ಸಮಷ್ಟಿತ್ವದ ಹುಡುಕಾಟವಾಗಬೇಕಿದೆ.


ಯಾವಾಗ ಎಲ್ಲಿ ನನಗೆ ಏನು ಮಾಡತಾರೋ ಗೊತ್ತಿಲ್ಲ ಆದರೆ ಸಂವಿಧಾನದಲ್ಲಿ ನನಗೆ ಶ್ರೀಸಾಮಾನ್ಯನ ಹಕ್ಕು ನೀಡಿದ್ದಾರೆ. ನಾನು ಪ್ರಶ್ನಿಸುತ್ತಲಿರುತ್ತೇನೆ. ಹೋರಾಟ ಮಾಡುತ್ತಿರುತ್ತೇನೆ. ಅನ್ನೋ ಹಿರೇಮಠ ಸರ್ ನನಗಿಷ್ಟ. ಗಾಂಧಿ ಉಪವಾಸ ಕೂತಾಗ ಅಂಬೇಡ್ಕರ್ ವಿರುದ್ಧ ರಸ್ತೆ ರಸ್ತೆಗಳಲ್ಲಿ ಘೋಷಣೆ ಕೂಗಿ ಘೇರಾವು ಹಾಕುತ್ತಿದ್ದರು. ಹೋರಾಟದ ದೀವಿಗೆ ಹಿಡಿದ ಅಂಬೇಡ್ಕರ್ ಎದೆಗುಂದಲಿಲ್ಲ. ಹಾಗಾಗಿ ಅವರ ಧೈರ್ಯ ನನಗಿಷ್ಟ. ಶೂದ್ರ-ದಲಿತ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಲು ಶಾಲೆ ನಡೆಸಿದ ಮಾತಾ ಸಾವಿತ್ರಿಬಾಯಿ ಫುಲೆಯವರು ಶಾಲೆಗೆ ಹೋಗುವಾಗ ದಾರಿಮೇಲೆ ಸಗಣಿ ಎರಚುತ್ತಿದ್ದರು. (ಆ ತಾಯಿಯ ಒಂದು ಪಟವನ್ನೂ ಭಾರತ ಸರಕಾರ ಎಲ್ಲ ಶಾಲೆಗಳಲ್ಲಿ ಹಾಕುವ ಕೆಲಸ ಮಾಡಿಲ್ಲ.) ಆ ಫುಲೆ ದಂಪತಿಗಳು ಅವರಿಗೆ ಹೆದರಿ ಶಾಲೆ ನಡೆಸುವುದನ್ನು ಬಿಟ್ಟರೇನು…? ಯೋಗೇಶ ಮಾಸ್ಟರ್ ಅವರು ದುಂಡಿ ಕಾದಂಬರಿಯ ವಿವಾದ ಆದ ಮೇಲಂತೂ ಪ್ರಸಿದ್ಧ ಲೇಖಕರೂ, ವಾಗ್ಮಿಗಳು, ಕಾದಂಬರಿಕಾರರು ಆಗಿಯೇಬಿಟ್ಟರು. ಆದರೆ ಅವರು ವಿವರಿಸುವ ವಸ್ತು ವಿಷಯಗಳ ಆಶಯಗಳು ಏನನ್ನು ಸಮರ್ಥಿಸುತ್ತಿವೆ ಎನ್ನುವುದು ಮಾತ್ರ ಪುರಾಣ ಹೂರಣದಲ್ಲಿ ಸ್ಪಷ್ಟವಾಗುತ್ತಿಲ್ಲ.
