ಏಳು ಎದ್ದೇಳು – ಜಾಗೃತನಾಗು ಭಾರತೀಯ


ನಾಲ್ಕು ಸಾದಾ ಆರ್ಡಿನರಿ ಬಸ್ಸುಗಳು ಓಡಾಡುವ ಮಾರ್ಗದಲ್ಲಿ ಎರಡು ತಡೆರಹಿತ ಏಸಿ ಬಸ್ಸುಗಳನ್ನು ಬಿಟ್ಟರೆ… ನಾಲ್ಕು ಬಸ್ಸಿನಲ್ಲಿ ಕುರಿ ನುಗ್ಗಿದಂತೆ ನುಗ್ಗುವ ಗದ್ದಲ ಕಮ್ಮಿಯಾಗುತ್ತದೆ. ಹಣಬಲವುಳ್ಳವರು ಬಸ್ಸಿನಲ್ಲಿ ಓಡಾಡುವುದನ್ನು ಘನತೆಗೆ ತಕ್ಕಂತೆ ಆಯ್ಕೆ ಮಾಡಿಕೊಳ್ಳುತ್ತಾರೆ. ಆಗ ನಾಲ್ಕು ಬಸ್ಸಿನಲ್ಲಿ ಒಂದು ಬಸ್ಸನ್ನು ರದ್ದುಮಾಡಿ ಮೂರು ಆರ್ಡಿನರಿ ಮತ್ತು ಮೂರು ತಡೆರಹಿತ ಸಕಲ ಸೌಕರ್ಯಗಳುಳ್ಳ ಬಸ್ಸನ್ನು ಬಿಡುತ್ತಾರೆ. ಮಧ್ಯಮವರ್ಗದ ಆಯ್ಕೆ ಬರಬರುತ್ತ ಸಕಲ ಸೌಕರ್ಯದ ಕಡೆಗೆ ಹೋಗುತ್ತದೆ. ಮೂರಿದ್ದ ಆರ್ಡಿನರಿ ಎರಡಾಗುತ್ತವೆ. ಒಂದಾಗುತ್ತದೆ. ಕೊನೆಗೊಂದು ದಿನ ಆರ್ಡಿನರಿ ಬದುಕು ಇಲ್ಲವಾಗುತ್ತದೆ. ಆಗ ನಾವು ಅಭಿವೃದ್ಧಿ ಹೊಂದಿದ್ದೇವೆಂದು ಗುಜರಾತಿನವರಂತೆ ಜಗತ್ತನ್ನು ನಂಬಿಸಲು ಸುಲಭವಾಗುತ್ತದೆ.
ಗಾಣದೆತ್ತಿನಂತೆ ಸತತ ದುಡಿಯುವವನ ಬದುಕಿನ ಬಗ್ಗೆ ಯೋಚಿಸುವುದಿರಲಿ ಈ ಅಭಿವೃದ್ಧಿ ಮಂತ್ರದಲ್ಲಿ ಅಂಥವನೊಬ್ಬ ನಮ್ಮದೆ ಭಾರತದಲ್ಲಿ ಬದುಕುತ್ತಿದ್ದಾನೆಂದು ಹೇಳಲು ನಾಚಿಕೊಳ್ಳುವಂತ ನವಸಮಾಜ ನಿರ್ಮಾಣಗೊಳ್ಳುತ್ತಲಿರುವುದನ್ನು ಕಣ್ಣುಳ್ಳವರು ಕಾಣುತಾ, ಕಿವಿಯುಳ್ಳವರು ಕೇಳುತಾ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮೋದಿ ಅವರ ಭಜನೆಯಲ್ಲಿಯೂ ಏಕತಾನತೆಯ ಕೆಟ್ಟ ಪದವೊಂದು ನಾಲಿಗೆಯ ತುದಿಯಲ್ಲಿ ಮಾತ್ರ ಪುಟಿದೇಳುತ್ತಿದೆ. ಅಂಥ ಪದವನ್ನು ಮಾತುಮಾತಿಗೂ ಅಭಿವೃದ್ಧಿ ಎಂಬ ಹೆಸರಿಂದ ಗುರುತಿಸಲಾಗುತ್ತಿದೆ. ಹೀಗೆ ಮಾತಾಡುವವರನ್ನು ಆತುರಗೇಡಿಗಳು, ಯಡಬಿಡಂಗಿಗಳು ಎಂದು ಹೀಗಳೆಯುವದು ಸುಲಭದ ಮಾತಾಯಿತು. ಅವರಿಗೆ ಅರ್ಥವಾಗದ ಭಾಷೆ ಒಂದಿದೆ.. ಅದು ಸಂಬಂಜಾ ಅಂತಾರಲ್ಲ ಅದು. ಅಂಥವರಿಗೆ ಮಾನವೀಯ ಕೌಶಲಗಳು ಸಾಯಲಿ ಮೌಲ್ಯಗಳು ಕೂಡ ಅರ್ಥವಾಗುವುದಿಲ್ಲ. ಹಿರಿಯರನ್ನು ಗೌರವಿಸುವುದರಲ್ಲಿ ಅವರ ಸಂಬಂಧದ ಎಳೆಗಳು ತಪ್ಪಿವೆ. ಅನಂತಮೂರ್ತಿಯವರ ವಿಷಯದಲ್ಲಿ ನೇರವಾಗಿ ಹೇಳಬೇಕೆಂದರೆ ಅವರ ಮನೆಗೆ ಫೋನು ಮಾಡಿದವರಲ್ಲಿ ಹೆಚ್ಚಾಗಿ ಬ್ರಾಹ್ಮಣ ಹುಡುಗರು.. ಅವರು ಹೆಚ್ಚು ವ್ಯಾಕುಲಗೊಂಡು ಈ ವಿಷಯವನ್ನು ಹೇಳಿದ್ದಾರೆಂಬುದರಲ್ಲಿ ಎರಡು ಮಾತಿಲ್ಲ. ಕಳ್ಳುಬಳ್ಳಿಯ ಮಾತಿರಲಿ ಹಿರಿತನಕ್ಕೆ ಗೌರವವಿಲ್ಲದ ಇಂಡಿಯಾ ಎಂಬ ಈ ಮನೆತನದ ನಡೆ ಮುಂದೆ ಯಾವ ಮಾದರಿಯ ಅಭಿವೃದ್ಧಿಯನ್ನು ಹೊಂದೀತು ಎಂಬುದು ನಿಜಕ್ಕು ಆತಂಕ ಮೂಡಿಸುತ್ತದೆ. ಇದು ಹಿರಿತನವನ್ನು ಸಂಪೂರ್ಣ ನಿರ್ಲಕ್ಷಿಸಿರುವ ಮತ್ತು ಜೀವನಾನುಭವವನ್ನು ಹಸಿಹಸಿಯಾಗಿ ಗ್ರಹಿಸಿ ‘ಆನೆ ನಡೆದದ್ದೇ ಮಾರ್ಗ’ ಎಂಬ ಮಾದರಿಯಲ್ಲಿ ರೂಪುಗೊಂಡ ಸರಕಾರ. ಬಿಳಿ ಆನೆಯ ಬಗ್ಗೆ ಚಕಾರವೆತ್ತದಂತೆ ನೋಡಿಕೊಳ್ಳಲು ಈ ಸಣ್ಣಪುಟ್ಟ ಲುಂಪೇನಗಳು ಹೆಚ್ಚು ಆಕ್ಟಿವ್ ಆಗಿರುವುದನ್ನು ನೋಡಿದರೆ ಸರ್ವಾಧಿಕಾರ ಧೋರಣೆಗಳು ಸ್ಪಷ್ಟಗೊಳ್ಳುತ್ತವೆ. ಇಡೀ ಅಜಂಡಾದಲ್ಲಿ ಇತಿಹಾಸ ಮರುಕಳಿಸುವ ಹುಚ್ಚುತನವೇ ತುಂಬಿಕೊಂಡಿರುವುದರಿಂದ ಮಾನವತ್ವ ಬಯಸುವವರು ಸಾಕಷ್ಟು ನೋವುಗಳನ್ನು ಸಹಿಸಿ ಹೋರಾಡುವ ಕೆಚ್ಚು ಬೆಳೆಸಿಕೊಳ್ಳಬೇಕಾಗಿದೆ.
ನಮಗರಿವಿಲ್ಲದಂತೆ ಗೆದ್ದೆತ್ತಿನ ಬಾಲದ ಕಡೆಗೆ ನಮ್ಮ ನೋಟ ಹೊರಳುತ್ತದೆ. ನಾನು ಫೇಸಬುಕ್ಕಿನ ಪುಟದಲ್ಲಿ ಸಿ.ಎಸ್.ಎಲ್.ಸಿ ಕುರಿತಾಗಿ ಅನುಕಂಪದ ಮಾತೊಂದನ್ನು ಆಡಿದಾಗ ಶಿವಮೊಗ್ಗದ ಕೆ.