ಮುಪ್ಪಾನು ಮುದುಕರ ಕತೆ


ಮಹಾದೇವ ಹಡಪದ ಸಾಲಾಪೂರ

ಈಗ ಇಬ್ಬರಿಗೂ ವಯಸ್ಸಾದುದು. ಮುದುಕನ ಹಲ್ಲುಗಳು ಒಂದೊಂದಾಗಿ ಬಿದ್ದು ಹೋಗಿ ದವಡೆಯ ತುದಿ ಹಲ್ಲು ಮಾತ್ರ ಹಾಗೆ ಉಳಿದುಕೊಂಡಿತ್ತು. ಅಗೆಯುವ ಅನ್ನ ಒಸಡಿಗೆ ಹೊಂದಿದಂತೆ ಆ ಗಟ್ಟಿ ಹಲ್ಲಿನ ತುದಿಗೆ ತಾಕಿದಾಗೊಮ್ಮೆ ಯೌವನ ಮತ್ತೆ ಚಿಗುರುವುದೇನೋ ಎಂದು ಪುಳಕಿತನಾಗುತ್ತಿದ್ದ. ದನ ಮೆಲುಕು ಹಾಕಿದಂತೆ ನಾಲಗೆಯ ಅಂಗಳದಲ್ಲಿನ ಅಗಳನ್ನ ದವಡೆಗೆ ನೂಕಲು ಹರಸಾಹಸ ಪಡುತ್ತಿದ್ದ ಕಾರಣಕ್ಕೋ ಏನೋ ಇತ್ತಿತ್ತಲಾಗಿ ಮುದುಕಿಗೆ ಮುದುಕನ ಉಣ್ಣುವ ರೀತಿ ಸರಿ ಬರುತ್ತಿರಲಿಲ್ಲ. ಏನ್ರೀ ಉಣ್ಣುವಾಗ ತ್ವಾಡೆ ಹಿಂದಕ ಸರದು ಕುಂತು ತಿನ್ರೀ’ ಎಂದು ತಾನೆ ಕುಂಡಿ ಸವರುತ್ತಲೋ ಇಲ್ಲಾ ಡೈನಿಂಗ್ ಟೆಬಲ್ ಮುಂದಿನ ಕುರ್ಚಿಯನ್ನು ತಿರುಗಿಸಿಕೊಂಡೋ ಮುದುಕನಿಗೆ ಬೆನ್ನಾಗಿ ಕೂತು ಊಟಮಾಡುವುದನ್ನು ರೂಢಿಸಿಕೊಂಡಿದ್ದಳು. ದಿನಗಳು ಉರುಳಿದಂತೆ ಇದು ಊಟದ ಹೊತ್ತಿಗೆ ಮತ್ತೆ ಮತ್ತೆ ರಿಪೀಟ್ ಆಗುತ್ತ ಹೋಯಿತು. ಮುದುಕನಿಗೆ ಸಿಟ್ಟು ಬಂದರೂ ಆಕೆಯ ಹೊರತಾಗಿ ತನಗೆ ಇನ್ನಾರಿದ್ದಾರೆ ಎಂದುಕೊಂಡು ಆಕೆಯ ಸೆಡವು-ಸಿಟ್ಟುಗಳನ್ನು ನಕಲಿಯಾಡಿ ನಕ್ಕುಬಿಡುತ್ತಿದ್ದ.

