್ನು ಕದಡುತ್ತದೆ. ಕೋಣವನ್ನು ಬಲಿಕೊಡುವ ಐತಿಹ್ಯದ ಆಚರಣೆಯಲ್ಲಿ ಪ್ರತಿಲೋಮ ವಿವಾಹದ ವಿರುದ್ಧ ತಿರುಗಿಬಿದ್ದ ಹೆಣ್ಣು ಅವನನ್ನೆ ಬಲಿ ಬೇಡುತ್ತದೆ. ಧರ್ಮ ಮತ್ತು ರಾಜಕಾರಣಗಳು ಮುಖಾಮುಖಿಯಾಗುವ ಸಂದರ್ಭಗಳು ಇತಿಹಾಸದಲ್ಲಿ ಸಾಕಷ್ಟು ಸಿಗುತ್ತವೆ. ಆ ಎಲ್ಲ ಇತಿಹಾಸದ ಕಡೆಪುಟದಲ್ಲಿ ರಕ್ತದ ಕಲೆಗಳು ಮುತ್ತಿರುತ್ತವೆ ಹೇಗೋ ಹಾಗೆ ಪ್ರತಿಯೊಂದು ಆಚರಣಾ ಐತಿಹ್ಯಗಳ ಅಂತ್ಯದಲ್ಲಿ ದಾರುಣ ಬದುಕೊಂದರ ಆರಂಭವೂ ಅಂತ್ಯವೂ ಇರುತ್ತದೆ. ಕೋಣ ಮಾತಿಗಿಳಿದು ಸೇಡು ತೀರಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸುವಷ್ಟರಲ್ಲಿ ಕೋಣನ ಬಲಿಯಾಗುತ್ತದೆ. ಅಸ್ಮಿತೆಯನ್ನು ಕೊಂದುಕೊಂಡ ತಿಪ್ಪನಿಗೆ ಪ್ರತಿಲೋಮ ಮಾದರಿಯ ಮದುವೆಯೂ ಫಲಕೊಟ್ಟು ನಾಟಕ ಸುಖಾಂತವಾಗುತ್ತದೆ.