ಅನುದಾನರಹಿತ ಖಾಸಗಿ ಶಾಲಾ ಶುಲ್ಕ ಪರಿಷ್ಕರಣ ಸಮಿತಿ ವರದಿ – ಅವೈಜ್ಞಾನಿಕವಾಗಿದೆ


ಶಿಕ್ಷಣ ಮನುಷ್ಯನನ್ನು ಹೃದಯವಂತನನ್ನಾಗಿ ರೂಪಿಸುತ್ತದೆ. ಬಾಲ್ಯದಲ್ಲಿಯೇ ಮಕ್ಕಳಿಗೆ ನೈತಿಕ ತಳಹದಿಯನ್ನು ಹಾಕಬೇಕಾದ ಶಿಕ್ಷಣವನ್ನು ಇಂದು ವ್ಯಾಪಾರದ ಸರಕನ್ನಾಗಿ ಮಾಡಿ, ಶುಲ್ಕವೆಂಬ ಬೆಲೆನಿಗದಿಗೊಳಿಸಿ, ಪೋಷಕರ ಯೋಗ್ಯತಾನುಸಾರ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಇದು ಪ್ರಪಾತದಂಚಿನಲ್ಲಿ ನಿಂತು ಹಾರುತ್ತಿರುವ ಕನಸು ಕಾಣುವ ಭ್ರಮೆಯ ಮಾತಲ್ಲ – ಶಿಕ್ಷಣವೆಂಬ ಸೇವಾ ಮನೋಭಾವವುಳ್ಳ ವಲಯದಲ್ಲಿನ ನಡೆಯಾಗಿದೆ. ವಾಸ್ತವದಲ್ಲಿ ಹಣಕಾಸು ಇವತ್ತು ಹೊಸವರ್ಗಗಳನ್ನು ಸೃಷ್ಟಿಮಾಡುತ್ತಿದೆ. ಒಂಬತ್ತು ರೂಪಾಯಿ ಟಿಕೇಟ ದರ ಇರುವಲ್ಲಿ ನೀವು ಹತ್ತರನೋಟನ್ನು ಕೊಟ್ಟರೆ ಒಂದು ರೂಪಾಯಿ ವಾಪಾಸು ಕೇಳುವುದು ಕೇವಲ ಎನಿಸಿಬಿಡುತ್ತದೇನೋ ಎಂಬಷ್ಟು ಮುಜುಗರವನ್ನು ಅನುಭವಿಸುವ ಮನಸ್ಸನ್ನು ಭಾರಿವಹಿವಾಟಿನ ಲೆಖ್ಖಗಳು ಸೃಷ್ಟಿಸುತ್ತಿವೆ. ಚಿಲ್ಲರೆಯ ಕುರಿತು ಮಾತಾಡುವುದು ಕೂಡ ಘನತೆಗೆ ತಕ್ಕದ್ದಲ್ಲ ಎಂಬಂತಾಗಿದೆ. ಮಸಲಾ ಹೇಳ್ತೇನೆ ಆಯ್ಕೆಯ ಹಿಂದೆಯೂ ಈ ಹಣಕಾಸಿನ ಸೊಕ್ಕು ಮೆರೆದಾಡುತ್ತಿರುವುದಂತೂ ಸತ್ಯ. ಎಲ್ಲವೂ ಬ್ರಾಂಡಡ್, ಮಕ್ಕಳಿಗೆ ತೊಡಿಸುವ ಬಟ್ಟೆ, ಬಳಸುವ ವಸ್ತುಗಳು, ಬ್ಯಾಗ, ಪೆನ್ನು, ವಹಿ, ಪುಸ್ತಕ, ಸೈಕಲ್, ಕೊಡಿಸುವ ಶಿಕ್ಷಣ… ಹೀಗೆ. ಶಿಕ್ಷಣದಲ್ಲಿ ಶ್ರೇಷ್ಟವಾದದ್ದನ್ನೆ ಬಯಸುವದರ ಹಿಂದೆ ತನ್ನಂತೆ ಮಕ್ಕಳಾಗಬಾರದು ಎಂಬ ಪಾಲಕರ ಕಳಕಳಿಯೂ ಇರುತ್ತದೆ.
