ಏನೀ ಚಮತ್ಕಾರ ಹುಲ್ಲೊಣಗಿ ಬೆಳೆವುದಲ…?


ಭೋಗ ವಾಂಛೆಯ ಇಂಡಿಯಾ, ರೋಧಿಸುತ್ತಿರುವ ಭಾರತ ಇವೆರಡರಲ್ಲಿ ನಿಮಗೆ ಅತ್ಯಂತ ಪ್ರಿಯವಾದದ್ದು ಯಾವುದು ಅಂತ ಕೇಳಿದರೆ..! ಆಯ್ಕೆ ಯಾವುದಾದರೇನು ಈ ನೆಲದ ಮೆಲ್ಲುಸಿರಿನೊಳಗೆ ಸಣ್ಣಕೆ ನರಳುವ ಧ್ವನಿಯೊಂದು ಗಟ್ಟಿಯಾಗಿ ಅಳಲು ಚಡಪಡಿಸುತ್ತಿದೆ. ಆ ಉಸಿರಿನಲ್ಲಿ ಅತೃಪ್ತ ಅಸಹನೆ ಇದೆ, ನೋವಿದೆ, ಹಸಿವಿದೆ, ಅವಮಾನದ ಕುರುಹೂ ಅಲ್ಲಿದೆ. ಅದು ಕೋಪೋದ್ರಿಕ್ತವಾಗಿ ಕುದಿಯುವುದು ಯಾರ ವಿರುದ್ಧ – ರೋಧಿಸುತ್ತಿರುವ ಭಾರತದ ವಿರುದ್ಧ. ಈ ಭಾರತಾಂಬೆಯ ಮಣ್ಣಲ್ಲಿ ರಕ್ತದ ಕಲೆಗಳಿವೆ, ಆ ರಕ್ತಕ್ಕೆ ಪ್ರತಿಕಾರ ಬಯಸುವ ಶಿಸ್ತಿನ ಗುಂಪೊಂದಿದೆ, ಆ ಗುಂಪುಗಾರಿಕೆಯ ಪುಂಡಾಟಿಕೆಯೂ ಕೂಡ ದೇವರ ಆಟದಂತೆ ಇನ್ಯಾರದೋ ಕೈಯಲ್ಲಿದೆ. ಆ ಆಡಿಸುವಾತನ ಮೈ-ನರನಾಡಿಗಳಲ್ಲೆಲ್ಲ ಮನುಷ್ಯತ್ವವನ್ನು ಧಿಕ್ಕರಿಸುವ ಚೇಷ್ಟೆಯಗುಣಗಳು ತುಂಬಿಕೊಂಡಿವೆ. ಬೂಸಾ ಸನಾತನ ಪಠ್ಯಪುಸ್ತಕದಲ್ಲಿ ಪರಧರ್ಮ ಸಹಿಷ್ಣುಗಳಿವರು. ಈ ಇವರು ಸಮರ್ಥಿಸುವ ಸಮಾಜದಲ್ಲಿ ಎಲ್ಲವೂ ಆ ದೇವರು ನಿರೂಪ ಕಳಿಸಿದಂತೆ ಆಗುತ್ತಿರುತ್ತದೆ. ಹೆಣ್ಣುಮಕ್ಕಳು ಪೂಜ್ಯನೀಯರು ಆಗಿರುತ್ತಾರೆ – ಅಲ್ಪಸಂಖ್ಯಾತರು ಇವರ ತಟ್ಟೆಗೆ ಕೈ ಹಾಕಿರುತ್ತಾರೆ. ಗ್ರಂಥಗಳಲ್ಲಿ ನೆರೆ-ಹೊರೆಯ ಗೆರೆಗಳ ಆಚಿನವರು ಯಾರೂ ಮನುಷ್ಯರಾಗಿ ಕಾಣುವುದೇ ಇಲ್ಲ. ಇವರನ್ನು, ಇವರು ಬೋಧಿಸತಕ್ಕ ನಂಬುಗೆಗಳನ್ನು ಮರುಮಾತಾಡದೇ ಒಪ್ಪಿಕೊಂಡು ಬದುಕಿದವರನ್ನು ಬಿಟ್ಟರೆ ಉಳಿದೆಲ್ಲರೂ ಈ ನೆಲದ ಮಹಾಕಾವ್ಯಗಳಲ್ಲಿ ಖಳರಾಗಿಯೇ ಕಾಣಿಸಿದ್ದಾರೆ.
