ವರಾಹಿ ಅಂಗಳದಿಂದ ಜಿಗಿದ ಕಪಿಲೆಯ ಪಾತ್ರಗಳು.


ಹೌದು..! ವರಾಹಿ ಅಂಗಳದ ಆಟೋಟ, ಓದು, ಹುಡುಗಾಟಿಕೆ, ಯಕ್ಷಗಾನ, ಭೂತಕೋಲ, ನಾಟಕ ಹೀಗೆ ಕುಂದಗನ್ನಡ ಮನೆಮಾತಾಗಿರುವ ಸಂತೋಷ ಗುಡ್ಡಿಯಂಗಡಿ ನೌಕರಿಯ ಕಾರಣಕ್ಕೆ ಕಪಿಲೆಯ ಅಂಗಳಕ್ಕೆ ಬಂದು ಇಲ್ಲಿನ ಬದುಕಿನೊಡನೆ ಸಾಮರಸ್ಯ ಕಂಡುಕೊಂಡು ಆ ಭಾಷೆಯ ಸೊಗಸನ್ನು, ಆ ಭಾಷೆಯ ಮಟ್ಟು, ದಾಟಿ-ಲಯಗಳನ್ನು ಅಭಿವ್ಯಕ್ತಿಗೆ ಆಸರೆಯಾಗಿ ತಂದುಕೊಂಡು ಶ್ರದ್ಧೆಯಿಂದ ಬರವಣಿಗೆ ಮಾಡಿದ್ದಾರೆ. ಕತೆಬರೆಯುವಾಗ ಒದಗಿಬರುವ ಅನುಭವದ ಹಿನ್ನೆಲೆ ಬಹುಶಃ ವರಾಹಿ ಅಂಗಳದ, ಕುಂದಗನ್ನಡದ್ದೆ ಆದ್ದರಿಂದ ಇಂಥದ್ದೊಂದು ಶೀಷರ್ಿಕೆಯೊಂದಿಗೆ ಕತೆಗಳ ಅಧ್ಯಯನಕ್ಕೆ ತೊಡಗಬೇಕಾಯ್ತು.
ಇವತ್ತಿಗೂ ಸೂರ್ಯ ಹುಟ್ಟುತ್ತಾನೆ! ಸಾಯಂಕಾಲಕ್ಕೆ ದಣಿದು ಸಮುದ್ರ ಸ್ನಾನಕ್ಕೆ ಇಳಿಯುತ್ತಾನೆ ಎಂದು ಕತೆ ಹೇಳುವ ತಾಯಂದಿರರಿದ್ದಾರೆ. ವೈಜ್ಞಾನಿಕವಾಗಿ ಸೂರ್ಯನ ಸುತ್ತ ಭೂಮಿ ತಿರುಗುತ್ತದೆ ಎಂಬ ಸತ್ಯ ತಿಳಿದಿದ್ದರೂ ನಭೋಮಂಡಲವನ್ನು ಕತೆಯಾಗಿ ಕೇಳುವ ಕತೆಯಾಗಿ ಹೇಳುವ ಕುತೂಹಲವನ್ನು ಬಿಡಲಾರೆವು. ಹೀಗಿರುವ ಪಾತ್ರಗಳು ವರಾಹಿ ಮತ್ತು ಕಪಿಲಾ ನದಿಯ ಎಡಬಲದಲ್ಲೂ ಬದುಕುತ್ತವೆ. ಅಂಥ ಪಾತ್ರಗಳ ಬಗ್ಗೆ ಸೂರ್ಯ-ಚಂದ್ರ ಭೂಮಿ-ಬಾನಂತೆ ಹೊರಗಿನಿಂದ ಕಟ್ಟಿಕೊಳ್ಳುವ, ಕುತೂಹಲದಿಂದ ಹುಟ್ಟಿಕೊಳ್ಳುವ ಕತೆಗಳು ಜನರ ಬಾಯಲ್ಲಿ ಹಡೆಹುಡೆಯಾಗಿ ಊಹಾಪೋಹಗಳಾಗಿ ಕೇಳಿರುತ್ತೇವೆ. ಆದರೆ ಒಬ್ಬ ಪ್ರಜ್ಞಾವಂತ ಆ ಬದುಕನ್ನು ತನ್ನದು ಅಂತ ಅನುಭವಿಸಿ ಆ ವಾಸ್ತವದ ಜೊತೆಗೆ ಮುಖಾಮುಖಿಯಾಗುವಾಗ ಘನೀಕೃತಗೊಳ್ಳುವ ಬೆಣ್ಣೆಯ ಹಾಗೆ ವಾಸ್ತವ ಘನಗೊಳ್ಳುತ್ತಾ, ತನ್ನನುಭವ ಬೆಸೆದುಕೊಳ್ಳುತ್ತಾ ದಿನದ ಸುದ್ದಿಗಳೊಂದಿಗೆ ಮನುಷ್ಯನ ಸಂವೇದನೆಗಳೂ ರೂಪುಗೊಳ್ಳುತ್ತಿರುವ ಇವತ್ತಿನ ವಾಸ್ತವವನ್ನು ಗಟ್ಟಿಗೊಳಿಸಿ ಆ ಅನುಭವಕ್ಕೊಂದು ಆಕಾರ ತಂದುಕೊಡುವ ಕಲ್ಪಕತೆ ಕೊರಬಾಡು ಕಥಾಸಂಕಲನದ ವೈಶಿಷ್ಟ್ಯ.
