ಆ ದಿನಗಳು


ಆಗ ಊರೂರಿಗೆ ಸರ್ಕಸ್ ಮತ್ತು ಡೊಂಬರಾಟದ ಸಣ್ಣಪುಟ್ಟ ತಂಡಗಳು ಬರುತ್ತಿದ್ದವು. ಓಣಿಗಳು ಸೇರುವ ಒಂದು ಕೂಟಿನ ಜಾಗೆಯನ್ನು ಪಾಜಗಟ್ಟಿ ಮಾಡಿಕೊಂಡು ಆ ತಂಡದವರು ತಮ್ಮ ಕಸರತ್ತುಗಳನ್ನು ಮಾಡಿ ತೋರಿಸುತ್ತಿದ್ದರು. ಸರ್ಕಸ್ ಮುಗಿದಾದ ಮೇಲೆ ಒಂದು ತಟ್ಟೆ ಹಿಡಿದೋ, ಬಟ್ಟೆ ಹಿಡಿದೋ ಪ್ರತಿಯೊಬ್ಬ ಪ್ರೇಕ್ಷಕನ ಮುಂದೆ ನಿಂತು ಹಣ ಪಡೆದು ಹೋಗುತ್ತಿದ್ದರು. ಅವರು ಆ ಜಾಗಾ ಖಾಲಿ ಮಾಡಿದರೂ ಒಂದು ಪಾತ್ರ ಮಾತ್ರ ನಮ್ಮಿಂದ ದೂರ ಹೋಗುತ್ತಿರಲಿಲ್ಲ ನಾನಾ ನಮೂನೆಯ ಲಾಗಾ-ಪಲ್ಟಿ ಹಾಕುವ ಹುಡುಗರು, ಒಂದೇ ಕಬ್ಬಣದ ಬಳೆಯಲ್ಲಿ ಮೂರು ಮೂರು ಜನ ತೂರಿಕೊಂಡು ಪಾರಾಗುವ, ಬೆಂಕಿ ಉಂಡೆಯನ್ನು ಕೈಯಲ್ಲಿ ಹಿಡಿದು ಮನರಂಜಿಸುವ, ತಂತಿ ಮೇಲೆ ಸೈಕಲ್ಲು ಓಡಿಸುವ ಡ್ರಮ್ಮಿನ ಬಡಿತಕ್ಕೆ ಸಣ್ಣ ಮಕ್ಕಳು ಕುಣಿಯುವ ಪಾತ್ರಗಳು ಅಲ್ಲಿರುತ್ತಿದ್ದವು. ಆದರೆ ಆ ಎಲ್ಲ ಕಸರತ್ತುಗಳನ್ನು ನವಿರಾದ ಹಾಸ್ಯದ ಲೇವಡಿ ಮೂಲಕ ಪ್ರೇಕ್ಷಕರ ಪರವಾಗಿ ನಿಂತು ಮಾತಾಡಿ ರಂಜಿಸುತ್ತಿದ್ದ ಚಪಾತ್ಯಾ ಪಾತ್ರ ಖುಷಿಕೊಡುತ್ತಿತ್ತು. ಅವರು ಮಾಡುವ ಸಾಹಸಗಳನ್ನು ನಾನೂ ಮಾಡುತ್ತೇನೆಂದು ಹೋಗಿ ಅದು ಸಾಧ್ಯವಾಗಲಾರದೆ ಒದ್ದಾಡುತ್ತಿದ್ದ ಚಪಾತ್ಯಾ ಬಹಳ ಮಜ ಕೊಡುತ್ತಿದ್ದ. ದನ ಕಾಯಲು ಹೋಗುತ್ತಿದ್ದ ನನಗೆ ಅನುಕರಣೆಯ ಮೊದಲ ಪಾತ್ರವಾಗಿದ್ದವನೂ ಇದೆ ಚಪಾತ್ಯಾ. ದನಗಾಹಿಗಳ ಸಾಂಸ್ಕೃತಿಕ ಸಂಘದ ಸದಸ್ಯರಾದ ನಾವು ಮಾರನೇದಿನವೋ ಅಥವಾ ಶಾಲೆಯ ರಜೆಯ ನಿಮಿತ್ತ ದನಕಾಯುವ ಡ್ಯೂಟಿಯಲ್ಲಿದ್ದಾಗಲೋ ಆ ಇಡೀ ಸರ್ಕಸ್ ಅಜ್ಜಪ್ಪನ ಗುಡ್ಡದಲ್ಲಿ ನಮ್ಮ ಆಟವಾಗಿ ಬಿಡುತ್ತಿತ್ತು. ಅಷ್ಟೆ ಅಲ್ಲದ ಊರಿನಲ್ಲಿ ಆಡುತ್ತಿದ್ದ ಪಾರಿಜಾತ, ಸಂಗ್ಯಾಬಾಳ್ಯಾ ಮತ್ತು ಹಳ್ಳಿಯಿಂದ ದಿಲ್ಲಿವರೆಗೆ ಎಂಬ ಸಾಮಾಜಿಕ ಸಣ್ಣಾಟವೂ ಸೇರಿದಂತೆ ಅಲಿಫಲೈಲಾ, ರಾಮಾಯಣ, ಮಹಾಭಾರತ ದಾರಾವಾಹಿಗಳನ್ನು ಗುಡ್ಡದಲ್ಲಿ ಆಟವಾಗಿ ಆಡುತ್ತಿದ್ದ ದಿನಗಳು ಇಂದಿಗೂ ಕಣ್ಣಮುಂದೆ ಕಟ್ಟಿದಂತಿವೆ.

