ಪ್ರೇಕ್ಷಕ-ಪರಿಣಾಮ

ಉಪದೇಶ, ಸಂದೇಶ, ನೀತಿಯನ್ನು ಹೆಳಬೇಕಾದ್ದು ಕಲೆಯ ಉದ್ಧೇಶವೆಂದೂ ಅದೇ ವಿಧಾನದಲ್ಲಿಯೇ ಪ್ರದರ್ಶನಗಳು ಆಸ್ವಾದನೆಗೆ ಸಿಕ್ಕಬೇಕೆಂದು ಬಯಸುವುದು ಸಾಮಾನ್ಯವಾಗಿ ಎಲ್ಲ ವಯೋಮಾನದ ಪ್ರೇಕ್ಷಕರಲ್ಲೂ ಇದ್ದೆ ಇರುತ್ತದೆ. ಈ ಜನಪ್ರಿಯ ಬೇಡಿಕೆಯೂ ಆಯಾ ವಯಸ್ಸಿಗನುಗುಣವಾದ ರೀತಿಯಲ್ಲಿ ವ್ಯಕ್ತಗೊಳ್ಳುತ್ತದೆ. ಹುಸಿ ಮೌಲ್ಯಗಳನ್ನ ಬಿತ್ತರಿಸುವುದನ್ನು ಪ್ರೇಕ್ಷಕ ಬಯಸುತ್ತಾನೆಂದು ರುಚಿ ಬದಲಿಸುವ ಪ್ರಯತ್ನ ಮಾಡದಿರುವುದು ತಪ್ಪು. ಕನ್ನಡದ ಚಿತ್ರರಂಗ ಚರಿತ್ರೆಯಲ್ಲಿ ಹೊಸ ಅಲೆಯ ಸಿನೆಮಾಗಳಲ್ಲಿ ಮೊತ್ತಮೊದಲಿನದು ಎಂದು ಗುರುತಿಸಲಾಗುವ “ಸಂಸ್ಕಾರ”ದ ಯಶಸ್ಸಿಗೆ ಕಾರಣರಾದ ಅದೆ ಜನ ಈಗ ಆ ಶೈಲಿಯ ಸಿನೆಮಾಗಳನ್ನು ನೋಡಲಾರರೆಂದು ಹೇಳುವುದಾದರು ಹೇಗೆ… ಬಹುಶಃ ಇಲ್ಲಿ ಪ್ರೇಕ್ಷಕನ ಬಯಕೆ ಮುಖ್ಯವಲ್ಲ ತಯಾರಿಸುವವರ ಮರ್ಜಿಯನ್ನು ತೋರಿಸುವವ ಎತ್ತಿಹಿಡಿಯುತ್ತಿದ್ದಾನೆ ಎಂದೆನಿಸುತ್ತದೆ.
ಭಾರತದ ಮಹಾಕಾವ್ಯಗಳೋ ಅಥವಾ ಅವಾಸ್ತವ ನೆಲೆಯಲ್ಲಿ ಬದುಕಿನ ದಾರಿಯೊಂದರ ಅನ್ವೇಷಣೆಗಾಗಿಯೋ- ಧುತ್ತೆಂದು ಪ್ರತ್ಯಕ್ಷವಾಗು ಯಕ್ಷಿಣಿ ವಿದ್ಯೆಯ ದೃಶ್ಯಗಳು ಇಂದಿನ ಸಿನೆಮಾದಲ್ಲೂ ಕಾಣುತ್ತೇವೆ. ಇಂಥದ್ದೊಂದು ದಾರಿಯನ್ನು ಉದ್ಧೇಶಪೂರ್ವಕವಾಗಿ ನಿರ್ಮಿಸಲಾಯಿತೋ ಗೊತ್ತಿಲ್ಲ.. ಒಟ್ಟಾರೆ ಅವಾಸ್ತವಿಕ ಚಲನಚಿತ್ರಗಳ ಚಲನೆಯಲ್ಲಿ ಧುತ್ತನೇ ಪ್ರತ್ಯಕ್ಷವಾಗುವ ಕ್ಷಣಗಳು ಬಹಳಷ್ಟಿರುತ್ತವೆ. ಕರುಣಾಜನಕ ಸ್ಥಿತಿಯನ್ನು ಸೃಷ್ಟಿಸುವ ಮತ್ತು ಶಕ್ತಿ-ಯುಕ್ತಿಗಳನ್ನು ಬಳಸಿ ಕತೆಯ ಓಘಕ್ಕೆ ತೊಡರಾಗುವ ಸೆಡು-ಕೇಡುಗಳಿಗೆ ಪರಿಹಾರವಾಗಿ ನಾಯಕ ಬರುತ್ತಾನೆ. ಮೈಯೆಲ್ಲ ಬ್ಯಾಂಡೇಜ್ ಕಟ್ಟಿಕೊಂಡವ, ಸತ್ತುಬಿದ್ದಿದ್ದ ವ್ಯಕ್ತಿ ಮತ್ತೆ ಉಸುರಾಡಿ ಎದ್ದುಬರುವ, ಕೂಗಿಕೊಳ್ಳುವ ಹೆಣ್ಣಿಗೆ ಸಹಾಯಕ್ಕಾಗಿ ಎಲ್ಲೋ ಇದ್ದವ ಥಟ್ಟನೆ ಪ್ರತ್ಯಕ್ಷವಾಗುವ ಹೀಗೆ ಜೀವದ ಹಂಗು ತೊರೆದು ಹೋರಾಡುವ ನಾಯಕಪ್ರಣೀತ ಲೀಲಾಕತೆಗಳು ಸಿನೆಮಾದಲ್ಲಿ ಸಹಜವಾಗಿಬಿಟ್ಟಿವೆ.
ಈ ವಾಣಿಜ್ಯ ವಹಿವಾಟಿನವರ ಆಟಗಳು ಆಕರ್ಷಣೀಯವಾಗುವುದು ಇಲ್ಲಿಯೇ… ಆ ಸನ್ನಿವೇಶ ಆಗುಮಾಡುವ ಪರಿಣಾಮಕ್ಕಿಂತ ಥ್ರಿಲ್ ಕೊಡುವ, ಕೊಡಬಹುದಾದ ಉಮೇದನ್ನು ಸಾಮಾಜಿಕರೊಳಗೆ ತುಂಬುತ್ತವೆ. ಸಂಪತ್ತಿಗೆ ಸವಾಲ ಎಂಬ ಸಿನೆಮಾದ ಕತೆಯಲ್ಲಿ.. ನಾಯಕನಟ ಜಮೀನ್ದಾರನನ್ನು ಎದುರು ಹಾಕಿಕೊಳ್ಳುವ ಸಂದರ್ಭವನ್ನು ಅಸಹಾಯಕನಾದ ಸಾಮಾನ್ಯನು ರಾಜಕುಮಾರ ಮುಖಾಂತರ ಅನುಭವಿಸಿ ಸುಮ್ಮನಾಗುತ್ತಾನೆ. ಅಂತೆಯೇ ಈ ನಾಯಕ ಅನ್ಯಾಯದ ವಿರುದ್ಧದ ಆಕ್ರೋಶವನ್ನು ಕತ್ತಲುಕೋಣೆಯಲ್ಲಿ ಸ್ಫೋಟಿಸಿ, ಪ್ರೇಕ್ಷಕನ ಪ್ರತಿನಿಧಿಯಂತೆ ವರ್ತಿಸಿ ಅವನ ಪ್ರಶ್ನೆಗಳನ್ನು ಮುಚ್ಚಿಹಾಕುತ್ತ ದೇವರಾಗಿ ಉಳಿದುಬಿಡುತ್ತಾನೆ. ಇವತ್ತಿನ ಮಾಧ್ಯಮದಲ್ಲಿ ಪ್ರತಿಯೊಬ್ಬ ನಾಯಕ ನಟನು ನೇರ ನಿಷ್ಠುರ ಸಂದರ್ಭಗಳನ್ನು ನಿಭಾಯಿಸುತ್ತಿದ್ದರೆ ನೋಡುಗನ ಮೈ ಪುಲಕಗೊಳ್ಳುತ್ತಿರುತ್ತದೆ. ಆತ ಎಲ್ಲಿಯೂ ಹೇಳಿಕೊಳ್ಳಲಾರದ ನಿಷ್ಠುರ ಸತ್ಯಗಳನ್ನು ಸ್ಕ್ರೀನ್ ಮೇಲೆ ಕಂಡು ಮುದಗೊಳ್ಳಬಲ್ಲನೆ ಹೊರತು ಅವಿತಿದ್ದ ಒತ್ತಡವನ್ನು ಹೊರಹಾಕಲಾರ. ಹಾಗಾಗಿ ಇವತ್ತಿನ ಸಾಮಾಜಿಕ ಚಳುವಳಿಗಳು ದಿಕ್ಕಾಪಾಲಾಗಿ ಒಡೆದುಹೋಗುತ್ತಿರುವುದಕ್ಕೆ ಇದೂ ಕಾರಣವಿರಬಹುದು. ಮುಖ್ಯಪ್ರವಾಹದಿಂದ ದೂರವುಳಿದು ಬಿಡುವುದನ್ನು ಮತ್ತು ಇರುವುದೆಲ್ಲ ಹೀಗೆ ಇರುವಾಗ ಒಬ್ಬ ಏನನ್ನೂ ಸಾಧಿಸಲಾರ ಎಂಬ ತತ್ವವನ್ನು ಜನಪ್ರಿಯ ಕಲೆಗಳ ಮೂಲಕ ಜಾಗತಿಕ ಮಾರುಕಟ್ಟೆ ರವಾನಿಸುತ್ತಿರುತ್ತದೆ.