ಅಕ್ಷತಾ ಅವರು ಮುತುವರ್ಜಿಯಿಂದ ಫೋನಾಯಿಸಿ ಎಚ್ಚರಿಸಿದರು. “ಈಗ ಎಲ್ಲವೂ ಮೋದಿಮಯವಾಗುತ್ತಿದೆ. ನಾವು ಜಾಣತನ ತೋರಿಸುವುದಲ್ಲ ಜಾಗೃತೆಯಿಂದ ಹೆಜ್ಜೆಯಿಡಬೇಕಾಗಿದೆ” ಎಂಬುದಾಗಿ ಹೇಳಿದರು. ಒಂದುಕ್ಷಣ ನಾನು ನನ್ನನ್ನೆ ಎಚ್ಚರಿಸಿಕೊಂಡಂತಾಯ್ತು. ಈ ಗೆಲುವನ್ನು ಪ್ರಜಾಪ್ರಭುತ್ವದ ನೆರಳಲ್ಲಿ ಎಷ್ಟು ಸುಲಭವಾಗಿ ನಾವು ಒಪ್ಪಿಕೊಂಡಿದ್ದೇವೆ ಅನ್ನಿಸಿತು. ಆದರೆ ಭಾರತದ ನೆರಳುಗಳಾದ ಅಹಿಂಸೆ ಮತ್ತು ಸ್ವಾಭಿಮಾನದ ಹೋರಾಟಗಳು ಈ ಗೆಲುವಿನ ಹಿಂದೆ ಯಾಕೆ ಕೆಲಸ ಮಾಡಲಿಲ್ಲ ಎಂಬುದು ನಿಜವಾಗಿಯೂ ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ. ಭಂಡತನ ಹೀಗೆ ಗೆಲ್ಲುತ್ತದೆ ಎಂದಾದರೆ ಪ್ರಜಾಪ್ರಭುತ್ವವನ್ನು ಬಯಸಿದ ಈ ದೇಶದ ಅಸಂಖ್ಯ ಗಣಗಳ ವಿಚಾರಶಕ್ತಿಗಳು ಇಷ್ಟು ಬೇಗ ಕಳೆಗುಂದಿದವೇ..? ಅಥವಾ ಅವು ಭಾರತದ ಮುಗ್ಧ ಜಗತ್ತನ್ನು ಸರಿಯಾಗಿ ತಲುಪಲಿಲ್ಲವೇ..! ಬಾಬಾಸಾಹೇಬರು ಮತ್ತು ಗಾಂಧೀಜಿಯವರಿಗೆ ಈ ದೇಶದ ಆಧ್ಯಾತ್ಮಿಕ ಶಕ್ತಿಯ ಮೇಲೆ ಅದಮ್ಯ ನಂಬಿಕೆಯಿತ್ತು. ಒಬ್ಬರು ತನಗಲ್ಲದ ಧರ್ಮವನ್ನು ಧಿಕ್ಕರಿಸಿ ಸ್ವಾಭಿಮಾನಕ್ಕಾಗಿ ಈ ನೆಲದ ಮತ್ತೊಂದು ಪಥವನ್ನು ಆಯ್ದುಕೊಂಡರೆ ಮತ್ತೊಬ್ಬರು ಈ ನೆಲದ ಕರುಣೆಯ ಕ್ಷೀಣ ಸ್ವರದಲ್ಲಿ ಸ್ವಾತಂತ್ರ್ಯದ ಶಕ್ತಿ ತುಂಬಿದರು. ಈ ಎರಡೂ ಪಂಥಗಳನ್ನು ಕಸಿ ಮಾಡಿದ ಅನೇಕರು ಸಮಾಜವಾದದ ಕನಸು ಕಂಡರು… ವಿಚಾರಧಾರೆಗಳು ಎಷ್ಟೇ ಕವಲೊಡೆದರೂ ಭಾರತದ ಆತ್ಮವನ್ನು ಹುಡುಕುವ ಗುರಿವೊಂದೇ ಆಗಿತ್ತು. ಆದರೆ ಈಗ ಆಧ್ಯಾತ್ಮ ಮತ್ತು ಆತ್ಮಗಳು ಸ್ವರ್ಣಾಭಿವೃದ್ಧಿ ಕನಸಲ್ಲಿ ಪ್ರವಾಹಕ್ಕೆ ಸಿಕ್ಕಿ ದಡ ಸೇರದಂತೆ ಆ ದಡ ಈ ದಡಕ್ಕೆ ತಾಗಿಕೊಂಡು ಓಡುತ್ತಿವೆ. ಈಗ ನಿಜಕ್ಕೂ ಭಾರತ ಜಾಗೃತವಾಗಿರಬೇಕಾಗಿದೆ.
*** *** *** ***
ರಾಮಾಯಣದ ರಾಮನಿಗೂ, ಲಂಕೆಯ ರಾವಣನಿಗೂ ಅಭಿವೃದ್ಧಿಯ ಹುಚ್ಚಿತ್ತು. ಸಂಬಂಧಗಳನ್ನು ಪೋಷಿಸಿಕೊಂಡು, ಹಿರಿ-ಕಿರಿಯ ಮುನಿಗಳ ಸಲಹೆಯನ್ನು ಪಡೆದುಕೊಂಡು, ನೆರೆಕೆರೆಯವರ ಮಾತುಗಳನ್ನು ಲೆಖ್ಖಕ್ಕೆ ತೆಗೆದುಕೊಂಡು, ರಾಜ್ಯದ ಸಮಸ್ತ ಜನತೆಯ ಆಶಯಗಳಿಗೆ ಪೂರಕವಾಗಿ ಆಡಳಿತ ನಡೆಸಲು ಹವಣಿಸಿದನೊಬ್ಬ ರಾಜ. ಇನ್ನೊಬ್ಬ ಇಡೀ ಲಂಕೆಯನ್ನು ಸ್ವರ್ಣಮಯ ಮಾಡುವ ಹಂಬಲ ಹೊತ್ತು, ಹಠದಿಂದ ಶಿವನನ್ನು ಗೆದ್ದು, ತನ್ನ ಮನಸ್ಸಿನ ಇಚ್ಛೆಗನುಸಾರವಾಗಿ ತನ್ನ ಕುಟುಂಬದವರು, ಪ್ರಜೆಗಳು ಆಜ್ಞಾವರ್ತಿಗಳಾಗಿ ಜೀವಿಸಬೇಕೆಂದು ಹಂಬಲಿಸಿದ. ನಿಜವಾಗಿಯೂ ಸರ್ವಾಧಿಕಾರಿ ಧೋರಣೆ ಹೆಚ್ಚು ಕಾಣುವುದು ರಾವಣನಲ್ಲಿಯೇ ಅನ್ನಬೇಕು. ಯಾಕೆಂದರೆ ಅವನು ಅದಾಗಲೇ ಲಂಕೆಯನ್ನು ಸ್ವರ್ಣನಗರಿಯನ್ನಾಗಿ ರೂಪಿಸಿದ್ದ. ಈ ಪುರಾಣದ ಅವಲೋಕನದಲ್ಲಿ ನಿಜವಾಗಿಯೂ ಮೋದಿ ಯಾರು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಗೆದ್ದ ಖುಷಿಯಲ್ಲಿದ್ದ ರಾವಣನಿಗೆ ಪೃಥ್ವಿಯ ಮೇಲಿನ ಸಮಸ್ತ ಜೀವಜಂತುಗಳು ಹೆದರಿಕೊಂಡೆ ಸಹಾಯ ಮಾಡುತ್ತಿದ್ದವು. ಸೀತೆಯ ಸುಳಿವನ್ನು ಹುಡುಕುತ್ತ ವಿರಹದಿಂದ ಅಲೆಯುತ್ತಿದ್ದ ರಾಮನಿಗೆ, ರಾಮನ ಪ್ರೀತಿಯ ಕಂಗಳಿಗೆ ಆಸರಾದ ಜೀವಗಳು ಸಂಬಂಧದ ಎಳೆಯನ್ನು ಹೆಣೆದುಕೊಳ್ಳಲು ಹವಣಿಸುತ್ತಿದ್ದವು. ಅದಕ್ಕೆ ಏನೋ ಇಂದಿಗೂ ಪ್ರತಿಯೊಂದು ಊರಿನಲ್ಲಿಯೂ ರಾಮನ ಕುರುಹುಗಳನ್ನೂ, ರಾಮಾಯಣದ ಸ್ಥಳನಾಮೆಗಳನ್ನು ಜನಪದರು ಗುರುತಿಸುತ್ತಾರೆ.
ಸೋಗಲಾಡಿಗಳು ಯಾವತ್ತಿಗೂ ಜನಮಾನಸದ ಭಾವನೆಗಳ ಮೇಲೆ ಸವಾರಿ ಮಾಡುವ ಹಪಹಪಿ ಹೊಂದಿರುತ್ತಾರೆ. ಸ್ವರ್ಣಾಭಿವೃದ್ಧಿಯ ಗುರಿ ತೋರಿಸಿ ದೊಡ್ಡದೊಂದು ಕಂದಕ ಕೊರೆದು ಜನರ ಭಾವನೆಗಳನ್ನು ಅಲ್ಲಿ ಹೂತುಬಿಡುತ್ತಾರೆ. ಇಂಡಿಯಾದ ಹೊಸ ಪ್ರಧಾನಿ ನರೇಂದ್ರ ಮೋ(ಡಿ)ದಿಯವರನ್ನು ಹೆಚ್ಚೆಚ್ಚು ಜನರಿಗೆ ಪರಿಚಯಿಸಿದವರು ಅವರನ್ನು ಬೆತ್ತಲು ಮಾಡಲು ಹವಣಿಸಿದ ಅವನ ವಿರೋಧಿಗಳೇ ಎಂದು ಹಲಕೆಲವರು ಅಲ್ಲಿ-ಇಲ್ಲಿ ಬರೆದುಕೊಂಡಿದ್ದಾರೆ. ಒಬ್ಬ ವ್ಯಕ್ತಿಯ ಗುಣಾವಗುಣಗಳ ಅವಲೋಕನ ನಡೆಯುವುದು ಸತ್ತಮೇಲೆಯೇ ಎಂಬುದು ಇಂದಿಗೂ ಮುಗ್ಧಭಾರತ ನಂಬಿಕೊಂಡಿದೆ. ಅಂದರೆ ಅವನ ಅಂತಿಮ ಶವಯಾತ್ರೆಯಲ್ಲಿ ಜನ ಮಾತಾಡಿಕೊಳ್ಳುವುದರ ಆಧಾರದಲ್ಲಿ ಅವನು ಸ್ವರ್ಗ ಸೇರಿದನೋ ನರಕ ಸೇರಿದನೋ ಎಂಬುದನ್ನು ನಿರ್ಧರಿಸುತ್ತಾರೆ. ಈ ನೆಲದ ಅನೇಕ ಕನಸುಗಳು ಕಟ್ಟಿದ ಭಾರತ-ಹಿಂದುಸ್ಥಾನ,-ಇಂಡಿಯಾ ಎಂಬ ಅನೇಕ ಸಂಕೇತಾಕ್ಷರಗಳ ಹಿಂದಿನ ರೂಪುಗಳು ಒಡೆದು ಶವಯಾತ್ರೆ ಹೊರಟಂತೆ.. ಆ ಹೊರಟಿದ್ದ ಜನಸಮೂಹದಲ್ಲಿ ಮೋದಿಯವರ ಕೈಯಲ್ಲಿ ಬೆಂಕಿಯ ಮಡಕೆಯನ್ನು ಕೊಟ್ಟಂತೆ ಈ ಫಲಿತಾಂಶದ ಪರಿಣಾಮವಿತ್ತು. ಟಿವಿ ಪರದೆಯಲ್ಲಿ ವಾರಗಟ್ಟಲೆ ಚರ್ಚೆಗಳು ನಡೆದವು. ಆ ಚರ್ಚೆಗಳಲ್ಲಿ ಒಂದಂತೂ ಸಾಬೀತಾಗುತ್ತಿತ್ತು ಹೊಸ ಭಾರತದ ಹೆಸರು ಅಭಿವೃದ್ಧಿ ಎಂಬುದಾಗಿತ್ತು.
