ಜಾತಿ ಮೇಲಾಟ – ಈ ಸಂಘರ್ಷಗಳಿಗೆ ಕೊನೆ ಎಂದು..? July 24, 2013


ಸಾಮಾಜಿಕ ಬದಲಾವಣೆ ಅನ್ನುವುದು ಬರೀ ಭಾವನಾತ್ಮಕ ಗೇಯವಾಗಿ, ಸಂದರ್ಭನುಸಾರ ಆದರ್ಶದ ಮಾತಾಗಿ, ಗೆಳೆತನದಲ್ಲಿ ಜಾತಿ ನಿರ್ಲಕ್ಷಿಸುವ ಜಾಣಕುರುಡಾಗಿ ಮಾತ್ರ ಕಾಣುತ್ತದೆ. ಇರುವುದೆಲ್ಲವೂ ಹೇಗಿತ್ತೋ ಹಾಗೆ ಇರಬೇಕೆಂದು ಬಯಸುವವರ ಗುಂಪುಗಳು ಸಂಶೋಧನಾತ್ಮಕ ಚಟುವಟಿಕೆಯಲ್ಲಿ ತೊಡಗಿಕೊಂಡಿವೆ. ಜಾತಿಯ ಕುರುಹುಗಳು ಪತ್ರಿಕೆಗಳ ಒಳಪುಟದಲ್ಲಿ ಮಾತ್ರ ಪ್ರಕಟಗೊಂಡು ಘಟನೆಗಳು ತಣ್ಣಗಾಗುತ್ತಿವೆ. devdasiಆದರೆ ಬದಲಾಗುತ್ತಿರುವ ಸಾಮಾಜಿಕ ಸಂದರ್ಭದಲ್ಲಿ ದಲಿತ ಮಹಿಳೆಯರು ನಿಜಕ್ಕೂ ಸುರಕ್ಷಿತವಾಗಿಲ್ಲ. ಅದು ಗ್ರಾಮಭಾರತದಲ್ಲಿ ದಲಿತ ಮಹಿಳೆಯರ ಬದುಕು ಇಂದಿಗೂ ಸುಧಾರಣೆ ಕಂಡಿಲ್ಲ. ಸೇವೆಯ ಹೆಸರಿನಲ್ಲಿ ದೇವದಾಸಿ ಪದ್ಧತಿಯನ್ನು ಉಳಿಸಿಕೊಂಡು ಬಂದಿದ್ದವರು ಈಗ ದಲಿತ ಹೆಣ್ಣುಮಕ್ಕಳನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂಬುದು ಮೌನದ ನಾಗರೀಕ ಲಕ್ಷಣವಾಗಿದೆ. ಆಕೆ ಮದುವೆಯಾಗಿ ಮಕ್ಕಳನ್ನು ಹೊಂದಿದ್ದೂ ಯಾವನೋ ಮಲಗಲು ಕರೆದಾಗ ಹೋಗಲು ನಿರಾಕರಿಸಿದರೆ ಅತ್ಯಾಚಾರವಾಗುತ್ತದೆ. ಹೇಳಿಕೊಂಡರೆ ಗಂಡನಿಂದ ಸೋಡಚೀಟಿ ಪಡೆಯಬೇಕು. ಸಮಾಜದ ಕೊಂಕು ಮಾತುಗಳಿಗೆ ತುತ್ತಾಗಬೇಕು, ಗಂಡನ ಮನೆಯವರ ತಿರಸ್ಕಾರ ಅನುಭವಿಸಬೇಕು ಇಲ್ಲವೇ ಅತ್ಯಾಚಾರವನ್ನು ಗುಲ್ಲು ಮಾಡದೆ ಸಹಿಸಿಕೊಂಡು ಹೊಗಬೇಕು. ಇದೆಲ್ಲದರ ಹಿಂದೆ ಸಾಮಾಜಿಕ ಸ್ಥಾನಮಾನಗಳು, ಗೌರವ-ಮರ್ಯಾದೆಗಳು, ಭಯ-ಭಕ್ತಿ ಅಂಜಿಕೆಯ ಭಾವಗಳು ಸಂಚರಿಸುತ್ತಿರುತ್ತವೆ. ಆ ಮೌನದ ನೊಂದ ಜೀವಗಳು ತಮ್ಮ ಒಡುಲುರಿಯ ಸ್ಫೋಟಕ್ಕೆ ಸಿದ್ಧಗೊಳ್ಳುತ್ತಿರುವ ಈ ಹಂತದಲ್ಲಿ ದೌರ್ಜನ್ಯದ ನಾನಾಮುಖಗಳೂ ಗೋಚರಿಸುತ್ತಿವೆ. ಆ ಘಟಣೆಗಳಿಗೆ ಯಾವ ಸಂಶೋಧನೆಯ ಬಣ್ಣಹಚ್ಚಿದರೂ ಜಾತಿ ಕಾರಣ ಎಂಬುದು ಸ್ಪಷ್ಟವಾಗಿದೆ.