ದ್ಯಾವನೂರು ನಾಟಕದಲ್ಲಿ ಚನ್ನನಾಗಿ ಅಭಿನಯಿಸಿದ್ದ ಸಂತೋಷ ಗುಡ್ಡಿಯಂಗಡಿ ಆ ನಂಜನಗೂಡಲ ಸೀಮೆಯ ಭಾಷೆಯ ಲಯವನ್ನ ಅಚ್ಚುಕಟ್ಟಾಗಿ ನುಡಿಸುತ್ತಿದ್ದುದನ್ನು ಕಂಡು ನಮಗೆಲ್ಲ ಬಹಳ ಆಶ್ಚರ್ಯವಾಗಿತ್ತು. ವರಾಹಿ ಸೀಮೆಯ ಕುಂದಗನ್ನಡ ಮನೆಮಾತಾಗಿದ್ದರೂ ಈ ಕಪಿಲೆಯ ಸೀಮೆಯ ನಂಜನಗೂಡಿನ ಲಯ ಇಷ್ಟು ಚನ್ನಾಗಿ ಹಿಡಿದಿದ್ದಾರೆ ಅನ್ನುವುದೆ ಸೋಜಿಗ. ಭಾಷೆಯ ಬಳಕೆಯಲ್ಲಿ ಯುವಲೇಖಕರದ್ದೊಂದು ದೊಡ್ಡಸಮಸ್ಯೆ ಇರುವುದಾದರೂ ಆ ಸವಾಲಿನ ಕುತ್ತನ್ನು ಕೊರಬಾಡು ಕಥಾಸಂಕಲನದ ಕತೆಗಳು ಮೀರಿದ್ದಾವೆ. ಇಲ್ಲಿನ ಪಾತ್ರಗಳು ಜೀವತುಂಬಿಕೊಳ್ಳುವಲ್ಲಿ ಭಾಷೆ ಸಹಾಯಕವಾಗಿದೆ ಹೊರತು ಭಾಷೆಯ ಬಳಕೆ ಮತ್ತದರ ಲಯದ ಪಾಜಗಟ್ಟಿಯ ಜಿಗಿತವನ್ನು ಸಂತೋಷ ಜಿಗಿದಿದ್ದಾರೆ ಎನಿಸುತ್ತದೆ. ಕತೆ ಓದುತ್ತಲೇ ಭಾಷೆಯ ಲಯದ ಆಧಾರದ ಮೇಲೆ ಇದು ಕಪಿಲೆ ಸೀಮೆಯ ಪಾತ್ರಗಳ ಕತೆ, ಇನ್ನೊಂದು ವರಾಹಿ ಸೀಮೆಯ ಕತೆ ಅಂತ ಹೇಳಬಹುದಾದ ಸಶಕ್ತತೆ ಈ ಕತೆಗಳಿಗಿದೆ. ಆ ಎರಡು ಭಾಷೆಗಳನ್ನು ಸಮರ್ಥವಾಗಿ ಬಳಸಿಕೊಂಡ ಇಬ್ಬರು ಮಹತ್ವದ ಕತೆಗಾರರು ನಮ್ಮೆದುರಿಗಿದ್ದಾರೆ. ದೇವನೂರು ಮಹಾದೇವ ಮತ್ತು ವೈದೇಹಿಯವರ ಕಥನಗಳು ರೂಪುಗೊಳ್ಳುವ ರೀತಿಗಿಂತ ವಿಭಿನ್ನವಾದ ಪಥದಲ್ಲಿ ಕೊರಬಾಡು ಕಥಾಸಂಕಲನದ ಪಾತ್ರಗಳು ವಾಸ್ತವವನ್ನು ಎದುರುಗೊಳ್ಳುತ್ತವೆ. ಕಥಾವಸ್ತು ವಾಸ್ತವದ ಅರಿವಿನಿಂದ ಬಿಡಿಸಿಕೊಂಡು ಮಿಥ್ ಆಗಿ ಕಾಣಿಸಿಕೊಳ್ಳುತ್ತವೆ. ಆ ಸೊಗಸು ಆ ಲಾಲಿತ್ಯ ಆ ಸಂವೇದನೆ, ಆ ಅಂತಃಸ್ಪೂರ್ತ ಕಲ್ಪಕತೆ ಇಲ್ಲದಿದ್ದರೆ ಈ ಕತೆಗಳೂ ಸುದ್ದಿಕತೆಗಳಾಗಿಬಿಡುತ್ತಿದ್ದವು.
ಕೊರಬಾಡು ಕತೆಯ ಆರಂಭವೇ ಅಂತ್ಯದ ಪೂರ್ಣವಿರಾಮದೊಂದಿಗೆ. ಊರಾದರೇನು ಕೆಳಹಟ್ಟಿಯಾದರೇನು ಅಲ್ಲಿ ರಾಮಕ್ಕ ನರಳುತ್ತ ಮಲಗಿದ್ದಾಳೆ. ಇಲ್ಲಿ ಚಂದ್ರಮ್ಮಳ ಹೊಟ್ಟೆಯಲ್ಲಿ ತಂದೆಯ ಹೆಸರಿಲ್ಲದ ಗುರುತಿನೊಂದಿಗೆ ಕೂಸೊಂದು ಹುಟ್ಟುತ್ತದೆ. ಚನ್ನಿ ಚಂದಪ್ಪಗ ಹೊರಗಿನ ಗಾಳಿ ಸೋಕದಿದ್ದರೂ ಆ ಹಟ್ಟಿಯ ಆ ಗುಡ್ಲುಮನೆಗೂ, ಕೊರಬಾಡಿನ ರುಚಿಗೂ, ಅವರ ಬದುಕಿಗೂ ಬಿಡಲಾರದ ನಂಟಿದೆ. ಈ ವ್ಯವಸ್ಥೆಯ ಇಂಚಿಂಚನ್ನ ಚಾಚೂತಪ್ಪದೆ ಪಾಲಿಸುವ ಆ ಚನ್ನಿ-ಚಂದಪ್ಪನ ಮನಸ್ಸಲ್ಲಿ ಎಳ್ಳಷ್ಟೂ ಕಲ್ಮಶವಿಲ್ಲ. ಮೇಲಿನ ಹಟ್ಟಿಯಲ್ಲಿ ಇದಕ್ಕೆ ತದ್ವಿರುದ್ಧವಾದ ಬದುಕೊಂದಿದೆ. ಹೆಂಡತಿಯ ಅಧಿಕಾರವನ್ನು ತಾನೆ ಮುಂದಾಗಿ ನಡೆಸುವ, ರಾಜಕೀಯದ ಪುಂಡಾಟಿಕೆ ಮೆರೆಯುವ, ತೆವಲಿಗೆ ಹೆಣ್ಮಕ್ಕಳನ್ನು ಬಳಸಿಕೊಳ್ಳುವ ಗೂಳಿಯಂತ ಸೋಮಣ್ಣನಿದ್ದಾನೆ, ಅಣ್ಣನ ಹೆಂಡತಿಯನ್ನೂ ಅಣ್ಣನ ಮಗಳನ್ನು ಬಳಸಿಕೊಳ್ಳುವ ಚಿಕ್ಕಪ್ಪನಿದ್ದಾನೆ. ಮೇಗಳ ಹಟ್ಟಿಯಿಂದ ತೂರಿಬರುವ ಗಾಳಿಯಲ್ಲೆಲ್ಲ ಊನವಿದೆ.. ಆದರೆ ಅಪರಿಚಿತಳಾಗಿ ಚನ್ನಿ-ಚಂದಪ್ಪರ ಮನೆಗೆ ಬರುವ ಹುಡುಗಿಗೆ ಇಲ್ಲೊಂದು ಹೆಸರಿದೆ, ತಾಯಿ-ತಂದೆಯರ ವಾತ್ಸಲ್ಯವಿದೆ, ಬದುಕು ಇರುವುದಾದರೂ ಚಾಕಿನಿಂದ ಚಿಗಪ್ಪನದನ್ನೂ ಸೋಮಣ್ಣಂದೂ ಕತ್ತರಿಸಿ ಹಾಕುವಷ್ಟು ಅತ್ಯಾಚಾರಕ್ಕೆ ಅವಳು ರೋಸಿಹೋಗಿದ್ದಾಳೆ.
