ಪೆಕರ ಫಕೀರ…(2)


 

ತಂದೆ ಸತ್ತ ಮಗನಿಗೆ ‘ಪರದೇಶಿ ಕೂಸು ಅನ್ನೋ’ ಅನುಕಂಪದ ಜೊತೆಗೆ ಓಣಿ ಮಂದಿಯ ವಿಶೇಷ ಕಾಳಜಿಯಿಂದ ಫಕೀರ ಆಜೂ-ಬಾಜು ಹೆಣಮಕ್ಕಳ ಅಂಗೈ ಮಗನಾಗಿ ಬೇಳೆದ. ಈ ಇಂಡಿಯಾದ ಗಡಂಗಿನೊಳಗ- ಓಣಿ ಮಕ್ಕಳು ಏನೆಲ್ಲ ಸಾಧಿಸಿದರೂ ನಾಕು ಮಂದಿ ಕಣ್ಣಾಗ ಇರ್ತಾರು,,, ಯಾವ ಮೂಲಿಯಿಂದನೂ ಮ್ಯಾಲೇರಧಂಗ ಕೈಕಾಲೊಳಗ ಕಡ್ಡಿ ಆಡಿಸುವ ಸ್ವಯಂ ಘೋಷಿತ ಪರಮಾತ್ಮರು ಸಣ್ಣಂದಿನಿಂದಲೇ ಜಾಕ ಹಕ್ಕೊಂಡ ಕುಂತಿರತಾರು. ಅದರಾಗ ವಿಧವೆ ಹೆಂಗಸರ ಸುತ್ತ ಹತ್ತೆಂಟು ಕಣ್ಣುಗಳು ಗುಟರ ಹಾಕ್ಕೊಂಡು  ಹೋದಲ್ಲಿ ಬಂದಲ್ಲಿ ಕಾವಲು ನಾಯಿಯಂಗ ಕಾಯುತ್ತಿರ್ತಾವು. ಇಂಥ ಹಲಕಟ ಮಂದಿ ಅಡತಾರ ನಡಾವಳಿಗಳಿಂದ ಪಾರೋತಿ ಸ್ಥೈರ್ಯಕ್ಕ ಏನೇನೂ ಧೋಕಾ ಆಗಲಿಲ್ಲ ಖರೇ, ಆದರ ಸಂಜೆ ಆಗೂತಲೇ ಮಾಳಿಗೆಗೆ ಕಲ್ಲು ಬೀಳೋದು, ಸಿಳ್ಳು ಹೊಡೆಯೋದು, ದಾರಿಮ್ಯಾಲ ಹೊಂಟಾಗ ಕೆಣಕಿ ಕೊಂಕು ಮಾತಾಡೋದು, ಆಡುವ ಫಕೀರನ ಕರೆದು ಚುಚ್ಚಿ ಹಂಗಿಸಿ ಮಾತಾಡೋದು ನಿರಂತರ ನಡೆದಿತ್ತು. ಈಸ್ವರಗೌಡ ಒಂದ ಸಲ ಫಕೀರನಿಗೆ ಸಿಪ್ಪರಮಿಟಾಯಿ ಕೊಡಿಸಿ ‘ನಿಮ್ಮವ್ವನಿಗೆ ಎಷ್ಟು ಕೊಡಬೇಕು ಕೇಳಿಕೊಂಡು ಬಾ’ ಅಂತ ಕಳಿಸಿದ್ದ. ಆ ದಿವಸ ಪಾರೋತಿ ಎದಿ ಝಲ್ಲೆಂದಿತ್ತು. ಆವತ್ತಿನಿಂದ ಫಕೀರನ ಆಟದ ಗ್ಯಾನಕ್ಕ ಕತ್ತರಿಬಿದ್ದಿತ್ತು.  ಮುಂದಲ ನಾಕ್ಕೈದು ದಿನ ಆಕೆ ಸೆರಗಿನ್ಯಾಗ ಮುಖ ಮುಚ್ಕೊಂಡು ಹ್ವಾರೇ, ನೀರು ನಿಡಿ ಪೂರೈಸಿದ್ದಳು.. ಒಂಟಿ ಹೆಣಮಗಳು ಗಂಡ ಸತ್ತ ಮ್ಯಾಲ ತನ್ನ ತಾಯಿಯ ಸರಹದ್ದಿನ್ಯಾಗ ಬಂದೋಬಸ್ತ ಬದುಕ ನಡೆಸುತ್ತಿದ್ದಳು.

ಪಂಚಮಿಯ ಸಣ್ಣ ಸೋಮುವಾರಕ್ಕ ಫಕೀರನಿಗೆ ಐದು ತುಂಬಿ ಆರರಾಗ ಬಿದ್ದವು. ಸಾಲಿ ಮಾಸ್ತರರು ಅವನ ಎಡಗೈ ತಲೆ ಮ್ಯಾಲಿನಿಂದ ಬಲಗಿವಿ ಮುಟ್ಟಿದ್ದು ಖಾತ್ರಿ ಮಾಡಕೊಂಡು ಅಂದಾಜು ಹುಟ್ಟಿದ ದಿನಾಂಕು ನಮೂದಿಸಿ ಸಾಲೆಗೆ ಸೇರಿಸಿಕೊಂಡರು. ಅಲ್ಲಿಂದ ಪಾರೋತಿಗೆ ಹೊಸ ಸೆಕೆ ಸುರುವಾಯ್ತು.