ಆದರೆ
ಅನುದಾನರಹಿತ ಖಾಸಗಿ ಶಾಲೆಗಳ ಪರವಾಗಿರುವ, ಬಡಜನರ ಮಕ್ಕಳ ವಿದ್ಯಾರ್ಜನೆಗೆ ಮಾರಕವಾಗಿರುವ, ಪರಿಷ್ಕರಣ ಶುಲ್ಕದ ಸಮಿತಿಯ ವರದಿಯನ್ನು ಶಿಕ್ಷಣ ಇಲಾಖೆ ಜಾರಿಗೆ ತಂದರೆ ಸಮಾನಶಿಕ್ಷಣವೆಂಬುದು ಮರೀಚಿಕೆಯಾಗಿಯೇ ಉಳಿದುಬಿಡುತ್ತದೆ. ರಾಜ್ಯ ಉಚ್ಛನ್ಯಾಯಾಲಯದ ಆದೇಶದಂತೆ ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ವಿಧಿಸಬಹುದಾದ ಶುಲ್ಕವನ್ನು ನಿಗದಿಪಡಿಸಲು ರಾಜ್ಯಸರ್ಕಾರವು ಶುಲ್ಕಪರಿಷ್ಕರಣಾ ಸಮಿತಿಯನ್ನು ರಚಿಸಿತ್ತು. ಈ ಶುಲ್ಕಪರಿಷ್ಕರಣಾ ಸಮಿತಿಯು ನೀಡಿದ ವರದಿಯನ್ನು ಇಲಾಖೆಯ ವೆಬ್ ಸೈಟ್ http://www.schooleducation.kar.nic.in ನಲ್ಲಿ ದಿನಾಂಕ 309\2014 ರಂದು ಪ್ರಕಟಿಸಲಾಗಿದೆ. ಆದರೆ ಆ ವರದಿಯು ಪೂರ ಹುಸಿ ವ್ಯಂಗ್ಯಗಳಿಂದ ಕೂಡಿದಂತಿದೆ. ಶಾಲೆಗಳನ್ನು ಬೆಂಗಳೂರು ಮಹಾನಗರ ಪಾಲಿಕೆ ಮೈಸೂರು ಮಹಾನಗರ ಪಾಲಿಕೆ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲೆಗಳೆಂದು ವಿಭಾಗಿಸಿದ್ದಲ್ಲದೆ ಜಿಲ್ಲಾಮಟ್ಟದ ವ್ಯಾಪ್ತಿಯಶಾಲೆಗಳು, ತಾಲ್ಲೂಕುಮಟ್ಟದ, ಹಳ್ಳಿಮಟ್ಟದ ವ್ಯಾಪ್ತಿ ಶಾಲೆಗಳೆಂದು ವರ್ಗೀಕರಿಸಿ ಅನುದಾನರಹಿತ ಖಾಸಗಿಶಾಲೆಗಳ ಶುಲ್ಕನಿಗದಿ ಮಾಡಲಾಗಿದೆ. ಆಡಳಿತದ ದೃಷ್ಟಿಯಿಂದ ಎಲ್ಲ ಶಾಲೆಗಳು ಒಂದೇ ತೆರನಾಗಿರಲಾರವು. ಸರಕಾರದ ಕಣ್ಣಲ್ಲಿ ಎಲ್ಲ ಶಾಲೆಗಳು ಜ್ಞಾನದೇಗುಲವೇ ಆಗಿರಬೇಕಿತ್ತು. ಆದರೆ ಇಲಾಖೆಯೇ ಹೀಗೆ ಅಸಮಾನ ಶಿಕ್ಷಣವ್ಯವಸ್ಥೆಗೆ ಪ್ರೇರಣೆ ನೀಡಿರುವುದು ಅಸಹ್ಯವೆನಿಸುತ್ತದೆ.