ಮೇಲ್ನೋಟಕ್ಕೆ ಕಪ್ಪು-ಬಿಳುಪಿನ ಕಥಾವಸ್ತು ಎನಿಸಿದರೂ ನಿರೂಪಣೆಯ ಜಾಣ್ಮೆ ಕಥಿಸುವ ಬಗೆಯಲ್ಲಿ ಹೊಸತನವೆನಿಸುತ್ತದೆ. ಕತ್ತಲಿನೊಂದಿಗೆ ಒಡನಾಡುವ ಪಾತ್ರಗಳಿಗೆ ಚಂದ್ರನಂತ ಹೊಳಪಿದ್ದರೂ ಮುಕ್ತಾಯದಲ್ಲಿ ಕೂಸುಹುಟ್ಟುವಾಗ ಕಲುಕತ್ತಲೆ ಇಡೀ ಊರ ಮ್ಯಾಲೆ ಬಿದ್ದು ಕಪ್ಪಗಾಗಿಸಿರುವುದು ಮತ್ತೊಂದು ಕತೆಯ ಆರಂಭದಂತೆಯೂ ಇದೆ.
ಲಂಕೆಯೆಂಬ ಸನಿಮಾತ್ಮೆಯ ಕೆಂಚ ಸ್ವಾಭಿಮಾನಿ… ದೇಶದ ಸಾಂಸ್ಕೃತಿಕ ರಾಜಕಾರಣದೊಟ್ಟಿಗೆ ಕೆಂಚನ ಕತೆಯೂ ನಡೆಯುತ್ತದೆ. ಅವನ ಕಲಿಕೆಗೆ ಗೋಡೆಗಳೆಂಬ ಬಂಧನವಿಲ್ಲವಾದ್ದರಿಂದ ಕೌಶಲಿ ಎನಿಸುತ್ತಾನೆ. ಓದಲು ಬಾರದಿದ್ದರೂ ದೇಶದಾಗ ನಡೆಯುತ್ತಿರುವ ಅನಾಚಾರಗಳ ಅರಿವು ಅವನಿಗಿದೆ. ಹೆಚ್ಚಿನ ತಿಳುವಳಿಕೆಗೆ ಓದಲು ತಿಳಿದಿರುವ ಸುದ್ದಿಮಾದಯ್ಯನ ಸಹಾಯ ಪಡೆಯುತ್ತಾನೆ. ಅವನಿಗೆ ಬಹುಶಃ ಕ್ರಾಂತಿಯಾಗುವುದು ಬೇಡವಾಗಿದೆ. ಅಂಥ ಮಾತಿನ ಧಾಟಿಯನ್ನು ವಿರೋಧಿಸುವ ಹುಂಬುತನ ಅವನದಲ್ಲ ಅದ್ದರಿಂದ ಎದುರಿಸುವ ಕೆಚ್ಚಿದೆ, ಸ್ವಾಭಿಮಾನವಿದೆ. ಸ್ವಾಮಿ ಹೇಳುವ ಹೊಲ್ಯಾ ಅನ್ನೋ ಶಬ್ದಕ್ಕ ಸರಿಸಾಟಿಯಾಗಿ ಉತ್ತರಕೊಡಲು ನಾಟಕ ಕಲಿಸುವ ತಯಾರಿಮಾಡುತ್ತಾನೆ… ಅಣ್ಣಾ ತಂಡದಲ್ಲಿ ಬಿರುಕು ಅನ್ನೋದು ಸುದ್ದಿಯಾಗಿ ಟಿವಿಯೊಳಗ ಕಾಣಿಸುತ್ತಿದ್ದಾಗ ಅಲ್ಲಿ ಸುದ್ದಿಮಾದಯ್ಯನ ವಿರೋಧಿಸುವ ಕ್ರಾಂತಿಯ ಕಿತಾಪತಿಗೆ ಕೆಂಚ ಬಲಿಯಾಗುತ್ತಾನೆ. ಇತ್ತ ಸ್ವಾಮಿಯ ದ್ವೇಷಕ್ಕೆ ಹಟ್ಟಿಯಲ್ಲಿನ ಕೆಂಚನ ಮನೆಯೂ, ಟಿವಿಯೂ, ಅಕ್ಕಿಯೂ ಬೆಂಕಿಯಶಾಖಕೆ ಸಿಡಿಯುತ್ತವೆ. ಕತೆಯ ಆಶಯವೇನೆ ಇರಲಿ ಇಂತದೊಂದು ಸೋಲನ್ನು ಸಾಮಾಜಿಕವಾಗಿ ನಡೆಯುವ ಹೋರಾಟಗಳಲ್ಲಿ ಮತ್ತೆಮತ್ತೆ ಕಾಣುತ್ತಿದ್ದೇವೆ… ಆದರೆ ಅಜ್ಜಿಅಂಗಡಿ ಕತೆಯಲ್ಲಿ ನಿರೂಪಕ ಎದೆಗೆ ಬಿದ್ದ ಅಕ್ಷರ ಪುಸ್ತಕ ಕೊಡಿಸಲು ಮುಂದಾಗುವುದು ಕೂಡಾ ಇಂತದೆ ಎದುರಿಸಲು ಸಜ್ಜುಗೊಳಿಸುವ ತಯಾರಿಯ ರೂಪಕದಂತೆ ಕಾಣುತ್ತದೆ.
ಕತೆಗಳನ್ನು ಕಟ್ಟುವಲ್ಲಿ ಸುಂದರಿಕಾಟದ ಪ್ರಯೋಗ ಹೆಚ್ಚುಹೊಸತನದಿಂದ ಕೂಡಿರುವುದರಿಂದ ಗಾಢವೆನಿಸುತ್ತದೆ. ಅಕ್ಕನವಚನದ ಸಾಲುಗಳಿಂದ ಸ್ಪೂರ್ತಗೊಂಡಿದ್ದರಿಂದ ಆ ಹುಡುಕಾಟದಲ್ಲಿ ಹೊಸತನ ತಾನಾಗಿಯೇ ಕತೆಯಾಗಿದೆ. ಅನುಭಾವಿಕ ನೆಲೆಯಲ್ಲಿ ನಿಂತು ಮಾತಾಡುವ ಅಕ್ಕಮಹಾದೇವಿಯಲ್ಲ ಸುಂದರಿ. ಆಕೆ ಶ್ರೀಸಾಮಾನ್ಯ ಹೆಂಗಸು, ಬಹುಶಃ ಮಾತು ಕೂಡ ಬಾರದವಳು. ಅಂಥವಳೊಂದಿಗೆ ಸಂಜ್ಞೆಗಳ ಮೂಕಸಂವಾದನೆಯೂ ಸಾಧ್ಯವಾಗಲಾರದು.. ಕತೆಗಾರನೊಂದಿಗೆ ಸಂದರ್ಶನದಲ್ಲಿ ಮಾತಾಡುವ ಹುಚ್ಚಿ ಅನುಭಾವದ ನೆಲೆಯಲ್ಲಿಯೇ ಮಾತಾಡುವುದು ಸೊಗಸಾಗಿದೆ. ಕತೆಯ ಒಂದು ಭಾಗದ ಸಂದಶ್ನ ಹೀಗಿದೆ…
ಕತಗಾರ: ನಿಮ್ಗಂಡ ಯಾರಂತ ಹೇಳಿಲ್ಲ?
ಸುಂದರಿ: (ನಕ್ಕು) ಯಾನ್ಯಾನೋ ಮಾತಾಡ್ತ ಇದ್ದೀಯಲ್ಲ ಕೂಸು. ನನ್ಗಂಡ್ನ ಕಟ್ಕಂಡು ನಂಗೇ ಯಾನಾಗಿಲ್ಲ. ಇನ್ನ ನಿಂಗೇನಾದ್ದು. ಹಿಂದ್ಕ ಅಕ್ಮಾದೇವಮ್ಮ ಅಂತೊಬ್ಳು ಇದ್ದಿದ್ಲಂತ. ಅವ್ಳುಗ ದೇವ್ರು ಗಂಡ್ನಂತ. ಆದ್ರೂವಿ ಅವ್ಳಿಯಾ ಅವನನ್ನ ನೋಡ್ನಿಲ್ವಂತ. ಆದ್ರ ನಾ ನೋಡಿವ್ನಿ. ಯಾರ್ನ? ನನ್ಗಂಡ್ನ. ಅವ್ನೂವಿ ದೇವ್ರು. ನಂಜ್ಲಗೂಡ್ಲ ದೇವುಸ್ತಾನತಪು ಇರ್ತಾನ. ನಾ ಪೋನ್ ಮಾಡ್ತೀನಿ ಮಾತಾಡ್ತಾನ. ನಾ ಯಾನೆ ಕೇಳಿದ್ರೂವಿ ತ್ಯಪ್ಗ ಉತ್ರ ಹೇಳ್ತಾನ ಹಂಗ ಮಡಿಕಂಡಿವ್ನಿ ಗಂಡನ್ನ.