ಶಿಖರ ಸೂರ್ಯ ಕಾದಂಬರಿಯಲ್ಲಿ ಬರುವ ಕನಕಪುರಿ ರಾಜ್ಯದ ಲಕ್ಷಣಗಳನ್ನೇ ಈ ಮಾಧ್ಯಮದವರು ಚರ್ಚಿಸುತ್ತಿದ್ದಾರಲ್ಲ ಎನಿಸುತ್ತಿತ್ತು. ಚಿನ್ನದ ಬೇಟೆಯೊಂದೇ ಗುರಿಯಾದರೆ ಹರಿವ ನದಿ, ಉರಿವ ಸೂರ್ಯ, ಹಳ್ಳಕೊಳ್ಳ ಜಲಚರ, ಪ್ರಾಣಿ, ಪಕ್ಷಿಗಳು, ಗಿಡ, ಮರ, ತರು ಲತೆಗಳು ಸೇರಿದಂತೆ ಉಸುರುವ ಗಾಳಿ, ತಿನ್ನುವ ಅನ್ನ ಹೀಗೆ ಮನುಷ್ಯನ ಮೂಲಭೂತ ಬದುಕಿನ ಆಧಾರಗಳಿಗೆ ಕಿಂಚಿತ್ತೂ ಕಿಮ್ಮತ್ತಿಲ್ಲವಾದೀತು.
ಗೀತೆಯ ಶ್ಲೋಕವೊಂದಕ್ಕೆ ಮೋದಿಯ ಭಾವಚಿತ್ರವನ್ನು ಡಿಜ್ ಡಿಜೈನಾಗಿ ಪ್ರಭಾವಳಿಗಳ ಮೂಲಕ ಆಡಿಯೋ-ವೀಡಿಯೋ ಎಡಿಟ್ ಮಾಡಿ ಅಂತರ್ಜಾಲದಲ್ಲಿ ಹರಿದಾಡಿಸಿ, ಈ ಭಾರತದ ಸಮ್ಮೋಹನ ಶಕ್ತಿಯಾದ ಧರ್ಮಾಧಾರಿತ ರಾಜಕಾರಣ, ಕಪ್ಪುಹಣ, ರಾಷ್ಟ್ರೀಯತೆಯ ಹುಚ್ಚುಮೋಹ, ಅಭಿವೃದ್ಧಿಯೆಂಬ ಗುಮ್ಮನನ್ನು ಅಸ್ತ್ರವನ್ನಾಗಿಸಿ ತೀರ ಮುಗ್ಧರನ್ನು ಮರಳು ಮಾಡಿ ಗೆದ್ದಾಯ್ತು. ಆದರೆ ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ಎದುರು ಸಾಲಿನಲ್ಲಿ ಕೂಡಲು ಬೆರಳಣಿಕೆಯಷ್ಟು ಜನಗಳನ್ನು ಆರಿಸಿ ಕಳಿಸಿರುವುದರ ಮುನ್ಸೂಚನೆ ಯಾವ ರೂಪದಲ್ಲಿ ವಕ್ಕರಿಸುತ್ತದೆಯೋ ಹೇಳಲಾಗುತ್ತಿಲ್ಲ. ಫಲಿತಾಂಶದ ದಿನ ಮತ್ತು ಫಲಿತಾಂಶದ ನಂತರ ನನ್ನಂತವರು ಅನೇಕರು ಥಳಮಳಿಸಿದರು. ಆ ಆತಂಕವನ್ನು ವಿವರಿಸುವ ಗೋಜಿಗೆ ಹೋಗಲಾರದಷ್ಟು ಹೋಳಿ, ದೀಪಾವಳಿ ಹಬ್ಬಗಳು ದೇಶದ ಎಲ್ಲ ಹಿರಿ-ಕಿರಿ ಊರು ನಗರ ಪಟ್ಟಣಗಳಲ್ಲಿ ನಡೆಯುತ್ತಿತ್ತು. ಸುಳ್ಳು ಮತ್ತು ಸತ್ಯಗಳ ನಡುವಿನ ತೆಳುಗೆರೆ ಮಾಯವಾಗಿರುವುದನ್ನು ನೋಡಿದರೆ ಭಾರತ ಭಾರಿ ಬೆಲೆ ತೆರುತ್ತದೆಂಬುದನ್ನು ಊಹಿಸಬಹುದಾಗಿದೆ.
ಆಡಳಿತದ ಚುಕ್ಕಾಣಿ ಹಿಡಿದವ ಮೊದಲು ಸಿಬ್ಬಂದಿಗಳನ್ನು ತಮ್ಮ ಕೈ ಹಿಡಿತಕ್ಕೆ ತೆಗೆದುಕೊಳ್ಳುತ್ತಾನೆ. ಇಸ್ಪಿಟ್ ಆಟದಲ್ಲಿ ಮೊದಲು ಎಲೆಗಳನ್ನು ಜೋಡಿಸಿಕೊಳ್ಳುವ ರೀತಿಯ ಕೆಲಸವದು. ಆಟದ ಗಮ್ಮತ್ತಿರುವುದು ಎಲೆಗಳನ್ನು ಬಿಡುವ ಕ್ರಮದಲ್ಲಿಯೇ ಎಂದಾದರೆ ಆಟದಲ್ಲಿ ತೊಡಗಿರುವ ಪ್ರತಿಯೊಬ್ಬನೂ ಗೆಲ್ಲಲು ಹವಣಿಸುತ್ತಾನೆ. ಆದರೆ ಈಗ ಭಾರತದಲ್ಲಿ ಆಟದ ಎಲೆಗಳೆಲ್ಲವನ್ನು ಒಬ್ಬನ ಕೈಯಲ್ಲೇ ಕೊಟ್ಟು ಆಟವಾಡು ಎಂದರೆ..! ಆಡಲು ಅಲ್ಲೇನಿದೆ…?
ಮುಂದೊಂದು ದಿನ ಯಾವನೋ ಒಬ್ಬ ಸಾಹಿತಿ ಭಾರತದಲ್ಲಿ ಮೌಲ್ಯಗಳು ಸಾಯುತ್ತಿವೆ ಎಂದು ಭಾಷಣ ಮಾಡಿದನೆಂದು ಇಟ್ಟುಕೊಳ್ಳಿ… ಆಗ ಮಾಧ್ಯಮಗಳು ಅದನ್ನು “ಮೌಲ್ವಿಗಳು ಸಾಯುತ್ತಿದ್ದಾರೆ” ಎಂದು ವಿಷಯವನ್ನು ತಿರುಚಿ ಎರಡು ಕೋಮುಗಳ ನಡುವೆ ಅಂತರಾಷ್ಟ್ರೀಯ ಮಟ್ಟದಲ್ಲಿ ವಿನಾಕಾರಣ ವೈಷಮ್ಯ ಹುಟ್ಟುಹಾಕುತ್ತವೆ. ಅಂಥ ಮಾಧ್ಯಮಗಳೊಟ್ಟಿಗೆ ನಾವು ಬದುಕಬೇಕಾಗಿದೆ. ಬಾಯಿಗೆ ಬಂದದ್ದನ್ನು ವಿವೇಚಿಸುವ ಶಕ್ತಿಯಿಲ್ಲದ ನಿರೂಪಕರು ಜನಮಂದೆಯನ್ನು ಹುರುಪುಗೊಳಿಸಿ ಹುಚ್ಚೆಬ್ಬಿಸುತ್ತಿದ್ದಾರೆ. ಜನರ ಅಭಿಮತ ಇಂಗಿತಗಳನ್ನು ತಾವೇ ರೂಪಿಸುವ ಗುತ್ತಿಗೆ ಪಡೆದಂತೆ ಆಡುತ್ತಿರುವ ಟಿವಿ ಮಾಧ್ಯಮಗಳಿಗೆ ಯಾವ ಹಿಡನ್ ಅಜಂಡಾಗಳಿದ್ದಾವೋ.. ಗೊತ್ತಿಲ್ಲ ಆದರೆ ಖಾಊಜಾ ಎಂಬ ಮೂರಕ್ಷರದ ಮಂತ್ರ ಬಯಸುವ ಭಾರತವನ್ನು ಈ ಮಾಧ್ಯಮ ಸಲೀಸಾಗಿ ತಯಾರು ಮಾಡುತ್ತಿದೆ. ಹಾಗಾಗಿ ಈ ಸಲ ಅಭಿವೃದ್ಧಿಯ ಹುಚ್ಚುತನ ಗೆದ್ದಿದೆ ಎಂದು ಮಾತ್ರ ಹೇಳುವುದು ತಪ್ಪಾದೀತು. ಈ ಸಲ ಭಾರತದಲ್ಲಿ ನಿಜವಾಗಿ ಜಯ ಸಾಧಿಸಿದವರು ಬಂಡವಾಲಶಾಹಿಗಳು. ಅವರೊಂದಿಗೆ ನಮ್ಮ ನೆಲದ ಸ್ವಾಭಿಮಾನ, ಅಹಿಂಸೆ ಮತ್ತು ಸಮಾಜವಾದದಂತ ಸಾವಿರಾರು ತೊರೆಗಳು ಕೊಚ್ಚಿಹೋಗದಂತೆ ಎಚ್ಚರವಹಿಸಬೇಕಾಗಿದೆ.