ಆಕೆ ಮಕ್ಕಳಂತೆ ಹಟಮಾಡಿ ತನ್ನ ತಾ ಸಾಧಿಸಿಕೊಳ್ಳುವುದೂ ಈತ ರಮಿಸುವುದು ಒಂದು ರೀತಿಯ ಮೋಜಿನಂತಾಯಿತು. ಉಂಡಾದ ಮೇಲೆ ಅಂವ ಹಾಸಿದ ಹಾಸಿಗೆಯನ್ನು ತಾನು ಬಂದು ಮತ್ತೊಮ್ಮೆ ಝಾಡಿಸಿ ಹಾಸುವುದು.ಪಾರ್ಕಿಗೆ ಹೋಗಿ ಬಂದಾಗೊಮ್ಮೆ ಕಾಲು ತೊಳೆದುಕೊಂಡು ಒಳಗೆ ಬಂದರೂ ಕಾಲು ತೊಳೆಯಲಿಲ್ಲವೆಂದು ಕಿತ್ತಾಡುವುದು. ಜಗಲಿ ಮೇಲಿನ ದೀಪಕ್ಕೆ ಎಣ್ಣೆಹಾಕಲಿಲ್ಲ. ಬತ್ತಿ ಹೊಸೆಯಲಿಲ್ಲ, ರದ್ದಿಪೇಪರ್ ಮಾರಾಟ ಮಾಡಲಿಲ್ಲ, ಜಿರಳೆಗೆ ಹಿಟ್, ಇಲಿಗಳಿ ಪಾಷಾಣ ತರಲಿಲ್ಲ… ಹೀಗೆ ಪಾಯಿಖಾನೆಗೆ ಹೋಗಿಬಂದರೂ ನೀರು ಸರಿಯಾಗಿ ಹಾಕಲಿಲ್ಲವೆಂದು ಕೂಡ ಕಿರಿಕಿರಿಮಾಡತೊಡಗಿದ್ದಳು. ಆಕೆಗೆ ಯಾಕೋ ತನ್ನ ಮೇಲಿನ ಪ್ರೀತಿ ತಟಕು ಕಮ್ಮಿಯಾಗಿದೆ ಅನಿಸಿದರೂ “ಈಕೆ ನನ್ನ ಹೆಂಡತಿ” ಎಂದು ಅಕ್ಕರಾಸ್ಥೆ ತೋರುತ್ತಿದ್ದ..

ಪಾಪ! ಮುದುಕನು ಮುದುಕಿಯ ತಿರಸ್ಕಾರಕ್ಕೆ ಚಣ ಅಧೀರನಾದರೂ ಊಟವಾದ ಮೇಲೆ ಪ್ರೀತಿ ಕಮ್ಮಿಯಾದೀತೆಂಬ ಭಯದಲ್ಲಿ ಆಕೆಯನ್ನು ಮಾತಾಡಿಸಲು ಸತತ ಪ್ರಯತ್ನ ಮಾಡುತ್ತಿದ್ದ. ಗಲ್ಲ ಸವರಿದಾಗೊಮ್ಮೆ ಮೂಗು ಮರಿಯುವುದು, ಕಚಗುಳಿಯಿಟ್ಟಾಗ ಕಣ್ಣ ಈಟಗಲ ಮಾಡಿ ಕೆಕ್ಕರಿಸುವುದ ಮಾತ್ರ ಮುದುಕಿ ಸಡಿಲಸಲಿಲ್ಲ. ಉಮೇದಿನಲ್ಲಿ ಆಕೆಯನ್ನು ಮಾತಾಡಿಸಿಯೋ… ಇಲ್ಲವೇ ಜಲಸು ಉಕ್ಕಿಸಲು ತನ್ನ ಹಳೆಯ ಪ್ರೇಯಸಿಯರ ಸಂಗಡದ ಪ್ರೇಮಪ್ರಸಂಗಗಳನ್ನು ರಸವತ್ತಾಗಿ ವಿವರಿಸಲು ತೊಡಗಿದಾಗ ಹಾಸಿಗೆಯಲ್ಲು ಬೆನ್ನುಹಾಕಿ ಮಲಗುತ್ತಿದ್ದಳು. ಮಗ ತಮಗೆ ಹೇಳದೆ ಕೇಳದೆ ಮದುವೆ ಆಗಿ ಬಂದಾಗ ತನ್ನ ತೋಳು ಹಿಡಿದು ಬಿಕ್ಕಿಬಿಕ್ಕಿ ಅತ್ತಿದ್ದವಳು… ಮಗಳ ಮದುವೆ ತನ್ನಿಷ್ಟದಂತೆ ಆದಾಗ ಹುಚ್ಚಳಂತೆ ಕುಣಿದಿದ್ದವಳು ಈಗ ಆ ಇಬ್ಬರೂ ಮಕ್ಕಳು ದೂರ ಹೋದಾಗ ತನ್ನನ್ನ ದೂರ ಮಾಡುತ್ತಿದ್ದಾಳಲ್ಲ ಎಂದು ನೊಂದುಕೊಂಡರೂ.. ಈಕೆ ನನ್ನ ನಂಬಿ ಬಂದವಳಲ್ಲವೇ..! ಎಂದುಕೊಂಡು ಹರೆಯದಲ್ಲಿ ಮದುವೆಯಾದ ಆ ದಿನಗಳ ನೆನೆದು ಖುಷಿಗೊಳ್ಳುತ್ತಿದ್ದ. ಆ ದಿನಗಳಲ್ಲಿ ನಾಚಿಕೊಳ್ಳುತ್ತಿದ್ದ ಈಕೆಗೆ ನಾನು ಸಲುಗೆ ಕೊಟ್ಟದ್ದು ಹೆಚ್ಚಾಯ್ತು ಎಂದು ತನ್ನ ತಾನೆ ಶಪಿಸಿಕೊಳ್ಳತೊಡಗಿದ.

