ಚಪ್ಪಲಿಗಳು


ಊರೆಲ್ಲ ಸುತ್ತಿ ಬಂದು ಮೂಲ್ಯಾಗ ಕುಂದರುವ ಮೂಳಗಳು ಯಾವವು..? ಅಂತ ಒಡಪುಕತಿ ಹೇಳತಿದ್ದರಲ್ಲ ಅಂಥ ಸಂಚಾರಿಸ್ವಭಾವದ ಚಪ್ಪಲಿಗಳ ಊರ್ಫ ಎಕ್ಕಡಗಳ ಕಥನವೂ ಅಷ್ಟೆ ಕುತೂಹಲಿಯಾದದ್ದು.
ಎಲ್ಲೇ ಸಭೆಸಮಾರಂಭಗಳು ನಡೆಯಲಿ ಅಲ್ಲೆಲ್ಲ ತಮ್ಮ ಗ್ರಾಮಮಟ್ಟದ, ತಾಲ್ಲೂಕುಮಟ್ಟದ, ಜಿಲ್ಲಾಮಟ್ಟದ, ರಾಜ್ಯಮಟ್ಟದ ಮೀಟಿಂಗಗಳನ್ನು ಈ ಚಪ್ಪಲಿಗಳು ಮಾಡುತ್ತವೆ. ತನ್ನ ಮೇಲೆ ಬೀಳುವ ಭಾರವನ್ನು ಸಹಿಸಿಕೊಳ್ಳಲಾರದ ಹಲಕೆಲವು ಚಪ್ಪಲಿಗಳಂತೂ… ತನ್ನ ಮೈ ತೂತಾಗಿರುವ, ಉಂಗುಟ ಹರಿದಿರುವ, ಮುಳ್ಳುಚುಚ್ಚಿರುವ ಅಂಗೋಪಾಂಗಗಳ ಪ್ರದರ್ಶನ ಮಾಡಿ ಈ ಮನುಷ್ಯನ ವಿರುದ್ಧ ನಾವು ಯಾವ ತೆರನಾಗಿ ಚಳುವಳಿ ಆರಂಭಿಸಬೇಕೆಂದು ಗಂಭೀರವಾಗಿ ಚಿಂತಿಸುತ್ತವೆ. ಆದರೆ ಅವುಗಳ ಸಂಕಟವನ್ನು ಕೇಳಿ ಕೋಟರ್ಿನಲ್ಲಿ ದಾವೆ ಹೂಡತಕ್ಕಂಥ ವಕೀಲನ ಕಾಲೊಳಗೆ ಚಪ್ಪಲಿಗಳಿಲ್ಲದೆ ಪಾಲಿಷ್ ಮಾಡಿರತಕ್ಕಂಥ ಬೂಟುಗಳಿರುವುದರಿಂದ ಇವುಗಳ ಹೋರಾಟ ವ್ಯರ್ಥವಾಗುತ್ತದೆ. ಆದದ್ದಾಗಲಿ ಸ್ಟೇಶನ್ ಮೆಟ್ಟಿಲು ಹತ್ತೋಣವೆಂದು ತೀಮರ್ಾನಿಸಿದರೆ ಆ ಪೋಲಿಸ್ ಮಹಾಶಯರು ಕಾಲೊಳಗಿನ ಬೂಟು ಕಳಚುವುದೇ ಇಲ್ಲ.. ಈ ಬೂಟುಗಳದ್ದೊಂದು ತಕರಾರು… ಅತಿಕಡಿಮೆ ವರ್ಚಸ್ಸಿನ ಚಪ್ಪಲಿಗಳ ಅಹವಾಲು ಸ್ವೀಕರಿಸಲು ವರ್ಗಭೇದದ ಸಮಸ್ಯೆ. ಹೀಗಾಗಿ ತಮ್ಮ ನವೆಯುವ ನೋವನ್ನು ಸಹಿಸಿಕೊಂಡು ಮತ್ತೆ ಯಥಾವತ್ ತಮ್ಮ ಯಾವತ್ತಿನ ಹುಟ್ಟುತ್ತಲೆ ಬಳುವಳಿಯಾಗಿ ಬಂದ ಕೆಲಸವನ್ನು ಮುಂದುವರೆಸುತ್ತವೆ.