ಅದೇ ಬಾಲ್ಯದಲ್ಲೇ ಗಂಡ-ಹೆಂಡತಿ ಆಟ, ಮನೆ ಕಟ್ಟುವ, ಜಾತ್ರೆ ಮಾಡುವ, ಮದುವೆ ಮಾಡುವ, ಬೀಗರು ಬಿಜ್ಜರ ನಡುವೆ ಹೆಣ್ಣುಗಂಡಿನ ಕಡೆಯವರೆಂದು ಕಿತ್ತಾಡುವ ಆಟಗಳನ್ನು ಆಡುತ್ತಲೆ ಬದುಕನ್ನು ಪ್ರೀತಿಸುವುದನ್ನು ಕಲಿಯುತ್ತಿದ್ದೆವು. ಸಣ್ಣವರು ಥೇಟ್ ದೊಡ್ಡವರಂತೆ ವರ್ತಿಸಲು ಬಯಸುತ್ತಿದ್ದ ಆಗಿನ ಆಟಗಳು ಈಗ ನಿಜ ಜೀವನದಲ್ಲಿ ಎದುರಾದಾಗ ಎಷ್ಟು ಭಾರವಾಗಿ ಕುಳಿತುಬಿಡುತ್ತೇವೆ. ಸುತ್ತಲು ಕಂಡ ಬದುಕು ಆಟವಾಗಿ ಮಾರ್ಪಾಡಾಗುತ್ತಿತ್ತು. ಬುದ್ದಿ ತಿಳಿಯುತ್ತಿದ್ದಂತೆ ಖಂಬೀರರಾಗಿ ಆ ಬಾಲ್ಯವನ್ನು ಎಲ್ಲೋ ಕಳೆದುಕೊಂಡೆವು ಅನಿಸಿದರೂ ಆ ನೆನಪುಗಳು ಮುದಗೊಳಿಸುತ್ತವೆ. ಆ ನೆನಪುಗಳೇ ಎಷ್ಟೋ ಸಲ ನಾಟಕದ ಮತ್ತೊಂದು ಪಾತ್ರವಾಗಿಬಿಡುತ್ತವೆ. ಇದೆಲ್ಲ ಒಂದು ಹಂತದವರೆಗಿನ ಬಾಲ್ಯದ ಆಟದ್ದಾದರೆ. ಅತ್ತ ದೊಡ್ಡವರೂ ಆಗದ ಇನ್ನೂ ಬಾಲ್ಯವನ್ನೂ ದಾಟದಿರುವ ಹೊತ್ತಿನಲ್ಲಿ ಇನ್ನೊಂದು ರೀತಿಯಲ್ಲಿ ಆಟವನ್ನು ಬೆಳೆಸಿದೆವು.