ಆದರೆ ಕಲಾತ್ಮಕ ಚಿತ್ರಗಳ ವಸ್ತು ವಿನ್ಯಾಸದ ನಿರೂಪಣೆ ನೋಡುಗನನ್ನ ಒಳಗೊಳ್ಳುವ ವಿಧಾನವೇ ಬೇರೆ. ಹಸೀನಾ ನೋವುಂಡು ಬೆಂದರೂ ಜುಲೇಖಾ ಬರೆದುಕೊಟ್ಟ ಉಲ್ಲೇಖಗಳನ್ನು ತೂರುವಲ್ಲಿ ಯಶಸ್ವಿ ಆಗುತ್ತಾಳೆ. ಮುನ್ನಿ ಇಲ್ಲವೆಂದಾದ ಮೇಲೆ ಆಕೆಗೆ ಮೌಲ್ವಿಯ ನ್ಯಾಯವೂ, ಗಂಡ ಕೊಡಬಹುದಾದ ಹಣವೂ ಬೇಡವೆನಿಸುತ್ತದೆ. ಇದರೊಳಗೆ ಯಾವ ಸಂದೇಶವೂ ಇಲ್ಲ! ಆದರೆ ಬದಲಾಗುತ್ತಿರುವ ಸಮಾಜಸ್ಥಿತಿಯ ಚಿತ್ರಣವಿದೆ. ಪುಟ್ಟಕ್ಕನ ಹೈವೇಯೆಂಬ ಜನಪ್ರಿಯ ಸೂತ್ರಗಳಲ್ಲಿ ನಿರ್ಮಿಸಲಾದ ಕಲಾತ್ಮಕ ಚಿತ್ರದ ಮೊದಲ ದೃಶ್ಯದಲ್ಲಿ ದಾರಿಹೋಕ ಡ್ರೈವರ್ ಹಣ ನೀಡಲು ಬಂದಾಗ ಪುಟ್ಟಕ್ಕ ಅದನ್ನು ನಿರಾಕರಿಸುತ್ತಾಳೆ, ಮನೆಗೆ ಬಂದಾಗ ಮಗಳು ಸೇತುವೆ ಕೆಳಗಿನ ಧಂದೆಯಲ್ಲಿ ತೊಡಗಿ ಹಣ ಸಂಪಾದಿಸುತ್ತಿರುತ್ತಾಳೆ. ಈ ವೈರುಧ್ಯದ ವ್ಯಂಗ್ಯಗಳು ಬೃಹತ್ತಾದ ಬದುಕಿನ ಕಲ್ಪನೆಯನ್ನು ಮೊಟಕುಗೊಳಿಸುವ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಜನಗಳನ್ನು ನಿರ್ವಸತಿ ಯಾತ್ರಿಗಳನ್ನಾಗಿಸುವ ಕಂದರಗಳನ್ನು ಈ ಸಿನೆಮಾದಲ್ಲಿ ನೋಡಬಹುದೇ ಹೊರತು ಈ ಚಿತ್ರದ ಸಂದೇಶವೇನೆಂದು ಹುಡುಕಲಾಗುವುದಿಲ್ಲ.
ಒಂದು ಅಭಿವ್ಯಕ್ತಿಯ ಪ್ರದರ್ಶನದ ಪರಿಣಾಮವನ್ನು ತತಕ್ಷಣದಲ್ಲಿ ಬಯಸುವುದು ತಪ್ಪೇನಲ್ಲ, ಆದರೆ ಆ ನೋಡುಗನಲ್ಲಿ ಸೆರೆಯಾದ ಭಾವಗಳು ಅವನ ಅಂತರಾಳದ ಭಾವ ಪ್ರಪಂಚವನ್ನು ಹೇಗೆ ಪ್ರವೇಶಿಸಿದವು ಅನ್ನುವುದು ಬಹಳ ಮುಖ್ಯ. ಪ್ರೇಕ್ಷಕನ ಮನಃಸ್ಥಿತಿಯೂ ಸಿನೆಮಾದ ಗ್ರಹಿಕೆಯನ್ನು ನಿರ್ಧರಿಸುತ್ತದೆ. ಅವನ ವೃತ್ತಿ, ಪ್ರವೃತ್ತಿ, ಆಲೋಚನೆಗಳೊಂದಿಗೆ ಸಂವಹನವನ್ನು ಸಾಧಿಸುವವ ನೋಡುಗನೆ ಹೊರತು, ಕಲಾಕೃತಿ ಯಾವದೇ ರೀತಿಯಲ್ಲೂ ಸಂವಹನವನ್ನು ತಾನೆ ವ್ಯಾಪಾರ ಮಾಡಲಾರದು. ಅನುಭವವನ್ನು ಪಡೆಯಬೇಕೆ ವಿನಃ ಕೊಡಲಿಕ್ಕಾಗದು. ನಟನೆಯಲ್ಲಿ ನಟನಿಗೆ ಹೀಗೆ ಅಭಿನಯಿಸಿ ಎಂದು ವಿವರಿಸಬಲ್ಲರೆ ಹೊರತು ಇದು ನಟನೆ ಹೀಗೆ ಮಾಡಿ ಎಂದು ಯಾರೂ ಹೇಳಲಾರರು. ಅದನ್ನು ಆತ ತಾನೆ ಅನುಭವಿಸಿ ಪಡೆದುಕೊಳ್ಳುತ್ತಾನೆ. ಹಾಗಾಗಿ ರಸಾನುಭೂತಿಯನ್ನು ಪ್ರೇಕ್ಷಕನೇ ಪಡೆದುಕೊಳ್ಳಬೇಕು.
ಪ್ರೇಕ್ಷಕನ ಮನದಾಳದಲ್ಲಿ ಉಳಿದುಕೊಳ್ಳುವ ಪ್ರದರ್ಶನದ ಕುರಿತಾದ ಪ್ರಶ್ನೆಗಳು ಉತ್ತರಗಳು ಆ ಕ್ಷಣದಲ್ಲಿ ಅಲ್ಲದಿದ್ದರೂ ಎಂದೋ ಒಂದು ದಿನ ಅವು ಬಯಲುಗೊಳ್ಳುತ್ತವೆ. ವೈಯಕ್ತಿಕ ನೆಲೆಯಲ್ಲಿ ಅಲ್ಲದಿದ್ದರೂ ಆ ಭಾವದ ತೀವ್ರತರ ಸ್ಪಂದನೆಯನ್ನು ಆತ ಸಮಾಜದಲ್ಲಿ ನಡೆಯುವ ಅಕ್ರಮ ಅನ್ಯಾಯವನ್ನು ಖಂಡಿಸುವಾಗಲಾದರೂ ನೆನಪಿಸಿಕೊಳ್ಳಬಲ್ಲ. ಆ ಗ್ರಹಿಕೆ ನೆನಪಿನಾಳದ ಮೆಲುಕಾಗಿ ಇದ್ದರೂ ನಿರ್ಧಾರಗಳ ಹಿಂದಿನ ಶಕ್ತಿಯಾಗಿ ಧ್ವನಿಸಿರುತ್ತದೆ. ಗಮನ ಗ್ರಹಿಕೆಯಲ್ಲಿ ಸಂಗ್ರಹವಾಗುವ ಸೂಪ್ತಭಾವಗಳು ಯಾವತ್ಕಾಲಕ್ಕೂ ಸಾತ್ವಿಕಶಕ್ತಿಯನ್ನು ನೀಡುತ್ತವೆ. ಸೃಜನಶೀಲ ಜಾಗೃತ ಮನಸ್ಸನ್ನು ಕಲೆ ಹೇಗೆಲ್ಲ ರೂಪಿಸಿರುತ್ತದೋ ಹಾಗೆಯೇ ಆ ಕಲಾಪ್ರಕಾರದ ಪರಿಣಾಮ ಸಮಾಜದ ಮೇಲೂ ಆಗಿರುತ್ತದೆ.