ಶಾಲಾ ಅಭಿವೃದ್ಧಿ ಶುಲ್ಕವನ್ನು ಸಂಗ್ರಹಿಸುವ ಆಧಾರದ ಮೇಲೆ ಅನುದಾನರಹಿತ ಖಾಸಗಿ ಶಾಲೆಗಳನ್ನು ಅಂಕಗಳ ನೀಡುವುದರ ಮುಖಾಂತರ ಅತಿಶ್ರೇಷ್ಠ, ಶ್ರೇಷ್ಠ, ಉತ್ತಮ, ತೃಪ್ತಿಕರ, ಸಾಧಾರಣ ಎಂಬುದಾಗಿ ವರ್ಕಿಂಗ್ ಡೆಡ್ ಲೈನ್ ರೀತಿಯಲ್ಲಿ ವರ್ಗೀಕರಿಸಿದ್ದಾರೆ. ಇಂಥ ವ್ಯಾಪಾರೀ ಮನೋಭಾವವನ್ನು ಶಿಕ್ಷಣಸಂಸ್ಥೆಗಳಲ್ಲಿ ಉತ್ತೆಜಿಸುವ ಕೆಲಸವನ್ನು ಸರಕಾರವೇ ಮುಂದೆನಿಂತು ಮಾಡುವುದು ಸರಿಯಾದ ಕ್ರಮವಲ್ಲ.
ಪ್ರದೇಶವ್ಯಾಪ್ತಿ ಮತ್ತು ಶ್ರೇಣೀಕರಣದ ಮಾನದಂಡದಲ್ಲಿ ಶುಲ್ಕವಸೂಲಿಯ ಆಯವ್ಯಯಕ್ಕೆ ಅನುಸಾರವಾಗಿ ಸಿಬ್ಬಂದಿಯ ಸಂಬಳವನ್ನು ನಿಗದಿಪಡಿಸಲಾಗಿದೆ. ಆಯಾಗಳಿಗೂ ಡಿ ದರ್ಜೆ ನೌಕರರಿಗೂ ಕನಿಷ್ಟಕೂಲಿಯನ್ನು ನೀಡುವ ಬಗ್ಗೆ ಮಾತಾಡುವುದಿರಲಿ, ಕೇವಲ 2000 ರೂಪಾಯಿ ಸಂಬಳದಲ್ಲಿ ಖಾಸಗಿಶಾಲೆಗಳಲ್ಲಿ ಶಿಕ್ಷಕರನ್ನು ದುಡಿಸಿಕೊಳ್ಳಬುದೆಂಬುದನ್ನು ಸರಕಾರವೇ ಶಿಫಾರಸ್ಸು ಮಾಡಿರುವುದು ಗಾಬರಿಹುಟ್ಟಿಸುತ್ತದೆ. ಹೀಗೆ ಶಿಕ್ಷಣಕ್ಷೇತ್ರವನ್ನು ವ್ಯಾಪಾರಿಗಳ ಅನುಕೂಲತೆಗೆ ತಕ್ಕಂತೆ ರೂಪಿಸುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಕುಸಿಯದೆ ಇರುತ್ತದೆಯೇ..?
ಸುತ್ತೋಲೆಯ ಕೊನೆಯಲ್ಲಿ ಆಡಳಿತಮಂಡಳಿಯವರು ಹೆಚ್ಚಿನಸೌಲಭ್ಯವನ್ನು ಒದಗಿಸಿದಲ್ಲಿ ಅಂದರೆ ಈಜುಕೊಳ, ಕುದುರೆಸವಾರಿ, ಪ್ರವಾಸ ಇತ್ಯಾದಿಗಳ ಅನುಕೂಲತೆಗೆ ತಕ್ಕ ಹಾಗೆ ಪೋಷಕರ ಒಪ್ಪಿಗೆಯ ಮೇರೆಗೆ ಹೆಚ್ಚುವರಿ ಶುಲ್ಕವನ್ನು ಸಂಗ್ರಹಿಸಬಹುದು ಎಂಬ ಗ್ರೀನ್ ಸಿಗ್ನಲ್ ನೀಡಿರುವುದು ಆಘಾತಕಾರಿಯಾದದ್ದು. ಎಳೆಸಿಕ್ಕರೆ ಹಚ್ಚಡವನ್ನೇ ನುಂಗಿಹಾಕುವ ಪ್ರವೃತ್ತಿ ಉಧ್ಯಮಶೀಲತೆಯ ಮೌಲ್ಯವಾಗಿರುವಾಗ ಇಂಥ ಆದೇಶವನ್ನು ಅನುದಾನರಹಿತ ಖಾಸಗಿ ಶಾಲೆಗಳು ಶಿರಸಾವಹಿಸಿಪಾಲಿಸುತ್ತವೆ.
