ನ್ಯಾ…


 ನ್ಯಾಯಕ್ಕೆ ಮೊರೆ ಹೋಗುವ ಬಡಬಗ್ಗರ ಕಣ್ಣಲ್ಲಿ ‘ನ್ಯಾಯ ದೇವರ’ ಹಾಗೆ ಕಾಣಿಸುವ ವಕೀಲರು, ಕಕ್ಷಿಗಾರರ ಕಣ್ಣಲ್ಲಿ ನೀರಿನ ಬದಲಾಗಿ ರಕ್ತವನ್ನು ಹರಿಸುವಂಥ ನಿಷ್ಕರುಣಿಗಳೂ ಆಗಿರುತ್ತಾರೆ. ಅಂಥವರ ಅರಾಜಕತೆಗೆ ಮಾನವೀಯ ಮುಖಗಳೇ ಇರುವುದಿಲ್ಲ. ಭಾರಿ ದಪ್ಪದ ಪುಸ್ತಕ ತೋರಿಸಿ ಅದರೊಳಗಿನ ಸುಳಿವುಗಳೊಂದಿಗೆ ವಾದಿಸುವ ಇವರ ಕರೀ ಕೋರ್ಟಿನ ಒಳಗೆ ಎಲ್ಲ ಮೌಲ್ಯಗಳು ಥಣ್ಣಗೆ ಮಲಗಿಕೊಂಡಿರುತ್ತವೆ. ಇಲ್ಲದ ಕಡೆ ಜಗಳ ಹಚ್ಚಿ ದೇವಮಾನವರ ಹಾಗೆ ನ್ಯಾಯ ಕೊಡಿಸುವ ಇವರೊಳಗಿನ ಕ್ರೌರ್ಯ ಬೂದಿಮುಚ್ಚಿದ ಕೆಂಡದ ಹಾಗಿರುತ್ತದೆ.

ಆದರೆ ಈಗ ತಮ್ಮನ್ನು ಯಾರೂ ಪ್ರಶ್ನಿಸಬಾರದು, ತಾವು ಶ್ರೇಷ್ಠರು ಎಂಬ ಅಹಮ್ಮಿನೊಂದಿಗೆ ಕಾನೂನಿನ ಚೌಕಟ್ಟು ಮುರಿದು ದೆವ್ವಗಳಂತೆ ವರ್ತಿಸಿರುವುದು ಸತ್ಯ ಹೇಳುವ, ಸತ್ಯಶೋಧನೆಯಲ್ಲಿ ನಿರತವಾಗಿರುವ ಪತ್ರಿಕಾರಂಗದ ಜೊತೆಗೆ…. ಕಾರಿಕೊಂಡ ವಕೀಲರು ಯಾರೂ ವಯಸ್ಸಾದವರಲ್ಲ ಯುವಕರು, ಅಂದರೆ, ಈಗಷ್ಟೆ ತಮ್ಮ ಸಂಭಾವನೆಯನ್ನು ನಿಗದಿಪಡಿಸಿಕೊಳ್ಳುತ್ತಿರುವವರು ಇರಬಹುದು. ವೃತ್ತಿಗುಣದೋಷದಿಂದ ಕೆಟ್ಟವರ್ತನೆಯಲ್ಲಿ ತೊಡಗಿದ್ದಾರೆ. ಅವರ ರೋಷಕ್ಕೆ ಕಾರಣ ಬಹಳ ಸಣ್ಣದು ಎನಿಸಬಹುದು, ಆದರೆ ಈ ರಾಜ್ಯದ ಆಡಳಿತ ವ್ಯವಸ್ಥೆಯ ಪಿತೂರಿಯಿಂದಾಗಿ ಹೀಗೆ ಈ ಅವಕಾಶವನ್ನು ಪತ್ರಕರ್ತರ ಮೇಲೆ ಬಳಸಿಕೊಂಡಿರಬಹುದು. ಸದನದ ಸಲ್ಲಾಪ, ವಕೀಲರ ಗೂಂಡಾ ಪ್ರವೃತ್ತಿಯ ವರದಿ, ರಾಜಕಾರಣಿಗಳ ಅವತಾರದ ಸಮೀಕ್ಷೆ, ಗಣಿಗಾರಿಕೆಯ ವರದಿ, ಭ್ರಷ್ಟಾಚಾರದ ಕುರಿತ ವಿಶ್ಲೇಷಣೆ ಈ ಬೂಟಾಟಿಕೆಯ ಮಧ್ಯಮವರ್ಗೀಯ ಜನರನ್ನು ಕೆದಕಿದ್ದಂತೂ ಹೌದು. ಆದರೆ ಸತ್ಯವನ್ನು ಬಹಿರಂಗಗೊಳಿಸುವ ಪತ್ರಕರ್ತರ ಮೇಲೆ ಹಲ್ಲೆ ನಡೆಸಿರುವ ಅಹಮ್ಮಿನ ನಡವಳಿಕೆಯು ವಕೀಲರಿಗೆ ಗೌರವ ತರುವಂಥದ್ದಲ್ಲ.

“ಪರರ ದುಃಖ ನಿವಾರಣೆಗಾಗಿ ಯಾರೂ ವಕೀಲಿ ಮಾಡುವುದಿಲ್ಲ; ಹಣ ಗಳಿಸಲು ಮಾಡುತ್ತಾರೆ. ಐಶ್ವರ್ಯ ಸಂಪಾದನೆಗೆ ಇದೊಂದು ದಾರಿಯಾಗಿದೆ. ಜಗಳ ಹೆಚ್ಚಾದರೆ ಅವರಿಗೆ ಲಾಭ ಹೆಚ್ಚು. ಜಗಳ ಹೆಚ್ಚಾದರೆ ವಕೀಲರಿಗೆ ಸಂತೋಷ; ನಾನಿದನ್ನು ಸ್ವಂತವಾಗಿ ಬಲ್ಲೆ, ಚಿಕ್ಕಪುಟ್ಟ ವಕೀಲರು ಇಲ್ಲದ ಕಡೆ ಜಗಳ ಹಚ್ಚುತ್ತಾರೆ. ಅವರ ದಲ್ಲಾಳಿಗಳು (ಪೂಟ್ ಲಾಯರ್) ಜಿಗಣಿಯಂತೆ ಬಡವರ ರಕ್ತ ಹೀರುತ್ತಾರೆ. ಆ ಕಸಬೇ ಜಗಳ ಕಚ್ಚಾಟಗಳಿಗೆ ಪ್ರೋತ್ಸಾಹ ಕೊಡುವಂಥದು. ವಕೀಲರಿಗೆ ಕೆಲಸ ಹೆಚ್ಚು ಇರುವುದಿಲ್ಲ. ಭೋಗ ವಿಲಾಸಗಳನ್ನು ಬಯಸುವ ಮೈಗಳ್ಳ ಜನ ಇಂಥ ವೃತ್ತಿಗಳನ್ನು ಹುಡುಕುತ್ತಾರೆ. ಇದು ಸತ್ಯ, ಉಳಿದೆಲ್ಲ ವಾದವೂ ಬರೀ ನೆಪ. ವಕೀಲಿ ಕಸಬು ಗೌರವಯುತವಾದುದೆಂದು ಕಂಡುಹಿಡಿದವರೂ ವಕೀಲರೇ. ಆತ್ಮಪ್ರಶಂಸೆ ಮಾಡಿಕೊಳ್ಳುವ ಹಾಗೆಯೆ ಕಾನೂನನ್ನು ರಚಿಸುತ್ತಾರೆ.” ಸ್ವಂತ ಅನುಭವದ ಮೇಲೆ ಮಹಾತ್ಮರು ತಮ್ಮ ಹಿಂದ್ ಸ್ವರಾಜ್ಯ ಕೃತಿಯಲ್ಲಿ ವಕೀಲಿ ವೃತ್ತಿ ಕುರಿತಾಗಿ ಹೇಳಿದ ಮಾತುಗಳಿವು. ಕುಹಕತನದ ವೃತ್ತಿಯವರು ಪಟ್ಟಭದ್ರರಾಗುತ್ತ ಸ್ವಹಿತಾಸಕ್ತಿಗೆ ಅನುಗುಣವಾಗಿ ಆಡಳಿತದ ಸೂತ್ರವನ್ನು ಬದಲಾಯಿಸುವ ಮತ್ತೂ ಭಯ ಹುಟ್ಟಿಸುವ ಸಲುವಾಗಿ ಕುಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಾ ಬಂದಿರುವುದು ಯಾವ ರಂಗದಲ್ಲೂ ಕಡಿಮೆಯೇನಿಲ್ಲ. ಇಂದು ಆಡಳಿತಕ್ಕೇರುವುದೆಂದರೆ ಸ್ವಂತ ಅಸ್ತಿತ್ವ ಪ್ರತಿಷ್ಠಾಪಿಸುವುದು ಮಾತ್ರ ಆಗಿದೆ. ಆದರ್ಶೀಕೃತ ಮಾದರಿ ವ್ಯಕ್ತಿತ್ವಗಳು ಪೂಜೆಗೊಳ್ಳುವ ಈ ಹೊತ್ತಿನಲ್ಲಿ ಭಂಡತನದ ಸಾಧಿಸುವಿಕೆ ಸುಲಭವಾದದ್ದು. ಗಾಂಧಿ ಸ್ವತಃ ವಕೀಲರಾಗಿದ್ದರಿಂದ ವೃತ್ತಿಯ ಆಳರಿವು ಅವರಿಗಿತ್ತು. ಆತ್ಮ ವಿಮರ್ಶೆ ಮಾಡಿಕೊಳ್ಳದ ಯಾವ ಕೆಲಸವೂ, ಅನುಭವದಿಂದ ಬರಲಾರದ ಯಾವ ಮಾತೂ, ಸಿಡಿದೇಳಲಾರದ ಚಳುವಳಿಗಳೂ ಯಾಕೆ ಮಂಕಾಗಿವೆ ಅಂದರೆ ಅದರೊಳಗಿರುವ ಮತ್ತೂ ಆಳಕ್ಕೆ ಹೂತು ಹೋಗಿರುವ ಸ್ವಹಿತಾಸಕ್ತಿ ಕಾರಣ.

