ವ್ಯಂಗ್ಯಚಿತ್ರ ನಿಷೇಧದ ಕುರಿತು ಪ್ರಗತಿಪರರ ನಿಲುವಿಗೆ ಒಂದು ಪ್ರತಿಕ್ರಿಯೆ


ಈ ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಾಹಾನ್ ನಾಯಕರು ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನು ಪರಶೀಲಿಸಿ  ಪ್ರತಿಕ್ರಿಯಿಸುವ ಅಗತ್ಯವಿರಲಿಲ್ಲ. ಮತ್ತು ಇಂದಿಗೂ ಆ ವ್ಯಂಗ್ಯಚಿತ್ರ ಅಂಬೇಡ್ಕರ್ ಅವರ ಘನತೆಯನ್ನೇನೂ ಕಡಿಮೆ ಮಾಡಲಾರದು. ಆದರೆ ಅದನ್ನು ಪಠ್ಯದಲ್ಲಿ ಹಾಕಿರುವುದು ಒಂದು ಅಪರಾಧವೇ ಸೈ, ಆ ಚಿತ್ರ ಅವತ್ತಿನ ಭಾರತದ ಆ ಸಂದರ್ಭಕ್ಕೆ ಸರಿಯಾಗಿ ಕಲಾವಿದನ ಮೊಣಚು ನೋಟದಲ್ಲಿ ಅರಳಿರುವುದು ಒಪ್ಪೋಣ… ಹಾಗಂದ ಮಾತ್ರಕ್ಕೆ ಇಂದಿನ ಭಾರವಾದ ಬದುಕಿನ ಮೆಕಾಲೆ ಮೊಮ್ಮಕ್ಕಳಿಗೆ ಆ ಚಿತ್ರದ ಬಗ್ಗೆ ಏಕಮುಖಿ ಅಭಿಪ್ರಾಯ ಹೋಗುತ್ತದೆ. ಅದು ಭವಿಷ್ಯದಲ್ಲಿ ತಪ್ಪು ತಿಳುವಳಿಕೆ ನೀಡಲಾರದು ಎನ್ನುವುದು ಗ್ರಹಿಕೆಗೆ ನಿಲುಕಲಾರದ್ದೇನಲ್ಲ. ಒಂದು ಉದಾಹರಣೆ ಹೇಳುತ್ತೇನೆ- ಹೆಗ್ಗೋಡು ಹೈಸ್ಕೂಲಿನ ಒಬ್ಬ ಮಾಸ್ತರರು ಗಾಂಧಿಯ ಪಾಠವನ್ನು ಮತಾಂಧ ಹಿಂದುತ್ವ ಪ್ರತಿಪಾದನೆಯ ಮಾದರಿಯಲ್ಲಿಯೇ ಮಾಡುತ್ತಾರೆ. ಅವರ ಶಿಷ್ಯನು ಇತಿಹಾಸಕ್ಕೆ ಜಾಣಕುರುಡನಾಗಿ ಗಾಂಧಿಯನ್ನು ದ್ವೇಷಿಸುತ್ತಾನೆ. ಆ ಹುಡುಗ ಆ ಶಾಲೆಯ ಅತ್ಯುತ್ತಮ ವಿದ್ಯಾರ್ಥಿ. (ನಾನು ಹೆಗ್ಗೋಡಿನಲ್ಲಿದ್ದಾಗ ನನ್ನ ನೆರೆಮನೆಯಾತನೂ ಆಗಿದ್ದ) ಹೀಗಿರುವಾಗ ಅದನ್ನು ಪಾಠವಾಗಿ ವಿವರಿಸುವ ಆಸಾಮಿ ದೇವರ ಸೇವೆಗೆ ಬಂದವನಾಗಿದ್ದರೆ ಅಥವಾ ಅಂಬೇಡ್ಕರ್ ಕುರಿತು ಗೌರವ ಇಲ್ಲದವನಾಗಿದ್ದರೆ ಹೇಗೆ ಅದನ್ನು ಚಿತ್ರಿಸಬಹುದು ಎಂಬುದನ್ನು ಯೋಚಿಸುವದು ಸಧ್ಯದ ಅವಶ್ಯಕತೆಯಾಗಿದೆ.  ಆದ್ದರಿಂದ ಅದು ಅಂಬೇಡ್ಕರರಿಗೆ ಮಾಡಿದ ಅವಮಾನವೇ ಆಗಿದೆ.