-ಮಹಾದೇವ ಹಡಪದ

ಓ ಜಂಗಮ


ಮುಳ್ಳಿನ ಮೇಲೆ ನಿಂತು
ವಕ್ಕಣೆ ಒದರಬೇಡವೋ
ಖಾವಿಯುಟ್ಟ ನರಪೇತಲು ಜಂಗಮನೇ..

ಸಾರು ಜಂಗಮನೇ
ಕಾರುಣ್ಯದ ಸಾಲುಗಳ
ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ

ಧರ್ಮಕ್ಕಾಗಿ
ಭಿಕ್ಷೆಗಾಗಿ
ಪ್ರಾಸಕ್ಕಿದೆ ಎಂದು ಹಾಡಬೇಡ

ಬಡಬಡಿಸಬೇಡ
ಲೋಕಚರಿತವ ತಿದ್ದಲು
ಒಂಟಿ ಸೂರನು ಸರಿಮಾಡಿ ಹಾಡು

ಭಕ್ತರು
ಶರಣು ಬಂದರು
ಅಕ್ಷರಕ್ಷರವ ಬಿಡಿಸಿ ಹೇಳು

ಗೋಪುರಕೆ
ಗಾಜು ಕಟ್ಟಿಸಿದರೇನು
ಶಿವಪೂಜೆಗೆ ಪತ್ರಿ ಬೇಕು

ಹಾಲು
ಮೊಗೆದು ಕುಡಿದರೇನು
ನೀರು ಕುಡಿವುದ ಮರೆಯಬೆಡ

ವಿದಾಯ


ತಂತಿ ಹರಿಯಿತೇ
ಅಯ್ಯೋ ಮಾರಾಯಾ
ನಿನ್ನ ನೆಲದಲ್ಲಿ ಕರುಣೆಯ ಮಹಾಪೂರವೇ ಹರಿದಿದೆ
ಸಾಕ್ಷಿಗಲ್ಲು ಕೂಡ ಒದ್ದೆಯಾಗಿರುವಾಗ
ಹೀಗೆ ಚಿರನಿದ್ದೆಗೆ ಜಾರಿದೆಯಾ

ಸಖನ ಸಖ್ಯದಲಿ ಬೆವರೂ ತಂಪಾಗಿದೆ
ಧಗೆಗೆ ಮಂಜು ಬೇಕಿಲ್ಲ ಮೈಬೆವರೇ ಸಾಕು
ಈಗ ಬೀಳ್ಕೊಡುವಾಗ
ನಿನ್ನ ಹೋಲಿಕೆ ಕಂಡಾಗ
ಮತ್ತೆ ಬಂದು
ಅಂಗಳದಲ್ಲಿ ಹೊಲಗದ್ದೆಗಳಲ್ಲಿ ಇಳಿಜಾರಲ್ಲಿ ಆಟವಾಡಿದ
ಕುಣಿದು ಕುಪ್ಪಳಿಸಿ ಓಡಾಡಿದ ಶಾಂತ ಚೈತನ್ಯದ ಬುದ್ಧ ಕಾಣಿಸಿದ್ದ.

ಸೆರೆಮನೆ-ಅರಮನೆಗಳ ವ್ಯತ್ಯಾಸ ನೀ ಬಲ್ಲವ
ಹುಚ್ಚಪ್ಪ!
ನೀ ಸ್ಮಶಾನದಲ್ಲಿ ಡಮರುಗ ನುಡಿಸಿದ್ದ ಕೇಳಿ
ಪುಳಕಗೊಂಡಿತ್ತು ಜಗ
ಸಾಯದೇ ಸುಡುಗಾಡ ಕಂಡವರ ಹಳಹಳಿಕೆ
ನೀ ವಿಶ್ರಮಿಸಿರು
ನಿನ್ನ ಪ್ರಸನ್ನತೆ ನಮಗೆ ಉಡುಗೊರೆ ಗೆಳೆಯಾ

ಸುಕ್ಕಿನ ನೆರಿಗೆಗಳು ಚರ್ಮಕ್ಕೆ ಅಂಟಿಕೊಂಡಿದ್ದಕ್ಕೆ
ಜೈಲಿನ ಕಂಬಿಗಳೂ ನಗುತ್ತಿದ್ದವು.
ವಿದಾಯ ಹಂಬಲದ ಗೆಳೆಯಾ
ನಿನ್ನ ನೆಲದ ಕರುಣೆಯ ಮಹಾಪೂರದೊಂದಿಗೆ
ನನ್ನ ನೆಲವೂ ಒದ್ದೆ ಒದ್ದೆ