ಮೂಲತಃ ರಂಗಭೂಮಿಯವನಾದ ನಾನು ಪ್ರೇಕ್ಷಕರ ಮನಸ್ಸಿನಲ್ಲಾದ ಪಲ್ಲಟಗಳನ್ನು ತುಂಬ ಸೂಕ್ಷ್ಮವಾಗಿ ಗಮನಿಸಿದ್ದೇನೆ. ಪ್ರೊ, ಶಿವರುದ್ರ ಕಲ್ಲೋಳ್ಕರ್ ಅವರ ಹೊಲಗೇರಿ ರಾಜಕುಮಾರ ಕಾದಂಬರಿಯನ್ನು ನಾಟಕವಾಗಿ ರೂಪಾಂತರಿಸಿ ನಿರ್ದೇಶಿಸಿ ಕರ್ನಾಟಕದಾದ್ಯಂತ ಪ್ರದರ್ಶನ ಕೊಟ್ಟಾದ ಮೇಲೆ ಯಮುನಾ ನದಿಯಲ್ಲಿ ಅಪಾರ ನೀರು ಹರಿದು, ಒಂದು ವರ್ಷದ ನಂತರ ಗೆಳೆಯರು ಚಿಕ್ಕನಾಯಕನಹಳ್ಳಿಗೆ ಯಾವದೋ ಕಾರ್ಯಕ್ರಮ ನಿಮಿತ್ತ ನನ್ನನ್ನು ಕರೆಸಿದ್ದರು. ಅಲ್ಲಿ ಚಿಕ್ಕಮಠದ ನಾಗಣ್ಣನ ತಾಯಿ ಆ ನಾಟಕದಿಂದ ತಾನು ಬದಲಾದ ಕತೆ ಹೇಳಿದಳು. ಆವರೆಗೆ ಮಠದ ಅಂಗಳದಲ್ಲಿ ಕೆಳಜಾತಿಯ ಹುಡುಗರನ್ನು ಕಟ್ಟೆ ಏರಲೂ ಸಹ ಬಿಡದಿದ್ದ ಅವರು ಈಗ ಪಶ್ಚಾತ್ತಾಪದ ಮಾತುಗಳಾಡುತ್ತಿದ್ದರು. ನಿಜಕ್ಕೂ ಅವರು ಆ ನಾಟಕದಿಂದ ಯೋಚನಾಮಗ್ನರಾಗಿದ್ದರು. ಪರಂಪರೆಯನ್ನು ಹಿಂದೆ ಸರಿಸಿ ಸರಿ\ತಪ್ಪುಗಳನ್ನು ತೂಗುವಷ್ಟು ಜಾಗೃತರಾಗಿದ್ದರು. ಸಾಹಿತ್ಯದ ಓದಿನ ಏಕಾಂತವೂ ಓದುಗನನ್ನು ವಸ್ತುವಿನೊಳಗಿನ ಪಾತ್ರವಾಗಿಸುವಂತೆ, ಇತರೆ ಕಲೆಗಳೂ ಪ್ರೇಕ್ಷಕನಿಗೊಂದು ಮುಖ್ಯ ಪಾತ್ರವನ್ನೇ ತೆಗೆದಿರಿಸಿರುತ್ತವೆ. ಆ ಪಾತ್ರದ ಪ್ರವೇಶ ಬದುಕಿನ ಭಾಗವಾಗಿ ಯಾವಾಗ ಬೇಕಾದರೂ ಅನುಭವಕ್ಕೆ ಬರಬಹುದಾಗಿದೆ.
ಜನಪ್ರಿಯ ಮತ್ತು ಕಲಾತ್ಮಕ ಚಿತ್ರಗಳಿಗಿಂತಲೂ ಇಂದು ವ್ಯಾಪಕವಾದ ಚರ್ಚೆಗಳನ್ನು ಹುಟ್ಟುಹಾಕುತ್ತಿರುವ ವಾಸ್ತವ ನಿರೂಪಣೆಯ ಡಾಕೂಮೆಂಟರಿಗಳು ಮತ್ತೊಂದು ಬಗೆಯ ಪ್ರೇಕ್ಷಕನ ಉದ್ಧೇಶಿಸಿ ತಯಾರಾಗುತ್ತಿವೆ. ಅಲ್ಲಿ ಯಥಾವತ್ ಬದುಕಿನ ದಾಖಲೆಗಳಿರುತ್ತವೆ. ಉತ್ತರಗಳೇ ಇಲ್ಲದ, ಪರ್ಯಾಯ ಚಿಂತನೆಯ ಮಾನವೀಯ ವಾದಗಳು ಚಿತ್ರಿತಗೊಂಡಿರುತ್ತವೆ. ಕೆ.ವಿ.ಸುಬ್ಬಣ್ಣನವರು ಗುರುತಿಸುವಂತೆ ಅಭಿವ್ಯಕ್ತಿ, ಅನನ್ಯ ಸ್ವಂತಿಕೆಗಳು ಡಾಕುಮೆಂಟರಿ ಮಾದ್ಯಮದಲ್ಲಿ ಕಾಣಿಸಿಕೊಳ್ಳುತ್ತಿರುತ್ತವೆ ಆದ್ದರಿಂದ ಈ ಚಿತ್ರಗಳು ಶ್ರೇಷ್ಟಕಲಾಕೃತಿಗಳಾಗುತ್ತವೆ. ಇಲ್ಲಿ ಬದುಕಿನ ನೇರಚಿತ್ರಣಗಳನ್ನು ದಾಖಲಿಸುವುದೇ ಕಲಾಮಾರ್ಗವಾದ್ದರಿಂದ ಈ ಚಿತ್ರಗಳ ಒಟ್ಟು ಸ್ವರೂಪವೇ ಬದಲಿ ಮಾರ್ಗವೊಂದನ್ನು ಅನ್ವೇಷಿಸಿಕೊಂಡಿದೆ. ಆನಂದ ಪಟವರ್ಧನರಂಥ ಮೇಧಾವಿಗಳು ಈ ಮಾರ್ಗದಲ್ಲಿ ಸತತ ಪ್ರಯೋಗಶೀಲಾರಾಗಿದ್ದಾರೆ.

Advertisements

ಕತೆ – ಚಿತ್ರಕತೆ – ನಿರ್ದೇಶಕ..

DSC_0390ಒಂದು ಕೃತಿಯ ಜೀವಾಳವೆಂದರೆ ಸಾರ್ವತ್ರಿಕ ಕಾಲವನ್ನು ಹಿಡಿದಿಡುವ ಶಕ್ತಿಯನ್ನು ಹೊಂದಿರುವಂಥದ್ದು. ಆಳವಾದ ಅನುಭವ, ಜ್ಞಾನದ ಅನುಭಾವ, ಸಂತೃಪ್ತ ಭಾವಗಳು ಎಲ್ಲಿ ಮೇಳೈಸಿಕೊಂಡಿರುತ್ತವೋ ಅಲ್ಲಿ ಪ್ರದರ್ಶನಕ್ಕಿಂತ ಪರಾಮರ್ಶನಕ್ಕೆ ಹೆಚ್ಚಿನ ಆದ್ಯತೆ ಇರುತ್ತದೆ. ಕಲಾಕಾರರು ತಮ್ಮ ಅನುಭವ ಮತ್ತು ಜೀವನದ ವಿರೋಧಾವಿರೋಧಗಳನ್ನೆಲ್ಲ ಕೃತಿಯಾಗಿಸುವ ನಿಟ್ಟಿನಲ್ಲಿಯೇ ಉತ್ಸುಕರಾಗಿರುತ್ತಾರೆ. ಅಭಿವ್ಯಕ್ತಿ ಅನ್ನುವುದು ಕೂಡ ಕಲಾದೃಷ್ಟಿಯ ಅಂತಃಪಠ್ಯವಾಗಿ ಸತ್ಯಶೋಧನೆ ಹುಡುಕಾಟದಲ್ಲಿ ತೊಡಗಿರುತ್ತದೆ. ವಾಸ್ತವವನ್ನು ಗ್ರಹಿಸುವುದೇ ಸಿನೆಮಾ ಮಾರ್ಗದಲ್ಲಿ ಮೂಲ ಪಠ್ಯವಾಗಿರುತ್ತದೆ. ಲೂಮಿಯೇರ್ ಸಹೋದರರು ತಮ್ಮ ಮೊದಲ ಚಿತ್ರಗಳನ್ನು ಇಂಥ ವಾಸ್ತವಿಕ ಅಂಶಗಳನ್ನು ಸೆರೆಹಿಡಿಯುವ ಮೂಲಕ ಆರಂಭಿಸಿದರು. ಸಾಂದರ್ಭಿಕ ತುರ್ತುಗಳಿಗೆ ಸಂವಾದಿಯಾಗಿ ಲಲಿತಕಲೆಗಳಲ್ಲಿ ಪ್ರಯೋಗಗಳು ನಡೆಯುತ್ತಿರುತ್ತವೆ. ಆ ಒಟ್ಟು ಪ್ರಕ್ರಿಯೆಯನ್ನು ನಂತರದಲ್ಲಿ ಪಂಥಗಳನ್ನಾಗಿ ಬಿಡಿಸಿ ಅಭ್ಯಸಿಸುವುದು ಚಾಲ್ತಿಯಲ್ಲಿರುವ ಕಾರಣ ತತ್ವಗಳು ಹುಟ್ಟಿಕೊಳ್ಳುತ್ತಿರುತ್ತವೆ. ಸಿನೆಮಾದಲ್ಲಿ ಅನುಭವ – ಅಭಿವ್ಯಕ್ತಿಗಳನ್ನು ನಿರ್ವಹಿಸುವ ಕೆಲಸವನ್ನು ಸಂಕಲನ ಮಾಡುತ್ತದೆ ಆದ್ದರಿಂದ ವಾಸ್ತವದ ಜೊತೆ ವ್ಯವಹರಿಸುವ ಭಾಗಗಳನ್ನು ಮೊಂಟೇಜ್ ಮತ್ತು ಚುಟುಕು ಚಿತ್ರಗಳು ಕೂಡಿಸುತ್ತವೆ. ಆಗ ನಟನ ವರ್ತನೆಯ ಯಾವ ಗಳಿಗೆಯನ್ನು ಬೇಕಾದರೂ ಕತೆಯ ಜೊತೆ ಜೋಡಿಸಬಹುದಾಗಿರುತ್ತದೆ. ಚಿತ್ರಕತೆಯ ಸೀಮಿತ ಚೌಕಟ್ಟನ್ನು ಮೀರಿಯೂ ಹೋಗುತ್ತವೆ.
