ಎದೆಗೆ ಬಿದ್ದ ಅಕ್ಷರ – ಅರಿವು ಅಂತಾರಲ್ಲ ಅದರ ಬಗ್ಯ…


ಇಂದು ಅನ್ನುವ ವಾಸ್ತವದಲ್ಲಿ… ನೆನ್ನೆಯ ನೆನಪುಗಳನ್ನು ಮೆಲಕು ಹಾಕಿಕೊಳ್ಳುತ್ತ… ನಾಳೆಗಳನ್ನು ಸಮಾನತೆಯ ನೆಲೆಯಲ್ಲಿ ಕಾಣಲಿಚ್ಛಿಸುವ ಅಂತಿಮದ ಅರಿವು ಎದೆಗೆ ಬಿದ್ದ ಅಕ್ಷರ ಕೃತಿಯ ಪ್ರತಿಯೊಂದು ಲೇಖನದ ಪ್ರತಿಯೊಂದು ಸಾಲಿನಲ್ಲಿ, ಒಂದೊಂದು ಶಬ್ದದಲ್ಲೂ ಅನುರಣಿಸುತ್ತದೆ. ವಿರಾಮವಿಲ್ಲದ ಬರಹಗಳ ಆಂತರ್ಯದಲ್ಲಿ ಸೌಜನ್ಯದ ಕಾರುಣ್ಯಮೂರ್ತಿ ಕಾಣುತ್ತಾನೆ. ಆತ ಬುದ್ಧ ಬಸವ ಅಂಬೇಡ್ಕರ್ ಗಾಂಧಿಯ ಹಾಗೆ ಗೋಚರಿಸುತ್ತಾನೆ.
ಯಾವ ಬರಹವೂ ಆಕಸ್ಮಿಕವಾಗಿ ಹುಟ್ಟಿದ್ದಲ್ಲ, ಕೆಲವು ಭಾಷಣಗಳು, ಬರಹಗಳು ಯಾವದೋ ಸಂದರ್ಭ, ಸಂಘಟಣೆ, ಸಂಚಲನಗಳಿಗೆ ಪ್ರತಿಕ್ರಿಯೆಯಾಗಿ ಆ ಕ್ಷಣಕ್ಕೆ ಒಡಮೂಡಿದ್ದರೂ ಆ ಮಾತುಗಳ ಹಿಂದಿನ ಅರಿವು ಬಹಳ ಸ್ಪಷ್ಟವಾಗಿದೆ. “ಸಾಮಾಜಿಕ ಸಂಘಟಣೆ ಎಂದರೆ ಅಸ್ತಿತ್ವದ ಅಂತಿಮ ಸ್ಥಿತಿಯ ಅರಿವನ್ನು ಹೊಂದುವುದು” ಅಂತ ಪ್ಲೇಟೋ ಹೇಳುತ್ತಾನಲ್ಲ… ಅದು ದೇವನೂರು ಮಹಾದೇವ ಅವರ ಮಾತಿನ ಧಾಟಿಯಲ್ಲಿ ಒಂದು ಸಮೂಹದ ಅಂತಃಸಾಕ್ಷಿಯೇ ಮಾತನಾಡುತ್ತಿದೆ ಎಂಬಂತೆ ಚಿತ್ರಿತಗೊಳ್ಳುತ್ತದೆ.
ಸಹಪ್ರಯಾಣಿಕನಾಗಿ ಕುಳಿತವ ಬಸ್ಸು-ರೈಲಿನಿಂದ ಇಳಿಯುತ್ತಲೆ ತನ್ನ ಹಳೆ ಸಂಪ್ರದಾಯದ ದಾರಿಯಲ್ಲಿಯೇ ನಡೆಯಲು ಇಚ್ಚಿಸುವ ಹೊಸಪರಂಪರೆಯ ಹೊಸತಲೆಮಾರಿನ ಗುಂಪುಗಳು ಚಿಂತನೆಗೊಂದು ದಿಕ್ಕಿಲ್ಲದಂತೆ ದುಂಡಾವರ್ತಿಸುತ್ತಿವೆ. ಮೌಲ್ಯಗಳನ್ನು ಮರುಸಂಶೋಧಿಸುವ ಈ ವಕ್ತಾರರಿಗೆ ಸಂವಿಧಾನ ನಮ್ಮ ದೇಶದ ಧರ್ಮ ಎಂಬುದನ್ನು ತಿಳಿಸಬೇಕಾಗಿದೆ. ಯಾವ ಬೆಳಕಿನ ಕಿರಣವೂ ತಾಗದ ಮಡಿವಂತರ ಅಂತರಂಗದ ಕತ್ತಲನ್ನು ಗುಡಿಸಿ ಹೊಸತೊಂದು ಸರ್ವೋದಯ ಕರ್ನಾಟಕ ಕಟ್ಟಬೇಕಿರುವ ಎಚ್ಚರದ ರೂಪಕದಂತೆ ಈ ನಾಲ್ಕುದಶಕದ ಬರಹಗಳು ಇವೆ. ಸಾಮಾಜಿಕ ಸಂಘಟನೆಗಳಿಗೆ ಅಂತಿಮ ಅರಿವಿನ ಪ್ರಜ್ಞೆ ಮೂಡಿಸುವ ಕೆಲಸವನ್ನು ಇಲ್ಲಿನ ಬರಹಗಳು ಯಾವಕಾಲಕ್ಕೂ ಮಾಡುತ್ತವೆ.
ಕಾವ್ಯದ ಬಂಧದಲ್ಲಿ ಭಾವದ ಲಯವಿದ್ದರೆ ಸಾಕು ಹಾಡಾಗುತ್ತದೆ, ತಾಳ ಸಿಕ್ಕುತ್ತದೆ, ರಾಗವಾಗಿ ಸರಾಗ ಹಾಡು ಬಾಯಿಗೆ ಬಂದುಬಿಡುತ್ತದೆ. ದೇಶಿಮಟ್ಟುಗಳಿಗೆ ಅಂಥ ಗುಣವಿರುವ ಕಾರಣಕ್ಕೆ ಅವು ನಾಲಗೆಯ ಮೇಲೆ ನೆಲೆನಿಂತುಬಿಡುತ್ತವೆ. ಬಾಯಿಂದ ಬಾಯಿಗೆ, ತಲೆಮಾರಿನಿಂದ ತಲೆಮಾರಿಗೆ ಅಂತಹ ಕತೆಗಳು ಕಾವ್ಯಗಳು ಸಂಚರಿಸುತ್ತ ಬದುಕಿಕೊಡಿರುತ್ತವೆ. ನೆನಪಿನ ದೆಸೆಯಿಂದ ಯಾವದೋ ಸಾಲಿನ ಯಾವದೋ ಅಕ್ಷರ ಅಥವಾ ಶಬುದ ಮರೆತುಕೊಂಡ ಮುಂದಿನ ತಲೆಮಾರು ಬೇರೊಂದು ಅಕ್ಷರಗಳನ್ನೋ, ಭಾವಕ್ಕೆ ಸರಿಹೊಂದುವ ಶಬುದವನ್ನೋ ಹಾಕಿಕೊಂಡು ಹಾಡಿದರೂ ಹೊಸದೊಂದು ಅರ್ಥವೇನೂ ಹುಟ್ಟಲಿಕ್ಕಿಲ್ಲ. ಆದರೆ ಆ ಹಾಡಿನ ಭಾವಕ್ಕೆ ಮತ್ತೊಂದು ಆಯಾಮವಂತೂ ಖಂಡಿತ ಸಿಕ್ಕುತ್ತದೆ. ಅದೇ ಅರ್ಥದಲ್ಲಿ ಎದೆಗೆ ಬಿದ್ದ ಅಕ್ಷರ ಹೊತ್ತುಗೆಯನ್ನು ಎದೆಗೆ ಒದ್ದ ಅಕ್ಷರ, ತಲೆಗೆ ಬಿದ್ದ ಅಕ್ಷರ ಎಂದು ಓದಿಕೊಂಡಾಗಲೂ ಫಲ ಕೊಡುವುದು ಕೊಟ್ಟೆಕೊಡುತ್ತದೆ. ಸಮಾನತೆ, ಸ್ವಾತಂತ್ರ್ಯ, ಸೋದರತೆಯ ಬೆಳಕನ್ನು ಅರಸುವ ಜೀವಗಳು ಎದೆಗೆ ಬಿದ್ದ ಅಕ್ಷರ ಪುಸ್ತಕವನ್ನು ಮುಂದಿನ ತಲೆಮಾರಿಗೆ ಅಸ್ಮಿತೆಯ ಭಾಗವಾಗಿಯೇ ದಾಟಿಸುತ್ತವೆ.