ಹೀಗೊಂದುಸಲ ವಿಚಾರಸಂಕಿರಣದ ಹೊರಬಾಗಿಲಲ್ಲಿ ಬಿಟ್ಟಿದ್ದ, ಬಿಸಿಲಲ್ಲಿ ಒದ್ದಾಡುತ್ತ ಬಿದ್ದಿದ್ದ ನನ್ನ ಚಪ್ಪಲಿಗಳು ಸಮ್ಮೇಳನಾಧ್ಯಕ್ಷ ಸ್ಥಾನದಲ್ಲಿ ಕೂತು ನನ್ನ ವಿರುದ್ಧವೇ ಘೋಷಣೆ ಕೂಗುವ ಇನಿದನಿ ಕೇಳಿಸಿತು. ಎರಡೂ ಮಗ್ಗುಲಲ್ಲಿ ಹದವಾಗಿ ತುಳಿಯದೆ ಒಂದೊಂದು ಕಡೆ ಭಾರಬಿಟ್ಟು ನನ್ನ ಸುಂದರವಾದ ಆಕಾರವನ್ನು ಹದಗೆಡಿಸಿದ್ದಾನೆ ಮಾರಾಯ ಎಂದು ಬೈಯುತ್ತಲಿದ್ದವು. ಮೊದಲೇ ನಾಟಕದವ ಸ್ವಲ್ಪ ಹಗುರತನವೂ ನಡಿಗೆಯೊಳಗೆ ಇದ್ದೇ ಇರುತ್ತದೆಂದು ಭಾವಿಸಿ ಇವನ ಕಾಲಿಗೆ ಅಲಂಕರಿಸಿ ದೊಡ್ಡ ತಪ್ಪು ಮಾಡಿದೆವು. ನಿಂತಲ್ಲೆಲ್ಲ ತ್ರಿಭಂಗಿ ಹಾಕಿಕೊಂಡು ನಿಲ್ಲುವ ಇವನ ಸಹವಾಸ ನಮಗಂತೂ ಸಾಕಾಗಿದೆ… ಎಡಕಿನ ಚಪ್ಪಲಿ ಸ್ವಲ್ಪ ವಯ್ಯಾರವನ್ನು ಜಾಸ್ತಮಾಡಿ ವಾದಮಂಡಿಸಿತು… ಕೇಳಬೇಕಾ ಬಲಕಿನ ಚಪ್ಪಲಿಯೂ ಶುರುವಿಟ್ಟಿತು. ಎಡಕ್ಕಿಂತಲೂ ಬಲನಾದ ನನ್ನ ಮೇಲೆ ಈ ಮಾರಾಯನ ವಜ್ಜೆ ಜಾಸ್ತಿ ಆಗುತ್ತಿದ್ದು ನಾನು ಬಹಳ ತ್ರಾಸುಪಟ್ಟುಕೊಂಡು ಈ ಅಮಾಸೆಯಂಥ ಮನುಷ್ಯನನ್ನು ಹೊರಬೇಕಾಗಿದೆ.. ಎರಡೂ ಕಾಲುಗಳ ಮೇಲೆ ಭಾರಹಾಕದೆ ನನ್ನನ್ನೆ ಈತ ಹೆಚ್ಚು ಅವಲಂಬಿಸಿದ್ದಾನೆಂದೂ ಮತ್ತು ಇವನು, ಬ್ರೇಕ್ಹಾಕಲು ಬೈಕ್ಒದೆಯಲು ಮುಖ್ಯ ನಾನೇ ಬೇಕೆಂದು ವಾದಿಸಿತು. ಹಾಗಾಗಿ ಸಂಗಾತಿಗಳೇ.. ಈ ಎಡಕ್ಕಿಂತ ಬಲಕಿನವನಾದ ನನ್ನ ನೋವೆ ತುಸುಜಾಸ್ತಿ ಎಂದು ಬೊಬ್ಬೆ ಹಾಕಿತು.
ಇದ್ದಕ್ಕಿದ್ದಂತೆ ಸಭೆಯಲ್ಲಿ ಎರಡು ಗುಂಪುಗಳಾಗಿ ಇವರ ಮಾತನ್ನು ಅವರು ಕೇಳದಾಗಿ ಅವರ ಮಾತನ್ನು ಇವರು ಕೇಳದಾಗಿ ಎಡ-ಬಲವೆಂದು ವಾದಿಸುವುದು ವಿಪರೀತಕ್ಕೆ ಹೋಗಿ ಸಭಾಧ್ಯಕ್ಷರಾಗಿದ್ದ ನನ್ನ ಚಪ್ಪಲಿಗಳು ಮೆಟ್ಟಿಲಿಂದ ಮೆಟ್ಟಿಲು ಕೆಳಗಿಳಿಯುತ್ತ ಅದ್ಯಾವನೋ ಜನಪ್ರಿಯ ಕಾದಂಬರಿಕಾರ ಬಂದನೆಂದು ಇಡೀ ವಿಚಾರಸಂಕಿರಣದ ಸಾಹಿತಿಮೇರುಗಳು ಅತ್ತ ತಿರುಗುವಷ್ಟರಲ್ಲಿ ನನ್ನ ಚಪ್ಪಲಿಗಳು ತೀರ ಅಂಚಿನಲ್ಲಿ ಅನಾಥವಾಗಿದ್ದವು. ಎಡ-ಬಲ ಅನ್ನೋ ಚಲನೆಯಿಲ್ಲದ ಪಂಥಗಳ ಚಟುವಟಿಕೆ ನನ್ನೊಳಗ ಜಾಗೃತವಾಗಿ ಅದು ಬೆಂಬಿಡದ ಭೂತವಾಗಿ ನನ್ನೊಳಗನ್ನ ಇರಿಯತೊಡಗಿದಾಗ ಇದ್ದೂಇಲ್ಲದಂತೆ ಎದ್ದು ಹೊರವೊಂಟೆ… ಚಪ್ಪಲಿಗಳು ಅನ್ನೋವು ಎಲ್ಲಿದ್ದಾವು ಅಂತ ಹುಡುಕಿದರ ಒಂದು ಇನ್ನೊಂದು ತದ್ವಿರುದ್ಧವಾಗಿ ಒಂದನ್ನೊಂದು ಸೇರದೆ ದೂರಬಿದ್ದಿದ್ದವು. ಅಸ್ತಿತ್ವದಲ್ಲಿರುವ ನಾನು ನನ್ನ ಕಾಲಿಗೆ ಜೋಡಿಸಿಕೊಂಡು ಹಾಂಗೂಹೀಂಗು ಅವುಗಳ ಕಚ್ಚಾಟ, ಬೈಗಳ, ಹಾವುಚೇಳುಗಳ ಎರಚಾಟಗಳನ್ನ ಸಹಿಸಿಕೊಂಡು ಈ ಬದುಕಿನ ಚಲನೆಯನ್ನು ತೂಗಿಸಿಕೊಂಡು ಹೋಗಬೇಕಾದ ದದರ್ು ನನ್ನದಾಗಿತ್ತು.
