ನಟ-ನಾಟಕ-ನಿರ್ದೇಶಕ


ನಟ-ನಾಟಕ-ನಿರ್ದೇಶಕ

 


        ನಾಟಕವೆಂದರೆ ಅದು ಚಚ್ಚೌವುಕಿನೊಳಗಿನ ಆಹ್ಲಾದಕರ ಸೌಂದರ್ಯ  ಎಂದು ಭಾವಿಸುವ ಜನರ ಭಾವಜೀವನದ ತೀವ್ರತೆ ಬರೀ ಅತ್ಯಾನಂದದಾಯಕವಾಗಿರುತ್ತದೆ ಮತ್ತು ಸುಕುಮಾರ ಸುಂದರ ಪ್ರಯೋಗಗಳ ಪ್ರಸ್ತುತಿ ಮಾತ್ರ ಆಗಿರುತ್ತದೆ. ಅಲ್ಲಿ ಆಚಾರ್ಯ(ನಿರ್ದೇಶಕ)ನ ಅಣತಿಯಂತೆ ಎಲ್ಲವೂ ಒಪ್ಪ ಓರಣವಾಗಿರುತ್ತದೆ. ಭಾವ-ಭಂಗಿಗಳೆಲ್ಲವೂ ತಿಂಗಳಾನುಗಟ್ಟಲೇ ಅಭ್ಯಸಿಸಲಾಗಿರುತ್ತದೆ, ಚಾಕಚಕ್ಯತೆಯ ಚಲನೆಗಾಗಿ ನಿರಂತರವಾಗಿ ನಟರು ಹೆಣಗಾಡಿರುತ್ತಾರೆ. ನಾಟಕ ಪ್ರದರ್ಶನ ಈಗ ಪ್ರಯೋಗ ಆಗಿರುವುದರ ಹಿಂದೆ ಚಿಕಿತ್ಸೆಯ ಮಾದರಿಯಲ್ಲಿ ರಂಗಕೃತಿ ನಿರ್ಮಾಣಗೊಳ್ಳುತ್ತಿವೆ. ನಾಟಕ ಸಾಹಿತ್ಯದ ಆಯ್ಕೆ, ರಂಗವಿನ್ಯಾಸ, ರಂಗಸಂಗೀತ, ನಾಟಕ ರೂಪೂಗೊಳ್ಳಬೇಕಾದ ಮಾದರಿ ಮತ್ತೂ ನಾಟಕದ ಲಯ, ಮಾತಿನ ಗತಿ, ಕತೆಯ ಓಘಗಳೆಲ್ಲವನ್ನು ಅಲ್ಲದೆ ನಟರ ಅಂತಃಸತ್ವವನ್ನೂ ನಿರ್ದೇಶಕನ ಕಲ್ಪನೆ ಹೆಣೆದಿರುತ್ತದೆ, ಇದೆಲ್ಲ ಆದ ಮೇಲೂ ನಾಟಕ ಕೊಣೆಗೊಳ್ಳುವುದು ರಂಗದ ಮೇಲೆ ಕಾಣಿಸಿಕೊಳ್ಳುವ ನಟ ಸಂವಹನ ಸಾಧಿಸಿದ ಮೇಲೆಯೇ…. ಆ ಕೊಡುಕೊಳ್ಳುವಿಕೆಯ ವ್ಯಾಪಾರಕ್ಕೆ ಅರ್ಥ ಬರುವುದು-ಬಂದಾದ ನಂತರ ಪ್ರೇಕ್ಷಕನ ಅನುಭವದಲ್ಲಿ ಇಳಿದ ಮೇಲೆ ಮುಗಿಯಿತು. ಅನುಭವ ಕರಗುವುದು ಬಾಗಿ ಬೆಂಡಾಗಿ ಬದುಕಿಗೆ ಒಗ್ಗುವುದು ಇನ್ನ್ಯಾವಗಲೋ ನಡೆಯುವ ಪ್ರಕ್ರಿಯೆ. ಒಬ್ಬ ಪತ್ರಿಕಾ ಸಂಪಾದಕ ತನ್ನೆಲ್ಲ ಬಗೆಯ ಓದುಗರ ನಾಡಿಮಿಡಿತ ಹೇಗೆ ತಿಳಿದಿರುತ್ತಾನೋ ಹಾಗೆ ಮಾರ್ಗದರ್ಶಕ ನಿರ್ದೇಶಕ ಮಹಾಶಯನಿಗೂ ಪ್ರೇಕ್ಷಕನ ಒಲವು-ನಲಿವು ಗೊತ್ತಿರಲೇಬೇಕು.