1949 ರಲ್ಲಿ ಶಂಕರಪಿಳ್ಳೆ ಬರೆದ ಆ ಚಿತ್ರ ಮೂರು ವರ್ಷದ ವಿಳಂಬವನ್ನ ವಿಡಂಬಿಸಿರುವುದು ರಾಜ್ಯಶಾಸ್ತ್ರ, ಸಮಾಜವಿಜ್ಞಾನವೇನೂ ಆಗಲಾರದು. ಆ ಶ್ರಮದ ಫಲವನ್ನು ಕಾಣುತ್ತಿರುವ ಈ ಸಂದರ್ಭದಲ್ಲಿ ಪಠ್ಯವೊಂದರಲ್ಲಿ ಸೇರಿಸುವ ಮೂಲಕ (ಯಾದವ್ ಮತ್ತು ಫಲೀಷ್ಕರ್ ಅವರು ಯಾವ ಕುತಂತ್ರವನ್ನು ಹೊಂದಿದವರಲ್ಲ) ಅಂಬೇಡ್ಕರ್ ಅವರ ರಥದ ಗಾಲಿಗೆ ಕೈ ಹಾಕಿದವರ ಅಭಿಮಾನಕ್ಕೆ ಧಕ್ಕೆ ಆಗಿರುವುದಂತು ಸತ್ಯವಾದ ಮಾತು. ಆದರೆ ಪ್ರಿಯ ಪ್ರಗತಿಪರ ಚಿಂತಕರು ಆ ಪಠ್ಯವನ್ನು ಸ್ವತಃ ಸರಕಾರವೇ ಪಠ್ಯದಿಂದ ಕೈ ಬಿಡುವಾಗ – ಅದನ್ನು ಪಠ್ಯದಿಂದ ಕೈ ಬಿಟ್ಟರೆ ಅಂಬೇಡ್ಕರ್ ಅವರಿಗೆ ಅವಮಾನ ಎಂದೆಲ್ಲ ಹೇಳಿ ತಮ್ಮ ಫೇಸಬುಕ್ಕಿನ ಹಾಳೆಗಳಿಗೆ ಪ್ರತಿಕ್ರಿಯೆಯನ್ನು ಸಂಪಾದಿಸುತ್ತಿದ್ದಾರೆ. ಅವರಿಗೆ ಗೊತ್ತಿರಲಿಕ್ಕಿಲ್ಲ.. ಹಸಿವೆಗಿಂತಲೂ ಅವಮಾನದ ಕಹಿ ನುಂಗಲಾರದ ತುತ್ತೆಂಬುದು. ಈ ಇಂಡಿಯಾದ ವರ್ಣ-ವರ್ಗ ವ್ಯವಸ್ಥೆಯಲ್ಲಿ ಇಂದಿಗೂ ಬೂದಿ ಮುಚ್ಚಿದ ಕೆಂಡದಂತಿರುವ ಅಸ್ಪೃಶ್ಯತೆ ಮತ್ತೆ ಯಾವ ಮಾದರಿಯಲ್ಲಿ ಹುಟ್ಟಿಕೊಳ್ಳುತ್ತದೋ ತಿಳಿಯದು. ಇವತ್ತಿನ ಖಾಸಗೀಕರಣದಲ್ಲಿ ಅವರವರದೇ ಸಂವಿಧಾನಗಳು, ಅವರವರಿಗೆ ಬೇಕಾದ ರೀತಿಯಲ್ಲಿ ಆಡಳಿತ ನಡೆಸುತ್ತಿವೆ. ನ್ಯಾಯಕಟ್ಟೆಗಳು ಅವರ ಇಚ್ಛೆಯಂತೆ ಅವರಿಗೆ ಬೇಕಾದವರಿಗೆ ಬೇಕುಬೇಕಾದಂತೆ ನ್ಯಾಯ ಹೇಳುತ್ತಿವೆ.(ರಾಳೇಗಾಂವ್ ಸಿದ್ಧಿಯ ಟೋಪಿ ಬಾಬಾನೂ ಅಂವನೂರಿನಲ್ಲಿ ಅವನೇ ನ್ಯಾಯಾಧೀಶ, ಸರಕಾರ ಎಲ್ಲವೂ ಆಗಿದ್ದಾನೆ) ಹಾಗೆ ಮಾಡುವವರು ಸಂವಿಧಾನವನ್ನೆ ಧಿಕ್ಕರಿಸುವ ನಿಲುವುಳ್ಳವರು. ಇಂದಿಗೂ ಕರ್ನಾಟಕದ ಮಧ್ಯಭಾಗದಲ್ಲಿ ಒಂದು ಮಠ ಸ್ವಂತ ನ್ಯಾಯಾಲಯವನ್ನು ನಡೆಸುತ್ತದೆ ಎಂದರೆ ನಂಬುತ್ತೀರಾ? ಅಲ್ಲಿ ನ್ಯಾಯಾಧೀಶರು ಒಬ್ಬ ಪ್ರಗತಿಪರ ಮಠಾಧೀಶರು. ಹೀಗೇ ತಮ್ಮ ಸುಪರ್ದಿಯ ಯಾವ ಹಕ್ಕನ್ನೂ ಬಿಟ್ಟುಕೊಡದ ಒಂದು ವ್ಯವಸ್ಥೆ ಹನ್ನೆರಡನೆಯ ಶತಮಾನದಿಂದ ಏಕೆ ಅನಾದಿ ಕಾಲದಿಂದಲೂ ನಿರಂತರವಾಗಿ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿರುವಾಗ ಆ ಪಠ್ಯವನ್ನ ಖಂಡಿಸಲೇಬೇಕಾಗಿತ್ತು.