ಈ ಎಡಬಲಗಳ ಕಿತ್ತಾಟ ತ್ವಾಡೆ ಜಾಸ್ತಿ ಆಗಆಗತಾ ಮುಂದೆ ಯಾವ ತೆರನಾದ ಚಪ್ಪಲಿಗಳನ್ನು ಖರೀದಿ ಮಾಡಬೆಕು ಮತ್ತು ಅವುಗಳ ಬಾಳಿಕೆ ಹೊಂದಾಣಿಕೆಗಳ ಇತ್ಯಾದಿಯಾಗಿ ಅವರಿವರಲ್ಲಿ ವಿಚಾರಿಸತೊಡಗಿದೆ. ಹೋಗಿಬರುವವರ ಕಾಲುಗಳ ಮ್ಯಾಲೂ ಕಣ್ಣಿಟ್ಟು ಯಾವಯಾವ ಕಾಲಿಗೆ ಯಾವ ಬಣ್ಣ ಒಪ್ಪತದ, ಅದರ ಡಿಸೈನ್ ಹೆಂಗೈತಿ, ಅದರ ತಾಳಿಕೆ ಬಾಳಿಕೆ ಹೆಂಗಿರಬಹುದು ಅಂತ ಯೋಚನಾಮಗ್ನನಾಗುವುದು ಹೆಚ್ಚಾಯ್ತು. ಈಚೇಚೆ ಹೆಂಗಸರ ಕಾಲಲ್ಲಿನ ಚಪ್ಪಲಿಗಳನ್ನು ನೋಡುವುದೆ ಚಂದ… ಆ ಸಿಂಡ್ರೇಲಾಳ ಪಡಿಯಚ್ಚು ಚಪ್ಪಲಿಗಳು. ತರಹೇವಾರಿ ವಿನ್ಯಾಸಗಳು ಆ ಹೆಂಗಳೆಯರ ಸುಕೋಮಲ ಮೃದು ಪಾದಂಗನ್ನು ಅಲಂಕರಿಸಿರುವುದನ್ನು ನೋಡಲು ಎರಡುಕಣ್ಣಗಳು ಸಾಲುವುದಿಲ್ಲ.
ಇರಲಿ ಅದೆಲ್ಲ ನಮಗ್ಯಾಕ..?
ನಾ ಸಣ್ಣಾಂವಿದ್ದಾಗ ಇಜ್ಜೋಡೆಂಬ ಕೊಲ್ಲಾಪುರದ ಆರು ಅಟ್ಟಿ ಎತ್ತರದ ಜೋಡುಗಳನ್ನು ಊರೊಳಗ ಯಾವನಾದರೂ ಹಕ್ಕೊಂಡು ಬಂದ್ರ ಇದು ಕುರಗಾರಣ್ಣನದೆ ಎಂಟ್ರಿ ಅನ್ನೋದು ಖಾತ್ರಿಯಾಗತಿತ್ತು. ಒಂದು ಲೆಖ್ಖಕ್ಕ ಈ ಜಿರಕೀ ಚಪ್ಪಲಿಯ ಧರಿಸುವುದರೊಳಗ ಉಸ್ತಾದ, ಪೈಲ್ವಾನ, ಜಮೀನ್ದಾರ, ಗೌಡ, ಕುಲಕಣರ್ಿಯರ ಗತ್ತೂ ಇರುತ್ತಿದ್ದರಿಂದಾಗಿ ಜಿರಕಿ ಮೆಟ್ಟುಗಳನ್ನ ಮೆಟ್ಟೋದು ಒಂದನಮೂನಿ ಫ್ಯಾಷನ್ನ ಆಗಿತ್ತು. ಕಾಲಿನ ಅಳತೆಕೊಟ್ಟು, ಮುಂಗಡ ಅಡ್ವಾನ್ಸ್ನ್ನೂ ಕೊಟ್ಟು ತಮ್ಮ ಕಾಲಿಗೆ ಸರಿಹೊಂದುವಂತ ಚಪ್ಪಲಿಗಳಿಗಾಗಿ ತಿಂಗಳುಗಟ್ಟಲೆ ಕಾದು ಕೊಳ್ಳುವ ಕಾಲವೊಂದಿತ್ತು. ಆಗಿನ ಕಾಲಕ್ಕೆಲ್ಲ ತಿಂಗಳಿಗೊಮ್ಮೆ ಹದವಾಗಿ ಎಣ್ಣಿಉಣಿಸಿ, ನಾಯಿ, ನರಿ, ತೋಳ ಮಳಿ-ಗಾಳಿಗೆ ಸಿಕ್ಕದಂಗ ಕಾಪಾಡೋದರೊಳಗ ಶ್ರದ್ಧೆ ಇರತಿತ್ತು. ದೇವಸ್ಥಾನ, ಜಾತ್ರೆ ಲಗ್ನಗಳಿಗೆಲ್ಲ ಹೋಗುವಾಗ ಮುದ್ದಾಂ ಚಪ್ಪಲಿಯನ್ನ ಕದಿಯುವ ಕಳ್ಳರೂ ಬಂದಿರುತ್ತಾರೆಂಬ ಹೆದರಿಕೆಯೂ ಇರುತ್ತಿತ್ತು. ಖರೇ ಹೇಳಬೇಕಂದ್ರ ಕಳ್ಳರಿಗಿಂತ ನಾಯಿಗಳ ಕಾಟ ಹೆಚ್ಚಿರುತ್ತಿದ್ದರಿಂದಾಗಿ ದೇವರಕಿಂತ ಜಾಸ್ತಿ ಚಪ್ಪಲಿಗಳ ಮ್ಯಾಲ ಧ್ಯಾಸ ಇರುತ್ತಿತ್ತು.