ಕತಗಾರ: ಯಾರವನು?
ಸುಂದರಿ: ನನ್ಗಂಡ.
ಕತಗಾರ: ಅದೇ ಯಾರವನು?
ಸುಂದರಿ: ನಂಜುಂಡೇಸ್ವರ.
ಕತಗಾರ: ಊಂ?
ಸುಂದರಿ: ಯಾಕ ಕಣ್ಣೂ ಬಾಯಿ ಬಿಟ್ಗಂಡಿ? ನಿಂಗ ದೇವ್ರು ನಂಗ ಗಂಡ. ಅಂದಮ್ಯಾಕ್ಕ ನಾ ಯಾರೇಳು?
ಕತಗಾರ: ದೇವರ ಹೆಂಡತಿ.
ಸುಂದರಿ: ದೇವ್ರ ಹೆಡ್ತಿ ಯಾನಾಗ್ತಾಳು?
ಕತಗಾರ: ದೇವರು.
ಸುಂದರಿ: ದೇವ್ರುಗ ನೀ ಯಾನ್ಮಾಡ್ಬೇಕೇಳು?
ಕತಗಾರ: ಪೂಜ
ಸುಂದರಿ: ಪೂಜ ಯಾಕ್ಮಾಡ್ಬೇಕೇಳು?
ಕತಗಾರ: ಒಳ್ಳೆಯದಾಗಲಿ ಅಂತ.
ಸುಂದರಿ: ಒಳ್ಳೇದ ಯಾರಿಗ್ಮಾಡ್ಬೇಕೇಳು?
ಕತಗಾರ: ನಮಗೆ.
ಸುಂದರಿ: ನಮ್ಗ ಅಂದ್ರ ಯಾರಿಗೇಳು?
ಕತಗಾರ: ನಮಗೆ ಅಂದರೆ ಮನುಷ್ಯರಿಗೆ.
ಸುಂದರಿ: ಮನ್ಸರು ಎಲ್ಲವ್ರೆಯೇಳು?
ಕತಗಾರ: ಭೂಮಿ ಮೇಲೆ.
ಸುಂದರಿ: ನಾನೆಲ್ಲವ್ನಿಯೇಳು?
ಕತಗಾರ: ಭೂಮಿ ಮೇಲೆ.
ಸುಂದರಿ: ನಾನ್ಯಾರೇಳು?
ಕತಗಾರ: ಹುಚ್ಚಿ.
ಸುಂದರಿ: ಹುಚ್ಚಿ ಎಲ್ಲದಾಳೇಳು?
ಕತಗಾರ: ಇಲ್ಲೆ.
ಸುಂದರಿ: ಹುಚ್ರ ಜ್ವತ್ಗ ಯಾರಿರ್ತಾರೇಳು?
ಕತಗಾರ: ಹುಚ್ರು.
ಸುಂದರಿ: ನೀನೆಲ್ಲಿದ್ದೀಯೇಳು?
ಕತಗಾರ: ನಿನ್ನ ಜೊತೆಗೆ.
ಸುಂದರಿ: ನಾನ್ಯಾರೇಳು?
ಕತಗಾರ: ಹುಚ್ಚಿ.
ಸುಂದರಿ: ನನ್ನ ಜ್ವತಿಗ ಇರೋ ನೀನ್ಯಾರೇಳು?
ಕತಗಾರ: ಹಂ!!