3-250x250
ವಿಜೃಂಬಿತ ಚಿತ್ರಕತೆಯಲ್ಲಿ ನಾಯಕ ನಾಯಕಿಯರ ಪರದೆ ಪ್ರವೇಶವನ್ನು ವಿಶೇಷ ಮಾದರಿಯಲ್ಲಿ ಸಂಕಲಿಸಿ ತೋರಿಸುವುದು ಬರೀ ತಂತ್ರ ಮಾತ್ರವಲ್ಲ ಅದು ಸಿನೆಮಾದ ಸೂತ್ರವೇ ಆಗಿಬಿಟ್ಟಿದೆ. ಬಂಗಾಳಿಗಳ ವ್ಯಾಪಾರೀ ಮನೋಭಾವದ ಜಾತ್ರಾ ಎಂಬ ಜನಪದ ಶೈಲಿಯಲ್ಲಿ ಕತೆಯ ಶ್ರೇಷ್ಠಭಾಗವನ್ನು ಮೊದಲು ತೋರಿಸುವುದರಿಂದಲೋ, ಧಣಿಕನೊಬ್ಬನ ಅಟ್ಟಹಾಸ, ಇಲ್ಲವೇ ಕೊಲೆ, ದರೋಡೆಗಳ ಮುಖಾಂತರವೋ ನಾಟಕವನ್ನು ಆರಂಭಿಸುವ ರೀತಿಯೊಂದಿದೆ. ಅದೇ ಮಾದರಿಯಲ್ಲಿ ದೊಂಬಿಗಳೊಂದಿಗೆ, ಕೊಲೆ, ಸುಲಿಗೆ, ದರೋಡೆಗಳಿಂದ ಎಷ್ಟೋ ಸಿನೆಮಾಗಳು ಆರಂಭವಾಗುವುದಿದೆ. ಬಹುತೇಕ ಎಲ್ಲ ಅಭಿವ್ಯಕ್ತಿಯಲ್ಲೂ ಆದಿ ಮತ್ತು ಅಂತ್ಯಗಳು ಕೆಲವೇ ಮಾದರಿಗಳಲ್ಲಿ ನಿರ್ವಹಿಸಲಾಗುತ್ತವೆ. ಸೂರ್ಯ ಹಗಲಿಗೆ ನಿಷ್ಠನಾಗಿರುವಂತೆ ಮೂಡುತ್ತಾನೆ, ಮುಳುಗುತ್ತಾನೆ ಹೇಗೊ ಹಾಗೆಯೇ ಆರಂಭ ಅಂತ್ಯಗಳಿರುತ್ತವೆ. ಹೀಗಲ್ಲದಿದ್ದರೆ ಹಾಗೆ – ಹಾಗೆಯೂ ಇಲ್ಲವೆಂದಾದಲ್ಲಿ ಇಂತೆ ಎಂಬಂತ ಸೂತ್ರಗಳು ಕತೆಯ ನಿರೂಪಣಾ ಶೈಲಿಯನ್ನು ಸರಳಗೊಳಿಸಿರುತ್ತವೆ.
ಚಂದ್ರನ ಸಂಕುಲಕ್ಕೆ ಹುಣ್ಣಿಮೆಯೊಂದೇ ಸಾಕ್ಷಿ ಆದ್ದರಿಂದ ಕಲಾತ್ಮಕ ನಿರ್ದೇಶಕ ಒಂದು ಕಲಾಕೃತಿ ಕಟ್ಟುವಾಗ ಭಾವತನ್ಮಯತೆಗಿಂತ ಹೆಚ್ಚು ವಿಮರ್ಶಾತ್ಮಕ ದೃಷ್ಟಿಕೋನವನ್ನು ಹೊಂದಿರಬೇಕಾಗುತ್ತದೆ. ಚಣಹೊತ್ತಿನ ಸಂಚಾರಿ ಭಾವಗಳ ಗ್ರಹಿಕೆಯನ್ನು ವ್ಯವಧಾನದಿಂದ ಆಲೋಚಿಸಿ, ಧ್ಯಾನಿಸಿ ಫ್ರೇಮಿನೊಳಗಿಡಬೇಕಾಗುತ್ತದೆ. ವಾಸ್ತವ ಬದುಕಿನ ಹತ್ತೆಂಟು ಚಿತ್ರಗಳು ಕೂಡ, ದೃಶ್ಯ ಸಂಬಂಧಿಯಾಗಿ ಮನದ ಮುಂದೆ ಹೊಯ್ದಾಡುತ್ತಿರುತ್ತವೆ. ಆ ಎಲ್ಲ ಅನುಭವಗಳ ನೆಲೆಯನ್ನು ಚಿತ್ರಕತೆಯ ಹಂದರದಲ್ಲಿ ಜೋಡಿಸಿಕೊಂಡು ಸಮಕಾಲೀನ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಮಾರ್ಪಾಡುಗಳನ್ನೊಳಗೊಂಡು, ಕ್ರಿಯಾಶೀಲ ಮಾಧ್ಯಮವೊಂದರಲ್ಲಿ ಅತ್ಯುತ್ಕೃಷ್ಟ ಕಲಾಕೃತಿ ಒಡಮೂಡುತ್ತದೆ.
ಒಂದೆಡೆ ಮನಃಪಟಲದಲ್ಲಿ ಹಾಕಿಕೊಳ್ಳುವ ಸೀಮಿತ ಚೌಕಟ್ಟು. ಮತ್ತೊಂದೆಡೆ ಕಲಾಕಾರನ ಸೂಪ್ತಪ್ರಜ್ಞೆಯಲ್ಲಿ ಬಚ್ಚಿಟ್ಟುಕೊಂಡಿರುವ ಹೇಳಿಕೊಳ್ಳಲಿಕ್ಕಾಗದ ಭಾವಗಳು ಈ ಎರಡೂ ರೇಖೆಗಳನ್ನು ಸಮಸಮವಾಗಿ ಕೃತಿಯ ನಿರೂಪಣೆಯಲ್ಲಿಟ್ಟು ಹೆಣೆಯುವ ಜಾಣ್ಮೆ ನಿರ್ದೇಶನದ ಜವಾಬ್ದಾರಿಯಾಗಿರುತ್ತದೆ. ಕುಲುಮೆಯಲ್ಲಿ ಕಭ್ಭಿಣವನ್ನು ಹದವಾಗಿ ಕಾಯಿಸುವ – ಕಾಯ್ದ ಕಬ್ಬಿಣಕ್ಕೆ ಏಟುಕೊಟ್ಟು ಚೂಪು ಮಾಡುವ ಕಾಯಕದಂತೆ ಇದೂ ಒಂದು ಕೌಶಲವಾಗಿರುತ್ತದೆ. ಈ ಹಂತದ ಅಸ್ಪಷ್ಟ ಗೊಂದಲಗಳಲ್ಲಿಯೂ ಕ್ರಿಯಾಶೀಲ ಮನಸ್ಸು ಎರಡಾಗಿ ಆಳದ ಏಕಾಂತದಲ್ಲಿ ತನ್ನನ್ನೇ ತಾನು ಪ್ರಶ್ನಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತದೆ. ಇಲ್ಲಿ ಆನಂದದ ಉನ್ಮಾದ, ಅರಿವಿನ ಪ್ರಜ್ಞೆಗಳು ಬೆಸೆದುಕೊಳ್ಳುತ್ತಿದ್ದಂತೆಯೇ ಆತ್ಮರತಿಯ ಸದಭಿರುಚಿ ಗುಣಲಕ್ಷಣಗಳು ಮೂರ್ತಗೊಳ್ಳಲು ಪ್ರಾರಂಭಿಸುತ್ತವೆ. ಹೀಗೆ ಭಾವಪ್ರಪಂಚವು ಬದುಕಿನೊಂದಿಗೆ ವಿಶ್ಲೇಷಣಾತ್ಮಕವಾಗಿ ವ್ಯವಹರಿಸಿದರೆ ಕಲಾಕೃತಿಯ ಆಶಯವು ಸಹೃದಯನನ್ನು ತೀವ್ರವಾಗಿ ತಟ್ಟುತ್ತದೆ. ಇಂಥದೇ ಉಮಿಯ ಶಾಖದಲ್ಲಿ ಹಣ್ಣಾಗುವ ಸರಳಗ್ರಹಿಕೆಯ ಸಿನೆಮಾಗಳು ಜನಮಾನಸವನ್ನು ಬರೀ ಮುಟ್ಟುವುದಲ್ಲ ಅದರಾಚೆಗಿನ ಜೀವಜಗತ್ತಿನಲ್ಲೂ ಪ್ರೇಕ್ಷಕನನ್ನು ಜಾಗೃತಗೊಳಿಸಬಹುದು. ಹಾಗಾಗಿ ಸಿನೆಮಾ ಭಾಷೆಯೂ ಕಾವ್ಯದಂತೆಯೇ ವಿಸ್ತಾರ ಹರವಿನ ಪ್ರತಿಮೆಗಳೊಂದಿಗೆ ಆಂತರಿಕ ಸುಖ ಸಂತೃಪ್ತ ತೊಳಲಾಟದ ಗೂಢಜಗತ್ತನ್ನು ಸದಾ ಕೆಣಕುತ್ತಲಿರುತ್ತದೆ.