ತನ್ನನ್ನ ನೆಗ್ಲೆಕ್ಟ್ ಮಾಡುತ್ತಾಳಲ್ಲ ಅಂತ ಸಿಟ್ಟು ಮಾಡಿಕೊಂಡು ಒಂದು ದಿನ ಆಕೆಯನ್ನು ಮಾತಾಡಿಸುವುದನ್ನೆ ಬಿಟ್ಟುಬಿಟ್ಟ. ಮನೆಯಲ್ಲಿ ಇರುವ ಎರಡು ಜೀವಾತ್ಮಗಳ ನಡುವೆ ಇಂಥದೊಂದು ಬಿಗುಮಾನ ಹುಟ್ಟಿದರೆ ಮನೆಯ ಸಂದುಗೊಂದುಗಳಲ್ಲಿನ ಮೌನ ಮನೆಯಂತ ಮನೆಯಲ್ಲ ವ್ಯಾಪಿಸತೊಡಗಿತು. ಎರಡಿದ್ದ ಇಲಿಗಳು ನಾಲ್ಕಾದವು. ಜೇಡರ ಬಲೆ ಅಟ್ಟದ ತುದಿಮುಟ್ಟಿತು. ಸಂಜೆಯ ವಿವಿಧಭಾರತಿಯ ಚಿತ್ರಗೀತೆಗಳ ನಂತರ ಜೀರುಂಡೆಯ ಸದ್ದು ಕತ್ತಲಗುಹೆಯ ಮೌನಕ್ಕೆ ಸಾತ್ ನೀಡತೊಡಗಿತು. ಮಗಳ ಫೋನ್ ಬಂದರೆ ಮಾತು ಮರೆಸಿ ಕಷ್ಟಸುಖ ಮಾತಾಡತೊಡಗಿದರು. ಅವನು ಉಂಡಾದ ಮೇಲೆ ಇವಳ ಊಟ. ಮಗರಾಯ ಅಕೌಂಟಿಗೆ ರೊಕ್ಕ ಹಾಕಿರುವ ದಿವಸ ಈಕೆ ತನ್ನ ಯಾವತ್ತಿನ ರೇಷನ್ನ ಯಾದಿಯನ್ನೂ, ಕರೆಂಟು ಮತ್ತು ಫೋನಿನ ಬಿಲ್ಲನ್ನೂ ಸಂತೆ ಚೀಲದೊಳಗೆ ತುರುಕಿ ತನಗೇನೂ ತಿಳಿದಿಲ್ಲವೆಂಬಂತೆ ಹಿತ್ತಿಲ ಕಡೆ ನಡೆದುಬಿಡುತ್ತಿದ್ದಳು. ಹೀಗೆ ಸಂತೆ ತರುವುದು ತಿಂಗಳು ಕಳೆಯುವುದು ನಡೆದಿತ್ತು.