ಈಗ ಭಾರತದಲ್ಲಿ ವೈದಿಕ, ವೈಷ್ಣವ, ಶೈವ, ಇತ್ಯಾದಿ ದರ್ಶಗಳಲ್ಲೆವನ್ನೂ ಹಿಂದುತ್ವ ಎಂಬ ಕಾಳಕತ್ತಲೆಯೊಂದು ನುಂಗುತ್ತಿದೆ. ಆ ಎಲ್ಲ ದರ್ಶನಗಳಿಗೂ ಒಂದೊಂದು ಅಸ್ತಿತ್ವ ಇದೆ ಎಂಬುದನ್ನು ಜನಸಾಮಾನ್ಯರಿಗೆ ತಿಳಿಸಿಕೊಡುವ ಕೆಲಸವನ್ನು ಹತ್ತೊಂಬತ್ತನೆ ಶತಮಾನದ ಅಂತ್ಯದಲ್ಲಿ ಮತ್ತು ಇಪ್ಪತ್ತನೆಯ ಶತಮಾನದುದ್ದಕ್ಕೂ ಸಂಶೋಧಕರು, ಸಾಹಿತಿಗಳು, ರಾಜಕಾರಣಿಗಳು, ಹೋರಾಟಗಾರರು ಮಾಡುತ್ತಾ ಬಂದಿದ್ದಾರೆ. ಭಾರತದ ಪುರಾಣಗಳನ್ನು ಹಿಂದತ್ವದ ಆಶಯಗಳಗೆ ಒಗ್ಗಿಸಿಕೊಳ್ಳುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದವರು ಈಗ ಅದರ ತಾತ್ವಿಕ ಹಿನ್ನೆಯಲ್ಲಿ ಸಮಾಜಶಾಸ್ತ್ರದ ರಚನಾವಿನ್ಯಾಸವನ್ನು ಹುಡುಕಾಟ ಮಾಡುತ್ತಿದ್ದಾರೆ. ಶಿವ ಶ್ರಮಿಕ ವರ್ಗದವನೆಂದು ಪ್ರತಿಪಾದಿಸುವುದೇನಿದೆ.? ಬೆವರಿನಿಂದ ವೀರಭದ್ರ ಹುಟ್ಟಿದನೆಂಬ ಕಥನ ತಂತ್ರವೇ ಶಿವ ಎನ್ನುವ ಕಲ್ಪನೆಯನ್ನು ವಿಸ್ತರಿಸುತ್ತದೆ.
ಈ ದೇವಾನುದೇವತೆಗಳಿಗೆ ಸಂಬಂಧಿಸಿದ ಪುರಾಣಗಳಲ್ಲಿ ಆಧುನಿಕತೆಯ ದುಷ್ಟತನಗಳನ್ನು ಹುಡುಕುವುದರಿಂದ ಪರಿಹಾರವೇನಾದರೂ ನಮಗೆ ಸಿಗಬಲ್ಲುದೆ..? ಹಿಂದುತ್ವದ ಕುರಿತಾಗಿಯೇ ಪತ್ರಿಕೆಯ ಪುಟಗಳನ್ನು ತುಂಬಿಸಿಕೊಳ್ಳುವವರ ಧಾಟಿಯಲ್ಲಿಯೇ ವೈಚಾರಿಕ ಜಗತ್ತು ಆಲೋಚಿಸುತ್ತದೆಯೇ..? ಯಾಕಾಗಿ ಈ ಹುಡುಕಾಟದ ಹುಡುಗಾಟ. ಬಾಬಾಸಹೇಬರ ಹಿಂದೂಧರ್ಮದ ಕುರಿತಾದ ಬರಹಗಳಲ್ಲಿ ತೀಕ್ಷ್ಣವಾದ ಹುಡುಕಾಟವಿದೆ. ಪೆರಿಯಾರರ ಹೋರಾಟಗಳಲ್ಲಿ ನಿಖರತೆ ಇತ್ತು. ಡಿ.ಡಿ ಕೋಸಾಂಬಿಯವರ ಮಿಥ್ ಆಂಡ್ ರಿಯಾಲಿಟಿಯಲ್ಲಿ ಮೂಲನೆಲೆಯ ಕಾಣ್ಕೆ ಮತ್ತು ಉದ್ಧೇಶಗಳ ಜಾಳುತನ, ಚಾಲಾಕಿತನಗಳಿವೆ. ಆದರೆ ಈಗ ಹಿಂದುತ್ವದ ಭರಾಟೆಯಲ್ಲಿ ಪುರಾಣ ಪ್ರಸಂಗಗಳನ್ನು ಮುನ್ನೆಲೆಗೆ ತಂದು ಜಿಜ್ಞಾಸೆ ನಡೆಸುವುದು ಬೇಕೆ..? ಹಾಗಂತ ವಾಸ್ತವಾಂಶಗಳ ಮೇಲೆ ಗೋರಿಕಟ್ಟಬೇಕೆಂದು ನಾನು ವಾದಿಸಲಾರೆ. ಆದರೆ ಸಮಾಜದಲ್ಲಿ ಇವತ್ತಿಗೆ ತೀರಾ ಮುಖ್ಯವಾದ ಕೆಲವು ತಕರಾರುಗಳು, ಪ್ರಶ್ನೆಗಳು, ತಾಪತ್ರಯಗಳು ಇದ್ದಾವೆ. ವೈಕಂ ಬಷೀರ್ ಅವರ ಒಂದು ಕತೆಯಲ್ಲಿ ಒಬ್ಬ ಪ್ರಸಿದ್ಧ ವ್ಯಕ್ತಿ ಪತ್ರಕರ್ತನೊಬ್ಬ ಕೇಳುವ ಪ್ರಶ್ನೆಗಳಿಗೆಲ್ಲ ಕೆರೆದುಕೊಳ್ಳುವ ಮೂಲಕ ಉತ್ತರಿಸುತ್ತಿರುತ್ತಾನೆ. ಮಾಡುವ ಹೋರಾಟವೂ, ಆಡುವ ಆಟವಾಗಬಾರದು. ನೋಡುವ ಚಿಕಿತ್ಸಕ ಕಣ್ಣಿಗೆ ನಂಜಿರಬಾರದು ಎಂಬುದು ನನ್ನ ಅಭಿಪ್ರಾಯ.