ಹಣ್ಣಾಗುತ್ತಲೇ ಕೊಂಬೆ ಬಾಗುತ್ತದೆ. ಭೂಮಿಗೆ ಹತ್ತಿರವಾಗುತ್ತದೆ. ನೆಲಕ್ಕೆ ಬಿದ್ದು ಬೀಜ ಚಿಗುರಾಗಿ ಚಿಗಿಯುತ್ತದೆ. ಆ ಹೊಸದಾಗಿ ಚಿಗಿತ ಗಿಡದ ಹಣ್ಣಿನ ರುಚಿ ಉಂಡವನಂತೆ ಓದಿದೆ. ತಿಂದ ಹಣ್ಣು ಮಾಗಿತ್ತು, ಪರಿಮಳವೂ ಇತ್ತು… ಆದರೆ ಎಷ್ಟು ಅಗಿದು ತಿನ್ನುತ್ತೇನೋ ಅಷ್ಟು ಒಗರಾಗಿತ್ತು. ಇಥಿಯೋಪಿಯಾದ ಮಕ್ಕಳಂತೆ ನಾನು ಕ್ಷೀಣ ಸ್ವರದಲ್ಲಿ ಒರಲುತ್ತಿದ್ದೇನೆ ಅನ್ನಿಸುತ್ತಿತ್ತು. ನಿರುತ್ತರದಲಿ ಕೈಚಲ್ಲಿ ಕುಳಿತ ರೈತನ ಸ್ಥಿತಿ, ಬೌಧ್ಧಿಕ – ಸೈದ್ಧಾಂತಿಕ ತಿಳುವಳಿಕೆಯ ಆರ್ಭಟ, ಮೂಲ ಕೆದಕುವ ಡಿ.ಎನ್.ಎ ಮಾಪಕದಲ್ಲಿ ಹೂತಿರಬಹುದಾದ ಕಾಲನ ಕುರುಹಗಳ ಹುಡುಕಾಟ, ಯಾಕೆ ಚಳುವಳಿಗಳು ಸೋಲುತ್ತಿವೆ ಎಂಬುದು ಪ್ರಶ್ನೆ..? ಉತ್ತರಕ್ಕಾಗಿ ಹಂಬಲಿಸುವ ಮೊದಲು ಎದೆಗೆ ಬಿದ್ದ ಅಕ್ಷರ ತಿಕದ ಮೇಲೆ ಒದ್ದಿತ್ತು.
ದೇವನೂರರ ಭಾಷೆಯಲ್ಲಿಯೇ ಹೇಳಬಹುದಾದರೆ ಎದೆಗೆ ಬಿದ್ದ ಅಕ್ಷರದ ಕೆಲವು ಲೇಖನಗಳು ನನ್ನ ಮನಸ್ಸಿನ ತಳದ ಕೊನೆಯ ಪದರದವರೆಗೂ ಮುಟ್ಟಿ ಗಾಯಮಾಡಿ ನಿದ್ದೆಯಲ್ಲೂ ನರಳಾಡಿಸಿದವು.

Advertisements

ಊರುಸುಟ್ಟರೂ ಸುಡಲಾರದ ದೈವದ ಸುತ್ತ…


ಹೊಸ ನಾಟಕಗಳು ಬರುತ್ತಿಲ್ಲವೆಂಬ ಅಳುಕನ್ನು ಅಳಿಸಬಲ್ಲ ಯುವ ಕತೆಗಾರರು ನಾಟಕ ರಚನೆಯತ್ತ ಮುಖ ಮಾಡಿರುವುದು ನಿಜಕ್ಕೂ ಸಂತಸದ ಸಂಗತಿ. ಈಗಾಗಲೇ ಕತೆಗಾರರು ಎಂದೆ ಹೆಸರಾಗಿರುವ ಗೆಳೆಯ ಹನಮಂತ ಹಾಲಿಗೇರಿಯವರ ಊರು ಸುಟ್ಟರೂ ಹನುಮಪ್ಪ ನಾಟಕವನ್ನು ಆಟಮಾಟ ತಂಡದ ಅಡ್ಯಾಟಕ್ಕೆ ಮಾಡಬೇಕೆಂದುಕೊಂಡಾಗ ತಂಡದ ಎಲ್ಲಾ ಸಾಧ್ಯತೆಗಳಿಗೆ ಹೊಂದಿಕೊಳ್ಳುವಂತೆ ನಾಟಕದ ವಿನ್ಯಾಸದಲ್ಲಿ ಬದಲಾವಣೆ ಮಾಡಿಕೊಟ್ಟರು. ದುರಂತ ಛಾಯೆಯುಳ್ಳ ಕತೆ ಯಾವತ್ತಿಗೂ ಕಟುವ್ಯಂಗ್ಯದ ವಿಡಂಬನೆಯಲ್ಲಿ ನಾಟಕವಾಗಿ ರಂಗಕ್ಕೆ ಅಳವಡಿಸುವಾಗ ತಿಳಿಹಾಸ್ಯದ ಧಾಟಿಯಲ್ಲಿ ಪ್ರಯೋಗಗೊಳ್ಳುತ್ತದೆ. ಅದೇ ಮಾದರಿಯಲ್ಲಿ ನಾಟಕ ಪ್ರದರ್ಶನಗೊಳ್ಳುವಾಗ ಗೆಳೆಯ ಹನಮಂತ ಆತಂಕಿತರಾಗಿದ್ದರು. ಆದರೆ ನಾಟಕ ಪ್ರದರ್ಶನ ನೋಡಿದ ಮೇಲೆ ನಮ್ಮ ತಂಡದವರೇ ಆಗಿಬಿಟ್ಟರು. ಅವರ ಈ ಮೊದಲ ನಾಟಕದಲ್ಲಿ ಸೆಟೈರ್ ಕಾಮಿಡಿಯ ಎಲ್ಲ ಗುಣಗಳು ಇವೆ. ಇದು ನಾಟಕ ಕೃತಿಯಷ್ಟೆಯಲ್ಲ ರಂಗಕೃತಿಯಾಗಿಯೂ ಅದ್ಭುತವಾಗಿ ಸ್ಟೇಜ್ ಆಗುತ್ತದೆ. ಈ ನಾಟಕ ಆಟಮಾಟ ತಂಡಕ್ಕೆ ಹೊಸ ಶಕ್ತಿಯನ್ನೇ ನೀಡಿತು. ಅಂಥ ನಾಟಕದ ಕುರಿತು ಸಣ್ಣದೊಂದು ಟಿಪ್ಪಣಿ ಬರೆಯಲು ಹೇಳಿದಾಗ ಕೊಂಚ ಅಧೈರ್ಯ ಕಾಡಿದರೂ ಕಥನ ನಿರೂಪಣೆಯ ಮಾದರಿಯನ್ನು ಮಾತ್ರ ಇಲ್ಲಿ ವಿವರಿಸಲು ಪ್ರಯತ್ನಿಸಿದ್ದೇನೆ.
ಎರಡು ಊರುಗಳ ನಡುವಿನ ಜಗಳ ನಾಟಕೀಯವಾದ ಹತ್ತಾರು ಘಟಣೆಗಳನ್ನು ಕಥಾಹಂದರದಲ್ಲಿ ಎಳೆದುಕೊಂಡಿದೆ. ಆದರೆ ಜಗಳಕ್ಕೆ ಕಾರಣನಾದ ದೇವರು ಮಾತ್ರ ವಾಸ್ತವದ ಪ್ರತಿನಿಧಿಯಾಗಿದ್ದಾನೆ. ಎಲ್ಲಿ ಪ್ರೀತಿ ಇರುತ್ತದೋ ಅಲ್ಲಿ ದ್ವೇಷ ಹುಟ್ಟಿಕೊಳ್ಳುತ್ತದೆ. ನಮ್ಮದು ಎಂದು ಗೆರೆಹಾಕಿಕೊಂಡು ಗಡಿ ಗುರುತಿಸಿಕೊಂಡಲ್ಲಿ ಇನ್ನೊಬ್ಬರದು ಎಂಬ ದ್ವೇಷದ, ಅಸಡ್ಡೆಯ, ತಿರಸ್ಕಾರದ ನೋಟವೂ ಹುಟ್ಟಿಕೊಳ್ಳುತ್ತದೆ. ಪ್ರತಿಯೊಂದು ಸೀಮೆಯಲ್ಲೂ ಊರಿನ ಹಕ್ಕಿಗಾಗಿ ಎರಡೂರ ಸೀಮೆಗಳ ನಡುವೆ ಸಣ್ಣದೊಂದು ಜಗಳವಿದ್ದೆ ಇರುತ್ತದೆ. ಉಕ್ರೇನ್ ವಿಷಯವಾಗಿರಲಿ, ಕಾಶ್ಮೀರಾಗಲಿ ನಮ್ಮದೇ ಬೆಳಗಾವಿಯಾಗಿರಲಿ ಈ ಗಡಿಯೆಂಬುದು ಸಾಮಾನ್ಯವಾಗಿ ದ್ವಿಭಾಷಿಗಳನ್ನು ಒಳಗೊಂಡಂತೆ ವ್ಯಾಜ್ಯವನ್ನು ಹೊಂದಿರುತ್ತದೆ. ವ್ಯಾಜ್ಯವೆಂಬುದು ಅವರ ಮೂರನೆ ಭಾಷೆಯಾಗಿರುತ್ತದೆ. ಭಾಷೆ, ಆಸ್ತಿ, ಗಡಿ, ಸೀಮೆ, ನದಿನೀರು, ಹೆಣ್ಣು, ದೇವರು, ದೇವಸ್ತಾನ ಏನೆ ಆದರೂ ಅಲ್ಲೊಂದು ಪ್ರತಿಷ್ಠೆಯ ಗರ್ವ ಇರುತ್ತದೆ. ಇಬ್ಬರು ವ್ಯಕ್ತಿಗಳಿಂದ ಆರಂಭವಾಗಿ ಜಾತಿ, ಧರ್ಮ, ಗುಂಪು, ಸಮುದಾಯ, ಊರು, ಸೀಮೆ, ದೇಶ ಹೀಗೆ ಸಮೂಹದ ಭಾವನೆಗಳನ್ನು ಕೆದಕುತ್ತ ಹೋಗುತ್ತದೆ. ಒಟ್ಟಾರೆಯಾಗಿ ಕಾಳಗವೇ ನಡೆದುಹೋಗುತ್ತದೆ. ಆದರೆ ನ್ಯಾಯಾಲಯ ಎಂಬ ವ್ಯವಸ್ಥೆ ಆ ಎಲ್ಲಾ ಜಗಳ, ತುರುಸು, ಗೆಲವು ಉಮೇದು, ಉತ್ಸಾಹ, ರೊಚ್ಚುಗಳನ್ನು ನುಂಗಿ ಹಾಕುವ ಒಂದು ನೇರ ನಿರೂಪಣೆಯ ಕಥೆ ಊರು ಸುಟ್ಟರೂ ಹನುಮಪ್ಪ ಹೊರಗ ನಾಟಕದ ವೈಶಿಷ್ಟ್ಯವಾಗಿದೆ. ಪ್ರಸ್ತುತ ನಾಟಕವು ಎರಎರಡು ಹಳ್ಳಿಗಳ ನಡುವಿನ ತಿಕ್ಕಾಟವನ್ನು ಕೇಂದ್ರಿಕರಿಸಿದೆ.
ವಜ್ರಮಟ್ಟಿ ಧರಗಟ್ಟಿ ಎಂಬ ಎರಡೂರಗಳ ಗಡಿಯಲ್ಲಿನ ಸೀಮೆ ಹನುಮಪ್ಪ ದೇವರ ಹಕ್ಕಿಗಾಗಿ ನಡೆಯುವ ಜಗಳವನ್ನು ನವಿರಾದ ವ್ಯಂಗ್ಯದ ಮೂಲಕ ನಾಟಕ ಚಿತ್ರಿಸುತ್ತದೆ. ಬ್ರೆಖ್ಟ್ ನಾಟಕಗಳ ಮಾದರಿಯಲ್ಲಿರುವ ಈ ಕಥನಕ್ಕೆ ಹಾಡುಗಳ ಕೊರತೆ ಬಿಟ್ಟರೆ ದೃಶ್ಯವಾಗಿ ಸಮೃದ್ಧವಾಗಿದೆ. ಸೀಮೆಯಲ್ಲಿರುವ ದೇವರಿಗೆ ಎರಡೂರಲ್ಲೂ ಒಬ್ಬೊಬ್ಬ ಪೂಜಾರಿಗಳಿದ್ದಾರೆ. ಆ ಪೂಜಾರಿಗಳ ಆಶಯದಂತೆ ದೇವರಿಗಾಗಿ ಜಗಳ ಆರಂಭವಾಗುತ್ತದೆ. ರಿಂದಮ್ಮನ ಕನಸಿನ ಮುಖೇನ ನಾಟಕ ಆರಂಭವಾಗುತ್ತದೆ. ವಜ್ರಮಟ್ಟಿ ಸೀಮೆಯಿಂದ ದೇವರನ್ನು ಕದ್ದು ತಂದು ಧರಗಟ್ಟಿಯಲ್ಲಿ ನಿಮರ್ಿಸಲಾಗಿರುವ ಹೊಸಗುಡಿಯಲ್ಲಿ ಪ್ರತಿಷ್ಠಾಪಿಸಬೇಕೆಂಬುದು ಈ ಊರವರ ಆಶಯ. ಆದರೆ ತಲತಲಾಂತರದಿಂದ ಅದೆ ಗುಡಿಯಲ್ಲಿದ್ದ ದೇವರನ್ನು ಸ್ಥಳಾಂತರಿಸಲು ಬಿಡಬಾರದೆಂಬುದು ವಜ್ರಮಟ್ಟಿಯವರ ಹಕ್ಕಾಗಿದೆ. ಹೀಗೆ ಹಕ್ಕಿಗಾಗಿ ಬಡಿದಾಡಲು ಕಾರಣವೇನೆಂದರೆ ಆ ಎರಡೂ ಊರುಗಳು ಮೂಲದಲ್ಲಿ ಒಂದೇ ಊರಾಗಿದ್ದವು. ಪೂಜೆಯ, ಆರಾಧನೆಯ ಸಲುವಾಗಿ ಆರಂಭವಾದ ಜಿದ್ದಿನ ಜಗಳವನ್ನು ರಾಜಕಾರಣ ತನ್ನ ಅಂಗಳದಲ್ಲಿ ವೋಟಿನ ಆಟವನ್ನಾಗಿ ಪರಿವತರ್ಿಸುತ್ತದೆ. ಇಲ್ಲಿಂದ ಆರಂಭವಾಗುವ ವ್ಯವಸ್ಥೆಯ ಢೋಂಗಿತನಗಳು ನಾಟಕ ಮುಗಿಯುವವರೆಗೂ ಮುಂದುವರೆಯುತ್ತವೆ.
ಜಗಳ ಶಮನ ಮಾಡುವ ಸಲುವಾಗಿ ಪೋಲಿಸರು ಆ ಹನುಮದೇವರನ್ನು ಪೋಲಿಸ್ ಕಸ್ಟಡಿಗೆ ತರುತ್ತಾರೆ. ಮುಗ್ಧಭಕ್ತರಿಗೆ ಪೋಲಿಸು ಠಾಣೆಯೇ ದೇವಸ್ಥಾನವಾಗಿ ಮಾಪರ್ಾಟಾಗುತ್ತದೆ. ಪೋಲಿಸು ಠಾಣೆಯ ದೃಶ್ಯವಂತು ಹೆಚ್ಚು ಲವಲವಿಕೆಯನ್ನು ಹೊಂದಿದೆ. ನಾಟಕಕಾರರ ನಿಜ ಧ್ವನಿ ವ್ಯಂಗ್ಯದ ರೂಪದಲ್ಲಿ ಕಾಣಸಿಗುತ್ತದೆ. ಸುದ್ದಿಗಾಗಿ ಹಪಹಪಿಸುವ ಮಾಧ್ಯಮಗಳ ಅರ್ಥವಿಲ್ಲದ ಬಡಬಡಿಕೆಯ ವಿಕಾರಗಳು, ಮುಗ್ಧ ಜನಸಾಮಾನ್ಯರು, ಅಸಹಾಯಕ ಕಾನೂನಿನ ಚೌಕಟ್ಟಿಗೆ ಒಳಪಟ್ಟ ಅಧಿಕಾರಿಗಳು, ಗೆಲುವಿನ ಆಸೆ ಹುಟ್ಟಿಸಿ ನ್ಯಾಯವನ್ನ ಮರೀಚಿಕೆ ಮಾಡುವ ನ್ಯಾಯವಾದಿಗಳು ಒಬ್ಬೊಬ್ಬರ ಮುಖವೂ ಅನಾವರಣಗೊಳ್ಳುತ್ತದೆ. ಜಿದ್ದಿಗೆ ಬಿದ್ದಂತೆ ಜಗಳಕ್ಕಿಳಿಯುವ ಜನರು ದೇವರಿಗೆ ಬೆನ್ನು ಮಾಡಿ ಬದುಕಿಗೆ ಹಂಬಲಿಸುವಲ್ಲಿಗೆ ನಾಟಕ ಕೊನೆಗೊಳ್ಳುತ್ತದೆ.