ಆದರೆ ಒಂದು ದಿನ ಇಲಿಗಳ ಕಾಟ ಜಾಸ್ತಿ ಆಯ್ತು ಎಂದು ಮುದುಕ ತನಗೆ ತಾನೆ ಗೊಣಗಿಕೊಂಡ. ಮುದುಕಿ ಇಲಿಪಾಷಾಣವನ್ನು ಬಜ್ಜಿಯಲ್ಲಿಟ್ಟು ಅಟ್ಟದ ಕೆಳಗಿಟ್ಟು ಬಂದಳು.

ಮತ್ತೊಂದು ದಿವಸ ಈಕೆ ಬಚ್ಚಲಲ್ಲಿ ಪಾಚಿಗಟ್ಟಿದೆ ಎಂದು ಗೊಣಗಿಕೊಂಡಳಷ್ಟೆ… ಬೆಳಿಗ್ಗೆ ತಾನೆ ಜಳಕ ಮುಗಿಸಿದ್ದರೂ… ಆರ್ಪಿಕ್ ಹಾಕಿ ಬಚ್ಚಲನ್ನು ಜಳಜಳ ತೊಳೆದು ಮತ್ತೊಮ್ಮೆ ಮಡಿಯಾದ.

ಇನ್ನೊಂದು ದಿನ ಈತ ಗುಸುಗುಸು ಕೆಮ್ಮಿದಾಗ ಶುಂಠಿಚಹಾ ಮಾಡಿಕೊಂಡು ತಂದು ಮುಂದಿಟ್ಟಳು

ಹೀಗೆ ಪರಸ್ಪರ ಒಬ್ಬರಿಗೊಬ್ಬರು ಸ್ಪಂದಿಸಿದರೂ ಅವನಾಗಿಯೇ ಮಾತಾಡಿಸಲೆಂದು ಅವಳು. ಅವಳಾಗಿಯೇ ಮಾತಾಡಿಸಲೆಂದು ಇವನೂ ಜಿದ್ದಿಗೆ ಬಿದ್ದಿದ್ದರು.

ಹೀಗೆ ನಾಲ್ಕಾರು ದಿನ ಕಳೆಯಲು… ಇದ್ದಕ್ಕಿದ್ದಂತೆ ಇಲಿ ಸತ್ತ ವಾಸನೆ ಮೂಗಿಗಡರಿ ಮೌನದ ಮನೆಯಲ್ಲಿ ಉಸಿರು ಬಿಗಿಹಿಡಿದು ಬದುಕುವುದು ಅಸಹನೀಯ ಅನಿಸತೊಡಗಿತು. ಇಲಿಯೊಂದು ಪಾಷಾಣ ತಿಂದು ಸತ್ತು ಬಿದ್ದಿದೆ. ಆಕೆ ಕಂದೀಲಿನ ಬೆಳಕನ್ನ ಎತ್ತರಿಸಿ ಮೂಲೆಮೂಲೆ ಹುಡುಕುತ್ತಿದ್ದಾಗಲೆ… ಈತನೂ ತನ್ನ ಹಳೆಯ ಮೂರು ಸೆಲ್ಲಿನ ಬ್ಯಾಟರಿಯ ಹಿಡಿದು ಅಟ್ಟದ ಕೆಳಗೆಲ್ಲ ಹುಡುಕತೊಡಗಿದ. ಮನೆಯ ತುಂಬೆಲ್ಲ ಹುಡುಕಿದ ಮೇಲೆ ಇಬ್ಬರ ಕಣ್ಣು ಅಟ್ಟದ ಮೇಲೆ ಹೋಯಿತು. ಅಟ್ಟದ ಏಣಿ ಲಡ್ಡಾದ್ದರಿಂದ ಅಲ್ಲಿಗೆ ಹತ್ತಿ ಹೋಗುವುದು ಅಷ್ಟು ಸುಲಭವಿರಲಿಲ್ಲ. ಹಿಂದೊಮ್ಮೆ ಮುದುಕಿ ಅಟ್ಟದ ಮೇಲಿನ ಧೂಳು ಒರೆಸಲು ಏಣಿಯ ಮೇಲೆ ನಿಂತುದಕ್ಕೆ ಅದು ಥರಗುಟ್ಟಿತ್ತು. ಮಾತಿಲ್ಲ-ಕತೆಯಿಲ್ಲ. ಮುದುಕನ ಬ್ಯಾಟರಿ ಬೇಟೆಗೆ ಹೋಗಿ ನಿರಾಶನಾಗಿ ಹಿಂದುರುಗಿದಂತೆ ಕಪಾಟು ಸೇರಿತು. ಮುದುಕಿಯ ಕೈ ಕಸಬರಗಿ ಮನೆಯ ಮೂಲೆ ಸೇರಿತು.

