ಸತ್ವಭರಿತ ಸತ್ಯಮೇವ ಜಯತೆ


ರಿಯಾಲಿಟೀ ಶೋ ಸ್ವಾರ್ಥಕ್ಕೋ ಸೇವೆಗೋ…? ಪ್ರಶ್ನೆ ಇದಲ್ಲ ಕಾರ್ಯಕ್ರಮಗಳನ್ನು ಯಾರೇ ನಿರೂಪಿಸಲಿ ಯಾರೇ ರೂಪಿಸಿರಲಿ, ಅದು ಆಗುಮಾಡುವ ಪರಿಣಾಮ ಏನೇ ಆಗಿರಲಿ… ಇದೆಲ್ಲದರ ಹಿಂದೆ ಜಾಗತಿಕ ಬಂಡವಾಳಶಾಹಿತ್ವದ ಆಕ್ರಮಣಕಾರಿ ತತ್ವವೊಂದು ಅಡಗಿರುತ್ತದೆ ಅನ್ನುವುದು ಹೌದು. ಅದಕ್ಕೆ ಮುಖ, ಮೂಗು, ಕಣ್ಣು ಕಿವಿಗಳ ರೂಪ ಇಲ್ಲವೆಂಬುದು ಅದರ ನಿಯಮವನ್ನು ರೂಪಿಸಿರುತ್ತದೆ. ಆದರೆ ಭಾವುಕತೆಯಲ್ಲಿಯೇ ತೇಲುವ ಪೇಲವ ವಸ್ತುಗಳ ಆಯ್ಕೆ ನೇರವಾದ ಕಸಬುಗಾರಿಕೆಯನ್ನು ಮಾಡಲಾರದು. ಅಂಥಲ್ಲಿ ತಂತ್ರವೆಂಬುದು ಚಿಕಿತ್ಸಕವಾಗಿ ನಿಲ್ಲುವುದಿಲ್ಲ. ಕುತೂಹಲ, ಮೆಲೋಡ್ರಾಮಾಗಳು,ಕ್ಷಣಗಣನೆಗಳೆಲ್ಲವನ್ನು ಉಳ್ಳ ರಂಜನೀಯ ಸ್ವರೂಪದ ಪ್ರದರ್ಶಕ ಗುಣಮಟ್ಟ ಬೇರೆ ಅಮೀರಖಾನ ನಡೆಸುವ ವಿಷಯವಸ್ತುವಿನ ತಾಕತ್ತು ಬೇರೆ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕಾಗಿದೆ. ಆಲೋಚನೆಗಳು ತಟ್ಟುವ ತಾಗುವ ರೀತಿಯಲ್ಲಿನ ಸಾಧಾರಣೀಕರಣವನ್ನು ಒಪ್ಪಿಕೊಳ್ಳಲಾರದ ಮನಸ್ಸು ಇನ್ನೊಂದು ತೆರನಾಗಿ ಅದರ ಬುಡಮೂಲವನ್ನು ಕೆದಕಿ ಶೋಧಿಸುತ್ತದೆ. ಸತ್ಯಮೇವಜಯತೆ ಶೋ ಒಂದರಲ್ಲೆ ಕೋಕೋಕೋಲ ಕೊಳ್ಳಿ, ಈ ಗಡಿಯಾರ ಕೊಳ್ಳಿ, ಆ ಬಟ್ಟೆ ಹಾಕಿಕೊಳ್ಳಿ ಎಂಬಂತ ಜಾಹಿರಾತುಗಳು ಬರುವುದಿಲ್ಲ, ಇನ್ನಿತರ ಕಾರ್ಯಕ್ರಮಗಳಲ್ಲೂ ಐದು ಹತ್ತು ನಿಮಿಷಕ್ಕೊಂದೊಂದು ಇಂತಹ ಗೊಂದಲದ ಜಾಹಿರಾತುಗಳು ಬರುತ್ತಿರುತ್ತವಲ್ಲ..?

