ನಂಬಿಕೆ, ಮೂಢನಂಬಿಕೆ ದ್ವಂದ್ವಗಳ ನಡುವೆ


ಸರಿಯಾಗಿ ಗಮನಿಸಿದರೆ ನಂಬಿಕೊಂ­ಡದ್ದು ಮತ್ತು ಮೂಢರಾಗಿ ಒಪ್ಪಿಕೊಂ­ಡದ್ದು ಬೇರೆ ಬೇರೆಯಾಗಿಯೇ ಕಾಣಿಸು­ತ್ತವೆ. ತಿಳಿದವರು ತಿಳಿಸಿದರೆ ಬಲವಾಗಿ ನಂಬಿಕೊಂಡ ನಂಬಿಕೆಯೂ ಸುಳ್ಳಾಗುತ್ತದೆ…

ಉಕ್ಕುಡಗಾತ್ರಿಯ ಹೊಳೆ­ದಂಡೆಯ ಆಲದ ಮರದಲ್ಲಿ ದೆವ್ವಗಳೂ, ಪಿಶಾಚಿಗಳೂ, ಬ್ರಹ್ಮರಾಕ್ಷ­ಸರೂ ನೇತಾಡುತ್ತಾರೆಂದು ಮಧ್ಯ­ಕರ್ನಾ­ಟಕದ ಜನ ಹೇಳುತ್ತಾರೆ. ಅದು ಅವರ ನಂಬಿಕೆ ಎಂದು ತಿಳಿದವರು ಮತ್ತು ಅರಿವು ಇದ್ದಂಥವರು ಸುಮ್ಮನಿ­ರಲು ಸಾಧ್ಯವೇ? ಅಲ್ಲಿ ಯಾವ ದೆವ್ವ-ಭೂತಗಳೂ ಇಲ್ಲವೆಂದು ಸಾಬೀತುಪ­ಡಿಸಲು ಹೋದವರು ರಕ್ತ ಕಾರಿ ಸತ್ತಿದ್ದಾರೆಂದು ಉಪಕತೆಯೊಂದನ್ನು ಹೇಳಿ ಹೆದರಿಸುವುದು ಇದೆ. ಹಾಗೆ ಹೆದ­ರಿಸಿದವರು ನಮಗೆ ಆ ಬಗ್ಗೆ ವಿವರ ಹೇಳಿದ ಸಾಮಾನ್ಯನಂತೂ ಅಲ್ಲವೇ ಅಲ್ಲ. ಆ ವ್ಯಕ್ತಿ ಬುದ್ಧಜಾತಕದಲ್ಲಿ ಕರಿ­ಕೋತಿಯ ವಿರುದ್ಧ ಸೇಡಿಟ್ಟುಕೊಂಡ ರಾಜಪುರೋಹಿತನಂತಹವನು. ದೇವ­ನೂರ ಹೇಳುವ ಒಂದು ಹಲ್ಲಿಗೆ ಎರಡು ಹಲ್ಲು ಪಡೆಯುವ ಸೇಡಿನ ರೂಪದವನು.

ಆದರೆ ಉಕ್ಕುಡಗಾತ್ರಿಯಲ್ಲಿ ಮಾನಸಿ­ಕ­ವಾಗಿ ಅಸ್ವಸ್ಥರಾದವರನ್ನು ಹಿಂಸಿಸಲಾ­ಗು­ತ್ತದೆ. ಅದನ್ನು ಜನರ ನಂಬಿಕೆ­ಯೆಂದು ಸುಮ್ಮನಿರಲು ಸಾಧ್ಯವೇ? ದ್ವೇಷಾ­ಸೂಯೆಗಳ ದಾಸ್ಯ­ದಲ್ಲಿ ವಾಮಾ­­­ಚಾರದ ಮೊರೆಹೋಗು­ತ್ತಾರೆ. ಮಾಟ-ಮಂತ್ರ, ಪೂಜೆ, ಆಣೆ ಸೂರೆಗಳ ಮಹಾಪೂರ ಹರಿಸಿ, ದೇವರ ಹೆಸರಲ್ಲಿ ದುಡ್ಡು ನಿರೂಪಿಸುತ್ತಾರೆ. ಮೂಢ­ನಂಬಿಕೆ ಪ್ರತಿಬಂಧಕ ಮಸೂದೆಯ ಮಾದರಿ ಕರಡನ್ನು ರೂಪಿಸಿದವರ ಮೇಲೆ ವಿರೋಧಿ­ಸು­ವವರು ಮುಗಿಬಿ­ದ್ದಂತೆ ಚರ್ಚೆ ನಡೆ­ಯಿತು. ಅವರೆಲ್ಲ ಎಡಪಂಥದವರು ಎಂಬುದು ನುಂಗಲಾ­ರದ ತುತ್ತಾಗಿತ್ತು. ಗೊಡ್ಡು ಆಚಾರ­ಗಳಲ್ಲಿ ನಂಬಿಕೆ ಯಾವುದು…? ಮೂಢ­ನಂಬಿಕೆ ಯಾವುದು ಎಂಬುದನ್ನು ನಿರ್ಧ­ರಿಸಲು ಆ ವಿಷಯದ ಕುರಿತಾಗಿ ಲೋಕಧ­ರ್ಮದಲ್ಲಿ ಪ್ರಚಲಿತವಿರುವ ಕತೆ, ಉಪ­ಕತೆಗಳನ್ನು ಗಮನಿಸಿದರೆ ನಿಚ್ಚಳ ಗೊತ್ತಾ­ಗುತ್ತದೆ. ಸೇಡುಮಾರಿ­ಯನ್ನು ಊರಿಂದಾ­ಚೆಗೆ ಬಿಡುವುದು ಹೇಗೆ ಒಂದೂರಿನ, ಒಂದು ಸೀಮೆಯ ಹಿತಕ್ಕಾಗಿ ಆಚರಿಸಲ್ಪಡುತ್ತದೋ ಹಾಗೆ ಮತ್ತೊಂದೂರಿಗೆ ಅದು ಕಂಟಕಪ್ರಾಯ ಎಂಬ ಅರ್ಥವನ್ನೂ ಹೇಳುತ್ತದೆ. ಹೀಗೆ ಸಮುದಾಯದ ದೃಷ್ಟಿಯಿಂದ ಹಿತಕಾರಿ­ಯಾಗಲಾರದ್ದು ಮನುಷ್ಯ ಸಹಜ ನಂಬಿಕೆ­ಯಾಗುವುದಾದರೂ ಹೇಗೆ? ಕೆಲವು ಬೂಟಾಟಿಕೆಯ ಜನರು ಅದನ್ನು ನಂಬಿಕೆ ಎಂದು ಕರೆದುಬಿಡುತ್ತಾರೆ. ಯಾಕೆಂದರೆ ಆ ಒಟ್ಟು ಕ್ರಿಯೆಯಲ್ಲಿ ಅವರು ಭಾಗಿಗಳಾಗುವುದಿಲ್ಲ. ಅದ­ರಲ್ಲಿ ಪಾಲ್ಗೊಳ್ಳುವ ಜನರ ಕತೆಗಳು ಇವ­ರಿಗೆ ರಂಜನೆಯ ವಸ್ತುಗಳಾಗಿ ಸಿಗುತ್ತವೆ.