ಇವರನ್ನು ನಂಬುವುದಾದರೂ ಹೇಗೆ ? ತಮ್ಮನ್ನು ಸ್ಪಷ್ಟ ಸ್ಪಟಿಕದ ಹಾಗೆ ಇಟ್ಟುಕೊಳ್ಳದ ವಕೀಲರು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಕಾನೂನನ್ನು ಕೈಗೆ ತೆಗೆದುಕೊಳ್ಳುತ್ತಾರಲ್ಲ…. ಇಂಥವರು ಈ ದೇಶದ ಪ್ರಜಾಪ್ರಭುತ್ವದ ಮಹತ್ವದ ಅಂಗವೊಂದನ್ನು ಸಶಕ್ತವಾಗಿ ನಿರ್ವಹಿಸುತ್ತಾರೆನ್ನುವುದು ಅನುಮಾನ. ನಾನು ದೂರದ ಹಳ್ಳಿಯಲ್ಲಿ ಕುಳಿತು ಪತ್ರಿಕೆ ತೆರೆದು ನೋಡಿದರೆ, ಟಿವಿ ಹಾಕಿ ನೋಡಿದರೆ ಕಂಡದ್ದು ಯುವ ವಕೀಲರ ಕೈಯಲ್ಲಿ ಕಲ್ಲು, ಬೂಟು, ಕುರ್ಚಿ ಹಿಡಿದ ಚಿತ್ರಗಳು. ಕಾಲದ ಬೆಂಕಿಯಲ್ಲಿ ಮಾಗದ ಮನಸುಗಳು ದಾರಿ ತಪ್ಪದಂತೆ ತಿದ್ದುವುದು ಸಾಧ್ಯವಾದರೆ ಮುಂದಿನ ದಿನಮಾನಗಳಲ್ಲಿ ಮಾನವೀಯ ಮೌಲ್ಯಗಳ ಕುರಿತು ನಂಬಿಕೆ ಬರುತ್ತದೆ. ಇದು ಹೀಗೆ ಅವರವರ ಸ್ವಪ್ರತಿಷ್ಠೆಯ ಮಾತಾದರೆ ವೃತ್ತಿಧರ್ಮದ ಅವನತಿಯ ಜೊತೆಗೆ ಪ್ರಜಾಪ್ರಭುತ್ವವನ್ನು ತೆಗೆದು ಹಾಕುವ ಪ್ರವೃತ್ತಿ ಬೆಳೆಯುತ್ತದೆ. ಹಾಗಾಗಿ ಇಂದು ಜನಸಾಮಾನ್ಯ ಜಾಗೃತಗೊಳ್ಳಬೇಕಾಗಿರುವುದು ಗೋಳೀಕರಣ ಸೃಷ್ಟಿಸಿರುವ ಮಧ್ಯಮವರ್ಗೀಯ ಆಶೋತ್ತರಗಳಿಂದ. ಸಮಾಜ ಒಡೆಯುವ ಓಟ್ ಬ್ಯಾಂಕ್ ರಾಜಕಾರಣ, ಶ್ರೇಷ್ಠತೆಯ ವ್ಯಸನ, ಅರಾಜಕ ಅಸಮಾನತೆಗಳೂ, ಜಮೀನ್ದಾರೀ ಅಂಶಗಳು ಹೀಗೆ ಬ್ರಿಟಿಷರು ಬಿಟ್ಟು ಹೋಗಿರುವ ರಾಜಕಾರಣದ ಎಲ್ಲಾ ಮಜಲುಗಳೂ ಅದರೊಳಗೆ ಉಳಿದುಕೊಂಡಿದ್ದಾವೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s