ಈ ನೆಲದಲ್ಲಿ ತನ್ನತನದ ವಿರುದ್ಧ ತಾನೇ ಹೋರಾಟ ಮಾಡುವ ಮುಖಾಂತರ ಶರಣ ಸಂಸ್ಕೃತಿಯನ್ನು ಸಾಕಾರಗೊಳಿಸಿದ್ದ ಒಂದು ಸಮಾಜೋಧಾರ್ಮಿಕ ಚಳುವಳಿ ಕೂಡ ನೆಲಕಚ್ಚಿದ್ದು ಈ ತಲೆಹಿಡುಕರ ಕುತಂತ್ರದಿಂದಲೇ ಅಲ್ಲವೇ..? ಲವ್ ಜಿಹಾದ್ ಎಂದು ತಾವೇ ಭ್ರಮಿಸಿಕೊಂಡು ಬೊಬ್ಬಿಡುತ್ತಾರೆ, ಕುಲೀನತ್ವಕ್ಕೆ ಧಕ್ಕೆ ಬಂದೊದಗಿದಲ್ಲಿ ಹೇಳಹೆಸರಿಲ್ಲದಂತೆ ಮರ್ಯಾದಾಹತ್ಯೆ ಸಾಕಾರಗೊಳಿಸುತ್ತಾರೆ. ದಮನಿತರಿಗೆ ಜಾತಿಶ್ರೇಷ್ಟತೆಯ ವಿಷಬೀಜವುಣಿಸಿದ ಇವರು ರೋಧಿಸುವ ಭಾರತದ ರಕ್ಷಕರ ಪೋಸು ಕೊಟ್ಟು ವಿನಮ್ರ ಸೇವಕನ ದಿರಿಸು ತೊಟ್ಟು ಬೆಂಗಾವಲಿಗೆ ನಿಲ್ಲುತ್ತಾರೆ.
ಕಾಶ್ಮೀರದ ಹೆಣ್ಣಾದರೂ ಪರವಾಯಿಲ್ಲ-ಜಾತಿ ಬಿಟ್ಟು ಹೋಗಲಾರದವರು ಇವರು ಹಿಂದು ನಾವೆಲ್ಲ ಒಂದು ಅನ್ನುತ್ತಾರೆ, ತಿಳುವಳಿಕೆಗೆ ನಿಲುಕುವ ಮತ್ತು ಸುತ್ತ ರೂಢಿಗತವಾಗಿರುವ ಒಂದು ಮತದೊಳಗೆ ನಡೆಯುವ ಅಮಾನವೀಯ ಘಟನೆಗಳನ್ನು ಮಾನವೀಯ ಮನಸ್ಸೊಂದು ಖಂಡಿಸುತ್ತದೆ. ಪಾಕಿಸ್ತಾನದ ಮೂಲಭೂತವಾದಿಗಳ ರೋಧನೆಯಲ್ಲಿ ಅಂತಃಸತ್ವವೇ ಇಲ್ಲ ಮತ್ತು ಅವರಿಗೆ ತಮ್ಮದೇ ಆದ ಒಡಲುಸಿರಿನ ಕಾವ್ಯಗಳಿಲ್ಲ ಎಂಬುದು ಕೀಳರಿಮೆಯಾಗಿದೆ. ಪ್ರೇಮದರ್ಶನದ ಅತೀವ ಜೀವಂತಿಕೆಯ ಸೂಫಿಕಾವ್ಯ, ಜನಪದಕಾವ್ಯ, ಪ್ರೇಮಕಾವ್ಯಗಳ ಅಂತರ್ಧ್ಯಾನದ ರುಚಿಗಿಂತ ಬಹಿರಂಗದ ಬಾಹ್ಯಾಡಂಬರವೇ ಹೆಚ್ಚು ಅಪ್ಯಾಯಮಾನವಾಗಿರುವದರಿಂದ ಅಲ್ಲಿ ನಡೆಯುವ ಹಿಂಸೆಗೆ ಅಭದ್ರತೆಯ ಬದುಕು ಕಾರಣವಾಗಿರಬಹುದು. ಮತ್ತು ಜಗತ್ತಿನ ಮುಖ್ಯವಾಹಿನಿಗಳು ಹಿಂದೂ-ಕ್ರಿಶ್ಚಿಯನ್ ದೇಶಗಳಿಗೇ ಇಷ್ಟವಾಗುವಂತ ವರದಿಗಳನ್ನ ಬಿತ್ತರಗೊಳಿಸುವ ಪ್ರಮಾದದಿಂದಾಗಿ ಆ ದೇಶದ ಕುರಿತಾದ ಚಿತ್ರಣ -ಇಸ್ಲಾಮನ ಅತ್ಯುಗ್ರ ಮುಖವೊಂದು- ಮಾತ್ರ ಸಾಮಾನ್ಯನ ಕಲ್ಪನೆಯಲ್ಲಿ ಅಚ್ಚಾಗುತ್ತಿದೆ. ಆದರೆ ರೋಧಿಸುತ್ತಿರುವ ಭಾರತದ ಭಾವ ಬದುಕಿಗೆ ಸಮೃದ್ಧವಾದ grand narationಗಳಿದ್ದೂ, ಈ ಚಡ್ಡಿಗಳ ಅಂತಃಸತ್ವ ಯಾಕೆ ಇಷ್ಟೊಂದು ಅಯೋಮಯವಾಗುತ್ತಿದೆ? ಈ ರೋಧಿಸುವ ಸ್ವಯಂ ಸೇವಾ ಸಂಘಟನೆಯ ಆಶಯಗಳು ರೂಪಿತಗೊಂಡಿದ್ದು ಹಿಂದೂ ಧರ್ಮದ ರಕ್ಷಣೆಯ ಹೆಸರಿನ ರಾಜಕಾರಣಕ್ಕಾಗಿಯೇ ಹೊರತು ಸತ್ವಯುತವಾದ ಕಾಳಜಿಗಳಿಂದಲ್ಲ. ಪ್ರಗತಿಪರರ ನಿಲುವುಗಳನ್ನ ಪ್ರಶ್ನಿಸುವ ಮನೋಭಾವದಲ್ಲಿ ರೋಧನೆಯ ಆವೇಶವಿರುತ್ತದೆ ವಿನಃ ಮನುಷ್ಯನ ಮೂಲಭೂತ ಬದುಕುವ ಹಕ್ಕಿನ ಕುರಿತಾಗಿ ಇವರೆಂದೂ ಮಾತಾಡಿದವರಲ್ಲ. ರೈಲುನಿಲ್ದಾಣದಲ್ಲಿ ಠಾಕುಠೀಕಾಗಿ ಲಾಠಿ ಹಿಡಿದು ನಾವೇ ನಿಮ್ಮ ರಕ್ಷಕರು ಎಂಬಂತೆ ಘೋಷಣೆ ಕೂಗುತ್ತಿದ್ದ ಈ ಹಿಂದೂ ರಕ್ಷಕರು ದಲಿತರ ಮೇಲೆ ಹಲ್ಲೆಗಳಾದಾಗ, ದಲಿತರಿಗೆ ಊರಿಂದ ಬಹಿಷ್ಕಾರ ಹಕಿದಾಗ ಒಂದು ಸಲವೂ ಅವರ ರಕ್ಷಣೆಗೆ ಹೋದವರಲ್ಲ. ನೆಮ್ಮದಿ ಕೊಡುವ ಧರ್ಮವನ್ನು ಸೇರಲು ಬಯಸಿದಾಗ ಇವರ ಖಾರಸ್ಥಾನ ಅಲ್ಪಸಂಖ್ಯಾತರ ಮೇಲೆ ತಿರುಗಿ ಬೀಳುತ್ತದೆ. ಜನಾಂಗೀಯ ಮತ್ತು ಪ್ರತ್ಯೇಕತಾವಾದಿಗಳ ನಡುವಿನ ಹಿಂಸಾಚಾರ ಕೋಮುಬಣ್ಣದ ಸ್ವರೂಪ ಪಡೆದುಕೊಳ್ಳುತ್ತದೆ. ಇದು ತಪ್ಪೆಂದು ಖಂಡಿಸಿದರೆ ಆ ಖಂಡನೆ ನಮಗರಿವಿರುವ ಈ ನೆಲಮೂಲ ಗುಣಾವಗುಣಗಳನ್ನು ಪರಿಶೀಲಿಸಿರುತ್ತದೆ ಎಂಬುದನ್ನು ಅರಿಯಲಾರದ ಈ ಕ್ಷುದ್ರ ಜಂತುಗಳಿಗೆ ಪಕ್ಕದ ಪಾಕಿಸ್ತಾನದಂತೆ ಇಲ್ಲೂ ಅಮಾನವೀಯವಾದ ಹಿಂದುಸ್ತಾನ ಕಟ್ಟಬೇಕೆಂಬ ಹಂಬಲ. ಅಲ್ಲಿನ ಅಲ್ಪಸಂಖ್ಯಾತರು