ಆಡಿ-ನಲಿದಾಡುವ ಮಕ್ಕಳನ್ನು ಹಿಂದಿನ ತಲೆಮಾರು ದೇವರಿಗೆ ಸಮಾನರು ಎಂದು ಹೋಲಿಸುತ್ತಿದ್ದರು. ಆ ಮುಗ್ಧಜಗತ್ತಿಗೆ ಅಸಮಾನ ಭಾರತದ ಒಂದೊಂದೇ ಅಲೆಗಳು ಅಪ್ಪಳಿಸುತ್ತ ಹೋದಂತೆ ಬಾಲ್ಯದ ಸಂಭ್ರಮಗಳನ್ನು ಕಳೆದುಕೊಳ್ಳುತ್ತ, ಭ್ರಮಾತ್ಮಕ ಸುಖವನ್ನು ತ್ಯಜಿಸಿ ಈ ದೇಶದ ಯಾವದೋ ಒಂದು ವರ್ಗದ ಯಾವದೋ ಮನೆತನದ ಇನ್ಯಾರದೋ ದೇಖರೇಖಿಯಲ್ಲಿ ಕಳೆದುಹೋಗುವ ಕಾರಣಕ್ಕಾಗಿಯೇ ಪ್ರತಿಯೊಬ್ಬನಿಗೂ ಬಾಲ್ಯದ ಸಖ್ಯ ಸಾಯೋವರೆಗೂ ಕಾಡುತ್ತದೆ. ಅಂಥ ಬಾಲ್ಯದಲ್ಲಿ ಭಾರತದ ಪ್ರತಿಯೊಂದು ಮಗುವಿಗೂ ಒಂದೇ ಮಾದರಿಯ ಶಿಕ್ಷಣ ಸಿಕ್ಕುವಂತಾದರೆ ಹೇಗಿರುತ್ತದೆ..?
ಬಾಲ್ಯದ ಪೊರೆಕಳಚುವ ಹೊತ್ತಿಗೆ ಪ್ರದೇಶ, ಭಾಷೆ, ಧರ್ಮ, ಜಾತಿಗಳ ಭಿನ್ನತೆಯ ಆಚೆಗೂ ನಮ್ಮ ಮಕ್ಕಳು ಶಿಕ್ಷಣದ ವ್ಯವಸ್ಥೆಯಲ್ಲಾದರೂ ಸಮಾನವಾದದ್ದನ್ನು ಓದಿದ್ದೆ ಆದರೆ ಅವರು ಮಹಾತ್ಮರಾಗದಿದ್ದರೂ ಹಿಟ್ಲರ್ಂತೂ ಅವರ ಆಯ್ಕೆ ಆಗಲಾರದು. ಶಿಕ್ಷಣದಲ್ಲಿ ನೈತಿಕ ತಳಹದಿಯಾದರೂ ಗಟ್ಟಿಯಾಗುವುದರಿಂದ ಸಮಾನ ಶಿಕ್ಷಣ ಇವತ್ತಿನ ತುರ್ತಾಗಿದೆ.
ಯಶಸ್ಸನ್ನು ಪಡೆಯಲು ಸ್ಪರ್ಧೆ ಹಾಗೂ ನಿಷ್ಕರುಣೆಗಳು ಅತ್ಯಗತ್ಯ. ಆದ್ದರಿಂದಲೇ ತಾಯಿತಂದೆಗಳು ತಮ್ಮ ಮಕ್ಕಳನ್ನು ಮಹತ್ವಾಕಾಂಕ್ಷೆ ಮತ್ತು ಸ್ಪರ್ಧೆಗಳು ತುಂಬಿರುವ, ಪ್ರೀತಿಯ ಲವಲೇಶವೂ ಇಲ್ಲದ ಶಾಲೆಗಳಿಗೆ ಕಳಿಸುತ್ತಾರೆ. ನಮ್ಮ ಸಮಾಜವು ನಿರಂತರವಾಗಿ ಕೊಳೆಯುತ್ತಿರುವುದಕ್ಕೂ, ಅಂತಃಕಲಹಗಳಲ್ಲಿ ಮುಳುಗಿರುವುದಕ್ಕೂ ಇದೇ ಕಾರಣ. ಎಂದು ಜೆ. ಕೃಷ್ಣಮೂರ್ತಿಯವರು ವಿವರಿಸುತ್ತಾರೆ. ಈ ಮಾತು ಇಂದು ಶಿಕ್ಷಣವನ್ನು ಸೇವೆಯಿಂದ ವಂಚಿಸಿ ಉಧ್ಯಮವಾಗಿ ರೂಪಿಸುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳೊಟ್ಟಿಗೆ ಹೋಲಿಕೆಮಾಡಿದರೆ ಸಹ್ಯವೆನಿಸಬಹುದೇನೋ..!