ಇಡೀ ನಾಟಕದಲ್ಲಿ ಹುಚ್ಚಮಲ್ಲನ ಪಾತ್ರವಂತು ಬಹು ಆಯಾಮದ ಕೇಂದ್ರ ಪಾತ್ರವಾಗಿದೆ. ಅವನು ಕೇಳುವ ಪ್ರಶ್ನೆಗಳಿಗೆ ಉತ್ತರವೇ ಇಲ್ಲ. ಹುಚ್ಚನಂತಿರುವ ಅವನಿಗೆ ಮುನ್ಸೂಚನೆಯಾಗಿ ಎಲ್ಲವೂ ಕನಸಿನ ಹಾಗೆ ಕಾಣುತ್ತದೆ. ಕಟ್ಟಕಡೆಗೆ ತಾನು ಖಾಸಾ ಹನುಮಪ್ಪನ ಬೀಗ ಎಂಬಲ್ಲಿಗೆ ಅವನು ದಿಟವಾಗಿರುತ್ತಾನೆ. ಎಲ್ಲ ಜಗಳಕ್ಕೆ ಮೂಲಕಾರಣನಾದ ಹನುಮದೇವರು ಬೀದಿಗೆ ಬಿದ್ದಾಗ ಹುಚ್ಚುಮಲ್ಲನಲ್ಲಿಗೆ ಊರವರು ಭಾವಿಸಿರು ದೈವೀಕತೆಯು ಬಂದು ನಿಲ್ಲುತ್ತದೆ.
ದೇವರು ಮತ್ತು ಬದುಕಿನ ಅಸ್ತಿತ್ವವನ್ನು ವಿಷಾಧಭರಿತ ವ್ಯಂಗ್ಯದ ಧಾಟಿಯಲ್ಲಿ ಯಥಾವತ್ ವಾಸ್ತವವೆಂಬುದು ನೋಡುತ್ತಿರುತ್ತದೆ. ಆ ವಾಸ್ತವ: ವ್ಯವಸ್ಥೆಯ ಮತ್ತು ಊರೆಂಬ ದೈವದ ನಿಯಂತ್ರಣದಲ್ಲಿರುವ ಸಮಾಜವನ್ನು ಯಾವ ಪೂವರ್ಾಗ್ರಹಗಳಿಲ್ಲದೆ ಸ್ವೀಕರಿಸುತ್ತಿರುತ್ತದೆ. ಈ ಆಧುನಿಕ ದುನಿಯಾದಲ್ಲಿ ಎಲ್ಲ ಅವಘಡ, ಸಂಭ್ರಮ, ಸಂತಸಗಳನ್ನು ಹೇಗಿರುತ್ತದೋ ಹಾಗೆ ಸ್ವೀಕರಿಸುವ ಎರಡು ವಸ್ತುಗಳೆಂದರೆ ಒಂದು ದೇವರೆಂಬ ಕಲ್ಲುಮೂತರ್ಿ, ಇನ್ನೊಂದು ದಿನಬೆಳಗಾದರೆ ಪ್ರತಿಯೊಬ್ಬರನ್ನು ಅಂಕೆಯಲ್ಲಿಟ್ಟುಕೊಂಡಿರುವ ಲಕ್ಷ್ಮಿ ಎಂಬ ರೊಕ್ಕ. ಈ
ಎರಡನ್ನು ನಾಟಕದಲ್ಲಿ ವಿಶಿಷ್ಟ ಪ್ರತಿಮೆಗಳನ್ನಾಗಿ ಹನುಮಂತ ಹಾಲಿಗೇರಿಯವರು ಚಿತ್ರಿಸಿದ್ದಾರೆ. ವ್ಯಾಜ್ಯದ ನಿರ್ಣಯಕ್ಕೆ ಮೊದಲೇ ಈ ಎರಡು ವಸ್ತುಗಳ ವಿಚಿತ್ರವಾದ ವ್ಯಾಮೋಹದಿಂದ ಜನಸಮುದಾಯವೇ ವಿಮುಖವಾಗುತ್ತದೆ.

ಅನುದಾನರಹಿತ ಖಾಸಗಿ ಶಾಲಾ ಶುಲ್ಕ ಪರಿಷ್ಕರಣ ಸಮಿತಿ ವರದಿ – ಅವೈಜ್ಞಾನಿಕವಾಗಿದೆ


ಶಿಕ್ಷಣ ಮನುಷ್ಯನನ್ನು ಹೃದಯವಂತನನ್ನಾಗಿ ರೂಪಿಸುತ್ತದೆ. ಬಾಲ್ಯದಲ್ಲಿಯೇ ಮಕ್ಕಳಿಗೆ ನೈತಿಕ ತಳಹದಿಯನ್ನು ಹಾಕಬೇಕಾದ ಶಿಕ್ಷಣವನ್ನು ಇಂದು ವ್ಯಾಪಾರದ ಸರಕನ್ನಾಗಿ ಮಾಡಿ, ಶುಲ್ಕವೆಂಬ ಬೆಲೆನಿಗದಿಗೊಳಿಸಿ, ಪೋಷಕರ ಯೋಗ್ಯತಾನುಸಾರ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಇದು ಪ್ರಪಾತದಂಚಿನಲ್ಲಿ ನಿಂತು ಹಾರುತ್ತಿರುವ ಕನಸು ಕಾಣುವ ಭ್ರಮೆಯ ಮಾತಲ್ಲ – ಶಿಕ್ಷಣವೆಂಬ ಸೇವಾ ಮನೋಭಾವವುಳ್ಳ ವಲಯದಲ್ಲಿನ ನಡೆಯಾಗಿದೆ. ವಾಸ್ತವದಲ್ಲಿ ಹಣಕಾಸು ಇವತ್ತು ಹೊಸವರ್ಗಗಳನ್ನು ಸೃಷ್ಟಿಮಾಡುತ್ತಿದೆ. ಒಂಬತ್ತು ರೂಪಾಯಿ ಟಿಕೇಟ ದರ ಇರುವಲ್ಲಿ ನೀವು ಹತ್ತರನೋಟನ್ನು ಕೊಟ್ಟರೆ ಒಂದು ರೂಪಾಯಿ ವಾಪಾಸು ಕೇಳುವುದು ಕೇವಲ ಎನಿಸಿಬಿಡುತ್ತದೇನೋ ಎಂಬಷ್ಟು ಮುಜುಗರವನ್ನು ಅನುಭವಿಸುವ ಮನಸ್ಸನ್ನು ಭಾರಿವಹಿವಾಟಿನ ಲೆಖ್ಖಗಳು ಸೃಷ್ಟಿಸುತ್ತಿವೆ. ಚಿಲ್ಲರೆಯ ಕುರಿತು ಮಾತಾಡುವುದು ಕೂಡ ಘನತೆಗೆ ತಕ್ಕದ್ದಲ್ಲ ಎಂಬಂತಾಗಿದೆ. ಮಸಲಾ ಹೇಳ್ತೇನೆ ಆಯ್ಕೆಯ ಹಿಂದೆಯೂ ಈ ಹಣಕಾಸಿನ ಸೊಕ್ಕು ಮೆರೆದಾಡುತ್ತಿರುವುದಂತೂ ಸತ್ಯ. ಎಲ್ಲವೂ ಬ್ರಾಂಡಡ್, ಮಕ್ಕಳಿಗೆ ತೊಡಿಸುವ ಬಟ್ಟೆ, ಬಳಸುವ ವಸ್ತುಗಳು, ಬ್ಯಾಗ, ಪೆನ್ನು, ವಹಿ, ಪುಸ್ತಕ, ಸೈಕಲ್, ಕೊಡಿಸುವ ಶಿಕ್ಷಣ… ಹೀಗೆ. ಶಿಕ್ಷಣದಲ್ಲಿ ಶ್ರೇಷ್ಟವಾದದ್ದನ್ನೆ ಬಯಸುವದರ ಹಿಂದೆ ತನ್ನಂತೆ ಮಕ್ಕಳಾಗಬಾರದು ಎಂಬ ಪಾಲಕರ ಕಳಕಳಿಯೂ ಇರುತ್ತದೆ.