ರಮಾತತಾಯಿಯ ಕಣ್ಣಲ್ಲಿ ಕಂಡ ಅಂಬೇಡ್ಕರ್…


ಓದು, ಬರಹ, ಉನ್ನತ ವ್ಯಾಸಂಗಕ್ಕಾಗಿ ವಿದೇಶ ಸಂಚಾರ, ರಾಜಕೀಯ, ಸಾಮಾಜಿಕ ಹೋರಾಟ, ಸಭೆ-ಸಮಾರಂಭ, ಸಂಘಟನೆ, ಪತ್ರಿಕೆ ಅಂತ ತಲ್ಲೀನರಾಗಿದ್ದ ಬಾಬಾಸಾಹೇಬರು ಮನೆಯಿಂದ ಯಾವತ್ತಿಗೂ ಹೊರಗೆ ಇರುತ್ತಿದ್ದರು. ಒಮ್ಮೆ ಅವರು ಮನೆಗೆ ಬಂದಾಗ ರಮಾಬಾಯಿಯವರು ಹರಿದ ಸೀರೆಗೆ ತೇಪೆ ಹಾಕುತ್ತ ಕುಳಿತಿದ್ದರಂತೆ. ಸೂರ್ಯನಂತೆ ಪ್ರಖರವಾಗಿ ಉರಿಯುತ್ತಿದ್ದ ಬಾಬಾಸಾಹೇಬ್ ಚಣಕಾಲ ತಣ್ಣಗಾಗಿ ಕರುಣಾರ್ದ್ರ ಕಣ್ಣುಗಳಿಂದ ರಮಾಬಾಯಿಯವರನ್ನು ಕಣ್ತುಂಬಿಕೊಂಡರಂತೆ.
ಆ ಕ್ಷಣವೇ ಹೆಂಡತಿಯನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಮುಂಬೈನ ಮುಖ್ಯರಸ್ತೆಯಲ್ಲಿ ಕರೆದುಕೊಂಡು ಹೊರಟರಂತೆ. ಆಗ ಅಂಬೇಡ್ಕರ್ ಅವರ ಮುಖದಲ್ಲಿ ಕಾಣುತ್ತಿದ್ದ ಮಾನವೀಯ ಸಖ್ಯವನ್ನು, ಪ್ರೀತಿಯ ಕಾರುಣ್ಯವನ್ನು ಸವಿಯುತ್ತಿದ್ದ ರಮಾಬಾಯಿಯವರಿಗೆ ತಾನು ಎಲ್ಲಿಗೆ ಹೊರಟಿದ್ದೇನೆ ಯಾಕಾಗಿ ಹೊರಟಿದ್ದೇನೆ ಎಂಬುದರ ಬಗ್ಗೆ ಕಿಂಚಿತ್ತು ತಿಳಿದಿರಲಿಲ್ಲ. ಮುಂಬೈನ ಮನಮೋಹಕ ಕಟ್ಟಡಗಳ ನಡುವೆ ಹಾದು, ಬಟ್ಟೆ ಅಂಗಡಿಯ ಮುಂದೆ ಕಾರು ನಿಂತಾಗಲೂ ರಮಾಬಾಯಿಯವರ ಕಣ್ಣು ಅಂಬೇಡ್ಕರ್ ಮುಖವನ್ನೇ ನೋಡುತ್ತಿದ್ದವು. ಅಂಗಡಿಯಾತನಿಗೆ ಇವಳಿಗೆ ಇಷ್ಟವಾಗುವ ಸೀರೆಯನ್ನು ತೋರಿಸಪ್ಪಾ ಎಂದರಂತೆ. ರಮಾಬಾಯಿಯವರ ಮುಂದೆ ರಾಶಿಯತ್ತರದಲಿ ಸೀರೆಗಳ ಗಳಿಗೆಗಳ ಬಿಚ್ಚಿ ಹಾಸಿದಾಗಲೂ ರಮಾಬಾಯಿಯವರ ಲಕ್ಷ್ಯ ಬಾಬಾಸಾಹೇಬರ ಮೇಲೆ ನೆಟ್ಟಿತ್ತು.
ಆಗ ವಿಚಲಿತರಾದ ಅಂಬೇಡ್ಕರ್ “ರಾಮು ಯಾಕೆ..? ಏನಾಯ್ತು…! ನಿನಗಿಷ್ಟವಾಗುವ ಸೀರೆಗಳನ್ನು ಆಯ್ದುಕೋ” ಎಂದರು. ಆದರೂ ರಮಾಬಾಯಿಯವರ ಚಿತ್ತ ಕದಲಲಿಲ್ಲ. “ಯಾಕೆ ರಾಮು ನನ್ನ ಮುಖವನ್ನೇ ಯಾಕೆ ನೋಡುತ್ತಿದ್ದಿ ನಿನಗೇನಾಗಿದೆ…” ಎಂದು ಕೇಳಿದಾಗ. ರಮಾತಾಯಿ ದುಃಖಪೂರಿತ ಕಣ್ಣುಗಳಲ್ಲಿ “ಸಾಹೇಬ ನಿಮ್ಮ ಈ ಅಕ್ಕರೆಯ ಮುಖವನ್ನು ನಾನು ಸರಿಯಾಗಿ ನೋಡದೆ ಎಷ್ಟು ವರ್ಷಗಳಾಗಿದ್ದವು… ನಿಮ್ಮ ಮುಖದಲ್ಲಿನ ತೇಜಸ್ಸು ನನ್ನ ಮನಸ್ಸನ್ನು ಸೂರೆಗೊಂಡಿತು” ಎಂದರಂತೆ. ಆ ಮನಸೂರೆಗೊಂಡ ಮುಖದ ತೇಜಸ್ಸಿನ ಬೆಳಕಲ್ಲಿ ಬದುಕಲು ಹಂಬಲಿಸುವ ಸಹಸ್ರ ಸಹಸ್ರ ಜನರು ಇಂದು ರಮಾಬಾಯಿಯವರನ್ನು “ಆಯಿ” (ಅಮ್ಮ) ಎಂದು ಗೌರವಿಸುತ್ತಾರೆ. ಆ ತಾಯಿಯ ಒಕ್ಕಲುಬಳ್ಳಿಯಂತೆ ಇವತ್ತಿನ ಬಹುತೇಕರು ಅಂಬೇಡ್ಕರ್ ಅವರನ್ನು ದೇವರಂತೆ ಪೂಜಿಸುತ್ತಾರೆ. ಅದು ವೈಚಾರಿಕ ಚಿಂತನೆಯನ್ನು ಗೌರವಿಸುವ ವಿಧಾನವೇ ಹೊರತು ಅಂಬೇಡ್ಕರ್ ನಮ್ಮ ಆಸ್ತಿ ಎಂಬ ಭಾವವನ್ನು ದಲಿತರು ವ್ಯಕ್ತಪಡಿಸುತ್ತಿದ್ದಾರೆ. ಇಂದು ದಲಿತರಲ್ಲದ ಬಹುಸಂಖ್ಯಾತ ಜನರು ಬಾಬಾ ಸಾಹೇಬರ ಬರಹ, ಭಾಷಣಗಳಿಂದ ಪ್ರೇರಣೆ ಪಡೆದು ಸಾಮಾಜಿ ಕಾರ್ಯಗಳಲ್ಲಿ ನಿಷ್ಠಾವಂತಿಕೆಯಿಂದ ಕೆಲಸ ಮಾಡುವವರಿದ್ದಾರೆ. ಅಂಬೇಡ್ಕರ್ ಯಾವುದೋ ಒಂದು ಜಾತಿಯ ಒಂದು ಕೋಮಿಗೆ ಸಂಬಂಧಪಟ್ಟ ವ್ಯಕ್ತಿಯಲ್ಲ… ಭಾರತವನ್ನು ಪುನರ್ ರೂಪಿಸಲು, ಭಾರತದ ಸಮಾಜರಚನೆಯನ್ನು ಬದಲಾಯಿಸುವ ವಿಶ್ವಾಸದ ಬೀಜವನ್ನು ಬಿತ್ತಿದ ರಾಷ್ಟ್ರ ನಾಯಕ. ಹಾಗೆಯೇ ಹಿಂದುಳಿದ, ಶೋಷಿತ ತಳಸಮುದಾಯಗಳಿಗೆ ಸಮಾಜೋಧಾರ್ಮಿಕ ನಾಯಕರಾದವರು.
ಜಗುಲಿ, ದೇವರ ಕೋಣೆ, ದೇವರಕಟ್ಟೆಯೆಂಬ ಮನೆಯೊಳಗಿನ ಪವಿತ್ರ ಜಾಗಗಳಲ್ಲಿ ಬುದ್ಧನ ಫೋಟೋ ಮತ್ತು ಮೂರ್ತಿಗಳ ಸಮಸಮವಾಗಿ ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಇಟ್ಟು ಪೂಜೆ ಮಾಡುವುದು ಇಂದು ಬಹುತೇಕ ಮನೆಗಳಲ್ಲಿ ವಾಡಿಕೆಯಾಗಿದೆ. ಕಾನೂನು ಮಂತ್ರಿಯಾಗಿ ಸಂವಿದಾನ ಶಿಲ್ಪಯಾಗಿಯೇ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುವ ಪ್ರತಿಮೆಗಳಿಗಿಂತ ಈ ಜಗಲಿಗಳ ಮೇಲಿನ ಅಂಬೇಡ್ಕರ್ ನನಗೆ ಬಹುಪ್ರಿಯವಾಗಿ ಕಾಣಿಸುತ್ತಾರೆ. ಅಂತರಂಗವನ್ನು ಪ್ರವೇಶಿಸಿಸುವ ಈ ಇತಿಹಾಸದ ವ್ಯಕ್ತಿಯು ಪ್ರತಿಯೊಬ್ಬನ ಆತ್ಮಸ್ಥೈರ್ಯದ, ಸ್ಪೂರ್ತಿಯ, ವಿವೇಕದ ಸಂಕೇತವಾಗಿ ಜನಮಾನಸದಲ್ಲಿ ಉಳಿದುಬಿಡುತ್ತಾನೆ. ಆರಾಧಿಸುವ ಭಯದ ಭಾವಕ್ಕಿಂತ ಹೆಚ್ಚು ಸ್ಪಷ್ಟವಾಗಿ ನೆರಳುಗಳಿಗೆ ಹೆದರುವ ಮನಸ್ಸನ್ನು ಈ ಡಾ|| ಬಿ.ಆರ್. ಅಂಬೇಡ್ಕರ್ ಹುರಿದುಂಬಿಸುತ್ತಾರೆ.