ಶಿಕ್ಷಣವೆಂಬುದು ಇಂದು ಬೃಹತ್ ಉಧ್ಯಮದ ಮಾದರಿಯಲ್ಲಿ ಬೆಳೆದು ನಿಂತಿದೆ. ಸೇವೆಯ ನೆಪತೋರಿಸಿ, ಸೌಕರ್ಯಗಳ ಸೋಜಿಗದ ಲೋಕವನ್ನು ಶಾಲಾಅಂಗಳದಲ್ಲಿ ನಿರ್ಮಿಸಲಾಗುತ್ತಿದೆ. ನೆಲದೊಟ್ಟಿಗಿನ ನಂಟನ್ನು ಬಿಡಿಸಿ ಕಾಂಕ್ರೀಟ ಕಾಡಿನಲ್ಲಿ ಶಿಕ್ಷಣ ಕೊಡುವುದು ಮತ್ತು ಅಂಥ ಶಿಕ್ಷಣವನ್ನೇ ಆಯ್ಕೆ ಮಾಡಿಕೊಂಡು ತಮ್ಮ ಮಕ್ಕಳಿಗೂ ಆ ಮಾದರಿಯ ಶಿಕ್ಷಣವನ್ನೆ ಕೊಡಿಸಬೇಕೆಂಬ ಹಠವೂ ಪಾಲಕರಲ್ಲಿದೆ. ಶಾಲೆಗಳ ಆಯ್ಕೆಯೂ ಪೋಷಕರ ತಿಂಗಳ\ವಾರ್ಷಿಕ ವರಮಾನಗಳನ್ನು ಆಧರಿಸಿದ್ದಾಗಿರುತ್ತದೆ. ಗುಣಮಟ್ಟದ ಶಿಕ್ಷಣವನ್ನು ನೀಡುವುದಾದರೆ ಎಲ್ಲ ವರ್ಗದ ಎಲ್ಲಾ ಮಾದರಿಯ ವಿದ್ಯಾರ್ಥಿಗಳಿಗೂ ವೈವಿದ್ಯೆತೆಯನ್ನೊಳಗೊಂಡ ಗುಣಮಟ್ಟದ ಸಮಾನ ಶಿಕ್ಷಣವನ್ನು ನೀಡಲು ಸಾಧ್ಯವಿಲ್ಲವೇ..?
ಖಾಸಗಿ ಶಿಕ್ಷಣ ಸಂಸ್ಥೆಗಳ ರಟ್ಟೆಗೆ ಸರಕಾರದಿಂದ ರಚಿಸಲ್ಪಟ್ಟ ಸಮಿತಿಯೇ ಇಷ್ಟೊಂದು ತೋಳಬಲ ನೀಡುತ್ತಿರುವಾಗ ಬಡವನ ಮಗ ಇಂಥ ಶಾಲೆಗಳಲ್ಲಿ ಓದುವುದು ಸಾಧ್ಯವೇ..? ಬಡವನಿರಲಿ ಮೇಲ್ಮಧ್ಯಮವರ್ಗದ ಮಕ್ಕಳಿಗೂ ಈ ಶಿಕ್ಷಣ ದಕ್ಕಲಾರದು. ಇದೆಲ್ಲವನ್ನು ಹೋಗಲಾಡಿಸಿ ಸಮಾನಶಿಕ್ಷಣವನ್ನು ಜಾರಿಗೆ ತರುವ ಕುರಿತು ಸರಕಾರ ಯೋಚಿಸುವಂತಾಗಬೇಕು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s