ಸಾವು ಮತ್ತು ಕ್ರೌರ್ಯ


ಶಾಂತಿ-ಉಪವಾಸಗಳಿಂದ ಗೆಲ್ಲುತ್ತಿದ್ದವನೂ
ಸೋಲಿಸಿಯೇ ಸೊಲಿಸುತ್ತಿದ್ದನೇನೋ
ನಡುಬಗ್ಗಿಸಿ ಶರಣು ಮಾಡಿದನಲ್ಲ ನಂಬಿದ
ಮುಗಿದ ಕೈಯಲ್ಲಿ ಪಿಸ್ತೂಲು.

ಬುದ್ದನ ತೇಜಸ್ಸಲ್ಲಿ ಮಂದನಗೆಯಿತ್ತು…
ಅವನೂ ಅಷ್ಟೆ
ಕ್ರೂರಿಯಾಗಿಯೇ ಎದುರು ಬಂದಿದ್ದ
ಮನಸೋತ ಕುಲುಮೆಯಲ್ಲಿ ಕ್ರೌರ್ಯ ಕರಗಿತು.

ನಿಯಮ


ಹೊಂದಿಸು
ನಿನ್ನ ಕೈಕಾಲು ಮನಸುಗಳ
ರಸ್ತೆಬದಿಯ ಸಣ್ಣ ಪಥಕೆ

ದಾರಿಯ ಗರ್ವದಲ್ಲಿ
ಲೆಖ್ಖವಿರದ ಸಂಜ್ಞೆಗಳಿವೆ
ಉಲ್ಲಂಘಿಸಿದರೆ ಹುಶಾರ್

ರಾಜದಾರಿ
ಅದು ಸುದ್ದಿಗೆ ಬಂದುದೆ
ನಿಯಮಗಳ ಕಾರಣಕ್ಕಾಗಿಯಲ್ಲವೇ!

ನಿನ್ನ ದಾರಿಗೆ
ಅಡ್ಡಬರುವುದೇನೂ ಇರುವುದಿಲ್ಲ
ನಿಯಮಗಳ ಮುರಿಯುವವ ನಿನ್ನ ಪಥಕೂ ನುಗ್ಗಬಲ್ಲ

ಎಚ್ಚರವೊಂದಿದ್ದರೆ ಸಾಲದು
ಉಂಗುಟದಿಂದ ನೆತ್ತಿಯತನಕ ಜಾಗ್ರತೆ
ನುಗ್ಗುವ ಹಂಬಲಕ್ಕೆ ಕಾಲ ತಡೆಯೊಡ್ಡುವುದಿಲ್ಲ.

ರಾಮಾವತಾರ


 

ರಸ್ತೆ ತುಂಬೆಲ್ಲ ದುರ್ಗೆಯ ಆಯುಧಗಳ ಮೆರವಣಿಗೆ
ನೆಲವುಂಡ ರಕ್ತದಲ್ಲಿ ಯಾವ ಕಾವೂ ಇರಲಿಲ್ಲ
ಅರೆಬೆತ್ತಲ ಫಕೀರ ಮತ್ತೆಮತ್ತೆ ಚಿಗಿತು ಸಾಯುತ್ತಿರುವನು
ಅಯ್ಯೋ ರಾಮರಾಮಾ
ನಿನ್ನ ಪಾದದ ಸುತ್ತಳತೆ ತಿಳಿಯಲಿಲ್ಲ…!

ಇದಿಷ್ಟೆ ಹೇಳಿದರೆ ಮೈಕಾವು ತಣಿದೀತೆ
ಈಗಷ್ಟೆ ಬದುಕಿದ್ದವನು ಉಸಿರಾಡುವನೇ..?
ನೆತ್ತರಿನ ಮಡುವಿನಲ್ಲಿ ಚಿರನಿದ್ರೆಗೆ ಜಾರಿದ
ಎಳಸು ಧ್ವನಿಯ ಹಿಸುಕಿದೆ. ರಾಮರಾಮಾ
ಪಟದಲ್ಲಿ ನೀನು, ನಿನ್ನ ಸೈನಿಕರೇ ಇಲ್ಲಿ ನಾಯಕರು.