ಸಾಲಿ ಗುಡಿ ಅನ್ನೋದು ಆ ಊರಿನ ಸಮಸ್ತರ ಆಸರಕ್ಕ ಒದಗುವ ಸೂರಾಗಿತ್ತು. ಮಳಿ ಬರಲಿ, ಹೊಳಿ ಉಕ್ಕಿ ನೆರಿ ಏರಲಿ, ಬರ ಬೀಳಲಿ ಒಟ್ಟ ದಿಕ್ಕಾಪಾಲ ಆದವರಿಗೆ ದಿಕ್ಕಿನ ಸೂರಾಗಿತ್ತು. ಸಾಲಿ ಕಂಪೌಂಡು ಒಮ್ಮೊಮ್ಮೆ ಕುರಿಗಾರರ ದೊಡ್ಡಿಯೂ ಆಗುತ್ತಿತ್ತು. ರೈತನ ಕಾಳು ಕೂಡಿಡೋ ಜಾಗಾನೂ ಆಗಿರತಿತ್ತು. ಪಾರೋತಿಗೆ ಆ ಸಾಲಿ ಮ್ಯಾಲ ದೇವಸ್ಥಾನದಷ್ಟ ಗೌರವವಿತ್ತು. ಹಂಗಾಗಿ ಆಕಿ ಜೀವನದಾಗ ಎರಡು ಜಾಗಗಳನ್ನ ಚಲೊತ್ತನ್ಯಾಗ ಕಂಡವಳೇ ಅಲ್ಲ… ಒಂದು ಸಾಲಿಗುಡಿ ಮತ್ತೊಂದು ತನ್ನ ಆರಾಧ್ಯ ದೈವದ ಗರ್ಭಗುಡಿ. ಆದರ ಅವತ್ತು ಹಣ್ಮಪ್ಪನ ಮೂತಿ ತಿರುವಿದ ಗಂಭೀರ ಖಂಬೀರ ಮೂರ್ತಿಗೆ ಪೂಜಾರಪ್ಪನ ಕೈಯಾಗ ಎಲಿ ಪೂಜಾ ಮಾಡಿ ಮುಗಸಬೇಕಾದರ ಒಳಗೊಳಗ ವಿಚಿತ್ರ ಸುಖ ಅನುಭವಿಸುತ್ತಿದ್ದಳು. ತನ್ನ ಮನೆತನದ ಹೆಳವರ ಯಾದಿಯೊಳಗ ಸಿಕ್ಕೋ ಅಷ್ಟೂ ಪುಣ್ಯಾತ್ಮರಕಿಂತ ತನ್ನ ಮಗ ಬ್ಯಾರೆ ಅನ್ನೋದು ಸಾಬೀತಾಗಲಿಕ್ಕ ಸಿಕ್ಕ ಸದವಕಾಶ ಅಂದ್ರ ವಂಶವಾಹಿನಿಯ ಕುಡಿ,  ಘನಪುತ್ರ ಫಕೀರನು ಸಾಲಿಗೆ ಸೇರುವವನಿದ್ದ. ಅದೇ ಕಾರಣ ಸಾಕಲ್ಲ ಒಂಟಿತನದ ಬ್ಯಾಸರಕ್ಕ… ಇಲ್ಲಿ ಇರೋ ಮಜಾ ಏನಪಾ ಅಂದ್ರ ಈಸ್ವರಗೌಡನ ಪ್ರಕರಣದ ನಂತರ ಫಕೀರ ನೆಟ್ಟಗ ಕಣ್ಣು ಬಿಟ್ಟು ಊರಾಗ ತಿರಗ್ಯಾಡಿದ್ದ ಕಡಿಮೆ. ಅವ್ವನ ಅವ್ವ ‘ಆಯಿ’ ಮಡಿಲು-ತಾಯಿ ನೆದರು ಬಿಟ್ಟು ಅಲ್ಲಿ ಇಲ್ಲಿ ಸುಳಿದವನ ಅಲ್ಲ. ಆದರೂ ಹೊಸ ಹುರುಪಿನ ಹೊಸ ದಿರಿಸಿನ ವೈನಾದ ಅರಿಬಿಯೊಳಗ ತಾಯಿ ಮಗಳು ಇಬ್ಬರು ಕೂಡಿ ಫಕೀರನ್ನ ಗೊಂಬಿ ಕಾಮನ್ನನಂಗ ತಯಾರ ಮಾಡಿ ಹೊಂಡಿಸಿದ್ದರು. ಬರೊಬ್ಬರಿ ಹೇಳಬೇಕಂದ್ರ ಅಂಗಿಗೆ ಚೊನ್ನ ಅಥವಾ ಚೊನ್ನಕ್ಕ ಅಂಗಿ ಹೊಂದಿಕೆ ಆಗಲಾರದ ಒಂದ ನಮೂನಿ ಸೆಟೆಬ್ಯಾನಿ ಬಂದಂಗ ಫಕೀರ ಪೀಚಲು ಫೀರ ಆಗಿ ನರೋಸ್ ಆಗಿಬಿಟ್ಟಿದ್ದ.