ಇಲ್ಲಿ ಬಹುಸಂಖ್ಯಾತರು-ಇಲ್ಲಿನ ಅಲ್ಪಸಂಖ್ಯಾತರು ಅಲ್ಲಿ ಬಹುಸಂಖ್ಯಾತರು ಹೀಗಿರುವಾಗ ಒಬ್ಬರನ್ನು ಒಬ್ಬರು ದುರುಗುಟ್ಟಿ ನೋಡುವವರು, ಹಿಂಸಾಚಾರ ಬೆಂಬಲಿಸುವರೆ ಹೊರತು ಮನುಷ್ಯತ್ವದ ಅಂಶವನ್ನು ಎಳ್ಳಷ್ಟು ತಾಗಲಾರದವರು. ಅನ್ಯಾಯ, ಅಕ್ರಮಣಗಳಿಗೆ ಉದಾಹರಣೆಗಳನ್ನು ಕೆದಕುತ್ತ ಹೋದಂತೆ ಇತಿಹಾಸ ಸಾಕಷ್ಟು ಪುರಾವೆ ಒದಗಿಸುತ್ತದೆ.
ಆಧುನಿಕತೆಯ ಸೆಲ್ಫಿಶ್ ಭಾಷೆಯ, ಶಬ್ದಮೋಜಿನ, ಹುಸಿ ಮಾಂತ್ರಿಕ ಬರಹಗಾರರು ಪ್ರಚೋದನಾತ್ಮಕ ಶೈಲಿಯಲ್ಲಿ ತಮ್ಮ ಅಜಂಡಾವನ್ನು ಸಮರ್ಥಿಸಿಕೊಳ್ಳುತ್ತಿರುವುದನ್ನು ನೋಡಿದಾಗ, ಅಮಮ! ಮತ್ತೆ ಚಿಗುರಾಗಿ ಬೆಳೆಯುತ್ತಿರುವ ಇವರ ಕೋಮುಭಾವನೆಗೆ ಆಹಾರವಾಗಿ ಒದಗಿದವರು ಬೋಡೊಗಳು, ಬಡತನ, ನಿರುದ್ಯೋಗದಿಂದ ಬೇಸತ್ತು ವಲಸೆ ಬಂದಿರುವ ಜನಗಳು. ಭೋಗವಾಂಛೆಯ ಇಂಡಿಯಾದ ಪರಿತ್ಯಕ್ತ ಹುಡುಗ-ಹುಡುಗಿಯರು. ಕೋಮು ಘರ್ಷಣೆ, ಕೋಮು ಜ್ವಾಲೆ, ಕೋಮು ದ್ವೇಷವನ್ನೆ ಬಂಡವಾಳವಾಗಿರಿಸಿಕೊಂಡಿರುವ ಇವರ ಗುರಿ ರಾಜಕೀಯ ಆಶಯವುಳ್ಳದ್ದಾದರೂ ಇದು ಕಟ್ಟಕಡೆಗೆ ಈ ದೇಶವನ್ನು ಫ್ಯಾಸಿಸಂನತ್ತ ಎಳೆದೊಯ್ಯುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಪಾಕಿಸ್ಥಾನದಂತೆ ಮತ್ತೊಂದು ಹಿಂದುಸ್ಥಾನ ಆದಲ್ಲಿ ಸೋಗಲಾಡಿ ಪ್ರಭುತ್ವವು ಲೋಳಲೊಟ್ಟೆಯಾಗುತ್ತದೆ. ಜೀವಪರವಾದ ಪ್ರಜಾಪ್ರಭುತ್ವದ ನಿಲುವುಗಳನ್ನುಳ್ಳ ಮೌಲ್ಯಯುತವಾದ ಸಮಾಜವನ್ನು ಧಿಕ್ಕರಿಸುವ ಫ್ಯಾಸಿಸಮ್ ಪಿಂಡಗಳು ಸಮರ್ಥಿಸುವ ರೋದನೆಯ ಭಾರತ ನಮ್ಮದಾಗದಿರಲಿ.
-ಮಹದೇವ ಹಡಪದ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s