ಈ ಡಾಂಬರೀಕರಣ ಯುಗ ಪ್ರಾರಂಭವಾದ ಮೇಲೆ ದಿನದಿನವೂ ಪಾಲಿಷ್ ಮಾಡಬಹುದಾದ ಕರೀಕಪ್ಪು ಬೂಟುಗಳು, ಹವಾಯಿ, ಬಾಟಾಗಳು ಹೆಚ್ಚೆಚ್ಚು ಬಳಕೆಗೆ ಬಂದವು.
ಬಿಳಿಅಂಗಿ ಬಿಳಿಧೋತ್ರ ತಲಿಮ್ಯಾಲ ಟೊಪಿಗಿ ಹೆಗಲಮ್ಯಾಲ ಟವೆಲ್ಲು ಹಾಕಿದ ಮಾತ್ರಕ್ಕ ಅಂವ ತಯಾರಾಗಿ ಹೊರಟೇಬಿಟ್ಟ ಅಂದ್ಕೊಳ್ತಿರಲಿಲ್ಲ. ಅಂವ ಹೊರಡೋದರ ಸೂಚನೆ ಕೆಲವೊಂದಸಲ ಎಕ್ಕಡಗಳ ಮೂಲಕವೂ ಆಗುತ್ತದೆ.
ಆ ನಮೂನಿಯ ಸ್ಟಂಟಗಳು ಯಾವತ್ತು ಪ್ಯಾರಾಗನ್, ಲುನಾರ್ ಕಂಪನಿಯ ಎರಡಬಾರಿನ ಚಪ್ಪಲಿಗಳು ಬಂದುವೋ ಅವತ್ತಿನಿಂದ ನಿಧನಿಧಾನಕ್ ಕಮ್ಮಿಯಾಗತ ಬಂದು ಇವತ್ತಿನ ಕಾಲಕ್ಕ ಜಿರಕಿ ಚಪ್ಪಲಿಯ ಟಿಆರ್ಪಿ ಪೂತರ್ಿ ಬಿದ್ದು ಹೋಗಿದೆ ಅನ್ನಬಹುದು. ಆಮ್ಯಾಲ ಅವರೂ ತಮ್ಮ ಚಪ್ಪಲಿ ವಿನ್ಯಾಸದಾಗ ತ್ವಾಡೆ ಸರ್ಕಸ್ ಮಾಡಿ ಆರು ಬಾರ್ ಇದ್ದುದನ್ನ ನಾಲಕುಬಾರಿಗೆ ಇಳಿಸಿ ಅದು ವಕರ್ೌಟ್ ಆಗದಿದ್ದಾಗ ಸುಪ್ರಸಿದ್ಧ ಎರಡಟ್ಟಿ ಚಪ್ಪಲಿಗಳಲ್ಲೇ ಜಿರಕಿ ನಿನಾದ ಹುಟ್ಟಿಸೋ ಚಪ್ಪಲಿಗಳನ್ನೂ ಮಾಡಿದರು. ಥೇಟ್ ರಾಜಮಹಾರಾಜರ ಠೀವಿ ಬರಲಿ ಅನ್ನೋಕಾರಣಕ್ಕ ಬಿಸಿಲಿಗೆ ನಯಸಾಗಿ ಒಗ್ಗುತ್ತಿದ್ದ ಚಪ್ಪಲಿಯ ಎದಿಮ್ಯಾಲ – ಕೃಷ್ಣನಿಗೆ ಗರಿಸಿಕ್ಕಿಸಿದ ರೀತಿಯೊಳಗ ಅವಕ್ಕೂ ಕೆಂಪುಗೊಂಡೆಯ ಗುಚ್ಚ ಕಟ್ಟ್ಟಿದರು. ನಾಗ್ಪುರ, ಕೊಲ್ಲಾಪುರ, ಜತ್ತ, ಸಾಂಗ್ಲಿ, ರಾಮದುರ್ಗ, ಮುಧೋಳ ನಿಪ್ಪಾಣಿಯ ಚಪ್ಪಲಿಗಳಲ್ಲಿ ಈ ಗುಚ್ಚು ನಾನಾ ಥರವಾಗಿ ಇರುವುದು. ಹೆಬ್ಬೆರಳ ಸಂದಿಯಿಂದ ಪಾದದ ಮ್ಯಾಲಿನ ನಾಲ್ಕಿಂಚಿನ ಪಟ್ಟಿಗೆ ಬಂದಿರುವಂಥ ಮುಖ್ಯ ಮೂಲಾಧಾರದ ದಾರದ ತುದಿಗೆ ಕಸಿಕಟ್ಟುವ ರೀತಿಯೊಳಗೂ ವ್ಯತ್ಯಾಸ ಐತಿ. ಬಂಧುರ ಹುರಿಗೊಳಿಸಿ ಹೆಣ್ಮಕ್ಕಳ ಜಡಿ ಹೆಣೆದಂಗ ಈ ದಾರವನ್ನ ನೆಯ್ಗೆಮಾಡಿರುವಂತದ್ದು ಕೊಲ್ಲಾಪುರದ್ದಾದರ ಇನ್ನು ಗುಚ್ಚಿನೊಳಗ ಗರಿಗರಿ ಮಿಂಚಹಾಕಿರುವಂಥದ್ದು ನಾಗಪುರದ್ದು. ಸಾಂಗ್ಲಿ, ಜತ್ತ ಚಪ್ಪಲಿಗಳಿಗೆ ಜಡೆಯಂಥ ಹೆಣಿಗೆ ಇರುವುದಿಲ್ಲವಾದರೂ ಚಂದಕ್ಕೊಂದು ಕೆಂಪುಬಣ್ಣದ ಗೊಂಡೆ ಕಟ್ಟಿರುತ್ತಾರೆ.
ಟ್ರ್ಯಾಕ್ಟರ್ ಟಯರ್ನ್ಯಾಗ ಮಾಡಿಕೊಡತಿದ್ದ ಹತ್ತರೂಪಾಯಿಗೆ ಜೋಡ ಚಪ್ಪಲಿಗಳ ಡಿಮ್ಯಾಂಡು ತೀರ ಕೆಳಮಟ್ಟದ್ದು ಅನ್ನೋ ರೀತಿಯೊಳಗ ನೋಡಲಿಕ್ಕ ಶುರುಮಾಡಿದಂತೆಲ್ಲ… ಚಪ್ಪಲಿ ತೊಡೋದರೊಳಗೂ ಗರ್ವ ಅನ್ನೋದು ಹುಟ್ಟಿಕೊಳ್ತು. ನಮ್ಮಪ್ಪ ನಮಗಾಗಿ ತಂದುಕೊಡುತ್ತಿದ್ದ ಟಯರ್ ಚಪ್ಪಲಿಗಳ ಜಾಗದಲ್ಲಿ ಲಟಕ್-ಪಟಕ್ ಅಂತ ವಿಚಿತ್ರವಾಘಿ ಹೆಜ್ಜೆಗಳಿಗೊಂದು ಸೌಂಡ್ ಕೊಡುವ ಪ್ಯಾರಾಗಾನಗ ಚಪ್ಪಲಿಗಳು ಬಂದವು. ತುಸು