         ಜನಪ್ರಿಯ ಸಿನೇಮಾ ಸೃಷ್ಟಿಸುವ ವಾಸ್ತವವೆಂಬ ಭ್ರಮಾಲೋಕ ಬೇರೆಯದೆ ಆದ ನೋಡುಗರನ್ನು ಆಯ್ದುಕೊಳ್ಳುತ್ತದೆ. ಆದರೆ ನಾಟಕ ಭ್ರಮೆಯಂತಿರುವ ವಾಸ್ತವದ ಸೆಳಕುಗಳನ್ನು ನಿಜಕ್ಕೂ ಕಲೆಯಲ್ಲಿ ಆಗು ಮಾಡುತ್ತದೆ, ಈ ಕಲೆಯ ಚೈತನ್ಯವೆಂಬುದು ಸಮಾಜದ ವಿವಿಧ ಮುಖಗಳನ್ನು ಕೆದುಕುವುದಾಗಿರುತ್ತದೆ. ಹಾಗೇ ಇದರ ಒಡನಾಟ ಸಮೂಹದೊಟ್ಟಿಗೇ ಇರುವುದರಿಂದಾಗಿ ನಾಟಕದ ಪ್ರಜ್ಞೆ ಅನ್ನುವುದು ನಿರ್ದೇಶಕನದ್ದು ಮಾತ್ರ ಆಗಿರುವುದು ಇವತ್ತಿನ ರಂಗಭೂಮಿ ದುರ್ದೈವ. ನೋಡಿ, ಹೆಗ್ಗೋಡಿನ ಸಂಸ್ಕೃತಿ ಶಿಬಿರದಲ್ಲಿ ಮೊದಲೆರಡು ದಿನ ತಿರುಗಾಟದ ನಾಟಕಗಳ ಪ್ರದರ್ಶನಗಳಾಗುತ್ತವೆ. ನಟರೆಲ್ಲ ತುಂಬು ಸಂಭ್ರಮದಿಂದ ಓಡಾಡುತ್ತಿರುತ್ತಾರೆ. ಆದರೆ ಪ್ರಯೋಗದ ಮಾರನೆ ದಿನದ ಚರ್ಚೆಯಲ್ಲಿ ಚರ್ಚಿಸಲ್ಪಡುವುದು ಬರೀ ನಾಟಕ ಕೃತಿ-ಕರ್ತೃ-ನಿರ್ದೇಶಕ ಮತ್ತು ಅದರೊಳಗಿನ ಸಮಾಜಮುಖಿ ತೀವ್ರತೆಯ ಕುರಿತು ಮಾತ್ರ. ನಟನ ನಟನೆಯ ತೀಕ್ಷಣತೆ,ನಟನ ಅಂತಃಸತ್ವದ ಸಾಧ್ಯತೆ  ಕುರಿತು ಮಾತಾಡುವುದು ತೀರ ಅಪರೂಪವಾಗಿರುತ್ತದೆ. ನಟ ಗೊಂಬೆಯಂತೆ ನಿರ್ದೇಶಕನ ಕೈಯಾಳು ಆದಾಗ, ಲ್ಯಾಬರೋಟರಿ ಒಂದರ ಗಾಜಿನ ಸೀಸೆಯ ಲಿಕ್ವಿಡ್ ಆಗಿ ಆ ರಸ ಈ ರಸ ಬೆರೆಸಿ ಹದ ಮಾಡಿ ನಾಟಕದ ಸ್ಥಾಯಿಭಾವ ಹುಡುಕಿಕೊಳ್ಳುವ ಸಾಧನ ಆಗುವುದರಿಂದಾಗಿ ನಟನ ನಾಟಕೀಯ ಸ್ವಂತಿಕೆ ಸತ್ತು ಹೋಗುತ್ತದೆ. ಅವನ ಜೀವಂತಿಕೆಗೆ ಉಸಿರಾಗಿ ನಿರ್ದೇಶಕನೂ ಒಬ್ಬ ತಂತ್ರಜ್ಞನಾಗಿ ನಟರಿಗೆ ಪೂರಕವಾಗಿ ನಿಂತು ನಾಟಕ ಕಟ್ಟುವ ಕ್ರಿಯೆಯನ್ನ ಅಭಿಜಾತ ಪರಂಪರೆಯ ಆಚಾರ್ಯರು ಒಪ್ಪಿಕೊಳ್ಳಲಾರರು.. ಮತ್ತೂ… ಪ್ರತಿಯೊಂದು ಪ್ರವೇಶ, ನಿರ್ಗಮನ, ಮಾತಿನ ಘಾತ, ನಟನೆಯ ಚಾಪುಗಳೆಲ್ಲವೂ ನಿರ್ದೇಶಕ ಹೇಳಕೊಟ್ಟ ಹಾಗೆ ಬರಬೇಕೆಂಬ ಉದ್ಧಟತನ ಇವರದ್ದಾಗಿರುತ್ತದೆ. ಆಗ ನಟ ಎಷ್ಟೆಷ್ಟು ಪಾತ್ರ ಕಟ್ಟಿಕೊಳ್ಳಲು ತಿಣುಕಾಡುತ್ತಾನೋ ಅಷ್ಟು ವಿಕಾರಿಯಾಗುತ್ತಾನೆ. ಕಸುಬುಗಾರನಾಗಬೇಕಾದ ನಟ ಯಾಂತ್ರಿಕತೆಯ ಮೊರೆಹೋಗಬೇಕಾಗುವುದು ಅನಿವಾರ್ಯವಾಗುತ್ತದೆ. ನಿರ್ದೇಶಕನ ಅಚ್ಚೊತ್ತಿ ಆದ ಮೇಲೆ ನಟ ಎಲ್ಲ ನಾಟಕಗಳಿಗೂ ಒಂದೆ ಮಾದರಿಯ ಅಭಿನಯ ತಯಾರಿಯಲ್ಲಿ ತೊಡಗಿಕೊಳ್ಳುತ್ತಾನೆ.