ಬೆಂಗಳೂರಿನ ಕೊಳೆಗೇರಿ­ಯೊಂದ­ರಲ್ಲಿ ಸತ್ತ ಹೆಣವೊಂದಕ್ಕೆ ತಂಪುಕನ್ನಡಕ ಹಾಕಿ ಶವಯಾತ್ರೆ ನಡೆಸುತ್ತಿರುವುದನ್ನು ಕಂಡ ಒಬ್ಬ ವೈಚಾರಿಕನಿಗೆ ಅದು ಮೋಜಾಗಿ ಕಾಣಿಸುತ್ತದೆ. ಆದರೆ ಆ ಕನ್ನಡಕ ಹಾಕಿದವನಿಗೆ ಗೊತ್ತಿರುತ್ತದೆ ಆ ಕನ್ನಡಕ ಆ ಸತ್ತವನ ಆಸೆಗಳಲ್ಲೊಂ­ದಾ­ಗಿತ್ತೆಂಬುದು. ಅದನ್ನು ಪೂರೈಸಿದ ಕೃತ­ಜ್ಞತೆ ಮಗನದೋ, ಮಗಳದೋ ಆಗಿರು­ತ್ತದೆ. ಹೀಗಿರುವ ನಂಬಿಕೆಗಳಿಗೆ ವಿಶೇಷ­ವಾದ ಅರ್ಥವನ್ನು ಯಾರೂ ಕಟ್ಟಲಾ­ರರು. ಆದರೆ ಮೂಢನಂಬಿಕೆಗಳ ತಡೆ ಮಸೂದೆಯನ್ನು ವಿರೋಧಿಸುವ ಕೆಲವ­ರಿಗೆ ಅದೇ ಹೆಣದ ಮೆರವಣಿಗೆ ಹಿಂದೆ ರಸ್ತೆಯುದ್ದಕ್ಕೂ ಚೆಲ್ಲುತ್ತಾ ಹೋಗುವ, ನೆಲದ ಪಾಲುಮಾಡುವ ಕಾಳಿನ ಕುರಿತು ಯಾವ ಮಾತೂ ಹೊರ­ಡಲಾ­ರದು.
ಅದು ಕೂಡ ನಂಬಿಕೆಯ ಮಾತಾಗಿರುತ್ತದೆ. ಈ ವೈವಿಧ್ಯ ಸಂಸ್ಕೃತಿಯ ಪ್ರಜಾಪ್ರಭುತ್ವದಲ್ಲಿ ಇಂದಿಗೂ ಮೌಢ್ಯತೆಯ ಗುಂಗಿನಲ್ಲಿ ಹಾದಿತಪ್ಪಿ ಸಣ್ಣಪುಟ್ಟ ದುರಾಸೆ­ಗೊಳ­ಗಾ­ಗು­ವವರು ಬಡವರು ಮತ್ತು ತಳವರ್ಗ­ದವರೇ ಹೆಚ್ಚು. ಕಾಲು­ಬಾಯಿ ರೋಗಕ್ಕೆ ತುತ್ತಾಗಿ ಸತ್ತ ದನಕ್ಕೂ ಸೇಡುಮಾರಿಗೂ ಯಾವ ಸಂಬಂಧವೂ ಇರದಿದ್ದರೂ ಇವ-­ತ್ತಿನ ಈ ವೈಚಾರಿಕ ಜಗತ್ತಿನಲ್ಲಿ ಶಾಂತಿ, ಪೂಜೆ ಪುನಸ್ಕಾರಗಳು ಮಾಡಿಸುತ್ತಾರೆ.

ವಿಶಾಲಮನೋಭಾವದ ಮಹಾ­ನು­ಭಾವರೆಂದು ಗುರುತಿಸಿ­ಕೊಳ್ಳಲು ಹವ­ಣಿ­ಸುವ ಜಾಣಪೆದ್ದರು ದೀಕ್ಷೆಯನ್ನು ಕೊಡುವುದಾಗಿ ಮಾತಾಡಿ, ಕೇರಿಗಳಲ್ಲಿ ಓಡಾಡಿ ಸಮಾನತೆ ಕುರಿತು ಮಾತು­ಗಳನ್ನು ಗಾಳಿಗೆ ತೂರುವುದರ ಜೊತೆ ಜೊತೆಗೆ ಮಾಧ್ಯಮಗಳಿಗೆ ಆಹಾರವಾ­ಗುತ್ತಾರೆ. ಇಂಥವರೇ ಇಂದು ಎಡಪಂ­ಥೀಯ ವಿಚಾರಧಾರೆಗಳನ್ನು ಹುಂಬ­ರಂತೆ ವಿರೋಧಿಸುತ್ತಾರೆ. ನಂಬಿಕೆಯ ಬಗ್ಗೆ ಮಾತಾಡಲು ತೊಡಗುತ್ತಾರೆ. ಹಾಗಿ­ದ್ದಾಗ ಅಂಥವರು ಈ ದೇಶದ ನೆಲದ ನಂಟಿನ ಜನರ ಬಗ್ಗೆ ಮಾತಾ­ಡುತ್ತಾರೆಂದು ಹೇಗೆ ಹೇಳುವುದು…? ಅವರ ನಂಬಿಕೆ ಯಾವುದು, ಮೂಢ­ನಂಬಿಕೆ ಯಾವುದು ಎಂಬುದನ್ನು ಅವರು ಅರ್ಥಮಾಡಿಕೊಳ್ಳಲಾರರು. ತಿಳಿ­ದವರು ತಿಳಿಸಿದರೆ ಬಲವಾಗಿ ನಂಬಿ­ಕೊಂಡ ನಂಬುಗೆಯೂ ಹತ್ತೆಂಟು ವರ್ಷ­ಗಳಲ್ಲಿ ಸುಳ್ಳಾಗುತ್ತದೆ. ಆದರೆ ಆ ಮುಗ್ಧತೆಯನ್ನು ಹಾಗೇ ಪೋಷಿಸಿ­ಕೊಂಡು ಹೋಗಬೇಕೆನ್ನುವ ಮನಸು­ಗಳು ಜನಾಭಿಪ್ರಾಯವನ್ನು ತಾವೇ ರೂಪಿಸಿ ಇದು ಹೀಗೆ ಎಂಬಂಥ ತೀರ್ಮಾ­­ನ­ವನ್ನು ನೀಡುತ್ತವೆ. ಮೇಲ್ನೋಟಕ್ಕೆ ‘ಅದು ಹೌದು’ ಎನ್ನುವಂಥ ವಾದವನ್ನು ಹುಟ್ಟುಹಾಕು­ವುದರ ಮೂಲಕ ಮುಗ್ಧರನ್ನು ಹಾದಿ ತಪ್ಪಿಸಲು ಆರಂಭಿಸುವ ಕೆಲವು ಮಾಧ್ಯಮ­­ಗಳು ಸಮಾಜದ ಮೇಲೆ ಅಂಕೆ­ಯಿಡಲು ಪ್ರಯತ್ನಿಸುತ್ತಿವೆ.