ರಾಯಚೂರು, ಬೀದರ, ಗುಲ್ಬರ್ಗಾ, ಕೊಪ್ಪಳ, ಬಳ್ಳಾರಿ, ಬಿಜಾಪೂರ ಜಿಲ್ಲೆಗಳಲ್ಲಿನ ದಲಿತ ಹೆಣ್ಣುಮಕ್ಕಳ ಆತಂಕಕ್ಕೆ ಕೊನೆಯಿಲ್ಲ. ಆದಿಶಕ್ತಿಯ ಹೆಸರನ್ನು ಮುಂದೆ ಮಾಡಿಕೊಂಡು ಬಸವಿ ಬಿಡುವ ಆಚರಣೆ ಕಳ್ಳತನದಲ್ಲಿ ನಡೆಯುತ್ತಿರುವುದು ಇಂದಿಗೂ ನಿಂತಿಲ್ಲ. ಗೆಳೆಯ ಪಂಪಾರಡ್ಡಿ ಮೊನ್ನೆಯಷ್ಟೆ ದೇವದಾಸಿ ಬಿಡುತ್ತಿದ್ದ ಹುಡುಗಿಗೆ ಮದುವೆ ಮಾಡಿಸಿದರು. ಮರಿಯಮ್ಮನಹಳ್ಳಿಯ ಆರನೇ ವಾರ್ಡಿನಲ್ಲಿ ಆಡುವ ಎಷ್ಟೋ ಮಕ್ಕಳಿಗೆ ತಂದೆ ಯಾರೆಂಬುದು ಗೊತ್ತಿಲ್ಲ. ವಿಸ್ತಾರದಲ್ಲಿ ಬೆಳೆಯುತ್ತಿರುವ ಅಸಂಖ್ಯ ಮಕ್ಕಳ ಕತೆಗಳು ಅಪೌಷ್ಟಿಕವಾಗಿರುವ ಬದುಕಿನ ಚಿತ್ರಣವನ್ನು ನೀಡುತ್ತವೆ. ಹೀಗಿರುವಾಗ ಈ ದೇಶದ ಚರಿತ್ರೆಯಲ್ಲಿನ ಅಸ್ಪೃಶ್ಯತೆಯ ರೂಪಗಳು ಜಾತಿಯಿಂದ ಜಾತಿಯ ಕಾರಣಕ್ಕಾಗಿ ಸೃಷ್ಟಿಯಾದುದಲ್ಲ ಎಂದು ಹೇಗೆ ನಿರ್ಧರಿಸಲಾಗುತ್ತದೆ.

ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಚಿಕ್ಕಕಡಬೂರು ಗ್ರಾಮದಲ್ಲಿ ಮೊನ್ನೆಯಷ್ಟೆ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಯಿತು. ಅದು ಜಾತಿಯ ಕಾರಣಕ್ಕಾಗಿಯೇ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಶಂಕ್ರಮ್ಮ ಎಂಬ ದಲಿತ ಹೆಣ್ಣುಮಗಳನ್ನು ಲೈಂಗಿಕ ತೃಷೆಗಾಗಿ ಕಾಡಿಸುತ್ತಿದ್ದ ದಲಿತೇತರ ಜನಾಂಗದ ವ್ಯಕ್ತಿಯೊಬ್ಬ ಕುಂಟಲಗಿತ್ತಿ ಮೂಲಕ ಆಕೆಗೆ ಎರಡು ಸಾವಿರ ರೂಪಾಯಿ ದುಡ್ಡಿನ ಆಸೆ ತೋರಿಸಿ ಮಲಗಲು ಕರೆದಿದ್ದಾನೆ. ಆ ಹೆಣ್ಣುಮಗಳು ಈ ವಿಷಯವನ್ನು ಗಂಡ ಬಸವರಾಜನಿಗೆ ಹೇಳಿದಾಗ ಆತ ಬಳಗಾನೂರು ಠಾಣೆಯಲ್ಲಿ ಆ ವ್ಯಕ್ತಿಯ ಮೇಲೆ ಕೇಸು ದಾಖಲಿಸಿದ್ದಾನೆ. ಅದು ಊರಿನಲ್ಲಿರುವ ಕುಲಬಾಂಧವರ ಗೌರವವನ್ನು ಮಣ್ಣುಗೂಡಿಸಿತೆಂದು ಮತ್ತೊಬ್ಬ ತನ್ನ ಸಮಾಜದ ದೊಣ್ಣೆನಾಯಕ ಬಸವರಾಜ ರೂಡಲಬಂಡ ಎಂಬಾತ ತನ್ನ ಜಾತಿಯ ಹುಡುಗರನ್ನೆಲ್ಲ ಸೇರಿಸಿಕೊಂಡು ಕೇಸು ದಾಖಲಿಸಿದ ತಪ್ಪಿಗಾಗಿ ಆ ಊರಿನಲ್ಲಿರುವ ಎಲ್ಲ ದಲಿತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಸ್ವಕೋಮಿನ ವ್ಯಕ್ತಿಯದು ತಪ್ಪಿದೆ ಎಂಬುದು ಅರಿವಿದ್ದರೂ “ದಲಿತರದ್ದು ಭಾರಿ ಸೊಕ್ಕಾಗಿದೆ” ಎಂಬ ಕಾರಣ ನೀಡಿ ಜಾತಿ ಕಾರಣಕ್ಕಾಗಿಯೇ ಈ ಹಲ್ಲೆಯನ್ನು ಮಾಡಲಾಗಿದೆ. caste-riot-policeನೂರಿಪ್ಪತ್ತು ಮನೆಗಳಿರುವವರು ಕೇವಲ ಎಂಟು ದಲಿತರ ಕುಟುಂಬಗಳ ಮೇಲೆ ಹಲ್ಲೆ ಮಾಡಿದ್ದಾರೆ. ಆ ದಿವಸ ಪೋಲಿಸರು ಬರುವುದು ಹತ್ತು ನಿಮಿಷ ತಡವಾಗಿದ್ದರೆ ನಮ್ಮೆಲ್ಲರ ಹೆಣಗಳು ಬೀಳುತ್ತಿದ್ದವು ಎಂದು ಹೇಳುವ ಹನಮಂತಪ್ಪನ ದ್ವನಿಯಲ್ಲಿ ಆ ರೋಷದ ಕಾವು ಕೇಳುತ್ತದೆ. ಹತಾಶರಾದ ಎಂಟು ಕುಟುಂಬದ ಸದಸ್ಯರು ಆ ಊರೊಳಗೆ ಉಳಿಯುವುದಿಲ್ಲವೆನ್ನುತ್ತಿದ್ದಾರೆ. ದ್ವೇಷವನ್ನು ಉಡಿಯಲ್ಲಿ ಕಟ್ಟಿಕೊಂಡು ಈ ಲಜ್ಜೆಗೆಟ್ಟವರ ಜಾತಿ ಅಹಂಕಾರದ ಜೊತೆ ಸಹಬಾಳ್ವೆ ಮಾಡುವುದಾದರೂ ಹೇಗೆ..? ಸಹನೆಯಿಂದ ಬದುಕಿದರೂ ನಮ್ಮ ಹೆಣ್ಣುಮಕ್ಕಳು ಸುರಕ್ಷಿತವಾಗಿರುತ್ತಾರೆಂದು ನಂಬುವುದು ಹೇಗೆ..? ಈ ಎಲ್ಲ ಪ್ರಶ್ನೆಗಳ ನಡುವೆ ರಾಜಿಮಾಡಿಕೊಂಡು ಬದುಕಲಾದೀತೆ.