ನನಗ್ಯಾಕೋ ಕೆಲವರು ಉದ್ಧಟತನದ ವರ್ತನೆ ಮಾಡುತ್ತಿದ್ದಾರೆ ಅನಿಸುತ್ತದೆ. ಅವರ ಬರಹದ ಆಶಯಗಳು ಏನೆಂಬುದೆ ತಿಳಿಯುತ್ತಿಲ್ಲ. ಅಂಥ ಕೆಲ ಮಹಾಶಯರು ಬರೆಯುವ ಧಾಟಿಯಲ್ಲಿಯೇ ಬಹಳಷ್ಟು ಎಡವಟ್ಟುಗಳಿವೆ. ಅದನ್ನು ಕೂಡ ಅರ್ಥ ಮಾಡಿಕೊಂಡು ಅವರ ಬರಹಗಳಲ್ಲಿ ಸಮಷ್ಟಿ ಪ್ರಜ್ಞೆ ಅಂತ ಒಂದಿದೆಯಲ್ಲ ಅದಕ್ಕೆ ಧೋಕಾ ತರದ ರೀತಿಯಲ್ಲಿ ಕೆಲವು ಪತ್ರಿಕೆಯವರು ನೋಡಿಕೊಳ್ಳಬೇಕು. ವಿಶೇಷವಾಗಿ ಯೋಗೇಶ ಮಾಸ್ಟರ್ ಬರಹಗಳ ಆಶಯಗಳು ಏನು..? ಎಂಬುದು ನನ್ನ ಪ್ರಶ್ನೆ. ಮೌಢ್ಯದ ಕುರಿತಾಗಿ ಮಾತಾಡುತ್ತಾರೆಯೇ…? ಹೋಗಲಿ ಹಿಂದೂ ಧರ್ಮದಲ್ಲಿನ ನ್ಯೂನ್ಯತೆ, ತಾರತಮ್ಯ, ಅಸಮಾನತೆಗಳ ಕುರಿತಾಗಿ ಮಾತಾಡುತ್ತಾರೆಯೇ…? ಪ್ರಚೋದಿಸುವ ಭಾವ ಎನ್ನುವುದು ಬದುಕಿನ ಇರುವಿಕೆಯನ್ನೇ ಇರುಸು-ಮುರುಸು ಮಾಡುವಂತಿರಬೇಕು.(ಲಂಕೇಶರ ಟೀಕೆ ಟಿಪ್ಪಣಿಗಳು ಆ ಕೆಲಸವನ್ನು ಮಾಡುತ್ತಿದ್ದವು) ನಾವು ನಂಬಿರುವುದರ ಹಿಂದಿನ ಕುಹಕತನಗಳನ್ನು ಬಿಚ್ಚಿಡುವ ಬದಲು, ಈ ದೇಶದಲ್ಲಿ ಹಿಡಿದಿಡಲಾರದ ಐತಿಹ್ಯ ಕಥನಗಳ ವಿನ್ಯಾಸವನ್ನು ತಂತ್ರದ ಹಾಗೆ ಕೆಲವು ಮಾರ್ಪಾಟುಗಳನ್ನು ಮಾಡಿಕೊಂಡು ಒಂದಷ್ಟು ಬರೆದು ಬಿಡುತ್ತಾರೆ. ಅಂಥ ಬರಹ ಸಮಾಜದ ಸ್ವಾಸ್ತ್ಯವನ್ನು ಹಾಳುಮಾಡಬಲ್ಲದು. ಅದಕ್ಕೆ ಉದಾಹರಣೆಯಾಗಿ ಹಲಕೆಲವು ಹೆಸರಾಂತ ಕಾದಂಬರಿಕಾರರ, ಅಂಕಣಕಾರರ ಬರಹಗಳನ್ನು ಗಮನಿಸಬಹುದಾಗಿದೆ.