ಫಕೀರ ಎಂದೂ ಯಾವ ಕತ್ತಲಿಗೂ ಹೆದರಿದವನಲ್ಲ, ಹಟಹಿಡದು ಗೊಳೋ ಅಂತ ಮೂಗೊರೆಸಿ ಅತ್ತವನೂ ಅಲ್ಲ. ಮಗ್ಗಲುಮನಿ ಮುದುಕಿ ಮಾತಾಡೋ ನಗಚಾಟಕಿ ಅವನೊಳಗ ಅವನನ್ನ ಮತ್ತ ಮತ್ತ ಹುದುಗಿಸಿ ಹುಗಿದು ಹೋಗಿದ್ದ ಕೀಳರಿಮೆಗೆ ಉಪ್ಪುಖಾರ ಹುಳಿ ಹಿಂಡಿದಂಗ  ಆಗತಿದ್ದದ್ದು ಬಿಟ್ಟರ ಮತ್ತ್ಯಾವುದು ಫಕೀರನಿಗೆ ತ್ರಾಸ ಮಾಡಿದ್ದಿಲ್ಲ. ಚೌಕಡಿ ಕೌದಿಯೊಳಗ ಮೂತಿ ಹುಗಿದು ಮುಸುಮುಸು ಅಳೋದು ಬಿಟ್ಟರ ಗಟ್ಟ್ಯಾಗಿ ಅತ್ತವನೂ ಅಲ್ಲ. ಆದರ ಇವತ್ತು ತನ್ನ ಪಾಲಿನ ಸರ್ವವೂ ಆಗಿದ್ದ ಅವ್ವ ಹಿಂಗ ಕೈಯಾಗ ಕೋಲ ಹಿಡಕೊಂಡು, ಕೆಟ್ಟಗಣ್ಣಲ್ಲೇ ಗುರಾಯಿಸುತ್ತಿದ್ದ ಮಾಸ್ತರ ಮಹಾಶಯನ ಕೈಗೆ ಒಪ್ಪಿಸಿ ಹೋಗತಿರಬೇಕಾದರ ಮುಗಲು ಹರಕೊಂಡು ಮೈಮ್ಯಾಲ ಬಿದ್ದವರಗತೆ, ಜಡಹಿಡದ ಬೆಲ್ಲ ವಡೆಯುವ ಗುಣಕಲ್ಲಿನಗತೇ ಮುಗುಮ್ಮಾಗಿ ಮೂತಿ ಉಬ್ಬಿಸಿಕೊಂಡು ಕೂತುಬಿಟ್ಟಿದ್ದ. ಇದು ನರಕವೊ? ಬ್ರಹ್ಮರಾಕ್ಷಸರ ತಾಣವೋ ಅನ್ನೋ ಗೊಂದಲದಾಗ ಸಾಲಿ ಗಂಟೆ ಬಾರಿಸೋದನ್ನ ಕಾಯುತ್ತಿದ್ದ. ಸೂರ್ಯನ ನೆರಳು ಸಾಲಿಯ ದಾಟಿ ಸೇದು ಬಾವಿಯ ಬುಡ ಮುಟ್ಟುವುದರಲ್ಲಿತ್ತು… ಅಷ್ಟರೊಳಗ ಸಾಲಿ ಗಂಟಿ ಠನ್ನಂತೂ! ತಗೋ ತನ್ನ ಹೊಸ ಪಾಟಿ ಎತ್ತಿ ಹೆಗಲಿಗೆ ಹಕ್ಕೊಂಡು ಕಣ್ಣಿ ಬಿಚ್ಚಿಬಿಟ್ಟ ಹೋರಿ ಹಂಗ ಹರಿಗ್ಗಾಲು ಕೊಟ್ಟು ಮನಿ ಮುಟ್ಟಿದ್ದ. ಕಟ್ಟಿ ಮ್ಯಾಲ ನಿಂತು ಶ್ರೀ ಶ್ರೀ ಫಕೀರ ಮಹಾರಾಜರ ಆಗಮನದ ಹಾದಿ ಕಾಯುತ್ತಿದ್ದ ತಾಯಿ, ಆಯಿಯರು ಕಣ್ಣಿಗೆ ಬೀಳುತಲೇ… ಫಕೀರನಿಗೆ ಹೋದ ಜೀವ ಬಂದಂಗಾಯ್ತು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s