ಮೂಗಿಗೆ ಅಡರುವ ವಾಸನೆಗೂ ತಿಂದ ಕೂಳಿಗೂ ಹೋಗುವ ಕಕ್ಕಸ್ಸಿಗೂ ವ್ಯತ್ಯಾಸವಿಲ್ಲದಂತೆ ಬದುಕಬೇಕಾಗಿ ಬಂದದ್ದರಿಂದ ಮುದುಕಿ ಹಾಳಾದ ಇಲಿಗಳನ್ನು ಶಪಿಸುತ್ತಿದ್ದಳು. ಮುದುಕ ವಯಸ್ಸು ಮುಗಿಯಿತಲ್ಲ ಎಂದು ಲೊಚಗುಡುತ್ತಿದ್ದ. ಆದರೂ ಒಮ್ಮೆ ಪ್ರಯತ್ನಿಸುವುದೆಂದು ಬಟ್ಟೆ ಒಣಹಾಕಲಿಕ್ಕೆ ಕಟ್ಟಿದ್ದ ಹಗ್ಗವ ತಂದು ಅಟ್ಟದ ತುದಿಯ ಜಂತಿಗೆ ಕಟ್ಟಲು ಒದ್ದಾಡಿದ. ಅದು ಹೇಗೋ ಆ ಕಂಬದ ನೆರ್ತಿಗೆ ಹಗ್ಗ ಈ ಕಡೆಯಿಂದ ಆ ಕಡೆಗೆ ಪಾಸಾಗಿದ್ದು ಕೊಂಚ ಸಮಾಧಾನವೆನಿಸಿತು. ಹಗ್ಗದ ತುದಿ ಮುಲುಕು ಗಂಟು ಹಾಕಿ ನೇಣು ಬಿಗಿದಂತೆ ಜಂತಿಗೆ ಹಗ್ಗ ಬಿಗಿಯಾಗಿಸಿದ. ಆದರೂ ಅಟ್ಟ ಏರುವುದು ಅಷ್ಟು ಸುಲಭದ್ದಾಗಿರಲಿಲ್ಲ. ಅಟ್ಟದ ಮೇಲೆ ಕಳ್ಳಹೆಜ್ಜೆಯಿಟ್ಟು ಹಗ್ಗದಲ್ಲಿಯೇ ಹೆಚ್ಚಿನ ಭಾರ ಬಿಡುವುದೆಂದು ನಿರ್ಧರಿಸಿದ. ತನ್ನ ಯಾವತ್ತಿನ ಮೂರುಸೆಲ್ಲಿನ ಬ್ಯಾಟರಿ ಹಿಡಿದು ಅಟ್ಟ ಏರಲು ಹೊರಟುದನ್ನು ಕಂಡ ಮುದುಕಿಗೆ ಇದು ಯಾಕೋ ಸರಿಹೋಗಲಾರದೆನಿಸಿತೋ ಏನೋ… ಕುತೂಹಲದಿಂದ ಜಗಲಿಯ ಆ ತುದಿಗೆ ನಿಂತು ಗಂಡನ ಸಾಹಸವನ್ನು ದಿಟ್ಟಿಸತೊಡಗಿದಳು.

