“ಹುಲಿಯ ನೆರಳಿನೊಳಗೆ – ಅಂಬೇಡ್ಕರವಾದಿಯ ಆತ್ಮಕಥೆ” ಒಂದು ಟಿಪ್ಪಣಿ


ಉಚಲ್ಯಾ, ಅಕ್ರಮಸಂತಾನ, ಗಬಾಳ, ಬಹಿಷ್ಕೃತ, ವಾಲ್ಮೀಕಿ, ಬಲುತ, ನೋವು ತುಂಬಿದ ಬದುಕು ಹೀಗೆ ಮರಾಠಿಯಿಂದ ಅನುವಾದಗೊಂಡ ಹಾಗೂ ಕನ್ನಡದಲ್ಲಿ ಪ್ರಕಟವಾದ ದಲಿತ ಆತ್ಮಕತೆಗಳ ಬಾಲ್ಯ ಮತ್ತು ಬದುಕಿನ ಚಿತ್ರಣಗಳು ವಿಭಿನ್ನ ಅನುಭವ ಜಗತ್ತನ್ನು ನಿರ್ಮಿಸಿಕೊಟ್ಟಿವೆ. ಪ್ರತಿಯೊಬ್ಬರ ಬಾಲ್ಯವೂ ಅಸಮಾನ ಭಾರತದ ಚರಿತ್ರೆಯನ್ನು ಹೇಳುತ್ತದೆ. ಕುಲಮೂಲದ ಕಸುಬುಗಳು, ಕಸುಬಿನ ದಾರುಣ ಚಿತ್ರಣ, ಹುಟ್ಟಿನಿಂದ ಗುರುತಿಸಲ್ಪಡುವ ಜಾತಿಯೂ, ಆಯಾ ಪರಿಸರಕ್ಕೆ ಸಂಬಂಧಪಟ್ಟ ಆಚರಣೆಗಳು, ಬಂಧು-ಬಾಂಧವರ ಸಂಬಂಧಗಳು, ಬಡತನ, ಹಸಿವು, ಶೋಷಣೆ, ಕಲಿಕೆಗಾಗಿ ಪರಿತಪಿಸುವ ರೀತಿಯೂ, ಆಧುನಿಕ ಶಿಕ್ಷಣವ್ಯವಸ್ಥೆಯಲ್ಲಿನ ಶಾಲಾ ಆವರಣದಲ್ಲಿ ಆಚರಿಸಲ್ಪಡುವ ಅಸ್ಪೃಶ್ಯತೆಯೂ ಹೀಗೆ ಭೀಕರವಾದ ತಾರತಮ್ಯದ ಜಗತ್ತನ್ನು ದಲಿತ ಆತ್ಮಕತೆಗಳಲ್ಲಿ ಕಾಣುತ್ತೇವೆ. ಮೇಲ್ನೋಟಕ್ಕೆ ಎಲ್ಲ ಆತ್ಮಕತೆಗಳ ಬಾಲ್ಯವು ಒಂದೆ ಪಡಿಯಚ್ಚಿನಲ್ಲಿ ಎರಕಹೊಯ್ದಂತೆ ಭಾಸವಾದರೂ ಕಟ್ಟಿಕೊಡುವ ಪರಿಸರದ ನಿವೇದನೆ ಅಸ್ಪೃಶ್ಯ ಭಾರತದ ಒಂದೊಂದು ಮಗ್ಗಲುಗಳನ್ನು ಶೋಧಿಸುತ್ತವೆ. ಸಾಂಪ್ರದಾಯಿಕ ಪ್ರಜಾಪ್ರಭುತ್ವವು ಹಳ್ಳಿಗಳಲ್ಲಿತ್ತು. ಅದೇ ಆಶಯದಲ್ಲಿ ಸಂವಿಧಾನವೂ ರಚನೆಯಾಗಬೇಕಿತ್ತು ಎಂದು ಹಂಬಲಿಸುವವರು ದಲಿತ ಅಸ್ಮಿತೆಯ ಈ ಬಾಲ್ಯದ ಕುರುಹುಗಳನ್ನು ಕೊಂಚ ಗಮನಿಸಬೇಕು.