ಈ ಪ್ರಶ್ನೋತ್ತರಗಳ ಸೊಗಸಲ್ಲಿ ನಂಜನಗೂಡಿನ ಆ ಸುಂದರಿ ಆತ್ಮದೊಳಗಿನ ಅರಿವಿನಂತೆ ತೋರುತ್ತಾಳೆ. ಸುಂದರಿಕಾಟ ಕತೆಯಲ್ಲಿ ಮ್ಯಾಜಿಕಲ್ ರಿಯಲಿಜಮ್ಮಿನಂತೆ ಕಾಣುವ ಬಹಳಷ್ಟು ಅಂಶಗಳಿದ್ದಾವೆ. ಮುಕುಂದೂರ ಸ್ವಾಮಿಗಳ (ಯೇಗ್ದಾಗೆಲ್ಲಐತೆ) ಸಕೀಲು ಅನ್ನೋ ಪವಾಡದ ಒಂದಂಶ ಸುಂದರಿಕಾಟದ ಕತೆಯಲ್ಲೂ ಮುಂದುವರೆದಂತಿದೆ.
ಊನವಾದೊಂದು ಜಗತ್ತು ಕಣ್ಣಿಗೆ ಗೋಚರಿಸುತ್ತಿದ್ದರೂ ಆ ಲೋಕವನ್ನು ಅಲಕ್ಷಿಸಿಯೋ ಇಲ್ಲಾ ಎಂಟಾಣೆ ಒಂದ್ರೂಪಾಯ ಕೈಗಿಟ್ಟೋ ದಾಟಿಕೊಳ್ಳುತ್ತೇವೆ. ಇಲ್ಲಿನ ಕತೆಗಳಲ್ಲಿ ಅಂತ ಆಸರುತಪ್ಪಿದವರ ಅಸ್ತಿತ್ವದ ಹುಡುಕಾಟವಿದೆ. ಆ ಜಗತ್ತಿನ ಮಾನವೀಯತೆಯ ಖದರ್ರು ಹೇಗೋ ವ್ಯಕ್ತಗೊಳ್ಳುತ್ತಾ ಒಬ್ಬರಿಗೊಬ್ಬರಾಗುತ್ತ ಬಯಲೊಳಗೊಂದು ನೆಂಟಸ್ತನ, ಬೀದಿಯಲ್ಲೊಂದು ಕುಟುಂಬದ ಥರ ನಾಗರೀಕತೆಯ ನಾಟಕಗಳನ್ನು ಅನುಕರಿಸಲು ತೊಡಗುತ್ತ ಇಲ್ಲಿನ ಪಾತ್ರಗಳು ಬದುಕುತ್ತವೆ. ಇಂಡಿಯಾದ ರೈಲು ರಸ್ತೆ ದೇವಸ್ಥಾನದ ಬದಿಗಳ ಪಾತ್ರಗಳು ಮೈಗೊಂದು ಕತೆ ಕಟ್ಟಿಕೊಂಡು ಧುತ್ತನೆ ಪಾತ್ರವಾಗಿ ನಿರೂಪಕನೊಡನೆ ಪ್ರಶ್ನೋತ್ತರ ಮಾಡುತ್ತ ಅನುಭಾವದ ಮಾತುಗಳನ್ನಾಡುವುದು ಅಸಹಜವೆನಿಸುತ್ತದೆ. ಆದರೆ ಕತೆಗಾರ ಹಾಗೆ ಎದುರುಗೊಳ್ಳದೆ ನುಸುಳಿಕೊಂಡಿದ್ದರೆ ಈ ಕತೆಗಳ ಆವರಣವೂ ಒಂದು ಚೋದಕದಂತಾಗುತ್ತಿತ್ತು. ದೊಡ್ಜಾತ್ರೆಯ ಗೊಜ್ಜನಿರಲಿ, ಅಮ್ರೂಜ್ ಮಿಟಾಯಿ ಎಳೆಗೂಸಿನ ತಾಯಿಯಿರಲಿ, ದೆಹಲಿಯ ಮಾಕರ್ೆಟಿನಲ್ಲಿ ಸಿಗುವ ಹುಚ್ಚನಾಗಲಿ, ಕೊರ್ಗಳ ದಿಟ್ಟತನವೂ ಇವೆಲ್ಲವೂ ನಮ್ಮ ಅಕ್ಕಪಕ್ಕದಲ್ಲಿನವರ ಕತೆಗಳೇ ಆದ್ದರಿಂದ ಒಂದು ಚಣ ಸಂತೆಯಲ್ಲೋ ಜಾತ್ರೆಯಲ್ಲೋ ದೂರಪ್ರಯಾಣದ ಸಹಪ್ರಯಾಣಿಕನ ರೀತಿಯಲ್ಲೋ ಪಾತ್ರಗಳು ನಮ್ಮೆದುರಲ್ಲೇ ಮೈದಾಳುತ್ತವೆ.