ಆದರೆ
ಅನುದಾನರಹಿತ ಖಾಸಗಿ ಶಾಲೆಗಳ ಪರವಾಗಿರುವ, ಬಡಜನರ ಮಕ್ಕಳ ವಿದ್ಯಾರ್ಜನೆಗೆ ಮಾರಕವಾಗಿರುವ, ಪರಿಷ್ಕರಣ ಶುಲ್ಕದ ಸಮಿತಿಯ ವರದಿಯನ್ನು ಶಿಕ್ಷಣ ಇಲಾಖೆ ಜಾರಿಗೆ ತಂದರೆ ಸಮಾನಶಿಕ್ಷಣವೆಂಬುದು ಮರೀಚಿಕೆಯಾಗಿಯೇ ಉಳಿದುಬಿಡುತ್ತದೆ. ರಾಜ್ಯ ಉಚ್ಛನ್ಯಾಯಾಲಯದ ಆದೇಶದಂತೆ ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ವಿಧಿಸಬಹುದಾದ ಶುಲ್ಕವನ್ನು ನಿಗದಿಪಡಿಸಲು ರಾಜ್ಯಸರ್ಕಾರವು ಶುಲ್ಕಪರಿಷ್ಕರಣಾ ಸಮಿತಿಯನ್ನು ರಚಿಸಿತ್ತು. ಈ ಶುಲ್ಕಪರಿಷ್ಕರಣಾ ಸಮಿತಿಯು ನೀಡಿದ ವರದಿಯನ್ನು ಇಲಾಖೆಯ ವೆಬ್ ಸೈಟ್ http://www.schooleducation.kar.nic.in ನಲ್ಲಿ ದಿನಾಂಕ 309\2014 ರಂದು ಪ್ರಕಟಿಸಲಾಗಿದೆ. ಆದರೆ ಆ ವರದಿಯು ಪೂರ ಹುಸಿ ವ್ಯಂಗ್ಯಗಳಿಂದ ಕೂಡಿದಂತಿದೆ. ಶಾಲೆಗಳನ್ನು ಬೆಂಗಳೂರು ಮಹಾನಗರ ಪಾಲಿಕೆ ಮೈಸೂರು ಮಹಾನಗರ ಪಾಲಿಕೆ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲೆಗಳೆಂದು ವಿಭಾಗಿಸಿದ್ದಲ್ಲದೆ ಜಿಲ್ಲಾಮಟ್ಟದ ವ್ಯಾಪ್ತಿಯಶಾಲೆಗಳು, ತಾಲ್ಲೂಕುಮಟ್ಟದ, ಹಳ್ಳಿಮಟ್ಟದ ವ್ಯಾಪ್ತಿ ಶಾಲೆಗಳೆಂದು ವರ್ಗೀಕರಿಸಿ ಅನುದಾನರಹಿತ ಖಾಸಗಿಶಾಲೆಗಳ ಶುಲ್ಕನಿಗದಿ ಮಾಡಲಾಗಿದೆ. ಆಡಳಿತದ ದೃಷ್ಟಿಯಿಂದ ಎಲ್ಲ ಶಾಲೆಗಳು ಒಂದೇ ತೆರನಾಗಿರಲಾರವು. ಸರಕಾರದ ಕಣ್ಣಲ್ಲಿ ಎಲ್ಲ ಶಾಲೆಗಳು ಜ್ಞಾನದೇಗುಲವೇ ಆಗಿರಬೇಕಿತ್ತು. ಆದರೆ ಇಲಾಖೆಯೇ ಹೀಗೆ ಅಸಮಾನ ಶಿಕ್ಷಣವ್ಯವಸ್ಥೆಗೆ ಪ್ರೇರಣೆ ನೀಡಿರುವುದು ಅಸಹ್ಯವೆನಿಸುತ್ತದೆ.
ಶಾಲಾ ಅಭಿವೃದ್ಧಿ ಶುಲ್ಕವನ್ನು ಸಂಗ್ರಹಿಸುವ ಆಧಾರದ ಮೇಲೆ ಅನುದಾನರಹಿತ ಖಾಸಗಿ ಶಾಲೆಗಳನ್ನು ಅಂಕಗಳ ನೀಡುವುದರ ಮುಖಾಂತರ ಅತಿಶ್ರೇಷ್ಠ, ಶ್ರೇಷ್ಠ, ಉತ್ತಮ, ತೃಪ್ತಿಕರ, ಸಾಧಾರಣ ಎಂಬುದಾಗಿ ವರ್ಕಿಂಗ್ ಡೆಡ್ ಲೈನ್ ರೀತಿಯಲ್ಲಿ ವರ್ಗೀಕರಿಸಿದ್ದಾರೆ. ಇಂಥ ವ್ಯಾಪಾರೀ ಮನೋಭಾವವನ್ನು ಶಿಕ್ಷಣಸಂಸ್ಥೆಗಳಲ್ಲಿ ಉತ್ತೆಜಿಸುವ ಕೆಲಸವನ್ನು ಸರಕಾರವೇ ಮುಂದೆನಿಂತು ಮಾಡುವುದು ಸರಿಯಾದ ಕ್ರಮವಲ್ಲ.
ಪ್ರದೇಶವ್ಯಾಪ್ತಿ ಮತ್ತು ಶ್ರೇಣೀಕರಣದ ಮಾನದಂಡದಲ್ಲಿ ಶುಲ್ಕವಸೂಲಿಯ ಆಯವ್ಯಯಕ್ಕೆ ಅನುಸಾರವಾಗಿ ಸಿಬ್ಬಂದಿಯ ಸಂಬಳವನ್ನು ನಿಗದಿಪಡಿಸಲಾಗಿದೆ. ಆಯಾಗಳಿಗೂ ಡಿ ದರ್ಜೆ ನೌಕರರಿಗೂ ಕನಿಷ್ಟಕೂಲಿಯನ್ನು ನೀಡುವ ಬಗ್ಗೆ ಮಾತಾಡುವುದಿರಲಿ, ಕೇವಲ 2000 ರೂಪಾಯಿ ಸಂಬಳದಲ್ಲಿ ಖಾಸಗಿಶಾಲೆಗಳಲ್ಲಿ ಶಿಕ್ಷಕರನ್ನು ದುಡಿಸಿಕೊಳ್ಳಬುದೆಂಬುದನ್ನು ಸರಕಾರವೇ ಶಿಫಾರಸ್ಸು ಮಾಡಿರುವುದು ಗಾಬರಿಹುಟ್ಟಿಸುತ್ತದೆ. ಹೀಗೆ ಶಿಕ್ಷಣಕ್ಷೇತ್ರವನ್ನು ವ್ಯಾಪಾರಿಗಳ ಅನುಕೂಲತೆಗೆ ತಕ್ಕಂತೆ ರೂಪಿಸುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಕುಸಿಯದೆ ಇರುತ್ತದೆಯೇ..?
ಸುತ್ತೋಲೆಯ ಕೊನೆಯಲ್ಲಿ ಆಡಳಿತಮಂಡಳಿಯವರು ಹೆಚ್ಚಿನಸೌಲಭ್ಯವನ್ನು ಒದಗಿಸಿದಲ್ಲಿ ಅಂದರೆ ಈಜುಕೊಳ, ಕುದುರೆಸವಾರಿ, ಪ್ರವಾಸ ಇತ್ಯಾದಿಗಳ ಅನುಕೂಲತೆಗೆ ತಕ್ಕ ಹಾಗೆ ಪೋಷಕರ ಒಪ್ಪಿಗೆಯ ಮೇರೆಗೆ ಹೆಚ್ಚುವರಿ ಶುಲ್ಕವನ್ನು ಸಂಗ್ರಹಿಸಬಹುದು ಎಂಬ ಗ್ರೀನ್ ಸಿಗ್ನಲ್ ನೀಡಿರುವುದು ಆಘಾತಕಾರಿಯಾದದ್ದು. ಎಳೆಸಿಕ್ಕರೆ ಹಚ್ಚಡವನ್ನೇ ನುಂಗಿಹಾಕುವ ಪ್ರವೃತ್ತಿ ಉಧ್ಯಮಶೀಲತೆಯ ಮೌಲ್ಯವಾಗಿರುವಾಗ ಇಂಥ ಆದೇಶವನ್ನು ಅನುದಾನರಹಿತ ಖಾಸಗಿ ಶಾಲೆಗಳು ಶಿರಸಾವಹಿಸಿಪಾಲಿಸುತ್ತವೆ.
