ಬೀದಿ ನಾಟಕ


ಬೀದಿ ಮ್ಯಾಲೆ….
ಬೀದಿಯ ಮೇಲೆ ನಿಂತು ಸಾವಿರಾರು ಜನರನ್ನು ಸೇರಿಸುವ ಮತ್ತು ಸೇರಿದ್ದ ಜನಮಾನಸಕ್ಕೆ ನೈತಿಕ ಪ್ರಜ್ಞೆ, ಸಾಮಾಜಿಕ ಶಿಕ್ಷಣ ನಿಡಬಲ್ಲ ಶಕ್ತಿಯಾಗಿದ್ದ ಒಂದು ಮಾದ್ಯಮ ಇಂದು ಪ್ರಚಾರಕ್ಕೆ ಮಾತ್ರ ಬೀದಿ ನಾಟಕ ಎಂಬಂತಾಗಿರುವುದು ಬೇಜಾರಿನ ಸಂಗತಿ ಆಗಿಬಿಟ್ಟಿದೆ. ತಮ್ಮಟೆ, ಕಂಜರಾ,ಢೋಲಕಿ ನುಡಿಸುತ್ತ ರಸ್ತೆಗೆ ಇಳಿದರೆ ಸಾಕು ನಿಂತು ನೋಡಲು ಪುರಸೊತ್ತಿಲ್ಲದವರು ಕೊಂಚ ತಡೆದು ಆಟದ ವೃತ್ತದ ಕಡೆ ಕಣ್ಣ ಹಾಯಿಸಿ ನಿಂತು ಹೋಗುತ್ತಿದ್ದರು. ಇದು ನಾನು ಕಂಡ ಬೆಳಗಾಂ,ಧಾರವಾಡ ಕಡೆಯ ಆಟದ ಗತ್ತು. “ನಾವು ಬೆವರನು ಸುರಿಸಿ ದುಡಿಯುವ ಜನ” ಅಂತ ಹಾಡುತ್ತಿದ್ದರೆ ಮೈ ಜುಮ್ಮೆನ್ನುತ್ತಿತ್ತು. ಹ್ಞಾ, ಇದು ಎಪ್ಪತ್ತು ಎಂಬತ್ತರ ದಶಕದ ಮಾತಲ್ಲ ಈಗ್ಗೆ ಹದಿನೈದು ವರ್ಷದ ಕೆಳಗಿನ ಮಾತು… ಹುಬ್ಬಳ್ಳಿ ಧಾರವಾಡ ಸಮುದಾಯ ಘಟಕದಲ್ಲಿ ಅದೆಂಥ ಶಕ್ತಿ ಇತ್ತು? ನನ್ನನ್ನ ಕೊಚ್ಚಿ ತಂದು ನಾಟಕಕ್ಕೆ ಹಾಕಿತು. ಮಾತೆತ್ತಿದರೆ ಕ್ರಾಂತಿ ಅನ್ನುತ್ತಿದ್ದ ಗೆಳೆಯರೆಲ್ಲ ಮದುವೆ ಆಗಿ ಥಣ್ಣಗಾಗಿದ್ದಾರೆ..! ನನಗೆ ತಿಳಿದಂತೆ ನನ್ನ ಓದು,ಗ್ರಹಿಕೆ,ಬದ್ಧತೆಗಳೆಲ್ಲವೂ ‘ಸಮುದಾಯ’ದ ಬಳುವಳಿ ಎಂದು ನೆನೆದುಕೊಳ್ಳುವಾಗ ಖುಷಿ ಆಗುತ್ತದೆ. ಅದೆ ಸಮುದಾಯ ಮುಂದೊಂದು ದಿನ ಯಾವದೋ ಮೈಸೂರು ಸೀಮೆ ಎನ್.ಜಿ.ಓ.ಒಂದರ ಪ್ರಾಜೆಕ್ಟ್ ತಗೊಂಡು ರಾಜ್ಯಾದ್ಯಂತ ಅಂದರೆ ಆಯ್ದ ತಾಲ್ಲೂಕುಗಳಿಗೆ ನಾಟಕ ಮಾಡಲು ಹೋಗುವಾಗ ನಾನು ಅದರೊಳಗೊಬ್ಬನಾಗಿಬಿಟ್ಟದ್ದೆ. ಭಟ್ಟ ಸರ್ ಬದುಕಿದ್ದಾಗ ಸಮುದಾಯವನ್ನು ಹೊರಗಿನಿಂದ ಕಂಡಿದ್ದ ನನಗೆ ಅಂದು ಅವರು ರೈತ ಜಾತಾ ಮಾಡಿದಾಗಿನ-ರಾಮದುರ್ಗ ನಗರದ ಗ್ರಂಥಾಲಯದ ಪಕ್ಕದಲ್ಲಿ-ಪ್ರದರ್ಶನಗೊಂಡ ಬೀದಿ ನಾಟಕ ನನ್ನ ಬದುಕಿಗೊಂದು ಬ್ರೇಕ್ ಕೊಟ್ಟಿತು. ಓದು ಸಾಕನ್ನಿಸಿ ಕಮ್ಯುನಿಷ್ಟ ಪಕ್ಷ ಸೇರಿದೆ,ಊರು ಬಿಟ್ಟು ಧಾರವಾಡ ಸೇರಿದೆ,ಧಾರವಾಡದಿಂದ ಹೆಗ್ಗೋಡು… ಹೀಗೆ ಸಂಪೂರ್ಣ ನಾಟಕವನ್ನೆ ಉಸಿರಾಗಿಸಿಕೊಂಡುಬಿಟ್ಟೆ.