ಸದಭಿರುಚಿ ಸಿನೆಮಾ ನಿರ್ದೇಶಕರುಗಳು ತಮ್ಮ ಕೃತಿಗಳಲ್ಲಿ ಬದುಕು-ಭಾವಕ್ಕಿಂತ ಹೆಚ್ಚಾಗಿ ಅದು ಪ್ರಕಟವಾಗುವ ನಿರೂಪಣಾ ಮಾದರಿಯ ಹುಡುಕಾಟಕ್ಕಾಗಿ ತುಂಬ ಶ್ರಮಪಡುತ್ತಾರೆ. ಕಾವ್ಯದಂತೆ ಸಿನೆಮಾ ಅನ್ನುವುದಾದರೆ ಅಭಿವ್ಯಕ್ತಿಯ ಶೈಲಿಗಾಗಿ ಕಸರತ್ತು ಮಾಡುವುದು ಅನಿವಾರ್ಯವೇ ಆಗುತ್ತದೆ. ತಾವೇ ಸೃಷ್ಟಿಸಿಕೊಂಡಿದ್ದ ಹಿಂದಿನ ಸಿದ್ಧಮಾದರಿಗಳನ್ನು ತಾವೇ ಒಡೆದು ಮುರಿದು ಕಟ್ಟಲು ಪ್ರಯತ್ನಿಸುವ ಕತೆಗಳನ್ನು – ಸಂವಾದಗಳಲ್ಲಿ ಭಾಗವಹಿಸಿರುವ ಎಲ್ಲ ನಿರ್ದೇಶಕರು ಹೇಳಿಕೊಂಡಿದ್ದಾರೆ. ಈ ಸಂವಾದದ ಟಿಪ್ಪಣಿಗಳನ್ನು ಗಮನಿಸಿದರೆ ಸಿನೆಮಾ ಕೌಶಲದ ಮೀಮಾಂಸೆಯ ಸೂತ್ರಗಳು ಬದಲಾಗುತ್ತಿರುವುದನ್ನು ಗುರುತಿಸಬಹುದು. ಒಳ್ಳೆಯ ಕಲಾಕೃತಿ ಬರಬೇಕಾದರೆ ಕೃತಿಯ ವಿನ್ಯಾಸದಲ್ಲಿ ನಿರ್ದೇಶಕ ಕಲೆಗಾರನಾಗಿಯೂ ಕಲಾವಿಮರ್ಶಕನಾಗಿಯೂ ಬಹುಮುಖಿ ಆಯಾಮಗಳನ್ನು ದೃಶ್ಯಗಳಲ್ಲಿ ಕಟ್ಟುತ್ತಿರುತ್ತಾನೆ. ಎಲ್ಲ ಮುಗಿದಾದ ಮೆಲೆ ನಿರ್ದೇಶಕ ಮೊದಲ ಪ್ರದರ್ಶನವನ್ನು ಅತೃಪ್ತ ಭಾವಗಳೊಟ್ಟಿಗೆ ಅಸಮಾಧಾನ, ಆತಂಕಗಳಿಂದ ತಾನೂ ಸಾಮಾನ್ಯ ಪ್ರೇಕ್ಷಕನಾಗಿ, ಮುಂದಲ ಸಿನೆಮಾದ ಧ್ಯಾನದಲ್ಲಿ ತಲ್ಲೀನನಾಗಿ ತನ್ನ ಕೃತಿಯ ತಾ ನೋಡುವುದರೊಂದಿಗೆ ಹೊಸಚೈತನ್ಯ ಪಡೆದುಕೊಳ್ಳುತ್ತಿರುತ್ತಾನೆ. ಹಾಗಾದಲ್ಲಿ ನಿರ್ದೇಶಕನ ಸಿದ್ಧ ಶೈಲಿಯ ಸಾಧ್ಯತೆಗಳು ಪ್ರಯೋಗಾತ್ಮಕ ಮಾದರಿಯಲ್ಲಿ ಬೆಳೆಸಲು ಸಾಧ್ಯವಾಗುತ್ತದೆ.
ಒಬ್ಬನೇ ನಿರ್ದೇಶಕ ಐದು ಆರು ಸಿನೇಮಾಗಳನ್ನು ನಿರ್ದೇಶಿಸಿದ್ದರೆ ಎಲ್ಲ ಚಲನಚಿತ್ರಗಳು ಒಂದೇ ಮಾದರಿಯ ಶೈಲಿಯಲ್ಲಿ ರೂಪುಗೊಂಡಿರುವುದಿಲ್ಲ. ತಾಂತ್ರಿಕತೆಯ ಹೊರತಾಗಿ ನಿರ್ದೇಶಕನ ಭಾಷೆ ಮತ್ತು ಆಶಯಗಳು ಒಂದೊಂದು ಸಿನೇಮಾದಲ್ಲೂ ಬದಲಾಗುತ್ತ ಹೋಗಿರುತ್ತವೆ. ಹೆಚ್ಚಿನವರು ನಿರ್ದೇಶಕನನ್ನು ಸಿದ್ಧಮಾದರಿ ಶೈಲಿಯೊಂದರ ಸಹಾಯದಿಂದ ಗ್ರಹಿಸುತ್ತಿರುತ್ತಾರೆ. ಇವರು ಇದೇ ಮಾದರಿಯ ಕಲಾಪ್ರವೃತ್ತಿವುಳ್ಳವರೆಂದು ಸುಲಭವಾಗಿ ಗುರುತಿಸಿ ಪಟ್ಟಕಟ್ಟುತ್ತಾರೆ. ಆದರೆ ಕಥಾವಸ್ತುವಿನ ಸಂವೇದನೆಯೊಂದಿಗೆ ನಿರ್ದೇಶಕನ ಸ್ಪಂದನೆಯೂ, ಗ್ರಹಿಕೆಯೂ ಬೇರೆಬೇರೆ ಆಗುತ್ತ ಕಲಾಮಾದರಿಯು ವಿಭಿನ್ನ ರೀತಿಯಲ್ಲಿ ಅಬಿವ್ಯಕ್ತಗೊಂಡಿರುತ್ತದೆ.
ಸಭಾದಲ್ಲಿ ಸಂಗೀತ ವಿದೂಷಿ ತನ್ನ ಸತ್ವಪೂರ್ಣ ರಾಗವನ್ನು ಸ್ವರದಲ್ಲಿ ವಿಸ್ತರಿಸುತ್ತ ಆಳವಾದ ಧ್ವನಿಯಲ್ಲಿ ಹಾಡುತ್ತಿರುವಾಗ – ಪೂರ್ವನಿರ್ಧರಿತ ಖಚಿತವಾದ ಸ್ಥಾನವನ್ನು ಸ್ವರ ತಲುಪುತ್ತಿದ್ದಂತೆಯೇ, ಹಾಗೂ ಸೀಮಿತ ಗಡಿರೇಖೆಯನ್ನು ದಾಟಿ ಸ್ವರ ವಿನ್ಯಾಸವು ಬಹುವಿಸ್ತಾರದೊಂದಿಗೆ ಬೆಳೆಯುತ್ತಿದ್ದಂತೆಯೇ ವಿದೂಷಿ ತನಗೆ ತಾನೇ ‘ಶಹಬಾಷ್’ ‘ಬೇಷ್’ ಎಂಬ ಉದ್ಘಾರಗಳನ್ನು ಹೇಳಿಕೊಳ್ಳುತ್ತಾನೆ. ಇದು ಸಂಗೀತ ಕಲಾಮಾಧ್ಯಮದ ಆತ್ಮರತಿ ಸಂವಾದದ ವಿಶೇಷ ಲಕ್ಷಣ. ಆತ್ಮ ಸಂವಾದದ ಈ ಮೀಮಾಂಸೆ ಉಳಿದ ಎಲ್ಲ ಕಲಾಪ್ರಕಾರಗಳಲ್ಲೂ ಅಂತರ್ಗತ ನಿಯಮವಾಗಿರುತ್ತದೆ. ಅಂಥದ್ದೊಂದು ಗುಣ ಕಲೆಗಾರನಿಗೂ ಇಲ್ಲದೇ ಹೋದಲ್ಲಿ ಅಭಿವ್ಯಕ್ತಿಯೂ ಜೊಳ್ಳೆನಿಸಿಬಿಡುತ್ತದೆ. ಆ ಆತ್ಮರತಿ ಬರೀ ಅಹಂ ಆಗಿರುವುದಿಲ್ಲ ಅದು ತನ್ನ ತಾ ಪರೀಕ್ಷಿಸಿಕೊಳ್ಳುವ ಬುದ್ಧಿ ವಿಚಾರಗಳ ತತ್ವದ ಮಾರ್ಗವನ್ನು ತೆರೆದಿಡುತ್ತಿರುತ್ತದೆ. ಶಂಕರ ಮೊಕಾಶಿ ಪುಣೇಕರ ಅವರು ಸೃಜನಶೀಲತೆಯನ್ನು ವ್ಯಾಖ್ಯಾನಿಸುತ್ತ “ಜೀವನ ಕಲೆಯನ್ನು ಪಳಗಿಸಲು ಬೇಕಾದ ಸಾಮಗ್ರಿ ನಮ್ಮ ಸಂಸ್ಕೃತಿಯಿಂದಲೇ ನಾವು ಪಡೆಯುವುದು ಸಾಧ್ಯ” ಎಂದಿದ್ದಾರೆ. ಸಂಸ್ಕೃತಿಯ ಡೈನಾಮಿಕ್ಸ್ ಸೃಜನಶೀಲತೆಯನ್ನು ರೂಪಿಸುತ್ತದೆ ಅನ್ನುವ ಆ ನಿಲುವು ಈ ಕಲಾಮಾರ್ಗದ ಕಟ್ಟುವ ಕ್ರಿಯೆಯಲ್ಲಿ ಕೆಲಸ ಮಾಡುತ್ತಿರುತ್ತದೆ. ಹಾಗಾಗಿ ಸಂಸ್ಕೃತಿಯ ಕುರಿತಾದ ಕಾಳಜಿಗಳೂ ಕೂಡ ಆತ್ಮರತಿಯಲ್ಲಿ ನಿರಂತರ ವ್ಯವಹರಿಸುತ್ತಿರುತ್ತವೆ. ಹೀಗೆ ಹದವರಿತು ತಯಾರಿಸಲ್ಪಡುವ ಸಿನೆಮಾಗಳು ಕಾವ್ಯಪ್ರತಿಮೆಗಳಾಗಿ ತೋರುತ್ತವೆ.