ಧರ್ಮದ ನೆರಳಲ್ಲಿ ಅಂಕುಶ
ಧರ್ಮದ ನೆಶೆ ಇಳಿಸಲು
ನಿನ್ನ ನೆಲದ ಕರುಣೆ ಪಡಸಾಲೆಯಿಂದಿಳಿದು
ಬೀದಿಯ ಬದುಕು ಕಾಣಲಾರದು.
ಮಾತು-ದ್ವೇಷದ ಗಾಳಿಗುಂಟ ಹಾರಿ
ಸುಟ್ಟು ಆಗಸಕ್ಕಂಟಿ
ಸೇಡು ಮಾರಿಯ ಸೋಗು ಹಾಕಿ
ಸಂಪ್ರದಾಯದ ಸನಾತನ ರಥವೇರಿದೆ

ಈ ಹೊಸ ಅವತಾರ ನಿನಗೊಪ್ಪದು
ಗಳಿಗೆಗೊಮ್ಮೆ ನೀನಿಟ್ಟ ಪಾದದ ಹೆಜ್ಜೆಗುರುತು
ಅಬಬ ! ಅದೇನದು ಕೆನ್ನೀರ ಓಕುಳಿ
ಒಂದಿನಿತು ಕರುಣೆ ಸಾಕು ರಾಮರಾಮಾ
ಹೆಬ್ಬೆರಳ ಮಾಲೆಯ ಕೆಳಗಿಳುಹಲು ಸೌಹಾರ್ಧ ಸೌಧ ಕಟ್ಟಲು.

ಬಿಡಿಪದ್ಯಗಳು


1

ಅವನಿಗೆ ಭಾಷೆ ತಿಳಿದಿದೆ
ಮಾತಾಡುತಿದ್ದಾನೆ
ಅದು ಮನುಷ್ಯ ಭಾಷೆ ಖಂಡಿತ ಅಲ್ಲ

2

ಬಾಯಿ ಚಪಲದ ನಂಜು ನೆತ್ತಿಗೇರಿದೆ
ಸಮರ್ಥಿಸುತ್ತಿದ್ದಾನೆ
ಶುದ್ಧತನದ ಒಳಸಂಚು ತಿಳಿದಿದೆ
ಆದರೂ ಬಲಿಕೊಡಲು ಮುಂದಾಗಿದ್ದಾನೆ

3

ತಲೆಯೊಳಗೆ ಬುದ್ಧಿ ಇದ್ದವರದ್ದೊಂದು ಸಮಾವೇಶ
ನಿರ್ಣಯಗಳ ಓದುವಾತ ಕೇವಲ ಮನುಷ್ಯನಾಗಿರಲಿಲ್ಲ
ಅಸಮಾನ್ಯ ಬುದ್ಧಿವಂತನಾಗಿದ್ದ
ಸಾಕ್ಷಾತ್ ದೇವಮಾನವನಾಗಿದ್ದ

ತನ್ನೆದೆಯ ಪಿಸು ಮಾತಿಗಿಂತ
ಈ ನೆಲದ ಒದ್ದೆ ಮಣ್ಣಿನ
ರಕ್ತ ಕಲೆಗಳು ಅವನನ್ನು ತೋಯಿಸಿದ್ದವು
ಪಾಪ ! ಕೇವಲ ಮನುಷ್ಯತ್ವ ಸಾಯಿಸಲು ಸಿದ್ಧನಾಗಿದ್ದ

4

ಮನುಕುಲದ ದ್ರೋಹಿ ನೀನು ಸರ್ವಾಧಿಕಾರಿಯೇ
ನಿನ್ನ ಯುದ್ಧ ಆಯ್ಕೆಗೆ ನನ್ನದೊಂದು ಧಿಕ್ಕಾರ

ನಿನ್ನ ಬಾಂಬುಗಳು ಸದ್ದು ಮಾಡಲಾರವು
ಗಾಳಿಗೆ ನುಗ್ಗಿ ಮನೆಮನ ಹೊಕ್ಕು ವಿಷವುಕ್ಕಿಸುತ್ತವೆ