ನಂಬಿಕೆ, ಮೂಢನಂಬಿಕೆ ದ್ವಂದ್ವಗಳ ನಡುವೆ


ಸರಿಯಾಗಿ ಗಮನಿಸಿದರೆ ನಂಬಿಕೊಂ­ಡದ್ದು ಮತ್ತು ಮೂಢರಾಗಿ ಒಪ್ಪಿಕೊಂ­ಡದ್ದು ಬೇರೆ ಬೇರೆಯಾಗಿಯೇ ಕಾಣಿಸು­ತ್ತವೆ. ತಿಳಿದವರು ತಿಳಿಸಿದರೆ ಬಲವಾಗಿ ನಂಬಿಕೊಂಡ ನಂಬಿಕೆಯೂ ಸುಳ್ಳಾಗುತ್ತದೆ…

ಉಕ್ಕುಡಗಾತ್ರಿಯ ಹೊಳೆ­ದಂಡೆಯ ಆಲದ ಮರದಲ್ಲಿ ದೆವ್ವಗಳೂ, ಪಿಶಾಚಿಗಳೂ, ಬ್ರಹ್ಮರಾಕ್ಷ­ಸರೂ ನೇತಾಡುತ್ತಾರೆಂದು ಮಧ್ಯ­ಕರ್ನಾ­ಟಕದ ಜನ ಹೇಳುತ್ತಾರೆ. ಅದು ಅವರ ನಂಬಿಕೆ ಎಂದು ತಿಳಿದವರು ಮತ್ತು ಅರಿವು ಇದ್ದಂಥವರು ಸುಮ್ಮನಿ­ರಲು ಸಾಧ್ಯವೇ? ಅಲ್ಲಿ ಯಾವ ದೆವ್ವ-ಭೂತಗಳೂ ಇಲ್ಲವೆಂದು ಸಾಬೀತುಪ­ಡಿಸಲು ಹೋದವರು ರಕ್ತ ಕಾರಿ ಸತ್ತಿದ್ದಾರೆಂದು ಉಪಕತೆಯೊಂದನ್ನು ಹೇಳಿ ಹೆದರಿಸುವುದು ಇದೆ. ಹಾಗೆ ಹೆದ­ರಿಸಿದವರು ನಮಗೆ ಆ ಬಗ್ಗೆ ವಿವರ ಹೇಳಿದ ಸಾಮಾನ್ಯನಂತೂ ಅಲ್ಲವೇ ಅಲ್ಲ. ಆ ವ್ಯಕ್ತಿ ಬುದ್ಧಜಾತಕದಲ್ಲಿ ಕರಿ­ಕೋತಿಯ ವಿರುದ್ಧ ಸೇಡಿಟ್ಟುಕೊಂಡ ರಾಜಪುರೋಹಿತನಂತಹವನು. ದೇವ­ನೂರ ಹೇಳುವ ಒಂದು ಹಲ್ಲಿಗೆ ಎರಡು ಹಲ್ಲು ಪಡೆಯುವ ಸೇಡಿನ ರೂಪದವನು.

ಆದರೆ ಉಕ್ಕುಡಗಾತ್ರಿಯಲ್ಲಿ ಮಾನಸಿ­ಕ­ವಾಗಿ ಅಸ್ವಸ್ಥರಾದವರನ್ನು ಹಿಂಸಿಸಲಾ­ಗು­ತ್ತದೆ. ಅದನ್ನು ಜನರ ನಂಬಿಕೆ­ಯೆಂದು ಸುಮ್ಮನಿರಲು ಸಾಧ್ಯವೇ? ದ್ವೇಷಾ­ಸೂಯೆಗಳ ದಾಸ್ಯ­ದಲ್ಲಿ ವಾಮಾ­­­ಚಾರದ ಮೊರೆಹೋಗು­ತ್ತಾರೆ. ಮಾಟ-ಮಂತ್ರ, ಪೂಜೆ, ಆಣೆ ಸೂರೆಗಳ ಮಹಾಪೂರ ಹರಿಸಿ, ದೇವರ ಹೆಸರಲ್ಲಿ ದುಡ್ಡು ನಿರೂಪಿಸುತ್ತಾರೆ. ಮೂಢ­ನಂಬಿಕೆ ಪ್ರತಿಬಂಧಕ ಮಸೂದೆಯ ಮಾದರಿ ಕರಡನ್ನು ರೂಪಿಸಿದವರ ಮೇಲೆ ವಿರೋಧಿ­ಸು­ವವರು ಮುಗಿಬಿ­ದ್ದಂತೆ ಚರ್ಚೆ ನಡೆ­ಯಿತು. ಅವರೆಲ್ಲ ಎಡಪಂಥದವರು ಎಂಬುದು ನುಂಗಲಾ­ರದ ತುತ್ತಾಗಿತ್ತು. ಗೊಡ್ಡು ಆಚಾರ­ಗಳಲ್ಲಿ ನಂಬಿಕೆ ಯಾವುದು…? ಮೂಢ­ನಂಬಿಕೆ ಯಾವುದು ಎಂಬುದನ್ನು ನಿರ್ಧ­ರಿಸಲು ಆ ವಿಷಯದ ಕುರಿತಾಗಿ ಲೋಕಧ­ರ್ಮದಲ್ಲಿ ಪ್ರಚಲಿತವಿರುವ ಕತೆ, ಉಪ­ಕತೆಗಳನ್ನು ಗಮನಿಸಿದರೆ ನಿಚ್ಚಳ ಗೊತ್ತಾ­ಗುತ್ತದೆ. ಸೇಡುಮಾರಿ­ಯನ್ನು ಊರಿಂದಾ­ಚೆಗೆ ಬಿಡುವುದು ಹೇಗೆ ಒಂದೂರಿನ, ಒಂದು ಸೀಮೆಯ ಹಿತಕ್ಕಾಗಿ ಆಚರಿಸಲ್ಪಡುತ್ತದೋ ಹಾಗೆ ಮತ್ತೊಂದೂರಿಗೆ ಅದು ಕಂಟಕಪ್ರಾಯ ಎಂಬ ಅರ್ಥವನ್ನೂ ಹೇಳುತ್ತದೆ. ಹೀಗೆ ಸಮುದಾಯದ ದೃಷ್ಟಿಯಿಂದ ಹಿತಕಾರಿ­ಯಾಗಲಾರದ್ದು ಮನುಷ್ಯ ಸಹಜ ನಂಬಿಕೆ­ಯಾಗುವುದಾದರೂ ಹೇಗೆ? ಕೆಲವು ಬೂಟಾಟಿಕೆಯ ಜನರು ಅದನ್ನು ನಂಬಿಕೆ ಎಂದು ಕರೆದುಬಿಡುತ್ತಾರೆ. ಯಾಕೆಂದರೆ ಆ ಒಟ್ಟು ಕ್ರಿಯೆಯಲ್ಲಿ ಅವರು ಭಾಗಿಗಳಾಗುವುದಿಲ್ಲ. ಅದ­ರಲ್ಲಿ ಪಾಲ್ಗೊಳ್ಳುವ ಜನರ ಕತೆಗಳು ಇವ­ರಿಗೆ ರಂಜನೆಯ ವಸ್ತುಗಳಾಗಿ ಸಿಗುತ್ತವೆ.

ಬೆಂಗಳೂರಿನ ಕೊಳೆಗೇರಿ­ಯೊಂದ­ರಲ್ಲಿ ಸತ್ತ ಹೆಣವೊಂದಕ್ಕೆ ತಂಪುಕನ್ನಡಕ ಹಾಕಿ ಶವಯಾತ್ರೆ ನಡೆಸುತ್ತಿರುವುದನ್ನು ಕಂಡ ಒಬ್ಬ ವೈಚಾರಿಕನಿಗೆ ಅದು ಮೋಜಾಗಿ ಕಾಣಿಸುತ್ತದೆ. ಆದರೆ ಆ ಕನ್ನಡಕ ಹಾಕಿದವನಿಗೆ ಗೊತ್ತಿರುತ್ತದೆ ಆ ಕನ್ನಡಕ ಆ ಸತ್ತವನ ಆಸೆಗಳಲ್ಲೊಂ­ದಾ­ಗಿತ್ತೆಂಬುದು. ಅದನ್ನು ಪೂರೈಸಿದ ಕೃತ­ಜ್ಞತೆ ಮಗನದೋ, ಮಗಳದೋ ಆಗಿರು­ತ್ತದೆ. ಹೀಗಿರುವ ನಂಬಿಕೆಗಳಿಗೆ ವಿಶೇಷ­ವಾದ ಅರ್ಥವನ್ನು ಯಾರೂ ಕಟ್ಟಲಾ­ರರು. ಆದರೆ ಮೂಢನಂಬಿಕೆಗಳ ತಡೆ ಮಸೂದೆಯನ್ನು ವಿರೋಧಿಸುವ ಕೆಲವ­ರಿಗೆ ಅದೇ ಹೆಣದ ಮೆರವಣಿಗೆ ಹಿಂದೆ ರಸ್ತೆಯುದ್ದಕ್ಕೂ ಚೆಲ್ಲುತ್ತಾ ಹೋಗುವ, ನೆಲದ ಪಾಲುಮಾಡುವ ಕಾಳಿನ ಕುರಿತು ಯಾವ ಮಾತೂ ಹೊರ­ಡಲಾ­ರದು.
ಅದು ಕೂಡ ನಂಬಿಕೆಯ ಮಾತಾಗಿರುತ್ತದೆ. ಈ ವೈವಿಧ್ಯ ಸಂಸ್ಕೃತಿಯ ಪ್ರಜಾಪ್ರಭುತ್ವದಲ್ಲಿ ಇಂದಿಗೂ ಮೌಢ್ಯತೆಯ ಗುಂಗಿನಲ್ಲಿ ಹಾದಿತಪ್ಪಿ ಸಣ್ಣಪುಟ್ಟ ದುರಾಸೆ­ಗೊಳ­ಗಾ­ಗು­ವವರು ಬಡವರು ಮತ್ತು ತಳವರ್ಗ­ದವರೇ ಹೆಚ್ಚು. ಕಾಲು­ಬಾಯಿ ರೋಗಕ್ಕೆ ತುತ್ತಾಗಿ ಸತ್ತ ದನಕ್ಕೂ ಸೇಡುಮಾರಿಗೂ ಯಾವ ಸಂಬಂಧವೂ ಇರದಿದ್ದರೂ ಇವ-­ತ್ತಿನ ಈ ವೈಚಾರಿಕ ಜಗತ್ತಿನಲ್ಲಿ ಶಾಂತಿ, ಪೂಜೆ ಪುನಸ್ಕಾರಗಳು ಮಾಡಿಸುತ್ತಾರೆ.