ಸರಿಯಾಗಿ ಗಮನಿಸಿದರೆ ನಂಬಿಕೊಂ­ಡದ್ದು ಮತ್ತು ಮೂಢರಾಗಿ ಒಪ್ಪಿಕೊಂ­ಡದ್ದು ಬೇರೆ ಬೇರೆಯಾಗಿಯೇ ಕಾಣಿಸು­ತ್ತವೆ. ಮುಂಜಾನೆದ್ದು ಯಾವುದೋ ಕುಲ ಕಸುಬುದಾರನೊಬ್ಬನ ಮುಖ ನೋಡ­ಬಾ­ರದೆನ್ನುವುದು ಅವರ ನಂಬಿಕೆ ಎಂದಾ­ದರೆ ನೋಡಿಸಿಕೊಂಡ ಆ ವ್ಯಕ್ತಿಯ ಫಜೀತಿ ಯಾರು ಕೇಳುತ್ತಾರೆ. ಈಗಿನ ಬಹಳಷ್ಟು ವಿದ್ಯಾರ್ಥಿಮಿತ್ರರು ದಿನಭವಿಷ್ಯ ನೋಡುವುದೇ ದಿನಪತ್ರಿ­ಕೆಯ ಓದು ಅಂದುಕೊಂಡಿದ್ದಾರೆ. ರಾಶಿ­ಭವಿಷ್ಯ ನೋಡುವುದು ವೈಯಕ್ತಿಕವಾಗಿ ಅವರವರ ನಂಬಿಕೆಯಾದರೂ ಮನುಷ್ಯನ ದೃಢವಿಶ್ವಾಸವನ್ನು ಯಾವುದೋ ಎರಡು ಸಾಲಿನ ದಿನ­ಭವಿಷ್ಯ ರೂಪಿಸುತ್ತದೆಯೇ? ಇಷ್ಟೊಂದು ದುರ್ಬಲವಾಗಿರುವ ಮನಸು­ಗಳು ತಾವು ಮೂಢರಾಗಿದ್ದೇವೆ ಅನ್ನುವುದನ್ನು ಅರ್ಥಮಾಡಿ­ಕೊಳ್ಳು­ವುದು ಯಾವಾಗ? ಅದನ್ನು ಅರ್ಥಮಾ­ಡಿಸಬೇಕಾದ ಜನ­ಮಂದೆಯೂ ಈಗ ನಂಬಿಕೆ ಯಾವುದು ಮೂಢನಂಬಿಕೆ ಯಾವುದು ಎಂಬಂಥ ತಿಳಿಹಾಸ್ಯದ ರಸಪ್ರಶ್ನೆಯಲ್ಲಿ ತೊಡಗಿದ್ದಾರೆ.

ಮೂಢನಂಬಿಕೆ ಆಚರಿಸುವವ ಹೆಚ್ಚು ವಿಚಾರ ಮಾಡುತ್ತಾನಂತೆ. ಹಾಗಾಗಿ ಅವನು ಅದನ್ನು ಅಷ್ಟೊಂದು ನಂಬಿಕೊಂ­ಡಿರುತ್ತಾನೆಂದು ವೈಚಾರಿಕತೆ­ಯನ್ನು ವೈಜ್ಞಾ­ನಿಕ ಕೋನದಿಂದ ಹೊರ­ಗಿಟ್ಟು ಮುಗ್ಧನೂ ವೈಚಾರಿಕನಾ­ಗಿರುತ್ತಾನೆಂಬ ಅರ್ಥದಲ್ಲಿ ಕೆಲವರು ವಾದಮಾಡು­ತ್ತಾರೆ. ಆದರೆ ಅವನು ಆಲೋಚಿಸು­ವುದು ಮತ್ತು ತರ್ಕಿಸು­ವುದು ನಂಬಿಕೆಯ­ನ್ನಲ್ಲ ಎಂಬ ಸತ್ಯ ಅವ­ನಿಗೆ ತಿಳಿದಿರುವು­ದಿಲ್ಲ. ಅವನನ್ನು ನಂಬಿ­ಸುವ ಕಲೆ ಗೊತ್ತಿ­ರುವ ವ್ಯಕ್ತಿ ಕಥನದ ಕಸುಬುಗಾರಿಕೆ­ಯನ್ನು ಸೊಗಸಾಗಿಯೇ ಮಾಡಿರು­ತ್ತಾನೆ. ಉಚ್ಚಂಗಿದುರ್ಗದ ಉಚ್ಚಂಗಿ ಹಸುಳೆಯನ್ನು ನುಂಗಿದಳೆಂಬ ಕತೆಯೂ, ರೇಣುಕೆ ನೀರು ತರುವಾಗ ಜಲಕ್ರೀಡೆ ಆಡುವ ಕ್ಷತ್ರಿಯಕು­ಮಾ­ರ­ರನ್ನು ನೋಡಿ ಮೋಹಗೊಂಡ ಕಾರಣಕ್ಕೆ ಪಾವಿತ್ರ್ಯ ಕಳೆದುಕೊಂಡಳೆಂಬ ಕತೆಯೂ ಹೀಗೆ ಐತಿಹ್ಯ­ವಲ್ಲದಿರುವ ಐತಿಹ್ಯಗಳನ್ನು ಹೇಳು­ತ್ತಾರೆ. ಅಂಥ ಕತೆಗಳು ಕ್ರಿಯಾ­ವಿಧಿ­ಗಳಾಗಿ ಆಚರಣೆಗೆ ಬಂದು ಜನ­ಮಾನಸ­ದಲ್ಲಿ ನೆಲೆನಿಂತಿವೆ. ಅದು ಆಚರ­ಣೆ­ಯಾಗಿರುವಾಗ ಅದನ್ನು ನಂಬಬಹು­ದಾದ ಸತ್ಯುಳ್ಳ ಸುಳುಹುಗಳನ್ನು ಹೊಸಕಿ ಹಾಕಿ ಹೊಸದೊಂದು ಪುರಾಣವೇ ಸೃಷ್ಟಿ­ಯಾಗಿರುವಾಗ, ಆ ಬಗೆಗಿನ ಸಂಶ­ಯಕ್ಕೆ ಉತ್ತರ ಹೇಳುವವರು ಯಾರು?

