ಎದೆಗೆ ಬಿದ್ದ ಅಕ್ಷರ – ಅರಿವು ಅಂತಾರಲ್ಲ ಅದರ ಬಗ್ಯ…


ಇಂದು ಅನ್ನುವ ವಾಸ್ತವದಲ್ಲಿ… ನೆನ್ನೆಯ ನೆನಪುಗಳನ್ನು ಮೆಲಕು ಹಾಕಿಕೊಳ್ಳುತ್ತ… ನಾಳೆಗಳನ್ನು ಸಮಾನತೆಯ ನೆಲೆಯಲ್ಲಿ ಕಾಣಲಿಚ್ಛಿಸುವ ಅಂತಿಮದ ಅರಿವು ಎದೆಗೆ ಬಿದ್ದ ಅಕ್ಷರ ಕೃತಿಯ ಪ್ರತಿಯೊಂದು ಲೇಖನದ ಪ್ರತಿಯೊಂದು ಸಾಲಿನಲ್ಲಿ, ಒಂದೊಂದು ಶಬ್ದದಲ್ಲೂ ಅನುರಣಿಸುತ್ತದೆ. ವಿರಾಮವಿಲ್ಲದ ಬರಹಗಳ ಆಂತರ್ಯದಲ್ಲಿ ಸೌಜನ್ಯದ ಕಾರುಣ್ಯಮೂರ್ತಿ ಕಾಣುತ್ತಾನೆ. ಆತ ಬುದ್ಧ ಬಸವ ಅಂಬೇಡ್ಕರ್ ಗಾಂಧಿಯ ಹಾಗೆ ಗೋಚರಿಸುತ್ತಾನೆ.
ಯಾವ ಬರಹವೂ ಆಕಸ್ಮಿಕವಾಗಿ ಹುಟ್ಟಿದ್ದಲ್ಲ, ಕೆಲವು ಭಾಷಣಗಳು, ಬರಹಗಳು ಯಾವದೋ ಸಂದರ್ಭ, ಸಂಘಟಣೆ, ಸಂಚಲನಗಳಿಗೆ ಪ್ರತಿಕ್ರಿಯೆಯಾಗಿ ಆ ಕ್ಷಣಕ್ಕೆ ಒಡಮೂಡಿದ್ದರೂ ಆ ಮಾತುಗಳ ಹಿಂದಿನ ಅರಿವು ಬಹಳ ಸ್ಪಷ್ಟವಾಗಿದೆ. “ಸಾಮಾಜಿಕ ಸಂಘಟಣೆ ಎಂದರೆ ಅಸ್ತಿತ್ವದ ಅಂತಿಮ ಸ್ಥಿತಿಯ ಅರಿವನ್ನು ಹೊಂದುವುದು” ಅಂತ ಪ್ಲೇಟೋ ಹೇಳುತ್ತಾನಲ್ಲ… ಅದು ದೇವನೂರು ಮಹಾದೇವ ಅವರ ಮಾತಿನ ಧಾಟಿಯಲ್ಲಿ ಒಂದು ಸಮೂಹದ ಅಂತಃಸಾಕ್ಷಿಯೇ ಮಾತನಾಡುತ್ತಿದೆ ಎಂಬಂತೆ ಚಿತ್ರಿತಗೊಳ್ಳುತ್ತದೆ.