ಈಗ ಹಳ್ಳಿಗಳಲ್ಲಿರುವ ಜಾತಿಯಾಧಾರಿತ ಓಣಿಗಳು ಒಂದಾಗುವುದು ಯಾವಾಗ..? ಈಗ ಮೊದಲಿನ ಹಾಗೇನೂ ಇಲ್ಲ ಎನ್ನುವ ಮನಸ್ಸನ್ನು ಚಿವುಟಿದರೆ ನೋವಾಗುತ್ತದೆ. ಕೆಲವು ಗುಂಪಿನ ಕೆಲವು ಕೋಮಿನ ವಿಷವರ್ತುಲಗಳು ಜಾಗೃತಗೊಂಡು ಸಂಪ್ರದಾಯಗಳನ್ನು ಜತನದಿಂದ ಕಾಯ್ದುಕೊಳ್ಳಲು ಹವಣಿಸುತ್ತವೆ. ಮದುವೆಯ ದಿನ ಆರುಂಧತಿ ವಸಿಷ್ಠರ ನಕ್ಷತ್ರ ತೋರಿಸುವಾಗ ‘ಆರುಂಧತಿಯ ಹಾಗೆ ಬಾಳು’ ಎಂದು ಪುರೋಹಿತ ಪಾಮರರು ಆಶೀರ್ವದಿಸುತ್ತಾರೆ. ಆದರೆ ವಾಸ್ತವದಲ್ಲಿ ಅದೆ ಪುರೋಹಿತಶಾಹಿಗಳು ತಮ್ಮ ಮನೆಗೆ ಅರುಂಧತಿ ಜಾತಿಗೆ ಸೇರಿದ ಹೆಣ್ಣುಮಗಳನ್ನು ಸೊಸೆಯಾಗಿ ತಂದುಕೊಳ್ಳಲಾರರು. ಆದರ್ಶಕ್ಕಷ್ಟೆ ಪುರಾಣಗಳನ್ನು ಕೇಳುವ ಈ ಅಸಮಾನತೆಯ ಸಂಪ್ರದಾಯಕ್ಕೆ ಕೊನೆಯೆಂಬುದಿಲ್ಲವಾಗಿದೆ. ಈವರೆಗೂ ದಲಿತ-ಬ್ರಾಹ್ಮಣರ ಅಥವ ದಲಿತ-ಮೇಲ್ಜಾತಿಗಳ ಹೆಣ್ಣು ಗಂಡಿನ ಸಂಬಂಧಗಳಲ್ಲಿ ಬರೀ ಬ್ರಾಹ್ಮಣರ/ಮೇಲ್ಜಾತಿಯ ಹೆಣ್ಣುಮಕ್ಕಳು ದಲಿತ ಗಂಡಸರನ್ನು ಮದುವೆ ಮಾಡಿಕೊಂಡಿದ್ದಾರೆ ಹೊರತು ಎಷ್ಟು ದಲಿತರ ಹೆಣ್ಣುಮಗಳು ಬ್ರಾಹ್ಮಣರ/ಮೇಲ್ಜಾತಿಯವರ ಸೊಸೆಯಾಗಿ ಹೋದದ್ದಿದೆ? caste-clashesಇಂಥ ಕೊಡುಕೊಳ್ಳುವಿಕೆಯನ್ನು ನಿರಾಕರಿಸುವ ಸಮಾಜದಲ್ಲಿ ದಲಿತ ಹೆಣ್ಣುಮಕ್ಕಳು ಇಂದು ಸುರಕ್ಷಿತವಾಗಿದ್ದಾರೆಂದು ಹೇಗೆ ಹೇಳುವುದು..? ಹರಿದ ಕುಪ್ಪಸ ಸೀರೆಯತ್ತ ಕಳ್ಳ ಕಣ್ಣಿಡುವುದು ಕೂಡ ಗ್ರಾಮಭಾರತದಲ್ಲಿ ಬಡತನ, ವಿಧವೆ, ಅನಾಥೆ ಅಥವಾ ಜಾತಿಕಾರಣದಿಂದಲೆ ಅಲ್ಲವೇ..? ಇಂಥ ಮನಃಸ್ಥಿತಿ ಹೆಪ್ಪುಗಟ್ಟಿರುವ ಸಮಾಜದಲ್ಲಿ ಸಮಸಮಾನತೆಯ ಕನಸು ಕಾಣುವವರು ಎಲ್ಲವೂ ಸರಿಯಾಗಿದೆ ಎಂಬ ಭ್ರಮೆಯ ಆದರ್ಶದಲ್ಲಿ, ಅಕ್ಷರದ ಅಹಂಕಾರದಲ್ಲಿ ಬದುಕುವುದನ್ನು ವಿಮರ್ಶಿಸಿಕೊಳ್ಳಬೆಕಾಗಿದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s