ಕಲಾಮಾರ್ಗೀಯ ಸಿನೆಮಾ ಎಂಬ ಕೌಶಲದ ಸಂವೇದನೆ…

DSC_0592
ನಮ್ಮ ಹಳ್ಳಿಗಳಲ್ಲಿ ಇನ್ನೂ ಕತೆ ಕೇಳುವ ಮತ್ತು ಹೇಳುವ ಹಂಬಲ ಕಮ್ಮಿಯಾಗಿಲ್ಲ. ಎಷ್ಟೋ ಕಥನಗಳು ಕಟ್ಟೆಯ ಮುಶೈರಾಗಳಲ್ಲಿ ಹಾಗೆ ಉಳಿದಿದ್ದಾವೆ ಎಂದರೆ ಉತ್ತರಕ್ಕಾಗಿ ಮಾಯಾಪೆಟ್ಟಿಗೆಯ ಕಡೆ ನೋಡಬೇಕಾಗುತ್ತದೆ. ಅಲ್ಲಿನ ಆರಂಭದ ಅಪಲಾಪದಿಂದ ಹಿಡಿದು ಜಾಹಿರಾತಿನ ತುಣುಕು ಸುರುವಾಗುವತನಕ ನೆಟ್ಟನೋಟದಿಂದ ಆಚೀಚೆ ಸರಿದಾಡದೇ ಕುಳಿತುಬಿಡುವವರ ವಯಸ್ಸಿಗೆ ನಿರ್ಬಂಧವೇ ಇಲ್ಲ. ಹಾಗೆ ನೋಡುವವರ ಮತ್ತು ನೋಡಿಸಿಕೊಳ್ಳಲ್ಪಡುವವರ ಕುರಿತು ವ್ಯವಹಾರಿಕ ಅಧ್ಯಯನ ಏನೇ ಹೇಳಿರಲಿ ಅಲ್ಲಿ ಸಹಜ ಅನುಕಂಪಗಳೇ ಬಂಡವಾಳವಾಗುತ್ತ ಹೋಗುವ ರೀತಿ ಮಾತ್ರ ಸಮಾಜದ ಆಂತರಿಕ ಸ್ಥಿರತೆಗೆ ಪೆಟ್ಟುಕೊಡುವುದಂತೂ ಖಚಿತ. ಕನವರಿಸಲು, ಸ್ವಗತಗಳನ್ನು ಹೇಳಿಕೊಳ್ಳಲು ಹಿನ್ನೆಲೆಯಾಗಿ ಒದಗಿಬರುವ ಸಂಗೀತವೂ, ಅಚ್ಚುಕಟ್ಟಾಗಿ ತೋರಿಸಲ್ಪಡುವ ವೈಭವಯುತ ದೃಶ್ಯಗಳೂ ಮತ್ತು ಮಾತುಗಳನ್ನು ಅಳೆದು ತೂಗಿ ಮಾತಾಡುವ ವಿಧಾನವಂತೂ ಅಸಹಜವಾದ ಜಗತ್ತನ್ನು ಸೃಷ್ಟಿಸುತ್ತಿರುತ್ತದೆ. ಆ ವಲಯದ ನಿಲುವು ಪಕ್ಕ ಟಿ.ಆರ್.ಪಿ ಆಧರಿಸಿಯೇ ನಿರ್ಮಿತವಾಗುವುದರಿಂದ ಅವಾಸ್ತವಿಕ ಕಥನಗಳನ್ನು ಸಹಜವಾಗಿಸುತ್ತವೆ. ಹಾಗಾಗಿ ಮಹಾಕಾವ್ಯಗಳು ನಿರೂಪಿಸಿದ್ದ ಸಾಮಾಜೋ ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ ಸಂವಾದಗಳು ನಾಗರೀಕ ವಲಯದಿಂದ ಮಾಯವಾಗುತ್ತ, ಸಾಧುವಲ್ಲದ ಸಾಂಸ್ಕೃತಿಕ ಪ್ರತಿಮೆಗಳು ತಲೆಎತ್ತುತ್ತಿರುವುದಕ್ಕೆ ಆಶ್ಚರ್ಯಪಡಬೇಕಾಗಿಲ್ಲ.
ಇನ್ನು ಚಲನಚಿತ್ರದ ಜನಪ್ರಿಯ ಮಾದರಿಗಳಂತೂ ವಿಚಿತ್ರವಾದ ಸಾಹಸಿಯ ದೃಶ್ಯ ಸಾಮ್ರಾಜ್ಯದಲ್ಲಿ, ಕಲ್ಪನಾತೀತ ಲೋಲುಪತೆಯಲ್ಲಿ ಪ್ರೇಕ್ಷಕನನ್ನು ಧ್ಯಾನಮಗ್ನಗೊಳಿಸಿ ವಾಸ್ತವದ ಅರಿವಿನ ವಿಸ್ತಾರವನ್ನು ಕುಗ್ಗಿಸುವ ಸಾಂಸ್ಕೃತಿಕ ಸಂಕುಚಿತತನದ ಕೆಲಸವನ್ನು ಭರಾಟೆಯಿಂದಲೇ ಮಾಡುತ್ತ ಬಂದಿವೆ.
ಆದರೆ… ಸಮಾಜೋ ಸಾಂಸ್ಕೃತಿಕ ಪ್ರಜ್ಞೆ ಅನ್ನೋದು ಯಾವತ್ಕಾಲಕ್ಕೂ ಸಮಾಜದ ಓರೆಕೋರೆಗಳನ್ನು ತಿದ್ದುವುದಕ್ಕಿಂತ ಆ ಕುರಿತಾದ ಅನುಮಾನ ಅಸಮಾಧಾನಗಳನ್ನು ಹುಟ್ಟುಹಾಕುವ ಮೂಲಕ ಮನುಷ್ಯನ ಅಂತಃಶಕ್ತಿಯನ್ನು ಜಾಗೃತಗೊಳಿಸುತ್ತದೆ. ಆ ಸಾಧ್ಯತೆಗಳನ್ನು ಭವಿಷ್ಯತ್ತಿನ ಚಲಚ್ಚಿತ್ರಗಳಲ್ಲಿ ಕಾಣುತ್ತೇವೆ. ಸೂಕ್ಷ್ಮಬಾವಗಳು ಕೂಡ ತೀಕ್ಷ್ಣ ಸಂವೇದನೆಯ ಮೊನಚನ್ನು ಹೊಂದಿರುತ್ತವೆ. ಅಂಥ ಸಿನೇಮಾಗಳನ್ನು ಕನ್ನಡದ ಪ್ರೇಕ್ಷಕರಿಗೆ ಕೊಡುವ ಒಂದು ಗುಂಪು ಸದಾ ಕ್ರಿಯಾಶೀಲವಾಗಿ ತೊಡಗಿಕೊಂಡಿರುವುದು ಸಂತಸದ ಸಂಗತಿ. ಕನ್ನಡದ ಸಾಹಿತ್ಯಿಕ ಕೃತಿಗಳನ್ನಾಯ್ದು ಸದಭಿರುಚಿಯ ಚಿತ್ರಗಳನ್ನು ನಿರ್ಮಿಸುವ ಈ ಗುಂಪು ಸಹಿತ ಪ್ರಶಸ್ತಿಯ ಗರಿಗಾಗಿ ಕೆಲಸ ಮಾಡುತ್ತವೆ ಎಂದು ಓರೆಗಣ್ಣಲ್ಲಿ ನೋಡಿಸಿಕೊಳ್ಳುತ್ತವೆ. ಆದರೆ ಆ ಸೃಜನಶೀಲ ಕೆಲಸಕ್ಕಾಗಿ ಬೇರೆಲ್ಲ ಮಾದರಿಯ ಜನಪ್ರಿಯಗಳನ್ನು ನಗಣ್ಯಗೊಳಿಸಿ ಜನಪರವಾದ ರೀತಿಯಲ್ಲಿ ಕಲಾಕೃತಿಗಳನ್ನು ಕಟ್ಟುತ್ತಾರೆ. ಅವರ ಚಲನಚಿತ್ರಗಳು ಕಥೆಯ ಸಂವಿಧಾನವನ್ನು ಮೀರಿದ ಆಯಾಮಗಳನ್ನು ಸೃಷ್ಟಿಸುತ್ತವೆ. ಆ ಕಾರಣಕ್ಕಾಗಿಯೇ ಕನ್ನಡ ಕಲಾಪ್ರಪಂಚವನ್ನು ಇನ್ನಷ್ಟು ವಿಸ್ತರಿಸುವ ಕೆಲಸ ಮಾಡುವ ಸಿನೆಮಾಗಳಾಗಿ ಸಹೃದಯರ ಮನಸ್ಸನ್ನು ಸೂರೆಗೊಳ್ಳುತ್ತವೆ. ಅಂಥ ಚಿತ್ರಗಳ ಪರಂಪರೆ ಇದ್ದಾಗ್ಯೂ ಕನ್ನಡದಲ್ಲಿ ಜನಪ್ರಿಯ ಮಾದರಿಯಲ್ಲಿ ಬರುವ ಚಿತ್ರಗಳು ಯಾವ ಸಂವೇದನೆಯನ್ನು ಕಟ್ಟುತ್ತಿವೆ ಅನ್ನುವುದು ಪ್ರಶ್ನೆಯಾಗಿದೆ..?