ಸಹಪ್ರಯಾಣಿಕನಾಗಿ ಕುಳಿತವ ಬಸ್ಸು-ರೈಲಿನಿಂದ ಇಳಿಯುತ್ತಲೆ ತನ್ನ ಹಳೆ ಸಂಪ್ರದಾಯದ ದಾರಿಯಲ್ಲಿಯೇ ನಡೆಯಲು ಇಚ್ಚಿಸುವ ಹೊಸಪರಂಪರೆಯ ಹೊಸತಲೆಮಾರಿನ ಗುಂಪುಗಳು ಚಿಂತನೆಗೊಂದು ದಿಕ್ಕಿಲ್ಲದಂತೆ ದುಂಡಾವರ್ತಿಸುತ್ತಿವೆ. ಮೌಲ್ಯಗಳನ್ನು ಮರುಸಂಶೋಧಿಸುವ ಈ ವಕ್ತಾರರಿಗೆ ಸಂವಿಧಾನ ನಮ್ಮ ದೇಶದ ಧರ್ಮ ಎಂಬುದನ್ನು ತಿಳಿಸಬೇಕಾಗಿದೆ. ಯಾವ ಬೆಳಕಿನ ಕಿರಣವೂ ತಾಗದ ಮಡಿವಂತರ ಅಂತರಂಗದ ಕತ್ತಲನ್ನು ಗುಡಿಸಿ ಹೊಸತೊಂದು ಸರ್ವೋದಯ ಕರ್ನಾಟಕ ಕಟ್ಟಬೇಕಿರುವ ಎಚ್ಚರದ ರೂಪಕದಂತೆ ಈ ನಾಲ್ಕುದಶಕದ ಬರಹಗಳು ಇವೆ. ಸಾಮಾಜಿಕ ಸಂಘಟನೆಗಳಿಗೆ ಅಂತಿಮ ಅರಿವಿನ ಪ್ರಜ್ಞೆ ಮೂಡಿಸುವ ಕೆಲಸವನ್ನು ಇಲ್ಲಿನ ಬರಹಗಳು ಯಾವಕಾಲಕ್ಕೂ ಮಾಡುತ್ತವೆ.
ಕಾವ್ಯದ ಬಂಧದಲ್ಲಿ ಭಾವದ ಲಯವಿದ್ದರೆ ಸಾಕು ಹಾಡಾಗುತ್ತದೆ, ತಾಳ ಸಿಕ್ಕುತ್ತದೆ, ರಾಗವಾಗಿ ಸರಾಗ ಹಾಡು ಬಾಯಿಗೆ ಬಂದುಬಿಡುತ್ತದೆ. ದೇಶಿಮಟ್ಟುಗಳಿಗೆ ಅಂಥ ಗುಣವಿರುವ ಕಾರಣಕ್ಕೆ ಅವು ನಾಲಗೆಯ ಮೇಲೆ ನೆಲೆನಿಂತುಬಿಡುತ್ತವೆ. ಬಾಯಿಂದ ಬಾಯಿಗೆ, ತಲೆಮಾರಿನಿಂದ ತಲೆಮಾರಿಗೆ ಅಂತಹ ಕತೆಗಳು ಕಾವ್ಯಗಳು ಸಂಚರಿಸುತ್ತ ಬದುಕಿಕೊಡಿರುತ್ತವೆ. ನೆನಪಿನ ದೆಸೆಯಿಂದ ಯಾವದೋ ಸಾಲಿನ ಯಾವದೋ ಅಕ್ಷರ ಅಥವಾ ಶಬುದ ಮರೆತುಕೊಂಡ ಮುಂದಿನ ತಲೆಮಾರು ಬೇರೊಂದು ಅಕ್ಷರಗಳನ್ನೋ, ಭಾವಕ್ಕೆ ಸರಿಹೊಂದುವ ಶಬುದವನ್ನೋ ಹಾಕಿಕೊಂಡು ಹಾಡಿದರೂ ಹೊಸದೊಂದು ಅರ್ಥವೇನೂ ಹುಟ್ಟಲಿಕ್ಕಿಲ್ಲ. ಆದರೆ ಆ ಹಾಡಿನ ಭಾವಕ್ಕೆ ಮತ್ತೊಂದು ಆಯಾಮವಂತೂ ಖಂಡಿತ ಸಿಕ್ಕುತ್ತದೆ. ಅದೇ ಅರ್ಥದಲ್ಲಿ ಎದೆಗೆ ಬಿದ್ದ ಅಕ್ಷರ ಹೊತ್ತುಗೆಯನ್ನು ಎದೆಗೆ ಒದ್ದ ಅಕ್ಷರ, ತಲೆಗೆ ಬಿದ್ದ ಅಕ್ಷರ ಎಂದು ಓದಿಕೊಂಡಾಗಲೂ ಫಲ ಕೊಡುವುದು ಕೊಟ್ಟೆಕೊಡುತ್ತದೆ. ಸಮಾನತೆ, ಸ್ವಾತಂತ್ರ್ಯ, ಸೋದರತೆಯ ಬೆಳಕನ್ನು ಅರಸುವ ಜೀವಗಳು ಎದೆಗೆ ಬಿದ್ದ ಅಕ್ಷರ ಪುಸ್ತಕವನ್ನು ಮುಂದಿನ ತಲೆಮಾರಿಗೆ ಅಸ್ಮಿತೆಯ ಭಾಗವಾಗಿಯೇ ದಾಟಿಸುತ್ತವೆ.
ಹಣ್ಣಾಗುತ್ತಲೇ ಕೊಂಬೆ ಬಾಗುತ್ತದೆ. ಭೂಮಿಗೆ ಹತ್ತಿರವಾಗುತ್ತದೆ. ನೆಲಕ್ಕೆ ಬಿದ್ದು ಬೀಜ ಚಿಗುರಾಗಿ ಚಿಗಿಯುತ್ತದೆ. ಆ ಹೊಸದಾಗಿ ಚಿಗಿತ ಗಿಡದ ಹಣ್ಣಿನ ರುಚಿ ಉಂಡವನಂತೆ ಓದಿದೆ. ತಿಂದ ಹಣ್ಣು ಮಾಗಿತ್ತು, ಪರಿಮಳವೂ ಇತ್ತು… ಆದರೆ ಎಷ್ಟು ಅಗಿದು ತಿನ್ನುತ್ತೇನೋ ಅಷ್ಟು ಒಗರಾಗಿತ್ತು. ಇಥಿಯೋಪಿಯಾದ ಮಕ್ಕಳಂತೆ ನಾನು ಕ್ಷೀಣ ಸ್ವರದಲ್ಲಿ ಒರಲುತ್ತಿದ್ದೇನೆ ಅನ್ನಿಸುತ್ತಿತ್ತು. ನಿರುತ್ತರದಲಿ ಕೈಚಲ್ಲಿ ಕುಳಿತ ರೈತನ ಸ್ಥಿತಿ, ಬೌಧ್ಧಿಕ – ಸೈದ್ಧಾಂತಿಕ ತಿಳುವಳಿಕೆಯ ಆರ್ಭಟ, ಮೂಲ ಕೆದಕುವ ಡಿ.ಎನ್.ಎ ಮಾಪಕದಲ್ಲಿ ಹೂತಿರಬಹುದಾದ ಕಾಲನ ಕುರುಹಗಳ ಹುಡುಕಾಟ, ಯಾಕೆ ಚಳುವಳಿಗಳು ಸೋಲುತ್ತಿವೆ ಎಂಬುದು ಪ್ರಶ್ನೆ..? ಉತ್ತರಕ್ಕಾಗಿ ಹಂಬಲಿಸುವ ಮೊದಲು ಎದೆಗೆ ಬಿದ್ದ ಅಕ್ಷರ ತಿಕದ ಮೇಲೆ ಒದ್ದಿತ್ತು.
ದೇವನೂರರ ಭಾಷೆಯಲ್ಲಿಯೇ ಹೇಳಬಹುದಾದರೆ ಎದೆಗೆ ಬಿದ್ದ ಅಕ್ಷರದ ಕೆಲವು ಲೇಖನಗಳು ನನ್ನ ಮನಸ್ಸಿನ ತಳದ ಕೊನೆಯ ಪದರದವರೆಗೂ ಮುಟ್ಟಿ ಗಾಯಮಾಡಿ ನಿದ್ದೆಯಲ್ಲೂ ನರಳಾಡಿಸಿದವು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s