ದಿವಸಕ್ಕ ಆ ಚಪ್ಪಲಿಗಳ ತಳ ಸವೆದು ಉಂಗುಟಗಳು ಕಿತ್ತುಕೊಲ್ಳುವುದೂ ಪಿನ್ನೋ, ದಾರಾನೋ ಗಂಟ ಹಾಕಿ ಮುಂದಿನ ಮಂಗಳವಾರದ ಸಂತಿ ಬರೋತನಕ ಜ್ವಾಪಾನ ಮಾಡೋದು ನಡೆದಿರತಿತ್ತು. ಮಳೆಗಾಲಕ್ಕಂತೂ ಲಟಕ್-ಪಟಕ್ನೊಂದಿಗೆ ಚಪ್ಪಲಿಗಂಟಿದ ರಾಡಿಯೂ ಸಿಡಿದು ಹಿಂದಿನ ಭಾಗವೆಲ್ಲ ಕೆಸರಾಗುವುದು ರೊಚ್ಚೆನಿಸುತ್ತಿತ್ತು. ಈ ಕಾರಣದಿಂದಾಗಿ ಅಪ್ಪನ ಕುಶಲೀ ವ್ಯವಹಾರದ ಒಂದು ಭಾಗವನ್ನು ಕಿತ್ತುಕೊಂಡು ‘ಅಪ್ಪಾ ನೀ ನನಗ ಚಪ್ಪಲಿ ತರೋದು ಬ್ಯಾಡ, ನನ್ನ ಚಪ್ಪಲ್ ನಾನ ತಗೊಳ್ತೀನಿ’ ಅಂತ ಹೇಳಿಬಿಟ್ಟೆ. ಅಪ್ಪನ ವ್ಯವಹಾರವೆಂದರೆ ಪಕ್ಕಾ ಲೋಕಲ್. ಚಪ್ಪಲಿಯ ಉಂಗುಟನ್ನ ಎರಡೆರಡ ಸಲ ಜಗ್ಗಿ ನೋಡಿ, ಅದರ ಅಟ್ಟಿಯ ಅಂಟುವಾಳ ಗಟ್ಟಿ ಇಲ್ಲವೋ ಅನ್ನೋದನ್ನ ಪರೀಕ್ಷಿಸಿಲು ಅತ್ತಿತ್ತ ಮುರಿದಾಡಿ, ರೇಟಿನಲ್ಲೂ ವ್ಯವಹಾರ ಮಾತಾಡಿ ಎಷ್ಟು ಸಾಧ್ಯವೋ ಅಷ್ಟು ಕಮ್ಮಿ ಮಾಡಿಕೊಂಡು ತರುತ್ತಿದ್ದ ಒಂದು ಪರಂಪರೆಯನ್ನು ನಾನು ಮೊದಲ ಸಲ ಬ್ರೇಕ್ ಮಾಡಿ… ಅಂಗಡಿಯವರು ಹೇಳಿದಷ್ಟನ್ನು ಕೊಟ್ಟು, ನಯಸಾದ ಚಪ್ಪಲಿಗಳನ್ನು ತಂದುಕೊಳ್ಳಲು ಶುರುಮಾಡಿದೆ. ನನ್ನ ಆಯ್ಕೆಗೆ ಅಪ್ಪ ಎಂದು ಸಮ್ಮತಿಸಲಿಲ್ಲ. ಏನಾದರೊಂದು ಕೊಂಕುತನ ಹೇಳಿಯೇ ಹೇಳುತ್ತಿದ್ದ.
