ಇಂಗ್ಲಿಷ್ ವ್ಯಾಮೋಹ-ಕನ್ನಡದ ಕುರಿತಾದ ಅಭಿಮಾನ


ಜಗತ್ತಿನ ಎಲ್ಲ ಭಾಷೆಯ ಶ್ರೇಷ್ಠ ಕೃತಿಗಳು ಕನ್ನಡಕ್ಕೆ ಅನುವಾದವೋ, ಛಾಯಾನುವಾದವೋ, ರೂಪಾಂತರವೋ…. ಒಟ್ಟಿನಲ್ಲಿ ಯಾವುದೇ ರೂಪದಲ್ಲಿ ಬಂದರೂ ಅದರ ಸ್ವಾದ ಸ್ವಾರಸ್ಯವನ್ನು ಕನ್ನಡದವರೇ ಆಗಿ ಓದುವ ನಮಗೆ ಇಂಗ್ಲಿಷಿನ ಷೇಕ್ಸಪೀಯರ್ ಕನ್ನಡದಲ್ಲಿ ಶೇಷಣ್ಣನಾಗಿಬಿಡುತ್ತಾನೆ. ನಮ್ಮದೇ ಏಕಾಂತದ ಒಳಗಿನ ಮೊಳಕೆಯೊಡೆಯುವ ಹೊತ್ತು-ಅವನ ಸಾನೆಟ್, ನಾಟಕಗಳಲ್ಲಿ ಕೇಂದ್ರವಾಗಿರುತ್ತದೆ. ಆದರೆ ಕನ್ನಡದ ಅಭಿಮಾನವೆಂಬ ಸ್ವಹಿತಾಸಕ್ತಿಯ ದುರಹಂಕಾರ ಡಬ್ಬಿಂಗ್ ವಿಷಯದಲ್ಲಿ ಏಕಾಏಕಿ “ಡಬ್ಬಿಂಗ್ ಕನ್ನಡ ಭಾಷೆಗೆ ಮಾರಕ” ಎಂದು ಗುಡುಗುವ ಮಹಾಶಯರ ಘರ್ಜನೆಯು ಹೇಗೆ ಹಾಸ್ಯಾಸ್ಪದವಾಗಿ ಕಾಣುತ್ತದೆಯೋ ಹಾಗೇ ಈ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ (6ನೇ ತರಗತಿಯಿಂದ) ಅಳವಡಿಸುವುದರ ವಿರುದ್ಧ ಗುಡುಗಿದವರ ಬಗ್ಗೆಯೂ ಅನುಮಾನ ಮೂಡುತ್ತದೆ.

ನಾನು ವಾಸಿಸುವ ಹಳ್ಳಿಯಲ್ಲಿ ಇಂಗ್ಲಿಷ ಮಾಧ್ಯಮದ ಕಾನ್ವೆಂಟ್ ಶಾಲೆಯೊಂದಿದೆ. ಇಲ್ಲಿಗೆ ಸೇರಲು ಬರುವ ಮತ್ತು ಸೇರ್ಪಡೆ ಪಡೆದಿರುವ ವಿದ್ಯಾರ್ಥಿಗಳೆಲ್ಲ ರೈತಕುಟುಂಬದಿಂದ ಬಂದವರು. ಅವರ ಕೈಯೊಳಗಿನ ಟ್ರಂಕು-ಹಾಸಿಗೆ ಸುರುಳಿ ನೋಡುತ್ತಿದ್ದ ಹಾಗೆ ಊಹಿಸಬಹುದಾದ್ದು ಅಂದ್ರೆ ಅವರೆಲ್ಲ ಹಳ್ಳಿ ಮಕ್ಕಳೇ ಸೈ. ಹಾಗೆ ಅವರನ್ನು ಕರೆದು ಮಾತಾಡಿಸಿದಾಗ ತಿಳಿದದ್ದು ಅವರು ಇಂಗ್ಲಿಷ ಮಾಧ್ಯಮವನ್ನು ಆಯ್ದುಕೊಂಡ ಕಾರಣಕ್ಕಾಗಿಯೇ ಇಷ್ಟು ದೂರ ಬಂದವರು. ಒಂದೇ ಸಂಸ್ಥೆಯ ಕನ್ನಡ ಮಾಧ್ಯಮದ ಮಾಧ್ಯಮಿಕ ಶಾಲೆಯಲ್ಲಿ ಸೀಟುಗಳು ಇನ್ನೂ ಪೂರ್ಣ ಭರ್ತಿಯಾಗಿಲ್ಲವಾದರೂ ಇಂಗ್ಲಿಷ್ ಮಾಧ್ಯಮದ ಮಾಧ್ಯಮಿಕ ಶಾಲೆಯಲ್ಲಿ ಮಿತಿಮೀರಿ ಪ್ರವೇಶಗಳು ಆಗಿದ್ದವು. ದುರಂತವೆಂದರೆ ಕಳೆದ ಸಾಲಿನಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ್ದ ಕೆಲವು ವಿದ್ಯಾರ್ಥಿಗಳಿಗೆ ತಡವಾಗಿ ಸೇರಲು ಬಂದ ಕಾರಣಕ್ಕಾಗಿ ಪ್ರವೇಶ ಸಿಕ್ಕದಾಗಿದೆ. ಹಾಗೆ ತಡವಾಗಿ ಪ್ರವೇಶ ಬಯಸಿ ಬಂದ ಸಾಣೇಹಳ್ಳಿಯ ಪಕ್ಕದ ಊರಿನ ಪೂಜಾ ಎಂಬ ಹುಡುಗಿ ಇಂಗ್ಲಿಷ್ ಮಾಧ್ಯಮದಲ್ಲಿ ಪ್ರವೇಶ ಸಿಗಲಿಲ್ಲವೆಂಬ ಕಾರಣಕ್ಕಾಗಿಯೇ ದಿನಾಂಕ 09/ಜೂನ್/2012 ರಂದು ವಿಷಕುಡಿದು ಆತ್ಮಹತ್ಯ ಮಾಡಿಕೊಂಡಿದ್ದಾಳೆ. ಆ ಮಗಳ ತಂದೆ ಆ ರೈತ ಯಾವ ಕೆಲಸದ ಅವಸರಕ್ಕಾಗಿ ಅವನು ತಡವಾಗಿ ಬಂದನೋ ಅದನ್ನು ಶಪಿಸುತ್ತಿದ್ದಾನೆ. ಈ ಹಳ್ಳಿಮಕ್ಕಳ ಇಂಗ್ಲಿಷ್ ವ್ಯಾಮೋಹ-ಕನ್ನಡ ಪ್ರೀತಿಯನ್ನ ಕಂಡಾಗ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ ಅವಶ್ಯಕತೆಯನ್ನು ಕುರಿತಾಗಿ ಗಹನವಾಗಿಯೇ ಆಲೋಚಿಸಬೇಕಾಗಿದೆ.

ಹುಲಿ ಸಿಂಹ ಶಾರ್ದೂಲಗಳ ಜೊತೆಗೆ ಹುಲ್ಲೆ ಹಸು ಕುರಿಗಳು ಒಡನಾಡಿಕೊಂಡು ಬದುಕುವ ಮಾರ್ಗವೊಂದು ತೆರೆದುಕೊಂಡದ್ದು ಈ ಇಂಗ್ಲಿಷ್ ಎಂಬ ಮಾಯಾವಿ ಭಾಷೆಯಿಂದ ಎಂಬುದನ್ನು ಅರ್ಥಮಾಡಿಕೊಳ್ಳುವುದಾದರೆ ಸಮಾನ ಶಿಕ್ಷಣ ಸಾಧ್ಯವಾಗುತ್ತದೆ. ಆದರೆ ಈ ಬುದ್ಧಿವಂತ ವರ್ಗ  ಹೋರಾಟದ ಕೆಚ್ಚೆದೆಯ, ಬೀಸು ದೊಣ್ಣೆಯ ತುಂಬು ಅಭಿಮಾನದ ಗುಟುರು ಹಾಕುತ್ತಲಿದೆ. ಅದು ಯಾರ ವಿರುದ್ಧ – ಶೂದ್ರಾತಿಶೂದ್ರ ಬಡವರ, ಹಳ್ಳಿಗರ, ರೈತರ ಮಕ್ಕಳ ವಿರುದ್ಧ. ಭಾಷೆಯೂ ಕೀಳರಿಮೆಯನ್ನು ಸೃಷ್ಟಿಸುತ್ತದೆ. ಹೊಸ ಸಂವೇದನೆಯು ಭಾಷೆಯೊಂದಿಗೆ ನಮ್ಮ ನೆಲಕ್ಕೆ ಬಂದಿರುವುದನ್ನು ಯಾವ ಕೆಚ್ಚೆದೆಯ ಕನ್ನಡಾಭಿಮಾನಿಯೂ ಮರೆಯಲಾರ… ಹಾಗೆ ಬಂದ ಇಂಗ್ಲಿಷ್ ನಮ್ಮ ರಾಜ್ಯದ ಕರಾವಳಿ ಭಾಗದಲ್ಲಿ ತನ್ನ ಅಸ್ತಿತ್ವದ ನೆಲೆಯನ್ನು (ಇಂಡಿಯಾದ ಕರಾವಳಿಯಲ್ಲೂ)  ಕಂಡುಕೊಂಡಿತು. ಕನ್ನಡದಲ್ಲಿ ಯೋಚಿಸುವವನು ಅಂಗ್ರೇಜಿಯಲ್ಲಿ ವಿವರಿಸಬಲ್ಲವನಾಗಿರುತ್ತಾನೆ. ಅಂಥವನು ಎಲ್ಲ ದೇಶಗಳ ಎಲ್ಲ ಕಂಪನಿಗಳಲ್ಲೂ ಕೆಲಸ ಮಾಡಬಲ್ಲವನಾಗಿರುತ್ತಾನೆ. ಅವನಿಗೆ ಸಿಗುವ ಪ್ರಾಧಾನ್ಯತೆಯನ್ನು ಕನ್ನಡದಲ್ಲಿ ಯೋಚಿಸಿ ಕನ್ನಡದಲ್ಲೇ ವ್ಯವಹರಿಸಬಲ್ಲಾತನು ಪಡೆಯಲಾರ, ಇದನ್ನು ಅರ್ಥವತ್ತಾಗಿ ವಿವರಿಸುವ ಅಗತ್ಯವಿಲ್ಲ. ಯಾಕಂದ್ರೆ ಮಾಧ್ಯಮದ ಆಯ್ಕೆಯಲ್ಲಿ ಎರಡು  ವರ್ಗಗಳು ಗೆರೆ ಕೊರೆದುಕೊಂಡೇ ಹುಟ್ಟಿಕೊಳ್ಳುತ್ತಿರುವ ಈ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಸಿಗುವ ಮಾನ್ಯತೆ ಕನ್ನಡಕ್ಕೆ ಸಿಕ್ಕಿಲ್ಲ.

ಆದರೆ…..

ಓದು ಚಿಂತನೆ ಅನ್ನುವುದು ವಿಶ್ವವ್ಯಾಪಕವಾಗಿ ಆಯಾ ಭಾಷೆಗಳಿಂದ ತುರ್ಜುಮೆಯ ರೂಪದಲ್ಲಿ ಸಿಕ್ಕುವುದು ಇಂಗ್ಲಿಷ್ ಎಂಬ ಕೊಂಡಿಯೊಂದರ ಮುಖೇನವೆಂಬುದು ಸಕಲ ಜೀವಾತ್ಮರಿಗೂ ತಿಳಿದ ಸತ್ಯ. ಹಾಗೆಂದ ಮಾತ್ರಕ್ಕೆ ಇಂಗ್ಲಿಷ ದೇವಭಾಷೆ ಏನೂ ಅಲ್ಲ. ಸಂಪರ್ಕ ಸಹಜವಾದ ಜಗತ್ತಿಗೆ ತಿಳಿದ ಏಕೈಕ ಭಾಷೆ ಇಂಗ್ಲಿಷ್ ಆದ್ದರಿಂದ ಇಂಗ್ಲಿಷ್ ಮಾಧ್ಯಮವನ್ನು ಖುದ್ದಾಗಿ ಸರಕಾರವೇ ಅಳವಡಿಸುತ್ತಿರುವಾಗ ಅದನ್ನು ವಿರೋಧಿಸುವುದು ಯಾವ ನ್ಯಾಯ…? ಕನ್ನಡದ ಆಸೆ-ಭಾಷೆಗಳೆರಡೂ ಆಳವಾಗಿ ಬೇರೂರಿರುವುದು