ಸಂಬಂಜಾ ಅನ್ನೋದು ದೊಡ್ಡದು ಕಣಾ ಅಂದಂಗೆ ನಂಬಿಕೆ ಅನ್ನೋದು ಮನಸ್ಸುಗಳನ್ನ ಕಟ್ಟತದೆ. ಈ ನೆಲದ ಐತಿಹ್ಯಗಳನ್ನ ಒಡೆದು ಕಟ್ಟಬೇಕೆ ಹೋರತು ನಂಬಿಕೆಗಳನ್ನು ಒಡೆದು ಕಟ್ಟಲು ಪ್ರಯತ್ನಿಸುವುದು ಯಾಕೋ ಕೆಡುಕಿನದು ಎನಿಸುತ್ತದೆ. ಮೊನ್ನೆಯಷ್ಟೆ ಮೊಗಳ್ಳಿ ಗಣೇಶ ಸರ್ ಒಂದು ಹೊಸ ಕತೆ ಓದಿದೆ. ದೇವರ ಮರ ಅಂತ ಆ ಕತೆ. ಆ ಕತೆ ನಂಬಿಕೆ ಮತ್ತು ಸಾಮುದಾಯಿಕ ಪ್ರಜ್ಞೆಯ ಕುರಿತಾಗಿದೆ. ಆ ಮರಗಳ ವಾರಸುದಾರರು ಯಾರೇ ಇರಲಿ ಹಿಂದೂ ಅಥವಾ ಮುಸ್ಲಿಂ. ಕತೆಯಲ್ಲಿ ಒಂದು ಕೇರಿಯವರು ತಮ್ಮ ಮನೆ-ಗುಡಿಸಲುಗಳನ್ನು ಕಳೆದುಕೊಳ್ಳುತ್ತಾರೆ. ಆ ದೇವರ ಮರದ ಕೆಳಗೆ ಆಶ್ರಯ ಪಡೆಯುತ್ತಾರೆ. ಅವರು ಆ ಊರಿನ ಸಮುದಾಯಗಳ ನಡುವಿನ ನಂಬುಗೆ ಮತ್ತು ಸಂಬಂಧಗಳನ್ನು ಬೆಸೆಯುವ ಕೆಲಸ ಮಾಡುತ್ತಾರೆ. ಇಂತಹ ಕೆಲಸಗಳನ್ನು ಇತಿಹಾಸದಲ್ಲಿ ಮಾಡಿದವರಿದ್ದಾರೆ. ತಲೆದಂಡ ಕೊಟ್ಟವರೂ ಇದ್ದಾರೆ. ಆತ್ಮವಿಶ್ವಾಸದಿಂದ ಹೋರಾಡಿದವರೂ ಇದ್ದಾರೆ. ಈಗ ಬುದ್ದತ್ವದ ಅರಿವನ್ನಿಟ್ಟುಕೊಂಡು ನಾವು ಬದುಕಬೇಕಾಗಿದೆ. ಪರಸ್ಪರರಲ್ಲಿನ ನಂಬುಗೆಗಳನ್ನು ಕಾಕುದೃಷ್ಟಿಯಲ್ಲಿ ಹೊರಹಾಕುತ್ತ ಮತ್ತೆಮತ್ತೆ ಗಾಯದ ಸುತ್ತ ಕೆರೆಯುವ ಕೆಲಸವನ್ನು ಮಾಡುವುದು ತರವಲ್ಲ. ವ್ಯಷ್ಟಿಗಿಂತಲೂ ಸಮಷ್ಟಿತ್ವ ನಮ್ಮ ಹುಡುಕಾಟವಾಗಬೇಕಿದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s