          ಇತ್ತೀಚಿನ ಕನ್ನಡದ ರೆಪರ್ಟರಿ ನಾಟಕಗಳ ನಟರೆಲ್ಲ ಒಂದು ಮಾದರಿಯಲ್ಲಿ ನಟನೆಯ ಪ್ರಯತ್ನ ಮಾಡುತ್ತಾರೆ 80-90ರ ದಶಕದ ನಾಟಕಗಳ ಹಾಗೆ ಈಗಿನ ನಾಟಕಗಳು ಬರುತ್ತಿಲ್ಲ ಮತ್ತು ಅದೇನೊ ಒಂದ ಥರ ಕಿಸಗಾಲು ಅಭಿನಯ ಮಾಡುತ್ತಾರೆಂಬುದು  ಬಹಳ ವರ್ಷಗಳಿಂದ ಒಂದೇ ಕಂಪನಿಯ ನಾಟಕ ನೋಡುವವರು ಆರೋಪಿಸುತ್ತಲೇ ಬಂದಿದ್ದಾರೆ,  ಮುಖ್ಯ ಬದಲಾವಣೆ ಬಯಸದೆ ಪಡಿಯಚ್ಚಿಗೆ ಬಿದ್ದಿರುವ ರೆಪರ್ಟರಿಗಳು ಆ ಪ್ರೇಕ್ಷಕರು  ಮಾಡುತ್ತಿರುವ ಕಾಮೆಂಟನ್ನು ಸ್ವೀಕರಿಸಿ, ಸೂಕ್ಷ್ಮವಾ ಅಧ್ಯಯನ ನಡೆಸಿ ಹೊಸ ಮಾದರಿಯಲ್ಲಿ ಪ್ರಯತ್ನ ಮಾಡುವಂತಾದರೆ ಉತ್ತಮ.

                                                                                                   – ಅಮಾಸ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s