ವಿಶಾಲಮನೋಭಾವದ ಮಹಾ­ನು­ಭಾವರೆಂದು ಗುರುತಿಸಿ­ಕೊಳ್ಳಲು ಹವ­ಣಿ­ಸುವ ಜಾಣಪೆದ್ದರು ದೀಕ್ಷೆಯನ್ನು ಕೊಡುವುದಾಗಿ ಮಾತಾಡಿ, ಕೇರಿಗಳಲ್ಲಿ ಓಡಾಡಿ ಸಮಾನತೆ ಕುರಿತು ಮಾತು­ಗಳನ್ನು ಗಾಳಿಗೆ ತೂರುವುದರ ಜೊತೆ ಜೊತೆಗೆ ಮಾಧ್ಯಮಗಳಿಗೆ ಆಹಾರವಾ­ಗುತ್ತಾರೆ. ಇಂಥವರೇ ಇಂದು ಎಡಪಂ­ಥೀಯ ವಿಚಾರಧಾರೆಗಳನ್ನು ಹುಂಬ­ರಂತೆ ವಿರೋಧಿಸುತ್ತಾರೆ. ನಂಬಿಕೆಯ ಬಗ್ಗೆ ಮಾತಾಡಲು ತೊಡಗುತ್ತಾರೆ. ಹಾಗಿ­ದ್ದಾಗ ಅಂಥವರು ಈ ದೇಶದ ನೆಲದ ನಂಟಿನ ಜನರ ಬಗ್ಗೆ ಮಾತಾ­ಡುತ್ತಾರೆಂದು ಹೇಗೆ ಹೇಳುವುದು…? ಅವರ ನಂಬಿಕೆ ಯಾವುದು, ಮೂಢ­ನಂಬಿಕೆ ಯಾವುದು ಎಂಬುದನ್ನು ಅವರು ಅರ್ಥಮಾಡಿಕೊಳ್ಳಲಾರರು. ತಿಳಿ­ದವರು ತಿಳಿಸಿದರೆ ಬಲವಾಗಿ ನಂಬಿ­ಕೊಂಡ ನಂಬುಗೆಯೂ ಹತ್ತೆಂಟು ವರ್ಷ­ಗಳಲ್ಲಿ ಸುಳ್ಳಾಗುತ್ತದೆ. ಆದರೆ ಆ ಮುಗ್ಧತೆಯನ್ನು ಹಾಗೇ ಪೋಷಿಸಿ­ಕೊಂಡು ಹೋಗಬೇಕೆನ್ನುವ ಮನಸು­ಗಳು ಜನಾಭಿಪ್ರಾಯವನ್ನು ತಾವೇ ರೂಪಿಸಿ ಇದು ಹೀಗೆ ಎಂಬಂಥ ತೀರ್ಮಾ­­ನ­ವನ್ನು ನೀಡುತ್ತವೆ. ಮೇಲ್ನೋಟಕ್ಕೆ ‘ಅದು ಹೌದು’ ಎನ್ನುವಂಥ ವಾದವನ್ನು ಹುಟ್ಟುಹಾಕು­ವುದರ ಮೂಲಕ ಮುಗ್ಧರನ್ನು ಹಾದಿ ತಪ್ಪಿಸಲು ಆರಂಭಿಸುವ ಕೆಲವು ಮಾಧ್ಯಮ­­ಗಳು ಸಮಾಜದ ಮೇಲೆ ಅಂಕೆ­ಯಿಡಲು ಪ್ರಯತ್ನಿಸುತ್ತಿವೆ.

ಸರಿಯಾಗಿ ಗಮನಿಸಿದರೆ ನಂಬಿಕೊಂ­ಡದ್ದು ಮತ್ತು ಮೂಢರಾಗಿ ಒಪ್ಪಿಕೊಂ­ಡದ್ದು ಬೇರೆ ಬೇರೆಯಾಗಿಯೇ ಕಾಣಿಸು­ತ್ತವೆ. ಮುಂಜಾನೆದ್ದು ಯಾವುದೋ ಕುಲ ಕಸುಬುದಾರನೊಬ್ಬನ ಮುಖ ನೋಡ­ಬಾ­ರದೆನ್ನುವುದು ಅವರ ನಂಬಿಕೆ ಎಂದಾ­ದರೆ ನೋಡಿಸಿಕೊಂಡ ಆ ವ್ಯಕ್ತಿಯ ಫಜೀತಿ ಯಾರು ಕೇಳುತ್ತಾರೆ. ಈಗಿನ ಬಹಳಷ್ಟು ವಿದ್ಯಾರ್ಥಿಮಿತ್ರರು ದಿನಭವಿಷ್ಯ ನೋಡುವುದೇ ದಿನಪತ್ರಿ­ಕೆಯ ಓದು ಅಂದುಕೊಂಡಿದ್ದಾರೆ. ರಾಶಿ­ಭವಿಷ್ಯ ನೋಡುವುದು ವೈಯಕ್ತಿಕವಾಗಿ ಅವರವರ ನಂಬಿಕೆಯಾದರೂ ಮನುಷ್ಯನ ದೃಢವಿಶ್ವಾಸವನ್ನು ಯಾವುದೋ ಎರಡು ಸಾಲಿನ ದಿನ­ಭವಿಷ್ಯ ರೂಪಿಸುತ್ತದೆಯೇ? ಇಷ್ಟೊಂದು ದುರ್ಬಲವಾಗಿರುವ ಮನಸು­ಗಳು ತಾವು ಮೂಢರಾಗಿದ್ದೇವೆ ಅನ್ನುವುದನ್ನು ಅರ್ಥಮಾಡಿ­ಕೊಳ್ಳು­ವುದು ಯಾವಾಗ? ಅದನ್ನು ಅರ್ಥಮಾ­ಡಿಸಬೇಕಾದ ಜನ­ಮಂದೆಯೂ ಈಗ ನಂಬಿಕೆ ಯಾವುದು ಮೂಢನಂಬಿಕೆ ಯಾವುದು ಎಂಬಂಥ ತಿಳಿಹಾಸ್ಯದ ರಸಪ್ರಶ್ನೆಯಲ್ಲಿ ತೊಡಗಿದ್ದಾರೆ.

