ಓದಿನ ಮನೆಯಲ್ಲಿ


ಶವ ಸಂವಾದಕರ ನಡುವೆ

ಪಾಗಲ್ ಬಾಬಾ, ಡೆವಿಡ್ ಮಾಸ್ಟರ್, ತಪನ್, ಸೋನಿಮಾ, ಕೃಪಮಾ, ಬೌಲ್ ಹೆಣ್ಣು, ತಾರಾಪೀಠ, ಮಾಲ್ಡಾ, ಚನ್ನೈ ಸಮುದ್ರ… ಹೀಗೆ ತಮ್ಮ ಅಗಾಧ  ಅನುಭವವನ್ನ ವಿಸ್ತಾರವಾಗಿ ಬಿಡಿಸಿಡುವ ಅಗ್ನಿ ಶ್ರೀಧರ ಅವರ “ಆಧುನಿಕ ಮಾಂತ್ರಿಕರ ಜಾಡಿನಲ್ಲಿ” ಚಣ ಹೊತ್ತಿನ ಧ್ಯಾನವನ್ನು ಭಂಗಗೊಳಿಸಿತು.ತಂತ್ರದ ಬಗ್ಗೆ ಯಾವಾಗಲೂ ಕೌತುಕವೊಂದು ನನ್ನೊಳಗೆ ಉಳಿದುಕೊಂಡಿದ್ದು ಓದುತ್ತ ಹೋದಂತೆ ನನ್ನ ಸಣ್ಣ ಬಾರ್ಡರಿನ ಪ್ರಪಂಚದೊಟ್ಟಿಗೆ ಬೆರೆತು ನೆನಪುಗಳೊಟ್ಟಿಗೆ ಅಲ್ಪಸ್ವಲ್ಪ ಅನುಭವವಾದ ಚಡಪಡಿಕೆ ತುರಿಕೆ ಆಗಿ ಬಿಟ್ಟಿತು. ಅದು ನಾನು ಎಳಸಲ್ಲಿ ಯಾರಿಗೂ ಗೊತ್ತಾಗದಂತೆ ಸೇದಿದ್ದ ಮತ್ತಿನ ಧಂ ಕೆದಕುತ್ತಲೆ ನಮ್ಮ ಸೀಮೆಯ ಸಿದ್ಧಾರೂಢ ಪಂಥದ ಮಠಗಳ ವರಾಂಡದ ಒಡನಾಟ, ಫಕೀರ, ಬಾಬಾ, ನಾಗಾಗಳ ತನಕ ನಾನು ಕಂಡುದ್ದು ನೆನಪಾಗುತ್ತ ಮತ್ತೆ ಮೌನ… ಬತ್ತಿ ಎಳೆಯುವ ತವಕದಿಂದ ನನ್ನನ್ನು ಆಕ್ರಮಿಸಿಕೊಂಡಿದೆ. ನನ್ನೂರಿನ ಗರ್ಭದೊಳಗೆ ಹುದುಗಿರುವ ಅದೆಷ್ಟೋ ದುರಂತ ಕತೆಗಳ ಪಾತ್ರಗಳು ಗೋರಿಯಿಂದ ಎದ್ದು ಬಂದು ಮಾತಾಡಿದ ಕನಸಾಯ್ತು. ಸಾವಿಗೆ ಶರಣಾದ ಮುಖಗಳು, ಅತಿ ಹತ್ತಿರದಿಂದ ಸಾವು ಕಂಡವರು, ಬಾಗಿಲ ನಡುವೆ ಕುಳಿತು ಆಚೀಚೆ ಕಾಲಿಟ್ಟುಕೊಂಡು ಕಾಣದ ಅನೂಹ್ಯ ಜಗತ್ತಿನ ತಪಸ್ಸಿನಲ್ಲಿ ನಿರತರಾಗಿರುವ ಮುದುಕರು, ಆಕ್ಷಿಡೆಂಟ್, ನೇಣು, ವಿಷ, ಬಾವಿ, ಕೊಲೆಯಾದವರೂ-ಮಾತು ಮಾತಿಗೂ ನಕ್ಕು ನುಲಿಯುತ್ತಿದ್ದ ಈಶ್ವರ ಗೌಡರ ಸೂಳೆ ಗಂಗಾಳ ಕಣ್ಣು ಮತ್ತೆ ಮೂಡಿತು.. ಮಕ್ಕಳೇ ತಂದೆಯನ್ನು ಅಟ್ಟಾಡಿಸಿ ಕೊಂದ ರಾಮದುರ್ಗ ಕರಿಯಪ್ಪನ ಊನಗೊಂಡಿದ್ದ ಶವ ಕಣ್ಣಮುಂದೆ ಬಂದು ನಿಂತ ಹಾಗಾಯ್ತು. ಹಾದರ ಮುಚ್ಚಲಾರದೆ ಬಾವಿಯ ಆಳ ಕಂಡವಳ ಬಸುರಿನ ಕೂಸು ಕಿಲಕಿಲ ನಕ್ಕ ಹಾಗೆ, ಗೋಣಿ ಚೀಲದೊಳಗಿನ ಶಿಲವಂತರ ಮುದುಕನ ಹೆಣ, ಬಾಣಂತಿ ಹೆಣಮಗಳ ಗೋರಿ ಅಗೆತ, ಐತವಾರ ಅಮವಾಸ್ಯ, ಹುಣ್ಣಿವೆ, ಗ್ರಹಣ ಎಲ್ಲವೂ ಧಿಗ್ಗನೆ ತಲೆ ತುಂಬ ಹೊತ್ತಿಕೊಂಡವು. ಹಳವಂಡದಂತೆ ಭಾಸವಾಗಿ ಕರಗಿ ಹೋದ ದೆವ್ವದ ಆಕೃತಿಗಳೂ ಸಾವಿರ ಸಾವಿರ ರೀತಿಯಲ್ಲಿ ಕಂಡು ಕತ್ತಲಲ್ಲಿ ಕರಗಿ ಹೋದವು. ನಾನು ಒಂದು ಹೆಣದಂತೆ ಸುಡಗಾಡಿನ ಮೂಲೆಯಲ್ಲಿ ಬಿದ್ದುಕೊಂಡಾಗ ಯಾರೋ ಧಡೂತಿ ಎದೆಯ ಮೇಲೆ ಕಾಲಿಟ್ಟ ಅನುಭವಕ್ಕೆ ಎಚ್ಚರಾದಾಗ ಜೋರು ಒಂದ ಬಂದಿತ್ತು. ಈಗ ಸುತ್ತಲಿನ ಕತ್ತಲಲ್ಲಿ ಎಷ್ಟೊಂದು ಆತ್ಮಗಳು ವಿಶ್ರಮಿಸಿರಬಹುದು. ಎಷ್ಟು ಆಯಾಸಗೊಂಡು ಒರಗಿರಬಹುದು? ಇಂಗ್ಲಿಷ ಸಿನೇಮಾ “ಆ್ಯಂಟಿ ಕ್ರಿಷ್ಟ್” ನೋಡಿದ ನೆನಪಾಯ್ತು.  ಶಿಖರ ಸೂರ್ಯ ಕಾಣುವ ಜಗತ್ತಲ್ಲ, ಆಳದ ಪ್ರಪಾತದ ಚಂದಮುತ್ತನ ಆದಿಮ ಕಾಲದ ಅನುಭವವಾಯ್ತು. ಅದೆಷ್ಟು ತಾಳ್ಮೆಯ ಶೂನ್ಯತೆ ಒದಗಿ ಬಂದಿದೆ ಕೃತಿಯಲ್ಲಿ ಅನಿಸುತ್ತಿದೆ. ಚಕೋರಿಯ ಜೋಗತಿ ಬೆನ್ನು ಬಿದ್ದ ಚಂದಮುತ್ತ ಕೊಳಲ ನಾದಕ್ಕೆ, ತಿಂಗಳ ರಾಗದ ಒಲವಿಗೆ ಸೆಳೆದಂತೆ ನಿರೂಪಕ ಅರಸಿದ್ದ ಹೋಲಿಕೆ ಇದೆ. ಅದೊಂದು ಶಿವಾಪುರದ ಕತೆ, ಇದು ಶವಪೂರದ ಕತೆ.