ಸತ್ತನಾಗರನ ಕಂಡರೆ ನಾಗಪೂಜೆ ಮಾಡಿ­ಸಬೇಕೆಂಬ ಆಚರಣೆಯೂ ಬಾಣಂತಿ ಹೆಂಗಸು ಸತ್ತರೆ ಅವಳ ಎಲುಬಿನಿಂದ ಪೂಜೆಮಾಡಬೇಕೆಂಬ ರೀತಿಯೂ, ನರಬಲಿಯೂ, ಎಳೆ­ಗೂಸನ್ನು ಎತ್ತರದಿಂದ ಎತ್ತಿಹಾಕು­ವುದು ಇತ್ಯಾದಿ. ಈ ಎಲ್ಲ ರೀತಿಯ ನಂಬಿಕೆಗಳ ಹಿಂದೆಯೂ ಒಂದೊಂದು ಕತೆ ಇದೆ. ಆ ಕತೆ ಕಟ್ಟಿದವರು ಈಗ ನಂಬಿಕೆ ಯಾವುದು – ಮೂಢನಂಬಿಕೆ ಯಾವುದು ಎಂಬಂಥ ಪ್ರಶ್ನೆ ಎತ್ತುತ್ತಿ­ದ್ದಾರೆ. ಕೆಲವು ಊರುಗಳಲ್ಲಿ ಇಂದಿಗೂ ಮುಂಗಾರು ಮಳೆಹನಿ ಬೀಳುತ್ತಿದ್ದಂತೆ ಗ್ರಾಮ­ದೇವತೆಗೆ ಹೂ ಏರಿಸುವ ಕಾರ್ಯ­ ಮಾಡುತ್ತಾರೆ. ಹೊನ್ನೇರು ಕಟ್ಟಬೇಕೆಂದರೆ ಗ್ರಾಮ­ದೇವರು ಏರಿಸಿ­ದಂಥ ಹೂವನ್ನು ಬಲಬದಿಗೆ ಬೀಳಿಸ­ಬೇಕು. ಆ ಹೂವು ಬಲಬದಿಗೆ ಬೀಳದಿ­ದ್ದರೆ ಆ ವರ್ಷ ಒಳ್ಳೆಯ ಮಳೆಯಾ­ದರೂ ಯಾರೂ ಬಿತ್ತುವಂತಿಲ್ಲ. ಹಾಗೊಂದು ವೇಳೆ ಯಾವನೋ ಒಬ್ಬ ಸಣ್ಣ ರೈತ ಬಿತ್ತಿದನೆಂದರೆ ಅವನನ್ನು ಬಹಿಷ್ಕರಿಸು­ತ್ತಾರೆ. ಇವು ಮೂಢನಂಬಿ­ಕೆಯ ಚರ್ಚೆಯ ವಿಷಯಗಳಾಗಿ ಬರುವುದೇ ಇಲ್ಲ.

ಕೆಲವು ನಂಬಿಕೆಗಳಲ್ಲಿ ಕ್ರಿಯಾವಿಧಿಯ ಯಾವ ಗುಣಗಳೂ ಇಲ್ಲದಿರುವಾಗ ಸಮುದಾಯಗಳು ಅಂತಹವುಗಳನ್ನು ಭಯ­ದಿಂದಲೇ ಸ್ವೀಕರಿಸುತ್ತವೆ. ಭಯ ನಿವಾರಿಸಿಕೊಳ್ಳಲು ಭಕ್ತಿ ಎನ್ನುವು­ದೊಂದು ಮಾರ್ಗವಾಗಿದೆ. ಭಕ್ತನ ಆತ್ಮವಿಶ್ವಾಸ ಸದೃಢಗೊಳಿಸಬೇಕಾದ ಅನೇಕರು ಅವನ ಭಯವನ್ನೇ ಬಂಡ­ವಾಳ ಮಾಡಿಕೊಂಡು ಬದುಕುತ್ತಿದ್ದಾರೆ

ಅಂತಿಗೊನೆ ನಾಟಕಕ್ಕಾಗಿ ಬರೆದ ಹಾಡು


ಬಲಿತ ಬಿಸಿಲಿಗೆದುರಾಗಿ ಹಸಿರ ಹುಲ್ಲನು ಚಿಗುರಿಸುವೆ
ನೆನಗುದಿಗೆ ಬಿದ್ದ ನೆತ್ತರಿನ ಶವ ಹೂತು
ಕ್ರಿಯಾಕರ್ಮವ ಪೂರೈಸಿ ತರ್ಪಣವ ತೀರಿಸುವೆ.

ಒಡಲಬಳ್ಳಿಗಳ ಕಾದಾಟಕೆ ನೀ ಸಾಕ್ಷಿ
ನೀನಲ್ಲದಿನ್ನಾರು ನೆರೆಯರು
ಬಾ ಬಲವೇ ನನ್ನೊಳಗೊಂಡು ಬಾ…

ಈ ನೆಲದ ನ್ಯಾಯವ ತನ್ನಾಡಂಬೋಲ
ಮಾಡಿಕೊಂಬವನ ಮಾತು ಮೀರಿ
ತನುಮನದ ಅಂತಃಸಾಕ್ಷಿಯೇ ತೋಳ್ಬಲ ನೀನಾಗಿ ಬಾ.

ಓ ಸಹೋದರನೇ
ಕೊಳೆತ ನಾಗರೀಕನ ನಿಯಮ ಮೀರಿ
ಮಿಡಿಯುತಿದೆ ನನ್ನ ಹೃದಯ ತಂತಿ ಕೇಳಿಸಿತೆ…!

ನಿನಗೆ ನಾನು – ನನಗೆ ನೀನು
ನಾನಿದ್ದೇನೆ ಮಮತೆಯ ವಾರಸುದಾರಳು
ಈ ಮಣ್ಣಲ್ಲಿ ಮಣ್ಣು ಮಾಡಿ ಅಪರಕರ್ಮವ ತೀರಿಸುವೆ.

ಆಕೆ


ನೀನು ನೆನಪಾಗಿ
ಜಾರಿ ಕತ್ತಲಕುಳಿಯಲ್ಲಿ ಹೊಕ್ಕೆ
ಕಡ್ಡಿ ಗುಡ್ಡವಾಗಿ
ಅದರೆತ್ತರಕ್ಕೆ ಹಾರಿದೆ
ಗೆಣುದ್ದ ಮುಗಿಲು
ಅಲ್ಲಿಂದ ಕಾಣುವುದಿತ್ತು ಶಿಖರ
ನಿನ್ನ ಮೊಲೆಯ ತುದಿ ತುಂಬಿನಂತೆ

ಕೈಯತ್ತಿ ಜೀಕಬೇಕು
ಅಮ್ಮನ ರೂಪದಲಿ ನೀನು
ಅಕ್ಕ, ತಂಗಿ,
ಗುರುತು ಪರಿಚಯವಿಲ್ಲದ ಹೆಣ್ಣಾಗಿ
ಏಳುಮಕ್ಕಳ ತಾಯಾಗಿ
ಕರಿಕಲ್ಲಿನ ಗುಂಡಾಗಿ
ಮೈಯಲ್ಲ ಕುಂಕುಮ ಭಂಡಾರ ಶೋಬಿತ ಮಾತೆಯಾಗಿ ಕಂಡೆ.