ಮೂಢನಂಬಿಕೆ ಆಚರಿಸುವವ ಹೆಚ್ಚು ವಿಚಾರ ಮಾಡುತ್ತಾನಂತೆ. ಹಾಗಾಗಿ ಅವನು ಅದನ್ನು ಅಷ್ಟೊಂದು ನಂಬಿಕೊಂ­ಡಿರುತ್ತಾನೆಂದು ವೈಚಾರಿಕತೆ­ಯನ್ನು ವೈಜ್ಞಾ­ನಿಕ ಕೋನದಿಂದ ಹೊರ­ಗಿಟ್ಟು ಮುಗ್ಧನೂ ವೈಚಾರಿಕನಾ­ಗಿರುತ್ತಾನೆಂಬ ಅರ್ಥದಲ್ಲಿ ಕೆಲವರು ವಾದಮಾಡು­ತ್ತಾರೆ. ಆದರೆ ಅವನು ಆಲೋಚಿಸು­ವುದು ಮತ್ತು ತರ್ಕಿಸು­ವುದು ನಂಬಿಕೆಯ­ನ್ನಲ್ಲ ಎಂಬ ಸತ್ಯ ಅವ­ನಿಗೆ ತಿಳಿದಿರುವು­ದಿಲ್ಲ. ಅವನನ್ನು ನಂಬಿ­ಸುವ ಕಲೆ ಗೊತ್ತಿ­ರುವ ವ್ಯಕ್ತಿ ಕಥನದ ಕಸುಬುಗಾರಿಕೆ­ಯನ್ನು ಸೊಗಸಾಗಿಯೇ ಮಾಡಿರು­ತ್ತಾನೆ. ಉಚ್ಚಂಗಿದುರ್ಗದ ಉಚ್ಚಂಗಿ ಹಸುಳೆಯನ್ನು ನುಂಗಿದಳೆಂಬ ಕತೆಯೂ, ರೇಣುಕೆ ನೀರು ತರುವಾಗ ಜಲಕ್ರೀಡೆ ಆಡುವ ಕ್ಷತ್ರಿಯಕು­ಮಾ­ರ­ರನ್ನು ನೋಡಿ ಮೋಹಗೊಂಡ ಕಾರಣಕ್ಕೆ ಪಾವಿತ್ರ್ಯ ಕಳೆದುಕೊಂಡಳೆಂಬ ಕತೆಯೂ ಹೀಗೆ ಐತಿಹ್ಯ­ವಲ್ಲದಿರುವ ಐತಿಹ್ಯಗಳನ್ನು ಹೇಳು­ತ್ತಾರೆ. ಅಂಥ ಕತೆಗಳು ಕ್ರಿಯಾ­ವಿಧಿ­ಗಳಾಗಿ ಆಚರಣೆಗೆ ಬಂದು ಜನ­ಮಾನಸ­ದಲ್ಲಿ ನೆಲೆನಿಂತಿವೆ. ಅದು ಆಚರ­ಣೆ­ಯಾಗಿರುವಾಗ ಅದನ್ನು ನಂಬಬಹು­ದಾದ ಸತ್ಯುಳ್ಳ ಸುಳುಹುಗಳನ್ನು ಹೊಸಕಿ ಹಾಕಿ ಹೊಸದೊಂದು ಪುರಾಣವೇ ಸೃಷ್ಟಿ­ಯಾಗಿರುವಾಗ, ಆ ಬಗೆಗಿನ ಸಂಶ­ಯಕ್ಕೆ ಉತ್ತರ ಹೇಳುವವರು ಯಾರು?

ಸತ್ತನಾಗರನ ಕಂಡರೆ ನಾಗಪೂಜೆ ಮಾಡಿ­ಸಬೇಕೆಂಬ ಆಚರಣೆಯೂ ಬಾಣಂತಿ ಹೆಂಗಸು ಸತ್ತರೆ ಅವಳ ಎಲುಬಿನಿಂದ ಪೂಜೆಮಾಡಬೇಕೆಂಬ ರೀತಿಯೂ, ನರಬಲಿಯೂ, ಎಳೆ­ಗೂಸನ್ನು ಎತ್ತರದಿಂದ ಎತ್ತಿಹಾಕು­ವುದು ಇತ್ಯಾದಿ. ಈ ಎಲ್ಲ ರೀತಿಯ ನಂಬಿಕೆಗಳ ಹಿಂದೆಯೂ ಒಂದೊಂದು ಕತೆ ಇದೆ. ಆ ಕತೆ ಕಟ್ಟಿದವರು ಈಗ ನಂಬಿಕೆ ಯಾವುದು – ಮೂಢನಂಬಿಕೆ ಯಾವುದು ಎಂಬಂಥ ಪ್ರಶ್ನೆ ಎತ್ತುತ್ತಿ­ದ್ದಾರೆ. ಕೆಲವು ಊರುಗಳಲ್ಲಿ ಇಂದಿಗೂ ಮುಂಗಾರು ಮಳೆಹನಿ ಬೀಳುತ್ತಿದ್ದಂತೆ ಗ್ರಾಮ­ದೇವತೆಗೆ ಹೂ ಏರಿಸುವ ಕಾರ್ಯ­ ಮಾಡುತ್ತಾರೆ. ಹೊನ್ನೇರು ಕಟ್ಟಬೇಕೆಂದರೆ ಗ್ರಾಮ­ದೇವರು ಏರಿಸಿ­ದಂಥ ಹೂವನ್ನು ಬಲಬದಿಗೆ ಬೀಳಿಸ­ಬೇಕು. ಆ ಹೂವು ಬಲಬದಿಗೆ ಬೀಳದಿ­ದ್ದರೆ ಆ ವರ್ಷ ಒಳ್ಳೆಯ ಮಳೆಯಾ­ದರೂ ಯಾರೂ ಬಿತ್ತುವಂತಿಲ್ಲ. ಹಾಗೊಂದು ವೇಳೆ ಯಾವನೋ ಒಬ್ಬ ಸಣ್ಣ ರೈತ ಬಿತ್ತಿದನೆಂದರೆ ಅವನನ್ನು ಬಹಿಷ್ಕರಿಸು­ತ್ತಾರೆ. ಇವು ಮೂಢನಂಬಿ­ಕೆಯ ಚರ್ಚೆಯ ವಿಷಯಗಳಾಗಿ ಬರುವುದೇ ಇಲ್ಲ.

ಕೆಲವು ನಂಬಿಕೆಗಳಲ್ಲಿ ಕ್ರಿಯಾವಿಧಿಯ ಯಾವ ಗುಣಗಳೂ ಇಲ್ಲದಿರುವಾಗ ಸಮುದಾಯಗಳು ಅಂತಹವುಗಳನ್ನು ಭಯ­ದಿಂದಲೇ ಸ್ವೀಕರಿಸುತ್ತವೆ. ಭಯ ನಿವಾರಿಸಿಕೊಳ್ಳಲು ಭಕ್ತಿ ಎನ್ನುವು­ದೊಂದು ಮಾರ್ಗವಾಗಿದೆ. ಭಕ್ತನ ಆತ್ಮವಿಶ್ವಾಸ ಸದೃಢಗೊಳಿಸಬೇಕಾದ ಅನೇಕರು ಅವನ ಭಯವನ್ನೇ ಬಂಡ­ವಾಳ ಮಾಡಿಕೊಂಡು ಬದುಕುತ್ತಿದ್ದಾರೆ

ಅಂತಿಗೊನೆ ನಾಟಕಕ್ಕಾಗಿ ಬರೆದ ಹಾಡು


ಬಲಿತ ಬಿಸಿಲಿಗೆದುರಾಗಿ ಹಸಿರ ಹುಲ್ಲನು ಚಿಗುರಿಸುವೆ
ನೆನಗುದಿಗೆ ಬಿದ್ದ ನೆತ್ತರಿನ ಶವ ಹೂತು
ಕ್ರಿಯಾಕರ್ಮವ ಪೂರೈಸಿ ತರ್ಪಣವ ತೀರಿಸುವೆ.

ಒಡಲಬಳ್ಳಿಗಳ ಕಾದಾಟಕೆ ನೀ ಸಾಕ್ಷಿ
ನೀನಲ್ಲದಿನ್ನಾರು ನೆರೆಯರು
ಬಾ ಬಲವೇ ನನ್ನೊಳಗೊಂಡು ಬಾ…

ಈ ನೆಲದ ನ್ಯಾಯವ ತನ್ನಾಡಂಬೋಲ
ಮಾಡಿಕೊಂಬವನ ಮಾತು ಮೀರಿ
ತನುಮನದ ಅಂತಃಸಾಕ್ಷಿಯೇ ತೋಳ್ಬಲ ನೀನಾಗಿ ಬಾ.

ಓ ಸಹೋದರನೇ
ಕೊಳೆತ ನಾಗರೀಕನ ನಿಯಮ ಮೀರಿ
ಮಿಡಿಯುತಿದೆ ನನ್ನ ಹೃದಯ ತಂತಿ ಕೇಳಿಸಿತೆ…!

ನಿನಗೆ ನಾನು – ನನಗೆ ನೀನು
ನಾನಿದ್ದೇನೆ ಮಮತೆಯ ವಾರಸುದಾರಳು
ಈ ಮಣ್ಣಲ್ಲಿ ಮಣ್ಣು ಮಾಡಿ ಅಪರಕರ್ಮವ ತೀರಿಸುವೆ.

ಆಕೆ


ನೀನು ನೆನಪಾಗಿ
ಜಾರಿ ಕತ್ತಲಕುಳಿಯಲ್ಲಿ ಹೊಕ್ಕೆ
ಕಡ್ಡಿ ಗುಡ್ಡವಾಗಿ
ಅದರೆತ್ತರಕ್ಕೆ ಹಾರಿದೆ
ಗೆಣುದ್ದ ಮುಗಿಲು
ಅಲ್ಲಿಂದ ಕಾಣುವುದಿತ್ತು ಶಿಖರ
ನಿನ್ನ ಮೊಲೆಯ ತುದಿ ತುಂಬಿನಂತೆ

ಕೈಯತ್ತಿ ಜೀಕಬೇಕು
ಅಮ್ಮನ ರೂಪದಲಿ ನೀನು
ಅಕ್ಕ, ತಂಗಿ,
ಗುರುತು ಪರಿಚಯವಿಲ್ಲದ ಹೆಣ್ಣಾಗಿ
ಏಳುಮಕ್ಕಳ ತಾಯಾಗಿ
ಕರಿಕಲ್ಲಿನ ಗುಂಡಾಗಿ
ಮೈಯಲ್ಲ ಕುಂಕುಮ ಭಂಡಾರ ಶೋಬಿತ ಮಾತೆಯಾಗಿ ಕಂಡೆ.