ಜೀಟಿಗ್ಗಾಲು ಕೊಟ್ಟು ಹಗ್ಗದ ತುದಿ ಹಿಡಿದು ಅಟ್ಟದ ಒಂದು ಮೆಟ್ಟಿಲ ಮೇಲೆ ಕಾಲಿಟ್ಟ, ಎರಡು, ಮೂರು, ನಾಲ್ಕು, ಐದು, ಆರು… ಹೀಗೆ ಹಗ್ಗದಲ್ಲಿ ಜೋತಾಡಿಕೊಂಡು ಅಟ್ಟ ಏರಿದ ಮುದುಕ ಹಿಮಾಲಯವೇರಿದ ಸಂತಸದಲ್ಲಿ ಇಲಿಯ ಅನಾಥ ಶವವನ್ನು ಹುಡುಕಿ. ಕವರೊಂದರಲ್ಲಿ ಕೊಳೆತ ಇಲಿಯನ್ನು ಕಟ್ಟಿ ಮುದುಕಿ ನಿಂತ ಕಡೆ ತೂರಿದ. ಹುಸಿಕೋಪ ನಟಿಸುತ್ತಲೇ ಮುದುಕಿ ಮೂಗು ಮುರಿದಳು. ಹತ್ತುವಾಗ ಹತ್ತಿದ. ಇಳಿಯುವುದು ಹೇಗೆ..? ಈಗಾಗಲೇ ರಟ್ಟೆಯೊಳಗಿನ ಶಕ್ತಿಯಲ್ಲವನ್ನೂ ಹಗ್ಗದ ಮೇಲೆ ಜೋತಾಡುವುದರಲ್ಲಿ ಕಳೆದುಕೊಂಡಿದ್ದ. ಈಗ ಮತ್ತೆ ಯಥಾಪ್ರಕಾರ ಹಗ್ಗದೊಂದಿಗೆ ಇಳಿಯಲು ಹವಣಿಸಿದ. ಎರಡು ಮೆಟ್ಟಿಲಷ್ಟು ಇಳಿದ ಮೇಲೆ ಹಗ್ಗ ಹಿಡಿದ ಅಂಗೈ ಕಾವು ಏರಿದ್ದರಿಂದ ಕೈ ಸೋತಂತನ್ನಿಸಿತು ಮೂರು ಬಿಟ್ಟು ನಾಲ್ಕನೆಯ ಮೆಟ್ಟಿಲ ಮೆಲೆ ಕೊಂಚ ಸುಧಾರಿಸುವುದೆಂದು ಕಾಲೂರಿ ನಿಂತ. ಒಂದು ಕೈ ಹಗ್ಗದಿಂದ ತೆಗೆದು ಗಾಳಿ ಊದಿಕೊಂಡ. ಮತ್ತೊಂದು ಕೈಯೂ ಹಾಗೆ ಮಾಡಲಿಕ್ಕಾಗಿ ಕೈ ಬದಲಿಸುವಾಗ ಲಡ್ಡಾದ ನಾಲ್ಕನೆಯ ಮೆಟ್ಟಿಲು ಪತರಗುಟ್ಟಿತು. ಹುಸಿಕೋಪದಲ್ಲಿ ಬಾಗಿಲ ಚೌಕಟ್ಟಿಗೆ ಆತು ನಿಂತಿದ್ದವಳ ಎದೆ ಧಸಕ್ಕೆಂದಿತು. ಮುದುಕ ಅಯ್ಯೋ ಎನ್ನುವುದರೊಳಗೆ ಹಾರಿ ಬಂದ ಮುದುಕಿ ಮುದುಕನ ಕಾಲು ಹಿಡಿದು ಅಮಾತ್ತನೆ ಎತ್ತಿಕೊಂಡಿದ್ದಳು. ಮುದುಕನ ಒಂದು ಕೈ ಹಗ್ಗದ ಮೇಲಿದ್ದರೂ ಮುದುಕಿಯ ಈ ಹಿಡಿತ ಮುದನೀಡಿತು.