ಮುಪ್ಪಾನು ಮುದುಕರ ಕತೆ


ಮಹಾದೇವ ಹಡಪದ ಸಾಲಾಪೂರ

ಈಗ ಇಬ್ಬರಿಗೂ ವಯಸ್ಸಾದುದು. ಮುದುಕನ ಹಲ್ಲುಗಳು ಒಂದೊಂದಾಗಿ ಬಿದ್ದು ಹೋಗಿ ದವಡೆಯ ತುದಿ ಹಲ್ಲು ಮಾತ್ರ ಹಾಗೆ ಉಳಿದುಕೊಂಡಿತ್ತು. ಅಗೆಯುವ ಅನ್ನ ಒಸಡಿಗೆ ಹೊಂದಿದಂತೆ ಆ ಗಟ್ಟಿ ಹಲ್ಲಿನ ತುದಿಗೆ ತಾಕಿದಾಗೊಮ್ಮೆ ಯೌವನ ಮತ್ತೆ ಚಿಗುರುವುದೇನೋ ಎಂದು ಪುಳಕಿತನಾಗುತ್ತಿದ್ದ. ದನ ಮೆಲುಕು ಹಾಕಿದಂತೆ ನಾಲಗೆಯ ಅಂಗಳದಲ್ಲಿನ ಅಗಳನ್ನ ದವಡೆಗೆ ನೂಕಲು ಹರಸಾಹಸ ಪಡುತ್ತಿದ್ದ ಕಾರಣಕ್ಕೋ ಏನೋ ಇತ್ತಿತ್ತಲಾಗಿ ಮುದುಕಿಗೆ ಮುದುಕನ ಉಣ್ಣುವ ರೀತಿ ಸರಿ ಬರುತ್ತಿರಲಿಲ್ಲ. ಏನ್ರೀ ಉಣ್ಣುವಾಗ ತ್ವಾಡೆ ಹಿಂದಕ ಸರದು ಕುಂತು ತಿನ್ರೀ’ ಎಂದು ತಾನೆ ಕುಂಡಿ ಸವರುತ್ತಲೋ ಇಲ್ಲಾ ಡೈನಿಂಗ್ ಟೆಬಲ್ ಮುಂದಿನ ಕುರ್ಚಿಯನ್ನು ತಿರುಗಿಸಿಕೊಂಡೋ ಮುದುಕನಿಗೆ ಬೆನ್ನಾಗಿ ಕೂತು ಊಟಮಾಡುವುದನ್ನು ರೂಢಿಸಿಕೊಂಡಿದ್ದಳು. ದಿನಗಳು ಉರುಳಿದಂತೆ ಇದು ಊಟದ ಹೊತ್ತಿಗೆ ಮತ್ತೆ ಮತ್ತೆ ರಿಪೀಟ್ ಆಗುತ್ತ ಹೋಯಿತು. ಮುದುಕನಿಗೆ ಸಿಟ್ಟು ಬಂದರೂ ಆಕೆಯ ಹೊರತಾಗಿ ತನಗೆ ಇನ್ನಾರಿದ್ದಾರೆ ಎಂದುಕೊಂಡು ಆಕೆಯ ಸೆಡವು-ಸಿಟ್ಟುಗಳನ್ನು ನಕಲಿಯಾಡಿ ನಕ್ಕುಬಿಡುತ್ತಿದ್ದ.

ಆಕೆ ಮಕ್ಕಳಂತೆ ಹಟಮಾಡಿ ತನ್ನ ತಾ ಸಾಧಿಸಿಕೊಳ್ಳುವುದೂ ಈತ ರಮಿಸುವುದು ಒಂದು ರೀತಿಯ ಮೋಜಿನಂತಾಯಿತು. ಉಂಡಾದ ಮೇಲೆ ಅಂವ ಹಾಸಿದ ಹಾಸಿಗೆಯನ್ನು ತಾನು ಬಂದು ಮತ್ತೊಮ್ಮೆ ಝಾಡಿಸಿ ಹಾಸುವುದು.ಪಾರ್ಕಿಗೆ ಹೋಗಿ ಬಂದಾಗೊಮ್ಮೆ ಕಾಲು ತೊಳೆದುಕೊಂಡು ಒಳಗೆ ಬಂದರೂ ಕಾಲು ತೊಳೆಯಲಿಲ್ಲವೆಂದು ಕಿತ್ತಾಡುವುದು. ಜಗಲಿ ಮೇಲಿನ ದೀಪಕ್ಕೆ ಎಣ್ಣೆಹಾಕಲಿಲ್ಲ. ಬತ್ತಿ ಹೊಸೆಯಲಿಲ್ಲ, ರದ್ದಿಪೇಪರ್ ಮಾರಾಟ ಮಾಡಲಿಲ್ಲ, ಜಿರಳೆಗೆ ಹಿಟ್, ಇಲಿಗಳಿ ಪಾಷಾಣ ತರಲಿಲ್ಲ… ಹೀಗೆ ಪಾಯಿಖಾನೆಗೆ ಹೋಗಿಬಂದರೂ ನೀರು ಸರಿಯಾಗಿ ಹಾಕಲಿಲ್ಲವೆಂದು ಕೂಡ ಕಿರಿಕಿರಿಮಾಡತೊಡಗಿದ್ದಳು. ಆಕೆಗೆ ಯಾಕೋ ತನ್ನ ಮೇಲಿನ ಪ್ರೀತಿ ತಟಕು ಕಮ್ಮಿಯಾಗಿದೆ ಅನಿಸಿದರೂ “ಈಕೆ ನನ್ನ ಹೆಂಡತಿ” ಎಂದು ಅಕ್ಕರಾಸ್ಥೆ ತೋರುತ್ತಿದ್ದ..