ದುರಂತವೆಂದರೆ ಎಲ್ಲರನ್ನೂ ಮುಟ್ಟುವ ಕಾರ್ಯಕ್ರಮಗಳ ಗುಣಮಟ್ಟ ಮತ್ತು ವಿಷಯದ ಆಯ್ಕೆ, ವಿಷಯದ ನಿರೂಪಣೆಯ ಸಾಧ್ಯತೆಗಳ ಬಗ್ಗೆ ಮಾತಾಡಬೇಕಿದ್ದವರು ಇದ್ದಕ್ಕಿದ್ದಂತೆ ಇದರೊಳಗೆ ಸೋಗಿನ ಸಮಾಜಸೇವೆ ಇದೆ ಎಂದು ಹೇಳುತ್ತಿದ್ದಾರೆ. ಇಂಥ ಜನಪರ ಜನಪ್ರಿಯ ಸೋಗಿನ ಜಾಹಿರಾತು ಆದಾಯ ಮೂಲವುಳ್ಳ ಕಾರ್ಯಕ್ರಮಗಳನ್ನು ತಡೆಗಟ್ಟಲು ಆಯಾ ರಾಜ್ಯಗಳ ಜನ ಮಾತ್ರ ಬಂಡವಾಳ ಹೂಡುವಂತಹ ಹಾಗೂ ಆ ಮಾಧ್ಯಮಗಳು ಸಾಮಾಜಿಕ ನಿಷ್ಠತೆಯನ್ನು ಆಗಾಗ ಪರಿಶೀಲಿಸುವಂತಹ ವ್ಯವಸ್ಥೆಯೊಂದು ಬರಬೇಕು ಅನ್ನುವ ಸಬೂಬು ಸಲಹೆ ಕೊಡುತ್ತಿದ್ದಾರೆ… ಹೌದು ಅಂಥ ಸಾಂಸ್ಕೃತಿಕ ನೀತಿ ಒಂದನ್ನು ರೂಪಿಸಬೇಕಾದ ಅಗತ್ಯವಿದೆ. (ಆದರೆ ಅಲ್ಲೂ ಸ್ವಹಿತಾಸಕ್ತಿಯ ಆಲೋಚನೆಗಳು ಇಣುಕಲೂಬಹುದು) ಇದೆಲ್ಲವನ್ನು ಗಮನಿಸಿದಾಗ ಡಬ್ಬಿಂಗ್ ವಿರೋಧದ ಇನ್ನೊಂದು ನೆಲೆಯ ಸ್ವಾರ್ಥವನ್ನು ಸಾಧಿಸುತ್ತಿರುವ ಸೋಗಿನ ಬರಹಗಳನ್ನು, ಜವಾಬ್ದಾರಿಯುತ ಮಾತುಗಳನ್ನು, ಸಾಮಾಜಿಕ ಸ್ವಾಸ್ಥ್ಯದ ಚಿಂತನೆಗಳನ್ನು ಒಳಗೊಳ್ಳುವ ಮನಸ್ಸುಗಳೂ ಕೂಡ ಖತರನಾಕ್ ಸೋಗು ಹಾಕುತ್ತಿವೆ ಅಲ್ಲವೇ? ಸರ್ವರ ಹಿತ ಎನ್ನುವುದು ಸತ್ಯಪೂರ್ಣ, ಘನತೆಯುಳ್ಳ ಮಾನವ ಸಿದ್ಧಾಂತ. ಇಲ್ಲಿದೆ ಸತ್ಯವಾದ ಸಾಮಾಜಿಕ ಕಾಳಜಿಯ ಅಂತಃಕರಣದ ಮೌನವೆಂಬುದು ತಿಳಿದಾಗ ತಕ್ಷಣಕ್ಕೆ ಅನುಮಾನ ಮೂಡಿಬಿಡುತ್ತದೆ.  ಇದು ಮುಕ್ತ ಆರ್ಥಿಕತೆಯ ಮತ್ತು ಖಾಸಗೀಕರಣಗಳ ಲಾಭದ ‘ಗೂಳಿ’ ನೀತಿಯ ಸೋಗಿನ ಸಾಮಾಜಿಕ ಕಾಳಜಿಯ ಕೈಂಕರ್ಯವೇ ಆಗಿರುವುದಂತೂ ಸತ್ಯ. ಆದರೆ ನಮ್ಮ ನಮ್ಮ ಅನುಭವಗಳನ್ನು  ಜಾಗತಿಕ ಮಾರುಕಟ್ಟೆಯು ನಾಜೂಕಾಗಿ ಗೊಂದಲದಲ್ಲಿ ಜಾರಿಸಿಬಿಡುತ್ತಿರುವ ಈ ಹೊತ್ತಲ್ಲಿ ಸಮಾಜಮುಖಿಯಾದ ಪರಿಣಾಮಕಾರಿ ಸತ್ವವುಳ್ಳ ಒಂದು ಮಾತು ನಮ್ಮನ್ನು ಜಾಗ್ರತಗೊಳಿಸಲಾರದೆ ಇರುತ್ತದೆಯೇ…? ಅಂಥ ಜಾಗ್ರತ ಪ್ರಜ್ಞೆಯ ಕಾರ್ಯಕ್ರಮ ಸತ್ಯಮೇವ ಜಯತೇ…!