ಈ ದೇಶದಲ್ಲಿ ಪವಿತ್ರವಾದದ್ದು ಒಂದೇ, ಅದು ಸಂವಿಧಾನ ಎಂಬುದನ್ನು ಪ್ರತಿಯೊಬ್ಬ ನಾಗರಿಕ ಅರ್ಥಮಾಡಿಕೊಳ್ಳುತ್ತಾನೆ ಎಂದಾದರೆ ಅವನಿಗೆ ಅಂಬೇಡ್ಕರ್ ಅವರು ಯಾವದೋ ಒಂದು ಜಾತಿಗೆ ಸೀಮಿತವಾದ ವ್ಯಕ್ತಿಯಲ್ಲ, ಅವರು ಆಧುನಿಕ ಭಾರತದ ನಿರ್ಮಾತೃ, ಅಪ್ರತಿಮ ದೇಶಪ್ರೇಮಿ, ಪಾರಂಪರಿಕವಾಗಿ ಅಸ್ತಿತ್ವದಲ್ಲಿದ್ದ ಸಂವಿಧಾನವನ್ನು ಭಂಜಿಸಿ ಭಾರತದ ಪ್ರತಿಯೊಬ್ಬ ನಾಗರೀಕನಿಗೂ ಸಂವಿಧಾನದ ಮೂಲಕ ಹೊಸಗುರುತನ್ನು ನೀಡಿದ ಮಹಾತ್ಮ ಎಂಬುದನ್ನು ಮಣಗಾನುತ್ತಾನೆ. (ಆಗ ಮನೆಯೊಳಗೆ ತೂಗುಹಾಕಿರುವ ಅಂಬೇಡ್ಕರ್ ಅವರ ಫೋಟೋ ನೋಡಿ ನೀವು ಅವರಾ..? ಎನ್ನುವ ಹೊಸ ಐಡೆಂಟಿಟಿಯ ವಿಧಾನ ಇಲ್ಲವಾಗಬಹುದು.) ಆ ಹುಲಿಯ ಹೆಜ್ಜೆಗುರುತುಗಳನ್ನು ಇವತ್ತಿನ ಈ ಜಾತಿಸಂಘಟಣೆಯ ಜಂಝಾವಾತಗಳ ನಡುವೆ ಮತ್ತೆಮತ್ತೆ ಕೆದಕಬೇಕಿದೆ, ಅವರ ಆಲೋಚನೆಗಳನ್ನು ಈ ಹೊತ್ತಿಗೆ ತಕ್ಕಂತೆ ವಿಮರ್ಶಿಸಿ, ಆ ಅಧ್ಯಯನದ ಶಿಸ್ತನ್ನು, ಆ ನ್ಯಾಯನಿಷ್ಠುರ ವ್ಯಕ್ತಿತ್ವವನ್ನು ಹೆಚ್ಚು ಅರಿತುಕೊಳ್ಳುವ ಅಗತ್ಯವಿದೆ. ಈ ಅರಿವಿನಲ್ಲಿ ಭಾರತದ ಹೊಸ ಚಲನೆಯ ಆರಂಭವಾಗಿರುವುದರಿಂದ ಅಂಬೇಡ್ಕರ್ ಅವರ ಬದುಕು ಬರಹ ಭಾಷಣಗಳನ್ನು ನಾವು ಮತ್ತೆಮತ್ತೆ ಓದಿಕೊಳ್ಳುತ್ತಲೇ ಇರಬೇಕಾಗುತ್ತದೆ.
ಕೃಷಿವಿಜ್ಞಾನಿಯಾದ ನಾಮದೇವ ನಿಮ್ಗಾಡೆಯವರ ‘ಹುಲಿಯ ನೆರಳಿನೊಳಗೆ ಅಂಬೇಡ್ಕರವಾದಿಯ ಆತ್ಮಕಥೆ’ಯನ್ನು ಕನ್ನಡಕ್ಕೆ ಬಿ. ಶ್ರೀಪಾದರವರ ಭಾವಾನುವಾದ ಮಾಡಿದ್ದಾರೆ. ಈ ಪುಸ್ತಕವನ್ನು ಲಡಾಯಿ ಪ್ರಕಾಶನ ಪ್ರಕಟಿಸಿದೆ. ಭಾರತದ ಕ್ರಾಂತಿಸೂರ್ಯರ ಬದುಕು ಮತ್ತು ಹೋರಾಟದ ಕುರಿತಾದ ಟಿಪ್ಪಣಿಗಳಿರುವುದರಿಂದ ಈ ಹೊತ್ತುಗೆ ಉಳಿದೆಲ್ಲ ಆತ್ಮಕತೆಗಳಿಗಿಂತ ಭಿನ್ನವಾಗಿದೆ.