ಇದೆಲ್ಲವೂ ಯಾಕೆ ನೆನಪಾಗುತ್ತದೆ ಅಂದರೆ ಬೀದಿ ನಾಟಕದ ವಿಚಿತ್ರ ಹಂಬಲಗಳು ಈ ಪ್ರೊಸಿನಿಯಂ ರಂಗದಲ್ಲಿ ಸಿಕ್ಕೋದಿಲ್ಲ. ಇಲ್ಲಿಯ ರಸಾನುಭೂತಿ, ಸೌಂದರ್ಯ, ಕಾವ್ಯ, ನಾಟಕೀಯತೆ, ಸಂಗೀತಗಳು ಬೀದಿ ನಾಟಕಕ್ಕೆ ಒಗ್ಗಿಕೊಳ್ಳುವುದಿಲ್ಲ. ಆದರೆ ರಸ್ತೆ ಮೇಲೆ ಓಡಾಡುವ ಜನಗಳನ್ನು ಹಿಡದು ನಿಲ್ಲಿಸುವ ತಾಕತ್ತು ಈ ರಂಗಕ್ಕೆ ಬೇಕಾಗಿಲ್ಲ ನೋಡಿ, ಹಾಗಾಗಿ ಇದರ ವ್ಯವಹಾರವೇ ಬೇರೆ ಅನ್ನಿಸುತ್ತದೆ. ಇಲ್ಲಿ ಮೊದಲೆ ನಾಟಕ ನೋಡಲು ತಯಾರಾಗಿ ಬಂದಿರುತ್ತಾರೆ ಆದ್ದರಿಂದ ಪ್ರದರ್ಶನಕ್ಕೆ ನಟರೂ ಬಿಗುಪಾಗಿ (ತಕ್ಕಮಟ್ಟಿಗೆ ಏನು ಪ್ರೇಕ್ಷಕರ ಮೇಲೆ ಒತ್ತಡದ ಭಾವಗಳನ್ನ ಎಸೆಯುವಷ್ಟು) ತಾಲೀಮು ಮಾಡಿಯೇ ತಯಾರಾಗಿರುತ್ತಾರೆ. ಆದರೆ ಬೀದಿ ನಾಟಕಕ್ಕೆ ಬರುವ ನೋಡುಗರು ಆಸಕ್ತರಲ್ಲ,ದಾರಿಹೋಕರು. ಅಂಥವರೊಳಗೆ ಒಂದು ವಿಷಯದ ಆಗು ಹೋಗುಗಳ ಬಗ್ಗೆ ತಿಳಿಸುವಿಕೆಯ ಪ್ರಯತ್ನ ಬೀದಿರಂಗ ಮಾಡುತ್ತದೆ. ಮನಮುಟ್ಟುತ್ತದೆ ಮುಟ್ಟಿದ್ದು ಮುಂದೆಲ್ಲೋ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಹ್ಯಾಗಂದ್ರೆ ನಾವು ದೂರದರ್ಶನದ ಬ್ರೇಕ್ ಸಮಯದಲ್ಲಿ ನೋಡಿದ ವಸ್ತು ಒಂದು ಮಾರ್ಕೆಟಲ್ಲಿ ಕಂಡಾಗ ಕೊಳ್ಳಬೇಕು ಅನ್ನಿಸುತ್ತದಲ್ಲ, ಹಾಗೇನೆ ಈ ನಾಟಕಗಳ ಪರಿಣಾಮ ಅವರವರ ಭಾವ-ಭಕುತಿಗೆ ಆಗಾಗ ಅಲ್ಲಲ್ಲಿ ದಕ್ಕುತ್ತದೆ.