ಆಡಿ-ನಲಿದಾಡುವ ಮಕ್ಕಳನ್ನು ಹಿಂದಿನ ತಲೆಮಾರು ದೇವರಿಗೆ ಸಮಾನರು ಎಂದು ಹೋಲಿಸುತ್ತಿದ್ದರು. ಆ ಮುಗ್ಧಜಗತ್ತಿಗೆ ಅಸಮಾನ ಭಾರತದ ಒಂದೊಂದೇ ಅಲೆಗಳು ಅಪ್ಪಳಿಸುತ್ತ ಹೋದಂತೆ ಬಾಲ್ಯದ ಸಂಭ್ರಮಗಳನ್ನು ಕಳೆದುಕೊಳ್ಳುತ್ತ, ಭ್ರಮಾತ್ಮಕ ಸುಖವನ್ನು ತ್ಯಜಿಸಿ ಈ ದೇಶದ ಯಾವದೋ ಒಂದು ವರ್ಗದ ಯಾವದೋ ಮನೆತನದ ಇನ್ಯಾರದೋ ದೇಖರೇಖಿಯಲ್ಲಿ ಕಳೆದುಹೋಗುವ ಕಾರಣಕ್ಕಾಗಿಯೇ ಪ್ರತಿಯೊಬ್ಬನಿಗೂ ಬಾಲ್ಯದ ಸಖ್ಯ ಸಾಯೋವರೆಗೂ ಕಾಡುತ್ತದೆ. ಅಂಥ ಬಾಲ್ಯದಲ್ಲಿ ಭಾರತದ ಪ್ರತಿಯೊಂದು ಮಗುವಿಗೂ ಒಂದೇ ಮಾದರಿಯ ಶಿಕ್ಷಣ ಸಿಕ್ಕುವಂತಾದರೆ ಹೇಗಿರುತ್ತದೆ..?
ಬಾಲ್ಯದ ಪೊರೆಕಳಚುವ ಹೊತ್ತಿಗೆ ಪ್ರದೇಶ, ಭಾಷೆ, ಧರ್ಮ, ಜಾತಿಗಳ ಭಿನ್ನತೆಯ ಆಚೆಗೂ ನಮ್ಮ ಮಕ್ಕಳು ಶಿಕ್ಷಣದ ವ್ಯವಸ್ಥೆಯಲ್ಲಾದರೂ ಸಮಾನವಾದದ್ದನ್ನು ಓದಿದ್ದೆ ಆದರೆ ಅವರು ಮಹಾತ್ಮರಾಗದಿದ್ದರೂ ಹಿಟ್ಲರ್ಂತೂ ಅವರ ಆಯ್ಕೆ ಆಗಲಾರದು. ಶಿಕ್ಷಣದಲ್ಲಿ ನೈತಿಕ ತಳಹದಿಯಾದರೂ ಗಟ್ಟಿಯಾಗುವುದರಿಂದ ಸಮಾನ ಶಿಕ್ಷಣ ಇವತ್ತಿನ ತುರ್ತಾಗಿದೆ.
ಯಶಸ್ಸನ್ನು ಪಡೆಯಲು ಸ್ಪರ್ಧೆ ಹಾಗೂ ನಿಷ್ಕರುಣೆಗಳು ಅತ್ಯಗತ್ಯ. ಆದ್ದರಿಂದಲೇ ತಾಯಿತಂದೆಗಳು ತಮ್ಮ ಮಕ್ಕಳನ್ನು ಮಹತ್ವಾಕಾಂಕ್ಷೆ ಮತ್ತು ಸ್ಪರ್ಧೆಗಳು ತುಂಬಿರುವ, ಪ್ರೀತಿಯ ಲವಲೇಶವೂ ಇಲ್ಲದ ಶಾಲೆಗಳಿಗೆ ಕಳಿಸುತ್ತಾರೆ. ನಮ್ಮ ಸಮಾಜವು ನಿರಂತರವಾಗಿ ಕೊಳೆಯುತ್ತಿರುವುದಕ್ಕೂ, ಅಂತಃಕಲಹಗಳಲ್ಲಿ ಮುಳುಗಿರುವುದಕ್ಕೂ ಇದೇ ಕಾರಣ. ಎಂದು ಜೆ. ಕೃಷ್ಣಮೂರ್ತಿಯವರು ವಿವರಿಸುತ್ತಾರೆ. ಈ ಮಾತು ಇಂದು ಶಿಕ್ಷಣವನ್ನು ಸೇವೆಯಿಂದ ವಂಚಿಸಿ ಉಧ್ಯಮವಾಗಿ ರೂಪಿಸುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳೊಟ್ಟಿಗೆ ಹೋಲಿಕೆಮಾಡಿದರೆ ಸಹ್ಯವೆನಿಸಬಹುದೇನೋ..!
ಶಿಕ್ಷಣವೆಂಬುದು ಇಂದು ಬೃಹತ್ ಉಧ್ಯಮದ ಮಾದರಿಯಲ್ಲಿ ಬೆಳೆದು ನಿಂತಿದೆ. ಸೇವೆಯ ನೆಪತೋರಿಸಿ, ಸೌಕರ್ಯಗಳ ಸೋಜಿಗದ ಲೋಕವನ್ನು ಶಾಲಾಅಂಗಳದಲ್ಲಿ ನಿರ್ಮಿಸಲಾಗುತ್ತಿದೆ. ನೆಲದೊಟ್ಟಿಗಿನ ನಂಟನ್ನು ಬಿಡಿಸಿ ಕಾಂಕ್ರೀಟ ಕಾಡಿನಲ್ಲಿ ಶಿಕ್ಷಣ ಕೊಡುವುದು ಮತ್ತು ಅಂಥ ಶಿಕ್ಷಣವನ್ನೇ ಆಯ್ಕೆ ಮಾಡಿಕೊಂಡು ತಮ್ಮ ಮಕ್ಕಳಿಗೂ ಆ ಮಾದರಿಯ ಶಿಕ್ಷಣವನ್ನೆ ಕೊಡಿಸಬೇಕೆಂಬ ಹಠವೂ ಪಾಲಕರಲ್ಲಿದೆ. ಶಾಲೆಗಳ ಆಯ್ಕೆಯೂ ಪೋಷಕರ ತಿಂಗಳ\ವಾರ್ಷಿಕ ವರಮಾನಗಳನ್ನು ಆಧರಿಸಿದ್ದಾಗಿರುತ್ತದೆ. ಗುಣಮಟ್ಟದ ಶಿಕ್ಷಣವನ್ನು ನೀಡುವುದಾದರೆ ಎಲ್ಲ ವರ್ಗದ ಎಲ್ಲಾ ಮಾದರಿಯ ವಿದ್ಯಾರ್ಥಿಗಳಿಗೂ ವೈವಿದ್ಯೆತೆಯನ್ನೊಳಗೊಂಡ ಗುಣಮಟ್ಟದ ಸಮಾನ ಶಿಕ್ಷಣವನ್ನು ನೀಡಲು ಸಾಧ್ಯವಿಲ್ಲವೇ..?
ಖಾಸಗಿ ಶಿಕ್ಷಣ ಸಂಸ್ಥೆಗಳ ರಟ್ಟೆಗೆ ಸರಕಾರದಿಂದ ರಚಿಸಲ್ಪಟ್ಟ ಸಮಿತಿಯೇ ಇಷ್ಟೊಂದು ತೋಳಬಲ ನೀಡುತ್ತಿರುವಾಗ ಬಡವನ ಮಗ ಇಂಥ ಶಾಲೆಗಳಲ್ಲಿ ಓದುವುದು ಸಾಧ್ಯವೇ..? ಬಡವನಿರಲಿ ಮೇಲ್ಮಧ್ಯಮವರ್ಗದ ಮಕ್ಕಳಿಗೂ ಈ ಶಿಕ್ಷಣ ದಕ್ಕಲಾರದು. ಇದೆಲ್ಲವನ್ನು ಹೋಗಲಾಡಿಸಿ ಸಮಾನಶಿಕ್ಷಣವನ್ನು ಜಾರಿಗೆ ತರುವ ಕುರಿತು ಸರಕಾರ ಯೋಚಿಸುವಂತಾಗಬೇಕು.

