ನಿರಾಶ್ರಿತನ ಸ್ವಗತ


ಆಗಸ ಮುಸುಕಿದಾಗೊಮ್ಮೆ ಮನಸ್ಸು ಜಡ
ಈ ಬಯಲಿಗೆ ಬೆಲೆ ಇರುವುದಿಲ್ಲ
ಅರಸನಂತಿದ್ದ ದಿರಿಸು ಸಾಕಾಗುವುದಿಲ್ಲ

ಅತ್ತಿಂದಿತ್ತ ಎಡತಾಕಿ ಇಲ್ಲಿ ಆಸ್ಥಾನ ಮಾಡಿಕೊಂಡರೆ
ತಳ್ಳುಗಾಡಿಯವನ ವ್ಯಾಪಾರಕ್ಕಡ್ಡಿಯಾಯ್ತು
ಅಲ್ಲಿ ಹಾಸಿಕೊಂಡರೆ ಪಾದಚಾರಿಗೆ ತೊಡಕು
ಗಾಂಧಿಚೌಕಿನ ಮುಂದೆ ಪಾಜಗಟ್ಟಿ ಮಾಡಿಕೊಂಡ
ಅಸಂಖ್ಯರೊಟ್ಟಿಗೆ ಬದುಕಬೇಕೆಂದರೆ
ಗೇಣು ಜಾಗಕ್ಕೆ ಕಚ್ಚಾಟ ಗೊಣಗಾಟ
ಪುಟ್ಟ ಹೃದಯಕ್ಕೆ ಜಾಗ ಎಷ್ಟು ಬೇಕು ?

ನಿರಾಶ್ರಿತರ ಆಶ್ರಯದಲ್ಲೊಂದು ಸುತ್ತು
ನೊಣಗಳ ಸಂಗತಿ ಹಂಚಿಕೊಂಡ ಹೊತ್ತು
ಇದಕಿಂತ ಆಗಸ ಹೊದಿಕೆಯ ಅರಮನೆ ಲೇಸೆನಿಸಿತ್ತು.
ಕೈಕಾಲಿಗೊಂದೊಂದು ಬಟ್ಟೆತುಂಡುಗಳು
ಹರಿದ ಪ್ಲಾಸ್ಟಿಕ್ ಚೀಲಗಳು,
ನೆಲಹಾಸಿನ ತಟ್ಟು
ಸಣ್ಣ ಗಿಂಡಿ-ಬಟ್ಟಲು ಹಾಯಾಗಿ ಬದುಕಲು ಇನ್ನೇನು ಬೇಕು?

ಸುಂದುಬಡಿವ ಹುಂಡುಗಾಳಿಗೆ
ಮುಖ ಹೊಟ್ಟೆ ಕಣ್ಣುಗಳ ಕುರುಹು ಇಲ್ಲ
ನುಗ್ಗಿದತ್ತ ನಡೆವ ಒತ್ತಿದತ್ತ ತೂರುವ ಈ ಚಹರೆ
ಯಾವ ನೆರಳಲ್ಲೂ ಬೆಚ್ಚನೆಯ ಜಾಗ ಉಳಿಸಲ್ಲ
ಈಗ ಅರಮನೆಯ ತುಂಬೆಲ್ಲ ಪುಟ್ಟಪುಟ್ಟ ಗೂಡುಗಳು
ಹಣಿಯುವ ಜಿಟಿಜಿಟಿ ಮಳೆಗೆ ಆಸರೆ ಸಿಕ್ಕಲಾರದು.

ಅನ್ನಛತ್ರಗಳು, ಧರ್ಮಛತ್ರಗಳು
ಗುಡಿಗುಂಡಾರ ಮಸೀದಿ ಗೋಡೆಯ ಆಸರೆ ಕನಸಾಗಿದೆ.
ಧರ್ಮಶಾಲೆ ಸಮಾಜಮಂದಿರಗಳಲ್ಲೆಲ್ಲ
ಜನಮರಳೋ ಜನಮರಳು
ನಿಲ್ಲಲು ಜಾಗವಿಲ್ಲ ಕೂರಲು ಜಾಗವಿಲ್ಲ

ಈ ಮನುಷ್ಯನಿಗೆ ಭೂಮಿ ಎಷ್ಟು ಬೇಕು?
ಪುಟ್ಟ ಹೃದಯಕ್ಕೆ ಜಾಗ ಎಷ್ಟು ಬೇಕು?
ಚಳಿ, ರಾತ್ರಿ ಕಳೆದು ಬೆಳಗಾಗಬೇಕಷ್ಟೆ
ಹಿಡಿದ ಮಳೆ ಸರಿಯುವತನಕ ಆಸರೆಬೇಕಷ್ಟೆ

ಈ ಮಳೆಗಾಲ ಕಳೆಯಲಿ
ಬೇಸಗೆಯ ಆಗಸಕ್ಕೆ ನಾನೇ ರಾಜ
ಈ ಬಯಲಿನ ಯಾವ ಮೂಲೆಯಾದರೂ ಆಸ್ಥಾನವಾದೀತು..!

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s