ಪಾಪ! ಮುದುಕನು ಮುದುಕಿಯ ತಿರಸ್ಕಾರಕ್ಕೆ ಚಣ ಅಧೀರನಾದರೂ ಊಟವಾದ ಮೇಲೆ ಪ್ರೀತಿ ಕಮ್ಮಿಯಾದೀತೆಂಬ ಭಯದಲ್ಲಿ ಆಕೆಯನ್ನು ಮಾತಾಡಿಸಲು ಸತತ ಪ್ರಯತ್ನ ಮಾಡುತ್ತಿದ್ದ. ಗಲ್ಲ ಸವರಿದಾಗೊಮ್ಮೆ ಮೂಗು ಮರಿಯುವುದು, ಕಚಗುಳಿಯಿಟ್ಟಾಗ ಕಣ್ಣ ಈಟಗಲ ಮಾಡಿ ಕೆಕ್ಕರಿಸುವುದ ಮಾತ್ರ ಮುದುಕಿ ಸಡಿಲಸಲಿಲ್ಲ. ಉಮೇದಿನಲ್ಲಿ ಆಕೆಯನ್ನು ಮಾತಾಡಿಸಿಯೋ… ಇಲ್ಲವೇ ಜಲಸು ಉಕ್ಕಿಸಲು ತನ್ನ ಹಳೆಯ ಪ್ರೇಯಸಿಯರ ಸಂಗಡದ ಪ್ರೇಮಪ್ರಸಂಗಗಳನ್ನು ರಸವತ್ತಾಗಿ ವಿವರಿಸಲು ತೊಡಗಿದಾಗ ಹಾಸಿಗೆಯಲ್ಲು ಬೆನ್ನುಹಾಕಿ ಮಲಗುತ್ತಿದ್ದಳು. ಮಗ ತಮಗೆ ಹೇಳದೆ ಕೇಳದೆ ಮದುವೆ ಆಗಿ ಬಂದಾಗ ತನ್ನ ತೋಳು ಹಿಡಿದು ಬಿಕ್ಕಿಬಿಕ್ಕಿ ಅತ್ತಿದ್ದವಳು… ಮಗಳ ಮದುವೆ ತನ್ನಿಷ್ಟದಂತೆ ಆದಾಗ ಹುಚ್ಚಳಂತೆ ಕುಣಿದಿದ್ದವಳು ಈಗ ಆ ಇಬ್ಬರೂ ಮಕ್ಕಳು ದೂರ ಹೋದಾಗ ತನ್ನನ್ನ ದೂರ ಮಾಡುತ್ತಿದ್ದಾಳಲ್ಲ ಎಂದು ನೊಂದುಕೊಂಡರೂ.. ಈಕೆ ನನ್ನ ನಂಬಿ ಬಂದವಳಲ್ಲವೇ..! ಎಂದುಕೊಂಡು ಹರೆಯದಲ್ಲಿ ಮದುವೆಯಾದ ಆ ದಿನಗಳ ನೆನೆದು ಖುಷಿಗೊಳ್ಳುತ್ತಿದ್ದ. ಆ ದಿನಗಳಲ್ಲಿ ನಾಚಿಕೊಳ್ಳುತ್ತಿದ್ದ ಈಕೆಗೆ ನಾನು ಸಲುಗೆ ಕೊಟ್ಟದ್ದು ಹೆಚ್ಚಾಯ್ತು ಎಂದು ತನ್ನ ತಾನೆ ಶಪಿಸಿಕೊಳ್ಳತೊಡಗಿದ.

ತನ್ನನ್ನ ನೆಗ್ಲೆಕ್ಟ್ ಮಾಡುತ್ತಾಳಲ್ಲ ಅಂತ ಸಿಟ್ಟು ಮಾಡಿಕೊಂಡು ಒಂದು ದಿನ ಆಕೆಯನ್ನು ಮಾತಾಡಿಸುವುದನ್ನೆ ಬಿಟ್ಟುಬಿಟ್ಟ. ಮನೆಯಲ್ಲಿ ಇರುವ ಎರಡು ಜೀವಾತ್ಮಗಳ ನಡುವೆ ಇಂಥದೊಂದು ಬಿಗುಮಾನ ಹುಟ್ಟಿದರೆ ಮನೆಯ ಸಂದುಗೊಂದುಗಳಲ್ಲಿನ ಮೌನ ಮನೆಯಂತ ಮನೆಯಲ್ಲ ವ್ಯಾಪಿಸತೊಡಗಿತು. ಎರಡಿದ್ದ ಇಲಿಗಳು ನಾಲ್ಕಾದವು. ಜೇಡರ ಬಲೆ ಅಟ್ಟದ ತುದಿಮುಟ್ಟಿತು. ಸಂಜೆಯ ವಿವಿಧಭಾರತಿಯ ಚಿತ್ರಗೀತೆಗಳ ನಂತರ ಜೀರುಂಡೆಯ ಸದ್ದು ಕತ್ತಲಗುಹೆಯ ಮೌನಕ್ಕೆ ಸಾತ್ ನೀಡತೊಡಗಿತು. ಮಗಳ ಫೋನ್ ಬಂದರೆ ಮಾತು ಮರೆಸಿ ಕಷ್ಟಸುಖ ಮಾತಾಡತೊಡಗಿದರು. ಅವನು ಉಂಡಾದ ಮೇಲೆ ಇವಳ ಊಟ. ಮಗರಾಯ ಅಕೌಂಟಿಗೆ ರೊಕ್ಕ ಹಾಕಿರುವ ದಿವಸ ಈಕೆ ತನ್ನ ಯಾವತ್ತಿನ ರೇಷನ್ನ ಯಾದಿಯನ್ನೂ, ಕರೆಂಟು ಮತ್ತು ಫೋನಿನ ಬಿಲ್ಲನ್ನೂ ಸಂತೆ ಚೀಲದೊಳಗೆ ತುರುಕಿ ತನಗೇನೂ ತಿಳಿದಿಲ್ಲವೆಂಬಂತೆ ಹಿತ್ತಿಲ ಕಡೆ ನಡೆದುಬಿಡುತ್ತಿದ್ದಳು. ಹೀಗೆ ಸಂತೆ ತರುವುದು ತಿಂಗಳು ಕಳೆಯುವುದು ನಡೆದಿತ್ತು.

ಆದರೆ ಒಂದು ದಿನ ಇಲಿಗಳ ಕಾಟ ಜಾಸ್ತಿ ಆಯ್ತು ಎಂದು ಮುದುಕ ತನಗೆ ತಾನೆ ಗೊಣಗಿಕೊಂಡ. ಮುದುಕಿ ಇಲಿಪಾಷಾಣವನ್ನು ಬಜ್ಜಿಯಲ್ಲಿಟ್ಟು ಅಟ್ಟದ ಕೆಳಗಿಟ್ಟು ಬಂದಳು.

ಮತ್ತೊಂದು ದಿವಸ ಈಕೆ ಬಚ್ಚಲಲ್ಲಿ ಪಾಚಿಗಟ್ಟಿದೆ ಎಂದು ಗೊಣಗಿಕೊಂಡಳಷ್ಟೆ… ಬೆಳಿಗ್ಗೆ ತಾನೆ ಜಳಕ ಮುಗಿಸಿದ್ದರೂ… ಆರ್ಪಿಕ್ ಹಾಕಿ ಬಚ್ಚಲನ್ನು ಜಳಜಳ ತೊಳೆದು ಮತ್ತೊಮ್ಮೆ ಮಡಿಯಾದ.

ಇನ್ನೊಂದು ದಿನ ಈತ ಗುಸುಗುಸು ಕೆಮ್ಮಿದಾಗ ಶುಂಠಿಚಹಾ ಮಾಡಿಕೊಂಡು ತಂದು ಮುಂದಿಟ್ಟಳು

ಹೀಗೆ ಪರಸ್ಪರ ಒಬ್ಬರಿಗೊಬ್ಬರು ಸ್ಪಂದಿಸಿದರೂ ಅವನಾಗಿಯೇ ಮಾತಾಡಿಸಲೆಂದು ಅವಳು. ಅವಳಾಗಿಯೇ ಮಾತಾಡಿಸಲೆಂದು ಇವನೂ ಜಿದ್ದಿಗೆ ಬಿದ್ದಿದ್ದರು.