ಅಂಬೇಡ್ಕರರ ನಂತರ ಅಮೆರಿಕಾದ ವಿಶ್ವವಿದ್ಯಾಲಯದಲ್ಲಿ ಪಿ ಎಚ್ ಡಿ ಪಡೆದ ಎರಡನೇ ದಲಿತವ್ಯಕ್ತಿ ಎಂದೇ ಹೆಸರಾಗಿರುವ ಇವರ ಬದುಕಿನಲ್ಲೂ ಅಸ್ಪೃಶ್ಯ ಭಾರತದ ಅನುಭವಗಳೇ ತುಂಬಿದ್ದಾವೆ. ಆ ಎಲ್ಲ ಅಪಮಾನ, ನಿಂದೆ, ಬಡತನ, ಅಸಹಾಯಕತೆಗಳನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳುವ ಛಲದ ಹುಲಿಯ ಹೆಜ್ಜೆಜಾಡಿನಲ್ಲಿ ನಡೆಯುವ ನಿಮ್ಗಾಡೆಯವರ ಬದುಕು ಮತ್ತು ಹೋರಾಟದ ಭಾವಜಗತ್ತು ಸ್ವವಿಮರ್ಶಾ ಧಾಟಿಯಲ್ಲಿರುವುದರಿಂದ ತುಂಬ ಆಪ್ತವಾಗುತ್ತದೆ.
ಆತ್ಮಕತೆಯ ಮೊದಲ ಅಧ್ಯಾಯದ ಕೊನೆಯಭಾಗದಲ್ಲಿ ಅವರ ತಂದೆ ಹೇಳಿಬರೆಯಿಸಿದ ಭಾಷಣದಲ್ಲಿ ಭೀಮರಾವ ಅಂಬೇಡ್ಕರ್ ಅವರ ಹೆಸರನ್ನು ಕೇಳಿ ಪುಳಕಿತರಾಗುವ ನಿಮ್ಗಾಡೆಯವರ ಆತ್ಮಕತೆಯುದ್ದಕ್ಕೂ ಬಾಬಾಸಾಹೇಬರ ಛಲದ, ಆತ್ಮವಿಶ್ವಾಸದ, ಅಧ್ಯಯನ ಶಿಸ್ತಿನ, ಹೋರಾಟ ರೂಪಿಸಿದ ರೀತಿಗಳೆಲ್ಲವೂ ಪ್ರಭಾವೀಕರಿಸಿರುವುದನ್ನ ಚಿತ್ರಿಸಿದ್ದಾರೆ. ತೀರ ಖಾಸಗಿಯಾಗಿ ಅವರೊಂದಿಗೆ ಒಡನಾಡಿದ ಕ್ಷಣಗಳಂತೂ ನಾಮದೇವ ನಿಮ್ಗಾಡೆಯವರನ್ನು ರೂಪಿಸಿದ್ದಾವೆ. ನೆಹರೂ ಅವರನ್ನು ತರುಬಿ ಕೇಳುವ ಪ್ರಶ್ನೆ, ಗಾಂಧೀಜಿಯವರ ಅಸ್ಪೃಶ್ಯತೆ ನಿವಾರಣೆ ನಡೆಯ ನಡುವಿನ ಭಿನ್ನತೆಯನ್ನ ವಿವರಿಸುವ ಬಗೆ, ಹಾಗೂ ಮಾರ್ಟಿನ್ ಲೂಥರ ಕಿಂಗ ಅವರೊಂದಿಗಿನ ಸಂವಾದದಲ್ಲಿ ಭಾರತದಲ್ಲಿ ಆಚರಣೆಯಲ್ಲಿರುವ ಅಸ್ಪೃಶ್ಯತೆಯ ವಾಸ್ತವವನ್ನೂ ಆವೇಶಭರಿತರಾಗಿ ನಿರರ್ಗಳ ಮಾತಾಡುವ ಉಮೇದು,,,, ಈ ಎಲ್ಲದರ ಹಿಂದೆ ಆಳವಾದ ಸುಪ್ತಪ್ರಜ್ಞೆಯಲ್ಲಿ ತುಂಬಿಕೊಂಡಿದ್ದ ಬಾಬಾಸಾಹೇಬರ ಚಿಂತನೆಗಳೇ ಪ್ರೇರಣಶಕ್ತಿಯಾಗಿದ್ದವು.
ತನ್ನ ಸಹಪಾಠಿ ಓದುತ್ತಿದ್ದ ಪುಸ್ತಕ ಯಾವುದೆಂದು ಕೇಳಲು ಹೋಗಿ ಅವಮಾನಿತರಾದ ಲೇಖಕರು ಮುಂದೊಂದು ದಿನ ತುಳಸೀರಾಮಾಯಣ ಓದಿ ‘ಈ ಅವಮಾನಗಳು, ಬಯ್ಗಳುಗಳು, ತಲೆಯೆತ್ತಿ ಬದುಕಲು ನನಗೆ ಮತ್ತಷ್ಟು ದೃಢತೆಯನ್ನು, ಆತ್ಮವಿಶ್ವಾಸವನ್ನು ತಂದುಕೊಟ್ಟವು. ಈ ಶೋಷಣೆ ಮತ್ತು ಅಸಮಾನತೆಯ ವಿರುದ್ಧ ಹೋರಾಡಲು ಅಂದೇ ದೃಢಸಂಕಲ್ಪ ಮಾಡಿದೆ. ಈ ನಿಸ್ಸಹಾಯಕತೆಯನ್ನು ಮೀರಲು ನನಗಿರುವ ಒಂದೇ ಗುರಿ ಶಿಕ್ಷಣವೆಂದು ಅಂದು ನನಗೆ ಮನದಟ್ಟಾಯಿತು’ ಎಂದು ಹೇಳುತ್ತಾರೆ. ಇನ್ನೊಂದೆಡೆ ದೇವಸ್ಥಾನದ ಅತಿಕ್ರಮ ಪ್ರವೇಶ ಮತ್ತು ದೇವರ ವಿಗ್ರಹಗಳನ್ನು ನಾಶಪಡಿಸದ್ದಾರೆಂಬ ಸುಳ್ಳು ಆರೋಪ ಮಾಡಿದ ಸವರ್ಣಿಯರು ಕೊಟ್ಟ ಫಿರ್ಯಾದಿಯನ್ನ ಅನುಸರಿಸಿ ಪೋಲಿಸರು ಬಂಧಿಸಲು ಬಂದಾಗ ತಂದೆ ಹೇಳುವ ಧೈರ್ಯದ ಮಾತುಗಳು ಹೀಗೆ ನಾಮದೇವ ನಿಮ್ಗಾಡೆಯವರನ್ನು ಆಂತರಿಕವಾಗಿ ಮತ್ತು ಬಹಿರಂಗವಾಗಿ ಹೋರಾಟದ ಬದುಕಿಗೆ ಸಜ್ಜುಗೊಳಿಸುವ ಘಟಣೆಗಳು – ವ್ಯಷ್ಠಿಯಿಂದ ಸಮಷ್ಠಿಗೆ ತುಡಿಯುವ ಜೀವವೊಂದನ್ನು ತಯಾರು ಮಾಡಿದ ಹಾಗಿವೆ.
ವಿಧಾನಸಭೆಯ ಸದಸ್ಯರಾಗುವ ಅವಕಾಶವೊಂದು ಒದಗಿಬಂದಾಗ ಬಾಬಾಸಾಹೆಬರು ಹೇಳುವ ಮಾರ್ಮಿಕವಾದ ಮಾತುಗಳು ಬಹಳ ಉಪಯುಕ್ತವಾದವು ಎನಿಸುತ್ತವೆ. ಮಗನಿಗೆ ಭೀಮರಾವ್ ಎಂದು ಹೆಸರಿಟ್ಟಾಗ, ಶಿಕ್ಷಣಕ್ಕೆ ಒಂದು ಕಡೆ ನಿಲುಗಡೆಯಿಡಬೆಕಲ್ಲ ಎಂದು ಹೇಳಿದಾಗ, ಸಂಸತ್ತಿನಲ್ಲಿ ಅವರ ಕಾಲಿಗೆರಗಿದಾಗ ಹೀಗೆ ನಿಮ್ಗಾಡೆಯವರಿಗೆ ಅಂಬೇಡ್ಕರರು ಪ್ರತಿಕ್ರಿಯಿಸಿರುವ ರೀತಿಗಳಂತೂ ಅದ್ಭುತ ಗಳಿಗೆಗಳೇ ಆಗಿವೆ. ಇದು ನಾಮದೇವ ನಿಮ್ಗಾಡೆಯವರ ಆತ್ಮಕಥನ ಹೇಗೋ ಹಾಗೆ ಭೀಮರಾವ್ ಅಂಬೇಡ್ಕರರ ಜೀವನಚರಿತ್ರೆಯೂ ಆಗಿದೆ ಎಂಬರ್ಥದಲ್ಲಿ ಹೇಳಿರುವ ಡಾ. ಅಪ್ಪಗೆರೆ ಸೋಮಶೇಖರ್ ಅವರ ಮಾತು ಅಕ್ಷರಶಃ ಸತ್ಯ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s