ಅಮೀರ ಬರೀ ಪುರಾಣ ಹೇಳುತ್ತಿದ್ದಾರೆ ಎನ್ನುವುದು ಸತ್ಯ ಅಲ್ವಾ…! ಯಾಕಂದ್ರೆ ಪುರಾಣಗಳು ಸೃಷ್ಟಿಸಿರುವ – ಕಂದಾಚಾರಗಳು ಮತ್ತು ಮೌಢ್ಯಕ್ಕೆ ಶರಣಾದ ಸಮಾಜವನ್ನು ಸ್ವಾಸ್ಥ್ಯರೂಪದಲ್ಲಿ ಮತ್ತೆ ಕಾಣುವ ಹಂಬಲ ಇರುವ ಸಾಂಸ್ಕೃತಿಕ ಮನಸ್ಸೊಂದು ಹೊಸದಾದ ಕಥನವನ್ನು ಹೊಸ ರೀತಿಯಲ್ಲಿ ಹೇಳಲೇಬೇಕಾಗುತ್ತದೆ. ಆದರೆ ಅದು ಬುರಡೆ ಪುರಾಣ ಅಲ್ಲ, ವಾಸ್ತವದ ಗರಡಿ ಪುರಾಣ. ಪ್ರಚಾರ ಅನ್ನುವುದು ಆರ್ಥಿಕತೆಯ ಲಾಭದ ಸ್ವಾರ್ಥವೇ ಆಗಿರಬಹುದು. ಅಲ್ಲಿ ಜನರನ್ನು ಮೋಸಗೊಳಿಸುವುದು ನಿರೂಪಣೆ ಮತ್ತು  ಅಮೀರಖಾನನಂಥ ನಟರಲ್ಲ ಕೊಳ್ಳುಬಾಕ ಸಂಸ್ಕೃತಿ ಅನ್ನುವ ಕಿರಾತಕ ಜಗತ್ತು. ಅದು ಯಾವ ಭಾಷೆಯ-ಯಾರೂ ಬಂಡವಾಳ ಹಾಕಿ ಮಾಡುವ ಕಾರ್ಯಕ್ರಮದಲ್ಲೂ ಇರಲಾರದು ಎಂಬುದನ್ನ ಹೇಗೆ ನಂಬುವುದು. ಅಂಥ ಕಾರ್ಯಕ್ರಮವೊಂದು ಕನ್ನಡಕ್ಕೆ ಬರಬಾರದು ಎಂಬ ಧಿಮಾಕು ಇದೆಯಲ್ಲ ಅದು ಕಟ್ಟೆಪುರಾಣವೆಂಬ ಕಾಳಜಿಯ ಜವಾಬುಗಳನ್ನು ಬಲು ಸುಂದರವಾಗಿ ಹೇಳಿಸುತ್ತದೆ. ಕ್ರಿಯಾಶೀಲ ಮನಸ್ಸು ಹೊಸ ಪುರಾಣವೊಂದನ್ನು ಹಾಗೆ ಸರಳವಾಗಿ ಸಮುದಾಯ ಮತ್ತು ಸರ್ಕಾರದೊಟ್ಟಿಗೆ ಏಕಕಾಲದಲ್ಲಿ ಸಂವಾದ ನಡೆಸುತ್ತಿರುವಾಗ ಅದನ್ನು ಗೌರವಿಸಬೇಕಲ್ಲದೆ, ಹಾಗೆ ಹೀಗೆ ಎಂದು ಮಣ್ಣಂಗಟ್ಟಿ ಮಾತಾಡುವುದು ಸರಿಯಲ್ಲ.  ಒಂದು ಅಭಿವ್ಯಕ್ತಿಯ ವಾಹಕ ಎಷ್ಟು ಪ್ರಾಜ್ಞನಾಗಿರುತ್ತಾನೆ ಎಂಬುದರ ಮೇಲೆ ಅವನ ಸಾಮಾಜಿಕ ಕಾಳಜಿಗಳು, ಜವಾಬ್ದಾರಿಗಳು ಗಟ್ಟಿಗೊಂಡಿರುತ್ತವೆ. ಅಮೀರಖಾನ ಅದನ್ನು ಅಧ್ಯಯನ ಮಾಡಿ ಶ್ರದ್ಧೆಯಿಂದ ನಡೆಸಿಕೊಡುತ್ತಿರುವುದು ಕಾಣುತ್ತದೆ ಹೊರತು ಪ್ರಚಾರಪ್ರಿಯವಾದ ಸೋಗಿನ ಜನಪ್ರಿಯ ಮುಖದಿಂದಲ್ಲ ಎಂಬುದು ಮುಖ್ಯ. ಜಯಜಯ ಸತ್ಯಮೇವ ಜಯತೆಗೆ !

—–ಮಹಾದೇವ ಹಡಪದ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s