ಚಲನಚಿತ್ರಗಳು ಸದಭಿರುಚಿ ಬೆಳೆಸಬೇಕಾದ ಸಂದರ್ಭದಲ್ಲಿಯೇ ಆಡಳಿತಶಾಹಿಯ ಅಪೇಕ್ಷೆಗೆ ತಕ್ಕಂತೆ ಮೈಮರೆಸುವ ತಂತ್ರವನ್ನಷ್ಟೆ ಪೋಷಿಸಲಾರಂಭಿಸಿದವು. ಆ ಕಾರಣಕ್ಕಾಗಿಯೇ ಕರ್ತೃ, ಕೃತಿ(ಕಲೆ), ಪ್ರೇಕ್ಷಕರ ಟ್ರಯಾಂಗಲ್ ನಡುವೆ ವ್ಯವಸ್ಥಿತ ಹುನ್ನಾರವೊಂದು ತನ್ನ ಅಭಿಪ್ರಾಯ ರೂಪಿಸಲೋಸುಗ ಕಲಾಭಿರುಚಿಯನ್ನು ತನ್ನ ಆಶಯದಂತೆ ರೂಪಿಸತೊಡಗಿತು. ಅಲ್ಲಿನ ವಿರಾಮಗಳ ನಂತರದ ಕಥನ ಪಲ್ಲಟದ ಸಿನಿಮೀಯ ಗುಣ ಮತ್ತು ಎರಡು ಗಂಟೆಗಳ ಕಾಲ ಪ್ರೇಕ್ಷಕನೊಳಗೆ ಯಾವ ಪ್ರಶ್ನೆಗಳು – ಸಂಕಷ್ಟಗಳೂ ಅನುಭವಕ್ಕೆ ಬಾರದಂತೆ ಹಿಡಿದಿಟ್ಟುಕೊಳ್ಳುವ ಕಥಾಹಂದರದಲ್ಲಿ ಚಿತ್ರ ತಯಾರಾದರೆ ಅದೊಂದು ಭ್ರಮಾಜಗತ್ತಿನ ಸಮ್ಮೋಹನ ತಂತ್ರವೇ ಅನ್ನಬೇಕು, ಚಿತ್ರಮಂದಿರದ ಹೊರಗೆ ಕಾಲಿಡುತ್ತಿದ್ದಂತೆಯೇ ಹೊರಬೆಳಕಿನ ಪ್ರಖರತೆಯಲ್ಲಿ ಚಿತ್ರದ ಅನುಭವ ಬರೀ ಚಾಕಚಕ್ಯೆತೆಯ ಸ್ಟೋರಿಯಾಗಿ ತಲೆಯಲ್ಲಿ ಉಳಿಯುವುದರಿಂದ ಅದರ ಕೀಳು ಮನೋರಂಜನೆ ಕ್ಷಣದ ಸಂತೋಷವನ್ನು ನೀಡುತ್ತದೆ. ಆದರೆ ಆ ಶೈಲೀಕೃತ ಬದುಕು ನೋಡುಗನ ವರ್ತನೆಗಳನ್ನು ಬದಲಿಸುತ್ತ, ಆಸೆ-ಭಾಷೆಗಳನ್ನು ಜಾಗತಿಕ ಬದುಕಿನ ಸವಾಲುಗಳ ನಡುವೆ ತಂದು ನಿಲ್ಲಿಸುತ್ತದೆ. ಆಗ ಸಿನಿಮೀಯ ಗುಣಗಳು ನಾಗರೀಕ ಸಮಾಜದ ಸರ್ವೇಸಾಮಾನ್ಯ ಲಕ್ಷಣಗಳ ಹಾಗೆ ಗೋಚರಿಸತೊಡಗುತ್ತವೆ. ನಾವು ಯಾವದನ್ನು ಕಾಣಬೇಕಿತ್ತೋ ಅದನ್ನು ಕಾಣಿಸದೇ ಇರುವ ಸಾಂಸ್ಕೃತಿಕ ಲೋಕ, ನಮಗೆ ತೋರಿಸುವ ಚಿತ್ರಗಳ ಚಿತ್ರಕಶಕ್ತಿಯಲ್ಲಿ ಯಾವ ರಸಾನುಭವದ ಲವಲೇಶಗಂಧವೂ ಇರದಿದ್ದರೂ ವಿಕೃತ ಸಂತೋಷವನ್ನು ಅತಿರಂಜಿತವಾಗಿ ನೀಡುವ ಮುಖೇನ ಅದು ಮೈಮರೆಸುತ್ತದೆ. ಆ ಮೈಮರೆವಿನಲ್ಲಿ ವಾಸ್ತವದ ಲಕ್ಷಣಗಳು ಮಾಯವಾಗುತ್ತ ನೋಡುವ ಭ್ರಮೆಯನ್ನು ಮಾತ್ರ ನಮ್ಮದಾಗಿಸಿ ವ್ಯವಸ್ಥೆಯ ಕುರೂಪಗಳನ್ನು ಮುಚ್ಚಿಹಾಕುತ್ತದೆ. ಆಗ ನೋಡುಗನ ಪ್ರತಿನಿಧಿಯಾಗಿ ಪಾತ್ರಗಳು ಮೂಡುವುದಿಲ್ಲ, ಪಾತ್ರಧಾರಿಯ ಪ್ರತಿನಿಧಿಯಾಗಿ ನೋಡುಗ ತನ್ನತನ ಬಿಟ್ಟುಕೊಡುತ್ತಾನೆ. ಹೀಗೆ ಪರಿಣಾಮ ಬೀರುವ ಚಿತ್ರಗಳು ನಮಗೆ ಬೇಕೇ… ? ಜನಪರ ಚಿತ್ರಗಳನ್ನು ನೋಡುವ ಮನಸ್ಸುಗಳ ಮೌನದಲ್ಲಿ ಸಮೃದ್ಧ ಸಾಂಸ್ಕೃತಿಕ ರೂಪು ಮೂಡುತ್ತದೆ. ಅಂಥ ಚಿತ್ರಗಳನ್ನು ಹುಡುಕಿಕೊಂಡು ಹೋಗಿ ನೋಡಬೇಕಾದ ಮನಃಸ್ಥಿತಿ ಕನ್ನಡದಲ್ಲಿದ್ದರೂ ಅಂಥ ಚಿತ್ರಗಳು ಚಿತ್ರಮಂದಿರದಲ್ಲಿ ಬಿಡುಗಡೆ ಆಗದಿರುವುದು ದುರಂತ.
ಆದರೆ ಇವತ್ತಿನ ಚಲನಚಿತ್ರ ಮಾಧ್ಯಮದ ಜನಪ್ರಿಯತೆ ಯಾವ ಮಾದರಿಯ ಅಭಿರುಚಿಯನ್ನು ಪ್ರೇರೇಪಿಸುತ್ತಿದೆ? ಯಾಕಾಗಿ ಇಂಥ ಕಥಾ ಮಾದರಿಗಳನ್ನು ದೃಶ್ಯೀಕರಿಸಿ ಜನರ ಸಹೃದಯತೆಯನ್ನು ಹಾಳುಗೆಡುವುತ್ತಿದೆ, ಇಂಥ ಚಲನಚಿತ್ರಗಳು ಸಮುದಾಯದ ಆಳದ ನೋವನ್ನು ಮರೆಮಾಚುವ ಕಾರಣವಾದರೂ ಏನು? ಇದೆಲ್ಲದರ ಹಿಂದೆ ಕಾರ್ಪೋರೇಟ್ ಜಗತ್ತಿನ ಆಶಯಗಳು ಕೆಲಸ ಮಾಡುತ್ತಿರುವುದಂತೂ ಸ್ಪಷ್ಟವಾಗಿವೆ.