“ಹುಲಿಯ ನೆರಳಿನೊಳಗೆ – ಅಂಬೇಡ್ಕರವಾದಿಯ ಆತ್ಮಕಥೆ” ಒಂದು ಟಿಪ್ಪಣಿ


ಉಚಲ್ಯಾ, ಅಕ್ರಮಸಂತಾನ, ಗಬಾಳ, ಬಹಿಷ್ಕೃತ, ವಾಲ್ಮೀಕಿ, ಬಲುತ, ನೋವು ತುಂಬಿದ ಬದುಕು ಹೀಗೆ ಮರಾಠಿಯಿಂದ ಅನುವಾದಗೊಂಡ ಹಾಗೂ ಕನ್ನಡದಲ್ಲಿ ಪ್ರಕಟವಾದ ದಲಿತ ಆತ್ಮಕತೆಗಳ ಬಾಲ್ಯ ಮತ್ತು ಬದುಕಿನ ಚಿತ್ರಣಗಳು ವಿಭಿನ್ನ ಅನುಭವ ಜಗತ್ತನ್ನು ನಿರ್ಮಿಸಿಕೊಟ್ಟಿವೆ. ಪ್ರತಿಯೊಬ್ಬರ ಬಾಲ್ಯವೂ ಅಸಮಾನ ಭಾರತದ ಚರಿತ್ರೆಯನ್ನು ಹೇಳುತ್ತದೆ. ಕುಲಮೂಲದ ಕಸುಬುಗಳು, ಕಸುಬಿನ ದಾರುಣ ಚಿತ್ರಣ, ಹುಟ್ಟಿನಿಂದ ಗುರುತಿಸಲ್ಪಡುವ ಜಾತಿಯೂ, ಆಯಾ ಪರಿಸರಕ್ಕೆ ಸಂಬಂಧಪಟ್ಟ ಆಚರಣೆಗಳು, ಬಂಧು-ಬಾಂಧವರ ಸಂಬಂಧಗಳು, ಬಡತನ, ಹಸಿವು, ಶೋಷಣೆ, ಕಲಿಕೆಗಾಗಿ ಪರಿತಪಿಸುವ ರೀತಿಯೂ, ಆಧುನಿಕ ಶಿಕ್ಷಣವ್ಯವಸ್ಥೆಯಲ್ಲಿನ ಶಾಲಾ ಆವರಣದಲ್ಲಿ ಆಚರಿಸಲ್ಪಡುವ ಅಸ್ಪೃಶ್ಯತೆಯೂ ಹೀಗೆ ಭೀಕರವಾದ ತಾರತಮ್ಯದ ಜಗತ್ತನ್ನು ದಲಿತ ಆತ್ಮಕತೆಗಳಲ್ಲಿ ಕಾಣುತ್ತೇವೆ. ಮೇಲ್ನೋಟಕ್ಕೆ ಎಲ್ಲ ಆತ್ಮಕತೆಗಳ ಬಾಲ್ಯವು ಒಂದೆ ಪಡಿಯಚ್ಚಿನಲ್ಲಿ ಎರಕಹೊಯ್ದಂತೆ ಭಾಸವಾದರೂ ಕಟ್ಟಿಕೊಡುವ ಪರಿಸರದ ನಿವೇದನೆ ಅಸ್ಪೃಶ್ಯ ಭಾರತದ ಒಂದೊಂದು ಮಗ್ಗಲುಗಳನ್ನು ಶೋಧಿಸುತ್ತವೆ. ಸಾಂಪ್ರದಾಯಿಕ ಪ್ರಜಾಪ್ರಭುತ್ವವು ಹಳ್ಳಿಗಳಲ್ಲಿತ್ತು. ಅದೇ ಆಶಯದಲ್ಲಿ ಸಂವಿಧಾನವೂ ರಚನೆಯಾಗಬೇಕಿತ್ತು ಎಂದು ಹಂಬಲಿಸುವವರು ದಲಿತ ಅಸ್ಮಿತೆಯ ಈ ಬಾಲ್ಯದ ಕುರುಹುಗಳನ್ನು ಕೊಂಚ ಗಮನಿಸಬೇಕು.
ಈ ದೇಶದಲ್ಲಿ ಪವಿತ್ರವಾದದ್ದು ಒಂದೇ, ಅದು ಸಂವಿಧಾನ ಎಂಬುದನ್ನು ಪ್ರತಿಯೊಬ್ಬ ನಾಗರಿಕ ಅರ್ಥಮಾಡಿಕೊಳ್ಳುತ್ತಾನೆ ಎಂದಾದರೆ ಅವನಿಗೆ ಅಂಬೇಡ್ಕರ್ ಅವರು ಯಾವದೋ ಒಂದು ಜಾತಿಗೆ ಸೀಮಿತವಾದ ವ್ಯಕ್ತಿಯಲ್ಲ, ಅವರು ಆಧುನಿಕ ಭಾರತದ ನಿರ್ಮಾತೃ, ಅಪ್ರತಿಮ ದೇಶಪ್ರೇಮಿ, ಪಾರಂಪರಿಕವಾಗಿ ಅಸ್ತಿತ್ವದಲ್ಲಿದ್ದ ಸಂವಿಧಾನವನ್ನು ಭಂಜಿಸಿ ಭಾರತದ ಪ್ರತಿಯೊಬ್ಬ ನಾಗರೀಕನಿಗೂ ಸಂವಿಧಾನದ ಮೂಲಕ ಹೊಸಗುರುತನ್ನು ನೀಡಿದ ಮಹಾತ್ಮ ಎಂಬುದನ್ನು ಮಣಗಾನುತ್ತಾನೆ. (ಆಗ ಮನೆಯೊಳಗೆ ತೂಗುಹಾಕಿರುವ ಅಂಬೇಡ್ಕರ್ ಅವರ ಫೋಟೋ ನೋಡಿ ನೀವು ಅವರಾ..? ಎನ್ನುವ ಹೊಸ ಐಡೆಂಟಿಟಿಯ ವಿಧಾನ ಇಲ್ಲವಾಗಬಹುದು.) ಆ ಹುಲಿಯ ಹೆಜ್ಜೆಗುರುತುಗಳನ್ನು ಇವತ್ತಿನ ಈ ಜಾತಿಸಂಘಟಣೆಯ ಜಂಝಾವಾತಗಳ ನಡುವೆ ಮತ್ತೆಮತ್ತೆ ಕೆದಕಬೇಕಿದೆ, ಅವರ ಆಲೋಚನೆಗಳನ್ನು ಈ ಹೊತ್ತಿಗೆ ತಕ್ಕಂತೆ ವಿಮರ್ಶಿಸಿ, ಆ ಅಧ್ಯಯನದ ಶಿಸ್ತನ್ನು, ಆ ನ್ಯಾಯನಿಷ್ಠುರ ವ್ಯಕ್ತಿತ್ವವನ್ನು ಹೆಚ್ಚು ಅರಿತುಕೊಳ್ಳುವ ಅಗತ್ಯವಿದೆ. ಈ ಅರಿವಿನಲ್ಲಿ ಭಾರತದ ಹೊಸ ಚಲನೆಯ ಆರಂಭವಾಗಿರುವುದರಿಂದ ಅಂಬೇಡ್ಕರ್ ಅವರ ಬದುಕು ಬರಹ ಭಾಷಣಗಳನ್ನು ನಾವು ಮತ್ತೆಮತ್ತೆ ಓದಿಕೊಳ್ಳುತ್ತಲೇ ಇರಬೇಕಾಗುತ್ತದೆ.
ಕೃಷಿವಿಜ್ಞಾನಿಯಾದ ನಾಮದೇವ ನಿಮ್ಗಾಡೆಯವರ ‘ಹುಲಿಯ ನೆರಳಿನೊಳಗೆ ಅಂಬೇಡ್ಕರವಾದಿಯ ಆತ್ಮಕಥೆ’ಯನ್ನು ಕನ್ನಡಕ್ಕೆ ಬಿ. ಶ್ರೀಪಾದರವರ ಭಾವಾನುವಾದ ಮಾಡಿದ್ದಾರೆ. ಈ ಪುಸ್ತಕವನ್ನು ಲಡಾಯಿ ಪ್ರಕಾಶನ ಪ್ರಕಟಿಸಿದೆ. ಭಾರತದ ಕ್ರಾಂತಿಸೂರ್ಯರ ಬದುಕು ಮತ್ತು ಹೋರಾಟದ ಕುರಿತಾದ ಟಿಪ್ಪಣಿಗಳಿರುವುದರಿಂದ ಈ ಹೊತ್ತುಗೆ ಉಳಿದೆಲ್ಲ ಆತ್ಮಕತೆಗಳಿಗಿಂತ ಭಿನ್ನವಾಗಿದೆ.