ಶಕ್ತಿಯ ಕುರಿತಾಗಿ ಮನಸ್ಸಿನ ಮೂಲೆಯಲ್ಲಿ ಪ್ರತಿಯೊಬ್ಬನೂ ಕನವರಿಸುತ್ತಿರುತ್ತಾನೆ. ಧ್ಯಾನದ ಸೋಗು ಹಾಕಿದವರು ಬೂಟಾಟಿಕೆ ಮಾಡುವುದು ಆಟೋಈಟೋ ಸಿದ್ದಿಸಿದ ತಕ್ಷಣ ಪುಂಗಿ ಪುರುಷರು ಪ್ರವಾದಿಗಳಾಗಿ ಬಿಡುತ್ತಾರೆ. ನಿಜವಾಗಿಯೂ ಅಂಥ ಒಂದು ಜಗತ್ತು ವಿವೇಕಯುತವಾಗಿ ಸಮಾಜದ ಒಟ್ಟಿಗಿನ ಆಧ್ಯಾತ್ಮಿಕ  ಸಂವಹನ ಮೀರಿ ತಾದಾತ್ಮ್ಯ  ಬೆಳೆಸಿಕೊಂಡು ಆರಾಧನೆಯ ಭಾಗವಾಗದೆ ಅರಿವನ್ನು ವಿಸ್ತರಿಸಿಕೊಳ್ಳಲು ನಿರಂತರ ತೊಡಗಿರುವುದನ್ನು ಈವರೆಗೆ ಬುರಡೆ ಅಂದುಕೊಂಡಿದ್ದ ನನಗೆ ಅವರ ಕೆಂಗಣ್ಣಿನ ಒಳಗಿನ ಮದ್ದು ಮತ್ತು ಮಾಯೆ ಈಗ ಅರ್ಥವಾಗುತ್ತಿದೆ. ಅಗ್ನಿ ಶ್ರೀಧರ ಅವರ ಅನುಭವ ದಟ್ಟವಾಗಿರುವುದಂತೂ ಸ್ಪಷ್ಟ ಆದರೂ ಮಾಂತ್ರಿಕತೆ ಹುಚ್ಚು ಹಿಡಿಸುವ ಹಾಗೇ ರೋಚಕವಾಗಿ ನಿರೂಪಿಸಿರುವುದರಿಂದಾಗಿ ಕೆಲವು ಕಡೆ ಅತಿ ಆಳಕ್ಕೆ ಹೋಗದೆ ಸ್ವ ವಿಮರ್ಶೆಯ ಧಾಟಿಯಲ್ಲಿ ಹೇಳಿರುವುದು ಸ್ವತಃ ಶ್ರೀಧರ ಅವರೂ ಗೊಂದಲಗೊಂಡಿದ್ದಾರೆನಿಸುತ್ತದೆ. ಗೆಳೆಯ ಕಿರಣ ಒತ್ತಾಯದಿಂದ ಓದಿಸಿದ “ಆಧುನಿಕ ಮಾಂತ್ರಿಕರ ಜಾಡಿನಲ್ಲಿ” ಪುಸ್ತಕ ತುಂಬ ಹಿಡಿಸಿತು.

                     -ಅಮಾಸ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s