ಹೀಗೆ ನಾಲ್ಕಾರು ದಿನ ಕಳೆಯಲು… ಇದ್ದಕ್ಕಿದ್ದಂತೆ ಇಲಿ ಸತ್ತ ವಾಸನೆ ಮೂಗಿಗಡರಿ ಮೌನದ ಮನೆಯಲ್ಲಿ ಉಸಿರು ಬಿಗಿಹಿಡಿದು ಬದುಕುವುದು ಅಸಹನೀಯ ಅನಿಸತೊಡಗಿತು. ಇಲಿಯೊಂದು ಪಾಷಾಣ ತಿಂದು ಸತ್ತು ಬಿದ್ದಿದೆ. ಆಕೆ ಕಂದೀಲಿನ ಬೆಳಕನ್ನ ಎತ್ತರಿಸಿ ಮೂಲೆಮೂಲೆ ಹುಡುಕುತ್ತಿದ್ದಾಗಲೆ… ಈತನೂ ತನ್ನ ಹಳೆಯ ಮೂರು ಸೆಲ್ಲಿನ ಬ್ಯಾಟರಿಯ ಹಿಡಿದು ಅಟ್ಟದ ಕೆಳಗೆಲ್ಲ ಹುಡುಕತೊಡಗಿದ. ಮನೆಯ ತುಂಬೆಲ್ಲ ಹುಡುಕಿದ ಮೇಲೆ ಇಬ್ಬರ ಕಣ್ಣು ಅಟ್ಟದ ಮೇಲೆ ಹೋಯಿತು. ಅಟ್ಟದ ಏಣಿ ಲಡ್ಡಾದ್ದರಿಂದ ಅಲ್ಲಿಗೆ ಹತ್ತಿ ಹೋಗುವುದು ಅಷ್ಟು ಸುಲಭವಿರಲಿಲ್ಲ. ಹಿಂದೊಮ್ಮೆ ಮುದುಕಿ ಅಟ್ಟದ ಮೇಲಿನ ಧೂಳು ಒರೆಸಲು ಏಣಿಯ ಮೇಲೆ ನಿಂತುದಕ್ಕೆ ಅದು ಥರಗುಟ್ಟಿತ್ತು. ಮಾತಿಲ್ಲ-ಕತೆಯಿಲ್ಲ. ಮುದುಕನ ಬ್ಯಾಟರಿ ಬೇಟೆಗೆ ಹೋಗಿ ನಿರಾಶನಾಗಿ ಹಿಂದುರುಗಿದಂತೆ ಕಪಾಟು ಸೇರಿತು. ಮುದುಕಿಯ ಕೈ ಕಸಬರಗಿ ಮನೆಯ ಮೂಲೆ ಸೇರಿತು.

ಮೂಗಿಗೆ ಅಡರುವ ವಾಸನೆಗೂ ತಿಂದ ಕೂಳಿಗೂ ಹೋಗುವ ಕಕ್ಕಸ್ಸಿಗೂ ವ್ಯತ್ಯಾಸವಿಲ್ಲದಂತೆ ಬದುಕಬೇಕಾಗಿ ಬಂದದ್ದರಿಂದ ಮುದುಕಿ ಹಾಳಾದ ಇಲಿಗಳನ್ನು ಶಪಿಸುತ್ತಿದ್ದಳು. ಮುದುಕ ವಯಸ್ಸು ಮುಗಿಯಿತಲ್ಲ ಎಂದು ಲೊಚಗುಡುತ್ತಿದ್ದ. ಆದರೂ ಒಮ್ಮೆ ಪ್ರಯತ್ನಿಸುವುದೆಂದು ಬಟ್ಟೆ ಒಣಹಾಕಲಿಕ್ಕೆ ಕಟ್ಟಿದ್ದ ಹಗ್ಗವ ತಂದು ಅಟ್ಟದ ತುದಿಯ ಜಂತಿಗೆ ಕಟ್ಟಲು ಒದ್ದಾಡಿದ. ಅದು ಹೇಗೋ ಆ ಕಂಬದ ನೆರ್ತಿಗೆ ಹಗ್ಗ ಈ ಕಡೆಯಿಂದ ಆ ಕಡೆಗೆ ಪಾಸಾಗಿದ್ದು ಕೊಂಚ ಸಮಾಧಾನವೆನಿಸಿತು. ಹಗ್ಗದ ತುದಿ ಮುಲುಕು ಗಂಟು ಹಾಕಿ ನೇಣು ಬಿಗಿದಂತೆ ಜಂತಿಗೆ ಹಗ್ಗ ಬಿಗಿಯಾಗಿಸಿದ. ಆದರೂ ಅಟ್ಟ ಏರುವುದು ಅಷ್ಟು ಸುಲಭದ್ದಾಗಿರಲಿಲ್ಲ. ಅಟ್ಟದ ಮೇಲೆ ಕಳ್ಳಹೆಜ್ಜೆಯಿಟ್ಟು ಹಗ್ಗದಲ್ಲಿಯೇ ಹೆಚ್ಚಿನ ಭಾರ ಬಿಡುವುದೆಂದು ನಿರ್ಧರಿಸಿದ. ತನ್ನ ಯಾವತ್ತಿನ ಮೂರುಸೆಲ್ಲಿನ ಬ್ಯಾಟರಿ ಹಿಡಿದು ಅಟ್ಟ ಏರಲು ಹೊರಟುದನ್ನು ಕಂಡ ಮುದುಕಿಗೆ ಇದು ಯಾಕೋ ಸರಿಹೋಗಲಾರದೆನಿಸಿತೋ ಏನೋ… ಕುತೂಹಲದಿಂದ ಜಗಲಿಯ ಆ ತುದಿಗೆ ನಿಂತು ಗಂಡನ ಸಾಹಸವನ್ನು ದಿಟ್ಟಿಸತೊಡಗಿದಳು.