ಅಂಬೇಡ್ಕರರ ನಂತರ ಅಮೆರಿಕಾದ ವಿಶ್ವವಿದ್ಯಾಲಯದಲ್ಲಿ ಪಿ ಎಚ್ ಡಿ ಪಡೆದ ಎರಡನೇ ದಲಿತವ್ಯಕ್ತಿ ಎಂದೇ ಹೆಸರಾಗಿರುವ ಇವರ ಬದುಕಿನಲ್ಲೂ ಅಸ್ಪೃಶ್ಯ ಭಾರತದ ಅನುಭವಗಳೇ ತುಂಬಿದ್ದಾವೆ. ಆ ಎಲ್ಲ ಅಪಮಾನ, ನಿಂದೆ, ಬಡತನ, ಅಸಹಾಯಕತೆಗಳನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳುವ ಛಲದ ಹುಲಿಯ ಹೆಜ್ಜೆಜಾಡಿನಲ್ಲಿ ನಡೆಯುವ ನಿಮ್ಗಾಡೆಯವರ ಬದುಕು ಮತ್ತು ಹೋರಾಟದ ಭಾವಜಗತ್ತು ಸ್ವವಿಮರ್ಶಾ ಧಾಟಿಯಲ್ಲಿರುವುದರಿಂದ ತುಂಬ ಆಪ್ತವಾಗುತ್ತದೆ.
ಆತ್ಮಕತೆಯ ಮೊದಲ ಅಧ್ಯಾಯದ ಕೊನೆಯಭಾಗದಲ್ಲಿ ಅವರ ತಂದೆ ಹೇಳಿಬರೆಯಿಸಿದ ಭಾಷಣದಲ್ಲಿ ಭೀಮರಾವ ಅಂಬೇಡ್ಕರ್ ಅವರ ಹೆಸರನ್ನು ಕೇಳಿ ಪುಳಕಿತರಾಗುವ ನಿಮ್ಗಾಡೆಯವರ ಆತ್ಮಕತೆಯುದ್ದಕ್ಕೂ ಬಾಬಾಸಾಹೇಬರ ಛಲದ, ಆತ್ಮವಿಶ್ವಾಸದ, ಅಧ್ಯಯನ ಶಿಸ್ತಿನ, ಹೋರಾಟ ರೂಪಿಸಿದ ರೀತಿಗಳೆಲ್ಲವೂ ಪ್ರಭಾವೀಕರಿಸಿರುವುದನ್ನ ಚಿತ್ರಿಸಿದ್ದಾರೆ. ತೀರ ಖಾಸಗಿಯಾಗಿ ಅವರೊಂದಿಗೆ ಒಡನಾಡಿದ ಕ್ಷಣಗಳಂತೂ ನಾಮದೇವ ನಿಮ್ಗಾಡೆಯವರನ್ನು ರೂಪಿಸಿದ್ದಾವೆ. ನೆಹರೂ ಅವರನ್ನು ತರುಬಿ ಕೇಳುವ ಪ್ರಶ್ನೆ, ಗಾಂಧೀಜಿಯವರ ಅಸ್ಪೃಶ್ಯತೆ ನಿವಾರಣೆ ನಡೆಯ ನಡುವಿನ ಭಿನ್ನತೆಯನ್ನ ವಿವರಿಸುವ ಬಗೆ, ಹಾಗೂ ಮಾರ್ಟಿನ್ ಲೂಥರ ಕಿಂಗ ಅವರೊಂದಿಗಿನ ಸಂವಾದದಲ್ಲಿ ಭಾರತದಲ್ಲಿ ಆಚರಣೆಯಲ್ಲಿರುವ ಅಸ್ಪೃಶ್ಯತೆಯ ವಾಸ್ತವವನ್ನೂ ಆವೇಶಭರಿತರಾಗಿ ನಿರರ್ಗಳ ಮಾತಾಡುವ ಉಮೇದು,,,, ಈ ಎಲ್ಲದರ ಹಿಂದೆ ಆಳವಾದ ಸುಪ್ತಪ್ರಜ್ಞೆಯಲ್ಲಿ ತುಂಬಿಕೊಂಡಿದ್ದ ಬಾಬಾಸಾಹೇಬರ ಚಿಂತನೆಗಳೇ ಪ್ರೇರಣಶಕ್ತಿಯಾಗಿದ್ದವು.
ತನ್ನ ಸಹಪಾಠಿ ಓದುತ್ತಿದ್ದ ಪುಸ್ತಕ ಯಾವುದೆಂದು ಕೇಳಲು ಹೋಗಿ ಅವಮಾನಿತರಾದ ಲೇಖಕರು ಮುಂದೊಂದು ದಿನ ತುಳಸೀರಾಮಾಯಣ ಓದಿ ‘ಈ ಅವಮಾನಗಳು, ಬಯ್ಗಳುಗಳು, ತಲೆಯೆತ್ತಿ ಬದುಕಲು ನನಗೆ ಮತ್ತಷ್ಟು ದೃಢತೆಯನ್ನು, ಆತ್ಮವಿಶ್ವಾಸವನ್ನು ತಂದುಕೊಟ್ಟವು. ಈ ಶೋಷಣೆ ಮತ್ತು ಅಸಮಾನತೆಯ ವಿರುದ್ಧ ಹೋರಾಡಲು ಅಂದೇ ದೃಢಸಂಕಲ್ಪ ಮಾಡಿದೆ. ಈ ನಿಸ್ಸಹಾಯಕತೆಯನ್ನು ಮೀರಲು ನನಗಿರುವ ಒಂದೇ ಗುರಿ ಶಿಕ್ಷಣವೆಂದು ಅಂದು ನನಗೆ ಮನದಟ್ಟಾಯಿತು’ ಎಂದು ಹೇಳುತ್ತಾರೆ. ಇನ್ನೊಂದೆಡೆ ದೇವಸ್ಥಾನದ ಅತಿಕ್ರಮ ಪ್ರವೇಶ ಮತ್ತು ದೇವರ ವಿಗ್ರಹಗಳನ್ನು ನಾಶಪಡಿಸದ್ದಾರೆಂಬ ಸುಳ್ಳು ಆರೋಪ ಮಾಡಿದ ಸವರ್ಣಿಯರು ಕೊಟ್ಟ ಫಿರ್ಯಾದಿಯನ್ನ ಅನುಸರಿಸಿ ಪೋಲಿಸರು ಬಂಧಿಸಲು ಬಂದಾಗ ತಂದೆ ಹೇಳುವ ಧೈರ್ಯದ ಮಾತುಗಳು ಹೀಗೆ ನಾಮದೇವ ನಿಮ್ಗಾಡೆಯವರನ್ನು ಆಂತರಿಕವಾಗಿ ಮತ್ತು ಬಹಿರಂಗವಾಗಿ ಹೋರಾಟದ ಬದುಕಿಗೆ ಸಜ್ಜುಗೊಳಿಸುವ ಘಟಣೆಗಳು – ವ್ಯಷ್ಠಿಯಿಂದ ಸಮಷ್ಠಿಗೆ ತುಡಿಯುವ ಜೀವವೊಂದನ್ನು ತಯಾರು ಮಾಡಿದ ಹಾಗಿವೆ.
ವಿಧಾನಸಭೆಯ ಸದಸ್ಯರಾಗುವ ಅವಕಾಶವೊಂದು ಒದಗಿಬಂದಾಗ ಬಾಬಾಸಾಹೆಬರು ಹೇಳುವ ಮಾರ್ಮಿಕವಾದ ಮಾತುಗಳು ಬಹಳ ಉಪಯುಕ್ತವಾದವು ಎನಿಸುತ್ತವೆ. ಮಗನಿಗೆ ಭೀಮರಾವ್ ಎಂದು ಹೆಸರಿಟ್ಟಾಗ, ಶಿಕ್ಷಣಕ್ಕೆ ಒಂದು ಕಡೆ ನಿಲುಗಡೆಯಿಡಬೆಕಲ್ಲ ಎಂದು ಹೇಳಿದಾಗ, ಸಂಸತ್ತಿನಲ್ಲಿ ಅವರ ಕಾಲಿಗೆರಗಿದಾಗ ಹೀಗೆ ನಿಮ್ಗಾಡೆಯವರಿಗೆ ಅಂಬೇಡ್ಕರರು ಪ್ರತಿಕ್ರಿಯಿಸಿರುವ ರೀತಿಗಳಂತೂ ಅದ್ಭುತ ಗಳಿಗೆಗಳೇ ಆಗಿವೆ. ಇದು ನಾಮದೇವ ನಿಮ್ಗಾಡೆಯವರ ಆತ್ಮಕಥನ ಹೇಗೋ ಹಾಗೆ ಭೀಮರಾವ್ ಅಂಬೇಡ್ಕರರ ಜೀವನಚರಿತ್ರೆಯೂ ಆಗಿದೆ ಎಂಬರ್ಥದಲ್ಲಿ ಹೇಳಿರುವ ಡಾ. ಅಪ್ಪಗೆರೆ ಸೋಮಶೇಖರ್ ಅವರ ಮಾತು ಅಕ್ಷರಶಃ ಸತ್ಯ.