ನಮ್ಮೂರ ಪಕ್ಕದಲ್ಲೊಂದು ಗೊಡಚಿ ವೀರಭದ್ರ ದೇವಸ್ಥಾನವಿದೆ. ಮನೆ ದೇವರಾದ್ದರಿಂದ ವರ್ಷಂಪ್ರತಿ ಮನೆಮಂದಿಯಲ್ಲ ಜಾತ್ರೆಗೆ ಹೋಗುತ್ತಿದ್ದೆವು. ಅಲ್ಲಿಗೆ ಲಕ್ಷಾಂತರ ಜನರು ವರ್ಷಕ್ಕೊಮ್ಮೆ ಬರುತ್ತಾರೆ. ಪುರವಂತಿಕೆ ಇರುವ ಕುಟುಂಬಗಳವರು ಅಲ್ಲಿ ಬಂದು ಗುಗ್ಗಳ ಮುಗಿಸಿ ದೇವರಿಗೆ ನೈವೇದ್ಯ ನೀಡಿ ಒಬ್ಬ ಅಯ್ಯನಾರ(ಹಿರೇಮಠ ಸ್ವಾಮಿಗಳು)ನನ್ನು ತಮ್ಮ ಬಿಡಾರಕ್ಕೆ ಕರೆದು ಪೂಜೆ ಮಾಡಿಸಿಸಿ, ಆತನಿಗೆ ದಕ್ಷಿಣೆ ಕೊಟ್ಟು ಆತ ಪ್ರಸಾದ ಸ್ವೀಕರಿಸಿದ ಮೇಲೆ ಮನೆಯವರೆಲ್ಲ ಊಟ ಮಾಡುವುದು ವಾಡಿಕೆ. ಆದರೆ ಆ ಲಕ್ಷಾಂತರ ಭಕ್ತರಿಗೆ ಸ್ವಮ್ಯಾರು ಸಿಕ್ಕೋದು ಅಂದ್ರೆ ಕಷ್ಟದ ಮಾತಾಗಿರುತ್ತದೆ. ಅವರು ಬಂದು ಪ್ರಸಾದ ಮಾಡದಿದ್ದರೆ ಮನೆಯವರು ಊಟ ಮಾಡುವ ಹಾಗಿರುವುದಿಲ್ಲ. ಕೆಲವೇ ಕೆಲವು ಮಂದಿ ಎಷ್ಟು ಮನೆಗಳ ಬಿನ್ನಾಯ ತೀರಿಸಬಲ್ಲರು ಹೇಳಿ..? ಹಾಗಾಗಿ ನಾವು ದನಗಾಹಿ ಗೆಳೆಯರು ಸಣ್ಣವರಿದ್ದಾಗ ಕಲಿತಿದ್ದ ಅನುಕರಣೆಯ ವ್ಯವಸಾಯ ಇಲ್ಲಿ ಕೆಲಸಕ್ಕೆ ಬರುವಂತಾಗುತ್ತಿತ್ತು. ಆಗ ಪಕ್ಕಾ ವೇಷಭೂಷಣ ಸಹಿತ ಹೆಗಲಿಗೊಂದು ಪೂಜಾ ಟವೆಲ್ಲು, ಹಣೆತುಂಬ ವಿಭೂತಿ, ಕೊರಳಲ್ಲೊಂದು ರುದ್ರಾಕ್ಷಿ ಮತ್ತು ಹೇಗೂ ಗುಗ್ಗಳಕಾರ್ಯದಲ್ಲಿ ಜಂಗಮರು ಕೊಡುವ ದೀಕ್ಷೆಯ ಗುಂಡಗಡಗಿಯ ಲಿಂಗವು ಕೊರಳಲ್ಲಿ ಇದ್ದೇ ಇರುತ್ತಿತ್ತು. ಹಿಂಗ ಆಟದ ಎರಡನೆಯ ಭಾಗದಲ್ಲಿ ಸುಳ್ಳು ಜಂಗಮರಾಗಿ ದಕ್ಷಿಣೆ ಎತ್ತುವುದನ್ನು ರೂಢಿಸಿಕೊಂಡಿದ್ದೆವು. ಇಂಥ ಆಟಗಳಲ್ಲಿ ಯಾವ ಮೋಸವೂ ಇರುತ್ತಿರಲಿಲ್ಲ. ಜೇಬಿಗೆ ಜೇಬು ತುಂಬುತ್ತಿತ್ತು.. ಭಕ್ತನ ಸಂಕಟವೂ ನೀಗುತ್ತಿತ್ತು.

ಆ ದಿನಗಳು ನೆನಪಾಗುತ್ತಿದ್ದಂತೆ ದೊಡ್ಡವರು ಹಾಕುವ ಬೇಲಿಗಳನ್ನು ದಾಟಿದ ಸಂಗತಿಗಳು ಒಂದೊಂದಾಗಿ ನೆನಪಾಗುತ್ತವೆ. ಅದೆಲ್ಲ ನೆನಪಾದಾಗ ಆ ಊರು ಈಗ ಉಳಿದಿಲ್ಲವೆಂಬುದು ಕಾಡುತ್ತದೆ. ಸಣ್ಣವರಿದ್ದಾಗ ಆಚೀಚೆ ಮನೆಯ ಹೆಂಗಸರೆಲ್ಲ ಸೆರಿಕೊಂಡು ಪಿಸಪಿಸಿ ಪಿಸುಗುಡುವ ಮಾತು ಕೇಳಿದರೆ ಸಾಕು ಕಣ್ಣು ಪುಸ್ತಕದೊಳಗೂ ಕಿವಿ ಆ ಗಾಸಿಪ್ ಸುದ್ದಿಯ ಕಡೆಗೂ ಇಟ್ಟು ಓದುತ್ತಿದ್ದ ಕಾರಣಕ್ಕೋ ಏನೋ ಮೆಟ್ರಿಕ್ ಒಂದರಲ್ಲೆ ನಾನು ಮೂರು ಸಲ ಲಾಗಾ ಹಾಕುವ ಪ್ರಸಂಗ ಬಂತು. ಆದರೆ ಈ ಹಾಳು ಅನುಕರಣೆಯ ಚಾಳಿ ಮಾತ್ರ ನೆಟ್ಟಗ ನನ್ನನ್ನ ಸಮುದಾಯದ ಮುಖಾಂತರ ರಂಗವನ್ನೇರಿಸಿಬಿಟ್ಟಿತು. ಈಗ ರಿಹರ್ಸಲ್ ಮಾಡಿಸುವಾಗಲೆಲ್ಲ ಆ ಉಡಾಳ ದಿನಗಳ ದಿನಚರಿಗಳು ನೆನಪಾಗತಾವು. ಅಂಥ ಅನುಕರಣೆಯ ಆಟಗಳ ರುಚಿ ಈಗಿನ ಮಕ್ಕಳಿಗೆ ಸಿಗತಿಲ್ಲ ಅನಿಸತದ.
12062011435

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s