ಸಮಕಾಲೀನ ಬದುಕಿನ ಯಾವ ಮಜಲನ್ನೂ ತೋರದ ಮತ್ತು ರಂಜನೆಯನ್ನೇ ವೈಭವೀಕರಿಸಿ ನಿರ್ಮಿಸುವ ಚಿತ್ರಗಳ ತಾಂತ್ರಕತೆಗೆ ಬೆಕ್ಕಸ ಬೆರಗಾಗಿ ಹೋಗುವ ಶ್ರೀಸಾಮಾನ್ಯನ ಜೀವನೋತ್ಸಾಹದಲ್ಲಿ ಬರೀ ಸಿನಿಮೀಯ ಗುಣಗಳೇ ಇಂದು ಅವ್ಯಾಹತವಾಗಿ ಕಾಣಿಸಿಕೊಳ್ಳುತ್ತಿವೆ. ದಾರ್ಷ್ಟ್ಯ, ಆನಂದ, ಅನುಕಂಪ, ಆದರ್ಶ, ದುಷ್ಟತನ, ಕೇಡು-ಸೇಡು, ಶಿಷ್ಟ, ಅತಿರಂಜನೆ, ಹುಸಿಭಾವದ ಗಾಯನ ಮತ್ತು ಕ್ರೌರ್ಯವನ್ನೇ ಕಥೆಯಾಗಿಸುವ ಚಿತ್ರಗಳ ಜನಪ್ರಿಯತೆಯ ಮಗ್ಗುಲಿನ ಪಥದಲ್ಲಿ ನೈಜ ಬದುಕಿನ ಕಲಾ ಕೌಶಲ್ಯವೂ ಕನ್ನಡ ಸಿನೇಮಾದಲ್ಲಿ ತಾಳಿಕೊಂಡು ಬಾಳಿ ಬದುಕಿ ಬಂದಿದೆ. (ತಾಳಿಕೆ ಅನ್ನುವುದು ಜನಪ್ರಿಯ ಉನ್ಮಾದದಲ್ಲಿ ಕೊಚ್ಚಿಕೊಂಡು ಹೋಗದೆ ಇರುವ ಕಾರಣಕ್ಕಾಗಿ ಬಳಸಿರುವ ಪದ) ಸತ್ಯವಾದ ಕಲೆಯು ಸಾಯುವುದಿಲ್ಲ ಎಂಬಂತೆ ಇಂದಿಗೂ ಕಲಾತ್ಮಕ ಮಾರ್ಗದ ಚಲನಚಿತ್ರಗಳು ಹತ್ತಾರು ಪ್ರಶ್ನೆಗಳನ್ನು ದಿನದ ಬದುಕಿನೊಂದಿಗೆ ಕೆದಕುತ್ತಲಿರುತ್ತವೆ. ಅಂಥ ಮಾನವೀಯ ಕಾಳಜಿಗಳುಳ್ಳ ಚಿತ್ರಗಳು ಹೆಚ್ಚೆಂದರೆ ವರ್ಷದಲ್ಲಿ ಒಂದೋ ಎರಡೋ ಬರುತ್ತಿವೆ. ನೈಜ ಅಭಿವ್ಯಕ್ತಿಯ ಆ ಚಿತ್ರಕತೆಗಳು, ಚಿತ್ರದ ಚೌಕಟ್ಟು, ಚಿತ್ರದ ಪರಿಣಾಮಗಳು ಸಾಮಾನ್ಯನ ಸಂವೇದನೆಯನ್ನು ಚುರುಕುಗೊಳಿಸುತ್ತ ಸಮಕಾಲೀನ ಜೀವನದ ವಾಸ್ತವಾಂಶಗಳನ್ನು ನೋಡುಗನ ಕಣ್ನಲ್ಲಿ ಪುನರ್ ಸೃಷ್ಟಿಸುತ್ತ – ಅಂತರಂಗದೊಂದಿಗೆ ಪ್ರೇಕ್ಷಕ ಸಂವಾದ ಮಾಡುವ ಹಾಗೆ ಸಿನಿಮಾ ಕಲೆಯನ್ನು ಕಾವ್ಯವಾಗಿಸಿರುವ ಬಗೆ ಅದ್ಭುತವಾಗಿದೆ.
ಕಲಾತ್ಮಕ ಮಾದರಿಯು ಸಮಾಜಕ್ಕೆ ಕನ್ನಡಿಯಾದಾಗ ಭಾವತಲ್ಲೀನತೆಯಲ್ಲೂ ಭಾವಶೋಧನೆ ಸಾಧ್ಯವಾಗುತ್ತದೆ. ಆ ಮಾರ್ಗದಲ್ಲಿ ಅವಿರತವಾಗಿ ಕೆಲಸ ಮಾಡುತ್ತಿರುವ ನಿರ್ದೇಶಕರು ಕನ್ನಡದ ಸಮಸ್ತ ಪ್ರೇಕ್ಷಕರನ್ನು ಬಹುವಾಗಿ ಮುಟ್ಟಲು ಸಾಧ್ಯವಾಗಿರಲಿಕ್ಕಿಲ್ಲ ಆದರೆ ಹೃದಯಸ್ಪರ್ಶಿಯಾದ ಕಲಾಮಾರ್ಗ ಒಂದಿಲ್ಲೊಂದು ದಿನ ಜನಸಾಮಾನ್ಯನ ಸರಳಗ್ರಹಿಕೆಗೆ ನಿಲುಕುವುದಂತೂ ಖಚಿತವಾಗಿರುತ್ತದೆ. ಕ್ರಿಯಾಶೀಲ ಮನಸ್ಸುಗಳಿಗೆ ಬರೀ ಗುರಿ ತಲುಪುವುದೇ ಉದ್ಧೇಶವಾಗಿರಲಾರದು: ಗುರಿ ಮುಟ್ಟಿದ ನಂತರದ ಸವಾಲು ಎದುರಿಸುವುದು ಆತ್ಮತೃಪ್ತಿಯನ್ನು ನೀಡಬಲ್ಲದಾಗಿರುತ್ತದೆ. ಸವಾಲಿಗೆ ಜವಾಬು ಕೊಡುವುದಾದರೆ ಆತ ತುಂಬು ಪ್ರಯೋಗಶೀಲನಾಗಿರಬೇಕು. ಅಂದಾಗ ಮಾತ್ರ ಉತ್ಕಟ ಭಾವಪ್ರಪಂಚ ತೆರೆದುಕೊಳ್ಳಲು ಸಾಧ್ಯವಾಗುತ್ತದೆ. ಆ ತೀವ್ರ ಸಂವೇದನೆ ಸಾಹಿತ್ಯದ ಸಹವಾಸದಿಂದ ಸಿಗುವ ಕಾರಣಕ್ಕೊ ಏನೋ ಕನ್ನಡದ ಮಾರ್ಗೀಯ ನಿರ್ದೇಶಕರುಗಳೆಲ್ಲ ಹೆಚ್ಚಾಗಿ ಸಾಹಿತ್ಯಕೃತಿಗಳನ್ನೇ ಆಯ್ದುಕೊಂಡು ಆ ಮೌಲೀಕೃತ ಕೃತಿಗಳ ಬಹು ಆಯಾಮದ ಹೊಸ ಹೊಳವುಗಳೊಡನೆ ಸಿನೇಮಾ ಮಾಡುತ್ತ ಬಂದಿದ್ದಾರೆ. ಕತೆಯ ಬಂಧದ ರೂಪಕಾತ್ಮಕ ಭಾಗಗಳು ಚಿತ್ರಕತೆ ಆಗುವಷ್ಟರಲ್ಲಿ ಹೊಸದೇ ಆಕಾರ ಪಡೆದುಕೊಂಡು ಕತೆಗಿಂತಲೂ ಭಿನ್ನವಾದ ದೃಶ್ಯಕಾವ್ಯಗಳಾಗಿ ಹೊಸ ಕಲ್ಪನೆಯ ಸಂಕೆತಗಳಾಗಿ, ಪ್ರತಿಮೆಗಳಾಗಿ ಚಲನಚಿತ್ರಗಳಲ್ಲಿ ಕಾಣಿಸಿರುವುದು ಗಿರೀಶ ಕಾಸರವಳ್ಳಿಯವರ ಸಿನೇಮಾಗಳ ವಿಶೇಷತೆಯಾಗಿದೆ.
ಸದಭಿರುಚಿ ಬೆಳೆಸಬೇಕಾಗಿಲ್ಲ ಬೆಳೆಯಬೇಕು. ಆಗ ಮಾತ್ರ ಮಾರ್ಗದ ಶಾಸ್ತ್ರೀಯತೆ ಅಮರತ್ವದ ಕಡೆಗೆ ನಡೆಯುತ್ತದೆ. ಅಂಥ ಕ್ಲಾಸಿಕ್ ಸಿನಿಮಾಗಳನ್ನು ಹಳ್ಳಿ-ಹಳ್ಳಿಯ ಜನ ಬಹುವಾಗಿ ಮೆಚ್ಚಿಕೊಳ್ಳುತ್ತಿರುವುದನ್ನು ನೋಡಿದಾಗ ಮುಖ್ಯವಾಹಿನಿಯ ಅಲ್ಪಾಯುಷ್ಯದ ಚಿತ್ರಗಳಿಗಿಂತಲೂ ಅಧಿಕವಾಗಿ ಕಲಾತ್ಮಕ ನಿರೂಪಣೆ(ಸಿಂಹಾವಲೋಕನ) ಮಾದರಿಯ ಸಿನೇಮಾಗಳು ಹಳ್ಳಿಗಳನ್ನು ಮುಟ್ಟಬೇಕು ಎಂದೆನಿಸುತ್ತದೆ. ಹಳ್ಳಿಚಿತ್ರೋತ್ಸವಗಳು ಹೆಚ್ಚೆಚ್ಚು ಆಗುವ ಮೂಲಕ ಮತ್ತು ಊರಿನ ಹಲವು ಸಮಾಜದ ಸಮೂಹದೊಟ್ಟಿಗೆ ಈ ಸಿನೆಮಾ ನೋಡುವಂತಾದರೆ ಮಾತ್ರ ಸಮಷ್ಟಿಪ್ರಜ್ಞೆಯನ್ನು ನಾಗರೀಕ ಮೌಲ್ಯಗಳೊಂದಿಗೆ ಜಾಗೃತವಾಗಿಡಲು ಸಾಧ್ಯವಾಗುತ್ತದೆ.