ದಲಿತ-ಬಂಡಾಯ ಚಳುವಳಿಯ ಬಳುವಳಿಯಾಗಿ, ರಾಜಕೀಯ ಪ್ರಜ್ಞೆಯೊಂದಿಗೆ ಕನ್ನಡದ ಮಾನಸ ತಟ್ಟಿದ್ದ ಬೀದಿ ನಾಟಕ ಇಂದು ಯಾವ ಮಟ್ಟದಲ್ಲಿ ನಿಂತಿದೆ ಎನ್ನುವುದು ಯೋಚಿಸಲಿಕ್ಕು ಆಗದ ವಿಷಯವಾಗಿಬಿಟ್ಟಿದೆ.ಯಾವ ಉದ್ಧೇಶಕ್ಕಾಗಿ ಬೀದಿ ನಾಟಕ ಹಾಗೇ,ಅದೇ ಮಾದರಿಯಲ್ಲಿ ಮಾಡಬೇಕು ಎನ್ನುವ ಮಾತು ಈ ಹೊಸ ಹುರುಪಿನ ಹೊಸ ಹುಡುಗರಲ್ಲಿ ಕೇಳಿಬರುತ್ತದೆ.. ಅವರಿಗೆಲ್ಲ ಸರಕಾರೀ ಕಾರ್ಯಕ್ರಮಗಳ ರುಚಿ ಹತ್ತಿಬಿಟ್ಟಿದೆ, ಕಂಪನಿಗಳ ಪ್ರಚಾರ ಕಾರ್ಯದ ಲಾಭ ತಿಳಿದು ಬಿಟ್ಟಿದೆ ನೋಡಿ ಹಾಗಾಗಿ ಬೀದಿ ನಾಟಕದ ಮಹತ್ವ ಮತ್ತು ನೋಡುಗರ ರುಚಿ ಬದಲಾಗಿದೆ.ಏನು ಲಾಭ ಎಂದು ಪ್ರಶ್ನಿಸುವ ಹಂತಕ್ಕೆ ತಂದುಬಿಟ್ಟಿರುವ ಬೀದಿ ನಾಟಕಗಳ ರಾಜ ನಿರ್ದೇಶಕರು ಸರಿಯಾಗಿಯೇ ಸಮರ್ಥಿಸಿಕೊಳ್ಳುತ್ತಾರೆ. ಅವರ ಮಾತು ಹಾಗಿರಲಿ. ದೂರದ ಬ್ರೆಜಿಲ್ ದೇಶದ ‘ಅಗಸ್ತೋ ಬೋಲ್’ ಎಂಬ ನಿರ್ದೇಶಕರು ಅದೃಶ್ಯ ರಂಗಭೂಮಿ ಬಗ್ಗೆ ಹೇಳುತ್ತಾರೆ- ಅಲ್ಲಿ ನಾಟಕ ನಡೆಯುವುದೆ ನೋಡುಗ ನಟರೊಟ್ಟಿಗೆ.. ನಟ ಆರಂಭಿಸಿದ ವಾಗ್ವಾದ ಸಾರ್ವಜನಿಕರನ್ನು ಕೆರಳಿಸಿ ರಾಜಕೀಯ, ಸಾಮಾಜಿಕ ಸ್ತಿತ್ಯಂತರದ ಕಡೆಗೆ ಇಡೀ ಚರ್ಚೆ ತಿರುಗುತ್ತಲೂ ನಟರು ಮಾಯವಾಗಿ ಬಿಡುತ್ತಾರೆ. ಆದರೆ ಬಹುಮುಖ್ಯವಾದ ಸಭೆ ಅದಾಗಿಬಿಟ್ಟಿರುತ್ತದೆ.
ಇದು ಹೀಗಿರಲು ನಮ್ಮ ಬೀದಿ ನಾಟಕದ ಸಾಧ್ಯತೆಗಳು ಎಲ್ಲಿ ಕೊನೆಗೊಂಡವು ಅನ್ನುವುದು ನುಂಗಲಾರದ ತುತ್ತಾಗಿಬಿಟ್ಟಿದೆ. ಮತ್ತೆ ಬೀದಿ ನಾಟಕಗಳು ಪ್ರಯೋಗಾತ್ಮಕವಾದರೆ ನನಗಂತು ಖುಷಿ ಆಗುತ್ತದೆ.
ಅಮಾಸ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s