ಇಲ್ಲಿನ ಒಟ್ಟನುಭವವು ವರಾಹಿ ಅಂಗಳದಿಂದ ಜಿಗಿದು ಕಪಿಲೆಯ ಪರಿಸರದಲ್ಲಿ ಅರಳಿದ ಕಥಾಜಗತ್ತು. ಬದುಕ ಪ್ರೀತಿಸಿದ ಬಡವರ ಮಕ್ಕಳು ಕತೆಯಲ್ಲಿ ಒಂದನ್ನೊಂದು ಹೆಣೆಯಲಾಗಿದೆ. ಆ ಮಕ್ಕಳು ಕೇಳುವ ಪ್ರಶ್ನೆಗಳು ಮತ್ತು ಇತಿಹಾಸದ ಪಡಿಯಚ್ಚಿನಿಂದ ಮೂಡಿಬರುವ ಕರಿಯಣ್ಣನೂ ಮುಗ್ಧವಾಗಿಯೇ ಪಾಠಕರನ್ನು ಎದುರಾಗುತ್ತವೆ. ಗಂಜಿಬಜ್ಜಿ, ದುರ್ಗಿ ಮಗ ದಿಲ್ಲಿಗೋಯ್ಬಂದ ಕತೆಗಳು ಕುಂದಗನ್ನಡದ ವೈಶಿಷ್ಟ್ಯದಲ್ಲಿ ನಿರೂಪಣೆಗೊಂಡಿವೆ. ಆ ಎರಡು ಮತ್ತು ಬದುಕ ಪ್ರೀತಿಸುವ ಬಡವರ ಮಕ್ಕಳು ಎಂಬ ಮೂರನೇ ಕತೆಯೂ ಎರಡೂ ಪರಿಸರದ ಭಾಷೆ-ಬದುಕನ್ನು ಒಳಗೊಂಡಿರುವುದರಿಂದ ಓದುಗನ ಭಾಷೆಯ ಲಯವನ್ನು ಬದಲಿಸಿಬಿಡುತ್ತವೆ. ಹಾಗಾಗಿ ಈ ಮೂರುಕತೆಗಳು ಹೆಚ್ಚು ಆಪ್ತವೂ ಆಗುತ್ತವೆ.
ಸಂಕಲನದ ಬಹಳಷ್ಟು ಕತೆಗಳು ನಂಜುಂಡೇಶ್ವರನ ಸನ್ನಿಧಿಯ ಸುತ್ತಲು ನಡೆಯುವ ಬದುಕಿಗೆ ಸಂಬಂಧಿಸಿದ್ದವೆ ಆಗಿವೆ. ವಿಷದಸೀಸೆ ಮತ್ತು ಎಂಟಾನೆ ಮನುಷ್ಯ ಎರಡು ಕತೆಗಳು ಭಿನ್ನ ಲೋಕದ ಅನುಭವವನ್ನೂ ಮತ್ತು ರೋಚಕಬದುಕಿನ ತಾಕರ್ಿಕ ಅಂತ್ಯವನ್ನು ಕಷ್ಟಪಟ್ಟು ನಿವೇದಿಸಿದಂತೆ ಭಾಸವಾಗುತ್ತವೆ. ಗಂಜಿ-ಬಜ್ಜಿ, ಬದುಕ ಪ್ರೀತಿಸಿದ ಬಡವರ ಮಕ್ಕಳು, ದುರ್ಗಿ ಮಗ ದಿಲ್ಲಿಗೋಯ್ಬಂದ ಕತೆಗಳು ಆಂತರ್ಯದಿಂದಲೇ ಸ್ವಯಂಸ್ಪೂರ್ತವಾಗಿರುವ ಅನನ್ಯವಾದ ಅನುಭವ ಲೋಕವನ್ನು ಸಾದರಪಡಿಸುತ್ತವೆ. ಹೆಚ್ಚಿನ ಕತೆಗಳಲ್ಲಿ ತಾಯಿತನದ ಮಮತೆಯ ವಾತ್ಸಲ್ಯ ಜೀವಂತಿಕೆಯಿಂದ ಕೈಹಿಡಿದು ಮುನ್ನಡೆಸುತ್ತದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s