ಬರೀ ಮೌಖಿಕವಾಗಿಯೇ ಏನೂ ಇಲ್ಲ. ಭಾಷೆಯ ಅಧ್ಯಯನ ಮತ್ತು ಸಂಶೋಧನೆಗಳೊಂದಿಗೆ ಕನ್ನಡದ ನೆಲೆ ದೂರದೃಷ್ಟಿವುಳ್ಳದ್ದಾಗಿದೆ. ಈಗ ನಿಜಕ್ಕೂ ಈ ಭಾಷೆಯ ವಿಷಯದಲ್ಲಿ ಮುಜುಗರ ಅನುಭವಿಸುತ್ತಿರುವವರು ನನ್ನಂತೆ ಹಿಂದುಳಿದ ವರ್ಗದಿಂದ ಬಂದವರು, ತೀರ ಬಡಕುಟುಂಬದಿಂದ ಬಂದವರು, ಹಳ್ಳಿಯಿಂದಲೇ ಓದು ಆರಂಭಿಸಿದವರು. ಕನ್ನಡದ ಪರವಾಗಿ ಮಾತಾಡುತ್ತಿರುವವರು ಕೆಲವರು ಸರಕಾರಿ ಶಾಲೆಯಲ್ಲಿ ಓದಿ ಬಂದದ್ದನ್ನ ಮತ್ತು ತಮ್ಮ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಓದುತ್ತಿರುವುದನ್ನ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಈ ಸಮರ್ಥನೆ ಕೊಟ್ಟ ಕಾರಣಕ್ಕೆ ಇವರು ಭಾಷೆಯನ್ನು ಕಟ್ಟಲು, ಉಳಿಸಲು ಹೊರಾಟಕ್ಕೆ ಯೋಗ್ಯರು ಎಂಬ ಯಾವ ಗ್ರೇಡು ಸಿಗುತ್ತದೋ ಗೊತ್ತಿಲ್ಲ. ಆದರೆ ಇವರ ಅಭಿಮಾನ ಒಂದು ವರ್ಗದ ಜನರ ಕನ್ನಡದ ಪ್ರೀತಿಯನ್ನು, ಇಂಗ್ಲಿಷ್ ಕುರಿತಾದ ವ್ಯಾಮೋಹವನ್ನು ಹೊಸಕಿ ಹಾಕುತ್ತಿದೆ.

ಇಂಗ್ಲಿಷ್ ಮತ್ತು ಕನ್ನಡವೆಂಬ ಓದುವ ಮಾಧ್ಯಮದ ಒಳಾಂಗಣದ ಒಳಗೇ ರಚಿತಗೊಳ್ಳುವ ಈ ಎರಡು ವರ್ಗಗಳು ಬರೀ ಕನ್ನಡ-ಇಂಗ್ಲಿಷಿನದ್ದು ಎಂದು ವರ್ಗೀಕರಿಸಿದರೆ ತಪ್ಪಾದೀತು. ಇದರಲ್ಲಿ ಮೇಲ್ವರ್ಗ ಮತ್ತು ಕೆಳವರ್ಗ(ಹಿಂದುಳಿದ) ಎಂಬುದರ ನಡುವೆ ಮಧ್ಯಮ ವರ್ಗವೆಂಬ ಮತ್ತೊಂದು ಕವಲಿದೆ. ವಲಸಿಗರು ಮತ್ತು ಶ್ರಮಿಕ ನಗರವಾಸಿ ಮಕ್ಕಳು ಇಂಗ್ಲಿಷ್ ಮಾಧ್ಯಮವೆಂದು ಪ್ರವೇಶ ಪಡೆಯುವ ಎಷ್ಟೋ ಶಾಲೆಗಳಲ್ಲಿ ಸೌಲಭ್ಯದ ಕೊರತೆಯಿಂದಾಗಿ ಅರೆಬರೆ ಶಿಕ್ಷಣ ಪಡೆಯುವ ಇವರು ಅಗಾಧವಾಗಿ ಕನ್ನಡವನ್ನು ಪ್ರೀತಿಸುತ್ತಾರೆ ಅಂತೆಯೆ ಇಂಗ್ಲಿಷನ್ನು ಮೆಚ್ಚುತ್ತಾರೆ. ಇವರಲ್ಲಿ ಭಾಷೆಯ ಹಂಬಲದ ಕನಸುಗಳು ಭರವಸೆಯ ಬದುಕನ್ನು ಚಿಗುರಿಸುತ್ತಿರುತ್ತವೆ. ಕನ್ನಡದ ನವಮಾನವ ಕಲ್ಪನೆ ರೂಪುಗೊಳ್ಳುವುದಾದರೆ ಈ ಮಕ್ಕಳು ಹರಿದಾಡುವ ಅಂಗಳದಲ್ಲೆಲ್ಲ ಕನ್ನಡದ ಕಂಪು ಸೂಸೀತು. ಇವರ ಚೈತನ್ಯವೇ ಎರಡರ ಸೇತುವೆ ಆದೀತು ಎಂಬ ಭರವಸೆಯನ್ನು ನಾವು ಇಡಬಹುದಾಗಿದೆ. ಅವಸರದಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣವನ್ನು ಜಾರಿಗೊಳಿಸಿದರೆ ಸರಕಾರಿ ಶಾಲೆಗಳ ಬೋಧನಾ ಸೌಕರ್ಯ ಹೇಗಿದೆ? ಇಂಗ್ಲಿಷ್ ಕಲಿಕೆಯನ್ನು ಸಮರ್ಥವಾಗಿ ಮಾಡಬಲ್ಲ ಶಿಕ್ಷಕರು ಎಲ್ಲಿದ್ದಾರೆ ? ಇದು ದೂರದೃಷ್ಟಿಯುಳ್ಳ ಯೋಜನೆ ಅಲ್ಲ…  ಮುಂತಾಗಿ ಪ್ರಶ್ನೆಗಳು, ಅನುಮಾನಗಳು ಹುಟ್ಟಿಕೊಳ್ಳುತ್ತವೆ, ಆದರೆ ಅಂತದ್ದೊಂದು ಅವಕಾಶ ಈ ಮಧ್ಯಮವರ್ಗೀಯ ಮಕ್ಕಳಿಗೆ ದಕ್ಕುತ್ತಿರುವಾಗ ಅಪ್ರಮಾಣಿಕ, ಹಣ ಮಾಡುವ ಅಡ್ಡಾದ, ಮ್ಯಾನೇಜಮೆಂಟ್ ವರ್ಚಸ್ಸಿನ ಖಾಸಗಿ ಒಡೆತನದ ಶಿಸ್ತಿನ ಶಾಲೆಗಳಿಗಿಂತ ಸರಕಾರೀ ಶಾಲೆಗಳೇ ಉತ್ತಮವಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯನ್ನು ಈ ವರ್ಷದ ಸರಕಾರಿ ಶಾಲೆಗಳ ಫಲಿತಾಂಶ ಗಮನಿಸಿದವರು ಅಲ್ಲಗಳೆಯಲಾರರು. ದೂರದೃಷ್ಟಿ ಸರಕಾರಕ್ಕಿರಲಿಕ್ಕಿಲ್ಲ. ಖಂಡಿತ ಇಂಗ್ಲಿಷ್ ಮಾಧ್ಯಮವನ್ನು ಆಯ್ದುಕೊಳ್ಳುವ ಬಡಕೂಲಿ ಕಾರ್ಮಿಕರ ಮಕ್ಕಳಿಗೆ, ರೈತ ಕುಟುಂಬದ ಮಕ್ಕಳಿಗೆ ತಮ್ಮ ಬದುಕಿನ ದೂರದೃಷ್ಟಿ ಮತ್ತು ಇಂಗ್ಲಿಷ್ ವ್ಯಾಮೋಹ ಇರುವುದಂತೂ ಸತ್ಯ.

-ಮಹದೇವ ಹಡಪದ

Advertisements