ಅಪ್ಪ ಮೊನ್ನೆ ಧಾರವಾಡಕ್ಕ ಬರುವಾಗ ‘ನನಗೊಂದು ಜತಿ ಚಪ್ಪಲಿ ತಂದುಕೊಡು’ ಅಂತ ಕೇಳಿದೆ. ಅಪ್ಪನ ಪಾದದ ಅಳತೆಯೂ ನನ್ನದೂ ಒಂದೆ ಆದ್ದರಿಂದ ಆಯ್ತು ಎಂದಷ್ಟೆ ಹೇಳಿದ. ಅವನು ಬರುವುದನ್ನೆ ಕಾದು ನಾನು ಬೇರೆ ಚಪ್ಪಲಿ ತೆಗೆದುಕೊಳ್ಳದೆ ಹಾಗೆ ಹಳೆಯ ಚಪ್ಪಲಿಯಲ್ಲೆ ಸಾಗಹಾಕುತ್ತಿದ್ದೆ. ಎಡ-ಬಲವೆಂದು ಕ್ಯಾತೆ ತೆಗದಿದ್ದ ಚಪ್ಪಲಿಗಳನ್ನು ಮೂಲೆಗೆ ಎಸೆದು ಹೊಸದನ್ನು ಧರಿಸುವ ವರ್ತಮಾಣದ ಸೋಗಿನ ಹಂಬಲವೂ ಇತ್ತು. ಅಪ್ಪ ಬಂದಾಗ ಬಾಗಿಲಹೊರಗಡೆಯೇ ಚಪ್ಪಲಿಯ ಹೊಸಪೊಟ್ಟಣವನ್ನಿಟ್ಟ. ಅತ್ತೊಂದು ಮುಖ ಇತ್ತೊಂದು ಮುಖ ಮಾಡಿಕೊಂಡು ವ್ಯಂಗ್ಯವಾಡುತ್ತಿದ್ದ ಎಡ-ಬಲ ಕ್ರಾಂತಿಕಾರಿ ಚಪ್ಪಲಿಗಳು ಮುಸಿಮುಸಿ ನಗುತ್ತಿದ್ದವು. ವಾಸನೆಯಿಂದಲೇ ಚಪ್ಪಲಿಯ ಕ್ವಾಲಿಟಿ ತಿಳಿದಿದ್ದವೇನೋ…! ಪೊಟ್ಟಣದಲ್ಲಿ ಅದೆ ಆ ಹಳೆಯ ಮಾದರಿಯ ನಾಲ್ಕಟ್ಟಿಯ ರಾಮದುರ್ಗ ಚಪ್ಪಲಿಗಳಿದ್ದವು.
ಮ್ಯಾಚಿಂಗ್ ಯುಗದಲ್ಲಿ ಅಂಗಡಿಮುಂಗಟ್ಟುಗಳನ್ನು ತುಂಬಿಕೊಂಡಿರುವ ಸೌಂದರ್ಯ ವರ್ಧಕ ವಸ್ತುಗಳೇ ಹೆಚ್ಚಿರುವಾಗ ನಾನು ನಾಲ್ಕಟ್ಟಿಯ ಮೆಟ್ಟುಗಳನ್ನು ಮೆಟ್ಟಿಕೊಂಡು ಓಡಾಡುವುದು ಮುಜುಗರವೆನಿಸಿತು. ಅವುಗಳ ಹಿಂಬಡಿಯ ಗಾತ್ರ, ಉಂಗುಟದ ನೆತ್ತಿಯ ಮೊನೆ, ಚರ್ಮದ ಎಳೆಗಳಲ್ಲಿ ನೆಯ್ದ ಜಡೆ ಒಂದೊಂದನ್ನು ನೋಡಿ ನನ್ನ ಎಡ-ಬಲ ಸಿದ್ಧಾಂತ ಚಪ್ಪಲಿಗಳು ಗಹಗಹಿಸಿ ನಗುತ್ತಿದ್ದವು. ನಾನು ಮಾತ್ರ ಗಾಣದೆತ್ತಿನಂತೆ ಕಣ್ಣಿಗೆ ಪಟ್ಟಿಕೊಂಡು ದುಡಿಯಲು ಸಿದ್ಧವಾಗಿ ಬಂದಿರುವ ಈ ಚಪ್ಪಲಿಗಳಿಗೆ ಮ್ಯಾಚ್ ಆಗುವಂತೆ ನನ್ನ ದಿರಿಸನ್ನೂ ಬದಲಿಸಿಕೊಂಡೆ…

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s