ಆದ್ದರಿಂದ ಆ ಸಂಘಟನೆಯ ಮುಖಂಡನಿಗೆ ಅದು ಬರೀ ಕುರುಡು ಅಭಿಮಾನ ಇದ್ದಿರಬಹುದು. ಹಾಗೆಂದ ಮಾತ್ರಕ್ಕೆ ಅವರ ಹಲ್ಲೆಯನ್ನು ತಿರಸ್ಕರಿಸುವಷ್ಟು ಅಪರಾಧವೇನೂ ಅಲ್ಲ. ಯಾಕೆಂದರೆ ಯಾವ ಹುತ್ತದಲ್ಲಿ ಎಂಥ ವಿಷಕಾರಿ ಹಾವು ಕೂತಿರುತ್ತದೆಂಬುದನ್ನು ಅಲ್ಲಗಳೆಯಲಾಗುವುದಿಲ್ಲ. ಈ ಜಾತಿ ರಾಜಕಾರಣದ ನಡುವೆ ತಳಸಮುದಾಯಗಳು ಒಡೆದಮನೆಗಳಂತೆ ಮೇಲುಕೀಳಿನ ಅಂದಾಜು ಲೆಖ್ಖಾಚಾರದಲ್ಲಿ ನೆನೆಗುದಿಗೆ ಬಿದ್ದಿರುವಾಗ ಮತ್ತೆ ಸನಾತನ ಸ್ಥಾಪಿಸುವ ಎಲ್ಲ ತಯಾರಿಯನ್ನು ಈ ಮೇಲ್ಜಾತಿಗಳು ಮಾಡಿಕೊಂಡು ಕೂತಿರುವುದನ್ನು ಕಾಣುತ್ತಿದ್ದೇವೆ, ಅಲ್ಲಾ ಸ್ವಾಮಿ ಈ ಕನ್ನಡದ ಪಿಚ್ಚರ್ ಒಂದರಲ್ಲಿ ಹಿಂದೂ ದೇವತೆಗಳನ್ನು ಅವಮಾನಿಸಲಾಗಿದೆ ಎಂದು ಕಿರಚಾಡುವ ಕಪಿ ಸೈನ್ಯದಂತೆ ದಲಿತ ಸಂಘಟನೆಗಳೂ ಎಂದುಕೊಂಡಿದ್ದರೆ ಅದು ನಿಮ್ಮ ತಪ್ಪು ಗ್ರಹಿಕೆ. ನಿಜವಾಗಲೂ ದಲಿತ ಸಂಘಟನೆಗಳಿಗೆ ಈಗಲೂ ಬದ್ಧತೆ ಇದೆ. ಬದುಕಿನ ಬಗ್ಗೆ ತೀವ್ರ ಕಾಳಜಿ ಇದೆ. ಅದೆಷ್ಟೋ ವರ್ಷಗಳಿಂದ ಕತ್ತಿನ ಮೇಲೆ ಕಾಲಿಟ್ಟು ಒತ್ತಲ್ಪಟ್ಟ ಉಸುರಿಗೆ ಹೊಸ ಚೈತನ್ಯ ಕೊಟ್ಟ ಜೀವಧಾತುವಿನ ವಿಳಂಬದ ವ್ಯಂಗ್ಯ ಚಿತ್ರವನ್ನಿಟ್ಟುಕೊಂಡು ಇತಿಹಾಸದ ಪಾಠ ಮಾಡುವುದಾದರೆ ಇವತ್ತಿನ ವಾಸ್ತವವನ್ನು ಕಲಿಯುವ ವಿದ್ಯಾರ್ಥಿಗೆ ಸ್ವತಃ ಅನುಭವಕ್ಕೆ ಬರುವಂತೆ ಮಾಡಲು ತಹಶೀಲ್ದಾರನೊಬ್ಬ ತನ್ನ ಸ್ವಂತ ಮಗಳಿಗೆ ತಟ್ಟೆ ಕೊಟ್ಟು ದೇವಸ್ಥಾನದ ಮುಂದೆ ಕೂತು ಭಿಕ್ಷೆ ಬೇಡುವದನ್ನು ಪಠ್ಯವಾಗಿ ಇಡಲು ಬಯಸುತ್ತೀರಾ? ಸರಕಾರ ಪಠ್ಯವನ್ನು ಪುಸ್ತಕದಿಂದ ನಿಷೇಧ ಮಾಡಿರುವುದು ಸ್ವಾಗತಾರ್ಹ……

                 ——– ಮಹಾದೇವ ಹಡಪದ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s