ಜೀಟಿಗ್ಗಾಲು ಕೊಟ್ಟು ಹಗ್ಗದ ತುದಿ ಹಿಡಿದು ಅಟ್ಟದ ಒಂದು ಮೆಟ್ಟಿಲ ಮೇಲೆ ಕಾಲಿಟ್ಟ, ಎರಡು, ಮೂರು, ನಾಲ್ಕು, ಐದು, ಆರು… ಹೀಗೆ ಹಗ್ಗದಲ್ಲಿ ಜೋತಾಡಿಕೊಂಡು ಅಟ್ಟ ಏರಿದ ಮುದುಕ ಹಿಮಾಲಯವೇರಿದ ಸಂತಸದಲ್ಲಿ ಇಲಿಯ ಅನಾಥ ಶವವನ್ನು ಹುಡುಕಿ. ಕವರೊಂದರಲ್ಲಿ ಕೊಳೆತ ಇಲಿಯನ್ನು ಕಟ್ಟಿ ಮುದುಕಿ ನಿಂತ ಕಡೆ ತೂರಿದ. ಹುಸಿಕೋಪ ನಟಿಸುತ್ತಲೇ ಮುದುಕಿ ಮೂಗು ಮುರಿದಳು. ಹತ್ತುವಾಗ ಹತ್ತಿದ. ಇಳಿಯುವುದು ಹೇಗೆ..? ಈಗಾಗಲೇ ರಟ್ಟೆಯೊಳಗಿನ ಶಕ್ತಿಯಲ್ಲವನ್ನೂ ಹಗ್ಗದ ಮೇಲೆ ಜೋತಾಡುವುದರಲ್ಲಿ ಕಳೆದುಕೊಂಡಿದ್ದ. ಈಗ ಮತ್ತೆ ಯಥಾಪ್ರಕಾರ ಹಗ್ಗದೊಂದಿಗೆ ಇಳಿಯಲು ಹವಣಿಸಿದ. ಎರಡು ಮೆಟ್ಟಿಲಷ್ಟು ಇಳಿದ ಮೇಲೆ ಹಗ್ಗ ಹಿಡಿದ ಅಂಗೈ ಕಾವು ಏರಿದ್ದರಿಂದ ಕೈ ಸೋತಂತನ್ನಿಸಿತು ಮೂರು ಬಿಟ್ಟು ನಾಲ್ಕನೆಯ ಮೆಟ್ಟಿಲ ಮೆಲೆ ಕೊಂಚ ಸುಧಾರಿಸುವುದೆಂದು ಕಾಲೂರಿ ನಿಂತ. ಒಂದು ಕೈ ಹಗ್ಗದಿಂದ ತೆಗೆದು ಗಾಳಿ ಊದಿಕೊಂಡ. ಮತ್ತೊಂದು ಕೈಯೂ ಹಾಗೆ ಮಾಡಲಿಕ್ಕಾಗಿ ಕೈ ಬದಲಿಸುವಾಗ ಲಡ್ಡಾದ ನಾಲ್ಕನೆಯ ಮೆಟ್ಟಿಲು ಪತರಗುಟ್ಟಿತು. ಹುಸಿಕೋಪದಲ್ಲಿ ಬಾಗಿಲ ಚೌಕಟ್ಟಿಗೆ ಆತು ನಿಂತಿದ್ದವಳ ಎದೆ ಧಸಕ್ಕೆಂದಿತು. ಮುದುಕ ಅಯ್ಯೋ ಎನ್ನುವುದರೊಳಗೆ ಹಾರಿ ಬಂದ ಮುದುಕಿ ಮುದುಕನ ಕಾಲು ಹಿಡಿದು ಅಮಾತ್ತನೆ ಎತ್ತಿಕೊಂಡಿದ್ದಳು. ಮುದುಕನ ಒಂದು ಕೈ ಹಗ್ಗದ ಮೇಲಿದ್ದರೂ ಮುದುಕಿಯ ಈ ಹಿಡಿತ ಮುದನೀಡಿತು.

ಆ ದಿವಸ ಸಂತೆಯಿಂದ ಬರುವಾಗ ಮುದುಕನ ಕೈಯಲ್ಲೊಂದು ಪೊಟ್ಟಣವಿತ್ತು. ಮುಖ ಸಿಂಡರಿಸಿಕೊಂಡು ಆ ಕಡೆ ನೋಡಿದರೂ ಅದು ತನಗೆ ಸಂಬಂಧಿಸಿದ್ದಲ್ಲವೆಂದು ಮುದುಕಿ ಅಡುಗೆ ಮನೆ ಹೊಕ್ಕಳು. ಚಣ ತಡೆದು ಹಿಂದೆ ತಿರುಗಿ ಮುದುಕಿ ನೋಡಿದಳು. ಮುದುಕ ಆ ಪೊಟ್ಟಣದೊಳಗೆ ತಂದಿದ್ದ ಮಲ್ಲಿಗೆಯನ್ನು ಸಿನಿಮಾದ ಹೀರೋನಂತೆ ತನ್ನ ಬಲಗೈ ಮುಂಗೈಗೆ ಸುತ್ತಿಕೊಂಡು ಅಡುಗೆಯ ಮನೆ ಹೊಕ್ಕ. ಹಿಂದಿನಿಂದ ಬಳಸಿ ಬಿಗಿದಪ್ಪಲು ಪ್ರಯತ್ನಸಿದ… ಎತ್ತಿದ ಕೈ ಎತ್ತಿದಂತೆ ನೆಲಕ್ಕೆ ಕುಸಿದು ಬಿದ್ದ. ಆಕೆಯೆ ಹಾಗೋ ಹೀಗೋ ಒದ್ದಾಡಿ ಆಸ್ಪತ್ರೆಗೆ ಸಾಗಿಸಿದಳು. ಸಾವಿನ ಮನೆಯ ಗುಹೆ ಹೊಕ್ಕಿದ್ದ ಗಂಡನನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ.

ಮುಂದೆ ಮಗನೂ ಮಗಳು ಸೇರಿ ವೃದ್ಧಾಶ್ರಮದಲ್ಲಿ ಇರುವಂತೆ ಒತ್ತಾಯಿಸಿ, ಒಂದು ಆಶ್ರಮವನ್ನು ಗೊತ್ತು ಮಾಡಿ ದೂರದೂರದ ದೇಶಕ್ಕೆ ಹಾರಿ ಹೋದರು. ಎಲ್ಲ ನೆನಪುಗಳ ಬುತ್ತಿ ಕಟ್ಟಿಕೊಂಡು ಮುದುಕಿ ಊರ ಹೊರಗಿನ ಪ್ರಶಾಂತ ಬಯಲಿನ ಆಶ್ರಮದಲ್ಲಿ ಬದುಕಿಲ್ಲದ ಗಂಡನ ನೆನೆದು ಬಿಕ್ಕುತ್ತಿದ್ದಳು. ಆ ಆಶ್ರಮದ ಸೆಕ್ಯೂರಿಟಿಯೂ, ಗಾರ್ಡನ್ ಕುಶಲಿಯೂ, ಅಡುಗೆ ಭಟ್ಟನೂ ಮತ್ತು ತನ್ನದೆ ವಯಸ್ಸಿನ ಹತ್ತಾರು ಮುದುಕ ಮುದುಕಿಯರ ಎಲ್ಲಾ ಕತೆಗಳಿಗೂ ಮುಪ್ಪೊಂದೆ ತಲೆಬರಹವಾಗಿ ಕಾಣಿಸುತ್ತಿತ್ತು. ಅಲ್ಲಿ ತನ್ನದು, ತನ್ನ ಗಂಡನದು ಮಗನದು, ಮಗಳದು ಎಂದು ಮಾಡಿಟ್ಟ-ಕೂಡಿಟ್ಟ ಬದುಕಿಗಿಂತ ಆಶ್ರಮದ ಈ ಒಡನಾಟ ದೊಡ್ಡದೆನಿಸತೊಡಗಿತು.