ಆ ದಿವಸ ಸಂತೆಯಿಂದ ಬರುವಾಗ ಮುದುಕನ ಕೈಯಲ್ಲೊಂದು ಪೊಟ್ಟಣವಿತ್ತು. ಮುಖ ಸಿಂಡರಿಸಿಕೊಂಡು ಆ ಕಡೆ ನೋಡಿದರೂ ಅದು ತನಗೆ ಸಂಬಂಧಿಸಿದ್ದಲ್ಲವೆಂದು ಮುದುಕಿ ಅಡುಗೆ ಮನೆ ಹೊಕ್ಕಳು. ಚಣ ತಡೆದು ಹಿಂದೆ ತಿರುಗಿ ಮುದುಕಿ ನೋಡಿದಳು. ಮುದುಕ ಆ ಪೊಟ್ಟಣದೊಳಗೆ ತಂದಿದ್ದ ಮಲ್ಲಿಗೆಯನ್ನು ಸಿನಿಮಾದ ಹೀರೋನಂತೆ ತನ್ನ ಬಲಗೈ ಮುಂಗೈಗೆ ಸುತ್ತಿಕೊಂಡು ಅಡುಗೆಯ ಮನೆ ಹೊಕ್ಕ. ಹಿಂದಿನಿಂದ ಬಳಸಿ ಬಿಗಿದಪ್ಪಲು ಪ್ರಯತ್ನಸಿದ… ಎತ್ತಿದ ಕೈ ಎತ್ತಿದಂತೆ ನೆಲಕ್ಕೆ ಕುಸಿದು ಬಿದ್ದ. ಆಕೆಯೆ ಹಾಗೋ ಹೀಗೋ ಒದ್ದಾಡಿ ಆಸ್ಪತ್ರೆಗೆ ಸಾಗಿಸಿದಳು. ಸಾವಿನ ಮನೆಯ ಗುಹೆ ಹೊಕ್ಕಿದ್ದ ಗಂಡನನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ.

ಮುಂದೆ ಮಗನೂ ಮಗಳು ಸೇರಿ ವೃದ್ಧಾಶ್ರಮದಲ್ಲಿ ಇರುವಂತೆ ಒತ್ತಾಯಿಸಿ, ಒಂದು ಆಶ್ರಮವನ್ನು ಗೊತ್ತು ಮಾಡಿ ದೂರದೂರದ ದೇಶಕ್ಕೆ ಹಾರಿ ಹೋದರು. ಎಲ್ಲ ನೆನಪುಗಳ ಬುತ್ತಿ ಕಟ್ಟಿಕೊಂಡು ಮುದುಕಿ ಊರ ಹೊರಗಿನ ಪ್ರಶಾಂತ ಬಯಲಿನ ಆಶ್ರಮದಲ್ಲಿ ಬದುಕಿಲ್ಲದ ಗಂಡನ ನೆನೆದು ಬಿಕ್ಕುತ್ತಿದ್ದಳು. ಆ ಆಶ್ರಮದ ಸೆಕ್ಯೂರಿಟಿಯೂ, ಗಾರ್ಡನ್ ಕುಶಲಿಯೂ, ಅಡುಗೆ ಭಟ್ಟನೂ ಮತ್ತು ತನ್ನದೆ ವಯಸ್ಸಿನ ಹತ್ತಾರು ಮುದುಕ ಮುದುಕಿಯರ ಎಲ್ಲಾ ಕತೆಗಳಿಗೂ ಮುಪ್ಪೊಂದೆ ತಲೆಬರಹವಾಗಿ ಕಾಣಿಸುತ್ತಿತ್ತು. ಅಲ್ಲಿ ತನ್ನದು, ತನ್ನ ಗಂಡನದು ಮಗನದು, ಮಗಳದು ಎಂದು ಮಾಡಿಟ್ಟ-ಕೂಡಿಟ್ಟ ಬದುಕಿಗಿಂತ ಆಶ್ರಮದ ಈ ಒಡನಾಟ ದೊಡ್ಡದೆನಿಸತೊಡಗಿತು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s